ನೆನಪುಗಳ ನೆರೆಯಲ್ಲಿ..

ಯಮುನಾ ಗಾಂವ್ಕರ್

ನೆರೆಯಲ್ಲಿ ತೇಲಿ ಹೋಗದ ನೆನಪುಗಳು
ಕೊಚ್ಚಿ ಹೋಗದ ನೋವು
ಬಚ್ಚಿಟ್ಟು ಕಾಡುತಿದೆ
ತಟ್ಟೆಯೂಟದ ಮಧ್ಯೆ…!

ಆ ಕೋಳುಕಂಬದ ಕೆಳಗೆ ಬಿದ್ದು
ಪುಡಿಯಾದ ಅಜ್ಜಅಜ್ಜಿಯ ಚಿತ್ರ
ಕೊಳೆ ಬಳಿದು ಹೋದ ಕೂಸಿನ ಆಟಿಕೆ
ಆಗಷ್ಟೇ ಹುಟ್ಟಿ ಹಾಲು ಕುಡಿಯುತ್ತ
ತೇಲಿಹೋದ ಕರು
ಒಳಮನೆಯಲ್ಲಿ ಸದ್ದು ನಿಲ್ಲಿಸಿದ ಪಾತ್ರೆಗಳು
ಒಂದೆರಡಲ್ಲ… !

ನೆರೆ ಮನೆಯ ಟೀವಿ ತುಂಬಾ ಸಾವಿನ ಸುದ್ದಿ
ಸತ್ತುಳಿದವರೆದುರು
ಬ್ರೇಕಿಂಗ್ ನ್ಯೂಸ್ ಲೋಗೋಗಳು
ಕಿರುಚುತ್ತ ತಾಗುತ್ತಿವೆ ಮೂಗಿಗೆ-ಬಾಯಿಗೆ …!

ಹಾವು ಕಚ್ಚಿ ಸತ್ತವನ ಮಡದಿಯ ಆರ್ತನಾದ
“ಜೀವ ಉಳಿಯುತ್ತಿತ್ತು ಔಷಧಿ ಇದ್ದರೆ” ಮನೆಮಂದಿಯ ವಾದ…
ಹೆಮ್ಮರದ ಬುಡದಲ್ಲೇ
ಶವವಾದವನ ಮಕ್ಕಳ ರೋದನ
“ಜೀವ ಉಳೀತಿತ್ತ ತುಸು ಹೊತ್ತು ನಿಂತರೆ”
ಕಂಡವರ ವ್ಯಥೆ.‌‌‌..
ಸಾಕಿ ಸಲುಹಿದ ದನಕರು ಕುರಿ ತೇಲಿ ನಿರ್ಭಾಗ್ಯನಾದವನ ಏರು ಧ್ವನಿ…!
“ಲೇ ಕೂಗಬೇಡ, ಈಗಲೇ ಬಂಧಿಸಿ ಇವನ”
ಅಧಿಕಾರದ ಭಾಷೆ…!

ಚಿತ್ರಕೃಪೆ: ಯಮುನಾ ಗಾಂವ್ಕರ್

ಕಿರುಚುತ್ತಿದ್ದಾನೆ ಆ ತಾತ
ಕಣ್ಣೆದುರೇ ಬಳಿದು ಹೋದ ಆ ಕರುಳಕುಡಿ ಮರಗಿಡಬಳ್ಳಿಗಳ ನೋಡುತ್ತ
“ಕಷ್ಟಕಾಲಕ್ಕೆ ಕಟ್ಟಿದ ಬದುಕು ಇಲ್ಲೇ ಬಿಟ್ಟುಬಿಡು,
ಹೊಳೆಯೇ ನಮ್ಮನ್ನೇ ಹೊತ್ತೊಯ್ಯೋ ”
ತುಸು ದೂರದಲ್ಲಿ ಕೋಲು ಹಿಡಿದು ತನ್ನವಳ ತಬ್ಬಿಕೊಂಡು ನಿಂತ,
ಕುಸಿದು ಹೋದ!

ಇತ್ತ ಬಯಲಲ್ಲಿ
ಗಂಜಿ ಬೊಡ್ಡೆ ಸಿಗದೇ ತಪಿಸುತ್ತ ಕೂತ ಹಾಲಕ್ಕಿ ಅಜ್ಜಿ
ನಡು-ನಡುಗಿ ಕೊರಟಾಗಿ ಸೇರಿದ್ದು
ಗಂಜಿ ಕೇಂದ್ರದ ಒಲೆಯ ಬುಡದಲ್ಲಿ!

ಅಂಗಿಚಡ್ಡಿಯೂ ಇಲ್ಲದ ಆ ಮಗು
ಇನ್ನೂ ಹುಡುಕುವುದ ಬಿಟ್ಟಿಲ್ಲ…
ಪೌಳಿ ನೀರು ಹರಿಯುವ ಅಂಗಳದ ಅಂಚಲ್ಲಿ ದೂಡಿ ಬಿಡಲು ಮಾಡಿಟ್ಟ ಕಾಗದದ ದೋಣಿಗಳ…!
ಮುರುಕು ಮನೆ ಸುತ್ತ ಸುತ್ತುತ್ತ,
ಹರಿದ ಬನಿಯನ್ ನಲ್ಲೇ ದಿಟ್ಟಿಸುತ್ತಾಳೆ…
ನಿನ್ನೆ ತಾನಾಡಿದ ಗಿಲ್ಲಿಡಾಂಡು, ಚಿಟಬಿಲ್ಲು ಜೊತೆಗೆ ಆ ಉದ್ದಬಾಲದ ಬೆಕ್ಕು ಎಲ್ಲಿ ಅಡಗಿದೆ ಎಂದು!

ಹೀಗೆಲ್ಲ ನೋಡುತ್ತಲೇ ಹೂಳುಗಳ ದಾಟಿದೆ
ಹೊಳೆಗಳ ತುಂಬ ದೃಷ್ಟಿಸಿದೆ, ಕೆಸರಲ್ಲಿ ಹೂತ ಹೆಜ್ಜೆಗಳ ಕಿತ್ತೆ.
ಸುತ್ತ ನೋಡಿದಷ್ಟು ದೂರ ನೀರೋ ನೀರು
ಊರೂರ ಮಲಮೂತ್ರ ಬಳಿದು
ಕ್ರಿಮಿ ಕೀಟಗಳ ಹೊತ್ತು ತಂದ ಪ್ರವಾಹ.
ಬತ್ತಿದ ಕಣ್ಣುಗಳು, ಶರಣಾಗತ ಧ್ವನಿಗಳು
ಮೊಂಬತ್ತಿಗೂ ಗತಿ ಇಲ್ಲದ ಮನೆಗಳು
ಎಷ್ಟು ಊದಿದರೂ ಹೊತ್ತದ ಒಲೆಗಳು
ಕತ್ತಲಾದರೂ ಬೇಯದ ಅನ್ನ
ಎದುರೇ ಸ್ಥಬ್ದವಾದ ಉಸಿರು

ಯುದ್ಧಾನಂತರದ ಸ್ಮಶಾನ ಕುರುಕ್ಷೇತ್ರ
ಮತ್ತೂ ಕಾಯುತ್ತಿದೆ
ಪುರ ಪ್ರವೇಶಕ್ಕೆ ಪುರಸೊತ್ತಿಲ್ಲದ
ದೊರೆಯ ಸ್ಪರ್ಶಕ್ಕೆ …
ಆತನ ಆಣತಿಯ ಪಾಪ ಪುಣ್ಯದ ಕೊಳಗಕ್ಕೆ ಸಿಕ್ಕಿದ್ದು
ಬೋಳು ಮಣ್ಣುಗುಡ್ಡೆಗಳು ಮತ್ತು ಹಸಿಹಸಿ ಕಟ್ಟಿಗೆಯ ರಾಶಿಗಳು!!! ಕಾಯುತ್ತಿವೆ ಮೋಕ್ಷಕ್ಕೆ!!!

ಈಗ
ಗದ್ದುಗೆಗಳ ತಿನ್ನುವ ಗೆದ್ದಲುಗಳ ಮಧ್ಯೆ
ಗುಟುಕಿಗೂ ಸಾಲದ ಪರಿಹಾರ
ನೆರೆ-ನೆಗ್ಗಸಲ್ಲೂ ಕೊಚ್ಚಿ ಹೋಗದ ಭ್ರಷ್ಟಾಚಾರ
ನುರಿತವರಿಗೆ ನೆರೆಯಲ್ಲೂ ನೊರೆಯಲ್ಲೂ
ತೊರೆಯಲಾರದಷ್ಟು ವ್ಯವಹಾರ
ಇನ್ನೇನಿದ್ದರೂ ಹಾವಳಿಯದ್ದೆ ಸದ್ದು-ಸುದ್ದಿ…

‍ಲೇಖಕರು avadhi

September 22, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: