ನೈಲ್ ನದಿಯ ಮಡಿಲಲ್ಲಿ : ’ಮಮ್ಮಿ’ಯಲ್ಲಿ ಬಂಧಿಯಾಗಿದ್ದ ಕಥೆಗಳು

(ಇಲ್ಲಿಯವರೆಗೆ…)

ಇದನ್ನು ಉತ್ಖನನಿಸಿ ತೆಗೆದಾಗ ದೊರೆತ ವಿಷಯ, ಸಂಪತ್ತು, ಕಲೆ ನೋಡಲು ಕಣ್ಣು ಸಾಲದು, ಹೇಳಲು ಶಬ್ದ ಸಾಲವು. ಅಪಾರ ಅದ್ಭುತ ಅಸಂಖ್ಯ! ಈ ಟುತ್-ಅಂಕ್-ಅಮುನ್ನ ಮೇಲಿನ ಮುಖವಾಡ ಚಿನ್ನದ್ದು.
ಅಂದಿನ ಅಕ್ಕಸಾಲಿಗರಲ್ಲಿರಬಹುದಾದ ಅಸಾಧಾರಣ ಕಲಾವಂತಿಕೆಯ ಪ್ರಭುತ್ವಕ್ಕೆ ಸಾಕ್ಷಿಯಾಗಿದೆ. 11 ಕಿಲೋ ಚಿನ್ನದಲ್ಲಿ ಅಮೂಲ್ಯ ಮುತ್ತುರತ್ನ ಹರಳುಗಳನ್ನು ಹುದುಗಿಸಿ ಮಾಡಲಾಗಿದೆ. ಸಂಗ್ರಹಾಲಯದಲ್ಲಿ ಅದನ್ನು ತೆರೆದೆ ಇಟ್ಟಿದ್ದರು. ಅರ್ಧ ಇಂಚು ದಪ್ಪ ಇರುವುದನ್ನು ನೋಡಿ ಜೀವ ದಂಗಾಯಿತು. ಸುತ್ತಮುತ್ತ ಗನ್ ಮ್ಯಾ ನ್ ಗಳಿಲ್ಲದಿರುವುದನ್ನು ಖಚಿತಪಡಿಸಿಕೊಂಡು ತಕ್ಷಣ ನಾನು ಕತ್ತಿನ ಭಾಗದಲ್ಲಿ ಹಿಡಿದು ಸ್ವಲ್ಪ ಎತ್ತಿ ನೋಡಿದೆ. ತುಂಬಾ ಭಾರವಾಗಿತ್ತು. ಇದು ಸಾಮ್ರಾಟನ ವ್ಯಕ್ತಿತ್ವದ ನಿಜವಾದ ಕಲ್ಪನೆ ಕೊಡುವಂತಿತ್ತು. ಇದರ ನಂತರ ಗೋರಿಯ ಪ್ರದೇಶದಲ್ಲಿ ಆಚೆ ಈಚೆ ಕಾವಲುಗಾರರಂತಿರುವ ಮತ್ತು ಕಟ್ಟಿಗೆಯಲ್ಲಿ ತಯಾರಿಸಿ ಇಜಿಪ್ತಿನ ಕಪ್ಪು ಮಣ್ಣಿನ ಬಣ್ಣ ಬಳೆದ ಎರಡು ಮೂರ್ತಿಗಳು, ಕಿರೀಟ ಎದೆಗವಚಗಳೆಲ್ಲಾ ತಾಮ್ರ ಮಿಶ್ರಿತ ಬಂಗಾರದ ಬಣ್ಣದಿಂದ ಅಲಂಕಾರ ಮಾಡಿದ್ದಾರೆ. ಈ ಕಪ್ಪು ಮಣ್ಣು ಇಜಿಪ್ತ ಮತ್ತದರ ಫಲವತ್ತತೆಯ ಸಂಕೇತವಂತೆ.
ಎಡಗೈಯಲ್ಲಿ ಬಂಗಾರದ ಅದೇ ಬಣ್ಣದ ಕೋಲುಗಳಿವೆ. ಕಣ್ಣು ಹುಬ್ಬುಗಳನ್ನು ಸ್ಪಷ್ಟವಾಗಿ ಕೊರೆಯಲಾಗಿದ್ದು ಕಲಾತ್ಮಕತೆಗೆ ಸ್ಪಷ್ಟ ನಿದರ್ಶವಾಗಿದೆ. ಮತ್ತೊಂದು ವಿಗ್ರಹ ನೂಬಿಯನ್(Nubian). ಒಂದು ಕೂದಲಿನ ಟೊಪ್ಪಿಗೆ ಹಾಕಿದ, ಮತ್ತೊಂದು ಕೆಂಪು ಕಿರೀಟ ಧರಿಸಿದ ವಿಗ್ರಹ; ನಂತರ ಅನೋಬಿಸ್ನ ಮೂರ್ತಿ. ಇದರ ಹೆಚ್ಚಿನ ಲಕ್ಷಣಗಳೆಲ್ಲಾ ತೋಳವನ್ನು ಹೋಲುತ್ತಿದ್ದು, ಮೂಲತಃ ಕಟ್ಟಿಗೆಯಿಂದ ಮಾಡಿದ ಮೂರ್ತಿ ಮೇಲೆ ಕಪ್ಪುರಾಳ ಲೇಪಿಸಿ ಕಣ್ಣು ಕಿವಿ ಕೊರಳ ಪಟ್ಟಿಗಳನ್ನು ತಾಮ್ರ ಮಿಶ್ರಿತ ಬಣ್ಣದಿಂದ ಅಲಂಕರಿಸಿದ್ದಾರೆ. `ಸತ್ತವರ ಗ್ರಂಥ’ (Book of Dead) ದ 125ನೇ ಅಧ್ಯಾಯದಲ್ಲಿ ಹೃದಯ ತೂಕ ಮಾಡುತ್ತಿರುವ ಈ ಅನೋಬಿಸ್ ನ ಉಲ್ಲೇಖವಿದೆ. ಇದರ ನಂತರ ಕುರ್ಚಿಯಂಥ ರಾಜನ ಸಿಂಹಾಸನ.

ಕಟ್ಟಿಗೆಗೆ ಪೂರ್ಣ ಚಿನ್ನದ ಲೇಪನ ಮಾಡಲಾಗಿತ್ತು. ಅನುಪಮವಾದ ಕೆತ್ತನೆ; ಮುತ್ತು ರತ್ನ ಹರಳುಗಳಿಂದ ಮಾಡಿದ ಕುಸುರಿ ಕೆಲಸ ಸರಿಸಾಟಿ ಇಲ್ಲದ್ದು; ಪ್ರಾಚೀನ ಇಜಿಪ್ತಿನ ಅಮೂಲ್ಯ ವಸ್ತುಗಳಲ್ಲಿ ಉಳಿದಿರುವ ಒಂದೇ ಒಂದು ಸಿಂಹಾಸನವಿದು. ರಾಜನ ಸೇವಕರ ದಂಡೇ ಅಲ್ಲಿತ್ತು. ಪ್ರಾಚೀನ ಇಜಿಪ್ತ್ ದೈವಗಳ ಬೃಹತ್ ಶಿಲಾಮೂರ್ತಿಗಳು; ಇಜಿಪ್ಶಿಯನ್ನರ ಪಂಚಾಂಗ! ಪಂಚಾಂಗ ರಚನೆಯಲ್ಲಿ ಪ್ರಾಚೀನ ಇಜಿಪ್ಶಿಯನ್ನರು ಪ್ರಥಮರು. ಇವರ ಸೌರಮಾನ ಪಂಚಾಂಗದ (Solar Calender) ಪ್ರಕಾರ ಒಂದು ವರ್ಷಕ್ಕೆ ಹನ್ನೆರಡು ತಿಂಗಳುಗಳು, 365 ದಿನಗಳು, ಒಂದು ತಿಂಗಳಿಗೆ 30 ದಿನಗಳು. ಆದರೆ ತಿಂಗಳಿಗೆ ಮೂರೇ ವಾರಗಳು. ಒಂದು ವಾರದಲ್ಲಿರುವ ದಿನಗಳು ಹತ್ತು. ಇದು ವಿಶ್ವದ ಮೂಲ ಪ್ರಥಮ ಪಂಚಾಂಗ! ಹೃದಯ ಹಿಗ್ಗುತಿತ್ತು. ಕಣ್ಣುಗಳು ಧನ್ಯವಾದವು; ಈ ರಾಜರ ಕಾಲದಲ್ಲಿ ಊಟ ನೀಡಲು, ಮಾಡಲು ಬಳಸುತ್ತಿದ್ದ ಎಲ್ಲ ಸಾಮಗ್ರಿಗಳಿದ್ದವು; ಓಸಿರೀಸ್ ನ ಭಟರು ಪ್ರಶ್ನೆ ಕೇಳುವ, ಕಠಿಣ ಪರೀಕ್ಷೆಗೆ ಒಳಪಡಿಸುವ ಮತ್ತು ಅನೊಬಿಸನ್ ಮುಂದೆ ಅಂತಿಮ ನಿಧರ್ಧಾರ ತೆಗೆದುಕೊಳ್ಳುವ ಚಿತ್ರಗಳ ಸುಂದರ ಕಲಾಕೃತಿಗಳಿದ್ದವು; ಪಪೈರಸ್ ಜೊಂಡಿನಿಂದ ತಯಾರಿಸಿದ ಕಾಗದದ ಮೇಲೆ ಚಿತ್ರಲಿಪಿಯಲ್ಲಿ ಬರೆದ ಪತ್ರಗಳು; ಆ ಕಾಲದಲ್ಲಿ ಬಳಸಿದ ಶಸ್ತ್ರಾಸ್ತ್ರಗಳು; ಚಿನ್ನ, ಬೆಳ್ಳಿ ಮತ್ತು ಆನೆದಂತಗಳನ್ನು ನಾಜೂಕಾಗಿ ಕೆತ್ತಿ, ಕುಶಲತೆಯಿಂದ ಮಾಡಿದ ಅತ್ತರದಾನಿಗಳು. ಅವರ ವೈಭವೋಪೆತ ಜೀವನಕ್ಕೆ ಸಾಕ್ಷಿಯಾಗಿದ್ದವು; ರಥ ಸಂಪೂರ್ಣ ಬಂಗಾರದ ಹೊದಿಕೆಯಲ್ಲಿದೆ. ತೋಳ ಮುಖದ ದೇವತೆಗಳು ನಡೆಸಿಕೊಂಡು ಹೋಗುತ್ತಿದ್ದರಂತೆ; ಮತ್ತೊಂದು ಚಿನ್ನದ ಪಲ್ಲಂಗ! ಆಶ್ಚರ್ಯವೆಂದರೆ ಅದರ ಮೇಲೆ ಚಿನ್ನ ಲೇಪಿಸಿ ಮಾಡಿದ ಹಾಸಿಗೆ; ಇದು ದೇವತೆ ಹಾಥೋರ್ಳ ಹಾಸಿಗೆಯಂತೆ. ಇವಳು ಪ್ರೇಮ, ಸಂಗೀತ, ನೃತ್ಯಗಳ ದೇವತೆ.

ಇವಳ ವ್ಯಾಪ್ತಿ ಆಕಾಶದಗಲಕ್ಕೂ ಹರಡಿದೆ ಎಂಬುದಕ್ಕೆ ಸಂಕೇತವಾಗಿ ಇವಳ ಕೋಡುಗಳ ಮಧ್ಯದಲ್ಲಿ ಉದಯಿಸುವ ಕೆಂಪು ಸೂರ್ಯನಿದ್ದಾನೆ. ಬಲಗೈಯಲ್ಲಿ ದಂಡ ಎಡಗೈಯಲ್ಲಿ ಅಂಕ್ (ಪ್ರತೀಕ)ವಿದೆ. ಥೀಬ್ಸ್ ಸುತ್ತ ಇವಳು ಮೃತ್ಯು ದೇವತೆಯೂ ಹೌದು. ಆಗವಳು ಮುಳುಗುವ ಸೂರ್ಯನನ್ನು ಧರಿಸುತ್ತಾಳಂತೆ; ನೀರಾನೆಯ ಮುಖದ, ಸಿಂಹಪಾದ, ಹೆಣ್ಣು ಮಾನವ ದೇಹದ ದೇವತೆ; ಸಾಲಾಗಿ ನೋಡುತ್ತ ಸಾಗಿದೆವು.
ಇವುಗಳನ್ನು ನೋಡಿ ಅಲ್ಲಿಂದಲೇ ಎರಡನೆಯ ಅಂತಸ್ತಿಗೆ ಏರಿ, ರೂಂ ಪ್ರವೇಶ ಮಾಡಬೇಕು. ಸರ್ಪಗಾವಲು, ಗನ್ ಮ್ಯಾ ನ್ ಗಳು, ಭದ್ರತಾ ಸಿಬ್ಬಂದಿ. ಅರ್ಧ ಮುಚ್ಚಿದ ಬಾಗಿಲೊಳಗಿಂದ ಹಾಯ್ದು ಒಳಹೋದರೆ ರಾಜರಾಣಿಯರು ತೊಡುವ ಆಭರಣಗಳು. ಅಮೋಘ! ಅಪ್ರತಿಮ! ತಾಳಿಯ ಹಾಗೆ ಕಾಣುವ ಸರ, ಹವಳ, ನೀಲಿ, ಕೇಸರಿ ಬಣ್ಣದ ಕಲ್ಲುಗಳಿಂದ ಪೋಣಿಸಿ ಮಾಡಿದ ನೆಕ್ಲೆಸ್, ಪಾದುಕೆಗಳು, ಸೊಂಟಪಟ್ಟಿಗಳು, ಉಗುರಿನ ಹೊದಿಕೆಗಳು, ಚೊಂಬುಗಳು… ಎಲ್ಲವೂ ಚಿನ್ನ. ಮುಂದೆ ಸರಿದಂತೆ ಒಂದು ಕಡೆ ಕಣ್ಣುಗಳು ನಿಂತು ಬಿಟ್ಟವು. ಸುಮಾರು ಆರು ಮೊಳ ಉದ್ದದ, ಒಂದುವರೆ ಇಂಚು ಅಗಲದ ಚಿನ್ನದ ಹಗ್ಗ! ಅದು ಗೋಪ್ ಚೈನ್ ಆಗಿತ್ತು. ಕಾಲಿಗೆ ಹಾಕುವ ಕಡಗಗಳು; ಮುಂದೆ ಸರಿದರೆ ಗಾಜಿನ ಕಪಾಟಿನಲ್ಲಿ ಚಿಕ್ಕ ಚಿಕ್ಕ (ನಾವೀಗ ಹಾಕುವಷ್ಟು) ನೆಕ್ಲೆಸ್ ಗಳು, ಬಣ್ಣ ಬಣ್ಣದ ಮುತ್ತು ಮಣಿಗಳಿಂದ ಬಂಗಾರದಲ್ಲಿ ಹೆಣೆದು ಮಾಡಿದವುಗಳು. ಅಲ್ಲಿಂದ ಮುಂದೆ ಸರಿದರೆ ಕಿವಿಯೋಲೆಗಳು. ಅವುಗಳ ಆಕಾರ ನೋಡಿದರೆ ಅಬ್ಬಾ ಅವೇನೂ ಮಾನವರು ಹಾಕುವಂಥವೇ? ಎನ್ನಬೇಕು, ಅಷ್ಟು ದೊಡ್ಡವು. ಅವುಗಳನ್ನು ನೋಡಿದಾಗ ನನಗೆ ನೆನಪಾದದ್ದು ಬಸ್ ಗಾಲಿಗಳ ನಟ್ಟು ಬೋಲ್ಟ್ ಗಳು. ನಮ್ಮ ಕಿವಿಯ ಹಾಲೆಗಳೇ ಅದರಷ್ಟಿವೆ. ಇನ್ನು ಆ ಓಲೆಗಳನ್ನು ಹಾಕುವುದೆಲ್ಲಿ? ಎಂಥ ದೈತ್ಯ ಮಾನವರಿರಬಹುದು ಅಂದಿನ ಜನ? ಆ ದೈತ್ಯತೆಯನ್ನು ಈ ಬೃಹತ್ ಮೂರ್ತಿಗಳು ಶಿಲ್ಪಗಳು ಪ್ರತಿನಿಧಿಸುತ್ತಿವೆ ಏನೋ? ಅನಿಸಿತು. ಅಲ್ಲಿದ್ದ ಎಲ್ಲವುಗಳು ನಾವು ತೊಡುವ ಆಭರಣಗಳ ಎರಡು, ಮೂರು ಪಟ್ಟು ದೊಡ್ಡವು. ಅಷ್ಟೇ ಗಟ್ಟಿತನ ಇರುವಂಥವು. ಆ ರೂಮಿನಿಂದ ಹೊರಬಂದು ಬಲಬದಿಯ ರೂಮಿಗೆ ಹೋಗಬೇಕು. ಅಲ್ಲಿಯೂ ಸರ್ಪಗಾವಲು. ಒಳಹೋದರೆ ಎಲ್ಲ ವಸ್ತುಗಳು ಹಳದಿ ಲೋಹದವೆ. ‘ನ ಭೂತೋ ನ ಭವಿಷ್ಯತೀ’… ಟುತ್-ಅಂಕ್-ಅಮೂನ್ನ ಒಳಗಿನ, ಮಧ್ಯದ ಮತ್ತು ಹೊರಗಿನ ಮುಖವಾಡಗಳು ಮತ್ತು ದೇಹಾಕೃತಿಯ ಮೂರು ಪೆಟ್ಟಿಗೆಗಳು. (Coffins) ಮೊದಲ ಮುಖವಾಡ ಅಪ್ಪಟ ಚಿನ್ನದ್ದು, ಎರಡೂ ಕೈಗಳನ್ನು ಎದೆ ಮೇಲೆ ಕಟ್ಟಿ, ಕೈಗಳಲ್ಲಿ ದಂಡವನ್ನು ಹಿಡಿದ, ತಲೆ ಮೇಲೆ ಹಾವಿನ ಸಂಕೇತವುಳ್ಳ ಕಿರೀಟ, ಗದ್ದಕ್ಕೆ ಉದ್ದನೆಯ ಗಡ್ಡವಿರುವ ಇದು ಈಗಷ್ಟೇ ಮಾಡಿದಂತಿದೆ. ಎರಡನೆಯ ಮುಖವಾಡವೂ ಹೀಗೇ ಇದ್ದು ಅಮೂಲ್ಯ ಗಾಜು, ಕಲ್ಲುಗಳಿಂದ ಸಿಂಗರಿಸಲಾಗಿದೆ. ಇದು 27 ಕಿಲೋ ಚಿನ್ನದ್ದು. ಮೂರನೆಯದ್ದು ಪೂರ್ಣ ಮಾನವನಾಕಾರದ, ಮುಖವಾಡವಿರುವ ಚಿನ್ನದ ಪೆಟ್ಟಿಗೆ.


110 ಕಿಲೋ ಶುದ್ಧ, ಗಟ್ಟಿ ಬಂಗಾರದಿಂದ ಮಾಡಿದ್ದು. ಮೇಲೆ ಹೇರಳ ಮುತ್ತು, ರತ್ನ, ವಜ್ರ, ವೈಢೂರ್ಯಗಳಿಂದ ಸಿಂಗರಿಸಲಾಗಿದೆ. ಈ ಪೆಟ್ಟಿಗೆ ಏಳು ಅಡಿ ಉದ್ದವಿದೆ. ಅದರ ನಂತರ ಈ ದೇಹಾಕೃತಿಯ ಶವಪೆಟ್ಟಿಗೆ ಇಡಲು ಮತ್ತೆ ಚೌಕಾಕಾರದ ಮೂರು ಪೆಟ್ಟಿಗೆಗಳು. ಒಂದರೊಳಗೊಂದು ಹಿಡಿಸುವಷ್ಟು ಉದ್ದಗಲ ಇರುವಂಥವು. ಅತಿ ಚಿಕ್ಕದರಲ್ಲಿಯೇ ಏಳೂ ಅಡಿ ಉದ್ದದ ಶವದಾಕಾರದ ಪೆಟ್ಟಿಗೆ ಹಾಕಿ, ಇದನ್ನು ಅದರೊಳಗೆ, ಅದನ್ನು ಮತ್ತೊಂದರೊಳಗೆ ಹಾಕಿ ಬಾಗಿಲು ಹಾಕಿ ಬೀಗ ಹಾಕುವ ವ್ಯವಸ್ಥೆ. ಬಂಗಾರದ ಚಿಲಕ, ಬೀಗಗಳೂ ಅಲ್ಲಿದ್ದವು. ಮನಸ್ಸು ಒಂದು ಕ್ಷಣ ಯೋಚಿಸುವುದನ್ನೇ ನಿಲ್ಲಿಸಿದಂತೆ. ಹಿಂದೆ ತಳ್ಳುವ ಸಾಲು ಬೇರೆ. ನೋಡಲು ಬಂದ ಜನಸಾಗರ. ಎಲ್ಲವೂ ಅದ್ಭುತಗಳೇ!

ಅಲ್ಲಿಂದ ಹೊರಬಂದು ಬಲಗಡೆ ಇರುವ ವಿಶಾಲವಾದ ಕೋಣೆಯೊಳಗೆ ಹೋದರೆ, ತಟ್ಟನೆ ಕಾಲು ಒಂದಿಂಚು ಹಿಂದೆ ಸರಿಯಿತು. ಕೈ ಪಕ್ಕದಲ್ಲಿದ್ದ ಸರೋಜಾಳನ್ನು ಒತ್ತಿ ಹಿಡಿದುಕೊಂಡಿತು. ಅದೊಂದು ಶವ; ಸಂಸ್ಕರಣಗೊಂಡ ಮಮ್ಮಿ. ಗಾಜಿನ ಪೆಟ್ಟಿಗೆಯೊಳಗೆ ಇಟ್ಟಿದ್ದರು. ಮುಂದೆ ಹೋದಂತೆ ಒಂದು ಮಗುವಿನ, ಒಬ್ಬ ಹೆಂಗಸಿನ ಹಲವಾರು ಮಮ್ಮಿಗಳು ಅಲ್ಲಿದ್ದವು. ಅಲ್ಲಿ ಮೊಸಳೆಯ ಮಮ್ಮಿ ಕೂಡಾ ಇತ್ತು. `ಮಮ್ಮಿ’ ಇದು ಅರೆಬಿಕ್ ಮೂಲದಿಂದ ವ್ಯುತ್ಪತ್ತಿಯಾದ ಪದ. ಅರೆಬಿಕ್ ನಲ್ಲಿ `ಮಮ್ಮಿಯಾ’ ಎಂದರೆ ಒಂದು ಬಗೆಯ ಕಪ್ಪು ಖನಿಜ, ರಾಳದಂಥದ್ದು. ಇದು ಮಧ್ಯ ಪ್ರಾಚ್ಯ ಪರ್ವತಗಳಲ್ಲಿ ಕಂಡುಬರುತ್ತದೆ. ಆರಂಭದ ಶವಗಳು ಕಪ್ಪಾಗಿ ಕಾಣುತ್ತಿದ್ದವು. ಇವುಗಳನ್ನು ರಾಳದಲ್ಲಿ ಅದ್ದಿ ಸಂಸ್ಕರಿಸಿ ಇಡಲಾಗುತ್ತದೆ ಎಂದು ನಂಬಿದ್ದರಿಂದ, ಹತ್ತಿಯ ಬಟ್ಟೆಗಳಲ್ಲಿ ಸುತ್ತಿದ ಮೃತ ದೇಹಗಳನ್ನು `ಮಮ್ಮಿ’ ಎಂದು ಕರೆಯುವುದು ರೂಢಿಯಾಯಿತು. ಅಲ್ಲಿದ್ದ ದೇಹವೆಲ್ಲಾ ಬಿಳಿ ಬಟ್ಟೆಯಲ್ಲಿ ಸುತ್ತಿಕೊಂಡೇ ಇದ್ದವು. ಮುಖಭಾಗ ಮಾತ್ರ ತೆರೆದುಕೊಂಡಿದ್ದವು. ಚರ್ಮ ಬಾಡಿ, ಮರದ ತೊಗಟೆಯಂತೆ ಕಾಣುತ್ತಿತ್ತು. ಮುಂದೆ ಹೋಗಿ ನೋಡಲು ಹೆದರಿಕೆಯೂ ಆಗುತ್ತಿತ್ತು. ಇಡೀ ರೂಮಿನ ತುಂಬ ಒಂಥರದ ವಾಸನೆ. ಸಹಿಸಲಾರದಂಥದಲ್ಲದಿದ್ದರೂ ಏನೋ ಒಂಥರಾ. ಶವದಾಕಾರದ ಕಟ್ಟಿಗೆಯ ಶವದಾನಿಗಳು. ಕೆಲವು ಬಂಗಾರ ಲೇಪಿತವಾಗಿದ್ದವು. ಟುತ್-ಅಂಕ್-ಅಮುನ್ ನ ಎದೆಗವಚ (Corselet); ತಾಳೆ ಗರಿಯಂಥ ಗರಿಗಳಿಂದ ಮಾಡಿದ ತೂಗು ಬೀಸಣಿಕೆಗಳು (fan), ಹೊರಭಾಗದಲ್ಲಿ ಸ್ವಲ್ಪ ಉಬ್ಬು ಇರುವ ತ್ರಿಕೋನಾಕಾರದ ರೊಟ್ಟಿಯ ತುಂಡುಗಳು, ನೆಲುವು, ಚಪ್ಪಲಿಗಳು.. ಅಂತೂ ಮಮ್ಮಿಯೊಂದಿಗೆ ಆತನ ಇಡೀ ಬದುಕಿಗೆ ಬೇಕಾದ ಸಾಮಾನು ಸರಂಜಾಮು, ಪದಾರ್ಥಗಳು, ಉಡುಗೆ ತೊಡುಗೆ, ಆಭರಣಗಳು, ಎಲ್ಲವೂ ಅಲ್ಲಿದ್ದವು.

ಗೋಡೆಗೆ ಹೊಂದಿಕೊಂಡಂತೆ ಎತ್ತರದ ಗಾಜಿನ ಕಪಾಟುಗಳಲ್ಲಿ ಈ ಎಲ್ಲ ವಸ್ತುಗಳು, ರೂಮಿನ ನಡುವೆ ಸಾಲಾಗಿ ಮಮ್ಮಿಗಳು. ಮತ್ತೊಂದು ರೂಮಿನಲ್ಲಿಯೂ ಅಂಥದ್ದೆ ಮಮ್ಮಿಗಳು ಮೈ ಬಿಗಿ ಹಿಡಿದುಕೊಂಡು ಅವನ್ನೆಲ್ಲಾ ನೋಡಿ ಹೊರಬಂದೆವು. ಮನಸ್ಸು ಭಾರವಾಗಿತ್ತು. ನಾಲಗೆ ಮೇಲೇಳಲಿಲ್ಲ. ಕಾಲುಗಳು ಮಾತನಾಡತೊಡಗಿದ್ದವು. ದೇಹ ನಿರ್ಜೀವ ಹೆಣವಾಗಿತ್ತು. ಕೂಡಲು ಎಲ್ಲಿಯೂ ಸ್ಥಳವಿಲ್ಲ. ವಯಸ್ಸಾದವರು ಮತ್ತು ಮಣ ಭಾರದವರೇ ಇದ್ದುದರಿಂದ ಏರಿಬರುವ ಮೆಟ್ಟಿಲುಗಳ ಮೇಲೆಯೇ ಕುಳಿತೆವು. ಸ್ಮಶಾನಮೌನ! ಸ್ಮಶಾನ ವೈಭವ, ವೈರಾಗ್ಯ! ನಂತರ ಬಹಳೇ ಜನ ಬಂದು ಅಲ್ಲಿ ಕುಳಿತರು. ತಂದಿದ್ದ ನೀರು ಕುಡಿದು ಉಸ್ಸಪ್ಪಾ! ಎನ್ನುವುದರೊಳಗೆ, ಮೆಲ್ಲಗೆ ಯಾರೋ ಒಬ್ಬರು `ಈ ಹೆಣ ನೋಡಾಕ ಲಕ್ಷ ರೂಪಾಯಿ ಖರ್ಚು ಮಾಡಿ ಅಲ್ಲಿಂದ ಇಲ್ಲಿ ತನಕ ಕರಕೊಂಡು ಬರಬೇಕಿತ್ತಾ? ಅವನ ಹೆಣ ಎತ್ಲಿ’ ಎಂದರು. ಮೌನವದನೆಯರಾದ ಎಲ್ಲರ ಮುಖದಲ್ಲಿ ಮಂದಹಾಸ ಮೂಡಿತ್ತು. ಅಷ್ಟರಲ್ಲೇ ಲಾರಿಸರ್ ಬಂದು `ಈ ಕಡೆಗೆ ರಾಯಲ್ ಮಮ್ಮಿಗಳಿದ್ದಾವೆ. ಅವುಗಳನ್ನು ನೋಡಬೇಕಾದರೆ 100 ಇಜಿಪ್ಟಿಯನ್ ಪೌಂಡ್ಸ್ ಕೊಟ್ಟು ಟಿಕೇಟ್ ನೀವೆ ತಗೋಬೇಕು, ಇಷ್ಟವಿದ್ದರೆ ಹೋಗಬಹುದು.’ ಎಂದರು. `ನೂರು ಈಜಿಪ್ಟಿಯನ್ ಪೌಂಡ್’ ಎಂದರೆ ಸಾವಿರ ರೂಪಾಯಿ.

`ಅಷ್ಟು ಕೊಟ್ಟು ಆ ಹೆಣ ಏನ್ ನೋಡುದು’ ಎಂದರು ಪ್ರಭಾ ಮತ್ತು ಮಂಗಲಾ. `ಇಲ್ಲಿಯ ವಿಶೇಷ ಅಂದ್ರೆನೆ ಅವು. ಅಲ್ಲಿಂದ ಇಲ್ಲಿಗೆ ಬಂದಿವಂತ ಲಕ್ಷ ರೂಪಾಯಿ ಖರ್ಚ್ ಮಾಡಿ, ಇನ್ ಇಷ್ಟಕ್ಕ ಏನ್ ವಿಚಾರ ಮಾಡೋದ’ ಎಂದುಕೊಂಡು ನಾನು, ಸರೋಜ, ಸುಮನ್, ಸರೋಜಿನಿ ಭದ್ರಾಪುರ, ಅನಸೂಯ ಅರಕೇರಿ, ಮೆಹಜಬಿನ್ ಮುಂತಾದವರು ಟಿಕೇಟ್ ಕೊಂಡು ಒಳಹೋದೆವು. ಒಳಗೆ ಪ್ರಥಮ ತುತ್ಮೋಸಿಸ್ (Tuthmosis)ನಿಂದ ಹಿಡಿದು ಐದನೆಯ ತುತ್ ಮೋಸಿಸ್ ನ ವರೆಗೆ, ದ್ವಿತೀಯ ತುತ್ಮೋಸಿಸನ ಸಹೋದರಿ ಪತ್ನಿ ಹ್ಯಾಟ್ ಷಪ್ ಸೂತ್ ಳ, ಹಾಗೂ ಪ್ರಥಮ ಅಮೆನ್ ಹೊಟೆಪ್ ಮುಂತಾದವರ ಮಮ್ಮಿಗಳಿದ್ದವು. ಎರಡು ಮೆಟ್ಟಿಲೇರಿ ಮೇಲೆ ಮುಂದಿನ ಹಂತಕ್ಕೆ ಹೋದರೆ ಅಲ್ಲಿ ರ್ಯಾಮಸೆಸ್ ರಾಜಮನೆತನದ ಕೆಲವು ಮಮ್ಮಿಗಳಿದ್ದವು. ಇಲ್ಲಿಯ ಮಮ್ಮಿಗಳಲ್ಲಿ ತಲೆಗೂದಲು, ಹಲ್ಲು, ಕೈ ಉಗುರು, ಕಾಲುಗುರುಗಳು ಉದುರಿ ಹೋಗದೆ ತಮ್ಮ ಮೂಲಸ್ಥಾನದಲ್ಲಿಯೇ ಇದ್ದವು. ಕೆಲವು ಮೈ ತುಂಬಿದಂತಿದ್ದು ಸ್ವಲ್ಪ ಬಾಡಿದ್ದರೆ, ಇನ್ನೂ ಕೆಲವು ಒಣಗಿ ಹೋಗಿದ್ದವು. ಆ ದೇಹಗಳ ಉದ್ದ ನೋಡಿದರೆ ಅವರ ಎತ್ತರ ನಿಲುವು ಕಣ್ಮುಂದೆ ಬರುವಂತಿತ್ತು. ಇಲ್ಲಿ ನನ್ನ ಗಮನ ಸೆಳೆದದ್ದೆಂದರೆ ಅವುಗಳ ಮೂಗು! ಒಣಗಿದ ಬಾಡಿದ ದೇಹದಲ್ಲಿಯೆ ಮೂಗಿನ ಮೂಳೆಯ ಮಧ್ಯಭಾಗ ಇಷ್ಟೊಂದು ಎತ್ತರವಾಗಿತ್ತೆಂದರೆ ಅದು ತಟ್ಟನೆ ಗಮನ ಸೆಳೆದಿತ್ತು. ಇನ್ನವರು ಜೀವಂತ ಇರಬೇಕಾದರೆ ಮೂಗು ಎಷ್ಟುದ್ದ ಇರಬಹುದು? ಎಂದು ಯೋಚಿಸುವಾಗ ಕನ್ನಡ ಚಲನಚಿತ್ರನಟ ಡಾ. ರಾಜಕುಮಾರ ಮೂಗು ಕಣ್ಮುಂದೆ ಹಾಯ್ದು ಹೋಯಿತು.

ಸರಿ ಇದಷ್ಟೇ ಯಾಕೆ `ರಾಯಲ್ ಮಮ್ಮಿ’ ಗಳು ಎಂದರೆ ಒಂದೊಂದರ ಸುತ್ತ ಒಂದೊಂದು ದೊಡ್ಡ ಕಥಾ ಸರಣಿಯೇ ಇದೆ. ಇದರ ಪ್ರಥಮ ಕೇಂದ್ರ ಬಿಂದು ಚಕ್ರವರ್ತಿನಿ ಹ್ಯಾಟಷೆಪ್ ಸೂತ್ ಳು. ಪ್ರಪಂಚಕ್ಕೆ ಈ ಪ್ರಥಮ ಮಹಿಳಾ ಚಕ್ರವರ್ತಿನಿಯನ್ನು ನೀಡಿದ ದೇಶ ಇಜಿಪ್ತ್. ಇಜಿಪ್ತಿನ ಇತಿಹಾಸದಲ್ಲಿಯೇ ಇವಳಂತೆ ಶ್ರೇಷ್ಟ ಮಟ್ಟದ ರಾಜ್ಯಭಾರ ಮಾಡಿದವರು ಕೆಲವೆ ರಾಜರು. ಕೇವಲ ಗಂಡಿಗೆ ಮಾತ್ರ ಸಿಂಹಾಸನದ ಅಧಿಕಾರ ಎಂಬ ನಿಯಮಬದ್ಧ ಕಾಲದಲ್ಲಿ, ಗಂಡುಡುಗೆ ತೊಟ್ಟು ಸಿಂಹಾಸನವನ್ನೇರಿ ರಾಜ್ಯವಾಳಿದ ಏಕೈಕ ಉದಾಹರಣೆ ಇವಳು. ಇವಳ ಜೀವನ ಗಾಥೆೆ, ಯಶೋಗಾಥೆಗಳು ರೋಚಕವಾಗಿವೆ. ಥೀಬ್ಸ್ ರಾಜಧಾನಿಯಾಗಿದ್ದ ಕಾಲ. ಕ್ರಿ.ಪೂ ಸುಮಾರು 1525-1512 ರವರೆಗೆ ಈಜಿಪ್ತನ್ನು ಆಳಿದ ಪ್ರಥಮ ತುತ್ಮೋಸಿಸ್ ನಗೆ ಪುತ್ರ ಸಂತಾನವಿರಲಿಲ್ಲ. ಒಬ್ಬಳೇ ಮಗಳಿದ್ದಳು. ಅವಳೇ ಹ್ಯಾಟ್ ಷಪ್ ಸೂತ್ ಆಗಿನ ಸಂಪ್ರದಾಯದಂತೆ ಸಿಂಹಾಸನವನ್ನೇರುವ ಅಧಿಕಾರ ಗಂಡಿಗೆ ಮಾತ್ರ ಇತ್ತು. ಹಾಗಾಗಿ ತುತ್ಮೊಸಿಸ್ ತನ್ನ ಎರಡನೆಯ ಹೆಂಡತಿಯ ಮಗನಾದ ಎರಡನೆಯ ತುತ್ಮೊಸಿಸ್ ಗೆ ಮಗಳನ್ನು ಕೊಟ್ಟು ಮದುವೆ ಮಾಡಿದ. ಇಬ್ಬರಿಗೂ ಒಟ್ಟಿಗೆ ರಾಜ್ಯಾಭಿಷೇಕ ಮಾಡಿದ. 12 ವರ್ಷ ರಾಜ್ಯಭಾರ ಮಾಡಿದ ನಂತರ ದ್ವಿತೀಯ ತುತ್ಮೋಸಿಸ್ ತೀರಿ ಹೋದ.
ಇವನಿಗೆ ಒಬ್ಬ ಹೆಣ್ಣು ಮಗಳು, ಉಪಪತ್ನಿಯಲ್ಲಿ ಒಬ್ಬ ಗಂಡು ಮಗ. ಅವರಿಗೆ ಮದುವೆ ಮಾಡಲಾಯಿತು. ನಿಯಮದಂತೆ ಹ್ಯಾಟ್ ಷಪ್ ಸೂತ್ ಳ ಮಲಮಗ/ಅಳಿಯ ಉತ್ತರಾಧಿಕಾರಿಯಾಗಬೇಕಿತ್ತು. ಆದರೆ ಮಹತ್ವಾಕಾಂಕ್ಷಿಯಾದ ಹ್ಯಾಟ್ ಷಪ್ ಸೂತ್ ಹಾಗಾಗಲು ಬಿಡದೆ ಗಂಡುಡುಗೆ ತೊಟ್ಟು, ಕೃತಕ ಗಡ್ಡ ಧರಿಸಿ ಸಿಂಹಾಸನವೇರಿದಳು. ಹೀಗಾಗುವುದಕ್ಕೆ ದೈವಚಿತ್ತ ಕಾರಣವೆಂದು ಹೇಳುವ ಇನ್ನೊಂದು ದಂತ ಕಥೆಯೇ ಇದೆ. ಪುತ್ರ ಸಂತಾನವಿಲ್ಲದ ಫೇರೊಗಳ ಕುರಿತು ಚಿಂತಿತನಾದ ದೇವರು ಅಮೂನ್ರಾ, ಎಲ್ಲ ದೇವತೆಗಳ ಸಭೆ ಸೇರಿಸಿ `ಗಂಡು ಸಂತಾನವೇ ಸಿಂಹಾಸನ ಏರಬೇಕು, ಫೇರೋಗಳಾಗಬೇಕೆಂಬ ಸಂಪ್ರದಾಯ ಬದಲಿಸುವ ಕಾಲ ಬಂದಿದೆ. ತಾನು ಮಹಾರಾಣಿಯ ಗರ್ಭ ಸೇರಿ ಹೆಣ್ಣಾಗಿ ಹುಟ್ಟುತ್ತೇನೆ’ ಎಂದು ಪ್ರಕಟಿಸಿದ. ಅದರಂತೆ ಸುಂದರ ಪುರುಷ ರೂಪಿಯಾಗಿ ಅರಮನೆಗೆ ಬರುತ್ತಾನೆ. ಮಹಾರಾಣಿ `ಅಹ್ಮೇ’ ಪತಿವ್ರತೆ ಎಂಬುದನ್ನು ತಿಳಿದು ಪ್ರಥಮ ತುತ್ಮೋಸಿಸ್ ನ ರೂಪಧಾರಣೆ ಮಾಡಿ ಅವಳನ್ನು ಕೂಡುತ್ತಾನೆ. ಗರ್ಭ ನಿಂತ ಮೇಲೆ ತನ್ನ ನಿಜರೂಪ ತೋರಿ, ವಾಸ್ತವ ಸಂಗತಿ ತಿಳಿಸಿದಾಗ ಗಂಡ ಹೆಂಡತಿ ಇಬ್ಬರೂ ದೈವ ಚಿತ್ತವನ್ನು ಒಪ್ಪಿಕೊಳ್ಳುತ್ತಾರೆ. ಮುಂದೆ `ಅಮುನ್ ರ್ , ಖುನ್ಮ್ ದೇವತೆ (ಮನುಷ್ಯರಿಗೆ ರೂಪ ಕೊಡುವ ದೇವತೆ (ಬ್ರಹ್ಮನಂತೆ) ಓರ್ವ ರಾಜಕುಮಾರಿಯನ್ನು ಗುಣ, ರೂಪಗಳೆರಡರಲ್ಲೂ ತನ್ನ ಪ್ರತಿರೂಪವಾಗಿ ರೂಪಿಸುವಂತೆ ತಿಳಿಸುತ್ತಾನೆ.
ಇವಳು ಹುಟ್ಟುವಾಗ ಹೆರಿಗೆಯ ಅಧಿದೇವತೆ ತೆವಾರೆಸ್ ಮತ್ತು ಬೆಸ್ ಹಾಜರಿದ್ದು ಹೆರಿಗೆ ಮಾಡಿಸಿದರಂತೆ. ಹ್ಯಾಟ್ ಷಪ್ ಸೂತ್ ಹುಟ್ಟಿದ ಕೂಡಲೇ `ಅಮುನ್ ರಾ’ ಅವಳ ಕೈಯಲ್ಲಿ ತನ್ನ ಪ್ರತೀಕವಾದ `ಅಂಕ್’ ಕೊಟ್ಟು ಹರಸಿದನಂತೆ. ಈ ಹಿನ್ನೆಲೆಯಲ್ಲಿ ಹುಟ್ಟಿ ಚಕ್ರವರ್ತಿನಿಯಾದ ಹ್ಯಾಟ್ ಷಪ್ ಸೂತ್ ಳ ಅಧಿಕಾರವನ್ನು ಪ್ರಜೆಗಳು ಆರಂಭದಲ್ಲಿ ವಿರೋಧಿಸಿದರೂ ಅವಳ ಶೂರತನ, ಬುದ್ಧಿವಂತಿಕೆ, ಕರ್ತೃತ್ವ ಶಕ್ತಿ, ಮುತ್ಸದ್ದಿತನಗಳಿಗೆ ಬೆರಗಾದರಂತೆ. ಇವಳ ಆಳ್ವಿಕೆಯಲ್ಲಿ ಇಜಿಪ್ತ್ ಉನ್ನತಿಯ ಉತ್ತುಂಗಕ್ಕೇರಿತು. ಇಪ್ಪತ್ತೇಳು ವರ್ಷ ಸಮರ್ಥವಾಗಿ ರಾಜ್ಯವಾಳಿದಳು. “ವ್ಯಾಲಿ ಆಫ್ ದಿ ಕಿಂಗ್ಸ್” ಎಂದು ಪ್ರಖ್ಯಾತವಾಗಿರುವ `ಸತ್ತವರ ದಿಬ್ಬ’ ದಿಂದ ಸ್ವಲ್ಪ ದೂರದಲ್ಲೇ `ದಾಯರ್ ಅಲ್ ಬಾಹರಿ’ ಎಂಬ ಶಿಲಾ ಪರ್ವತದಲ್ಲಿ ಮೂರಂತಸ್ತಿನ, ಸುಂದರ ದೇವಸ್ಥಾನ ಕೆತ್ತಿಸಿ, ಮುಖ್ಯದ್ವಾರದ ಅತ್ತಿತ್ತ ಇರುವ ಕಂಬಗಳಲ್ಲಿ ಪುರುಷ ರೂಪದ ಮೂವತ್ತು ಅಡಿ ಎತ್ತರದ, ತನ್ನದೇ ಹದಿನಾರು ಪ್ರತಿಮೆಗಳನ್ನು ನಿಲ್ಲಿಸಿದಳು. ದೇವಸ್ಥಾನದ ಗೋಡೆಗಳ ಮೇಲೆ ತನ್ನ ಜನ್ಮ ವೃತ್ತಾಂತ ಮತ್ತು ಬದುಕನ್ನು ಚಿತ್ರಲಿಪಿಯಲ್ಲಿ ಕೆತ್ತಿಸಿಟ್ಟಳು. ಕಾರ್ನಕ್ , ಲಕ್ಸರ್ ದೇವಸ್ಥಾನಗಳಲ್ಲಿ ದೈವ ಸ್ತಂಭಗಳನ್ನು ನಿಲ್ಲಿಸಿದಳು. ಅವುಗಳಿಗೆ ಚಿನ್ನದ ತಗಡು ಹಾಸಲಾಗಿತ್ತಂತೆ. ಇವಳ ದೇವಾಲಯದಲ್ಲಿ ಸುತ್ತಲೂ ಇವಳ ಆರಾಧ್ಯ ದೈವ-ಅಮುನ್, ಹಾಥೋರ್ ಮತ್ತು ಅನೂಬಿಸರಿಗೆ ಪ್ರತ್ಯೇಕ ಚಿಕ್ಕ ಚಿಕ್ಕ ಗುಡಿಗಳಿವೆ. ಅದ್ಭುತ ಕಲಾಕೃತಿಯನ್ನು ಬಿಂಬಿಸುವ ಈ ದೇಗುಲ ದೂರದಿಂದ ನೋಡುವಾಗ ಭಾರತದ ಅಜಂತಾ, ಎಲ್ಲೋರಾ ಗುಹಾ ದೇವಾಲಯಗಳನ್ನು ನೆನಪಿಸುತ್ತದೆ.
ಇಷ್ಟೆಲ್ಲಾ ಇತಿಹಾಸ ಹೊಂದಿರುವ ರಾಜ ರಾಣಿಯರ ದೇಹಗಳು ಮಮ್ಮಿ ರೂಪದಲ್ಲಿ ನಮ್ಮೆದುರಿಗಿದ್ದವು. ಎಂಥ ರೋಮಾಂಚನ! ಅನಸೂಯ ಮೊಬೈಲ್ ಹೇಗೆ ತಂದಿದ್ದರೋ? ತುತ್ಮೋಸಿಸ್ ಮತ್ತು ಹ್ಯಾಟ್ ಷಪ್ ಸೂತ್ ಳ ಎರಡು ಫೋಟೋ ಕ್ಲಿಕ್ಕಿಸಿಯೇ ಬಿಟ್ಟರು. ಈ ರಾಯಲ್ ಮಮ್ಮಿಗಳೊಂದಿಗೆ – `ಇಜಿಪ್ಟ್ ಮೂಸಿಯಂ’ನ್ನು ನೋಡುವುದು ಮುಕ್ತಾಯಗೊಂಡಿತು. ಈ ಮೂಸಿಯಂನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪ್ರಾಚೀನ ವಸ್ತುಗಳಿವೆಯಂತೆ; ಎಲ್ಲವೂ ಸೇರಿ 27 ಮಮ್ಮಿಗಳು. ಎಷ್ಟೇ ವೇಗವಾಗಿ ನೋಡುತ್ತೇನೆಂದರೂ 8 ರಿಂದ 9 ಗಂಟೆಯಾದರೂ ಬೇಕೆ ಬೇಕು. ಅಂಥದನ್ನು ಮೂರುವರೆ ಗಂಟೆಗಳಲ್ಲಿ ನೋಡಿ ಮುಗಿಸಬೇಕಾಯಿತು.
ಆ ಕಾಲದಲ್ಲಿ ಇದ್ದ ಬಹುಪತ್ನಿತ್ವ ಮತ್ತು ಸಹೋದರ ಸಹೋದರಿ ವಿವಾಹಗಳು ಮತ್ತು ಕುಟುಂಬದ ಸದಸ್ಯರಲ್ಲಿ ವಿವಾಹ ಸಂಬಂಧಗಳ ವಿಲಕ್ಷಣ ಪದ್ಧತಿಗಳನ್ನು ಮೆಲುಕು ಹಾಕುತ್ತಾ ಹೊರಗಡೆ ಬಂದೆವು. ಅಲ್ಲಿ ಹಿಯರಿಂಗ್ ಬಡ್ಸ್ ಗಳನ್ನು ಮರಳಿಸಿ, ನಮ್ಮ ಮೊಬೈಲ್, ಕ್ಯಾಮರಾಗಳನ್ನು ಪಡೆದೆವು.
ಅಲ್ಲಿಂದ ನಮ್ಮ ಕೋಚ್ ನೇರವಾಗಿ ಥೀಬ್ಸ್ ಹೋಟೆಲಿನತ್ತ ಮುಖಮಾಡಿ ಹೊರಟಿತು. ದಾರಿಯಲ್ಲಿ ಫುಟ್ಪಾತ್ ಗಳಲ್ಲಿ ಅದೇ ರೊಟ್ಟಿ ಮಾರುವ ದೃಶ್ಯಗಳು; ಚಿಕ್ಕ ಪುಟ್ಟ ವಸ್ತುಗಳ ವ್ಯಾಪಾರ ಮಾಡುವ ದೃಶ್ಯ ಸಾಮಾನ್ಯವಾಗಿತ್ತು. ಕೈರೋ ನಗರದಲ್ಲಿ ಎಲ್ಲಿ ನೋಡಿದರಲ್ಲಿ ಸ್ಪಿಂಕ್ಸ್ ಳ ಮತ್ತು ಎದೆ ಮೇಲೆ ಕೈಕಟ್ಟಿ ನಿಂತ, ಕುಳಿತ ದೇವತೆಗಳ ಮೂರ್ತಿಗಳೇ ತುಂಬಿದ್ದವು. ಇನ್ನೂ ಉತ್ಖನನ ಕಾರ್ಯ ನಡೆದಿರುವುದು, ಅರ್ಧಕ್ಕೆ ನಿಂತಿರುವುದು, ಅಳಿದುಳಿದ ಶಿಲಾ ಪ್ರತಿಮೆಗಳು, ಅಲ್ಲಲ್ಲೆ ತಗ್ಗುಗಳು ಕಂಡು ಬರುವ ದೃಶ್ಯ ಸಾಮಾನ್ಯವಾಗಿತ್ತು. ಇನ್ನೂ ಎಂಥೆಂಥ ಅದ್ಭುತಗಳಿವೆಯೋ ಈ ಕೈರೋದ ಭೂಗರ್ಭದೊಳಗೆ?
ಇಜಿಪ್ಶಿಯನ್ ಮ್ಯೂಸಿಯಂ ನೋಡಿ ತಿರುಗಿ ಥೀಬ್ಸ್ ಹೊಟೇಲಿಗೆ ಬಂದು ಮತ್ತೊಮ್ಮೆ ಸ್ನಾನ ಮಾಡಿ, ಅರ್ಧ ಗಂಟೆ ವಿಶ್ರಾಂತಿ ಪಡೆದು, ಬಟ್ಟೆ ಬದಲಿಸಿ ಎಲ್ಲರೂ ಹೋಟೆಲಿನಲ್ಲಿದ್ದ ಅಂಗಡಿ ಮಳಿಗೆ ಮತ್ತು ಗೀಝಾ ಪಟ್ಟಣ ನೋಡೋಣವೆಂದು ಹೊರಬಿದ್ದೆವು. ಅಲ್ಲಿದ್ದ ವಸ್ತುಗಳು ಅಂತಹ ಮಾದರಿ ಎನಿಸುವಂಥದ್ದೇನೂ ಇರಲಿಲ್ಲ. ಮೇಲಾಗಿ ಅದು ಅರಬ್ ದೇಶ ಎನ್ನುವುದನ್ನು ನೆನಪಿಸುವಂತಿದ್ದವು. ಅಲ್ಲಿ ನಾನು ಪರೀದ್ ಅತಿಯಾ ಪ್ರಕಾಶನದ ‘‘Egypt’ ‘ ಪುಸ್ತಕ ಖರೀದಿಸಿದೆ. ತಿರುಗಿ ಬಂದು ನಾನು, ಸುನಂದಾ, ಸರೋಜಾ, ಲಾರಿಸರ್ ಮತ್ತು ಮಾರ್ಗದರ್ಶಿ ಅಹಮ್ಮದ್ ಒಂದೆಡೆ ಕುಳಿತು ಅಲ್ಲಿನ ವಿಷಯಗಳ ಬಗೆಗೆ ಚರ್ಚಿಸಿ, ಬೇಗನೆ ಊಟ ಮಾಡಿ ಬ್ಯಾಗ್ ಪ್ಯಾಕ್ ಮಾಡಲು ರೂಮ್ ಸೇರಿಕೊಂಡೆವು. ಇಂದು ಸುವಾಸಿತ ಅಂಗಡಿ ಮತ್ತು ಮ್ಯೂಸಿಯಂನ ಗದ್ದಲದಲ್ಲಿ ಚಂದ್ರನನ್ನು ವಿಚಾರಿಸಿರಲೇ ಇಲ್ಲ. ಆತನನ್ನು ನೋಡಿದರೆ ಕಣ್ಣಿಗೆ, ಮನಸ್ಸಿಗೆ ಏನೋ ತಂಪು. ನಮ್ಮೂರಲ್ಲೂ ಕಾಣುವ ಚಂದ್ರ ಈ ಊರಲ್ಲೂ ಕಾಣ್ತಿದ್ದಾನೆ. ಎಲ್ಲರನ್ನು ಮೇಲಿನಿಂದ ನೋಡುವ ಚಂದ್ರ ಏನೇನೂ ಸಂದೇಶ ತಂದಿರುತ್ತಾನೆ ಭಾಗ್ಯದ ಬಳೆಗಾರನಂತೆ. ಅವನ ನೋಡಿದರೆ ಏನೋ ಸಮಾಧಾನ. ಚಂದ್ರ ಮತ್ತೂ ದೊಡ್ಡದಾಗಿದ್ದ. ಶುಭರಾತ್ರಿ ಹೇಳಿ ಮಲಗಿದೆ. ಕೈರೋದಲ್ಲಿ ಎರಡನೇ ದಿನವೂ ಕಳೆದು ಹೋಯಿತು.
(ಮುಂದುವರಿಯುವುದು)
 

‍ಲೇಖಕರು avadhi

March 15, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: