ಸಖಾರಾಮ್ ಬೈಂಡರ್ ಬಗ್ಗೆ ಇನ್ನಷ್ಟು ಬರೆದಿದ್ದಾರೆ ಗೋಪಾಲ್ ವಾಜಪೇಯಿ

ಮಾರ್ಚ್ ೨೨ ರಂದು ಕೆ ಎಚ್ ಕಲಾಸೌಧದಲ್ಲಿ ಪ್ರದರ್ಶಿತಗೊಳ್ಳಲಿರುವ ’ಸಖಾರಾಂ ಬೈಂಡರ್’ ಬಗ್ಗೆ ಒಂದಿಷ್ಟು ಮಾಹಿತಿ ಮತ್ತು ಆಹ್ವಾನ ಪತ್ರಿಕೆ ಅವಧಿಯಲ್ಲಿ ಪ್ರಕಟಿಸಿದ್ದೆವು.

ಅದನ್ನು ಓದಿ, ತಮ್ಮ ನೆನಪಿನ ಕಣಜದಿಂದ ಇನ್ನಷ್ಟು ಮಾಹಿತಿ ಹೆಕ್ಕಿ, ಆ ಫೋಟೋಗಳನ್ನು ಹುಡುಕಿ ಗೋಪಾಲ ವಾಜಪೇಯಿ ನಮಗಾಗಿ ಕಳುಹಿಸಿ ಕೊಟ್ಟಿದ್ದಾರೆ.

ಅವರಿಗೆ ’ಅವಧಿ’ ಯ ವಂದನೆಗಳು. ನಾಟಕದ ಬಗ್ಗೆ ಮತ್ತಷ್ಟು ಮಾಹಿತಿ ಮತ್ತು ಅಪರೂಪದ ಫೋಟೋಗಳು ನಿಮಗಾಗಿ

ಗೋಪಾಲ ವಾಜಪೇಯಿ

‘ಸಖಾರಾಮ ಬೈಂಡರ್’ ನಾಟಕದ ಬಗ್ಗೆ ಇನ್ನಷ್ಟು ಮಾಹಿತಿ :
1972ರಲ್ಲಿ ವಿಜಯ್ ತೆಂಡೂಲ್ಕರ್ ಮರಾಠಿಯಲ್ಲಿ ಬರೆದ ಈ ನಾಟಕ ಮುಂಬಯಿಯ ಹವ್ಯಾಸಿ ರಂಗಭೂಮಿಯಲ್ಲಿ ವಿವಾದವನ್ನು ಸೃಷ್ಟಿಸಿದ ಹೊಸತಿನಲ್ಲೇ ಕನ್ನಡಕ್ಕೂ ತರ್ಜುಮೆಗೊಂಡು ಪ್ರಯೋಗಿಸಲ್ಪಟ್ಟ ಸಂಗತಿಯನ್ನಿಲ್ಲಿ ನೆನಪಿಸಿಕೊಳ್ಳುತ್ತಿದ್ದೇನೆ.
ಆಗಲೇ ಇದನ್ನು ಧಾರವಾಡದ ಎಲ್. ಟಿ. ಅಮ್ಮಿನಭಾವಿ ಎಂಬವರು ಧಾರವಾಡದ ಆಡು ಮಾತಿನ ಕನ್ನಡಕ್ಕೆ ಅನುವಾದಿಸಿದ್ದರು. ಆದರೆ, ಅದು ಇಂಥ ನಾಟಕಗಳ ಪ್ರಯೋಗಕ್ಕೆ ಬೇರಾರೂ ಮುಂದಾಗದೇ ಇರದಿದ್ದ ಸಂದರ್ಭ. ಆದರೆ, ಅದಾಗಲೇ ತನ್ನ ಇಪ್ಪತ್ತನೆಯ ವಶದಲ್ಲಿ ಕಾಲಿರಿಸಿದ್ದ ಧಾರವಾಡದ ಕರ್ನಾಟಕ ಕಲೋದ್ಧಾರಕ ಸಂಘ ಎಂಬ ಹವ್ಯಾಸಿ ಸಂಸ್ಥೆಗೆ ಹೊಸ ಹೊಸ ಪ್ರಯೋಗಗಳನ್ನು ಮಾಡುವ ಹುಮ್ಮಸ್ಸು. ರಾಮಚಂದ್ರ ಕಿತ್ತೂರ ಮುಂತಾದ ಉತ್ಸಾಹಿಗಳು ‘ಸಖಾರಾಮ ಬೈಂಡರ್’ ನಾಟಕವನ್ನು ಪ್ರಯೋಗಿಸಲು ಮನಸ್ಸು ಮಾಡಿದರು. ಅನುವಾದಕರು ಒಂದಷ್ಟು ಹಿತವಚನದೊಂದಿಗೆಯೇ ಹಸ್ತಪ್ರತಿಯನ್ನು ತಂಡದವರಿಗೆ ನೀಡಿದರಂತೆ.
ಸದ್ದಿಲ್ಲದೆಯೇ ಹಸ್ತಪ್ರತಿ ವಾಚನ, ಕಲಾವಿದರ ಆಯ್ಕೆ ನಡೆದು ತಾಲೀಮು ಶುರುವಾಯಿತು. ರಾಮಚಂದ್ರ ಕಿತ್ತೂರರೇ ನಿರ್ದೇಶನದ ಹೊಣೆಯನ್ನು ಹೊತ್ತಿದ್ದ ಈ ನಾಟಕದ ಮೊದಲ ಪ್ರಯೋಗವಾದದ್ದು ಮಾತ್ರ 10-1-1976ರಂದು, ಬೆಳಗಾವಿಯಲ್ಲಿ. ಅಲ್ಲಿಯ ಕನ್ನಡಿಗರಲ್ಲದೆ, ಮರಾಠಿಯ ರಂಗರಸಿಕರೂ ಈ ಪ್ರಯೋಗವನ್ನು ಮೆಚ್ಚಿಕೊಂಡರು. ಬೆಳಗಾವಿಯ ಪ್ರಯೋಗ ಯಶಸ್ವಿ ಎನಿಸಿದರೂ ಧಾರವಾಡದಲ್ಲಿ ಅದರ ಮರುಪ್ರಯೋಗಕ್ಕೆ ಮಾತ್ರ ಮುಂದೆ ಮೂರು ತಿಂಗಳು ಕಾಲ ಕಾಯಬೇಕಾಯಿತು.
ಯಾಕೆಂದರೆ ಆಗ ಹವ್ಯಾಸಿಗಳ ನಾಟಕದ ಪ್ರಯೋಗ ಅಷ್ಟು ಸುಲಭದ ಮಾತಾಗಿರಲಿಲ್ಲ. ಕಲಾವಿದರ ಲಭ್ಯತೆ, ತಾಲೀಮು ಮಾಡುವ ಜಾಗದ ಕೊರತೆ ಮತ್ತು ಸಂಘಟನೆಯ ಇನ್ನಿತರ ಸಮಸ್ಯೆಗಳು. ಕಲಾವಿದರೆಲ್ಲ ಸರಕಾರೀ ನೌಕರರು. ಅವರಿಗೆ ರಜೆ ಸಿಗಬೇಕು. ಅಲ್ಲದೇ, ಕರ್ನಾಟಕ ಕಲೋದ್ಧಾರಕ ಸಂಘದ ಬಹುತೇಕ ಸದಸ್ಯರು ಕೆ. ಇ. ಬೋರ್ಡ್ ಎಂಬ ಶೈಕ್ಷಣಿಕ ಸಂಸ್ಥೆಯ ನೌಕರರು. ಹವ್ಯಾಸಿ ಸಂಸ್ಥೆಯ ಚಟುವಟಿಕೆಗಳನ್ನು ಪ್ರೋತ್ಸಾಹಿಸುವಷ್ಟು ಉದಾರ ಮನಸ್ಸಿನವರು ಆ ಶೈಕ್ಷಣಿಕ ಸಂಸ್ಥೆಯ ನೇತೃತ್ವ ವಹಿಸಿಕೊಂಡಿದ್ದರು. ಹೀಗಾಗಿ ರಜೆಯ ಕಾಲದಲ್ಲಿ ಆ ಶೈಕ್ಷಣಿಕ ಸಂಸ್ಥೆಯ ಪ್ರೌಢ ಶಾಲೆಗಳಲ್ಲಿ ತಾಲೀಮು ನಡೆಸಬಹುದಾಗಿತ್ತು.
ಅಂತೂ ಧಾರವಾಡದಲ್ಲಿ ಈ ನಾಟಕದ ಪ್ರಯೋಗ 4-4-1976ರಂದು, ಕೆ. ಇ. ಬೋರ್ಡ್ಸ್ ಹೈಸ್ಕೂಲಿನ ಸಭಾಂಗಣದಲ್ಲಿ ನಡೆಯಿತು.
ಈ ಎರಡೂ ಪ್ರಯೋಗಗಳಲ್ಲಿ ವೀರಣ್ಣ ಕುರ್ಲಿ ಮತ್ತು ಶ್ರೀಮತಿ ವಿಷಯಾ ಜೇವೂರ್ ಅವರು ನೀಡಿದ ಅಭಿನಯ, ಆ ಸರಳವಾದ ರಂಗ ಸಜ್ಜಿಕೆ, ಆ ಬೆಳಕಿನ ಸಂಯೋಜನೆ ಮುಂತಾದವು ಇನ್ನೂ ನನ್ನ ಕಣ್ಣ ಮುಂದೆ ಕಟ್ಟಿವೆ.
1970ರ ದಶಕದಲ್ಲಿ ಈ ನಾಟಕ ಮುಂಬಯಿಯ ಮರಾಠಿಯ ರಂಗಭೂಮಿಯ ಮೇಲೆ ಮೊದಲು ಪ್ರಯೋಗಿಸಲ್ಪಟ್ಟಾಗ ಅದರಲ್ಲಿ ಸಖಾರಾಮನಾಗಿ ಅಭಿನಯಿಸಿದ್ದವರು ಪ್ರಖ್ಯಾತ ನಟ ನೀಳೂ ಫುಲೆ. ಆತನಿಗೆದುರಾಗಿ ಅಭಿನಯಿಸಿದ್ದಾಕೆ ಬಹುಶಃ ಲಾಲನ್ ಸಾರಂಗ್.
‘ಸಖಾರಾಮ…’ದ ಇಂಗ್ಲಿಶ್ ಅನುವಾದ ಪ್ರಕಟಗೊಂಡು ರಂಗದ ಮೇಲೇರಿದಾಗಲೂ ನೀಳೂ-ಲಾಲನ್ ಜೋಡಿಯೇ ವಿಜೃಂಭಿಸಿತು.
ಇದೇ ನಾಟಕ ಹಿಂದಿಗೆ ತರ್ಜುಮೆಗೊಂಡು ರಂಗವನ್ನೇರಿದಾಗ ಅಭಿನಯಿಸಿ ಸಖಾರಾಮನನ್ನು ಅಜರಾಮರಗೊಳಿಸಿದವರು ಅಮರೀಶ್ ಪುರಿ. ಆತನಿಗೆ ಎದುರಾಗಿ ಸಮರ್ಥ ಪಾತ್ರ ನಿರ್ವಹಣೆ ಮಾಡಿದವರು ಸುಲಭಾ ದೇಶಪಾಂಡೆ.
ನಿಮಗಾಗಿ ಇಲ್ಲಿ ಆ ನಾಟಕಕ್ಕೆ ಸಂಬಂಧಿಸಿದ ಎರಡು ಚಿತ್ರಗಳನ್ನು ಸಂಗ್ರಹಿಸಿ ಕೊಡುತ್ತಿದ್ದೇನೆ.

‍ಲೇಖಕರು G

March 15, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಸಿ. ಎನ್. ರಾಮಚಂದ್ರನ್

    “ಸಖಾರಾಮ್ ಬೈಂಡರ್” ನಾಟಕದ ಬಗ್ಗೆ ಶ್ರೀ ಗೋಪಾಲ ವಾಜಪೇಯಿ ಅವರು ದಾಖಲಿಸಿದ ನೆನಪುಗಳು ನನ್ನ ನಿಪ್ಪಾಣಿ ಬದುಕು, ಅಲ್ಲಿಯ ದೇವಚಂದ್ ಕಾಲೇಜಿನಲ್ಲೆ (೭೧-೭೬) ಇಂಗ್ಲೀಷ್ ಪ್ರಾಧ್ಯಾಪಕನಾಗಿದ್ದುದು, ಇತ್ಯಾದಿ ನೆನಪುಗಳನ್ನೂ ಮತ್ತೆ ಮುನ್ನೆಲೆಗೆ ತಂದುವು. “ಸಖಾರಾಮ್ ಬೈಂಡರ್” ಬಗ್ಗೆ ಬರೆದ ನನ್ನ ಲೇಖನವೇ ವಿಮರ್ಶಕನಾಗಿ ನಾನು ಬರೆದ ಹಾಗೂ ಪ್ರಕಟವಾದ ಮೊದಲ ಲೇಖನ. ಅದರಲ್ಲಿ ನಾನು ಆ ನಾಟಕದ ಸಮಕಾಲೀನ ಪ್ರಜ್ಞೆ, ಹಿಂದು ಸಮಾಜದ ವಿಡಂಬನೆ, ಇತ್ಯಾದಿಗಳನ್ನು ವಿವರಿಸಿದ್ದೆ; ಅಂದಿನ ದಿನಗಳಲ್ಲಿ ಹಿಂದು ಸಮಾಜವನ್ನು ಟೀಕಿಸುವ ಯಾವುದೇ ಕೃತಿಯನ್ನೂ ನಾನು ಮೆಚ್ಚುತ್ತಿದ್ದೆ; ’ಬನ್ ದಗಡ್ ಮಾಝಾ ಮನ್’ (ವಿಂದಾ ಕರಂದೀಕರ್?) ಮುಂತಾದ ಕವನಗಳು ನನಗೆ ಅದ್ಭುತವಾಗಿ ಕಾಣುತ್ತಿದ್ದುವು. (ಆದರೆ, ನಾನು ನಾಟಕವನ್ನು ಮರಾಠಿಯಲ್ಲಿ ಓದಿ ಬರೆದಿದ್ದೆ; ನನ್ನ ಇಂಗ್ಲೀಷ್ ಲೇಖನವನ್ನು ನನ್ನ ಮಿತ್ರರೊಬ್ಬರು ಮರಾಠಿಗೆ ಅನುವಾದಿಸಿದ್ದರು; ಅಲ್ಲಿಯ ಸ್ಥಳೀಯ ಪತ್ರಿಕೆಯಲ್ಲಿ ಅದು ಪ್ರಕಟವಾಗಿತ್ತು.) ಆದರೆ, ಅದರ ರಂಗಪ್ರದರ್ಶನದಲ್ಲಿ ಎಂತಹ ತೊಡಕುಗಳಿರುತ್ತವೆ; ಅದರಲ್ಲಿ ಬರುವ ಗಾವಠಿ ಸ್ತ್ರೀಯೊಬ್ಬಳು ರಂಗದ ಮೇಲೆಯೇ ಸೀರೆ ಬದಲಿಸುವಾಗ ಅವಳು ಅನುಭವಿಸುವ ವಾಸ್ತವ ಕಷ್ಟಗಳೇನು ಎಂಬುದೆಲ್ಲವನ್ನೂ ಅಲ್ಲಿಯ ರಂಗಕರ್ಮಿಯೊಬ್ಬರು ನನಗೆ ವಿವರಿಸಿ, ’ಓದುವ ನಾಟಕವೇ ಬೇರೆ, ರಂಗಪಠ್ಯವೇ ಬೇರೆ’ ಎಂದು ನನಗೆ ತಿಳಿಸಿಹೇಳಿದ್ದರು. ನನಗೆ ನೆನಪಿರುವಂತೆ, ಆ ನಾಟಕ ನಿಪ್ಪಾಣಿಯಲ್ಲಿ ರಂಗದ ಮೇಲೆ ಬರಲಿಲ್ಲ.
    ವಾಜಪೇಯಿ ಅವರಿಗೆ ವಂದನೆಗಳು.
    ಸಿ. ಎನ್. ರಾಮಚಂದ್ರನ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: