ಅರೇ.. ಶಾದಿ ಮುಬಾರಕ ಹೋ!

ರೇಖಾ ರಂಗನಾಥ

ದೂರದಲ್ಲೆಲ್ಲೋ ಕಾಣೋ ಮರದ ಬುಡದವರೆಗೂ ಹೊಸೆದ ಬೆರಳುಗಳ ಅಂಗೈ ಮೆದುವಿನ ಅದುಮಿಕೆಯಲಿ ಹೆಜ್ಜೆ ಹಾಕಿ ಪ್ರೇಮ ಮಗ್ನರಾಗಿ ಕಣ್ಣು ಮಿಟಿಕಿಸುತ ಏಕಾಂತದ ಪಿಸುಮಾತಿನಲಿ ತುಸು ಗಳಿಗೆ ಕಳೆಯಲು ಹವಣಿಸುವ; ಹಸೆಮಣೆ ಏರೋ ಹೆಣ್ಣು-ಗಂಡುವಿನಲ್ಲಿ ಒಂದು ನವಿರಾದ ಪುಳಕ, ಕಾತುರ, ಆತುರ… ಅಬ್ಬಬಾ! ಅವರೆಲ್ಲ ಪ್ರೇಮ ತಲ್ಲಣಗಳು ಸ್ವರ್ಗದ ಪ್ರವೇಶ ದ್ವಾರದಲ್ಲಿ ಪರವಾನಿಗೆಗಾಗಿ ಕಾದಂತಿರುತ್ತದೆ.

ಪರಿಚಯಸ್ಥರೊಬ್ಬರ ಮಗನ ನಿಶ್ಚಿತಾರ್ಥಲ್ಲಿ ವರನ ಕಡೆಯವರಿಗೆ ಮೀಸೆ ತಿರುವೋ ಬಡಿವಾರದ ಸೊಬಗು.ಇನ್ನು ಹೆಣ್ಣು ಹೆತ್ತವರಿಗೆ ಬೆವರಲಿ ತೊಯ್ದ ರಟ್ಟೆಗಳ ತೋರಣ ಕಟ್ಟಿ ಕರಳಕುಡಿ ಧಾರೆಯೆರೆಯೋ ಪಡಿಪಾಟಲು. ಇದ್ಯಾವುದು ಪರಿಗಣಿಸದೆ ಸಾರ್ವಜನಿಕವಾಗಿ ಹೆಣ್ಣು ಹೆತ್ತವರಲ್ಲಿ ಮುಂಬರುವ ತಿಂಗಳಲ್ಲೆ ತುರ್ತಾಗಿ ಮದುವೆ ನೆರವೇರಿಸಬೇಕೆಂಬ ಹಟತೊಟ್ಟು ಹಿರೀಕರೆದುರೇ ಮುಖ ಊದಿಸಿದ ವರನ ಕಂಡಾಗ ಅವನ ಚಡಪಡಿಕೆಯ ಸೆಳಕು ಎಲ್ಲರ ಗಮನಕ್ಕೆ ತೆರೆದುಕೊಂಡಿತ್ತು. ಇಂದು ಈಗಲೇ ಈ ಕ್ಷಣಕ್ಕೆ ನೆರವೆರಬೇಕಾದ ಮದುವೆಗಳೆಲ್ಲ ಕರೋನಾ ದಾಳಿಗೆ ಲಾಕ್‌ಡೌನ್ನ ಮುಂದಕಿಟ್ಟು ಸರದಿ ಸಾಲಿನಲ್ಲಿ ಅವು ಕಾಯುವಂತಾಗಿವೆ. ಹೆಣೆದ ಕನಸನ್ನು ಇನ್ನು ಹೆಣೆತಾನೆ ಅಲ್ಪವಿರಾಮ, ಅರ್ದವಿರಾಮ, ಹಾಕ್ತಾನೆ. ಮುಂದೂಡಲಾದ ಮದುವೆ ದಿನದವರೆಗಿನ ವಿರಹದ ನೋವು ಪಾಪ ಆ ಹೈಕಳಿಗೆ ಗೊತ್ತು.

ಮದುವೆ ಸಮಾರಂಭ ಔತಣಕೂಟ ತರಹೇವಾರಿ ಭಕ್ಷಗಳ ತಿನ್ನುವುದೆಂದರೆ ನನಗಂತೂ ಪಂಚಪ್ರಾಣ. ಅಷ್ಟೇ ಏಕೆ ಒಂದು ಕಡೆ ಸುಮ್ಮನೆ ಕೂರಲಾಗದು. ಅಲೆಯುವುದು ಬಾಯಿ ಚಪ್ಪರಿಸಿ ಮೆಲ್ಲುವುದು ಘನ ಹುಚ್ಚು. ಪಾಪ ನನ್ನ ಕತೆ ಏನಾಗಬೇಡಾ ಹೇಳಿ, ಈ ಎಲ್ಲ ಸುಖಗಳಿಂದ ವಂಚಿತಳಾಗಿ ಲಾಕ್‌ಡೌನ ಸಡಲಿಕೆಗೆ ತಡವರಿಸುವಂತಾಯಿತು. ಅಂತೂ ಸಡಲಿಕೆ ಸಿಕ್ಕು ಮದುವೆಗೆ ಕರೆಯೊಲೆ ಸಿಗದೇ ಇದ್ದಾಗಲು ಬಳೆ ಇಡಿಸುವ ಶಾಸ್ತ್ರಕ್ಕೆ ಕರೆ ಬಂದಾಗ ಹಿಗ್ಗಿ ಹೀರೆಕಾಯಿಯಂತಾದೆ.

ಬಂಗಾರ ಸಿಂಗಾರದೊಟ್ಟಿಗೆ ಲಿಪಸ್ಟಿಕ ಬಣ್ಣ ಬಯಲಾಗದಂತೆ ಮಾಸ್ಕ ಧರಿಸಿ ಊಡುಗೊರೆ ಹಿಡಿದು ಶಾಸ್ತ್ರದ ಮನೆಗೆ ಮುಂದಾದೆ. ಸಿಂಗರಿಸಿದಕ್ಕೂ ಅನ್ಯಾಯವಾಗದಂತೆ ಹಸಿರು ಬಳೆಗಳ ಸದ್ದು, ನನಗಾಗದ ತಣ್ಣನೆ ಉಪ್ಪಿಟ್ಟು, ಒಗ್ಗರಣೆ ಹಾಕಿದ ಒಣ ಅವಲಕ್ಕಿ ಕೈಗಿಟ್ಟಿದ್ದು ಕಂಡಾಗ ಅವಕ್ಕಾಗೊ ಸರದಿ ನನ್ನದಾಗಿತ್ತು. ಎರಡು ಮೂರು ತೆಲೆಮಾರುಗಳ ಹಿಂದೆ ಉತ್ತರ ಕರ್ನಾಟಕದ ಭಾಗದಲ್ಲಿ ಮದುವೆ ಸಮಾರಂಭಕ್ಕೆ ಮಾದಲಿ (ಬೆಲ್ಲದ ತಿನಿಸು) ಮಾಡುವ ಪರಿಪಾಟವಿತ್ತು. ಇದಕ್ಕೆಂದೆ ಗಿರಣಿಗಳಿರದ ಆ ಕಾಲಕ್ಕೆ ತಿಂಗಳು ಮೊದಲೆ ಮಾದಲಿಗಾಗಿ ಗೋಧಿ ರೊಟ್ಟಿ ತಟ್ಟುವ, ಕುಟ್ಟುವ, ಸಾಣಿಸುವ ಕಾಯಕದಲ್ಲಿ ಮನೆ ಹೆಣ್ಣುಮಕ್ಕಳ ರಟ್ಟೆಗಳು ಹುರಿಗೊಳ್ಳುತ್ತಿತ್ತು.

ಮಾದಲಿ ನಂತರದ ದಿನಗಳಲ್ಲಿ ಬುಂದಿ, ಗೋಧಿ ಹುಗ್ಗಿ, ಚಿರೋಟಿ, ಮೈಸೂರ ಪಾಕ, ಜಿಲೇಬಿ, ಡ್ರೈಜಾಮುನ, ಕಾಜು ಬರ್ಪಿ, ಎಲ್ಲದೂ ಕೂಡ ಒಂದೊಂದಾಗಿ ಮಾದಲಿ ಜಾಗವನ್ನು ಆಕ್ರಮಿಸಿ ಸಂಭ್ರಮಿಸಿದ್ದಿದೆ. ಮದುವೆ ಮನೇಲಿ ಅಪ್ಪನ ಗೆಳೆಯನ ಅಣ್ಣನೊಬ್ಬ ಜಿದ್ದಿಗೆ ಬಿದ್ದು ಕೇವಲ ಎರಡು ಸೇರು ಮಾದಲಿ ತಿಂದ ಕಥೆನ ಕೇಳಿದ್ದುಂಟು. ದುಡಿತಕ್ಕು ಸೈ, ತುತ್ತಿಗೂ ಸೈ ಎನಿಸಿಕೊಂಡ್ಡಿದ್ದ ಅವರೆಲ್ಲ ಕಲಿಯುಗದ ಭೀಮ ಅಂತಲೇ ಫೇಮಸ್ಸು.

ಇನ್ನು ದ್ವಾಪರಯುಗದ ಭೀಮನ ತುತ್ತಿನ ಚೀಲ ತುಂಬಲು ಯಾವ ಪ್ರಮಾಣದ ಆಹಾರ ಸರಬುರಾಜವಾಗ ಬೇಕಿತ್ತೊ ಪರಿಣಾಮವೆನಿತ್ತೊ ಬಲ್ಲವರಾರು? ಆದ್ರೆ ಭೀಮ ಹಿಡಂಬನ ಕಾಡು ಪ್ರವೇಶ ಮಾಡಿದ ತಪ್ಪಿಗೆ ಕಾಡಾಡಿ ಕುಲದ ಹಿಡಿಂಬೆಯನ್ನೆ ವರಿಸೋ ಪ್ರಸಂಗ ಅನಿರ್ವಾಯವಾಯಿತು. ಆದಾಗ್ಯೂ ಮಾನವೀಯತೆಯನ್ನೆ ಹಿಡಿಂಬೆಯಲ್ಲಿ ಬಿತ್ತಿ ಬೆಳಸಿ ಮುಂದೆ ಸಾಗಿದ ಭೀಮನಿಂದ ಹಿಡಿಂಬೆ ಪಡೆದದ್ದು ಸಾಕಷ್ಟಿದೆ.

ಹಿರಿಕರಿಂದ ಕೇಳಲ್ಪಟ್ಟಂತೆ ಸ್ವಾತಂತ್ರ್ಯ ನಂತರದ ಸಂಧರ್ಭದಲ್ಲಿ ಒಂದೊಮ್ಮೆ ರಾಜಕೀಯ ನೇತಾರರೊಬ್ಬರು ಬುಡುಕಟ್ಟು ಜನಾಂಗವಿರುವೆಡೆ ಆಣೆಕಟ್ಟೊಂದರ ಉಧ್ಘಾಟನೆಗೆ ತೆರಳಿದ್ದ ಕಾಲವದು. ಸ್ವಾಗತ ಕೋರಲು ಬುಡಕಟ್ಟು ಮಹಿಳೆಯಿಂದಲೇ ಮಾಲಾರ್ಪಣೆ ಮಾಡಿಸುವ ಸಮಯಕ್ಕೆ ಶಂಖು ನಾದ ಹೊರಡಿಸುವ ಯೋಜನೆ ಕುಟಿಲ ಮನಸ್ಸುಗಳಿಂದಲೋ, ಕಾಕತಾಳೀಯವೋ ಜರುಗಿ ಹೋಯ್ತು. ಕೆಲವೊಂದು ಬುಡಕಟ್ಟು ಜನಾಂಗದ ಸಂಪ್ರದಾಯದ ಪ್ರಕಾರ ಅವರ ನಂಬಿಕೆಯಂತೆ ಮದುವೆಗಳಲ್ಲಿ ಶಂಖು ನಾದ ಹೊರಡಿಸಿ ಮಾಲಾರ್ಪಣೆ ಮಾಡಲಾಗುವುದು. ಇದನ್ನೆ ಮದುವೆಯೆಂದು ನಂಬಿದ ಆ ಮಹಿಳೆ ತನ್ನ ಕೊನೆ ಗಳಿಗೆವರೆಗೂ ಬೇರೊಂದು ಮದುವೆಯಾಗದೆ ಆ ರಾಜಕೀಯ ನೇತಾರರ ಹೆಸರಲ್ಲಿ ಬದುಕು ಕಳೆದುಕೊಂಡದ್ದಿದೆ.

ನಮ್ಮನ್ನೆಲ್ಲ ತೂಗಿಕೊಂಡು ಎಗಿಕೊಂಡು ಎಳೆದುಕೊಂಡು ಹೋಗೋ ರಾಜಕೀಯ ನೇತಾರರು ನರಿಗಿಂತಲೂ ಚಾಟುಕ್ತಿವುಳ್ಳವರು. ಅದೆಂಥ ಕಾಳಜಿ! ನಮ್ಮ ಜನತೆ ಮೇಲೆ. ಅನ್ನಭಾಗ್ಯ, ಕ್ಷೀರಭಾಗ್ಯ ಎಲ್ಲದರಿಂದಲೂ ಹೊಟ್ಟೆ ನೆತ್ತಿ ತಣ್ಣಗಾಯಿಸಿ ಮತ್ತೆ ಯಾವುದೇ ಸುಖಗಳಿಂದಲೂ ವಂಚಿತರಾಗದಿರಲೆಂದು ಶಾದಿ ಭಾಗ್ಯ, ಶಾದಿ ಶಗುನ ಭಾಗ್ಯ ಕರುಣಾಯಿಸಿದ ಕರುಣಾಮಯಿಗಳು.

ನನ್ನ ಮದುವೆಲೂ ಶಾದಿ ಭಾಗ್ಯವೆಂದು ತವರುಮನೆಯಿಂದ ಏನೆಲ್ಲ ಒಡವೆ ಕೊಟ್ಟಾಗಲು ವಿಶೇಷವೆನ್ನಿಸದಿದ್ದರು, ಇರುವ ಒಬ್ಬ ಅಳಿಯನಿಗೆಂತಲೇ ಗಟ್ಟಿಮುಟ್ಟಾಗಿ ಒಂದು ತೊಲೆ ಬಂಗಾರದ ಟಿ.ವಿ. ಆಕಾರದ ಉಂಗುರ ಅಪ್ಪ ಮಾಡಿಸಿದ್ದು ವಿಶೇಷವಾಗಿತ್ತು. ಅಕ್ಕಸಾಲಿಗ ವಧು-ವರರ ಹೆಸರುಗಳ ಮೊದಲ ಅಕ್ಷರವನ್ನು ಸುವರ್ಣಾಕ್ಷರಗಳಲ್ಲಿ ಕೆತ್ತಿದ ಪುಣ್ಯಾತ್ಮ. ನನ್ನ ಮೊಮ್ಮಕ್ಕಳು, ಮರಿಮೊಮ್ಮಕ್ಕಳು, ಗಿರಿಮೊಮ್ಮಕ್ಕಳವರೆಗೂ ಉಂಗುರದ ಇತಿಹಾಸ ಸೃಷ್ಠಿ ಆಗೋದರಲ್ಲೆ ಇತ್ತು, ಅದಕ್ಕೆಂದೆ ಉಂಗುರವನ್ನು ಯಾರೆಡೆಗೂ ಹಸ್ತಾಂತರಿಸದೆ ಭಧ್ರವಾಗಿ ತೆಜೂರಿಯಲ್ಲಿ ಜತನ ಮಾಡಿದ್ದೆ.

ಕಳೆದ ವರ್ಷದಲ್ಲಿ ಮಲೆನಾಡ ಸೆರಗಲ್ಲಿರೊ ನೆಂಟಸ್ಥರೊಬ್ಬರದು ಶಿವಮೊಗ್ಗೆಯಲ್ಲಿ ಮದುವೆ ಸಮಾರಂಭ ಅದ್ದುರಿಯಾಗಿ ಏರ್ಪಟ್ಟಿತ್ತು. ಹೋಗದೆ ಇರೋಕಾಗುತ್ತೆಯೆ? ಅದು ಅದ್ದುರಿಯಾಗಿರುವಾಗ? ನಾನಂತೂ ಮುಖಾರವಿಂದಕ್ಕಾಗಿ ಮಾಡಿಸೋ ಗೋಲ್ಡ ಫೇಷಿಯಲನಿಂದ, ಸೀರೆ, ಒಡುವೆ ಎಲ್ಲದು ಅಪ್ಪಟ ಬಂಗಾರದಲ್ಲೆ ಮಿಂದು ಹೊರಟವಳು. ಇನ್ನು ಬೆದರು ಗೊಂಬೆಯಂತೆ ಜೊತೆಗಾರನನ್ನು ಕರೆದೊಯ್ಯಲಾದೀತೆ? ಸುವರ್ಣ ಅಕ್ಷರಗಳುಳ್ಳ ಉಂಗುರ ಚೈನು ಬ್ರಾಸ್ಲೆಟ ನೇತಾಕಿ ಮಲಬಾರ ಗೋಲ್ಡ ಸ್ಟ್ಯಾಂಚುವಿನಂತೆ ಗೋಚರಿಸುವ ಕರಾಮತ್ತಿನ ಹೆಗ್ಗಳಿಕೆ ನನ್ನದು.

ಏರುದಾರಿಯಲ್ಲಿ ನಡೆದಿರುವಾಗಲೇ ಅಧ್ವಾನವೊಂದು ನಡೆದೊಯ್ತು. ತವರು ಮನೆ ಶಾದಿ ಭಾಗ್ಯದ ಸುವರ್ಣ ಅಕ್ಷರವುಳ್ಳ ಉಂಗುರವನ್ನು ಪತಿರಾಯರು ಜನಜಂಗುಳಿ ಮಧ್ಯೆ ನಿಂತು ಅಕ್ಷತೆ ಜೊತೆ ಮದುಮಕ್ಕಳಿಗೆ ಪ್ರೋಕ್ಷಣೆ ಮಾಡಿದ ಮಹಾನುಭಾವರು. ರಾಶಿ ಜನರ ಮಧ್ಯೆ ಯಾರ ಮುಡಿಯನ್ನೇರಿ ಕೂತಿತ್ತೋ? ಯಾವ ನೀರೆಯ ನೆರಿಗೆಯಲಿ ಬೆಚ್ಚಗೆ ಅವಿತುಕೊಂಡಿತ್ತೋ? ನಾ ಕಾಣೆ. ಚಿನ್ನದ ಉಂಗುರವನ್ನೆ ಅಕ್ಷತೆಯಂತೆ ಹಾಕಲು ಇವರೇನು ಮಾಹಾರಾಜನ ವಂಶಸ್ಥರೇ? ನನ್ನ ಲವಲವಿಕೆಯ ಚೆಲುವು ಕಮರಿ ಮನಸ್ಸು ಉಕ್ಕತೊಡಗಿತು.

ಪಕ್ಕದ ಒಂದಿಬ್ಬರಲ್ಲಿ ವಿಚಾರಿಸಿದಾಗಲು ಉಂಗುರ ಸಿಗದೇ ಹೋಯ್ತು. ಬಿದ್ದ ಪೆಟ್ಟಿಗಿಂತ ನಕ್ಕ ಪೆಟ್ಟು ಜಾಸ್ತಿ ಎಂದು ತೆಪ್ಪಗಾದೆವು. ಈಗೆಲ್ಲ ಮಲಬಾರ ಗೋಲ್ಡಸ್ಟ್ಯಾಂಚುವಿನಿಂದ ಬಟ್ಟೆ ಶೋ ರೂಮ್ ಗೊಂಬೆಯಂತೆ ಪ್ಯಾಂಟು, ಶರ್ಟು, ಅವರ ಬಟ್ಟೆ ಬಿಟ್ಟು ಮತ್ತೊಂದಿಲ್ಲ. ಅಂತೂ ಶಾದಿ ಶಗುನ ಭಾಗ್ಯ ಕಳೆದುಕೊಂಡ ಸೌಭಾಗ್ಯಕ್ಕೆ ವರ್ಷಾಚರಣೆ ಸಂಭ್ರಮದಲ್ಲಿ ಚಿನ್ನದ ಬೆಲೆ ಕೇವಲ ನಲವತ್ತೇಳು ಸಾವಿರ ರೂಪಾಯಿ ಆಗಿದ್ದುಂಟು.

ಇತ್ತೀಚಿನ ದಿನಗಳಲ್ಲಿ ಅದ್ಭುತ ಸೃಷ್ಟಿಸುವಂತಹ ಇತಿಹಾಸ ನಿರ್ಮಿಸಿದ್ದು ನಮ್ಮ ‘ದಣಿ ದಣಿ….ಧಣಿಗಳು.’ ಪಾಪದವರು ಇವರೆಲ್ಲ! ಅಯ್ಯೊ ಮರಾಯ್ರೆ ! ನಮ್ಮ ಕಡೆಯಲ್ಲ ಪಾಪದವರು ಅಂದ್ರೆ ಸಂಭಾವಿತರೆ ಅಂತ್ಲೆ ಅರ್ಥ. ಭೂಲೋಕ, ಪಾತಾಳ ಲೋಕ ಎಲ್ಲಡೆಯು ಉದ್ಧಾರ ಕಾಯಕಗಳನ್ನು ಕೈಗೊಂಡಿರುವ ಇವರೆಲ್ಲ ಆ ತಿರುಪತಿ ತಿಮ್ಮಪ್ಪನ ಮೊತ್ತದ ಬಣಿವೆಗಳಿಗಿಂತ ಕೊಂಚ ಜಾಸ್ತಿನೇ ಎನ್ನುವ ಮಟ್ಟಿಗೆ ಮೊತ್ತದ ಬಣಿವೆಗಳನ್ನು ಒಟ್ಟುವುದರಲ್ಲಿಯೇ ದಣಿದ ಇವರಿಗೆ ‘ದಣಿ ದಣಿ… ಧಣಿಗಳು’ ನಾಮಕರಣವಾಗಿದ್ದು.

ವಿಜಯನಗರ ಕೃಷ್ಣರಾಜರ ಅರಸು ಮನೆತನದ ಸುವರ್ಣಯುಗವನ್ನು ತಮ್ಮ ಹೆಣ್ಣು ಮಕ್ಕಳ ಮದುವೆಯಲ್ಲಿ ಧರಣಿ ಮೇಲೆ ಧರಧುರೆಂದು ಎಳೆದು ತಂದಿರುವ ಧಣಿಗಳು.ಈಗ ಬಹುಕೋಟಿ ಮದುವೆ ಮಾಡಿದ ಹಿಸ್ಟರಿ ಇವರದು. ಆ ಖುಷಿಗೊಂದು ಉಡುಗೊರೆಯಾಗಿ ವಜ್ರ ಖಚಿತ ಶಂಖುವೊಮದನ್ನು ತಿಮ್ಮಪ್ಪನ ಕೈಗೆ ಇಡಬಹುದು. 

ಹಗಲು ಮುಸುಕೆಳೆದ ಹೊತ್ತಲ್ಲಿ ಇಲ್ಲವೆ ಮುಸುಕು ಕಳಚುವ ಮುನ್ನವೆ ಹೆಣ್ಣು ಮಕ್ಕಳು ಬಹಿರ್ದೆಶೆ ಪೂರೈಸುವುದು ಹಳ್ಳಿಯ ಬಡಕಲು ಬಡಪಾಯಿಗಳ ಪಾಡು. ಹೆಣ್ಣಿನ ಮಾನ ಮುಚ್ಚವ ಒಂದಂಗೂಲದ ನಾಲ್ಕು ಗೋಡೆಗಳಿಗು ಬರವಿರುವ ಕಾಲ. ಕೊರಕಲು ಮಣ್ಣಲ್ಲಿ ಹಳ್ಳದಂತೆ ಹರಿವ ಚರಂಡಿಗಳು ಕೊಳಚೆ ಪ್ರದೇಶದ ಬಿಂಬಕ್ಕೆ ಸಾಕ್ಷಿಯಾಗಿವೆ. ಹಳ್ಳಿಗಳಲ್ಲಿರ ಬೇಕಾದ ಮೂಲ ಅಗತ್ಯಗಳಾದ ಶಾಲೆ, ಆಸ್ಪತ್ರೆ, ರಸ್ತೆ, ನೀರಿನ ಸೌಕರ್ಯಗಳಿಲ್ಲದೆ ಅಲ್ಲಿಯ ಬದುಕು ಸಂಪೂರ್ಣ ಮಕಾಡೆ ಬಿದ್ದಿದೆ. ಕೇವಲ ಎಂಟು ಒಂಬತ್ತು ದಿನಗಳಲ್ಲಿ ನೂರಾರು ಕೋಟಿ ವೆಚ್ಚ ಮಾಡುವ ದಣಿ ದಣಿ… ಧಣಿಗಳಿವರು. ಧಣಿ ಮಕ್ಕಳ ಮದುವೆಗಿರೊ ಮೌಲ್ಯ ಮೊತ್ತಕ್ಕೆಲ್ಲಿದೆ? ಉಡುಗೊರೆಯ ವಜ್ರದ ಶಂಖುವಿಗಾದರು ತಿಮ್ಮಪ್ಪ ಲಾಡು ಬದಲು ಹಳ್ಳಿಗಳನ್ನೆ ದತ್ತು ನೀಡಿದ್ರೆ ಇಲ್ಲೊಂದು ಸಿಂಗಾಪುರ ಸಿಂಗಾರಗೊಳ್ಳುತ್ತಿತ್ತೇನೊ!? 

ಇನ್ನು ನಮ್ಮ ಅಜ್ಜಯ್ಯ ಇದಾರಲ್ಲ; ಅದೇ ವಿಶ್ವಮಾನವನಾಗು ಎಂದು ತಿಳಿ ಹೇಳಿದ ಅಜ್ಜಯ್ಯ. ಸಂಪ್ರದಾಯದ ಹೆಸರಲ್ಲಿ ಆಚರಿಸುವ ಮೌಡ್ಯಗಳಿಗೆ ಆಡಂಬರಕ್ಕೆ ಕಡಿವಾಣ ಹಾಕಿ ಸರಳ ವಿವಾಹ ಪದ್ಧತಿಗೆ ಪ್ರೋತ್ಸಾಹವಿತ್ತು; ಮಂತ್ರಮಾಂಗಲ್ಯ ವಿವಾಹ ಪದ್ಧತಿಗೆ ಹರಿಕಾರರಾದವರು. ತಮ್ಮ ಮಗ ಪೂರ್ಣಚಂದ್ರ ತೇಜಸ್ವಿ ಹಾಗೂ ರಾಜೇಶ್ವರಿ ತೇಜಸ್ವಿಯವರ ವಿವಾಹವನ್ನು ಯಾವುದೇ ಮೂಹುರ್ತ, ಸಂಪ್ರದಾಯ, ಪುರೋಹಿತರ ಗೊಡುವೆಯಿಲ್ಲದನೆ ಸೀಮಿತ ಜನಗಳ ಮಧ್ಯೆ ಅಕ್ಷತೆ ಹಾಕದೆ ಪುಷ್ಪದಳಗಳು ಹಾಕುವ ಮೂಲಕ ಸರಳವಾಗಿ ಮಂತ್ರಮಾಂಗಲ್ಯ ನೇರೆವೇರಿಸಿದ ಹರಿಕಾರರು.

ಪ್ರಸ್ತುತ ಅವಧಿಯಲ್ಲಿ ಲವ್ ಮ್ಯಾರೇಜ್, ಲವ್ ಕಂ ಅರೇಂಜ್ ಮ್ಯಾರೇಜ್, ಹೆಸರಿನ ಜಾಗಕ್ಕೆ ನೆಟ್ ಮ್ಯಾರೇಜ್, ಫೇಸಬುಕ್ ಮ್ಯಾರೇಜ್ ಬಂದು ಕೂತಿವೆ. ನಮ್ಮ ಸಂಪ್ರದಾಯಬದ್ಧ ಮದುವೆ ಸೊಗಡು ನೋಡಲು ವಿದೇಶಿಗರು ಸಿನೇಮಾ ಟೀಕೆಟ ಖರೀದಿಯಂತೆ ಮುಂಗಡವಾಗಿ ಮದುವೆ ಟೀಕೆಟ ಖರೀದಿ ಮಾಡುವಾಗ… ಹೆಂಗೆ ನಾವು ಅಂತ್ಲೆ ನಮ್ಮ ಶರ್ಟ ಕಾಲರ್ ಇನ್ನು ತುಸು ಮೇಲೆ ಎಗರೋದು ನಿಜ.

ಎಲ್ಲರಿಗೂ ಗೊತ್ತಿರುವಂತೆ ಎರಡು ಹೃದಯಗಳೊಂದಿಗೆ ಕುಟುಂಬಗಳು ಬೆರೆಯುವ ಸಾಮಾಜಿ ವ್ಯವಸ್ಥೆಯೇ ಮದುವೆ. ಪ್ರಪಂಚದಲ್ಲಿಯೆ ಅತ್ಯಂತ ವೈವಿಧ್ಯವಾಗಿ ವೈಭವವಾಗಿ ಸಂಪ್ರದಾಯ ಬದ್ಧವಾಗಿ ಮದುವೆ ನೇರೆವೇರಿಸೊ ಪದ್ಧತಿ ನಮ್ಮ ಪರಂಪರಗತವಾದದ್ದು. ಒಂದು ಕಾಲಕ್ಕೆ ಯಾವುದೇ ಆಧುನಿಕ ಮನರಂಜನಾ ಸಾಧನಗಳಿಲ್ಲದೆ ಜನಪದಿಯ ಮನೋರಂಜನೆ, ಸಂಪ್ರದಾಯ ಆಚರಣೆಗೆ ಸಂಬಂಧಿಕರು ಒಗ್ಗೂಡುವಿಕೆಯಲ್ಲಿ ಸಂಭ್ರಮದ ಮೆರಗಿತ್ತು.

ಹೆಚ್ಚು-ಹೆಚ್ಚು ಸಂಪ್ರದಾಯಗಳೊಟ್ಟಿಗೆ ಮೌಢ್ಯವು ಬೆಳೆಯಿತು. ಬುದ್ಧಿಮತ್ತೆ ಇರುವ ನಾವೆಲ್ಲ ಕಾಲಕ್ಕೆ ತಕ್ಕಂತೆ ಆಲೋಚನಾ ಗಂಟೆಯಿಂದ ಎಚ್ಚರಗೊಳ್ಳಲೇ ಬೇಕಿದೆ. ಮೌಢ್ಯ, ಸಂಭ್ರಮದ ಹೆಸರಿನಲ್ಲಿ ಅನಗತ್ಯ ಅದ್ಧೂರಿಯಡೆಗೆ ಸಾಗಿ ಸಮಯ ಮೌಲ್ಯಗಳ ಅಪವ್ಯಯ ಆಗದಿರುವೆಡೆ ಹೆಜ್ಜೆ ಹಾಕುವುದರಲ್ಲಿ ಮನುಕುಲದ ಉದ್ಧಾರವಡಗಿದೆ.

ಅಜ್ಜಯ್ಯನಂತೆ ವಿಶಾಲತೆ ತೆಕ್ಕೆಗೆ ಬೀಳಲು ಸೋಲುವಂತಾದರೆ ಕೇವಲ ಅವರ ಕಿರುಬೆರಳನು ಸ್ಪರ್ಶಿಸುವೆಡೆಗೆ ನಮ್ಮ ಸಂಕಲ್ಪವಾದರೆ ಅದೇ ಶಾದಿ ಭಾಗ್ಯ.

‍ಲೇಖಕರು Avadhi

May 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: