ನೇತಾಜಿಗೆ ಮೊದಲೇ ಒಬ್ಬರಿದ್ದರು. ಅವರೇ… ಶೆಂಬಗರಾಮನ್ ಪಿಳ್ಳೈ.

ಎಸ್ ರಾಮಕೃಷ್ಣನ್ 

ಕನ್ನಡಕ್ಕೆ: ಕೆ ನಲ್ಲತಂಬಿ

ಭಾರತದ ಸ್ವಾತಂತ್ರಕ್ಕೆ ಜರ್ಮನಿ ನೆರವಾಗುತ್ತದೆ ಎಂದು ನಂಬಿ ಕೆಟ್ಟವರಲ್ಲಿ ನೇತಾಜಿಗೆ ಮೊದಲೇ ಒಬ್ಬರಿದ್ದರು. ಅವರೇ… ಶೆಂಬಗರಾಮನ್ ಪಿಳ್ಳೈ.

ತಮಿಳುನಾಡಿಗೆ ಸೇರಿದ ಇವರ ಜೀವನ, ಸಿನಿಮಾಗಿಂತಲೂ ಹೆಚ್ಚಿನ ತಿರುವುಗಳನ್ನೂ, ವಿಸ್ಮಯಗಳನ್ನೂ ಹೊಂದಿದೆ. ‘ಜೈ ಹಿಂದ್ ಶೆಂಬಗರಾಮನ್’ ಎಂದು ಕರೆಯಲ್ಪಡುವ ಶೆಂಬಗರಾಮನ್ ಪಿಳ್ಳೈ, ತಿರುವನಂತಪುರದಲ್ಲಿ ಹುಟ್ಟಿದವರು. (15 ಸೆಪ್ಟಂಬರ್ 1891- 26 ಮೇ 1934) ತಂದೆ ಚಿನ್ನಸ್ವಾಮಿ ಪಿಳ್ಳೈ- ತಾಯಿ ನಾಗಮ್ಮಾಳ್. ತಿರುವನಂತರಪುರಂ ಮಹಾರಾಜ ಉನ್ನತ ಶಿಕ್ಷಣ ಶಾಲೆಯಲ್ಲಿ ಆರನೆಯ ತರಗತಿಯಲ್ಲಿ, ‘ಶ್ರೀ ಭಾರತ ಮಾತಾ ಯುವಕ ಸಂಘ’ ಎಂಬ ಸಂಘಟನೆಯನ್ನು ಹುಟ್ಟುಹಾಕಿ, ಭಾರತದ ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾದವರು. ‘ಜೈ ಹಿಂದ್’ ಎಂಬ ಘೋಷಣೆಯನ್ನು ಮೊತ್ತಮೊದಲು ಮೊಳಗಿಸಿದವರು ಶೆಂಬಗರಾಮನ್ ಎನ್ನುತ್ತಾರೆ. ಅದಕ್ಕೆ ಯಾವ ದಾಖಲೆಗಳಿಲ್ಲ. ಆದರೆ, 1933ರಲ್ಲಿ ವಿಯನ್ನಾದಲ್ಲಿ ನಡೆದ ಸಮ್ಮೇಳನ ಒಂದರಲ್ಲಿ ಶೆಂಬಗರಾಮನ್ ಈ ಘೋಷಣೆಯನ್ನು ಮೊಳಗಿಸಿದರು ಎಂಬ ಟಿಪ್ಪಣಿ ಕಾಣಿಸುತ್ತದೆ.

ಅವರ ಹದಿನೇಳನೆಯ ವಯಸ್ಸಿನಲ್ಲಿ, ಸ್ಟ್ರಿಕ್ಟ್ ಲ್ಯಾಂಡ್ (Strickland) ಎಂಬ ಪ್ರಾಣಿಶಾಸ್ತ್ರ ಅಧ್ಯಯನಕಾರರ ಸ್ನೇಹ ದೊರಕಿತು. ಸ್ಟ್ರಿಕ್ಟ್ ಲ್ಯಾಂಡ್, ಭಾರತದಲ್ಲಿ ಪ್ರಾಣಿಶಾಸ್ತ್ರ ಅಧ್ಯಯನದಲ್ಲಿ ತೊಡಗಿಕೊಂಡಿದ್ದರು. ಅವರೊಂದಿಗೆ ಇಟಲಿಗೆ ಹೋದ ಶೆಂಬಗರಾಮನ್, ಅಲ್ಲಿ ಕೆಲವು ಕಾಲ ಶಿಕ್ಷಣ ಪಡೆದರು. ನಂತರ, ಸ್ವಿಜರ್ಲ್ಯಾಂಡ್ ಮತ್ತು ಬರ್ಲಿನ್ ವಿಶ್ವವಿದ್ಯಾಲಗಳಲ್ಲಿ ಕಲಿತು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಡಾಕ್ಟರೇಟ್ ಪದವಿಯನ್ನು ಗಳಿಸಿದರು.

ಜರ್ಮನಿಯಲ್ಲಿ ಇದ್ದುಕೊಂಡೇ ಅವರು, ‘ಭಾರತ ಸ್ವಾತಂತ್ರ ಹೋರಾಟ ಸಂಘ’ ಎಂಬ ಅಂತಾರಾಷ್ಟ್ರೀಯ ಸಂಸ್ಥೆಯನ್ನು ಹುಟ್ಟುಹಾಕಿ  ಹೋರಾಡಿದರು. ‘ಪ್ರೊ ಇಂಡಿಯಾ’ ಎಂಬ ಮಾಸಿಕ ಸಂಚಿಕೆಯನ್ನು ಪ್ರಾರಂಭಿಸಿದರು. ಇಂಗ್ಲೀಷ್, ಜರ್ಮನಿ ಎರಡೂ ಭಾಷೆಗಳಲ್ಲಿ ಅದು ಪ್ರಕಟವಾಯಿತು. ಭಾರತದಲ್ಲಿರುವ ಬ್ರಿಟೀಷ್ ಆಡಳಿತವನ್ನು ವಿರೋಧಿಸಿ 1915ರಲ್ಲಿ ಆಫ್ಘಾನಿಸ್ತಾನದ ಕಾಬೂಲಿನಲ್ಲಿ ಹಂಗಾಮಿ ಸರಕಾರ ಒಂದನ್ನು ರಾಜ ಮಹೇಂದ್ರ ಪ್ರತಾಪ್ ಅಧ್ಯಕ್ಷರಾಗಿಯೂ, ಮೌಲಾನ ಬರ್ಕತ್ತುಲ್ಲ ಪ್ರಧಾನಿಯಾಗಿಯೂ 1, ಡಿಸಂಬರ್ 1915 ಅಂದು ರಚಿಸಿದರು. ಆ ಸರಕಾರದ ವಿದೇಶಾಂಗ ಸಚಿವರಾಗಿ ಶೆಂಬಗರಾಮನ್ ಅವರನ್ನು ನೇಮಕಮಾಡಲಾಯಿತು.

1918ರಲ್ಲಿ ಬ್ರಿಟೀಷ್ ಸರಕಾರದ ಒತ್ತಾಯದ ಮೇರೆಗೆ, ಆ ಸರಕಾರಕ್ಕೆ ನೀಡಿದ ಬೆಂಬಲವನ್ನು ಜಪಾನ್ ಹಿಂತೆಗೆದುಕೊಂಡಿತು. ಆದ್ದರಿಂದ ಭಾರತದ ಹಂಗಾಮಿ ಸರಕಾರವನ್ನು ಆಫ್ಘಾನಿಸ್ತಾನದಿಂದ ಹೊರಹಾಕಲಾಯಿತು. 1914ರಲ್ಲಿ ನಡೆದ ಮೊದಲ ಮಹಾಯುದ್ಧದಲ್ಲಿ ಜರ್ಮನ್ ಸರಕಾರ ‘ಎಂಡೆನ್’ ಎಂಬ ಒಂದು ದೊಡ್ಡ ಯುದ್ಧದ ಹಡಗನ್ನು ಸಮುದ್ರ ಯುದ್ಧಕ್ಕಾಗಿ ಬಳಸಿತು. 1908ರಲ್ಲಿ ನಿರ್ಮಾಣ ಮಾಡಿದ ‘ಎಂಡೆನ್’ ಹಡಗು 3600 ಟನ್ ತೂಕ ಉಳ್ಳದ್ದಾಗಿತ್ತು. ಅದರ ವೇಗ 25 ನಾಟಿಕಲ್ ಮೈಲು. ಕಲ್ಲಿದ್ದಲು ಅದಕ್ಕೆ ಇಂಧನ. 10 ½ ಸೆಂಟಿಮೀಟರ್ ನ ಹತ್ತು  ಫಿರಂಗಿಗಳು ಇದ್ದವು. ವೈರಿಗಳ ಹಡಗುಗಳನ್ನು ಗುರಿಯಿಟ್ಟು ನಾಶಮಾಡುವುದರಲ್ಲಿ ಅದಕ್ಕೆ ಸರಿಸಾಟಿ ಇರಲಿಲ್ಲ. ಈ ಹಡಗಿನಲ್ಲಿ 360 ಸಿಪಾಯಿಗಳಿದ್ದರು. ಈ ಹಡಗು ಪೆಸಿಫಿಕ್ ಸಮುದ್ರದಲ್ಲಿ 4,200 ಮೈಲಿಗಳ ದೂರವನ್ನು 14 ದಿನಗಳಲ್ಲಿ ಕ್ರಮಿಸಿ ಸಾಧನೆ ಮಾಡಿತು.

ಎಂಡೆನ್ ಹಡಗಿನ ಕ್ಯಾಪ್ಟನ್ ಆಗಿದ್ದವರು ಕಾರ್ಲ್ಬಾನ್ ಮುಲ್ಲರ್ (Karl Von Muller) ಅವರು, ಸರಿಸಾಟಿಯಿಲ್ಲದ ನಾವಿಕ. ಹೊಗೆ ಗೂಡು, ಹೊರ ಆಕಾರ, ಅದರ ಬಣ್ಣ ಮುಂತಾದುವುಗಳನ್ನು ಬದಲಾಯಿಸುತ್ತಾ ವೈರಿಗಳನ್ನು ಸದೆಬಡಿಯುತ್ತಿತ್ತು ಎಂಡೆನ್. ಎಂಡೆನ್ ಮೊದಲ ಮಹಾಯುದ್ಧದಲ್ಲಿ 20 ಹಡಗುಗಳನ್ನು ಸೋಲಿಸಿತು.

ಆ ಹಡಗು ಸೆಪ್ಟಂಬರ್ 21ನೆಯ ತಾರೀಕು ಚೆನ್ನೈಗೆ ಬಂದಿತು. ಸೆಪ್ಟಂಬರ್ 22ರಂದು, ಬ್ರಿಟೀಷ್ ಸರಕಾರಕ್ಕೆ ಸೇರಿದ ಎರಡು ಎಣ್ಣೆಯ ಗಡಂಗುಗಳ ಮೇಲೂ, ಚೆನ್ನೈ ಬಂದರಿನ ಮೇಲೂ ದಾಳಿ ನಡೆಸಿತು. ಅದರಲ್ಲಿ, 8000 ಪೌಂಡ್ ಮೌಲ್ಯದ 34,600 ಗ್ಯಾಲನ್ ಎಣ್ಣೆ ನಾಶವಾಯಿತು. ಹತ್ತಕ್ಕಿಂತಲೂ ಹೆಚ್ಚು ಮಂದಿ ಗಾಯಗೊಂಡರು.

ಆ ದಾಳಿಯಲ್ಲಿ, ಪವಿತ್ರ ಜಾರ್ಜ್ ಕೋಟೆಯ ಗೋಡೆಯ ಒಂದು ಭಾಗ ಬುಡ ಸಮೇತ ಕುಸಿದು ಹೋಯಿತು. ಕೋಟೆಯ ಕಡೆ ದಾಳಿ ಮಾಡಿದ ಒಂದು ಬಾಂಬ್ ಸಿಡಿಯದೆ ಮಣ್ಣಲ್ಲಿ ಹೂತುಹೋಯಿತು. ಅದನ್ನು ಇಂದೂ  ಪ್ರದರ್ಶನಕ್ಕೆ ಇಟ್ಟಿದ್ದಾರೆ. ಎಂಡೆನ್ ಉಂಟುಮಾಡಿದ ಭೀತಿಯಿಂದ, ಹೇರಳವಾದ ಜನ ಹೆದರಿಕೊಂಡು ಚೆನ್ನೈಯನ್ನು ಖಾಲಿ ಮಾಡಿ ಓಡಿದರು. ಆ ಹಡಗಿನಲ್ಲಿ ಶೆಂಬಗರಾಮನ್ ಅವರು ಬರಲಿಲ್ಲ. ಪ್ರಯಾಣಿಕರ ಪಟ್ಟಿಯಲ್ಲಿ ಅವರ ಹೆಸರೂ ಸಹ  ಇರಲಿಲ್ಲ ಎಂದು ಕೆಲವರು ಹೇಳಿದರು. ಆದರೆ, ಅವರು ಆ ಹಡಗಿನಲ್ಲಿ ಪಯಣಿಸಿದರು ಎಂದು ಅವರ ಹೆಂಡತಿ ಹೇಳಿದ್ದಾರೆ. ರಕ್ಷಣೆಗಾಗಿ ಅವರು ಬೇರೆಯ ಹೆಸರಿನಲ್ಲಿ ಪಯಣಿಸಿರಬಹುದು ಎನ್ನುತ್ತಾರೆ.

1933ರಲ್ಲಿ ಜರ್ಮನಿಯಲ್ಲಿ ವಾಸವಿದ್ದ ಮಣಿಪುರಿಗೆ ಸೇರಿದ ಲಕ್ಷ್ಮೀಬಾಯ್ ಎಂಬುವರನ್ನು ಶೆಂಬಗರಾಮನ್ ಮದುವೆಯಾದರು. ಮೊದಲ ಮಹಾಯುದ್ಧದ ನಂತರ, ಜರ್ಮನಿಯಲ್ಲಿ ಹಿಟ್ಲರ್ ಆಡಳಿತ ತೊಡಗಿತು. ಶೆಂಬಗರಾಮನ್ ಹಿಟ್ಲರ್ ಜತೆ ನಿಕಟವಾಗಿದ್ದರು. ಭಾರತದ ಬಗ್ಗೆ ಹಿಟ್ಲರಿಗಿದ್ದ ತೀವ್ರವಾದ ದ್ವೇಷವನ್ನು ಅರಿತಿದ್ದ ಶೆಂಬಗರಾಮನ್, ಬಹಿರಂಗವಾಗಿ ತನ್ನ ವಿರೋಧವನ್ನು ವ್ಯಕ್ತಪಡಿಸಿದ್ದರು. ಆದ್ದರಿಂದ ನಾಜಿಗಳ ಕಿರುಕುಳಕ್ಕೂ ಒಳಗಾದರು.

ಒಂದು ಔತಣಕೂಟದಲ್ಲಿ ಶೆಂಬಗರಾಮನ್ ಅವರ ಆಹಾರದಲ್ಲಿ ವಿಷ ಬೆರಸಲಾಗಿತ್ತು. ತಿಳಿಯದೆ ಅದನ್ನು ಸೇವಿಸಿ ಖಾಯಿಲೆಗೆ ತುತ್ತಾದರು. ಚಿಕಿತ್ಸೆಗಾಗಿ ಇಟಲಿಗೆ ಹೋದರು. ಚಿಕಿತ್ಸೆಗೆ ಸ್ಪಂದಿಸದೆ ಶೆಂಬಗರಾಮನ್ ತೀರಿಕೊಂಡರು. ಅವರಿಗೆ ಕೊಟ್ಟ ಆಹಾರದಲ್ಲಿ ಯಾರು ವಿಷ ಬೆರೆಸಿದರು? ಅಥವಾ ಅದೊಂದು ಕಟ್ಟುಕತೆಯೇ ಎಂಬುದು ಸ್ಪಷ್ಟವಾಗಿಲ್ಲದೆ ಇಂದಿಗೂ ಕೇವಲ ವದಂತಿಯಾಗಿಯೇ ಉಳಿದಿದೆ.

1934ರ ಮೇ 26ರಂದು ಶೆಂಬಗರಾಮನ್ ಅವರು ನಿಧನರಾದರು. ತನ್ನ ಕೊನೆಯ ಆಸೆಯಾಗಿ, ‘ತನ್ನ ಆಸ್ಥಿಯನ್ನು ಭಾರತಕ್ಕೆ ತೆಗೆದುಕೊಂಡುಹೋಗಿ, ನನ್ನ ತಾಯಿಯ ಅಸ್ಥಿಯನ್ನು ಕರಗಿಸಿದ, ಕೇರಳದಲ್ಲಿರುವ ಕರಮನೈ ನದಿಯಲ್ಲಿ ವಿಸರ್ಜಿಸಬೇಕೆಂದೂ, ಉಳಿದದ್ದನ್ನು ನಾಂಜಿಲ್ ಪ್ರದೇಶದ ಬಯಲುಗಳಲ್ಲಿ ಸಿಂಪಡಿಸಬೇಕು’ ಎಂದು ಹೇಳಿದ್ದರು. (‘ನಾಂಜಿಲ್ ನಾಡು’ – ಅಗತೀಶ್ವರಮ್, ತೋವಲೈ, ಕನ್ಯಾಕುಮಾರಿ ಜಿಲ್ಲೆಗಳನ್ನು ಒಳಗೊಂಡ ಪ್ರದೇಶ)

ಆದರೆ, ಅವರ ಮಡದಿ ಲಕ್ಷ್ಮಿಬಾಯ್ ಅವರಿಂದ ಅದನ್ನು ಸುಲಭವಾಗಿ ನೆರವೇರಿಸಲು ಆಗಲಿಲ್ಲ. ಗಂಡನ ಅಸ್ಥಿಯನ್ನು ಜೋಪಾನವಾಗಿ ಇಟ್ಟಿದ್ದರು. ಲಕ್ಷ್ಮೀಬಾಯ್ ಅವರ ಮೇಲೆ ನಾಜಿ ಸರಕಾರ ಅಪರಾಧ ಹೊರಿಸಿ ಅವರನ್ನು ಮಾನಸಿಕ ಆರೋಗ್ಯ ಕೇಂದ್ರದಲ್ಲಿ ಸೇರಿಸಿತು. ಅವರಿಗೆ ಚಿತ್ರಹಿಂಸೆ ನೀಡಿತು. ಗಂಡನ ಅಸ್ಥಿಯನ್ನು ಇಟ್ಟುಕೊಂಡು ಲಕ್ಷ್ಮೀಬಾಯ್ 30 ವರ್ಷಗಳು ಹೋರಾಡಿದರು.

ಕೊನೆಗೆ ಅಸ್ಥಿಯೊಂದಿಗೆ ಭಾರತಕ್ಕೆ ಬಂದು ಸೇರಿದರು. ಮುಂಬೈಯಲ್ಲಿ ಉಳಿದುಕೊಂಡ ಅವರು, ಭಾರತ ಸರಕಾರದ ನೆರವಿನೊಂದಿಗೆ ಗಂಡನ ಕೊನೆಯ ಆಸೆಯಾದ ಆ ಅಸ್ಥಿಯನ್ನು ವಿಸರ್ಜಿಸಲು ಹೋರಾಡಿದರು. ಅದೂ ಸಹ ಸುಲಭವಾಗಿ ನಡೆಯಲಿಲ್ಲ. ಒಂದು ಹಂತದಲ್ಲಿ, ಇಂದಿರಾ ಗಾಂಧಿಯವರಿಗೆ ಒಂದು ಪತ್ರ ಬರೆದರು. ಅದರಲ್ಲಿ, ಇಂದಿರ ಗಾಂಧಿ ಬಾಲಕಿಯಾಗಿದ್ದಾಗ ತಮ್ಮ ಮನೆಗೆ ಬಂದುಹೋದ ಘಟನೆಯನ್ನು ನೆನಪಿಸಿ, ತನ್ನ ಗಂಡನ ಕೊನೆಯ ಆಸೆಯನ್ನು ಈಡೇರಿಸಲು ಸಹಾಯ ಮಾಡಬೇಕೆಂದು ಕೇಳಿಕೊಂಡರು.

ಭಾರತ ಸರಕಾರದ ವತಿಯಿಂದ, ಶೆಂಬಗರಾಮನ್ ಅವರ ಅಸ್ಥಿಯನ್ನು ವಿಸರ್ಜಿಸಲು ವ್ಯವಸ್ಥೆ ಮಾಡಲಾಯಿತು. 1966ನೆಯ ಇಸವಿಯಲ್ಲಿ, ಭಾರತದ ಯುದ್ಧ ಹಡಗು ಒಂದರಲ್ಲಿ ಶೆಂಬಗರಾಮನ್ ಅವರ ಅಸ್ಥಿಯನ್ನು ತೆಗೆದುಕೊಂಡು ಲಕ್ಷ್ಮೀಬಾಯ್ ಮುಂಬೈನಿಂದ ಕೊಚ್ಚಿಗೆ ಪ್ರಯಾಣ ಮಾಡಿದರು. ಶೆಂಬಗರಾಮನ್ ಬಯಸಿದಂತೆಯೇ ಅವರ ಅಸ್ಥಿಯನ್ನು ಕರಮನೈ ನದಿಯಲ್ಲಿ ವಿಸರ್ಜಿಸಲಾಯಿತು.

ಯಾವ ನದಿಯ ನೀರಲ್ಲಿ ತನ್ನ ತಾಯಿಯ ಅಸ್ಥಿ ಕರಗಿಹೋಯಿತೋ, ಅದೇ ನದಿಯಲ್ಲಿ ಶೆಂಬಗರಾಮನ್ ಸಹ ಕರಗಿಹೋದರು. ಆದರೆ, ಅವರು ಆಸೆಪಟ್ಟಂತೆ ನಾಂಜಿಲ್ ಪ್ರದೇಶದ ಬಯಲುಗಳಲ್ಲಿ ಆ ಅಸ್ಥಿಯನ್ನು ಸಿಂಪಡಿಸಲಾಯಿತೇ ಎಂಬ ವಿವರವಿಲ್ಲ.  ಕೆಲವು ವರ್ಷಗಳ ಹಿಂದೆ ತಮಿಳುನಾಡಿನ ಸರಕಾರ ಶೆಂಬಗರಾಮನ್ ಅವರ  ಪ್ರತಿಮೆ ನಿರ್ಮಾಣ ಮಾಡಿ ಗೌರವಿಸಿತು. 1972ರಲ್ಲಿ ಲಕ್ಷ್ಮೀಬಾಯ್ ಮುಂಬೈಯಲ್ಲಿ ತೀರಿಕೊಂಡರು.

ಶೆಂಬಗರಮನ್ ಜೊತೆಯಲ್ಲಿ ಜರ್ಮನಿಗೆ ಹೋದ ಅವರ ಅಣ್ಣ ಪದ್ಮನಾಭನ್ ಏನಾದರು? ಅವರ ಜೀವನ ಹೇಗಿತ್ತು? ಎಂಬ ವಿಷಯಗಳು ಇನ್ನೂ ತಿಳಿದುಬಂದಿಲ್ಲ. ಶೆಂಬಗರಾಮನ್ ಅಸ್ಥಿಯೊಂದಿಗೆ 32 ವರ್ಷಗಳು ಕಾದಿದ್ದ ಅವರ ಪತ್ನಿಯ ನೋವು ತುಂಬಿದ ಹೋರಾಟ ಇತಿಹಾಸದಲ್ಲಿ ಅಳಿಯದ ನೋವಾಗಿ ಉಳಿದುಹೋಗಿದೆ.

ಇತಿಹಾಸದಲ್ಲಿ ಗಂಡು ಅನುಭವಿಸುವ ದುಃಖ ಒಂದು ರೀತಿಯಾದರೆ, ಹೆಣ್ಣು ಅನುಭವಿಸುವ ದುಃಖ ಮತ್ತೊಂದು ಬಗೆಯದು. ಅದರ ವರ್ತಮಾನ ಕಾಲದ ಸಾಕ್ಷಿಯಾಗಿ ಲಕ್ಷ್ಮೀಬಾಯ್ ಇದ್ದರು. ಶೆಂಬಗರಾಮನ್ ಅವರ ಆಸ್ಥಿಯನ್ನು ಕರಗಿಸಿದ ದಿನ, ಲಕ್ಷ್ಮಿಬಾಯ್ ದುಃಖದಿಂದ ಅತ್ತಿದ್ದರು.

ಆ ಅಳು ತೀರಿಕೊಂಡ ಗಂಡನ ನೆನಪುಮಾಡಿಕೊಂಡು ಅತ್ತ ಅಳುವಲ್ಲ. ಒಬ್ಬನ ಆಸೆ ನೆರವೇರಲು ಎಷ್ಟೊಂದು ಅಡಚಣೆ, ಹೋರಾಟಗಳನ್ನು ದಾಟಿ ಬರಬೇಕಾಗಿದೆ. ಅದಕ್ಕೆ ಎಷ್ಟೊಂದು ರಾಜಕೀಯ ಕಿರುಕುಳಗಳು, ಕೆಂಪು ಪಟ್ಟಿಗಳು ಇವೆ ಎಂಬುದನ್ನು ನೆನಪು ಮಾಡಿಕೊಂಡೇ ಅತ್ತಿದ್ದಾರೆ. ಇತಿಹಾಸದಲ್ಲಿ ಮರೆಯಾದ ಆ ಆಕ್ರಂದನದ ದನಿಯನ್ನು ನಿಮ್ಮಿಂದ ಕೇಳಲು ಸಾಧ್ಯವಾದರೆ, ಇತಿಹಾಸ ಜೀವಂತವಾಗಿದೆ ಎಂಬುದನ್ನು ಬಲವಾಗಿ ನಂಬಬಹುದು.

‍ಲೇಖಕರು Avadhi

May 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: