ಸುಮಾ ಆನಂದರಾವ್ ಸರಣಿ: ದೊಡ್ಡಮ್ಮನ ಮನೆಯ ಸಂಭ್ರಮ

ಗೋಧೂಳಿ ಸಮಯ. ಕ್ಷಿತಿಜದ ಅಂಚಿನಲ್ಲಿ ರವಿ ತನ್ನ ದಿನಚರಿ ಮುಗಿಸಿದ್ದ. ತನ್ನ ನಡೆಹಾದಿಗೆ ಕೆಂಪು ಚೆಲ್ಲಿ ಹೋಗಿದ್ದ. ತೇಲುವ ಮೋಡಗಳು ಹೊಂಬಣ್ಣ ತಳೆದು ಹೊಳೆಯುತ್ತ ರಾತ್ರಿಯ ವಿಹಾರಯಾತ್ರೆಗೆ ಸಜ್ಜಾಗುತ್ತ ಇತ್ತು. ಅಲ್ಲಿ ಹತ್ತಿರದಲ್ಲಿ ಮರವೊಂದು ಭರಪೂರ ಹೂತಳೆದು ಪರಿಮಳ ಪಸರಿಸುತ್ತಿತ್ತು.

ದೊಡ್ಡಮ್ಮ ಹಾಕಿ ಬೆಳೆಸಿದ ತೋಟದೊಳಗೆಲ್ಲೋ  ಫ್ಯಾಷನ್ ಫ್ರೂಟ್ ನ ಘಮಲು ತುಂಬಿ ತುಳುಕಿದ ಗುಟ್ಟನ್ನು ಸುಳಿಗಾಳಿ ಹಿಡಿದು ಕೊಟ್ಟಿತ್ತು.
ಕೊಟ್ಟಿಗೆಯನ್ನು ಸುತ್ತುವರೆದ ಕುಳಿರ್ಗಾಳಿ, ದನಕರುಗಳು ಮೇಯುತ್ತಾ ಮೆಲುಕುಹಾಕುವುದಕ್ಕೆ ಸಾಕ್ಷಿಎಂಬಂತೆ ತನ್ನೊಳಗೆ ಹುಡುಗಿಸಿಕೊಂಡ ಮೈಘಮವನ್ನು ಅನಾವರಣಗೊಳಿಸುತ್ತಿತ್ತು. ಬೆಳ್ಳಗೆ ತೆಳ್ಳಗೆ ಚೆಲುವೆ ದೊಡ್ಡಮ್ಮನ ಜೊತೆ ಹೆಜ್ಜೆ ಹಾಕುವ ಆ ವಾಕಿಂಗ್ ನ ಸೊಬಗ ನೆನೆದು ಮನಸ್ಸು ಎಲ್ಲೊ ಕಳೆದು ಹೋಯಿತು.

ಸರಿ ಸುಮಾರು ಮೂವತ್ತು ವರ್ಷಗಳ ಹಿಂದಿನ ಮಾತು. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕು ಪ್ರದೇಶ. ಈಗಿನ ತರಹ ಹೆಚ್ಚಿನ ಆಧುನಿಕತೆಯ ಸೋಗು ಇರಲಿಲ್ಲ. ಹಳ್ಳಿಗಳಿಗಿಂತ ಒಂದೆರೆಡು ಮೆಟ್ಟಲು  ಮುಂದೆ ಏರಿತ್ತು. ಅಲ್ಲಿ ನನ್ನ ದೊಡ್ಡಪ್ಪ ದೊಡ್ಡಮ್ಮನ ಮನೆ. ನಮ್ಮ ತಂದೆಯ ಅಣ್ಣ ನಮ್ಮ ತಾಯಿಯ ಅಕ್ಕನನ್ನೇ ಮದುವೆಯಾಗಿದ್ದರು.

ಹಾಗಾಗಿ ಅವರಿಬ್ಬರಲ್ಲಿ ಚಿಕ್ಕಂದಿನಿಂದಲೂ ಆಡಿ ಬೆಳೆದ ಆ ಅನ್ಯೋನ್ಯತೆಗೆ ಹೋಲಿಕೆಯೇ ಇಲ್ಲ. ನಾವೆಲ್ಲಾ ಮಕ್ಕಳು ಮಲಗಿದ ಮೇಲೆ ರಾತ್ರಿ ೧೨ರ ತನಕವೂ ಅವರಿಬ್ಬರೂ ಮಾತನಾಡುತ್ತಲೇ ಇರುತ್ತಿದ್ದರು. ಅದೆಷ್ಟು ಸಂತಸದಿಂದಿರುತ್ತಿದ್ದರು! ಅಪ್ಪ ದೊಡ್ಡಪ್ಪ ಬೆಳಗಿನ ಜಾವದಿಂದಲೇ ಹರಟೆ ವಾಕಿಂಗ್ ಬ್ಯುಸಿಯಾಗಿ ಇರುತ್ತಿದ್ದರು. ಆಗಾಗ ಸಮಯಕ್ಕೆ ಸರಿಯಾಗಿ  ಕಾಫೀ ತಿಂಡಿ ಒದಗಿಸುವ ಕೆಲಸ ಅಮ್ಮ ದೊಡ್ಡಮ್ಮನದು. ನಮ್ಮ ದೊಡ್ಡಮ್ಮ ಹಲವು ಬಾರಿ ತನ್ನ ಜೊತೆ ನನ್ನನ್ನು ರಜೆಗೆ ಕರೆದೊಯ್ಯುತ್ತಿದ್ದಳು.

ಕೂಡ್ಲಿಗಿಯಲ್ಲಿ ದೊಡ್ಡಪ್ಪ ವೈದ್ಯರಾಗಿದ್ದರು. ಅವರಿಗೆ ಇಬ್ಬರು ಗಂಡುಮಕ್ಕಳು. ನನ್ನ ನೆಚ್ಚಿನ ಸಹೋದರರು. ಹಳೆ ಊರಿನಿಂದ ಸ್ವಲ್ಪ ಹೊರ ಭಾಗದಲ್ಲಿ ಮನೆ. ಮನೆಯ ಎದುರುಗಡೆ ರಸ್ತೆ. ರಸ್ತೆ ದಾಟಿದರೆ ವಿಶಾಲವಾದ ಶಾಲೆಯ ಮೈದಾನ. ಮನೆಯ ಎಡಭಾಗದಲ್ಲಿ ಮಗುವಿನಂತೆ ಬೆಳೆಸಿದ ಅಚ್ಚುಕಟ್ಟಾದ ಕೈ ತೋಟ. ತೋಟದಲ್ಲಿ ಏನುಂಟು ಏನಿಲ್ಲ ! ಒಂದೆಡೆ ದನಕರುಗಳನ್ನು ಕಟ್ಟಿಹಾಕಲು ವ್ಯವಸ್ಥೆ ಇತ್ತು. ತೋಟದ ಉಸ್ತುವಾರಿ ಪೂರ್ತಿ ದೊಡ್ಡಮ್ಮನದೇ.

ದನಕರುಗಳನ್ನು ಮಕ್ಕಳಂತೆ ನೋಡಿಕೊಳ್ಳುವ ದೊಡ್ಡಮ್ಮನಾ ಅಕ್ಕರೆಗೆ ಕಣ್ಣಾಲಿಗಳು ತುಂಬಿ ಬರುತ್ತಿದ್ದವು. ಮೇವು ಹಾಕಿ ಬೆನ್ನು ಸವರಿ ಹಾಲುಕರೆಯುತ್ತಿದ್ದಳು. ನೋಡಲು ಸಂತಸವಾಗುತ್ತಿತ್ತು. ತಾಜಾಹಾಲಿನಿಂದ ನಮಗೆಲ್ಲ ಬಾದಾಮಿ ಹಾಲು ಸಿದ್ಧವಾಗುತ್ತಿತ್ತು. ದೊಡ್ಡಪ್ಪ ನಾನು ಊರಿನಿಂದ ಬಂದ  ದಿನವೇ ಬಾದಾಮಿ ಹಾಲಿನ ಪುಡಿ ತಂದು ಬಿಡುತ್ತಿದ್ದರು. 

ಬಗೆಬಗೆಯಾದ ರುಚಿಯಾದ ತಿನಿಸುಗಳು ಅಡುಗೆಮನೆಯಿಂದ ಘಮಗುಡುತ್ತಿದ್ದವು.ಗಟ್ಟಿ ಮೊಸರು, ಮೊಸರಿನಿಂದ ಶ್ರೀಖಂಡ ತಯಾರಿಸುತ್ತಿದ್ದಳು. ಚಪಾತಿಗೆ ಸೊಗಸಾದ ವ್ಯಂಜನವಾಗಿರುತ್ತಿತ್ತು.ಒಮ್ಮೆ ಇದ್ದಕ್ಕಿದ್ದಹಾಗೆ ಕಾರ್ಮೋಡ ಕವಿಯಿತು , ಮನೆಯೆಲ್ಲ ಗಾಡಾಂಧಕಾರ. ಆಗಸದಿ ಮಿಂಚು ಬೆಳಕಿನಾಟ. ಗುಡುಗಿನ ಸದ್ದಿಗೆ ರಾಸುಗಳು ಬಾಲಅಲ್ಲಾಡಿಸುತ್ತ ಆರ್ಭಟಿಸುತ್ತಿವೆ ಒಮ್ಮೆಲೇ ಭೋರ್ಗರೆವ ವರ್ಷಧಾರೆ.

ಆಗಸದ ನಗರಿಗೆ ಆಟಂಬಾಂಬ್ ಬಿದ್ದ ಅನುಭವ. ನಡುನಡುವೆ ಆಲಿಕಲ್ಲುಗಳ  ಲಯ   ಬದ್ಧವಾದ  ನರ್ತನ. ಎಲ್ಲೆಲ್ಲೂ ಪಾರಿಜಾತ ಹಾಸಿಸಂತೆ ಕಣ್ಣು ಕೋರೈಸುವ ಮಳೆ. ನಾನು ನನ್ನ ಸಹೋದರರು ಕಿಟಕಿಯಲ್ಲಿ ಕಾಣುವ ಸುಂದರ  ದೃಶ್ಯವನ್ನು ವೀಕ್ಷಿಸುತ್ತ ದೊಡ್ಡಮ್ಮಮಾಡಿದ ರುಚಿಯಾದ ತಿನಿಸನ್ನು ಸವೆಯುತ್ತಾ ಅದೆಷ್ಟು ತಿಂದೆವೋ ಗೊತ್ತಿಲ್ಲ.

ಅಡುಗೆಮನೆಯಲ್ಲಿ ತಾಲಿಪೆಟ್ಟು ಮಾಡಿ ಮಾಡಿ ತಾನೇ ತಂದು ನಮ್ಮತಟ್ಟೆಗೆ ಬಡಿಸುತ್ತಿದ್ದಳು  ದೊಡ್ಡಮ್ಮ. ಒಂದು ಚೂರು ದಣಿವರಿಯದ ಜೀವ, ಬೆಳಿಗ್ಗೆಯಿಂದ ರಾತ್ರಿ ಮಲಗುವವರೆಗೂ ಸರದಿಯಂತೆ ಕೆಲಸ ಹುಡುಕಿಕೊಂಡು ಮಾಡುತ್ತಿದ್ದಳು. ನನ್ನಣ್ಣ  ಆಗಲೇ ಕವಿತೆಗಳನ್ನು ರಚಿಸುತ್ತಿದ್ದ ಮಳೆಯ ಆರ್ಭಟವನ್ನು ನಾನು ನನ್ನ ತಮ್ಮ ಬೆರಗು ಗಣ್ಣಿನಿಂದ ವೀಕ್ಷಿಸುತ್ತಿದ್ದಾರೆ ಅವನಾಗಲೇ ನಾಲ್ಕು ಸಾಲು ಕವಿತೆ ಬರೆದಿರುತ್ತಿದ್ದ.

ನಾನು ಆ ಕವಿತೆಗಳನ್ನು ಓದುತ್ತಿದ್ದೆ. ನಾನು ಗೀಚಿದ ಸಾಲುಗಳನ್ನು ಅವನು ತಿದ್ದಿ ಕೊಡುತ್ತಿದ್ದ. ಆಗಲೇ ಎಲ್ಲ ಕವಿಗಳ ಬಗೆಗೆ ಅಪಾರ ಜ್ಞಾನ ಹೊಂದಿದ್ದ. ಬಹಳಷ್ಟು ಓದುತ್ತಿದ್ದ. ನನಗೆ ಅವನು ಮಾದರಿಯಾಗಿದ್ದ. ಯಯಾತಿಯ ಕಚನ ಪಾತ್ರದ ಬಗ್ಗೆ ಆಸಕ್ತಿ ಬರುವ ಹಾಗೆ ಮಾಡಿದ್ದೆ ಅವನು. ಅಂದು ಮಳೆಯ ಚೆಂದವನ್ನು ಹೃದಯ ತುಂಬಿ ಮಲಗಿದ ನಮಗೆ  ರಾತ್ರಿ ಕಳೆದು  ಬೆಳಗಾದುದು ತಿಳಿಯಲೇ ಇಲ್ಲ.

ಅದಾಗಲೇ ಮೂಡಣ ದಿಕ್ಕಿನಲ್ಲಿ ಲಜ್ಜೆ  ರಂಗು ಪಸರಿಸಿಹೊತ್ತು. ಪಕ್ಕದ ಬನ ದಿಂದ ಹಕ್ಕಿಗಳ ಚೆಲ್ಲಾಟದ ದ್ವನಿ ಕೇಳುತ್ತಿತ್ತು. ಕೆಂದಾಳಿ ತೆಂಗಿನ ಮರದಲ್ಲಿ ಕುಳಿತ  ಕೋಗಿಲೆಮುಂಬೆಳಕಿನ ಪಲ್ಲವಿಗೆ ಪಲ್ಲವಿಸತೊಡಗಿತ್ತು. ಸಣ್ಣಗೆ ಹರಿಯುವ ತಿಳಿ ನೀರಿನ ಕುಲು ಕುಲು ದ್ವನಿ ಪ್ರಕೃತಿ ತಾಳ  ತಪ್ಪಿಲ್ಲವೆಂಬುದನ್ನು ಸಾರಿ ಹೇಳುತ್ತಿತ್ತು.

ಇಬ್ಬನಿಯ ಮುಸುಕಿನೊಳಗೆ ಬಂದಿಯಾಗಲು ಒಪ್ಪದ ಕತ್ತಲು ನಿಧಾನವಾಗಿ ಬೆಳಕಿನ ಪರದೆಯ ಮರೆ ಸೇರುತ್ತಿತ್ತು .ಎಲ್ಲವನ್ನು ಆಸ್ವಾದಿಸುತ್ತ ಆನಂದಿಸುತ್ತಾ ದೊಡ್ಡಮ್ಮ ತಂದುಕೊಟ್ಟ ಹಾಲು ಕುಡಿಯುತ್ತ ಹಸುವಿನೆಡೆ ನೋಡಿದಾಗ ಅಷ್ಟು ಮಳೆಗೆ ಹೆದರಿ ಕಂಗಾಲಾದರೂ ಹಾಲು ಕೊಡುವ ಪರಿ ನೆನೆದು ಹೃದಯ ತುಂಬಿ ಬಂದಿತ್ತು.

ನಸುಗೆಂಪು ಬಿಳಿ ಮಿಶ್ರಿತ ಮೈ ತುಂಬಾ  ಗಾಢವಾದ ಕೂದಲು ಹೊಂದಿದ ಬೆಕ್ಕು ಸಾಕಿದ್ದರು. ನನಗೋ ಅದನ್ನು ಕಂಡರೆ ಪ್ರಾಣ ಭಯ. ಬಂಟಿ ಎಂದು ಒಮ್ಮೆ ಕೂಗಿದರೆ ಸಾಕು ಹಾಜರಾಗುತ್ತಿತ್ತು. ಈಗಿನ ಹಾಗೆ ಕೃತಕ ಆಟಿಕೆಗಳೊಡನೆ ಆಟವಿಲ್ಲ, ಎಲ್ಲ ಜೀವ ವೈವಿದ್ಯಗಳೊಡನೆ ಸ್ನೇಹ ಬೆಸೆದುಕೊಂಡಿತ್ತು ಅಲ್ಲಿ.ಚವಳೆ  ಕಾಯಿ  ಹುರಳಿಕಾಯಿ ನಾವು ಮಕ್ಕಳು ಕೊಯ್ದು ತಂದರೆ ದೊಡ್ಡಮ್ಮ ರುಚಿಯಾದ ಅಡುಗೆ ತಯಾರಿಸುತ್ತಿದ್ದಳು. ಕೈ ತೋಟ ಅಡುಗೆ ಮನೆಯಂತೆ ಸ್ವಚ್ಛವಾಗಿರುತ್ತಿತ್ತು.

ಸುಮಾರು ಒಂದೆರಡು ಕಿಲೋ ಮೀಟರ್ ದೂರದಲ್ಲಿ ಬೃಹದಾಕಾರದ ಆಲದಮರವಿತ್ತು. ಅದು ಬೆಳೆದು ಬಾಗಿ ತೂಗಿ ನೆಲ ಸೇರಿ ಮತ್ತೆ ಮೇಲೆದ್ದು ಬೆಳೆದು ಅಬ್ಬಾ ಎಷ್ಟೊಂದು ಅದ್ಭುತವಾಗಿ ಬೆಳೆದಿತ್ತು!ಮಧ್ಯಾಹ್ನ ಹೊರಸಂಚಾರಕ್ಕೆ ಹೊರಡುವ ಸಂಭ್ರಮ. ರುಚಿಯಾದ ಖಾದ್ಯಗಳು ಸಿದ್ಧವಾದವು. ಸುಮಾರು ಹದಿನೈದರಿಂದ ಇಪ್ಪತ್ತು ಜನರ ಗುಂಪು ಅದಾಗಿರುತ್ತಿತ್ತು.

ಸ್ನೇಹಿತರೆಲ್ಲರೂ ಒಂದೇ ಮನೆಯವರಂತೆ ತೋರುತ್ತಿದ್ದರು. ನೂರಾರು ವರುಷದ ಆಲದ ಮರ ಬಿಳಲುಗಳನ್ನು ಚಾಚಿ  ನಮ್ಮನ್ನು ಸ್ವಾಗತಿಸುತ್ತಿತ್ತು. ಮಕ್ಕಳೆಲ್ಲ ಬಿಳಲುಗಳನ್ನು ಹಿಡಿದು ಉಯ್ಯಾಲೆ ಯಾಡುತ್ತಿದ್ದೆವು. ಆಟವಾಡಿ ದಣಿದ ನಂತರ ಹಾಡುಗಳ ಸಂಭ್ರಮ. ತಂದ ತಿನುಸುಗಳ ವಿನಿಮಯ ಗೋಧೂಳಿ ಸಮಯಕ್ಕೆ ಮನೆ ಸೇರುತ್ತಿದ್ದೆವು.ಸಿದ್ಧಯ್ಯನ ಗುಡ್ಡ ನಮ್ಮೆಲ್ಲರಿಗೆ ಒಂದು ಬಗೆಯ ಕೌತುಕದ ಗಣಿಯಂತಿತ್ತು.

ಬೆಟ್ಟಕ್ಕೆ ಹೊರಡುವ ಸಂಭ್ರಮ ನನ್ನ pant shirt ನನ್ನ ತಮ್ಮ ಅವನ ಬಟ್ಟೆ ನಾನು ಹೀಗೆ ಸಂಭ್ರಮಿಸುತಿದ್ದೆವು. ಹಾದಿಯುದ್ದಕ್ಕೂ ನಮ್ಮ ಮಾತುಗಳು ಮುಗಿಯುತ್ತಲೇ ಇರಲಿಲ್ಲ. ಬೆಟ್ಟ ಹತ್ತುವಾಗ ಸುತ್ತಲೂ ಸುಂದರವಾದ ಪ್ರಕೃತಿಯ ಮೋಹಕತೆಯು ಇನ್ನು ಕಣ್ಣಿಗೆ ಕಟ್ಟಿದಹಾಗೆ ಇದೆ.

ಮಧ್ಯೆ ಮಧ್ಯೆ ಹಿರಿಯರ ಎಚ್ಚರಿಕೆಯ ನುಡಿಗಳ ಜೊತೆ ಕುಣಿಯುತ್ತ ನಲಿಯುತ್ತ ಸ್ವರ್ಗದಲ್ಲಿ ಸಂಚರಿಸುವ ಅನುಭವದೊಡನೆ ತುತ್ತ ತುದಿಯ ತಲುಪಿದಾಗ ಅಲ್ಲಿ ಒಂದು ದೇಗುಲ. ದೇಗುಲದಲ್ಲಿ ನಮ್ಮೆಲ್ಲರ ಸಂಭ್ರಮದಲ್ಲಿ ಹತ್ತಿ ಬಂದ ದಣಿವೇ ಇರಲಿಲ್ಲ. ಅಲ್ಲಿ ನಾನು ಹಾಡಲೇಬೇಕಾಗಿತ್ತು.

“ಗುಡಿಯಲಿರುವ ಶಿಲೆಗಳೆಲ್ಲ ದೇವರಂತೆ ಮನವಿರುವ ಮನುಜರೆಲ್ಲ ಮಕ್ಕಳಂತೆ ಮಕ್ಕಳಿಗೂ ದೇವರಿಗೂ ಭೇದವಿಲ್ಲ ಇಬ್ಬರ ಮನದಲ್ಲೂ ಕಪಟವಿಲ್ಲ” ಹಾಡು ಹಾಡಿದರೆ ನನ್ನ ತಮ್ಮನ ಕೀಟಲೆ ಬೇರೆ, ಮುಗ್ದ ಮನಸ್ಸಿನ ಸ್ವಚ್ಛಂದ ಹಕ್ಕಿಗಳಬಾಲ್ಯದ ದಿನಗಳೇ ಚಂದ ಅಲ್ಲವೇ?
ಭಾರವಾದ ಮನಸ್ಸಿನಿಂದ ಊರಿಗೆ ಹೊರಡುವ ಸಮಯ ದೊಡ್ಡಮ್ಮ ಕೊಡಿಸಿದ ಬಳೆ, ಸರ, ಬಟ್ಟೆ ಮುಂತಾದವುಗಳನ್ನು ಜೋಪಾನವಾಗಿ ವರ್ಷವಿಡೀ ಇಟ್ಟುಕೊಳ್ಳುತ್ತಿದ್ದೆ.

ಜಡೆಯಲಿರುವ ಬಣ್ಣ ಬಣ್ಣದ ರಿಬ್ಬನ್ ಕೈಯಲ್ಲಿ ಸವರಿದಾಗ ರಜೆಯಲ್ಲಿ ಕಳೆದ ನವಿರಾದ ಕ್ಷಣಗಳು, ಅವರೆಲ್ಲರ ಪ್ರೀತಿಯು ಹೊಳೆಹೊಳೆದು ಮಿನುಗುತ್ತಿತ್ತು.ಮನಸ್ಸು ಮತ್ತೊಂದು ರಜೆಗಾಗಿ ಕಾಯುತ್ತಿತ್ತು, ಮನಸ್ಸು ಮತ್ತೊಂದು ರಜೆಗಾಗಿ ಕಾಯುತ್ತಿತ್ತು  .

ಸುಮಾರು 42 ವರ್ಷಗಳ ಹಿಂದಿನ ಮಾತು. ನಮ್ಮ ಟೀಚರ್ ಗೋಡೆಯ ಮೇಲೆ ಭಾರತದ ಭೂಪಟ ಹಾಕಿ ಉತ್ತರದಲ್ಲಿ ಹಿಮಾಲಯ ಮಿಕ್ಕ ಮೂರೂ ಭಾಗ ಸಮುದ್ರದಿಂದಾವೃತಗೊಂಡಿದೆ ಎಂದು ಹೇಳಿದ್ದು ಕೇಳಿದ ತಕ್ಷಣ ನನ್ನ ಮನದಲ್ಲೊಂದು ಸಂದೇಹ ಉಂಟಾಯಿತು.

ಹಾಗಾದರೆ ಸಮುದ್ರದಾಚೆ, ಹಿಮಾಲಯದಾಚೆ ಬೇರೇನೂ ಇಲ್ಲವೆ ? ನಮ್ಮಂತೆ ವಾಸಿಸುವ ಜನಗಳಿಲ್ಲವೇ? ಎದ್ದು ನಿಂತು ಕೇಳಿದ ಪ್ರಶ್ನೆಗೆ ನಮ್ಮ ಟೀಚರ್ ಉತ್ತರ “ ಅದು ನಿನಗೆ ಮುಂದಿನ ತರಗತಿಯಲ್ಲಿ ಬರುತ್ತದೆ ಈಗ ಇದನ್ನು ಸರಿಯಾಗಿ ಕಲಿಯಿರಿ”.

ಅಂದು ಶಾಲೆಯಲ್ಲಿ ಯಾವುದಕ್ಕೂ ಗಮನವಿಲ್ಲ, ತಲೆಯಲ್ಲಿ ಅದೇ ಹುಳ ಕೊರೆಯತೊಡಗಿತು. ಶಾಲೆ ಮುಗಿಯುವುದನ್ನೇ ಕಾಯುತ್ತಿದ್ದೆ ಏಕೆಂದರೆ ನನ್ನ ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಡುವ ನನ್ನಪ್ಪ ಇದ್ದಾರೆ, ಅಷ್ಟು ಹೊಳೆದಿದ್ದೇ  ಶಾಲೆಯ ಗಂಟೆ ಸದ್ದಿಗೆ ಕಾಯುತ್ತ ಇದ್ದೆ . ನಂತರ ಪಾಟಿ ಚೀಲ ಹೆಗಲಿಗೇರಿಸಿ ಮನೆ ಕಡೆ ಹೆಜ್ಜೆಹಾಕಿದೆ.

ಹಾದಿಯಲ್ಲಿ ಜಡ್ಜ್ ಬಾವಿ ಇತ್ತು, ಸುತ್ತಲೂ ತಂತಿ ಬೇಲಿ ಬಿಗಿದಿದ್ದರು ಒಂದೆಡೆ ಮಾತ್ರ ತಂತಿ ಹರಿದಿತ್ತು, ಅದರ ಬಳಿ ಹೋಗಿ ಬಗ್ಗಿ ನೋಡುವ ಆಸೆ ಆದರೆ ಅಮ್ಮ ಹೇಳಿದ ಜಡ್ಜ್ ಬಾವಿ ಬಳಿ ಹೋಗಬೇಡಿ ಎಂಬ ಮಾತು ಕಿವಿಯಲ್ಲಿ ರಿಂಗಣಗೊಳ್ಳುತ್ತಿತ್ತು. ಶಾಲೆಯ ಚೀಲ ಈಗಿನ ಹಾಗೆ ಭಾರವಿರುತ್ತಿರಲಿಲ್ಲ.

ಅದನ್ನು ಹೆಗಲಿಗೆ ಹಾಕಿಕೊಂಡು, ನಾವು ಓಲಾಡುತ್ತಾ,ಚೀಲವನ್ನು ಅತ್ತಿಂದಿತ್ತ ಅಲ್ಲಾಡಿಸುತ್ತ, ಗೆಳತಿಯರೊಂದಿಗೆ ಹರಟುತ್ತ ನಿಧಾನವಾಗಿ ಮನೆಯೆಡೆಗೆ ಹೆಜ್ಜೆ ಹಾಕುವ ಮಜವೇ ಬೇರೆ ಬಿಡಿ. 

 ಮನೆಗೆ ಬಂದ  ತಕ್ಷಣ ಕೈ ಕಾಲು ಮುಖ ತೊಳೆದು ಅಮ್ಮ ಕೊಟ್ಟ ಲಘು ಉಪಹಾರ ಸೇವಿಸಿ, ಆಟಕ್ಕೆ ಹೋಗುತ್ತಿದ್ದೆವು. ಶಾಲೆಯಲ್ಲಿ ಆಟ, ಮನೆಗೆ ಬಂದ  ಮೇಲೆ ಅಕ್ಕ ಪಕ್ಕದ ಗೆಳತಿಯರೊಂದಿಗೆ ಕುಂಟ ಪಿಲ್ಲೆ, ಹಗ್ಗದಾಟ, ಸ್ವರ್ಣಹೀಗೆ ಒಂದು ಗಂಟೆ ಆಟವಾಡಿ ಮನೆಗೆ ಬಂದು ಕಾಲು ತೊಳೆದು ಎಳು ಗಂಟೆಗೆ ಓದಲು ಕುಳಿತುಕೊಳ್ಳಬೇಕು.

ಅಪ್ಪ ಬಂದ  ಮೇಲೆ ಕೇಳುವ ನನ್ನ ಪ್ರಶ್ನೆಯನ್ನು ರಿಹರ್ಸಲ್ ಮಾಡಿಕೊಳ್ಳುತ್ತಿದ್ದೆ. ಏಕೆಂದರೆ ಅಪ್ಪ ನನ್ನ ಪ್ರಶ್ನೆಗಳ ತೂಕಕ್ಕೆ ಸರಿಯಾಗಿ ಉತ್ತರಿಸುತ್ತಿದ್ದರು. ಪ್ರಶ್ನೆ ಬಾಲಿಶವಾಗಿದ್ದರೆ ಉತ್ತರವೂ ಹಗುರವಾಗಿರುತ್ತಿತ್ತು, ಪ್ರಶ್ನೆ ತೂಕವಿದ್ದರೆ ಉತ್ತರಕ್ಕೆ ಪ್ರಾಮುಖ್ಯತೆ. ಅಪ್ಪ ಬಂದ ನಂತರ ಕೆಲ ಸಮಯ ನಾನು ಮಾತನಾಡಿಸಲು ಹೋಗುತ್ತಿರಲಿಲ್ಲ.

ಟೀ ಲಘು ಉಪಹಾರ ಆದ ನಂತರ ನಾವು ಓದುವ ಕೊಠಡಿಗೆ ಬಂದು ತಾವು ಒಂದು ಪುಸ್ತಕ ಹಿಡಿದುಕೊಂಡು ಕೂತಿರುತ್ತಿದ್ದರು. ಮಧ್ಯೆ ಮಧ್ಯೆ ಏನು  ಓದುತಿದ್ದೀರಿ? ಎಂಬ ಗಂಭೀರ ಧ್ವನಿ.

 ನನ್ನ ಪ್ರಶ್ನೆಗೆ ಸರಿಯಾದ ಸಮಯ ಎಂದು ಭಾವಿಸಿ “ಅಪ್ಪ ಭಾರತದ ಭೂಪಟದಾಚೆ ಏನಿದೆ“ ? ಎಂದು ಕೇಳಿದೆ. ನನ್ನ ಅಪ್ಪನ ಕಂಗಳಲ್ಲಿ ಕಂಡ ಮಿಂಚು ನನಗಿನ್ನೂ ನೆನಪಿದೆ. ಮುಖದಲ್ಲಿ ಮಂದಹಾಸ ನನ್ನ ಪ್ರಶ್ನೆಗೆ  ಹೆಮ್ಮೆ ಪಡುತ್ತಾ ನೋಡು ಭಾರತದಾಚೆ ಹಿರಿದಾದ ಪ್ರಪಂಚವಿದೆ, ಹಲವು ದೇಶಗಳು, ನದಿಗಳು ಸಮುದ್ರಗಳು ಸಾಗರಗಳಿವೆ ಎಂದರು. ನಾನಾಗ ಅಪ್ಪನಿಗೆ ಶಾಲೆಯಲ್ಲಿ ಟೀಚರ್ ಹೇಳಿದ ಉತ್ತರ ಹೇಳಿದೆ. ಅಪ್ಪನಿಗೆ ಕೋಪ ಬಂತು. ಹೋಗಲಿ ಬಿಡು ಈಗ ಉತ್ತರ ಸಿಕ್ಕಿತಲ್ಲ ಎಂದರು.

ಅಲ್ಲಪ್ಪ ಭಾರತಕ್ಕೆ ಭೂಪಟವಿದೆ ಮತ್ತೆ ಪ್ರಪಂಚೆಕ್ಕೆ? ಎಂದೆ. ಇರು ನಿನ್ನ ಪ್ರಶ್ನೆಗೆ ನಾನು ನಾಳೆ ಒಂದು ಪುಸ್ತಕ ತಂದು ಕೊಡುವೆಯೆಂದರು ಅಪ್ಪ. ಅದರ ಹೆಸೆರು ಅಟ್ಲಾಸ್ ಎಂದರು. ಇಡೀ ರಾತ್ರಿ ನನ್ನ ಕಣ್ಣ ಮುಂದೆ ಅಟ್ಲಾಸ್ ಪುಸ್ತಕವೆ ಸುಳಿದಾಡುತ್ತಿತ್ತು. ಮಾರನೇ ದಿನ ಸಂಜೆ ಅಪ್ಪ ಬರುವಾಗ ಅಪ್ಪನ ಕೈ ನೋಡಿದೆ, ಏನು ಇರಲಿಲ್ಲ, ಕೇಳಿದೆ ಒಮ್ಮೆ ಗದರಿದರು. ಏನಾದ್ರು ಹಿಡಿದರೆ ಅದೇ ನಿಂಗೆ. ಸಪ್ಪೆ ಮುಖ ಹಾಕಿಕೊಂಡು ಸುಮ್ಮನಾದೆ.

ಮಾರನೇ ದಿನ ಅಪ್ಪ ಬಾಗಿಲಿನಿಂದಲೇ ಕೂಗಿ ಕರೆದರು . ಸುಮಾ ಬಾ ಇಲ್ಲಿ ಏನು ತಂದಿದ್ದೇನೆ ನೋಡು! ಸಂತಸ, ಸಂಭ್ರಮ, ಆನಂದ ಎಲ್ಲ ಪದಗಳನ್ನು ಒಟ್ಟಿಗೆ ಸೇರಿಸಿದರು ಆ ಸಮಯದ ಮುಗ್ದ ಮನಸ್ಸಿನ ಖುಷಿಗೆ ಸಮವಾಗುವುದಿಲ್ಲ. ನೋಡುತ್ತೇನೆ ಅಪ್ಪನ ಕೈಯಲ್ಲಿ ಅಟ್ಲಾಸ್. ಅಪ್ಪನ ಸಂತಸದ ನಗೆ ಇನ್ನು ನೆನಪಿದೆ ನಾನು ಅಪ್ಪ ಇಬ್ಬರು ನಕ್ಕೆವು.

ಅಟ್ಲಾಸ್ ಅದೊಂದು ಕವ್ತುಕದ ಗಣಿ. ಹಲವಾರು ಪುಟಗಳು, ಬಣ್ಣ ಬಣ್ಣದ ಭೂಪಟಗಳು, ಒಂದೊಂದು ಖಂಡಗಳು. ಒಂದೊಂದು ದೇಶಗಳು ಒಂದೊಂದು ಆಕಾರ, ಗಾತ್ರ.  ಮಧ್ಯೆ ಮಧ್ಯೆ ಹರಿಯುವ ಸಾಗರ, ಸಮುದ್ರಗಳು ಹಲವಾರು ಬಣ್ಣಗಳನ್ನು ಉಪಯೋಗಿಸಿ ಸುಲಭವಾಗಿ ಗುರುತಿಸುವಲ್ಲಿ ಸಹಾಯ ಮಾಡಿರುತ್ತಿದ್ದರು.

ನೋಡಿದಷ್ಟು ಸಾಲದು, ಓದಿದಷ್ಟೂ ಮುಗಿಯದು. ಅಪ್ಪ ಪುಸ್ತಕವನ್ನು ಹಿಡಿದುಕೊಂಡು ಓದುವ ಬಗೆ ತಿಳಿಸುತ್ತ, ಪ್ರತಿದಿನ ಒಂದೊಂದು ಪುಟದ ವಿವರಣೆ ಕೊಡುತ್ತಿದ್ದರು. ಅದನ್ನು ಕೇಳಿಸಿಕೊಂಡು ಅದೇ ರೀತಿ ಪೂರ್ತಿಯಾಗಿ ಓದುತ್ತ ಹೋಗುತ್ತಿದ್ದೆ. ನನಗಾಗ ಅದೊಂದು ಅದ್ಭುತ, ಅಚ್ಚರಿ ಎಲ್ಲವೂ ಆಗಿತ್ತು. ಅದರಲ್ಲಿ ಏನುಂಟು ಏನಿಲ್ಲ!ಎಷ್ಟು ಓದಿದರೂ ತೀರದು.

ಅದರಿಂದಾಗಿ ಅಪ್ಪನ ಬಳಿ ಬೈಸಿಕೊಂಡಿದ್ದು ಆಯ್ತು. ಪರೀಕ್ಷೆ ಆಗುವವರೆಗೂ ಅಟ್ಲಾಸ್ ತೆಗೆಯದಂತೆ ತಾಕೀತು ಮಾಡಿದ್ದರು. ಅದರಂತೆ ನಡೆಯಬೇಕು ಹಾಗೆ ಇರುತ್ತಿದ್ದೆವು. ಆಗಾಗ ರಜೆಯಲ್ಲಿ ಅಟ್ಲಾಸ್ ಓದಿಕೊ ಎನ್ನುತ್ತಿದ್ದರು. ಆದರೆ ರಜೆಯಲ್ಲಿ ನಾವೆಲ್ಲ ಅಮ್ಮನ ತವರು ಮನೆ ನಾಗಸಮುದ್ರಕ್ಕೆ ಹೋಗುತ್ತಿದ್ದೆವಲ್ಲ ಆಗ ನನಗೆ ಪೂರ್ತಿ ಮರೆತೇ ಹೋಗಿರುತ್ತಿತ್ತು.

ಮತ್ತೆ ಶಾಲೆ ಪ್ರಾರಂಭವಾಗಿ ಓದಲು ಕುಳಿತರೆ ನೆನಪಾಗುತಿತ್ತು . ಬೇಗ ಪಾಠವೆಲ್ಲ ಮುಗಿಸಿದರೆ ಅಟ್ಲಾಸ್ ಕೊಡುವುದಾಗಿ ಹೇಳಿರುತ್ತಿದ್ದರು. ಹೀಗಾಗಿ  ಬಿಡುವಿನ ವೇಳೆಯ ಗೆಳತಿ ಅಟ್ಲಾಸ್.

ಈ ಅಟ್ಲಾಸ್ ಪ್ರತಿವರ್ಷ ಒಂದೊಂದು ಹೊಸ ಹೊಸ ವಿಚಾರಗಳನ್ನು ತಿಳಿಸುತ್ತ ಹೋಗುತ್ತಿತ್ತು. ಹೇಗೆಂದರೆ ಶಾಲೆಯಲ್ಲಿ ಇತಿಹಾಸ ಪಾಠವಾದ ನಂತರ ಅಶೋಕನ ಸಾಮ್ರಾಜ್ಯ ವಿಸ್ತರಣೆ, ಭೂಗೋಳದಲ್ಲಿ ಸೂಜಿಮೊನೆ ಕಾಡುಗಳು, ಸಹಾರ ಮರಭೂಮಿ, ಪೆಸಿಫಿಕ್ ಸಾಗರ ಹೀಗೆ ಒಂದು ವಿಚಾರದ ಹಲವು ಆಯಾಮಗಳನ್ನು ತಿಳಿಸುವ ಸಾಧನವಾಗಿತ್ತು ಅಟ್ಲಾಸ್. ಈಗಿನ ಹಾಗೆ ಗೂಗಲ್ ಇರಲಿಲ್ಲವಲ್ಲ, ನಮಗೆ ಪ್ರತಿಯೊಂದು ಪ್ರಶ್ನೆಗೂ ಸೆಕೆಂಡಿನಲ್ಲಿ ಉತ್ತರ ಸಿಗುತ್ತಿರಲಿಲ್ಲ. 

ನಾವೇ ಹುಡುಕಿಕೊಳ್ಳಬೇಕಿತ್ತು. ಆ ಕಾಲವೇ ಚೆಂದ. ಹೀಗಾಗಿ ನಾನು ಹೈಸ್ಕೂಲ್ ಗೆ ಬರುವೆ ವೇಳೆಗೆ ಅಪ್ಪ ಕೇಳುವ ಹಲವು  ಪ್ರಶ್ನೆಗಳಿಗೆ ಅಟ್ಲಾಸ್‌ ನಲ್ಲಿ  ಉತ್ತರ ತೋರಿಸಿ ಬಿಡುತ್ತಿದ್ದೆ. ಒಮ್ಮೊಮ್ಮೆ ಏಷಿಯಾದ, ಯೂರೋಪಿನ, ಎಲ್ಲ ದೇಶಗಳನ್ನು ಗುರುತಿಸಲು ಹೇಳುತ್ತಿದ್ದರು. ಪ್ರತಿ ವರ್ಷ ಹೊಸ ಅಟ್ಲಾಸ್ ಅಪ್ಪ ಕೊಡಿಸುತ್ತಿದ್ದರು, ಜೊತೆಗೆ ಬೈಗುಳ ಬೇರೆ ಏಕೆಂದರೆ ಅಟ್ಲಾಸ್ ಅಷ್ಟೊಂದು ಮೆತ್ತಗಾಗಿ ಹರಿದಿರುತ್ತಿತ್ತು.

ವಿಶ್ವ ಭೂಪಟ ನನಗೆ ಪ್ರಿಯವಾದ ವಸ್ತು. ಹೋದಬಾರಿ ನಾನು ಜೆರ್ಮನಿಗೆ ಬಂದಾಗ ಅಪ್ಪ ಇದ್ದರು. ನಾನು ನೋಡಿದ ಯೂರೋಪಿನ ಹಲವು ದೇಶಗಳ ಬಗ್ಗೆ ಹಿಂದಿನ ದಿನವೇ ಫೋನಿನಲ್ಲಿ ಪೂರ್ತಿ ವಿವರಣೆ ಕೊಟ್ಟಿರುತ್ತಿದ್ದರು. ಅದೆಷ್ಟು ವಿಷಯ ಅಪ್ಪನಿಗೆ ಗೊತ್ತಿತ್ತು !
ಈಬಾರಿ ಜರ್ಮನಿ ಗೆ ಹೊರಟೆ, ಅದೇ ಭೂಪಟ, ಅದೇ ಸಮುದ್ರ, ಸಾಗರ ಎಲ್ಲವೂ ಇದೆ.

ಆದರೆ ಈಗ ಅಪ್ಪನಿಲ್ಲ. ಆದರೆ ಅಪ್ಪ ತಿಳಿಸಿದ ಅಟ್ಲಾಸ್ನ ಬಣ್ಣ ಬಣ್ಣದ ಒಂದೊಂದು ಪುಟವು ತೆರೆದುಕೊಳ್ಳುತ್ತಾ ಹೋಗುತ್ತಿದೆ. ವಿಮಾನವು ದೇಶ, ವಿದೇಶ, ಸಮುದ್ರ, ಸಾಗರಗಳನ್ನು ದಾಟಿ ಮುಂದೆ ಸಾಗಿದಂತೆಲ್ಲ ನನ್ನ ಮನಸ್ಸು ಮಾತ್ರ ಹಿಂದಕ್ಕೆ ಹಿಂದಕ್ಕೆ ಸಾಗುತ್ತ ನಾನು, ಅಟ್ಲಾಸ್, ಅಪ್ಪ ಎಂದು ಕೂಗಿ ಕೂಗಿ ಹೇಳುತ್ತಿತ್ತು.

೧೯೮೧ ರಲ್ಲಿ ನಾನು ೧೦ನೇ ತರಗತಿಯ ಮಧ್ಯ ವಾರ್ಷಿಕ ಪರೀಕ್ಷೆಗೆ ಓದುತ್ತಾ ಇದ್ದೆ. ಒಂದು ಭಾನುವಾರ ಅಮ್ಮ ಅಪ್ಪ ಸಿನೆಮಾಗೆ ಹೊರಟಿದ್ದರು ಹೆಸರು ”ಸ್ವಪ್ನ”. ಅದು ತೆಲುಗು ಭಾಷೆಯ ಚಿತ್ರ. ದಾಸರಿ ನಾರಾಯಣ ರಾವ್ ಅವರ ಚಿತ್ರ, ಅದ್ಭುತ ಯಶಸ್ಸುಗಳಿಸಿತ್ತು. ಅಪ್ಪ ಹಾಗೆಲ್ಲ ಎಲ್ಲ ಸಿನೆಮಾಗೆ ಹೋಗುತ್ತಿರಲಿಲ್ಲ. ನ್ಯೂಸ್ ಪೇಪರ್ ಅಲ್ಲಿಯ ವಿಮರ್ಶೆ ಹಾಗೂ ಸ್ನೇಹಿತರ ಅಭಿಪ್ರಾಯದ ಮೇರೆಗೆ ಹೊರಟಿದ್ದರು.

ಆಗ ನನಗೇನು ಅನ್ನಿಸಿರಲಿಲ್ಲ. ಸಿನೆಮಾದಿಂದ ಬಂದ ನಂತರ ಅಮ್ಮನ ಸಿನಿಮಾ ಚೆನ್ನಾಗಿಲ್ಲ ಎಂಬ ಅಭಿಪ್ರಾಯ ನನಗೆ ಅಚ್ಚರಿ ಉಂಟು ಮಾಡಿತ್ತು. ಯಾಕಮ್ಮ ನಾನು ನೋಡಬೇಕಲ್ಲ ಅಂದೆ, ”ನಾನು ಹೇಳಿದ್ದು ನಿಂಗೆ ಅರ್ಥ ಆಗ್ಲಿಲ್ವಾ ? ”  ಅಂದ್ಲು. ಅಮ್ಮ ಯಾವಾಗ್ಲೂ ಅಷ್ಟೇ ಹೇಳೋದು. ಬೈಯ್ಯೋದು ಅಂದ್ರೆ ಅದೇ. ಅಮ್ಮನ ಗಟ್ಟಿಯಾದ ಧ್ವನಿ ನಾವು ಕೇಳೇ ಇರಲಿಲ್ಲ.

ಒಂದು ದಿನವೂ  ಕೋಪಿಸಿಕೊಂಡಿದ್ದು,  ಅಸಹನೆ ಇಂದ ನಡೆದುಕೊಂಡಿದ್ದು ಗೊತ್ತೇ ಇರಲಿಲ್ಲ . ಅಷ್ಟು ನಗು ನಗುತ್ತ ನಾಲ್ಕು ಜನ ನಮ್ಮನ್ನು ಹೇಗೆ ಬೆಳಿಸಿದಳೋ ಇಂದಿಗೂ ಅರ್ಥವಾಗದ ಒಗಟು. ತಮ್ಮಂದಿರ ಗಲಾಟೆ ತಡೆಯಲಾಗದಿದ್ದರೆ ಅಪ್ಪನಿಗೆ ಹೇಳ್ತೇನೆ ಎಂದರೆ ಸಾಕು ಸುಮ್ಮನಾಗುತ್ತಿದ್ದರು.

ನಾನು ಅಮ್ಮನ್ನ ಮತ್ತೆ ಪೀಡಿಸಿದೆ ”ಅಮ್ಮ ಯಾಕೆ ನಾವು ನೋಡಬಾರದು” ಎಂದೆ ?. ”ಮುಂದಿನವಾರ ರಾಜಕುಮಾರ್ ಚಿತ್ರಕ್ಕೆ ಕರೆದುಕೊಂಡು ಹೋಗ್ತೇನೆ” ಸುಮ್ನಿರು ಅಂದಳು.

ಅಪ್ಪ ಮಾತ್ರ ಸಿನಿಮಾದ ಒಂದು ಹಾಡನ್ನು ಯಾವಾಗ್ಲೂ ಹೊಗಳ್ತಾ ಇರ್ತಿದ್ರು.” ಎಂತಹ ಅದ್ಭುತ ಸಾಹಿತ್ಯ, ಸುಂದರ ರಾಗ ಸಂಯೋಜನೆ, ಹಿಂದಿಯ ಹಾಡಿನ ಪ್ರೇರಣೆಯೇ ಈ ಇಂಪಾದ ಹಾಡಿನ ಉಗಮ, ಅಲ್ಲದೆ S P ಬಾಲ ಸುಬ್ರಮಣ್ಯಂ ಹಾಡಿನ ವೈಖರಿ ತಲೆದೂಗುವಂತಿದೆ” ಎನ್ನುತ್ತಾ ಈ ಹಾಡನ್ನು ಆಗಾಗ ಗುನುಗುತ್ತಿದ್ದರು. ರೇಡಿಯೋದಲ್ಲಿ ಒಮ್ಮೆ ಈ ಹಾಡು ಬಂದಾಗ ನಮ್ಮನ್ನೆಲ್ಲ ನಿಶ್ಯಬ್ದವಾಗಿರುವಂತೆ ಗದರಿಸಿದ್ದರು.

ಅಪ್ಪ ಮಾತ್ರ ಹಾಡನ್ನು ಅದರ ಸಾಹಿತ್ಯ ಸಂಗೀತವನ್ನು ಹೊಗಳಿದರೆ ಅಮ್ಮ ಯಾಕೆ ನನಗೆ ಸಿನಿಮಾ ನೋಡಬೇಡ ಎನ್ನುತ್ತಾಳಲ್ಲ ಎಂದು ಯೋಚಿಸುತ್ತ ಧೈರ್ಯ ಮಾಡಿ ಕೇಳಿಬಿಟ್ಟೆ. ಅಮ್ಮ ಹೇಳಿದಳು” ಅದು ತಂದೆ ತಾಯಿಯರನ್ನು ಧಿಕ್ಕರಿಸಿ ಮದುವೆಯಾಗೋ ಹುಡುಗಿಯ ಸಿನಿಮಾ” ಎಂದು. ನೋಡಿ ಸ್ನೇಹಿತರೆ ಅಂದಿನ ಕಾಲದಲ್ಲಿ ಮಕ್ಕಳನ್ನು ಬೆಳೆಸುವ ಪರಿ !. ಮಕ್ಕಳ ಮನಸ್ಸು ಬಿಳಿಹಾಳೆಯಂತೆ ಅದರಲ್ಲಿ ನಾವು ಹೇಗೆ ಚಿತ್ರಬಿಡಿಸಿದರೆ ಹಾಗೆ ಚಿತ್ರಿತವಾಗುತ್ತದೆ ಎಂಬ ನನ್ನ ಗುರುಗಳ ಮಾತು ಅದೆಷ್ಟು ದಿಟವಲ್ಲವೇ?

ಅಪ್ಪ ಎಲ್ಲ ಭಾಷೆಗಳನ್ನು  ಅದರ ಸಾಹಿತ್ಯವನ್ನು ಗೌರವಿಸುತ್ತಿದ್ದರು. ಭಾಷೆಗಿಂತ ಭಾವ ಮುಖ್ಯ ಎನ್ನುತ್ತಿದ್ದರು. ಬಾಲಸುಬ್ರಮಣ್ಯಂ ಆ ಹಾಡನ್ನು ಹಾಡುವ ರೀತಿ ಆ ಗೀತೆಯನ್ನು ತುಂಬಾ ಇಷ್ಟಪಡುತ್ತಿದ್ದರು. ನಾನು ಆ ಹಾಡನ್ನು ಆಗಾಗ ರೇಡಿಯೋದಲ್ಲಿ ಬಂದಾಗ ಆಲಿಸುತ್ತಿದ್ದೆ ಎಷ್ಟು  ಅರ್ಥಗರ್ಭಿತ ಪ್ರೇಮ ಗೀತೆ !  ಅದು ಅವನ ಮೊದಲ ಪ್ರೇಮ ಪತ್ರ.

ಒಂದೊಂದೇ ಸುಂದರ ವಸ್ತುಗಳನ್ನು ಹೋಲಿಕೆ ಕೊಡುತ್ತ ಹೋಗುತ್ತಾನೆ. ಅವೆಲ್ಲ ನಶ್ವರ. ಹಾಗಾದರೆ ನನ್ನ ಪ್ರೇಮಾವನ್ನು ಹೇಗೆ ಅಭಿವ್ಯಕ್ತಗೊಳಿಸಲಿ ಎಂಬ ಜಿಜ್ಞಾಸೆಗೆ ಒಳಗಾಗಿ ಮತ್ತೆನ್ನನ್ನು ಹೇಳಲಾರೆ ನೀನೆ ನನ್ನ ಪ್ರಾಣ ಅಷ್ಟೇ ಎನ್ನುವುದನ್ನು ಎಸ್ ಪಿ ಬಿ ಕಂಠದಲ್ಲೇ ಕೇಳಬೇಕು. ಅದೆಷ್ಟು ಭಾವ ತುಂಬಿ ಹಾಡಿದ್ದಾರೆ! ಅದ್ಭುತ.  ಪ್ರೇಮವೇ ಹಾಗೆ ನವಿರಾದ ಭಾವನೆ. ವಯಸ್ಸನ್ನೇ ಮರೆಸಿ ಮುಖದಲ್ಲಿ ಮಂದಹಾಸ ಮೂಡುತ್ತದೆ ಅಲ್ಲವೇ?

ಈ ಘಟನೆ ನಡೆದು ಮೂವತೈದು ವರ್ಷಗಳೇ ಸಂದಿವೆ. ಇಂದು” ಎಸ್ ಪಿ ಬಿ  ಯ” ಯಾವುದೊ ತೆಲುಗು ಕಾರ್ಯಕ್ರಮದಲ್ಲಿ ಈ ಹಾಡು ಕೇಳಿದೆ. ತಟ್ಟನೆ ನೆನಪಾಯಿತು. ಇಂತಹ ಎಷ್ಟೋ ಸನ್ನಿವೇಶಗಳು ಸ್ಮೃತಿಪಟಲದ ಆಳದಲ್ಲಿ ಹುದುಗಿ ಹೋಗಿರುತ್ತವೆ ನಾವಾಗಿ ಕೆದಕಿದರೆ ಸಿಗುವುದಿಲ್ಲ. ತಾನಾಗಿಯೇ ಇದ್ದಕ್ಕಿದ್ದಂತೆ ನೀರ ಬುಗ್ಗೆಯಂತೆ ಚಿಮ್ಮಬೇಕು ಅಲ್ಲವೇ?

ಇಂದು ಬಹಳ ಸಂತಸವಾಗಿದೆ. ಆ ಇಂಪಾದ ಮೈಮರೆವ ಹಾಡನ್ನು  ನೀವೊಮ್ಮೆ ಕೇಳುವಿರಾ.?

। ಮುಗಿಯಿತು ।


‍ಲೇಖಕರು Avadhi

October 26, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: