‘ನೆನಪಾಗಿ ಉಳಿದ ಪುಸ್ತಕಕಾಶಿ’

ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

ನನ್ನ ಓದಿನ ಆರಂಭದ ದಿನಗಳಲ್ಲಿ ಸಿಕ್ಕ ಸೃಜನಶೀಲ ಸಾಹಿತ್ಯದ ಪುಸ್ತಕಗಳಲ್ಲಿ ಬೀಚಿಯವರ ಪುಸ್ತಕವೂ ಒಂದು. 

ಅದು ಬೀಚಿಯವರ ‘ಕನ್ನಡ ಎಮ್ಮೆ’ ಪುಸ್ತಕ. ಪುಸ್ತಕದ ಮುಖಪುಟದಲ್ಲಿ ಯುವಕನೊಬ್ಬ ಯಾವುದೋ ಡಿಗ್ರಿ ಪ್ರಮಾಣಪತ್ರವೊಂದನ್ನು ಎತ್ತಿ ಹಿಡಿದು ತೋರಿಸುತ್ತಾ, ಎಮ್ಮೆಯ ಮೇಲೆ ಕೂತಿದ್ದ. ಶಾಲಾದಿನಗಳಲ್ಲಿ ನನಗೆ ಬೀಚಿಯವರ ಶೈಲಿಯು ಅದೆಷ್ಟು ಇಷ್ಟವಾಗಿತ್ತೆಂದರೆ ಆ ಪುಸ್ತಕವನ್ನು ಏನಿಲ್ಲವೆಂದರೂ ಐವತ್ತು ಬಾರಿ ಓದಿದ್ದೆ. ಕೆಲವೊಮ್ಮೆ ಕನ್ನಡ ಎಮ್ಮೆಯ ಹಾಸ್ಯಮಯ ಸನ್ನಿವೇಶ-ಸಂಭಾಷಣೆಗಳನ್ನು ಓದಿ, ಗೆಳೆಯರಿಗೆ ಹೇಳಿ ಹೊಟ್ಟೆತುಂಬಾ ನಗುವುದೂ ಇರುತ್ತಿತ್ತು. ಅಂದು ನನ್ನೊಳಗೆ ಸೇರಿಕೊಂಡ ಬೀಚಿಯವರ ‘ತಿಂಮ’ ಇಂದಿಗೂ ನನ್ನ ನೆನಪುಗಳಲ್ಲಿ ಹಸಿರಾಗಿದ್ದಾನೆ. 

ನಾನು ಕನ್ನಡ ಎಮ್ಮೆ ಪುಸ್ತಕವನ್ನು ಹಲವಾರು ಬಾರಿ ಓದಿದರ ಹಿಂದೆ ಮತ್ತೊಂದು ಕಾರಣವೂ ಇತ್ತು. ಅದೇನೆಂದರೆ ಕೆಲ ವರ್ಷಗಳ ನಂತರ ಹೊಸ ಪುಸ್ತಕಗಳನ್ನು ತರಿಸಿಕೊಳ್ಳುವ ವ್ಯವಸ್ಥೆಯು ನಮ್ಮ ಮನೆಯಲ್ಲಿ ತಾತ್ಕಾಲಿಕವಾಗಿ ನಿಂತುಹೋಗಿದ್ದು. ಶಾಲಾದಿನಗಳಲ್ಲಿ ಪಠ್ಯದ ಓದಿನ ಹೊರತಾಗಿ ಬೇರೇನೂ ಮಹಾಕೆಲಸಗಳಿಲ್ಲದ ಕಾರಣ, ಯಾವುದೇ ಮಕ್ಕಳ ಪುಸ್ತಕಗಳನ್ನು ತಂದರೂ ಒಂದೆರಡು ತಾಸಿನಲ್ಲಿ ನಾನು ಓದಿ ಮುಗಿಸುತ್ತಿದ್ದೆ. ತರಂಗ, ಸುಧಾದಂತಹ ವಾರದ ಪುರವಣಿಗಳದ್ದೂ ಇದೇ ಕತೆ. ಕ್ರಮೇಣ ಇದರಿಂದ ಆಗಿದ್ದೇನೆಂದರೆ ‘ಅದೇನು ಓದುತ್ತೀಯೋ ಶಾಲಾಗ್ರಂಥಾಲಯದಲ್ಲೇ ಓದು’ ಎಂಬ ಮಾತು ಕೇಳಿಬಂದಿದ್ದು. 

ಒಳ್ಳೆಯ ಗ್ರಂಥಾಲಯವೊಂದು ನನ್ನ ಪಾಲಿಗೆ ಸಿಕ್ಕಿದ್ದು ಪ್ರೌಢಶಾಲೆಗೆ ಬಂದ ನಂತರವೇ. ಗ್ರಂಥಾಲಯದಲ್ಲಿದ್ದ ಪುಸ್ತಕಗಳನ್ನು ಕೇಳಿ ತೆಗೆದುಕೊಳ್ಳುವ ಅಪರೂಪದ ತಳಿಯ ಬೆರಳೆಣಿಕೆಯ ಮಂದಿಯಲ್ಲಿ ನಾನೂ ಇದ್ದಿದ್ದರಿಂದ ನನಗಲ್ಲಿ ವಿಶೇಷ ಆದರವೂ ಇರುತ್ತಿತ್ತು. ಈ ಮಧ್ಯೆ ತಮ್ಮ ಆಫೀಸಿನ ಹಳೆಯ ಗ್ರಂಥಾಲಯದಲ್ಲಿದ್ದ ಹಲವು ಪುಸ್ತಕಗಳನ್ನು ಗುಜರಿಗೆ ಕೊಡುತ್ತಿದ್ದಾರೆಂಬ ವಿಷಯವನ್ನು ತಿಳಿದುಕೊಂಡ ಅಪ್ಪ, ಕೆಲ ಪುಸ್ತಕಗಳನ್ನು ಮನೆಗೆ ತಂದು ನನ್ನ ಕೈಯಲ್ಲಿಟ್ಟಿದ್ದರು. ಈಗ ಇವೆಲ್ಲಾ ತಮಾಷೆ ಎನಿಸಿದರೂ ಬಹು ಸಂಭ್ರಮದ ದಿನಗಳವು. 

ಬೀಚಿಯವರ ಕನ್ನಡ ಎಮ್ಮೆ ನನ್ನತ್ತ ನಡೆದು ಬಂದಿದ್ದು ಹೀಗೆ. ಇದರ ಹೊರತಾಗಿಯೂ ನಾಲ್ಕೈದು ಒಳ್ಳೊಳ್ಳೆಯ ಪುಸ್ತಕಗಳು ಅದರಲ್ಲಿದ್ದವೆಂದು ಮಬ್ಬಾದ ನೆನಪು. ಖಾಕಿ ಬೈಂಡ್ ಹೊದಿಸಿದ ಶ್ರೀ ರಾಮಕೃಷ್ಣ ಪರಮಹಂಸರ ಜೀವನಕಥನವೂ ಅಲ್ಲಿತ್ತು. ಅದು ಸ್ವಾಮಿ ಸೋಮನಾಥಾನಂದರು ಬರೆದ ಕೃತಿ. ಇನ್ನುಳಿದಂತೆ ‘ಮಾಸ್ಟರ್ ಕ್ರಿಮಿನಲ್’ ಎಂಬ ಶೀರ್ಷಿಕೆಯೊಂದಿಗೆ ಆಕರ್ಷಕ ಮುಖಪುಟವೊಂದನ್ನು ಹೊಂದಿದ ಪುಸ್ತಕವೂ ಆ ಬಂಡಲ್ಲಿನಲ್ಲಿತ್ತು. ಶೆರ್ಲಾಕ್ಸ್ ಹೋಮ್ಸ್ ಶೈಲಿಯಲ್ಲಿ ತಲೆಯ ಮೇಲೊಂದು ಟೊಪ್ಪಿ, ಕಣ್ಣಿಗೆ ಕಪ್ಪು ಕೂಲಿಂಗ್ ಗ್ಲಾಸ್, ಬಾಯಿಯಲ್ಲೊಂದು ಪೈಪ್ ಇಟ್ಟುಕೊಂಡಿದ್ದ ಯುವಕನ ಮುಖದ ಕ್ಲೋಸಪ್ ಚಿತ್ರದ ಮೇಲ್ಹೊದಿಕೆ. ಲೇಖಕರು ಯಾರೆಂದು ನೆನಪಿಲ್ಲದ ಈ ಕೃತಿಯು ತನ್ನ ರೋಚಕ ಕ್ರೈಂ ಕತೆಗಳಿಂದ ಹಲವು ಬಾರಿ ಓದಿಸಿಕೊಂಡಿದ್ದಂತೂ ಸತ್ಯ. 

ನನಗೆ ನೆನಪಿರುವಂತೆ ಆಗೆಲ್ಲಾ ಪುಸ್ತಕದ ಬೆಲೆಗಳು ಬಹಳ ಕಮ್ಮಿಯಿರುತ್ತಿದ್ದವು. ಒಂದಂಕಿಯ ದರವನ್ನು ಹೊಂದಿದ್ದ ಪುಸ್ತಕಗಳನ್ನು ಸ್ಪರ್ಶಿಸಿದ, ಓದಿದ ನನ್ನ ಬಾಲ್ಯದ ದಿನಗಳು ನನಗಿನ್ನೂ ನೆನಪಿವೆ. ಕೆಲವು ಕೊಂಚ ದಪ್ಪದ ಪುಸ್ತಕಗಳಾಗಿದ್ದರೂ ಕೂಡ ಬೆಲೆಯು ವಿಪರೀತವೆಂಬಷ್ಟಿರಲಿಲ್ಲ. ಪುಸ್ತಕದ ಬೆಲೆಗಳು ಏಕೆ ಗಗನಕ್ಕೇರುತ್ತಿವೆ ಎಂದು ಈಚೆಗೆ ಕ್ಲಬ್ ಹೌಸಿನಲ್ಲಿ ಚರ್ಚೆಯೊಂದು ನಡೆಯುತ್ತಿದ್ದಾಗ ನಾನೂ ಕುತೂಹಲಕ್ಕೆಂದು ಸೇರಿಕೊಂಡಿದ್ದೆ. ಅಲ್ಲಿ ನಡೆಯುತ್ತಿದ್ದ ಚರ್ಚೆಗಳನ್ನು ಕೇಳಿದಾಗ ನನ್ನ ಹಳೆಯ ದಿನಗಳೆಲ್ಲಾ ಹೀಗೆ ಹಸಿರಾಗಿಬಿಟ್ಟವು. 

ಆದರೆ ಓದಿನ ನೆಲೆಯಲ್ಲಿ ಇಂತಹ ಹಳೆಯ ನೆನಪುಗಳನ್ನು, ಹೆಚ್ಚು ಕಾಲ ಕಾಪಿಟ್ಟುಕೊಂಡ ಕೀರ್ತಿಯು ದಿಲ್ಲಿಗೆ ಸೇರಬೇಕಾಗಿರುವಂಥದ್ದು. ನಾನು ದಿಲ್ಲಿ ಸೇರಿದ ನಂತರ, ಆಫೀಸಿನಲ್ಲಿ ಪ್ರತೀಬಾರಿಯೂ ಪುಸ್ತಕದ ಕೊರಿಯರ್ ಗಳು ಬಂದ ತಕ್ಷಣ ಇದು ಇವರದ್ದೇ ಎಂದು ನಿರ್ಧರಿಸುವುದು ನನ್ನ ಸಹೋದ್ಯೋಗಿಗಳ ಹೊಸ ಆಟವಾಗಿ ಬದಲಾಗಿತ್ತು. ಅವರಿಗದೊಂದು ತಮಾಷೆ. ಬಹುಷಃ ಹಲವು ಕಾಲ ಇದನ್ನು ನೋಡಿ ಅಚ್ಚರಿಗೊಳಗಾಗಿದ್ದ ನನ್ನ ಸಹೋದ್ಯೋಗಿಯೊಬ್ಬರು ಒಮ್ಮೆ ಹಳೇದಿಲ್ಲಿಗೆ ಹೋಗಿ ಬನ್ನಿ ಎಂದು ಸಲಹೆಯನ್ನು ಕೊಟ್ಟಿದ್ದರು. ಆದರೆ ಅವರ ಸಲಹೆಯು ಯಾವುದೇ ಸ್ವಾರಸ್ಯವನ್ನು ನನ್ನಲ್ಲಿ ಕೆರಳಿಸದಿದ್ದ ಕಾರಣ ಅದನ್ನು ಮರೆತುಬಿಟ್ಟಿದ್ದೆ. 

ಮುಂದೊಮ್ಮೆ ಈ ಸಂಗತಿಯು ಯಾವತ್ತೋ ನೆನಪಾದಾಗ, ವಾರದ ನಡುವೆ ಕೊಂಚ ಬಿಡುವು ಮಾಡಿಕೊಂಡು ಹಳೇದಿಲ್ಲಿಯತ್ತ ಹೋಗಿ ಬಂದೆ. ಹಳೇದಿಲ್ಲಿಯ ಇಕ್ಕಟ್ಟು ಗಲ್ಲಿಗಳಲ್ಲಿ ಮಳಿಗೆಗಳನ್ನು ಹುಡುಕಾಡುವುದೆಂದರೆ ಬಲು ಕಷ್ಟದ ಕೆಲಸ. ಅಸಲಿಗೆ ದಿಲ್ಲಿಯ ಖ್ಯಾತ ಪುಸ್ತಕಕಾಶಿಯ ವಿಸ್ತಾರದ ಅರಿವಿಲ್ಲದ ನಾನು, ಯಾವುದಾದರೊಂದು ಗಲ್ಲಿಯಲ್ಲಿ ನಾಲ್ಕೈದು ಪುಸ್ತಕ ಮಳಿಗೆಗಳನ್ನು ಇಟ್ಟಿರಬಹುದೇನೋ ಎಂಬ ಭ್ರಮೆಯಲ್ಲಿ ಅಲೆದಾಡುತ್ತಿದ್ದೆ. ನಂತರ ಆ ಜಾಗದ ಹೆಸರು ‘ದರಿಯಾಗಂಜ್’ ಮತ್ತು ಅದು ಭಾನುವಾರದಷ್ಟೇ ಸಕ್ರಿಯವಾಗಿರುತ್ತದೆ ಎಂದು ಹಿರಿಯರೊಬ್ಬರು ಕರೆದು ಬುದ್ಧಿ ಹೇಳಿದ್ದರು. ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮನೆಗೆ ಮರಳಿದ್ದಾಯಿತು. 

ಇದರ ತರುವಾಯ ಮತ್ತೊಂದು ಭಾನುವಾರದ ದಿನದಂದು ಸವಾರಿ ಮತ್ತೆ ಹೊರಟಿತ್ತು. ನೆಟ್ಟಗೆ ಕಾಲಿಡಲೂ ಜಾಗವಿರದಿದ್ದ ಇಕ್ಕಟ್ಟಿನಲ್ಲೇ ನೂರಾರು ಮಂದಿ ಪುಸ್ತಕ ವ್ಯಾಪಾರಿಗಳು ಅಲ್ಲಿ ಬೀಡುಬಿಟ್ಟಿದ್ದರು. ರಸ್ತೆಯ ಎರಡೂ ಬದಿಗಳಲ್ಲಿದ್ದ ಕಾಲುಹಾದಿಗಳೇ ಇವರ ಮಳಿಗೆಗಳು. ದರಿಯಾಗಂಜಿನ ಆ ಭಾನುವಾರದ ಮಾರುಕಟ್ಟೆ ಹೇಗಿತ್ತೆಂದರೆ ಪುಸ್ತಕಗಳ ಬಗ್ಗೆ ಕನಿಷ್ಠ ಆಸಕ್ತಿಯಿಲ್ಲದ ವ್ಯಕ್ತಿಯೂ ಕೂಡ, ಇಲ್ಲಿಯ ಫುಟ್ ಪಾತ್ ಗಳಲ್ಲಿ ಏನಿರಬಹುದೆಂದು ಕುತೂಹಲಕ್ಕೆಂದು ನೋಡಿ ಹೋದರೆ ಅಲ್ಲಿ ಅಚ್ಚರಿಯಿರಲಿಲ್ಲ. 

ಉಳಿದಂತೆ ನನ್ನಂತಹ ಪುಸ್ತಕ ಪ್ರೇಮಿಗಳು ದಾರಿಯುದ್ದಕ್ಕೂ ನಡೆಯುತ್ತಾ, ಪುಸ್ತಕಗಳನ್ನು ಆರಿಸುವ ದೃಶ್ಯವು ಸಾಮಾನ್ಯವಾಗಿತ್ತು. ನನ್ನ ಎಂಜಿನಿಯರಿಂಗ್ ದಿನಗಳಲ್ಲಿ ಹಲವಾರು ಪಠ್ಯದ ಪುಸ್ತಕಗಳನ್ನು ನಾನು ಖರೀದಿಸಲೇ ಇರಲಿಲ್ಲ. ಆಗೆಲ್ಲಾ ನಮ್ಮಂಥವರನ್ನು ಕೈಹಿಡಿದಿದ್ದು ವಿಶ್ವವಿದ್ಯಾಲಯದ ಬೃಹತ್ ಗ್ರಂಥಾಲಯಗಳು. ಏಕೆಂದರೆ ವಿದೇಶಿ ಆವೃತ್ತಿಯ ದಪ್ಪನೆಯ, ದುಬಾರಿ ಪುಸ್ತಕಗಳನ್ನು ತರಿಸಿಕೊಂಡು ಓದುವುದು ನಮಗೆಲ್ಲಾ ಕಲ್ಪನೆಗೆ ಮೀರಿದ ಸಂಗತಿಯಾಗಿತ್ತು. ಇದಕ್ಕೆ ವ್ಯತಿರಿಕ್ತವೆಂಬಂತೆ ಹಲವು ಕ್ಷೇತ್ರದ ಪಠ್ಯದ ಪುಸ್ತಕಗಳನ್ನು ನಾನಲ್ಲಿ ರಸ್ತೆಯ ಬದಿಗಳಲ್ಲೇ ಕಾಣಬಹುದಿತ್ತು. ಅಸಲಿಗೆ ಕತೆ-ಕಾದಂಬರಿಯ ಪುಸ್ತಕಗಳನ್ನು ಹೊರತುಪಡಿಸಿ ಪಠ್ಯಕ್ರಮದ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಪಟ್ಟ ಪುಸ್ತಕಗಳದ್ದೇ ಒಂದು ಪ್ರತ್ಯೇಕ ಬೀದಿಯಿತ್ತು. ಹೀಗಾಗಿ ವಿದ್ಯಾರ್ಥಿಗಳ ದಂಡೇ ಅಲ್ಲಿರುವುದನ್ನು ನಾನು ಕಂಡಿದ್ದೆ.

ಹೀಗೆ ಕೋಟೆಯ ದೈತ್ಯಗೋಡೆಗಳಿಂದ ಆವೃತವಾದ, ಇಂದಿನ ಹಳೇದಿಲ್ಲಿಯದ್ದಾದರೂ ‘ಶಹಜಹಾನಾಬಾದ್’ ಎಂದು ಒಂದು ಕಾಲದಲ್ಲಿ ಪ್ರಖ್ಯಾತವಾಗಿದ್ದ ಪ್ರದೇಶದಲ್ಲಿ ಪ್ರತೀ ಭಾನುವಾರವೂ ಅದ್ಭುತವೊಂದು ಜರುಗುತ್ತದೆ. ಮಕ್ಕಳು, ವಯಸ್ಕ, ವೃದ್ಧರೆಂಬ ಭೇದವಿಲ್ಲದೆ ಬಹುತೇಕರು ಐತಿಹಾಸಿಕ ಕೆಂಪುಕೋಟೆಯತ್ತ ಸಾಗುವ ಇಲ್ಲಿಯ ನೇತಾಜಿ ಸುಭಾಷ್ ಮಾರ್ಗದಲ್ಲಿ ಜಮೆಯಾಗಿ, ತಮಗೆ ಬೇಕಾಗಿರುವ ಪುಸ್ತಕಗಳ ತಲಾಶೆಯಲ್ಲಿ ಅಲೆಮಾರಿಗಳಂತೆ ಅಲೆದಾಡುತ್ತಿರುತ್ತಾರೆ. ಹೀಗೆ ಹುಡುಕಾಟಗಳಲ್ಲಿ ಮಗ್ನರಾಗಿರುವ ಅವರತ್ತ ಸುಸ್ತೂ ಸುಳಿಯದು, ನಿರಾಶೆಯೂ ಕಾಣದು. ಇದು ದಿಲ್ಲಿಯ ಪ್ರಖ್ಯಾತ ‘ದರಿಯಾಗಂಜ್’. ದಿಲ್ಲಿಯಲ್ಲಿರುವ ಹತ್ತಾರು ಅಪರೂಪದ ಗಲ್ಲಿಗಳಂತೆ ತನ್ನ ವೈಶಿಷ್ಟ್ಯತೆಯಿಂದಲೇ ಮನೆಮಾತಾಗಿರುವ ಪುಸ್ತಕಗಳ ಮಹಾಸಾಗರ.   

ಕಳೆದ ಐದು ದಶಕಗಳಿಂದ ದಿಲ್ಲಿಯ `ದರಿಯಾಗಂಜ್’ ಎಂದರೆ ‘ಪುಸ್ತಕಗಳು’. ಅಷ್ಟೇ! ಹಾಗೆಂದು ಈ ಸೊಬಗನ್ನು ನೋಡಲು ನಿತ್ಯವೂ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಭಾನುವಾರದವರೆಗೂ ಕಾಯಬೇಕು. ಅಂದಾಜು ಒಂದೂವರೆ ಕಿಲೋಮೀಟರುಗಳಷ್ಟು ರಸ್ತೆಯ ಇಕ್ಕೆಲಗಳಲ್ಲೂ ಹಬ್ಬಿಕೊಂಡಿರುವ ಲಕ್ಷಗಟ್ಟಲೆ ಪುಸ್ತಕಗಳ ವೈವಿಧ್ಯ ಮತ್ತು ಮಾರಾಟದ ಪರಿಯನ್ನು ನೋಡಿಯೇ ಅನುಭವಿಸಬೇಕು. ತರಹೇವಾರಿ ಸ್ಪರ್ಧಾತ್ಮಕ ಪರೀಕ್ಷೆಗಳು, ಕಾನೂನು, ವೈದ್ಯಕೀಯ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಮನೋವಿಜ್ಞಾನ, ತತ್ವಶಾಸ್ತ್ರಗಳಿಂದ ಹಿಡಿದು ಕಥೆ, ಕವನ, ಕಾದಂಬರಿ, ಪ್ರಬಂಧ, ಪ್ರವಾಸಕಥನ, ಆತ್ಮಕಥನ, ಬಾಲಸಾಹಿತ್ಯ, ಕಲೆ, ಸಂಗೀತ, ಆಟೋಟ… ಹೀಗೆ ಏನುಂಟು ಏನಿಲ್ಲವೆಂಬಷ್ಟಿನ ವೈವಿಧ್ಯ. ತನ್ನ ಹೆಸರಿನಲ್ಲೇ `ದರಿಯಾ’ ಅನ್ನು ಹೊಂದಿರುವ ಈ ‘ಜೀವನದಿ’ಯಲ್ಲಿ ಬರೋಬ್ಬರಿ ಐದು ದಶಕಗಳಿಂದ ಜ್ಞಾನದ ನಿರಂತರ ಹರಿವು.  

ಒಂದೆರಡು ಚಿನ್ನದ ನಾಣ್ಯಗಳ ತಲಾಶೆಯಲ್ಲಿ ಹೊರಡುವ ಸಾಹಸಿಯೊಬ್ಬ ಆಕಸ್ಮಿಕವಾಗಿ ಕೊಪ್ಪರಿಗೆಯೊಂದಕ್ಕೆ ಎಡತಾಕಿ ಅದ್ಹೇಗೆ ಗಾಬರಿ ಬೀಳುವನೋ, ದರಿಯಾಗಂಜ್ ಪ್ರದೇಶಕ್ಕೆ ಪುಸ್ತಕಗಳ ತಲಾಶೆಯಲ್ಲಿ ಬರುವ ಆಸಕ್ತನೊಬ್ಬ ಇಂಥಾ ಅಚ್ಚರಿಗಳನ್ನು ಅಪ್ಪಿಕೊಳ್ಳುವ ಮಾನಸಿಕ ತಯಾರಿಯನ್ನಿಟ್ಟುಕೊಂಡೇ ಬಂದಿರುತ್ತಾನೆ. ಏಕೆಂದರೆ ಮುದ್ರಣವು ನಿಂತು ದಶಕಗಳೇ ಆಗಿರುವ ಅಮೂಲ್ಯ ಪುಸ್ತಕವೊಂದು ದರಿಯಾಗಂಜ್ ಬಾಜಾರಿನಲ್ಲಿ ಅಚಾನಕ್ಕಾಗಿ ‘ಹಾಯ್’ ಎನ್ನಬಹುದು.

ಸಾವಿರಾರು ರೂಪಾಯಿ ಬೆಲೆಬಾಳುವ, ವಿದೇಶದಿಂದಲೇ ತರಿಸಿಕೊಂಡು ಓದಬೇಕು ಎಂಬಂತಿರುವ ಕೃತಿಗಳು ಬೇರ್ಯಾವುದೋ ಪುಸ್ತಕಗಳ ರಾಶಿಯಲ್ಲಿ ನಮಗಿಲ್ಲಿ ದಕ್ಕಬಹುದು. ರಸ್ತೆಯ ಬದಿಗಳಲ್ಲಿ ಇನ್ನೂರೈವತ್ತಕ್ಕೂ ಹೆಚ್ಚು ವ್ಯಾಪಾರಿಗಳು ಉತ್ಸಾಹದಿಂದ ಮಾರುತ್ತಿರುವ, ನಡೆದಷ್ಟೂ ಮುಗಿಯದಂತಿರುವ ಪುಸ್ತಕದಂಗಡಿಗಳ ಸಾಲುಗಳನ್ನು ಕಂಡು ಪುಸ್ತಕಪ್ರೇಮಿಯೊಬ್ಬ ಮಿಠಾಯಿ ಅಂಗಡಿಯೊಂದರಲ್ಲಿ ಗೊಂದಲಕ್ಕೀಡಾಗಿ ನಿಂತ ಮಗುವಿನಂತೆ ಗಲಿಬಿಲಿಯಾಗಬಹುದು. ದರಿಯಾಗಂಜ್ ಎಂಬ ಪುಸ್ತಕಕಾಶಿಯ ಕಮಾಲ್ ಇದು.

ಇಂದು ಹತ್ತು ರೂಪಾಯಿಗೆ ಒಂದು ಸಿಗರೇಟು ಸಿಗದಿರಬಹುದು. ಆದರೆ ಇನ್ನೂರೈವತ್ತು-ಮುನ್ನೂರು ಪುಟಗಳ ಸೆಕೆಂಡ್-ಹ್ಯಾಂಡ್ ಕಾದಂಬರಿಯೋ, ಆತ್ಮಕಥನವೋ ದರಿಯಾಗಂಜ್ ನಲ್ಲಿ ಕೇವಲ ಹತ್ತಿಪ್ಪತ್ತು ರೂಪಾಯಿಗಳಿಗೆ ತೀರಾ ಇತ್ತೀಚೆಗಿನವರೆಗೂ ಸಿಕ್ಕಿಬಿಡುತ್ತಿತ್ತು. ತರಕಾರಿಯಂತೆ ಕಿಲೋಗಳ ಲೆಕ್ಕದಲ್ಲಿ ಪುಸ್ತಕಗಳು ಸಿಗುವ, ನೂರು-ನೂರೈವತ್ತು ರೂಪಾಯಿಗಳಿಗೆ ನಾಲ್ಕೈದು ಒಳ್ಳೊಳ್ಳೆಯ ಪುಸ್ತಕಗಳನ್ನು ತನ್ನದಾಗಿಸಿಕೊಳ್ಳುವ ಅವಕಾಶವು ದರಿಯಾಗಂಜ್ ನಿಂದಾಗಿ ದಿಲ್ಲಿ ನಿವಾಸಿಗಳಿಗೆ ದೊರಕಿತ್ತು. ಹೀಗಾಗಿ ವರ್ಷದ ಅಷ್ಟೂ ಭಾನುವಾರಗಳಂದು ವಿದ್ಯಾರ್ಥಿಗಳಿಗಿದು ಕೈಗೆಟಕುವ ಬಾಜಾರು, ಪುಸ್ತಕಪ್ರೇಮಿಗಳಿಗೆ ಸ್ವರ್ಗ. ಜನಸಾಮಾನ್ಯರಿಗೆ ಓದನ್ನು ಬದುಕಿಗೆ ಮತ್ತಷ್ಟು ಹತ್ತಿರವಾಗಿಸಿದ ತಾಣ. 

ಇಂತಿಪ್ಪ ದರಿಯಾಗಂಜ್ ಮುಂದೆ ವ್ಯವಸ್ಥೆಯ ಕಣ್ಣಿಗೆ ಕುಕ್ಕಿದಂತಾಗಿ, ಟ್ರಾಫಿಕ್ ಸಮಸ್ಯೆಗಳ ನೆಪದಲ್ಲಿ ಮುಚ್ಚಿಹೋಗುವ ಸಾಧ್ಯತೆಗಳೂ ದಟ್ಟವಾಗುತ್ತಾ ಹೋದವು. ದರಿಯಾಗಂಜ್ ಪ್ರದೇಶದ ರಸ್ತೆಬದಿಯ ಪುಸ್ತಕಮಳಿಗೆಗಳನ್ನು ಶಾಶ್ವತವಾಗಿ ಮುಚ್ಚಲಾಗುವುದು ಎಂಬ ಸುದ್ದಿಯು ಬರಸಿಡಿಲಿನಂತೆ ಅಪ್ಪಳಿಸುತ್ತಲೇ ನೂರಾರು ಪುಸ್ತಕವ್ಯಾಪಾರಿಗಳ ನೆಮ್ಮದಿಗೂ, ಅನ್ನಕ್ಕೂ ಕಲ್ಲುಬಿದ್ದು ಅಲ್ಲೋಲಕಲ್ಲೋಲವುಂಟಾಯಿತು. ಇತ್ತ ವಿದ್ಯಾರ್ಥಿಗಳು, ಪ್ರವಾಸಿಗರು, ಪುಸ್ತಕಪ್ರೇಮಿಗಳಿಂದ ಹಿಡಿದು ಜನಸಾಮಾನ್ಯರೂ ಕೂಡ ಮನದಿಚ್ಛೆ ಓದಲು ಸಿಗುವಂತಿದ್ದ ಪುಸ್ತಕಗಳೆಂಬ ಜ್ಞಾನಭಂಡಾರಗಳು ಇನ್ನು ಕೇವಲ ನೆನಪಾಗಿಯಷ್ಟೇ ಉಳಿಯಲಿವೆಯೇನೋ ಎಂದು ನಿರಾಶೆಗೀಡಾದರು. 

ದರಿಯಾಗಂಜ್ ಬದಲಾಗಿ ಹೊಸ ವ್ಯವಸ್ಥಿತ ಸ್ಥಳವೊಂದನ್ನು ನೀಡುವ ಅಭಯವಿದ್ದರೂ ಕೂಡ ಹರಿಯಾಣಾ, ಉತ್ತರ ಪ್ರದೇಶ ಮತ್ತು ಬಿಹಾರ ಮೂಲಗಳ ಅದೆಷ್ಟೋ ಪುಸ್ತಕ ವ್ಯಾಪಾರಿಗಳು ಕೆಲ ಕಾಲ ಕಂಗಾಲಾಗಿದ್ದಂತೂ ಸತ್ಯ. ಏಕೆಂದರೆ ತಾವು ದಿಲ್ಲಿಯ ಯಾವ ಭಾಗಕ್ಕೆ ಹೊಸದಾಗಿ ಹೋದರೂ ಹಳೇದಿಲ್ಲಿಯ ‘ದರಿಯಾಗಂಜ್’ ಎಂಬ ಅದ್ಭುತವನ್ನು ಮತ್ತೆ ಸೃಷ್ಟಿಸುವುದು ಕಷ್ಟ ಎಂಬ ಮಾತು ಇಲ್ಲಿಯ ಪುಸ್ತಕ ವ್ಯಾಪಾರಿಗಳಲ್ಲಿತ್ತು. ಅದು ಬಹುತೇಕ ಎಲ್ಲರ ಮನದ ಮಾತೂ ಆಗಿತ್ತು. ಹೀಗಾಗಿಯೇ ಈ ಮಹತ್ವದ ತೀರ್ಪು ದಿಲ್ಲಿಯ ಉಚ್ಚ ನ್ಯಾಯಾಲಯದಿಂದ ಹೊರಬಿದ್ದಾಗ ‘ನ್ಯಾಯಾಲಯ ಗೆದ್ದಿತು; ಆದರೆ ದಿಲ್ಲಿ ಸೋತಿತು’, ಎಂದು ‘ದ ಪ್ರಿಂಟ್’ ಪತ್ರಿಕೆಯು ಘಟನೆಯನ್ನು ದಾಖಲಿಸಿತ್ತು. 

ಸುಮಾರು ಐದು ದಶಕಗಳ ಹಿಂದೆ ದರಿಯಾಗಂಜಿನ ಭಾನುವಾರದ ಮಾರುಕಟ್ಟೆಯ ಹುಟ್ಟಿಕೊಂಡಿದ್ದು ದಿಲ್ಲಿಯ ಜಾಮಾ ಮಸೀದಿಯ ಹಿಂಭಾಗದ ಪ್ರದೇಶದಲ್ಲಿ. ಗುಜರಿಯಿಂದ ತರಿಸಲಾಗುತ್ತಿದ್ದ ಪುಸ್ತಕಗಳನ್ನು ಅಗ್ಗದ ಬೆಲೆಗೆ ಮಾರುತ್ತಿದ್ದ ಬೆರಳೆಣಿಕೆಯ ಪುಸ್ತಕ ವ್ಯಾಪಾರಿಗಳಷ್ಟೇ ಆಗ ಅಲ್ಲಿದ್ದರಂತೆ. ನಂತರದ ದಿನಗಳಲ್ಲಿ ಜಾಮಾ ಮಸೀದಿ ಮತ್ತು ಕೆಂಪು ಕೋಟೆಯ ಸುತ್ತಮುತ್ತ ಹಲವು ಬಾರಿ ಸ್ಥಳ ಬದಲಾವಣೆಗಳಾದ ನಂತರ, ಕ್ರಮೇಣ ನೇತಾಜಿ ಸುಭಾಷ್ ಮಾರ್ಗ ಮತ್ತು ಆಸಿಫ್ ಅಲಿ ಮಾರ್ಗದಲ್ಲಿ ಇಂಗ್ಲಿಷ್ ವರ್ಣಮಾಲೆಯ “ಎಲ್” ಆಕಾರದ ಮಾರುಕಟ್ಟೆಯೊಂದು ರೂಪುಗೊಂಡಿತು. ಹೀಗೆ ಹುಟ್ಟಿಕೊಂಡ ಪುಸ್ತಕಗಳ ಮಾರುಕಟ್ಟೆಯೊಂದು ದಿಲ್ಲಿಯಲ್ಲಿ ಓದಿನ ಸಂಸ್ಕøತಿಯನ್ನೇ ಸೃಷ್ಟಿಸಿದ್ದು ಮಾತ್ರ ವಿಶೇಷ.

ದರಿಯಾಗಂಜ್ ಪುಸ್ತಕ ಮಾರುಕಟ್ಟೆಯ ವಿಶೇಷವೆಂದರೆ ಸಾರ್ವಜನಿಕರು ನಿತ್ಯ ಓಡಾಡುತ್ತಿದ್ದ ಜಾಗಗಳಲ್ಲೇ ಇದ್ದ ರಾಶಿ ಪುಸ್ತಕಗಳು, ಪ್ರತೀ ಭಾನುವಾರದಂದು ಬಹುತೇಕ ಎಲ್ಲರನ್ನು ತಮ್ಮತ್ತ ಸೆಳೆಯುತ್ತಾ ಸಹಜವಾಗಿ ಬೆಳೆದವು. ಹೀಗಾಗಿ ಅದು ಕೇವಲ ಪುಸ್ತಕಪ್ರಿಯರಿಗಷ್ಟೇ ಮೀಸಲಾಗದೆ ಒಟ್ಟಾರೆ ಜನಸಂದಣಿಯನ್ನೂ ಕೂಡ ತನ್ನತ್ತ ತಿರುಗಿ ನೋಡುವಂತೆ ಮಾಡಿತ್ತು. ಕುತೂಹಲಕ್ಕೆಂದು ಬಂದವರು ಅಗ್ಗದ ದರವನ್ನು ಕಂಡು ಪುಳಕಿತರಾಗಿ ಒಂದೆರಡು ಪುಸ್ತಕಗಳನ್ನು ಖರೀದಿಸುವುದು, ತಮ್ಮ ಮಕ್ಕಳಿಗೆ-ಪ್ರೀತಿಪಾತ್ರರಿಗಾಗಿ ಪುಸ್ತಕಗಳನ್ನು ಖರೀದಿಸುವುದು, ದರಿಯಾಗಂಜಿಗೊಮ್ಮೆ ಹೋಗಿಬನ್ನಿ ಎಂದು ಪುಸ್ತಕಪ್ರಿಯರಿಗೆ ಸಲಹೆಗಳನ್ನು ನೀಡುವುದು ಸಾಮಾನ್ಯವಾಯಿತು. ಬೆರಳೆಣಿಕೆಯ ಪುಸ್ತಕವ್ಯಾಪಾರಿಗಳಷ್ಟೇ ಇದ್ದ ದರಿಯಾಗಂಜ್ ಮುಂದೆ ಇನ್ನೂರಕ್ಕೂ ಹೆಚ್ಚಿನ ಪುಸ್ತಕವ್ಯಾಪಾರಿಗಳ ಬೀಡಾಗಿ, ಪುಸ್ತಕಗಳ ಕಾಶಿಯಾಗಿ ಮಾರ್ಪಾಡಾಗಿದ್ದು ಈ ಬಾಜಾರಿನ ಅದ್ಭುತ ವಿಕಾಸಕ್ಕೆ ಸಾಕ್ಷಿ. 

ದರಿಯಾಗಂಜ್ ಐತಿಹಾಸಿಕ ಮಾರುಕಟ್ಟೆಯು ಪ್ರಸ್ತುತ ಹಳೇದಿಲ್ಲಿಯ ಡೆಲೈಟ್ ಸಿನೆಮಾದ ಮುಂಭಾಗದಲ್ಲಿರುವ ಮಹಿಳಾ ಹಾಟ್ ಗೆ ಸ್ಥಳಾಂತರಗೊಂಡಿದೆ. ಈ ಮಧ್ಯೆ ವ್ಯಾಪಾರಿಗಳಿಗೆ ಕೊರೋನಾ ಬರೆಯೂ ಬಿದ್ದಾಗಿದೆ. ಇವೆಲ್ಲವುಗಳೊಂದಿಗೆ ಸಹಜವಾಗಿ ಇಲ್ಲಿ ಹಲವು ಬದಲಾವಣೆಗಳಾಗಿವೆ. ಪ್ರಾಯಷಃ ಹಳೇದಿಲ್ಲಿಯನ್ನು ವ್ಯವಸ್ಥಿತವಾಗಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಆರಂಭವಾದ ಗಂಭೀರ ಪ್ರಯತ್ನವು ತಕ್ಕಮಟ್ಟಿಗೆ ಕಾರ್ಯಗತವಾಗಿದ್ದೇ ಇಲ್ಲಿಂದ. ಸ್ಥಳೀಯರು ಹೇಳುವಂತೆ ಜನನಿಬಿಡ ಬೀದಿಗಳು ಕೊಂಚ ತೆರವುಗೊಂಡಿದ್ದರಿಂದಾಗಿ ಜೇಬುಗಳ್ಳತನದ ಪ್ರಕರಣಗಳೂ ಕಮ್ಮಿಯಾಗಿವೆ. ಈ ನಿಟ್ಟಿನಲ್ಲಿ ಇದೊಂದು ಒಳ್ಳೆಯ ಬೆಳವಣಿಗೆ. 

ಇವೆಲ್ಲದರ ಹೊರತಾಗಿ ಇದಕ್ಕೊಂದು ಭಿನ್ನ ಮುಖವೂ ಇದೆ. ದಿಲ್ಲಿ ಶಹರಕ್ಕೆ ಬಾಜಾರುಗಳೆಂದರೆ ಕೇವಲ ವಾಣಿಜ್ಯ ಕೇಂದ್ರಗಳಲ್ಲ. ಬದಲಾಗಿ ತನ್ನ ಸಾಂಸ್ಕøತಿಕ ಗುರುತೂ ಕೂಡ. ಹೊಸದಾಗಿ ನಿರ್ಮಾಣಗೊಂಡ ಈ ‘ಹಾಟ್’ ಮಾರುಕಟ್ಟೆಯು ತನ್ನ ನಿರ್ಮಾಣ ಮತ್ತು ಪರಿಕಲ್ಪನೆಯ ನಿಟ್ಟಿನಲ್ಲಿ ವ್ಯವಸ್ಥಿತವಾಗಿರಬಹುದು. ಆದರೆ ಜನಸಾಮಾನ್ಯರ ಪಾಲಿಗೆ ಹಳೇದಿಲ್ಲಿಯ ಇಕ್ಕಟ್ಟು ಬೀದಿಗಳಲ್ಲಿ ಓಡಾಡುತ್ತಲೇ ಪುಸ್ತಕಗಳನ್ನು ಆರಿಸುವುದು, ಶಹರವನ್ನು ಹೀಗೊಂದು ನೆಲೆಯಲ್ಲಿ ತಮ್ಮೊಳಗೆ ಇಳಿಸಿಕೊಳ್ಳುವ ಒಂದು ಪ್ರಕ್ರಿಯೆಯೂ ಆಗಿತ್ತು.

ಹೀಗಾಗಿ ‘ಪಟ್ರಿ ಬಜಾರ್’ ಎಂಬ ಹೆಸರಿನಲ್ಲಿ ರಸ್ತೆಯ ಬದಿಯಲ್ಲಿದ್ದ ಮಾರುಕಟ್ಟೆಯು ಒಟ್ಟಾರೆಯಾಗಿ ಎಲ್ಲರ ಭಾಗವೂ ಆಗಿತ್ತು. ಇಂದು ಮುಚ್ಚಿದ ಆವರಣದಲ್ಲಿರುವ ಪ್ರತ್ಯೇಕ ವಾಣಿಜ್ಯ ಕೇಂದ್ರವನ್ನು ವಿಶೇಷವಾಗಿ ಪುಸ್ತಕಪ್ರಿಯರು ಹುಡುಕಿಕೊಂಡು ಹೋಗುವುದು ಸಹಜವೇ ಹೊರತು, ಹಿಂದಿನ ದಿನಗಳಂತೆ ಅದು ಎಲ್ಲರನ್ನೂ ಏಕಕಾಲದಲ್ಲಿ, ಸ್ವಾಭಾವಿಕ ನೆಲೆಯಲ್ಲಿ ಆಕರ್ಷಿಸುವುದು ಕಷ್ಟಸಾಧ್ಯವೇ ಸರಿ.

ದಿಲ್ಲಿ ನಿವಾಸಿಗಳ ಮಟ್ಟಿಗೆ ದರಿಯಾಗಂಜ್ ಪಟ್ರೀ ಕಿತಾಬ್ ಬಜಾರ್ ಎನ್ನುವುದೊಂದು ಸವಿಸವಿ ನೆನಪು. ಐತಿಹಾಸಿಕ ಮಾರುಕಟ್ಟೆಯಾಗಿದ್ದ ಈ ಪ್ರದೇಶಕ್ಕೆ ಎಲ್ಲರಲ್ಲೂ ತನ್ನತನವನ್ನು ಮೂಡಿಸುವ ಒಂದು ಸೊಗಸಿತ್ತು. ಬಂದುಹೋದವರನ್ನೂ ತನ್ನತ್ತ ಸೆಳೆಯುವ ಒಂದು ದೇಸಿ ಆಕರ್ಷಣೆಯಿತ್ತು. ಇಂದು ಹಲವು ಅನಿವಾರ್ಯ ಕಾರಣಗಳಿಂದಾಗಿ ಮಾರುಕಟ್ಟೆಯ ರೂಪುರೇಷೆಯು ಬದಲಾಗಿದೆ. ಸಹಜವಾಗಿ ಈ ಬದಲಾವಣೆಗೆ ತೆರೆದುಕೊಳ್ಳುವ ಅನಿವಾರ್ಯತೆಯು ವ್ಯಾಪಾರಿಗಳಿಗೂ, ಆಸಕ್ತರಿಗೂ ಬಂದೊದಗಿದೆ. 

ದರಿಯಾಗಂಜ್ ಪ್ರದೇಶವು ದಿಲ್ಲಿಗಾಗಿ ಸೃಷ್ಟಿಸಿದ್ದ ಅಪೂರ್ವ ಸಾಂಸ್ಕøತಿಕ ಗುರುತನ್ನು ಈ ಹೊಸ ಬೆಳವಣಿಗೆಗಳು ಎಷ್ಟರ ಮಟ್ಟಿಗೆ ಕಾದಿರಿಸಿಕೊಂಡು ಹೋಗಲಿವೆಯೆಂಬುದನ್ನು ಕಾಲವೇ ಹೇಳಬೇಕು!

‍ಲೇಖಕರು Admin

September 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: