ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೆನಪಿನ ದಾರಿ

ಜಿ.ಪಿ.ಬಸವರಾಜು

ಅದು ನಡೆದ ಹಾದಿ, ಸವೆದ ಹಾದಿ
ಸುಲಭದ ಹಾದಿ, ಬಾಲ್ಯದಲ್ಲಿ ನಡೆದು
ನಡೆದು ನನಗೆ ಒಗ್ಗಿಹೋದ ಹಾದಿ

ಮೊನ್ನೆ ಮೊನ್ನೆಯೂ ನಡೆಯಲು
ನೋಡಿದೆ, ಎಷ್ಟೋ ವರ್ಷಗಳ ಮೇಲೆ,
ಹಾದಿಯುಂಟೆ, ಹೆಜ್ಜೆ ಗುರುತುಗಳುಂಟೆ
ಹುಡುಕಿದರೆ ಧೂಳಿಲ್ಲ, ತಾರು ರಸ್ತೆ
ಗುರುತಿಲ್ಲ ಹಳೆಯ ನೆನಪಿಲ್ಲ;

ಕಿರು ಹಳ್ಳ ದಾಟುತ್ತಿದ್ದೆವು ಆಗ ನಾವು
ನೀರ ಹರಿವು ಇರುತ್ತಿರಲಿಲ್ಲ ಅಷ್ಟಾಗಿ
ಮಳೆಗಾಲದಲ್ಲಿ ಜೋರು ಸೆಳವು
ಆದರೇನು, ಆಚೆಯ ಊರಿನ ಧೀರರೆಲ್ಲ
ಹಗ್ಗ ಹಿಡಿದು

ಆ ದಂಡೆ ಈ ದಂಡೆಗಳ ಬೆಸೆದು
ಸಲೀಸು ದಾಟಿಸುತ್ತಿದ್ದರು ನಮ್ಮನ್ನೆಲ್ಲ
ಅದೊಂದು ಮೋಜು, ಮಳೆಗಾಲದ ಆಟ
ಹಗ್ಗ ಕೈತಪ್ಪಿ ಜಾರಿದರೆ, ಇದ್ದರಲ್ಲ ಧೀರ
ಈಜುಗಾರರು ಜೊತೆಯಲ್ಲಿ, ಜೀವಕ್ಕೆ ಜೀವ
ಕೊಡಬಲ್ಲ ದಯಾಳುಗಳು, ನಮಗೇನು
ಭಯವಿರಲಿಲ್ಲ ಅವರ ಬೆಂಗಾವಲಿನಲ್ಲಿ,
ಮಳೆಯಲ್ಲಿ ನೆನೆಯುವುದು, ಈಜುವುದು,
ಹಳ್ಳ ದಾಟುವುದು, ಮತ್ತೆ ಖುಷಿಯಲ್ಲಿ
ನೆನೆಯುತ್ತಲೇ ಊರು ಸೇರುವುದು;

ಈಗ ಹಳ್ಳವಿಲ್ಲ, ಮಳೆಯಿಲ್ಲ, ಈಜುಗಾರರಿಲ್ಲ.
ಉದ್ದಕ್ಕೆ ಚಾಚಿಕೊಂಡ ಕರಲು ಹಾದಿಯಿಲ್ಲ
ತಾರು ರಸ್ತೆಯಲ್ಲಿ ಹೆಜ್ಜೆ ಗುರುತುಗಳಿಲ್ಲ
ಗುರುತು ಖೂನು ಕೇಳುವವರಿಲ್ಲ, ಕಾರಲ್ಲಿ
ಬಂದದ್ದು ಹೋದದ್ದು ತಿಳಿಯುವುದೇ ಇಲ್ಲ,
ರಸ್ತೆಯೊಂದು ಇರುವುದು, ಅದರ ಸ್ಥಿತಿಗತಿ
ತಿಳಿಯುವುದು ಕಾರಲ್ಲಿ ಕುಳಿತವರಿಗೆ ಸುಳಿಯುವುದೂ ಇಲ್ಲ

ನಮ್ಮೂರಿಗೆ ಈಗ ಹತ್ತಾರು ದಾರಿ, ಬಸ್ಸು ಕಾರು ಆಟೋ
ನಮ್ಮೂರ ಹುಡುಗರು ಬೀಗುತ್ತಾರೆ ಮೀಸೆ ತಿರುವುತ್ತಾರೆ.

‍ಲೇಖಕರು Avadhi

13 November, 2020

1 Comment

  1. ಲಲಿತಾ ಸಿದ್ಧಬಸವಯ್ಯ

    ಸೊಗಸಾದ ಕವನ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading