-ವಿಜಯರಾಘವನ್ ರಾಮ್ ಕುಮಾರ್
ದಿ ಗ್ರೇಟ್ ಎನಿಗ್ಮಾ ತ್ರಾನ್ಸ್‌ತೋಮರ್‌ನ ಹೊಸ ಕವಿತೆಗಳ ಸಂಕಲನ. ಯಾರೇ ಕುತೂಹಲಿ ಓದುಗನಿಗೆ ಇದು ಖಂಡಿತವಾಗಿಯೂ ಅವನ ಓದಿನ ಆರಂಭವಾಗಲು ತಕ್ಕುದಾದುದು. ಮೊದಲ ಓದಿಗೇ ಹೊಳೆಯುವುದು ತ್ರಾನ್ಸ್‌ತೋಮರ್‌ನ ಕೃತಿಯ ಉತ್ಕಟವಾದ ಮತ್ತು ಸುಂದರವಾದ ನಿಶ್ಚಲತೆ. ಅವನಲ್ಲಿ ಪದಗಳು ಬಹಳ ದೊಡ್ಡ ಬಿಳಿ ಕ್ಯಾನ್ವಾಸಿನ ಮೇಲೆ ಬಿದ್ದ ಕಪ್ಪು ಚುಕ್ಕೆಗಳಂತೆ. ೧೯೬೨ರ “Solitary Swedish Houses,” (ಒಂಟಿ ಸ್ವೀಡಿಶ್ ಮನೆಗಳು) ಕವಿತೆಯಲ್ಲಿ ಆತ ಬರೆಯುವುದು
ತಂಗಡಿಯ ತೊಲೆ ಮತ್ತು
ಹೊಗೆ ಹಿಡಿದ ಬೆಳದಿಂಗಳ ಕೋಲು
ಇವುಗಳ ಗೊಂದಲ.
ಇಲ್ಲೊಂದು ಮನೆ, ಕೆಳಗೆ
ಯಾವ ಜೀವದ ಕುರುಹೂ ಇಲ್ಲ
ಈಚೆಗೆ ಸ್ವೀಡಿಶ್ ಸಾಹಿತ್ಯದಲ್ಲಿ, ಕ್ರೈಂ ಸಾಹಿತಿಗಳು ಎಬ್ಬಿಸಿರುವ ಅಲೆಗಳು ಓದುಗರ ಮನಸ್ಸಿನ ಮೇಲೆ ಬೀರಿರುವ ಪರಿಣಾಮ ಹೇಗಿದೆಯೆಂದರೆ ತ್ರಾನ್ಸ್‌ತೋಮರ್‌ನ ಶೀತಲ ಧಾರ್ಮಿಕ ಮನಸ್ಸಿಗೆ ಏನಾದರೂ ಕಾಡುವಂಥದ್ದು, ಘೋರವಾದದ್ದು ಈಗ ಸಂಭವಿಸಬಾರದೇಕೆ ಎಂಬ ಪ್ರಶ್ನೆ ಉದ್ಭವಿಸದೆ ಇರದು. ಅವನ ಕವಿತೆಗಳು ಮತ್ತೆ ಮತ್ತೆ ಅವನ ಸ್ವೀಡನ್ನಿನ ನೆಲವನ್ನು ಮತ್ತು ಪರಿಚಿತ ನೋಟಗಳನ್ನು ನಮಗೆ ತಂದುಕೊಡುತ್ತವೆ. ಅವುಗಳ ಜೊತೆಗೆ ಇಲ್ಲಿವೆ ತುಕ್ಕು ಹಿಡಿದ ದೋಣಿಗಳು ಮತ್ತು ದೋಣಿಗಳು ತುಂಬಿರುವ ಬಂದರುಗಳು. ಇಲ್ಲಿವೆ ಮಬ್ಬುಕವಿದ ಉತ್ತರ ಪ್ರದೇಶದ ಮಳೆಯ ಮುಂಜಾನೆಗಳು ಎಂಬ ಸರಳ ಸಂದೇಶಗಳೂ ರವಾನೆಯಾಗುತ್ತವೆ.ತ್ರಾನ್ಸ್‌ತೋಮರ್ ತನ್ನ ಈವರೆಗಿನ ಬದುಕಿನ ಬಹುಪಾಲು ಸ್ಟಾಕ್ ಹೋಂನಲ್ಲಿಯೇ ಕಳೆದಿದ್ದಾನೆ. ಅದರ ಪರಿಣಾಮ ಅವನ ಕೃತಿಗಳಲ್ಲಿ ನಿಚ್ಚಳವಾಗಿ ಕಂಡುಬರುತ್ತದೆ. ಆದರೆ, ತ್ರಾನ್ಸ್‌ತೋಮರ್ ದೇಶ ಸುತ್ತುತ್ತಾನೆ. ಪ್ರವಾಸಿಗರು, ರೈಲು ಪ್ರಯಾಣ, ದೀರ್ಘ ಪ್ರವಾಸ ಕಾಲದಲ್ಲಿ ಬರೆದ, ಮತ್ತು ಬಂದ ಪತ್ರಗಳು – ಇವೆಲ್ಲ ಅವನ ಕವಿತೆಗಳಲ್ಲಿ ಮತ್ತೆ ಮತ್ತೆ ಬರುತ್ತವೆ. ಡಬ್ಲ್ಯೂ.ಜಿ. ಸೆಬಾಲ್ಡ್‌ನ* ಇಂತೆಯೇ ಆಳವಾದ ಕೃತಿಯಲ್ಲಿ ಆಗುವಂತೆ ಪ್ರಪಂಚವನ್ನು ನಿರಂತರ ಚಲನೆಯ ನೂಕು ನುಗ್ಗಲಿನ ಕಡೆಯಿಂದ ನಿರಂತರವಾಗಿ ತ್ರಾನ್ಸ್‌ತೋಮರ್ ಅವಲೋಕಿಸುತ್ತಾನೆ. ಓಕ್ಲಹೋಮಾ ಕವಿತೆಯಲ್ಲಿ ಅವನು
ಟ್ರೈನು ದಕ್ಷಿಣದಂಚಲ್ಲಿ ದೂರ ನಿಂತಿತು.
ನ್ಯೂ ಯಾರ್ಕಿನಲ್ಲಿ ಹಿಮಪಾತವಾಗುತ್ತಿತ್ತು ಆಗ
ಇಲ್ಲಿ ನೀನು ಜಾಕೆಟ್ ಧರಿಸದೆಯೇ ರಾತ್ರಿಯಿಡೀ ಕಳೆಯಬಹುದಿತ್ತು
ಆದರೆ ಯಾರೂ ಹೊರಗೆ ಬಂದಿರಲಿಲ್ಲ, ಬರೀ ಕಾರುಗಳು
ಅವುಗಳ ಕೋರೈಸುವ ಬೆಳಕ ಝಳದಲ್ಲಿ ಹಾರಿದಂತೆ, ಹಾರಾಡುವ ತಟ್ಟೆಗಳು
– ಎಂದು ಬರೆಯುತ್ತಾನೆ. ಈ ಕವಿತೆಗಳ ಸಹಜ ನಿರುಮ್ಮಳತೆಯನ್ನು ಅಲ್ಲಿ ಹುಟ್ಟಿಕೊಳ್ಳುವ ಅನಿರೀಕ್ಷಿತ ಪ್ರತಿಮೆಗಳ ಭ್ರಾಮಕತೆಯು ಕದಡಿಬಿಡುತ್ತದೆ.ಅವನ ಹಿಂದಿನ ಅನೇಕ ಕವಿಗಳಂತೆ ತ್ರಾನ್ಸ್‌ತೋಮರ್ ಸಹ ನಮಗೆ ಸದಾ ನೆನಪು ಮಾಡಿಕೊಡುವುದು ಈ ಪ್ರಪಂಚ ಅದು ತೋರುತ್ತಿರುವಂತೆ ಇಲ್ಲ, ನೀನು ಜಾಗ್ರತನಾಗಿದ್ದರೆ, ಮತ್ತು ಸೂಕ್ಷ್ಮಾವಲೋಕನ ಮಾಡಿದರೆ ನಿನಗೆ ಈಗ ತೋರುತ್ತಿರುವುದಕ್ಕಿಂತ ಭಿನ್ನವೂ ವಿಶಾಲವೂ ಆದದ್ದೊಂದರ ಕ್ಷಣದರ್ಶನವೊಂದು ಆದೀತು ಎಂದು. ಈಚಿನ ಹಾಯ್ಕುವೊಂದರಲ್ಲಿ ಅವನು
ಮಳೆಯ ಸದ್ದನು ಕೇಳು,
ಅದರ ಒಳಗನ್ನು ತಲುಪಲು
ನಿನಗೊಂದು ಗುಟ್ಟು ಹೇಳುತ್ತೇನೆ
– ಎಂದು ಬರೆಯುತ್ತಾನೆ.
(ಗ್ರಾಂಟಾದ ಸಂಪಾದಕ ಜಾನ್ ಫ್ರೀಮ್ಯಾನ್‌ನ ಲೇಖನದ ಅನುವಾದ )
*Winfried Georg Maximilian Sebald, writer a writer who enriched the culture of Europe. born May 18 1944; died December 14 2001
ತ್ರಾನ್ಸ್‌ತೋಮರ್‌ನ ಎರಡು ಕವಿತೆಗಳ ಅನುವಾದ
ಒಂದು ಸಾವಿನ ನಂತರ
ಅಲ್ಲೊಂದು ಆಘಾತ ಬಂದೆರಗಿತ್ತು
ಅದು ಬಳಿಕ ಉಳಿಸಿದ್ದು ಒಂದು ಉಲ್ಕೆಯ
ಮಿನುಗುವ ದೊಡ್ಡ ಬಾಲವನ್ನು
ನಮ್ಮನ್ನು ಒಳಗೇ ಇರಿಸುತ್ತದೆ, ಅದು
ಟಿ.ವಿಯ ಚಿತ್ರಗಳನ್ನು ಮಸಕಾಗಿಸುತ್ತದೆ
ಟೆಲಿಫೋನ್ ತಂತಿಗಳ ಮೇಲೆ
ಥಣ್ಣನೆಯ ಹನಿಯಲ್ಲಿ ನಿಂತುಬಿಡುತ್ತದೆ
ಆದರೂ ಜಾರುಹಲಗೆಗಳ ಮೇಲೆ
ಚಳಿಗಾಲದ ಹಗಲಲ್ಲಿ ನಿಧಾನ ಜಾರಬಹುದು
ಒಂದಿಷ್ಟು ಎಲೆ ಕಚ್ಚಿಕೊಂಡಿರುವ ಪೊದೆಗಳ ನಡುವೆ
ಅವು ಹಳೆಯ ಟೆಲಿಫೋನ್ ಡೈರೆಕ್ಟರಿಯ
ಹರಿದ ಪುಟಗಳ ಹೋಲುತ್ತವೆ
ಹೆಸರುಗಳನ್ನು ಶೀತ ನುಂಗಿಹಾಕಿದೆ
ಎದೆಯ ಬಡಿತವನ್ನು ಕೇಳುವುದು ಇನ್ನೂ ಚಂದವೆ
ಆದರೆ ಬಹಳ ಸಲ ಶರೀರಕ್ಕಿಂತ ನೆರಳೇ ವಾಸ್ತವವೆನ್ನಿಸುತ್ತದೆ.
ಸಮುರಾಯಿಯು ಗೌಣನೆಂಬಂತೆ ಕಾಣಿಸುತ್ತಿದ್ದಾನೆ
ಅವನ ಕಪ್ಪು ಡ್ರಾಗನ್ ಸ್ಕೇಲ್ಸ್ ಕವಚದ ನಡುವೆ
ಹೊರವಲಯ
ಮಣ್ಣಿನ ಬಣ್ಣದ ಉಡುಪು ತೊಟ್ಟ ಜನ
ಏಳುತ್ತಾರೆ ಒಂದು ಹಳ್ಳದೊಳಗಿಂದ
ಅದೊಂದು ಸಂಕ್ರಮಣ ಸ್ಥಳ, ನನೆಗುದಿಗೆ ಬಿದ್ದಂತೆ
ಅತ್ತ ಹಳ್ಳಿಯೂ ಅಲ್ಲ, ಇತ್ತ ಪಟ್ಟಣವೂ ಅಲ್ಲ
ನಿರ್ಮಾಣ ಕೆಲಸದ ಕ್ರೇನುಗಳು ದಿಗಂತದಲ್ಲಿ
ಬಲು ದೊಡ್ಡ ಹೆಜ್ಜೆಯಿಡಲು ಬಯಸುತ್ತಿವೆ
ಆದರೆ ಕಾಲ ಅದಕ್ಕೆ ಸಮ್ಮತಿಸುತ್ತಿಲ್ಲ
ಕಾಂಕ್ರೀಟಿನ ಕೊಳವೆಗಳು ಹರಡಿ ಬಿದ್ದಿವೆ
ಕೊರೆವ ನಾಲಗೆಗಳಿಂದ ಬೆಳಕ ನೆಕ್ಕುತ್ತ
ಹಳೆಯ ತೋಟದ ಮನೆಯನ್ನು ಆಟೋ ಬಾಡಿಯ
ಅಂಗಡಿಗಳು ಆಕ್ರಮಿಸಿಕೊಂಡಿವೆ
ಚಂದಿರನ ಮೇಲಿನ ವಸ್ತುಗಳಷ್ಟು ಮೊನಚಾಗಿರುವ
ನೆರಳುಗಳನ್ನು ಕಲ್ಲುಗಳು ಚೆಲ್ಲಿವೆ
ಈ ಸೈಟುಗಳು ದೊಡ್ಡದಾಗುತ್ತಲೇ ಇರುತ್ತವೆ,
ಜುದಾಸನ ಕಾಸಿಂದ ಕೊಂಡ ನೆಲದಂತೆ:
ಅಪರಿಚಿತರನ್ನು ಗತಿಗೇಡಿಗಳನ್ನು
ಹೂಳಲಿಕ್ಕಿರುವ ಸ್ಮಶಾನದಂತೆ








“Maleya saddanu kelu, Adara olaganu talupalu ninagondu guttu heluttene”. Really a very significant small poem. One can see the rain and hear its sound, but cannot go deep into it and understand it unless he knows the secret. The two poems are very much haunting with their imagery.
Thanks a lot and thanks a lot to Vijayaraghavan Ramkumar who has translated the poems and the article successfully.
Ramesh Megaravalli.
nanagondu arthavaguthilla- obbarige maatrave idu ishtave? ulidavarenadaru?