ಬಿಲ ಸೇರಿಕೊಂಡ ಹುಳುಗಳು

  ಮಧು ನಾಯರ್

 

ಹೊಸ ಮಾರ್ಗವ ಅನ್ವೇಷಿಸಿ

 

ಉರಿಯುವ ಹಗಲು

ಗಡಿಯಾರಗಳ ಮುಳ್ಳುಗಳು ತೆವಳುತಿವೆ

ಎಷ್ಟು ಕತ್ತಿಗಳ ತಿವಿತ

ರಕ್ತಸ್ರಾವವಿರದೆ ಕೊಲ್ಲುವ ಹೊಸ ಮಾರ್ಗವನು ಅನ್ವೇಷಿಸಿದ

ಕೀರ್ತಿ ಪತಾಕೆಯ ಹೊತ್ತ

ಹಳೇ ಕುದುರೆಗಳ ಮೇಲೆ ಹೊಸ ದೊರ

ಊರ ತುಂಬಾ ಭಯದ ಕಂಪನಗಳು ನಿಟ್ಟುಸಿರನ್ನೂ ಬಿಗಿ ಹಿಡಿದು

ಬಿಲ ಸೇರಿಕೊಂಡ ಹುಳುಗಳು

ಬಿಸಿಲ ಧಗೆಯ ನಡುವೆಯೆದ್ದ ಬಿಸಿ ಗಾಳಿಗೆದ್ದು ಧೂಳಿನಬ್ಬರಕೆ

ಮೊಳಗಿಸಿದ ರಣಘೋಷಗಳು ದಿಕ್ಕುಗಳಿಗೆ ಹಬ್ಬಿ

ಸೇನಾಧಿಪತಿಗಳ ಆವೇಶ ಆಕ್ರೋಶಗಳನ್ನೆಲ್ಲ

ಮೈಮೇಲೆ ಆವಾಹಿಸಿಕೊಂಡ ಕಾಲಾಳುಗಳು

ಸ್ವತ: ರಕ್ಕಸರಂತೆ ಪರಾಕ್ರಮ ಮೆರೆಯತೊಡಗಿದರು

ಹಾಗೆ ಉರಿದೊಂದು ಸಂಜೆಗೆ ಬರಬಹುದಾದ ಬಿರು ಮಳೆಗೆ ಕಾದ

ಜನ ಊರಾಚೆಯ ದಿಬ್ಬದ ಮೇಲೆ ನೆರೆದು ಹಾಡತೊಡಗಿದರು

ಹುಯ್ಯೋ ಹುಯ್ಯೋ ಮಳೆರಾಯ!

ಕದಡಿದ ರಾತ್ರಿ

ಎಷ್ಟೆತ್ತು ಕೂತಿದೆ ಮಂಡಿಯೂರಿ

ಹೊರದಾರಿ ತೋರದೆ ಸುಳಿದಾಡುತಿದ್ದ ಕವಿತೆ

ರಾಜರಸ್ತೆಯ ನಿಯಮಗಳನರಿಯದೆ

ಅಡ್ಡಾಡುತಿದೆ ಅಂತಿಂದಿತ್ತ ಇತ್ತಿಂದತ್ತ

ತಬ್ಬಲಿಯಂತೆ

ತೊರೆದು ಗರ್ಭದೊಳಗಿನ ಕತ್ತಲು ಹೊರಬರಲು

ತವಕಿಸುವ ಪ್ರತಿ ಭ್ರೂಣಕೂ

ಇರುವಂಥದೇ ಕುತೂಹಲ ತಣಿಸುವ

ಬೆಳಕಿನ ವಿಶ್ವದೊಳಗೂ ಇವೆ ಹುಟ್ಟುಗುರುಡನನ್ನಾಗಿಸುವ

ಸಿಡಿಲಿನಬ್ಬರವಿರದ ಬೆಂಕಿ ಕಿರಣಗಳು

ಅರಮನೆ ಗುರುಮನೆಗಳ ವ್ಯತ್ಯಾಸವನರಿಯದೆ

ಹೆರಿಗೆ ವಾರ್ಡು ಹೆಣ ಸುಡುವ ಮಸಣ

ಗೂಡುಗಳ

ವ್ಯತ್ಯಾಸವನರಿಯದೆ

ಅಂಡಲೆಯುತಿದೆ ದಿಕ್ಕು ತಪ್ಪಿ.

——————————

ಕಪ್ಪು ಕುದುರೆಯ ಕೆನೆತ!

 

 

ನನ್ನ ಹಗಲು ಇರುಳುಗಳ ಒಂದಾಗಿಸಿ

ಕಣ್ಣು ಚುಚ್ಚುವ ಬೆಳಕಿರದಂತೆ ಮಾಡಿದೆ

ಪ್ರತಿ ಉಸಿರನ್ನು ಒಳಗೆಳೆದುಕೊಳ್ಳುವ

ಕ್ಷಣದೊಳಗೆ ಆಕಾರರಹಿತವಾಗಿ ನನ್ನೊಳಗೆ ಸೇರಿ

ರಕ್ತದೊಳಗೆ ಮಿಳಿತವಾದೆ

ಉಟ್ಟದ್ದನ್ನೆಲ್ಲ ಕಳಚದೆಯೆ

ಬೆತ್ತಲಾಗುವ ಹೊಸ ಪ್ರೇಮದೊಂದು ಪರಿಯ ತೋರಿ

ಕಡುಕಪ್ಪು ಕುದುರೆಯ ಕೆನೆತಕ್ಕೆ ತಾಳವಾಗುವ

ನಿಮಿರಿನಿಂತ ವಾಸನೆಯ ಆಘ್ರಾಣಿಸಲು ಅನುವಾಗಿಸಿದೆ.

ನಡುಹಗಲ ನೀಲಾಕಾಶದಲಿ

ಪ್ರತಿ ಮನೆಯಂಗಳದಿ ನಿಂತು ಭವತಿಯೆನ್ನುವ

ಅಲೆಮಾರಿಗೊಂದು ನೆಲೆ ನಿಲ್ಲುವ ಬಯಕೆ ತುಂಬಿ

ದೇವರ ದಿಕ್ಕರಿಸಿ

ಕಾಮನೆಗಳ ಉಕ್ಕರಿಸಿ

ಕಲ್ಲೆದೆಯ

ತಿಜೋರಿಯೊಳಗೆ ಮೃದು ಮಾತಿನ ವೀಣೆಗಳ ನುಡಿಸಿ

ಹೊಸದಿಕ್ಕಿನೆಡೆಗೆ ನಡೆವಂತೆ ಮಾಡಿದೆ.

ಮಿನುಗುವ ಚುಕ್ಕಿಗಳ

ಹಾರುವ ಹಕ್ಕಿಗಳ

ತೋರುತ್ತಲೇ ನನ್ನೆದೆಯ ಬಡಿತವ ನಗಾರಿಯಾಗಿಸಿ

ಅರಸರೆಲ್ಲ ಆಳಾಗಿ ತೊತ್ತುಗಳೆಲ್ಲ ಗೂಳಿಗಳಾಗಿ

ಮೆರವ ಕಲಿಕಾಲದೊಂದು ಕ್ಷಣದೊಳಗೆ

ನನ್ನ ಇನ್ನಿಲ್ಲವಾಗಿಸಿದೆ.

‍ಲೇಖಕರು AdminS

September 22, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: