ಇಚ್ಚಾಮರಣವೊಂದನುಳಿದು ನಿನಗಾವ ಅಧಿಕಾರವಿತ್ತು..

ಶಾಂತನುಸುತನಿಗೊಂದು ಸವಾಲು

ಡಾ ಶಿವಾನಂದ ಕುಬಸದ


 

ಪರಿತಪಿಸಲಿಲ್ಲ ನೀನೆಂದೂ
ನಿನ್ನ ಅರ್ಹತೆಗೆ ತಕ್ಕುದು
ಸಿಗಲಿಲ್ಲವೆಂದು
ಚಕ್ರವರ್ತಿಯ ಪುತ್ರ
ಪಾಪತೊಳೆವ ಗಂಗೆಯ ಸುತ
ಸ್ಪುರದ್ರೂಪಿ, ಪರಾಕ್ರಮಿ, ಧರ್ಮಭೀರು
ಎಲ್ಲ ಇದ್ದೂ ಶರಶಯ್ಯೆಯೇ ಗತಿಯಾಯ್ತು
ಅಸಹಾಯಶೂರ ನೀ ಅಸಹಾಯಕನಾದೆ
ನಿನಗಿದೆಂದೂ
ಸ್ವಯಂಕೃತ ಎನಿಸಲಿಲ್ಲವೇ…?
 
ನಿನ್ನ ಅಷ್ಟೂ ಪ್ರತಿಜ್ಞೆಗಳ
ಜರೂರಾದರೂ ಏನಿತ್ತು
ಚಿಟಿಕೆ ಹೊಡೆಯುವುದರೊಳಗೆ
ನೀ ಎಳೆದು ತರಬಹುದಿತ್ತು
ಸತ್ಯವತಿ ಎಂಬ ಸಮಯಸಾಧಕಿಯನ್ನು
ನಿನ್ನಪ್ಪನ ಮಡದಿಯನ್ನಾಗಿಸಲು
ಹಾಗೆ ಮಾಡದೆ ಪ್ರತಿಜ್ಞೆ ಮಾಡಿ
ಜಗದ ಜಂಘಾಬಲವನೆ ಉಡುಗಿಸಿಬಿಟ್ಟೆ
ಖಂಡಿತ ಇದು “ಭೀಷ್ಮ”ಎಂಬ
ಬಿರುದಿನಾಸೆಗೆ ಇರಲಾರದು
ಏನೂ ಬೇಡದವನಿಗೆ
ಬಿರುದೇಕೆ ಬೇಕು…?

 
ಹಸ್ತಿನಾಪುರದ ಗದ್ದುಗೆಯ ಕಾಲುಗಳಿಗೆ
ನಿನ್ನ ಕೈ ನೀನೆ ಕಟ್ಟಿಕೊಂಡು ದೊರೆಯ
ಊಳಿಗದವನಾಗಿಬಿಟ್ಟೆ
ಅದಕ್ಕೇ ನೋಡು ಪಾಂಚಾಲಿಯ
ಸೆರಗು ಗುಡ್ಡೆ ಬೀಳುವುದನ್ನು
ತಪ್ಪಿಸಲಾಗಲಿಲ್ಲ
ನಿನ್ನ ಒಂದು ಗರ್ಜನೆ ಸಾಕಿತ್ತು
ದುಶ್ಯಾಸನನ ಅಟ್ಟಹಾಸ ಅಡಗಲು
ನೀನು ದುರುಗುಟ್ಟಿದರೆ ಸಾಕು
ದುರ್ಯೋಧನನ
ತೊಡೆ ಸೀಳಿ ಹೋಗುತ್ತಿತ್ತು
 
ನೀನೊಂದರಘಳಿಗೆ ಮುರಿದು
ನೋಡಬೇಕಿತ್ತು ನಿನ್ನ ಪ್ರತಿಜ್ಞೆಯನ್ನ
ತಪ್ಪಬಹುದಿತ್ತು ಹಲವು ಅಕ್ಷೋಹಿಣಿಗಳ ಹನನ
ಹಾಗೆ ಮಾಡದೆ ಸುಮ್ಮನೆ
ತಲೆತಗ್ಗಿಸಿ ಕುಳಿತು ದುಃಖಿಸಿದೆ
ಧರ್ಮಕುರುಡ ರಾಜನಿಗೆ ವಿಧೇಯನಾಗಿ
ಏನುಪಯೋಗ..?
 
ಅದಕ್ಕೇ ಇರಬೇಕು
ಹಟಮಾರಿ ಅಂಬೆ ಮರುಹುಟ್ಟು
ಪಡೆದು ಕಾಯ್ದಳು ನೇಪಥ್ಯದಲ್ಲಿ
ಶಿಖಂಡಿಯಾಗಿ
ಗಾಂಡೀವಿಯ ಗುಂಡಿಗೆಗೆ ಗುರಾಣಿಯಾಗಿ
ಪಾರ್ಥಸಾರಥಿಯ ಮಹಾಭಾರತ
ಸೂತ್ರಕ್ಕೆ ಸಲಕರಣೆಯಾಗಿ
ಇಚ್ಚಾಮರಣವೊಂದನುಳಿದು
ನಿನಗಾವ ಅಧಿಕಾರವಿತ್ತು….?
 
ಪಿತಾಮಹನೆ
ಮುಲಾಜಿಗೆ ಬಿದ್ದು ಬದುಕಿ
ಪರಿತಪಿಸುವವರಿಗೆ
ನೀನೊಂದು
ನಿದರ್ಶನವಾಗಿಬಿಟ್ಟೆ…
ಇಷ್ಟೇನಾ…..??
 

‍ಲೇಖಕರು avadhi

March 15, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: