‘ಪಾಪು’ ಮತ್ತು ‘ಚನ್ನಬಸವಣ್ಣ’

ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು.

‘ಸ್ವ್ಯಾನ್ ಪ್ರಿಂಟರ್ಸ್’ ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ.

। ಕಳೆದ ವಾರದಿಂದ ।

ಕೋಪದಿಂದ ಗದರಿದರೂ ಅಂದವಾಗಿ ಮುದ್ರಣವಾದ ಪುಸ್ತಕ ನೋಡಿ ಸಂತೋಷಪಟ್ಟು ರಾಜ್ಯಪಾಲರೊಂದಿಗೆ ಕಾರ್ಯಕ್ರಮದಲ್ಲಿ ಕೂರಿಸಿದ ಪಾಟೀಲ ಪುಟ್ಟಪ್ಪನವರು

ಪಾಟೀಲ ಪುಟ್ಟಪ್ಪ (ಪಾಪು) ಅವರನ್ನು ಮೊದಲು ಹತ್ತಿರದಿಂದ ನೋಡಿದ್ದು ನನ್ನ ಶಾಲಾ ದಿನಗಳಲ್ಲಿ. ಪಾಪು ಅವರು ಲಾ ಮುಗಿಸಿ ಚಿತ್ರದುರ್ಗದಲ್ಲಿ ಕರ್ನಾಟಕ ಏಕೀಕರಣದ ರೂವಾರಿ ರಾಷ್ಟ್ರನಾಯಕ ಎಸ್. ನಿಜಲಿಂಗಪ್ಪನವರ ಬಳಿ ವಕೀಲ ವೃತ್ತಿ ಪ್ರಾರಂಭಿಸಿದ ಅವಧಿಯಲ್ಲೇ ನನ್ನ ತಾತ ಗೌಡರ ರಂಗಣ್ಣನವರು ಕೂಡ ಚಿತ್ರದುರ್ಗದಲ್ಲಿ ವಕೀಲ ವೃತ್ತಿಯನ್ನು ಪ್ರಾರಂಭಿಸಿದ್ದರು.

ಅವರಿಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು.  ಮುಂದೆ ಪಾಪು ಅವರು ಹುಬ್ಬಳ್ಳಿಗೆ ಹೋದಮೇಲೆ ನಮ್ಮ ತಾತ ಕೆಲಸದ ಮೇಲೆ ಹುಬ್ಬಳ್ಳಿ-ಧಾರವಾಡ ಕಡೆ ಹೋದಾಗಲೆಲ್ಲಾ ಅವರನ್ನು ಕಂಡು ಮಾತನಾಡಿಸಿಕೊಂಡು ಬರುತ್ತಿದ್ದರು. ನಮ್ಮ ತಾತನವರ ಜೊತೆ ಹುಬ್ಬಳ್ಳಿಗೆ ಹೋದಾಗ ಎರಡು ಮೂರು ಬಾರಿ ಪಾಪು ಅವರನ್ನು ಹತ್ತಿರದಿಂದ ನೋಡಿದ್ದೆ.

ಮುಂದೆ ಬದುಕು ನನ್ನನ್ನು ಬೆಂಗಳೂರಿಗೆ ಎಳೆತಂದ ಪ್ರಾರಂಭದ ದಿನಗಳಲ್ಲಿ ಲಿಂಗಣ್ಣ ಸತ್ಯಂಪೇಟೆ ಅವರೊಂದಿಗೆ  ಗಾಂಧಿ ಭವನದ ಕಾರ್ಯಕ್ರಮದಲ್ಲಿ ಪಾಪು ಅವರನ್ನು ನೋಡುವ ಅವಕಾಶ ಪದೇಪದೇ ಸಿಗುತ್ತಿತ್ತು. ಹೀಗೇ ಒಂದು ದಿನ ಕಾರ್ಯಕ್ರಮ ಮುಗಿಸಿಕೊಂಡು ಮಠಕ್ಕೆ ಹಿಂದಿರುಗಿದ ಮೇಲೆ ರಾತ್ರಿ ಹಾಗೇ ಕೂತು ಮಾತಾಡುತ್ತಿದ್ದೆವು. 

ಪಾಪು ಅವರನ್ನು ವಕೀಲರೆಂದು ತಿಳಿದಿದ್ದ, ಸಾಹಿತ್ಯಲೋಕದ ಗಂಧ ಗಾಳಿ ಇಲ್ಲದ  ನನಗೆ ಪಾಪು ಅವರು ವಿದೇಶದಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಪಡೆದು, ರಾಜಕಾರಣದಲ್ಲಿ ಭಾಗಿಯಾಗಿ, ಕರ್ನಾಟಕದ ಏಕೀಕರಣದ ಹೋರಾಟದಲ್ಲಿ ಪಾಲ್ಗೊಂಡು, ಪತ್ರಿಕೋದ್ಯಮದಲ್ಲಿ ಮಾಡಬಹುದಾದ ಎಲ್ಲಾ ಪ್ರಯೋಗಗಳನ್ನು ಹುಬ್ಬಳ್ಳಿಯಲ್ಲಿ ಕುಳಿತು ಮಾಡಿ ಇತಿಹಾಸ ನಿರ್ಮಿಸಿದ್ದು ಇತ್ಯಾದಿ ಅನೇಕ ವಿಷಯಗಳನ್ನು ವಿಚಾರವಾದಿ, ಹೋರಾಟಗಾರ, ಬಸವವಾದಿ ಲಿಂಗಣ್ಣ ಸತ್ಯಂಪೇಟೆ ತಿಳಿಸಿದರು.

ಸತ್ಯಂಪೇಟೆ ಅವರು  ಶಹಾಪುರದಿಂದ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಾಗಲೆಲ್ಲ ಗಾಂಧಿನಗರದ ಬಸವ ಕೇಂದ್ರದಲ್ಲಿ ತಂಗುತ್ತಿದ್ದರು. ನಾನು ಆಗ ಬೆಳಗಿನ ಪಾಳಿಯಲ್ಲಿ ಲಕ್ಷ್ಮೀ ಮುದ್ರಣಾಲಯದ ಕೆಲಸ ಮುಗಿಸಿ, ಎರಡನೇ ಪಾಳಿಯಲ್ಲಿ  ಸಂಜೆಯಿಂದ ಬೆಳಗ್ಗೆವರೆಗೆ ಮಠದ ಕೆಲಸಗಳನ್ನು ಮಾಡಿಕೊಂಡು, ಮಠವನ್ನು ಶುಚಿಯಾಗಿ ಇಟ್ಟುಕೊಂಡು, ಬರುವ ಅತಿಥಿಗಳಿಗೆ  ಸತ್ಕಾರ ಮಾಡುತ್ತ ಅಲ್ಲೇ ಊಟ, ವಾಸ್ತವ್ಯ ಮಾಡುತ್ತಿದ್ದೆ. ಹಾಗಾಗಿ ಸತ್ಯಂಪೇಟೆಯವರು ಬಂದಾಗಲೆಲ್ಲ ಅವರೊಂದಿಗೆ ಕಾಲ ಕಳೆಯುವ, ಒಡನಾಡುವ ಅಪರೂಪದ ಅವಕಾಶ ಸಿಗುತ್ತಿತ್ತು. 

ಯಾರ ಮುಲಾಜೂ ಇಲ್ಲದೆ ನೇರವಾಗಿ ಮಾತನಾಡುತ್ತಿದ್ದ ಸತ್ಯಂಪೇಟೆ ಅವರಿಂದ ಅನೇಕ ಸಾಹಿತ್ಯ ಸಂಗತಿಗಳು ತಿಳಿದವು. ಖ್ಯಾತ ಬರಹಗಾರರಾದ ಲಂಕೇಶ್, ರೈತ ಹೋರಾಟಗಾರರಾದ ನಂಜುಂಡಸ್ವಾಮಿ ಹೀಗೆ ಹಲವು ಹಿರಿಯರನ್ನು ಹತ್ತಿರದಿಂದ ನೋಡುವ, ಅವರೊಂದಿಗೆ ಒಡನಾಡುವ ಅವಕಾಶಗಳು ಪದೇ ಪದೇ ಸಿಕ್ಕವು.

ಮುಂದೆ ೨೦೧೪ರಲ್ಲಿ ಪಾಪು ಅವರ ಆತ್ಮಚರಿತ್ರೆಯಾದ, ಡಾ.ಸರಜೂ ಕಾಟ್ಕರ್ ಅವರು ನಿರೂಪಿಸಿದ, ‘ನಾನು ಪಾಟೀಲ್ ಪುಟ್ಟಪ್ಪ’ ಭಾಗ-೧ ಹಾಗೂ ಭಾಗ-೨ ಈ ಎರಡು ಪುಸ್ತಕಗಳನ್ನು ಮುದ್ರಿಸುವಾಗ ಎರಡು ಮೂರು ಬಾರಿ ಪಾಪು ಅವರೊಂದಿಗೆ ಪುಸ್ತಕ ಮುದ್ರಣ ಸಂಬಂಧಿತ ವಿಷಯಗಳ ಬಗ್ಗೆ ಅವರ ಹತ್ತಿರದಲ್ಲಿ ಕೂತು ಚರ್ಚಿಸಲು ಅವಕಾಶ ಕಲ್ಪಿಸಿಕೊಟ್ಟವರು ಲೋಹಿಯಾ  ಪ್ರಕಾಶನದ ಚನ್ನಬಸವಣ್ಣನವರು.

ಒಂದು ದಿನ ಪಾಪು ಅವರನ್ನು ನೋಡಲು ಗಾಂಧಿ ಭವನಕ್ಕೆ ಹೋದಾಗ, ಅವರು ಒಂದು ಕೊಠಡಿಯಲ್ಲಿ ಬೇರೆಯವರೊಂದಿಗೆ ಮಾತನಾಡುತ್ತಿದ್ದರು. ಅವರ ಪಕ್ಕದಲ್ಲೇ ಕುಳಿತಿದ್ದ ನನ್ನ ಮೊಬೈಲ್ ಎರಡು ಬಾರಿ ಜೋರಾಗಿ ರಿಂಗ್ ಆದಾಗ ಪಾಪು “ಹೊರಗೆ ಹೋಗಿ ಮಾತಾಡಿ, ಇಲ್ಲ… ಆಫ್ ಮಾಡಿಟ್ಟುಕೊಳ್ಳಿ”ಎಂದು ಗದರಿಸಿಕೊಂಡು, ಅವರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು.

ಆದರೆ ನಂತರದಲ್ಲಿ ಅಂದವಾಗಿ ಮುದ್ರಣವಾದ ಅವರ ಆತ್ಮಚರಿತ್ರೆ ಪುಸ್ತಕಗಳನ್ನು ನೋಡಿ ಸಂತೋಷಪಟ್ಟರು, ಕೈಯಲ್ಲಿ ಹಿಡಿದು ಬೆನ್ನು ತಟ್ಟಿ ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು. ರಾಜಭವನದಲ್ಲಿ ನಡೆದ ಆ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿ ಗೌರವಾನ್ವಿತ ರಾಜ್ಯಪಾಲರ ಜೊತೆ ಕೂರುವ ಅವಕಾಶ ಒದಗಿಸಿಕೊಟ್ಟರು.

ಇನ್ನು ಲೋಹಿಯಾ ಪ್ರಕಾಶನದ ಚನ್ನಬಸವಣ್ಣನವರು ನಮ್ಮ ಕರ್ನಾಟಕ ಕಂಡ ವಿಶಿಷ್ಟ ಪ್ರಕಾಶಕರು. ಅವರ ತಂದೆ ತಾಯಿ ಹೆಸರಿನಲ್ಲಿ ಒಂದು ದತ್ತಿ ನಿಧಿಯನ್ನು ಸ್ಥಾಪಿಸಿದ್ದರು. ಅದರಿಂದ ಬರುವ ಬಡ್ಡಿ ಹಣದಲ್ಲಿ ಒಳ್ಳೊಳ್ಳೆಯ ಪುಸ್ತಕಗಳನ್ನು ಅತ್ಯಂತ ಕಡಿಮೆ ಬೆಲೆಗೆ ಸಿಗುವಂತೆ ಪ್ರಕಟಿಸಿ, ಅವು ಹೆಚ್ಚು ಹೆಚ್ಚು ಓದುಗರ ಕೈಸೇರುವಂತೆ ಮಾಡುತ್ತಿದ್ದರು. ಪ್ರಕಾಶಕರು ಪುಸ್ತಕ ಪ್ರಕಾಶನ ಮಾಡಲು ಹೆದರುತ್ತಿದ್ದ ಸಂದರ್ಭದಲ್ಲಿ, ಪುಸ್ತಕ ಬಿಡುಗಡೆ ಎಂದರೆ ಮಾರು ದೂರ ಓಡುವ ಕಾಲದಲ್ಲಿ, ಅವರು ಹಲವಾರು ಮಹತ್ವದ ಪುಸ್ತಕಗಳನ್ನು ಪ್ರಕಟಿಸಿದರು.

ಒಂದೇ ಸಮಯದಲ್ಲಿ ಕರ್ನಾಟಕದ ನಾನಾ ಭಾಗಗಳಲ್ಲಿ ವಿಶಿಷ್ಟವಾದ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪುಸ್ತಕ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸದ್ದುಗದ್ದಲವಿಲ್ಲದೆ ಶ್ರಮಪಟ್ಟರು.  ಅವರ ಪ್ರಕಾಶನದ ಅನೇಕ ಪುಸ್ತಕಗಳನ್ನು ನಾವೇ ಮುದ್ರಿಸಿದೆವು.  ಚನ್ನಬಸವಣ್ಣ ಅವರು ಬಲು ಶಿಸ್ತಿನ ವ್ಯಕ್ತಿ, ಸಮಯ ಪಾಲಕರು, ತುಸು ಕೋಪ ಜಾಸ್ತಿ..! ಏನೇ ಎಡವಟ್ಟಾದರೂ ಸಿಟ್ಟಾಗಿಬಿಡುತ್ತಿದ್ದರು.

ಏಕಕಾಲದಲ್ಲಿ ರಾಜ್ಯದ ನಾನಾ ಭಾಗಗಳಲ್ಲಿ ನಡೆಯುತ್ತಿದ್ದ ಅವರ ಪ್ರಕಾಶನದ ಪುಸ್ತಕ  ಲೋಕಾರ್ಪಣೆ ಕಾರ್ಯಕ್ರಮಗಳಿಗೆ ಆಹ್ವಾನ ಪತ್ರಿಕೆ, ಬಿಡುಗಡೆ ಪುಸ್ತಕದ ಪ್ಯಾಕಿಂಗ್, ಮಾರಾಟಕ್ಕೆ ಪುಸ್ತಕಗಳು, ಫ್ಲೆಕ್ಸ್, ಲೇಖಕರಿಗೆ ಅವರ ಪುಸ್ತಕದ ಮುಖಪುಟವನ್ನು ದೊಡ್ಡ ಅಳತೆಯಲ್ಲಿ ಲ್ಯಾಮಿನೇಷನ್ ಮಾಡಿಕೊಡುತ್ತಿದ್ದ ವಿಶೇಷ ಸ್ಮರಣಿಕೆ ಇವುಗಳೆಲ್ಲ ನಮ್ಮಲ್ಲೇ ಸಿದ್ಧವಾಗುತ್ತಿದ್ದವು.

ಕಾರ್ಯಕ್ರಮಕ್ಕೆ ಅವಶ್ಯ ವಸ್ತುಗಳನ್ನು ರಾಜ್ಯದ ನಾನಾ ಭಾಗಗಳಿಗೆ ಅವರು ಪತ್ರದಲ್ಲಿ ಬರೆದುಕೊಟ್ಟ ರೀತಿಯಲ್ಲೇ ಪ್ಯಾಕ್  ಮಾಡಿಸಿ ಕಳಿಸಬೇಕಾಗುತ್ತಿತ್ತು. ಒಮ್ಮೆ ಸಣ್ಣ ಏರುಪೇರು ಆಗಿ ಚೆನ್ನಾಗಿ ಬೈಸಿಕೊಂಡದ್ದು ಇನ್ನೂ ನನ್ನ ಕಣ್ಣಿಗೆ ಕಟ್ಟಿದ ಹಾಗೆ ಇದೆ.

ಅವರ ಸಿಟ್ಟು ಸೆಡವುಗಳ ಜೊತೆ ತಂದೆಯ ಪ್ರೀತಿ ವಾತ್ಸಲ್ಯವನ್ನೂ ಹಲವು ಬಾರಿ ಅವರ ಮೊಗದಲ್ಲಿ ಕಂಡೆ. ಈಗ ಪ್ರಕಾಶನ ನಿಲ್ಲಿಸಿದ್ದರೂ ಬೆಂಗಳೂರಿಗೆ ಬಂದಾಗಲೆಲ್ಲ ನಮ್ಮ ಮುದ್ರಣಾಲಯಕ್ಕೆ ಭೇಟಿಯಿತ್ತು, ನನ್ನನ್ನು ಕರೆದುಕೊಂಡು ಮಲ್ಲಿಗೆ ಆಸ್ಪತ್ರೆಯ ಬಳಿ ಇರುವ, ಅವರಿಗೆ ಬಲು ಪ್ರಿಯವಾದ ಜನಾರ್ದನ್ ಹೋಟೆಲ್‌ನಲ್ಲಿ ಊಟ ಮಾಡಿಸಿ, ನಮ್ಮ ಯೋಗಕ್ಷೇಮ ವಿಚಾರಿಸಿಕೊಂಡೇ ಹೋಗುವುದು ಅವರ ಪ್ರೀತಿಯ ಅಭ್ಯಾಸ.

ಬೇರೆಯೇ ದಾರಿಯಲ್ಲಿ ಸಾಗಬೇಕಿದ್ದ ನನ್ನ ಜೀವನದ ಪಯಣ ಆಕಸ್ಮಿಕವಾಗಿ ಮುದ್ರಣಲೋಕದೆಡೆ ಪ್ರವೇಶಿಸಿ,  ಇಲ್ಲಿ ಶ್ರದ್ಧೆಯಿಂದ ಕೆಲಸ ಕಲಿತು, ಸ್ವಂತದ್ದಾಗಿ ಏನಾದರೂ ಮಾಡಬೇಕೆನ್ನುವ ಸಂಕಲ್ಪವಿರಿಸಿಕೊಂಡು ದುಡಿದಿದ್ದರಿಂದಲೇ ಸಾಹಿತ್ಯ, ಸಂಸ್ಕೃತಿ, ಕಲೆ, ರಾಜಕಾರಣ ಮುಂತಾದ ಕ್ಷೇತ್ರಗಳ ದಿಗ್ಗಜರನ್ನು ಭೇಟಿ ಮಾಡುವುದು, ಒಡನಾಡುವುದು, ವಿಶ್ವಾಸಕ್ಕೆ ಪಾತ್ರನಾಗುವುದು ಸಾಧ್ಯವಾಯಿತು; ಅವರ ಸಾಂಗತ್ಯ ಎನ್ನುವುದು ಚಿರಕಾಲ ಉಳಿಯುವ ನೆನಪಾಯಿತು ಎಂದು ಒಮ್ಮೊಮ್ಮೆ ಆಶ್ಚರ್ಯವೂ ಜೊತೆಗೆ ಹೆಮ್ಮೆಯೂ ಆಗುತ್ತದೆ.

। ಮುಂದಿನ ವಾರಕ್ಕೆ ।

October 26, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: