ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ

ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ ವ್ಯಕ್ತಿ, ಆತ/ಆಕೆ ಎಂತಹ ದೊಡ್ಡ ವ್ಯಕ್ತಿತ್ವವನ್ನು ಹೊಂದಿರಲಿ, ಸರ್ಕಾರದಂತಹ ಅಂಗದ ಜೊತೆ ಸಮೀಕರಿಸುವುದು ಸರಿಯಿಲ್ಲ ಎಂಬ ಭಾವನೆ ಮೂಡಿ, ಮೇಲೆ ಪ್ರಸ್ತಾಪಿಸಿರುವ ಶೀರ್ಷಿಕೆಯನ್ನು ಕೈಬಿಟ್ಟೆ!

ಜಗತ್ತಿನ ಹಲವು ದೇಶಗಳು ಕಳೆದ ಕೆಲವು ದಿನಗಳಿಂದ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದಂತೆ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದವು ಎಂದರೆ ಉತ್ಪ್ರೇಕ್ಷೆಯಾಗಲಾರದು. ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯ ಚರಿತ್ರೆಯಲ್ಲೇ ಅತಿ ಹೆಚ್ಚು ಮತಗಳನ್ನು ಪಡೆದು ಜೋ ಬೈಡೆನ್ ಒಂದು ದಾಖಲೆಯನ್ನು ಸ್ಥಾಪಿಸಿದ್ದಾರೆ. 

ಮುಂದಿನ ವರ್ಷದ ಜನವರಿಯಲ್ಲಿ ಯಾವ ಕಾನೂನಾತ್ಮಕ ಅಡೆತಡೆಗಳಿಲ್ಲದ ಪಕ್ಷದಲ್ಲಿ ಅಮೆರಿಕಾದ 46ನೇ ಅಧ್ಯಕ್ಷರಾಗಿ ಅವರು ಪದಗ್ರಹಣ ಮಾಡಲಿದ್ದಾರೆ. ಅಲ್ಲದೆ ಅಮೆರಿಕಾದ ಚರಿತ್ರೆಯಲ್ಲೇ ಪ್ರಥಮ ಬಾರಿಗೆ ಒಬ್ಬ ಮಹಿಳೆ ಉಪಾಧ್ಯಕ್ಷೀಯ ಸ್ಥಾನಕ್ಕೆ ಚುನಾಯಿತರಾಗಿದ್ದಾರೆ. ಭಾರತೀಯ ಮೂಲದ, ಆಫ್ರಿಕಾದ ಸಂಬಂಧವೂ ಇರುವ ಕಮಲ ಹ್ಯಾರಿಸ್ ಈ ಖ್ಯಾತಿಗೆ ಪಾತ್ರರಾಗಿದ್ದಾರೆ.

ಇತ್ತೀಚಿನ ಕೆಲವು ವರ್ಷಗಳಲ್ಲಿ ಪ್ರಪಂಚಾದಾದ್ಯಂತ ಹಲವು ದೇಶಗಳಲ್ಲಿ ಬಲಪಂಥೀಯ ಸರ್ಕಾರಗಳು ಅಸ್ತಿತ್ವಕ್ಕೆ ಬಂದಿವೆ.  ಭಾರತವೂ ಸೇರಿದಂತೆ ಅರ್ಜಂಟೈನಾ, ಬ್ರೆಝಿಲ್, ರಷ್ಯಾ ಪೋಲ್ಯಾಂಡ್, ಹಂಗೇರಿ, ಇಟಲಿ, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ ಬಲಪಂಥೀಯತೆ ವಿಜೃಂಭಿಸುತ್ತಿದೆ. 

ಅಂತಹ ದೇಶಗಳಲ್ಲಿನ ಆಡಳಿತದಲ್ಲಿರುವ ಸರ್ಕಾರಗಳನ್ನು ಸಾಮಾನ್ಯವಾಗಿ ಗುರುತಿಸುವುದು ಅವುಗಳ ನೇತೃತ್ವವನ್ನು ವಹಿಸಿರುವ ನಾಯಕರ ಹೆಸರಿನಿಂದ ಎಂಬುದನ್ನು ಗಮನಿಸಬೇಕು. ಅಂದರೆ ಸರ್ಕಾರಗಳನ್ನು ರಚಿಸುವ ಪಕ್ಷಗಳಿಗಿಂತಲೂ ಅವುಗಳ ನಾಯಕರ ಪಾರಮ್ಯಕ್ಕೆ ಮಣೆಯನ್ನು ಹಾಕಲಾಗುತ್ತದೆ.

ಅಮೆರಿಕಾದಲ್ಲಿ ಪ್ರಸ್ತುತ ಬಲಪಂಥದ ಬಲಿಷ್ಠ ನಾಯಕರಾಗಿದ್ದ ಟ್ರಂಪ್ ಪರಾಜಯ ಹೊಂದಿದ್ದಾರೆ.  ಅವರ ಕೆಲವು ಕ್ರಮಗಳು/ಹಲವು ಹೇಳಿಕೆಗಳು ಅನೇಕ ವಿವಾದಗಳಿಗೆ ಎಡೆಮಾಡಿಕೊಟ್ಟವು. 

ವಲಸಿಗರ ಬಗೆಗಿನ ಅವರ ಸಂಕುಚಿತ ನಿಲುವುಗಳು, ಉಗ್ರ ರಾಷ್ಟ್ರೀಯತೆ, ಅಮೆರಿಕಾದ ಒಳಗೆ ಏಳು ದೇಶಗಳ ಮುಸಲ್ಮಾನರ ಪ್ರವೇಶದ ತಾತ್ಕಾಲಿಕ ಪ್ರತಿಬಂಧ, ಪರ್ಯಾವರಣಕ್ಕೆ ಸಂಬಂಧಿಸಿದ ಪ್ಯಾರಿಸ್ ಒಪ್ಪಂದ, ವಿಶ್ವ ಆರೋಗ್ಯ ಸಂಸ್ಥೆ, ಯುನೆಸ್ಕೊ, ಮಾನವ ಹಕ್ಕುಗಳ ಮಂಡಳಿ, ಇರಾನ್ ನ್ಯೂಕ್ಲಿಯರ್ ಒಪ್ಪಂದ, ಟ್ರಾನ್ಸ್ ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಮೈತ್ರಿ ಮುಂತದುವುಗಳಿಂದ ಅಮೆರಿಕಾ ಹೊರನಡೆದ ನಿರ್ಧಾರ, ಪೊಲೀಸ್ ಅಧಿಕಾರಿಯಿಂದ ಕರಿಯ ಜನಾಂಗದ ಫ್ಲ್ಯಾಡ್ನ ಹತ್ಯೆಯಿಂದ ಭುಗಿಲೆದ್ದ ಕರಿಯರ ಪ್ರತಿಭಟನೆಗಳನ್ನು(ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಚಳವಳಿ) ಶಾಂತಗೊಳಿಸುವಲ್ಲಿ ಅವರು ತೋರಿದ ಉಪೇಕ್ಷೆ ಎನ್ನಬಹುದಾದ ನಡವಳಿಕೆ, ಕೋವಿಡ್ ನಿಯಂತ್ರಣದ ವಿಷಯದಲ್ಲಿ ತೆಗೆದುಕೊಂಡ ತಡ ಎನ್ನಬಹುದಾದ ಕ್ರಮಗಳು ಇತ್ಯಾದಿ ವಿವಾದಗಳಿಗೆ ಕಾರಣವಾದವು.

ಇವೆಲ್ಲ ಸಂಗತಿಗಳ ಬಗೆಗೆ ಬೈಡೆನ್ ಸೂಕ್ತ ರೀತಿಯಲ್ಲಿ ಮಧ್ಯಪ್ರವೇಶ ಮಾಡಬೇಕಾದ ಜವಾಬ್ದಾರಿಯಿದೆ.

ಡೆಮೊಕ್ರಟಿಕ್ ಪಕ್ಷದ ಚರಿತ್ರೆಯ ಪುಟಗಳನ್ನು ತಿರುಗಿಸಿದಾಗ, ಅದು ಕೆಲವೊಮ್ಮೆ ಸ್ವಲ್ಪ ಎಡಕ್ಕೂ ಮತ್ತು ಹೆಚ್ಚಿನ ಸಮಯ ಮಧ್ಯಸ್ತರದ ರಾಜಕಾರಣಕ್ಕೆ ಆತುಕೊಳ್ಳುತ್ತ ಬಂದಿರುವುದನ್ನು ಕಾಣಬಹುದು. ತನಗೆ ಅನುಕೂಲಕರವಾಗಿದ್ದರೇ ಅದು ಬಲಪಂಥೀಯತೆಯತ್ತ ಕೂಡ ಮುಖ ಮಾಡಿರುವುದನ್ನು ಕಾಣುತ್ತೆವೆ.

ಈ ಪಕ್ಷವನ್ನು ಯೂರೋಪಿನಲ್ಲಿರುವ ಕೆಲವು ಸಾಮಾಜಿಕ(ಸಮಾಜವಾದಿ)-ಪ್ರಜಾಪ್ರಭುತ್ವವಾದಿ(ಸೋಷಿಯಲ್ ಡೆಮೊಕ್ರಟಿಕ್) ಪಕ್ಷಗಳಿಗೆ  ಹೋಲಿಸಲಾಗದು. ಡೆಮಾಕ್ರಟಿಕ್ ಪಕ್ಷದ ಬರ್ನಿ ಸ್ಯಾಂಡರ್ಸ್‍ನಂತೆ ಜೋ ಬೈಡೆನ್ ಸಮಾಜವಾದಿಯಲ್ಲ.  ಆ ಪಕ್ಷದ ಒಳಗೆ ಕೆಲವು ಪ್ರಧಾನ ನಾಯಕರ ನಡುವೆ ಕೆಲವು ಪ್ರಮುಖ ವಿಷಯಗಳ ಬಗೆಗೆ ಭಿನ್ನಾಭಿಪ್ರಾಯಗಳೂ ಇವೆ. ಅವು ಬಹಿರಂಗವಾಗಿಯೇ ಇವೆ.

ಅಂತರರಾಷ್ಟ್ರೀಯ ಸಂಬಂಧಗಳ ವಿಚಾರದಲ್ಲಿ ಅದರಲ್ಲೂ ಮಧ್ಯ ಪ್ರಾಚ್ಯದ ದೇಶಗಳಿಗೆ ಸಂಬಂಧಿಸಿದಂತೆ ಜೋ ಬೈಡೆನ್ ಗೂ ಮತ್ತು ಮೆಸಾಚುಸೆಟ್ಸ್ನ ಸೆನೇಟರ್ ಎಲಿಝಬೆತ್ ವಾರೆನ್( ಈಕೆ ಕಾನೂನು ಶಾಸ್ತ್ರದ ಮಾಜಿ ಪ್ರಾಧ್ಯಾಪಕರು) ನಡುವೆ ಅಭಿಪ್ರಾಯಬೇಧಗಳಿವೆ. 

ವಿಶ್ವದಲ್ಲೇ ಅತ್ಯಂತ ಬಲಿಷ್ಠ ಮಿಲಿಟರಿಯನ್ನು ಹೊಂದಿರುವ ಅಮೆರಿಕಾ ಅದನ್ನು ಬಳಸಿಕೊಂಡು ಅಂತರರಾಷ್ಟ್ರೀಯ ಸಂಘರ್ಷಗಳಿಗೆ ಸಂಬಂಧಿಸಿದಂತೆ ಅಂತಹ ಪ್ರದೇಶಗಳಲ್ಲಿ ಮತ್ತು ಆಂತರಿಕವಾಗಿ (ಅಮೆರಿಕಾದಲ್ಲಿ) ಹೇಗೆ ಭದ್ರತೆಯನ್ನು ನೀಡಲಾಗುತ್ತದೆ ಎಂಬುದು ಭಿನ್ನಾಭಿಪ್ರಾಯವಿರುವ ವಿಷಯ. 

ಮಧ್ಯಪ್ರಾಚ್ಯ ಪ್ರದೇಶದಲ್ಲಿ ಸ್ವಲ್ಪ ಪ್ರಮಾಣದ ಅಮೆರಿಕಾದ ಪಡೆಗಳು ಇರಬೇಕು, ಏಕೆಂದರೆ ಕೆಲವು ಸಮಸ್ಯೆಗಳಿಗೆ ಅಮೆರಿಕಾ ಮತ್ತು ಅದರ ಮಿತ್ರ ದೇಶಗಳ ಮಿಲಿಟರಿ ಬಲ ಮಾತ್ರ ಪರಿಹಾರವನ್ನು ನೀಡಬಲ್ಲದು, ಇರಾಖ್ ಮತ್ತು ಸಿರಿಯಾದಲ್ಲಿ ಐಎಸ್ಐಎಸ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಗಳನ್ನು ಜರುಗಿಸದೇ ಹಿನ್ನಡೆದರೇ ಭಯೋತ್ಪಾದಕರು ಅಮೆರಿಕಾದ ಒಳಗೆ ಬರುತ್ತಾರೆ ಎಂಬುದು ಜೋ ಬೈಡೆನ್ ರ ನಿಲುಮೆಯಾಗಿದೆ. 

ಐಎಸ್ಐಎಸ್ ಭಯೋತ್ಪಾದನೆಗಳನ್ನು ನಿವಾರಿಸುವುದು ಅಮೆರಿಕಾದ ಪಡೆಗಳ ಕೆಲಸವಲ್ಲ. ಮಿಲಿಟರಿ ಮೂಲಕ ಪರಿಹರಿಸಲಾಗದ ಸಮಸ್ಯೆಗಳಿಗೆ ಮಿಲಿಟರಿಯನ್ನು ಬಳಸುವುದು ಸರಿಯಲ್ಲ (ಅಂದರೆ ಮಧ್ಯಪ್ರಾಚ್ಯದಿಂದ ಅಮೆರಿಕಾದ ಎಲ್ಲ ಮಿಲಿಟರಿ ಪಡೆಗಳನ್ನು ಹಿಂದೆಗೆಯಬೇಕೆಂದು ಅರ್ಥ). ಮಿಲಿಟರಿ ಬಳಕೆಯಿಂದ ಮಧ್ಯ ಪ್ರಾಚ್ಯದಲ್ಲಾಗಲಿ ಅಥವಾ ಅಮರಿಕಾದಲ್ಲಾಗಲಿ ಸುಭದ್ರತೆ ನೆಲೆಸುವುದಿಲ್ಲ. ನಮ್ಮ ಶತ್ರುಗಳನ್ನು ಸದೆಬಡಿಯಲು ಆರ್ಥಿಕ ಮತ್ತು ರಾಜತಾಂತ್ರಿಕ ಸಾಧನಗಳನ್ನು ಬಳಸಬೇಕೆಂಬುದು ಎಲಿಝಬೆತ್ ರವರ ಅಭಿಮತ.

ಇನ್ನು ಭಾರತದ ವಿಷಯಕ್ಕೆ ಬರುವುದಾದರೇ, ಡೆಮೊಕ್ರಟಿಕ್ ಪಕ್ಷದ ನೇತಾರರಾದ ಕಮಲಾ ಹ್ಯಾರಿಸ್, ಮಾರ್ಕ್ ವಾರ್ನರ್, ಪ್ರಮೀಳಾ ಜಯಪಾಲ್ ಮತ್ತು ಇತರರು ಜಮ್ಮು-ಕಾಶ್ಮೀರ, ನಾಗರೀಕತ್ವ (ತಿದ್ದುಪಡಿ) ಕಾಯಿದೆ, ಕೋಮುವಾದಿ ಮತ್ತು ಜಾತಿ ಹಿಂಸೆ, ಸರ್ಕಾರೇತರ ಸಂಸ್ಥೆಗಳ ಮೇಲಿನ ಪ್ರಹಾರಗಳು ಮತ್ತು ಮಾಧ್ಯಮದ ಸ್ವಾತಂತ್ರ್ಯ ಇತ್ಯಾದಿಗಳ ಬಗೆಗೆ ನೇರವಾಗಿ ಮಾತನಾಡಿದ್ದಾರೆ. ಇವು ನಮ್ಮ ಕೇಂದ್ರ ಸರ್ಕಾರಕ್ಕೆ ಇರುಸು ಮುರುಸು ತಂದಂತಹ ವಿಚಾರವಾಗಿ ಪರಿಣಮಿಸಿತು.

ಲಾಗಾಯ್ತಿನಿಂದಲೂ ಅಮೆರಿಕಾ ಬಂಡವಾಳಶಾಹಿ ರಾಷ್ಟ್ರ.  ಅದು ಅತ್ಯಂತ ಪ್ರಬಲ ಪ್ರಜಾಪ್ರಭುತ್ವವಾದಿ ರಾಷ್ಟ್ರ ಎಂಬ ಹೆಗ್ಗಳಿಕೆಯನ್ನೂ ಗಳಿಸಿದೆ. ಆದರೆ ಅದು ಪ್ರಜಾಪ್ರಭುತ್ವವನ್ನು ಸ್ಥಾಪಿಸುವ ನೆಪದಲ್ಲಿ ಅನೇಕ ದೇಶಗಳ ಆಂತರಿಕ ವ್ಯವಹಾರಗಳಲ್ಲಿ ಮೂಗು ತೂರಿಸಿ ಅವುಗಳ ಸ್ವಾಯತ್ತತೆಗೆ ಭಂಗ ಉಂಟು ಮಾಡಿರುವುದನ್ನು ಇತಿಹಾಸದ ಪುಟಗಳು ಸಾರಿ ಹೇಳುತ್ತವೆ. 

ಅಲ್ಲದೇ ವಾಣಿಜ್ಯ ಮತ್ತು  ವ್ಯಾಪಾರ ವಿಷಯಗಳಿಗೆ ಸಂಬಂಧಿಸಿದಂತೆ ಅದು ತನ್ನ ಹಿತದಲ್ಲಿ, ವಸಾಹತುಶಾಹಿ ನೀತಿಗಳನ್ನು ಅನುಸರಿಸುತ್ತ ಬಂದಿದೆ.  ಕಳೆದ ಸುಮಾರು ಮೂರು ದಶಕಗಳಿಂದ ಅದು ಅಂತರರಾಷ್ಟ್ರೀಯ ಮಟ್ಟದ ವಿಶ್ವ ಬ್ಯಾಂಕ್, ಅಂತರರಾಷ್ಟ್ರೀಯ ವಿತ್ತ ನಿಧಿ (ಐಎಂಎಫ್), ವಿಶ್ವ ವ್ಯಾಪಾರ ಸಂಸ್ಥೆ ಮುಂತಾದುವುಗಳ ಮೂಲಕ ನವ ಉದಾರ ನೀತಿಗಳನ್ನು ಇತರ ದೇಶಗಳ ಮೇಲೆ ಹೇರುತ್ತ ಬಂದಿದೆ. 

ಅಂದರೆ ತನ್ನ ಮಾರುಕಟ್ಟೆಗಳನ್ನು ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ಅದು ಸಾಮ್ರಾಜ್ಯಶಾಹಿ ನೀತಿಗಳನ್ನು ನವನವೀನ ರೀತಿಗಳಲ್ಲಿ ಪ್ರಯೋಗಿಸುತ್ತ ಬಂದಿದೆ.  ಅಮೆರಿಕಾದ ಅಧಿಕಾರದ ಗದ್ದುಗೆಗೆ ರಿಪಬ್ಲಿಕ್ ಅಥವಾ ಡೆಮೊಕ್ರಟಿಕ್ ಪಕ್ಷದ ಯಾರೇ ಅಧ್ಯಕ್ಷರಾದರೂ ಅವರು ಮೇಲೆ ಪ್ರಸ್ತಾಪಿಸಿರುವ ಸ್ವಹಿತದ ನೀತಿಗಳನ್ನೇ ಜಾರಿ ಮಾಡುತ್ತ ಬಂದಿದ್ದಾರೆ.

ಈ ಹಿನ್ನೆಲೆಯಲ್ಲಿ, ನಮ್ಮ ದೇಶದಲ್ಲಿ ಜೋ ಬೈಡೆನ್ ಮತ್ತು ಕಮಲ ಹ್ಯಾರಿಸ್‍ರವರ ವಿಜಯವನ್ನು ಅತಿಯಾಗಿ ಕೊಂಡಾಡುತ್ತಿರುವವರು, ಅಮೆರಿಕಾ ಆಡಳಿತದ ಟ್ರ್ಯಾಕ್ ರೆಕಾರ್ಡ್‍ನ್ನೂ ಗಮನಿಸಬೇಕು.

‍ಲೇಖಕರು Avadhi

November 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಚಂದ್ರಪ್ರಭ ಕಠಾರಿ

    ಲೇಖಕರು ಜೋ ಬೈಡೆನ್ ಗೆಲುವಿನ ಹಿನ್ನೆಲೆ ಜೊತೆಗೆ ಅದು ಜಗತ್ತಿನಾದ್ಯಂತ ಬೀರ ಬಹುದಾದ ಪರಿಣಾಮವನ್ನು ಸ್ಥೂಲವಾಗಿ ಚರ್ಚಿಸಿದ್ದಾರೆ. ಲೇಖನದಲ್ಲಿರುವಂತೆ ಜೋ ಬೈಡೆನ್ ಸಮಾಜವಾದಿಯಲ್ಲ. ಅಮೇರಿಕ ಹೇಳಿ ಕೇಳಿ ಬಂಡವಾಳಶಾಹಿಯನ್ನು ಉತ್ತೇಜಿಸುವ ರಾಷ್ಟ್ರ ಅಲ್ಲದೆ ತನ್ನ ರಾಷ್ಟ್ರದ ಹಿತವನ್ನಷ್ಟೇ ಕಾಯ್ದು ಕೊಳ್ಳುವ ಪರಿಪಾಠವುಳ್ಳದ್ದು. ಅಂಥದ್ದರಲ್ಲಿ ನಿರ್ಭೀಡೆಯಾಗಿ ಯದ್ವಾತದ್ವಾ , ಗಂಭೀರತೆಯನ್ನು ಕಳೆದುಕೊಂಡ ಮಾತನ್ನು ಉದುರಿಸುತ್ತಿದ್ದ ಟ್ರಂಪ್ ಅಂತೆ ಅಲ್ಲದ ಒಬ್ಬ ಸನ್ನಡೆತೆಯ ಅಧ್ಯಕ್ಷನ ಆಯ್ಕೆಯಾಗಿರುವ ಅಂಶಕ್ಕಷ್ಟೆ ನಾವುಗಳು ಸಮಾಧಾನ ಮಾಡಿಕೊಳ್ಳಬಹುದು. ಇನ್ನೂ ವೀಸಾ ವಿಷಯಕ್ಕೆ ಸಂಬಂಧ ಪಟ್ಟಂತೆ ಅನಿವಾಸಿ ಭಾರತೀಯರಿಗೆ ಸಹಾಯವಾಗಬಹುದೇನೊ? ಅದು ಒಂದು ಕಡೆಯಾದರೆ ನಮ್ಮ ಮಾನ್ಯ ಪ್ರಧಾನಿ ಮೋದಿಯವರು, ಅಬ್ ಕಿ ಬಾರ್ ಟ್ರಂಪ್ ಸರ್ಕಾರ್ ಎಂದು ಘಂಟಘೋಷವಾಗಿ ನಮ್ಮ ದೇಶದ ಚುನಾವಣೆಯೆಂಬಂತೆ ಉಚ್ಚರಿಸಿದ್ದು ಮುತ್ಸದ್ಧಿತನವಲ್ಲ. ಹಾಗೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಭಾರತದ ಮೂಲದವಳು ಎಂದು ಹೆಮ್ಮೆ ಪಡುವವರೇ ಬೇರೆ ದೇಶದ ಸಂಜಾತರು ಭಾರತದಲ್ಲಿ ರಾಜಕೀಯ ಅಥವಾ ಇನ್ನಿತರ ವಲಯಗಳಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿದರೆ ಸ್ವಾಗತಿಸುವರೇ? ಉತ್ತರ ಇಲ್ಲ ಎಂದೇ ಹೇಳಬೇಕಾಗುತ್ತದೆ. ಲೇಖನ ವಿವರವಾಗಿ, ಪ್ರಸ್ತುತವಾಗಿದೆ.

    ಪ್ರತಿಕ್ರಿಯೆ
  2. ಮ ಶ್ರೀ ಮುರಳಿ ಕೃಷ್ಣ

    ನನ್ನ ಬರಹವನ್ನು ಪ್ರಕಟಿಸಿದ್ದಕ್ಕೆ ಧನ್ಯವಾದಗಳು – ಮ ಶ್ರೀ ಮುರಳಿ ಕೃಷ್ಣ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: