ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೆರಳು ಬೆಳಕಿನ ಸರಳುಗಳ ನಡುವೆ…

ಇಂದು ನೇತ್ರ ರಾಜು ಅವರು ಇನ್ನಿಲ್ಲವಾಗಿದ್ದಾರೆ.

ಅವರು ತೆಗೆದ ಮೈಸೂರು ದಸರೆ ಫೋಟೋ ಇದು.

ಈ ಛಾಯಾಚಿತ್ರ ಸಾಕಷ್ಟು ವೈರಲ್ ಆಗಿತ್ತು

ನೇತ್ರ ರಾಜು ಅವರ ನೆನಪಿಗೆ ಬರೆದ ಈ ಕವಿತೆ ನಿಮ್ಮ ಮುಂದೆ-

ನಾ ದಿವಾಕರ

ಅಮ್ಮಾ

ಸ್ವರ್ಗ ಎಂದರೆ ಅದೇನಾ

ಅದೋ ಅಲ್ಲಿ ಕಾಣುತ್ತಿದೆಯಲ್ಲಾ :

ಇಲ್ಲ ಕಂದ

ಅದು ನಮ್ಮದೇ ಲೋಕ

ನಮ್ಮದಲ್ಲದ್ದಷ್ಟೇ ;

ಅದೋ ನೋಡು ಆ ಪ್ರಜ್ವಲ

ಬೆಳಕಿನ ಕಿರಣಗಳು

ನನ್ನ ನೆರೆತ ಕೂದಲನು ಸೀಳಿ

ನಡೆಯುತ್ತಿವೆ !

ನೀ ಅಲ್ಲಿಗೆ ಹೋಗಿದ್ದೀಯೇನಮ್ಮಾ ?

ಹೇಗೆ ಹೋಗಲಿ ಮಗುವೇ

ಅದೊಂದು ಭ್ರಮೆ ;

ನೋಡಲ್ಲಿ ಹಿಂಬದಿಯ

ಚಂದ್ರನನ್ನೂ ಮರೆಮಾಚಿದ

ಬೆಳಕು ಕೋರೈಸುವುದಿಲ್ಲವೇ ?

ನಿನ್ನ ಚಡ್ಡಿಯಿಂದ

ಹನಿಯುತ್ತಿದೆಯಲ್ಲ

ಅದೇ ಬೆವರಿನ ತುಣುಕುಗಳು

ಆ ಸೌಧದ ಇಟ್ಟಿಗೆಗಳಲ್ಲಿವೆ !

ಅಜ್ಜ ನೋಡಿದ್ದನೇನಮ್ಮಾ ?

ನಿನ್ನಜ್ಜಂದಿರು ನೋಡದ್ದೇನಿದೆ ಕಂದ

ನಾವು  ನಿಂತ ದಿಬ್ಬದಡಿ

ಎಷ್ಟೋ ಕದಡಿದ ಜೀವಗಳು

ಮಣ್ಣಾಗಿಹೋಗಿವೆ ;

ನಿನ್ನಜ್ಜನಜ್ಜನಜ್ಜನೊಬ್ಬ

ಹೀಗೆಯೇ ಹೊತ್ತಿದ್ದ

ಕಲ್ಲು ಮಣ್ಣು ಸುಣ್ಣ ಗಾರೆ

ಮೆತ್ತಿದ ನೆನಪು ಮಾಸುವುದಲ್ಲವೇ

ಆದರೂ ನೋಡಲ್ಲಿ

ಶಿಖರದ ಬೆಳಕಿನಲಿ

ಅವನ ನೆರಳು ಅಲೆದಾಡುವಂತಿದೆ !

ನಾವೇಕಮ್ಮಾ ಇಷ್ಟು ದೂರ ?

ನಿನ್ನ ಹೆಜ್ಜೆ ಗುರುತುಗಳನೊಮ್ಮೆ

ನೋಡು ಕಂದ

ಎಂದಾದರೂ ಮೆಟ್ಟಿರುವೆಯಾ

ದೊರೆಯ ಮೆಟ್ಟುಗಳನು

ನಿನ್ನ ಹೆಜ್ಜೆಗಳನಳಿಸುತ್ತಲೇ

ಎತ್ತರಕೇರಿದ್ದಾರೆ

ದಿಬ್ಬವನಲಂಕರಿಸಿದ್ದಾರೆ ;

ಎತ್ತಣ ಈ ದಿಬ್ಬ

ಎತ್ತ ಆ ದಿಬ್ಬಣ

ಅದು ದರ್ಬಾರು ಕಣಾ

ಇದು ದೂರ ಮಾರು !

ನಾನೇ ಹೋಗುತ್ತೇನಮ್ಮಾ !

ನಡೆ ಕಂದ ನಿನ್ನ

ಹೆಜ್ಜೆಗಳಲ್ಲಿದೆ ಬೆವರಿನ

ಸೊಗಡು

ಅವರ ಗೆಜ್ಜೆಯಲ್ಲಡಗಿದೆ

ನೆತ್ತರಿನ ತೇರು ;

ನೀ ಎತ್ತ ಹೋಗುವೆ

ಇತ್ತಲಿದ್ದರೂ ನೀನೇ

ಈ ಭುವಿಯ ದೊರೆ ಅವನಲ್ಲ

ಬೆವರೆಮ್ಮದು ನೆತ್ತರೆಮ್ಮದು

ಹಮ್ಮುಬಿಮ್ಮುಗಳೆಮ್ಮದಲ್ಲ

ಇದು ಮನುಜ ಲೋಕ ಕಣಾ

ಮನುಜ ಲೋಕ !

‍ಲೇಖಕರು avadhi

21 May, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading