ಮಧುರಾ ಕರ್ಣಮ್ ಅವರ ‘ಅವತಾರ’

ವಿದ್ಯಾ ಶಿರಹಟ್ಟಿ

ಮುನ್ನುಡಿಯಲ್ಲಿ ಎಂ.ಎಸ್.ಆಶಾದೇವಿಯವರು ಅತ್ಯಂತ ಸೂಕ್ತವಾಗಿ ಹೇಳಿರುವಂತೆ ಕಥಾಸಂಕಲನ ‘ಅವತಾರ’ದ ಈ ಹತ್ತು ಕತೆಗಳಲ್ಲೂ ಮಧುರಾ ಕಾಲನ ಚಲನೆಯೊಂದಿಗೆ ತಮ್ಮನ್ನೇ ತಾವು ಅರ್ಥ ಮಾಡಿಕೊಳ್ಳಲು ಹಂಬಲಿಸುತ್ತಿದ್ದಾರೆ. ಇದೇ ಹಂಬಲ ಇಲ್ಲಿಯ ಪ್ರತಿಯೊಂದು ಕತೆಯಲ್ಲಿ ಸಹಜತೆಯಿಂದ ಬಿಂಬಿತವಾದದ್ದನ್ನು ಕಾಣಬಹುದು.

ಹೊಟ್ಟೆಗೊಂದು ಆಧಾರ ಕಾಣಲೆಂದು ಕೇವಲ ತಾಯಿಯ ಆಶೀರ್ವಾದ ಹಾಗೂ ಒಂದು ದೇವಿಯ ಪಟವನ್ನು ಹಿಡಿದು ನಗರಕ್ಕೆ ಬಂದ ಸುಬ್ಬಾ ತೊಂದರೆಗೆ ಸಿಲುಕಿಕೊಳ್ಳುತ್ತಾನೆ. ಆಗ ತೋಚಿದ್ದನ್ನು ಮಾತಾಡಿ ಆಕಸ್ಮಿಕವಾಗಿ ಅದೇ ನಿಜವಾದಾಗ ಸಮಾಜದ ಜನ ಅವನನ್ನು ಕಾರಣಿಕ (ಅವತಾರ) ಪುರುಷನ ಸ್ಥಾನಕ್ಕೆ ಏರಿಸಿ ಸುಬ್ಬಾಸ್ವಾಮಿ ಮಾಡಿ ಕೂರಿಸಿಬಿಡುತ್ತಾರೆ. ಅವನ ಕುಟುಂಬ ಅದನ್ನೇ ಬಂಡವಾಳ ಮಾಡಿಕೊಂಡು ಸಾಮಾನ್ಯರ ಮುಗ್ಧತೆ, ಮೌಢ್ಯಗಳ ಬೆಲೆ ಕಟ್ಟುತ್ತಾ ಅವನ ಇಡೀ ವ್ಯಕ್ತಿತ್ವವನ್ನೇ ವ್ಯಾಪಾರದ ಸರಕು ಮಾಡಿಬಿಡುತ್ತಾರೆ.

ತನ್ನ ಹೆಸರಲ್ಲಿ ನಡೆವ ದುರ್ವ್ಯವಹಾರಗಳ ಬಗ್ಗೆ ಸುಬ್ಬಾ ದನಿ ಎತ್ತಿದಾಗಲೆಲ್ಲ ಅವನನ್ನು ಬಗ್ಗು ಬಡಿದು ಮೂಲೆಗುಂಪು ಮಾಡಿಬಿಡುತ್ತಾರೆ. ಅದೆಲ್ಲ ಅಸಹನೀಯವಾದಾಗ ಅವನು ತೆಗೆದುಕೊಂಡ ನಿರ್ಧಾರ ಅವನಿಗೆ ಆತ್ಮಸಂತೋಷ ನೀಡಿದರೆ, ಅದಕ್ಕೂ ಪಾರಮಾರ್ಥಿಕ ಬಣ್ಣ ಲೇಪಿಸುವ ಮನೆಯವರ ಕುಮ್ಮಕ್ಕು ಸಮಾಜ ವ್ಯವಸ್ಥೆಗೆ ಕನ್ನಡಿ ಹಿಡಿಯುತ್ತದೆ. 2016ರ ಕರ್ಮವೀರ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಸರಳ, ಸುಂದರ ಕತೆ.

ಬಡವರ ಮನೆಯ ಹುಡುಗಿಯಾದರೂ ಅಪ್ಪ ಅಮ್ಮನ ಮುಚ್ಚಟೆಯಲ್ಲಿ ಬೆಳೆದ ನಾಗೂ ಊರ ಗೌಡರ ಮನೆಯಾಳು ಪ್ರಕಾಶನನ್ನು ಮನಸಾರೆ ಪ್ರೀತಿಸಿದ್ದರೂ ಪರಿಸ್ಥಿತಿಯ ಹೊಡೆತಕ್ಕೆ ಸಿಕ್ಕು ಊರು ಬಿಟ್ಟು ಮಾವನ ಮನೆ ಸೇರಬೇಕಾಯಿತು. ನಾಲ್ಕೂ ಬೆರಳಿನಿಂದ ರಂಗವಲ್ಲಿ ಹಾಕುವ ಪರಿಣಿತಿ ಹೊಂದಿದ್ದ ನಾಗೂ ಮಾವನ ಜೊತೆಯಲ್ಲಿ ಸ್ಟುಡಿಯೋ ಕೆಲಸಕ್ಕೆ ಸೇರಿ ತನ್ನ ಒಳ ಅಲಂಕಾರದ ಒಳ್ಳೆಯ ನಿರ್ವಹಣೆಯಿಂದಾಗಿ ನಿರ್ದೇಶಕ ಆರ್ಮುಗಂ ದೃಷ್ಟಿಗೆ ಬಿದ್ದು ಆಕಸ್ಮಿಕವಾದ ಸನ್ನಿವೇಶದಲ್ಲಿ ನಟಿ ಸೌದಾಮಿನಿಯಾಗಿ ಬದಲಾಗುತ್ತಾಳೆ. ಆದರೆ ಈ ಮನರಂಜನಾ ಲೋಕದ ಕೆಸರು ಅವಳನ್ನು ಪತಿತೆಯಾಗಿಸಿ ಅವಳು ಮಾವ, ಅತ್ತೆಯ ಸ್ವಾರ್ಥದ ಚಿನ್ನದ ಪಂಜರದಲ್ಲಿ ಬಂದಿಯಾಗಿ ಬದುಕು ಸವೆಸುವ ದಾರುಣತೆಗೆ ತುತ್ತಾಗುತ್ತಾಳೆ. ನಂತರದ ರೋಚಕ ತಿರುವು ಕತೆಗೊಂದು ವಿಶೇಷತೆಯನ್ನು ನೀಡಿರುವುದು ಲೇಖಕಿಯ ಸಶಕ್ತ ರಚನಾ ಕೌಶಲ್ಯಕ್ಕೆ ನಿದರ್ಶನ.

ಮಧುರಾ ಅವರ ಕಥನ ಕಲೆಗೆ ಕನ್ನಡಿ ಹಿಡಿಯುವ ಮನೋಜ್ಞ ಕತೆ ‘ಪರಂಪರಾನುಗತ’. ಪರಂಪರಾನುಗತವಾಗಿ ದತ್ತಪ್ಪನ ಪೂಜೆಯಲ್ಲಿ ತಮ್ಮನ್ನು ಹೃದಯಪೂರ್ವಕ ತೊಡಗಿಸಿಕೊಂಡ ಶ್ರೀಪಾದರಾಯರಿಗೆ ‘ದತ್ತಪ್ಪ ಬರೇ ಮೂರ್ತೆಲ್ಲ, ನಮ್ಮ ನಂಬಿಕಿ ಅಖಂಡ ವಿಶ್ವಾಸದ ಜೋಡಿ ಜೀವ’ ಅಂಥ ದತ್ತಪ್ಪನ ಪೂಜೆ ತಮ್ಮದೇ ಅಧಿಕಾರ ಎಂದು ನಂಬಿ ಬದುಕಿದ್ದವರಿಗೆ ಕೊನೆಗಾಲದಲ್ಲಿ ಆ ಜವಾಬ್ದಾರಿಯನ್ನು ಕಿರಿಯರಾರೂ ತಮ್ಮದೇ ಕಾರಣ, ಪರ್ಯಾಯ ನೀಡಿ ಸ್ವೀಕರಿಸದೇ ಹೋದಾಗ ಅತ್ಯಂತ ಕಠಿಣ ನಿರ್ಣಯ ತೆಗೆದುಕೊಳ್ಳುವ ದುಸ್ತರ ಪರಿಸ್ಥಿತಿ ಉಂಟಾಗುತ್ತದೆ. ಆಗ ವಿಚಿತ್ರ ತಿರುವು ತೆಗೆದುಕೊಂಡು ಅಂತ್ಯವಾಗುವ ಕತೆ ಮನವನ್ನು ಆರ್ದ್ರಗೊಳಿಸಿಬಿಡುತ್ತದೆ.

ಸಮಸ್ಯೆಗಳೆಲ್ಲ ಒಟ್ಟಿಗೇ ನುಗ್ಗಿಬರುವುದು ಬಾಳಲ್ಲಿ ಎಲ್ಲರೂ ಒಮ್ಮಿಲ್ಲೊಮ್ಮೆ ಎದುರಿಸಲೇ ಬೇಕಾದ ಸ್ಥಿತಿ. ಅಂಥ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಕಥಾನಾಯಕ ಮಾಡುವ ಊಹಾತೀತ ಯೋಜನೆ, ಅದರ ವೈಫಲ್ಯ, ಆ ಪ್ರಯತ್ನದಲ್ಲಿ ಇನ್ನೂ ಹೆಚ್ಚು ಬೆಳಕಿಗೆ ಬರುವ ಅವನ ಮಾನವೀಯತೆ – ಈ ಎಲ್ಲವೂ ‘ಹುಡುಕಿದರೆ ದಾರಿ’ ಕತೆಗೆ ಹೊಸತನ ತಂದಿದ್ದರೂ ವಸ್ತು ಸ್ವಲ್ಪ ಹೆಚ್ಚು ನಾಟಕಿಯವಾಯಿತೇನೋ ಎಂಬ ಅನಿಸಿಕೆ.

ಲಂಡನ್ನಿಗೆ ಮಗ, ಸೊಸೆ ಪ್ರೀತಿಯಿಂದ ಕರೆಸಿಕೊಂಡು ಅಡ್ಡಾಡಿಸಿ ಎಲ್ಲ ತೋರಿಸಿದ ಮೇಲೆಯೂ ಬ್ರಿಟಿಷ್ ಆಡಳಿತದ ವೈಷಮ್ಯವನ್ನೇ ನೆನಪಿಟ್ಟುಕೊಂಡು ನೋಡಿದ್ದರಲ್ಲೆಲ್ಲ ವಿಷವನ್ನೇ ಕಂಡು ಅದನ್ನೇ ತಮ್ಮ ಲೇಖನದಲ್ಲಿ ಉಣಬಡಿಸಿದ ರಾಮರಾಯರ ಕತೆ ‘ವಿದೇಶ ಕಾಲ.’ ಈ ರೀತಿಯ ನೂತನ ಆಯಾಮವೊಂದನ್ನು ನೇಯ್ದ ಈ ಕತೆ ಲೇಖಕಿ ಕಥಾರಚನೆಯಲ್ಲಿ ಮಾಗುತ್ತಿದ್ದುದರ ಪ್ರತೀಕ. ಇಲ್ಲಿ ಅವರ ಸೊಸೆ ಶ್ರುತಿಯ ಒಂದು ನುಡಿ ‘ಕೆಟ್ಟದ್ದರ ಜೊತೆ ಸತ್ಯ, ಸೌಂದರ್ಯ, ಒಳ್ಳೆಯತನ ಎಲ್ಲೆಲ್ಲೂ ಇರುತ್ತೆ. ಬೇರೆ ಬೇರೆ ಭಾವದಲ್ಲಿ. ಕಾಣುವ ಕಣ್ಣು, ನೋಡುವ ದೃಷ್ಟಿ…ಇರಬೇಕಲ್ಲ’. ಕಣ್ಣು ಹಾಗೂ ದೃಷ್ಟಿಯ ಸೂಕ್ಷ್ಮ ಅಂತರವನ್ನು ಸೂಚಿಸುವ ಮನನೀಯ ಮಾತು.

ಇಲ್ಲಿ ನನಗೆ ವೈಯಕ್ತಿಕವಾಗಿ ಇಷ್ಟವಾದ ಕತೆ ‘ಮಾಗುವ ಹೊತ್ತು.’ ಮಧುರಾ ಅವರ ವೈಚಾರಿಕ, ಸಾಹಿತ್ಯಿಕ ಮಾಗುವಿಕೆಯನ್ನು ಸೊಗಸಾಗಿ ಪ್ರಸ್ತುತ ಪಡಿಸಿರುವ ಕತೆ. ಇದಕ್ಕೊಂದು ಮನೋವೈಜ್ಞಾನಿಕ ಆಯಾಮವನ್ನೂ ನೀಡಿರುವುದು ಅವರ ವೈಶಿಷ್ಟ್ಯ. ಓದಿಯೇ ಸವಿಯಬೇಕಾದ ಭಾವಪೂರ್ಣ ಕಥಾನಕ.

‘ಪ್ರತೀಕಾರ’ ಕತೆ ಈಗಿನ ಸಾಫ್ಟ್ ವೇರ್ ಕಂಪನಿಯ ಕಾರ್ಪೊರೇಟ್ ವ್ಯವಸ್ಥೆಗೆ ಹೊಂದಿಸಿ ಬರೆದ ಕತೆಯಾದರೂ ಮೂಲತಃ ಮಾನವ ಸ್ವಭಾವಗಳು, ದೌರ್ಬಲ್ಯಗಳ ಅನಾವರಣ. ಕೋಪ, ಅಸೂಯೆಯಂಥ ಭಾವಗಳನ್ನು ಗೆಲ್ಲಲಾಗದೆ ಪ್ರತೀಕಾರದ ಉದ್ದೇಶ ಹೊಂದಿರುವ ಬಾಸ್, ತನ್ನ ಪ್ರಾಮಾಣಿಕ ಬದ್ಧತೆಯಿಂದ ಅದನ್ನೆಲ್ಲ ಮೀರಿ ಯಶಸ್ವಿಯಾಗುವ ಯುವಕ, ಅವನ ಸಮಸ್ಯೆಗಳಿಗಾಗಿ ತುಡಿಯುವ ತಾಯಿ ತಂದೆಯರು – ಹೀಗೆ ಬೆಳೆಸುತ್ತ ಹೋಗಿರುವ ಒಳ್ಳೆಯ ಕಥಾನಕ ಎನ್ನಬಹುದು.

ಈಗಿನ ಮಾರ್ಕು, ಡಿಗ್ರಿಗಳಿಗಾಗಿ ಮೇರೆ ಮೀರಿದ ಅನಾರೋಗ್ಯಕರ ಸ್ಪರ್ಧೆ, ಸೀ ಸಾ ಆಟದಂಥ ಏರಿಳಿತಗಳು, ಅದರಲ್ಲಿ ಜಾತಿವ್ಯವಸ್ಥೆಯ ತಾಕಲಾಟಗಳು, ಹಣದ ಅಭಾವ ನಿರ್ಮಿಸುವ ಪ್ರತಿಕೂಲ ಪರಿಸ್ಥಿತಿಗಳು, ಅವುಗಳನ್ನು ಎದುರಿಸಲು ಯುವವರ್ಗ ಅನುಸರಿಸುವ ಅಪಾಯಕಾರೀ ಮಾರ್ಗಗಳು – ಎಲ್ಲದರ ಕಥಾಭಟ್ಟಿ ‘ಅರ್ಹತೆ’. ಅದಕ್ಕಿಂತ ಹೆಚ್ಚಿನ ತುಮುಲಗಳನ್ನು ಚಿತ್ರಿಸುತ್ತದೆ ‘ದ್ವಂದ್ವ’ ಕತೆ. ಗಂಭೀರ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೃತ್ಯು ಮುಖದಲ್ಲಿ ನಿಂದಿರುವ ಮಗ, ಹೆಚ್ಚು ಪೆಟ್ಟಾಗಿರದಿದ್ದರೂ ಆಘಾತಕ್ಕೆ ಸಿಲುಕಿದ್ದ ವಯಸ್ಸಾದ ತಾಯಿ – ಈ ಇಬ್ಬರಲ್ಲಿ ಯಾವ ಜೀವ ಹೆಚ್ಚು ಮಹತ್ವದ್ದು ? ಉತ್ತರಿಸಲಾಗದ ಪ್ರಶ್ನೆ, ಊಹಿಸಲಾಗದ ‘ದ್ವಂದ್ವ’.. ಅದರಲ್ಲಿಯೇ ತೆರೆದುಕೊಳ್ಳುವ ಅಮಾನವೀಯ ಸ್ವಾರ್ಥದ ಮಾನವ ಮುಖಗಳು – ತಲ್ಲಣಿಸುವಂತೆ ಮಾಡಿದ ಕತೆ.

ಕೊನೆಯ ‘ಬದಲಾಗುವ ಭಾವಚಿತ್ರಗಳು’ ಕತೆಗಿಂತ ಹೆಚ್ಚಾಗಿ ಒಂದು ಲಲಿತ ಪ್ರಬಂಧವೇ. ಬೆಳಗಾಂವಿಯಂಥ ಗಡಿ ಪ್ರದೇಶಗಳಲ್ಲಿ ನೆಲೆಯಾಗಿ ಕನ್ನಡತನ,ಅಭಿಮಾನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಲ್ಲಿಯ ಕನ್ನಡಿಗರ ಯತ್ನಗಳು, ಸವಾಲುಗಳು, ಆ ಪ್ರದೇಶಕ್ಕೇ ವಿಶಿಷ್ಟ ಎನಿಸುವ ಸಂಬಂಧಗಳಲ್ಲಿಯ ತಾಕಲಾಟಗಳು – ಈ ಎಲ್ಲವನ್ನೂ ಅತ್ಯಂತ ಆಪ್ತತೆಯೊಂದಿಗೆ, ಸಹಜಾನುಭವದ ಲಾಲಿತ್ಯದೊಂದಿಗೆ ನಿರೂಪಿಸಿದ್ದಾರೆ ಮಧುರಾ. ಈ ಬರೆಹವನ್ನು ಓದಿದಾಗ ಸ್ಪಷ್ಟವಾಗುವುದು ಕತೆಗಳಿಗಿಂತ ಹೆಚ್ಚು ಸೃಜನಾತ್ಮಕತೆ, ನವಿರು ಹಾಸ್ಯದೊಂದಿಗೆ ಗಂಭೀರ ವಸ್ತುವನ್ನು ಹದವಾಗಿ ಬೆರೆಸುವ ಕಲಾತ್ಮಕತೆ ಹೊಂದಿರುವ ಲಲಿತ ಪ್ರಬಂಧಗಳಲ್ಲಿ ಅವರದ್ದು ಪಳಗಿದ ಕೈ.

2016- 17ರ ಸುಮಾರಿನಲ್ಲಿಯೇ ಹೆಚ್ಚಾಗಿ ರಚಿತವಾದುವು ಈ ಕಥೆಗಳು. ಈ ಕಾಲಘಟ್ಟಕ್ಕೆ ತಕ್ಕ ಸ್ಪಂದನೆ ನೀಡಿವೆ. ವಸ್ತುವೈವಿಧ್ಯ, ತಕ್ಕುದಾದ ಭಾಷೆಯ ಆಯ್ಕೆ, ಮನ ಸೆಳೆಯುವ ಶೈಲಿ ಇವುಗಳಿಂದಾಗಿಯೇ ಬಹುಶಃ ಇವರ ಕತೆಗಳು ತರಂಗ, ಮಯೂರದಂಥ ಪತ್ರಿಕೆಗಳಲ್ಲಿ ಸ್ಥಾನ ಪಡೆದು ಮೆಚ್ಚುಗೆಗೆ ಪಾತ್ರವಾಗಿರುವುದು. ಅದರಲ್ಲಿಯೂ ಉತ್ತರಕರ್ನಾಟಕದ ಗಂಡು ಭಾಷೆ ಅವರ ‘ಪರಂಪರಾಗತ’ ದಂಥ ಕತೆಗಳ ಆತ್ಮವೇ ಆಗಿ ಮನ ಮುಟ್ಟುತ್ತದೆ, ತಟ್ಟಿ ಕಾಡುತ್ತದೆ. ವೈಭವೀಕರಣ ಮಾಡದೇ ಇದ್ದರೂ. ಕೆಲವೆಡೆ ಹೆಚ್ಚು ವಾಚ್ಯತೆ ಕಂಡು ಬರುತ್ತದೆ. ಕತೆಯ ಓಟ ಹಾಗೂ ಅಂತ್ಯಗಳನ್ನು ಊಹಿಸಲು ಆಗದೇ ಇರುವುದು ಲೇಖಕಿಯ ದೃಷ್ಟಿಕೋನಗಳು ಮತ್ತು ಹೆಣೆಯುವಿಕೆಯಲ್ಲಿ ತೋರಿದ ಪರಿಣಾಮಕಾರಿ ಅಂಶ. ಮಧ್ಯೆ ಮಧ್ಯೆ ವಾಚಕರನ್ನು ಸಂಬೋಧಿಸುವ ರೂಢಿಯಿಂದ ಹೊರಬಂದರೆ ಇನ್ನೂ ಹೆಚ್ಚಾದ ಭಾವತೀವ್ರತೆಯ ಪರಿಣಾಮಕಾರಿ ರಚನೆಗಳನ್ನು ನೀಡಬಹುದು ಎಂಬ ಒಂದು ಅನಿಸಿಕೆ.

ಸದ್ಯದ ಕೃತಿಯಲ್ಲಿ ಕತೆಗಾರ್ತಿಯಾಗಿ ಸಾಕಷ್ಟು ಜನಪ್ರಿಯತೆಯ ದಾರಿಯಲ್ಲಿ ನಡೆದಿದ್ದರೂ ಏನೋ ಒಂದು ಸ್ವರ ಮಿಸ್ಸಿಂಗ್ ಎನಿಸುತ್ತದೆ. ಒಂದು ಕೃತಿ ಓದಿ ಮುಗಿಸಿದಾಗ ಹತ್ತರಲ್ಲಿ ಒಂದು ಎನಿಸದೆ ತಾನೇ ತಾನಾಗಿ ಬೇರೆಯೇ ಒಂದು ಎನಿಸಿ ಗುಂಗುಗೊಳ್ಳುವ ತಂತಿಯೊಂದು ಇದ್ದಾಗ ಅದರ ಸಾರ್ಥಕತೆ. ಈ ದಿಶೆಯಲ್ಲಿ ಮಧುರಾ ಕರ್ಣಮ್ ಅವರಿಗೆ ಇನ್ನೂ ಸ್ವಲ್ಪ ಕೃಷಿಯ, ಹೊಸ ಹೊಸ ಓದಿನ, ಅನುಭವಗಳ ಸಾಂದ್ರತೆಯ, ಅವಲೋಕನದ ಅವಶ್ಯಕತೆ ಇದೆ ಏನೋ ಎನಿಸುತ್ತದೆ. ಆದರೂ ಕನ್ನಡದ ಮಹಿಳಾ ಸಾಹಿತ್ಯದ ಪ್ರಸ್ತುತ ಅಭಿಯಾನದಲ್ಲಿ ಮಧುರಾ ಕರ್ಣಮ್ ಒಂದು ಪ್ರಶಂಸೆಯ ನುಡಿಯೊಂದಿಗೆಯೇ ಉಲ್ಲೇಖಿಸಬೇಕಾದ ಹೆಸರು ಎಂಬುದಂತೂ 100% ನಿಜ, ಖಂಡಿತ.

‍ಲೇಖಕರು Admin

September 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: