ಕೋವಿಡ್ ಸಂದರ್ಭದ ಲಾಭ ಪಡೆದ ಮಲಯಾಳಂ ಚಿತ್ರಗಳು

ಗೊರೂರು ಶಿವೇಶ್

ಅವಳುಡೆ (ಅವಳ ರಾತ್ರಿಗಳು) ಕನ್ನಡ ವಷ್ಟೇ ಅಲ್ಲದೆ ಇಡೀ ಭಾರತದಲ್ಲಿ ಸಂಚಲನವನ್ನು ಉಂಟುಮಾಡಿದ ಮಲಯಾಳಂ ಚಿತ್ರ. 1978 ರಲ್ಲಿ ಬಿಡುಗಡೆಯಾದ ಐ ವಿ ಶಶಿ ನಿರ್ದೇಶನದ ಈ ಚಿತ್ರದ ನಾಯಕಿ ಸೀಮಾ. ಹದಿಹರೆಯದ ವೇಶ್ಯೆಯ ಸುತ್ತ ಹೆಣದ ಈ ಕಥೆಹಸಿಬಿಸಿ ದೃಶ್ಯಗಳಿಂದ ಕೂಡಿದ್ದು ಇತರೆ ಭಾಷೆಗಳಿಗೆ ಡಬ್ ಆಗಿದ್ದು ಅಲ್ಲದೆ ಕನ್ನಡದಲ್ಲಿಯೂ ಕಮಲ ಎಂಬ ಚಿತ್ರವಾಗಿ ಮೂಡಿ ಬಂದಿತ್ತು. ಈ ಚಿತ್ರದ ಭರ್ಜರಿ ಯಶಸ್ಸು ಇದೇ ರೀತಿಯ ಇನ್ನೂ ಕೆಲವು ಚಿತ್ರಗಳಿಗೆ ಎಡೆಮಾಡಿಕೊಟ್ಟಿದಲ್ಲದೆ ಮುಂದೆ ಮಲಯಾಳಂನ ಅನೇಕ ಸಿನಿಮಾಗಳು ನಗರ, ಪಟ್ಟಣದ ಹೊರವಲಯದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಾರಂಭಿಸಿದವು.

ಕೊನೆಕೊನೆಗೆ ಹೆಸರಿಗೂ ಸಿನಿಮಾಕ್ಕೂ ಸಂಬಂಧವೇ ಇಲ್ಲದ ಇಂಗ್ಲಿಷ್ ಸಿನಿಮಾಗಳ ಒಂದೆರಡು ಪ್ರಣಯ ದೃಶ್ಯಗಳನ್ನು ಹೊಂದಿದ ಒಂದು ಒಂದುವರೆ ಗಂಟೆ ಸಿನಿಮಾಗಳು ಪ್ರದರ್ಶನ ಕಾಣಲಾರಂಭಿಸಿದವು. ಮುಂದೆ ದೂರದರ್ಶನ ಪ್ರಸಿದ್ಧಿಯಾಗಿ ಧಾರವಾಹಿಗಳಿಗೆ ಮಹಿಳೆಯರು ಮನಸೋಲು ಆರಂಭಿಸಿದ ನಂತರ ಸಂಸಾರಸ್ಥ ಜನರು ಇಂತಹ ಸಿನಿಮಾ ಹಾಗೂ ಥಿಯೇಟರುಗಳಿಗೆ ತಲೆ ಹಾಕಿದ ಹಾಕದಾದರು. ಸಿನಿಮಾ ಮಂದಿರಗಳು ಮುಚ್ಚಿ ಮಲ್ಟಿಪ್ಲೆಕ್ಸ್ ಗಳ ಸಂಖ್ಯೆ ಹೆಚ್ಚಾಯಿತು. ಅದರೊಂದಿಗೆ ಈ ರೀತಿಯ ಚಿತ್ರಮಂದಿರಗಳ ಅಂತ್ಯವಾಯಿತು. ಆದರೆ ಮಲಯಾಳಂ ಸಿನಿಮಗಳು ಎಂದರೆ ಎ ಸರ್ಟಿಫಿಕೇಟ್ ಚಿತ್ರಗಳು ಎಂಬ ಭಾವನೆ ಕೆಲ ಪ್ರೇಕ್ಷಕರಲ್ಲಿ ಈಗಲೂ ಇದೆ.

ಆದರೆ ಇಂದಿಗೂ ಭಾರತದಲ್ಲಿ ಬಂಗಾಳಿ ಚಿತ್ರಗಳನ್ನು ಪಡಿಸಿದರೆ ಅತಿ ಹೆಚ್ಚು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ಹೆಗ್ಗಳಿಕೆ ಮಲಯಾಳಂ ಚಿತ್ರಗಳಿಗೆ ಇದೆ. ಅಲ್ಲಿನ ಪ್ರಸಿದ್ಧ ನಟರಾದ ಮಮ್ಮುಟ್ಟಿ ಮತ್ತು ಮೋಹನ್ ಲಾಲ್ ಎರಡಕ್ಕೂ ಹೆಚ್ಚು ಬಾರಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದಾರೆ.

ಕೋವಿಡ್ ನೈನ್ಟೀನ್ ಕಳೆದ ಬಾರಿ ಮತ್ತು ಈ ಬಾರಿ ದೇಶಕ್ಕೆ ಅಪ್ಪಳಿಸಿದಾಗ ಅದು ಉಳಿದೆಲ್ಲ ಉದ್ಯಮ ಗಳಂತೆ ಚಿತ್ರೋದ್ಯಮಕ್ಕೂ ಅತಿದೊಡ್ಡ ಪೆಟ್ಟನ್ನೂ ನೀಡಿತ್ತು. ನಾಲ್ಕೈದು ತಿಂಗಳು ಲಾಕ್ಡೌನ್ ನೆಪವಾಗಿ ಮುಚ್ಚಿದ ಅನೇಕ ಚಿತ್ರಮಂದಿರಗಳು ಈಗ ಶಾಶ್ವತವಾಗಿ ಮುಚ್ಚಿಹೋಗಿವೆ. ಕನ್ನಡ ಸಿನಿಮಾಗಳಿಗಂತು ಇದೊಂದು ಮಾರಣಾಂತಿಕ ಪೆಟ್ಟು. ಅಚ್ಚಕನ್ನಡದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಲಕ್ಷ್ಮಿ ಸೇರಿದಂತೆ ಮೂರ್ನಾಲ್ಕು ಚಿತ್ರಮಂದಿರಗಳು ಮುಚ್ಚಿ ಹೋದ ಸುದ್ದಿ ಪತ್ರಿಕೆಯಲ್ಲಿ ಬಂದಿದೆ. ಹೀಗೆ ಇಡೀ ಚಿತ್ರೋದ್ಯಮವೇ ಕರೋನದ ಕಾರಣದಿಂದಾಗಿ ಬಸವಳಿದು ಮಾರ್ಗ ಹುಡುಕುತ್ತಿರುವ ಸಂದರ್ಭದಲ್ಲಿ, ಪ್ರಸ್ತುತ ಸಂದರ್ಭದ ಲಾಭವನ್ನು ಮಾಡಿಕೊಂಡದ್ದು ಕನ್ನಡಕ್ಕಿಂತ ಚಿಕ್ಕ ಚಿತ್ರೋದ್ಯಮ ವಾದ ಮಲಯಾಳಂ ಚಿತ್ರಗಳು.

ಸೃಜನಶೀಲತೆ ಅನೇಕ ಅರ್ಥವಿವರಣೆಗಳಲ್ಲಿ ಆಯಾ ಸನ್ನಿವೇಶದ ನಿರ್ವಹಣೆ ಮತ್ತು ಸನ್ನಿವೇಶಗಳಲ್ಲಿ ದೊರಕಿದ ಅವಕಾಶಗಳನ್ನು ಹೇಗೆ ಯಶಸ್ವಿಯಾಗಿ ಮತ್ತು ವೇಗವಾಗಿ ಬಳಸಿಕೊಳ್ಳುತ್ತಾರೆ ಎಂಬುದು ಕೂಡ ಒಂದು. ಈ ಅರ್ಥದಲ್ಲಿ ಹೊಸ ಮಲಯಾಳಂ ಚಿತ್ರಗಳು ಮತ್ತು ನಿರ್ದೇಶಕರು ಕಲಾವಿದರು ಹೆಚ್ಚು ಸಮರ್ಥವಾಗಿ ಈ ಕೋವಿಡ್ ಸಂದರ್ಭವನ್ನು ಬಳಸಿಕೊಂಡಿದ್ದಾರೆ ಎಂದು ಹೇಳಬಹುದು. ಭಾರತೀಯ ಚಿತ್ರರಂಗದ ಸಂದರ್ಭಕ್ಕಿಂತ ಭಿನ್ನ ದಾರಿಯನ್ನು ತುಳಿದಿರುವ ಈ ಮಲಯಾಳಂ ಚಿತ್ರಗಳು ಇತರೆ ಜನಪ್ರಿಯ ಮಾದರಿಯ ಚಿತ್ರಗಳಂತೆ ಇಲ್ಲಿ ಮರಸುತ್ತುವ ಪ್ರೇಮಿಗಳಿಲ್ಲ.

ಆ ತರದ ಸನ್ನಿವೇಶಗಳಿದ್ದರೆ ಹಿನ್ನೆಲೆಯಲ್ಲಿ ಗೀತೆಗಳ ಮೂಲಕ ಕಟ್ಟಿ ಕೊಡಲಾಗುತ್ತದೆ ವಿದೇಶದಲ್ಲಿ ಚಿತ್ರಿತವಾದ ಹಾಡುಗಳು ಇಲ್ಲಿಲ್ಲ. ಬದಲಿಗೆ ಕೇರಳದ ಯಾವುದೋ ಮೂಲೆಯಲ್ಲಿರುವ ಪ್ರಕೃತಿಯ ಮಡಿಲಲ್ಲಿ ಸುಂದರವಾಗಿ ಕಂಗೊಳಿಸುವ ಹಳ್ಳಿಗಳು, ಸಣ್ಣ ಸಣ್ಣ ನಗರಗಳು ಬೆಟ್ಟ-ಗುಡ್ಡ ಹಳ್ಳಕೊಳ್ಳ ನದಿಪಾತ್ರದ ಊರುಗಳು ಹಸಿರನ್ನು ಮುಕ್ಕಳಿಸುವ ಹೊಲ ಗದ್ದೆ ತೋಟಗಳು ಅವುಗಳನ್ನು ಸುಂದರವಾಗಿ ಹಿಡಿದಿಡುವ ಛಾಯಾಗ್ರಹಣ ಅವುಗಳ ಹಿನ್ನೆಲೆಯಲ್ಲಿ ಹೆಣದ ಸರಳವಾದ ಕಥೆ ಕುತೂಹಲಕಾರಿ ತಿರುವುಗಳು ಅದಕ್ಕೊಂದು ಸುಂದರ ನಿರೂಪಣೆ ಹಿನ್ನಲೆಯಲ್ಲಿ ಮಧುರವಾಗಿ ಮೂಡಿಬರುವ ಹಾಡುಗಳು ಮತ್ತು ಸಂಗೀತ ಚಿತ್ರಗಳನ್ನು ಗೆಲ್ಲಿಸುತ್ತದೆ.

ಒಟಿಟಿ (over the top )ಪ್ಲಾಟ್ಫಾರ್ಮ್ ಗಳು ಭಾರತಕ್ಕೆ ಕಾಲಿರಿಸಿದಾಗ ಆರಂಭದಲ್ಲಿ ನೀರಸ ಪ್ರತಿಕ್ರಿಯೆ ಬರಲು ಕಾರಣ ಅವೆಲ್ಲವನ್ನು ನೋಡಲು ಆನ್ಲೈನ್ ಸಂಪರ್ಕ ಇಲ್ಲದೆ ಇದ್ದದ್ದು ಮತ್ತು ಡಾಟಾ ಸಮಸ್ಯೆ‌ ಯಾವಾಗ ಕರೋನ ಕಾಲಿಟ್ಟು ಎಲ್ಲರೂ ಮನೆಯಲ್ಲಿ ಬಂದಿ ಆದರೋ, ಉದ್ಯೋಗಿಗಳು ವರ್ಕ್ ಫ್ರಂ ಹೋಮ್ ಆರಂಭಿಸಿದರೋ ಆಗ ಫ್ಲಾಟ್ ಫಾರಂಗಳು ಮುಂಚೂಣಿಗೆ ಬಂದವು. ಆರಂಭದಲ್ಲಿ ಅದು ನೀಡುವ ಪುಡಿಗಾಸಿಗೆ ಚಿತ್ರಗಳನ್ನು ನೀಡಲು ಹಿಂದು ಮುಂದು ನೋಡಿದ ನಿರ್ಮಾಪಕರು ಇದ್ದರು.

ಥಿಯೇಟರ್ ನಲ್ಲಿ ಬಿಡುಗಡೆಯಾಗಿ ವಿಫಲವಾದ ದಿಯಾ ಮತ್ತು ಲವ್ ಮಾಕ್ಟೈಲ್ ಅಮೆಜಾನ್ ಪ್ರೈಮ್ ನಲ್ಲಿ ಪ್ರಸಾರವಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅಪಾರವಾದ ಮೆಚ್ಚುಗೆ ಗಳಿಸಿ ನಂತರ ಯಶಸ್ಸಿನ ಹಾದಿ ಹಿಡಿದಿದ್ದು ಈಗ ಇತಿಹಾಸ. ಈಗ ಅದು ಸಿನಿಮಾಗಳಿಗೆ ಕನಿಷ್ಠ ಆದಾಯ ನೀಡುವ ವರಮಾನದ ಮೂಲವಾಗಿದೆ. ಇದರಿಂದಾಗಿ ಕಡಿಮೆ ಬಂಡವಾಳದ ಚಿತ್ರಗಳು ಅದರ ಮೂಲಕ ಬಿಡುಗಡೆಯಾಗಿ ಹೆಚ್ಚು ಲಾಭವನ್ನು ಪಡೆಯುತ್ತೀವೆ.

ಇತರ ಎಲ್ಲ ಭಾಷೆಗಳಿಗೆ ಹೋಲಿಸಿದರೆ ಮಲಯಾಳಂ ಚಿತ್ರಗಳು ಅದರ ಹೆಚ್ಚು ಲಾಭವನ್ನು ಪಡೆಯುತ್ತಿವೆ. ಮಲಯಾಳಂ ಭಾಷೆ ಬಲ್ಲವರು ಕೇರಳ ಅಲ್ಲದೆ ಹೊರ ದೇಶಗಳಲ್ಲಿ ಅದರಲ್ಲೂ ಗಲ್ಫ್ ರಾಷ್ಟ್ರಗಳಲ್ಲಿ ಹೆಚ್ಚು ವಾಸವಾಗಿರುವುದು, ಆ ಚಿತ್ರಗಳು ಪ್ರಸ್ತುತಪಡಿಸುವ ಸಮಕಾಲೀನ ಸಮಸ್ಯೆಗಳು , ಭಾರತದ ಅಷ್ಟೇ ಏಕೆ ವಿಶ್ವದ ಜನರ ಗಮನ ಸೆಳೆಯುತ್ತಿರುವುದು ಮತ್ತು ಚಿತ್ರಗಳು ಇಂಗ್ಲಿಷ್ ಸಬ್ ಟೈಟಲ್ ಜೊತೆಗೆ ಭಾರತದ ಹೆಚ್ಚು ಜನ ಬಳಸುವ ಭಾಷೆಗಳಿಗೂ ಡಬ್ಬಿಂಗ್ ಆಗಿ ಮೂಡಿಬರುತ್ತಿರುವುದು ಹೆಚ್ಚು ಅನುಕೂಲವನ್ನು ಉಂಟುಮಾಡಿದೆ.

ಇನ್ನು ಚಿತ್ರದ ಕಥೆ ಎಷ್ಟು ಸರಳ ವೆಂದರೆ ಪ್ರಕಾಶ್ ಉಂಟೇ ಪ್ರತಿಕಾರಂ ಚಿತ್ರದ ನಾಯಕ ಪ್ರಕಾಶ್ ಸ್ನೇಹಿತನ ಜಗಳ ಬಿಡಿಸಲು ಹೋಗಿ ಕಾರಣವಿಲ್ಲದೆ ತಾನೇಹೊಡೆತ ತಿನ್ನುತ್ತಾನೆ. ಹೊಡೆದವನಿಗೆ ಹೇಗೆ ಪ್ರತಿಕಾರ ತೀರಿಸುತ್ತಾನೆ ಎಂಬುದೇ ಚಿತ್ರದ ಒನ್ ಲೈನ್ ಸ್ಟೋರಿ. ದ ಗ್ರೇಟ್ ಇಂಡಿಯನ್ ಕಿಚನ್ ಸಾಂಪ್ರದಾಯಿಕ ಕುಟುಂಬವೊಂದಕ್ಕೆ ಮದುವೆಯಾಗಿ ಬರುವ ವಧು ಎದುರಿಸುವ ಅಡುಗೆಮನೆಯ ಅವಘಡಗಳನ್ನು ಹೇಳುತ್ತಲೇ ಸ್ತ್ರೀಶೋಷಣೆಯ ವಿವಿಧ ಮುಖಗಳನ್ನು ಪರಿಚಯಿಸುತ್ತದೆ.

ಡ್ರೈವಿಂಗ್ ಲೈಸೆನ್ಸ್ ಮತ್ತು ಅಯ್ಯಪ್ಪನಮ್ ಕೋಶೀಯಂ ವ್ಯಕ್ತಿಗಳಿಬ್ಬರು ತಮ್ಮ ಅಹಃ ನ್ನುಬಿಡಲಾಗದೆ ಅದನ್ನು ತಣಿಸಲು ನಡೆಸುವ ಹುನ್ನಾರ ಹಾಗೂ ಹೋರಾಟಗಳನ್ನು ತಿಳಿಸುತ್ತಾ ಹೋಗುತ್ತದೆ. ಉಂಡಾ ಚಿತ್ರವು ಛತ್ತಿಸ್ಗಢಕ್ಕೆ ಪೂಜೆ ಸಿಗುತ್ತೋ ಚುನಾವಣಾ ಕರ್ತವ್ಯ ಕೆಂದು ಹೋಗುವ ಪೊಲೀಸ್ ಸಿಬ್ಬಂದಿಗೆ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಯಾವುದೇ ಆಧುನಿಕ ಶಸ್ತ್ರಾಸ್ತ್ರವಿಲ್ಲದೆ ಕರ್ತವ್ಯ ನಿರ್ವಹಿಸುವಾಗ ಎದುರಾಗುವ ಸಮಸ್ಯೆಗಳ ಕುರಿತು ಹೇಳಿದರೆ, ತನ್ನ ನಾಯಿಯನ್ನು ಅನಿರೀಕ್ಷಿತವಾಗಿ ಕೊಂದ ತೋಟದ ಮಾಲೀಕನ ವಿರುದ್ಧ ದೈಹಿಕ ಸೆಣಸಾಟ ನಡೆಸುವ ಕೂಲಿಕಾರನ ಕಥೆ, ಟ್ರಾನ್ಸ್ ಮತಾಂತರದ ಹಿನ್ನೆಲೆಯ ಕಥೆ ಹೊಂದಿದ್ದರೆ, ಹೆಲೆನ್ ನೈಜ ಘಟನೆಯನ್ನು ಆಧರಿಸಿದ್ದು ತಾನು ಉದ್ಯೋಗ ಮಾಡುವ ಅಂಗಡಿಯಲ್ಲಿ ರಾತ್ರಿ ಸಿಕ್ಕಿಹಾಕಿಕೊಳ್ಳುವ ಏಕಾಂಗಿ ಮಹಿಳೆ ಅಲ್ಲಿಂದ ಹೊರಬರಲು ನಡೆಸುವ ಹೋರಾಟವನ್ನು ಕುರಿತು ಹೇಳುತ್ತದೆ.

ಕಥಾಹಂದರ ತುಂಬ ತೆಳುವಾಗಿದ್ದರೂ ಅದರ ನಿರೂಪಣೆ, ರೋಚಕ ತಿರುವುಗಳು, ಕುತೂಹಲದ ಕ್ಷಣಗಳು ಚಿತ್ರದ ನೋಡುಗರ ಸಂಖ್ಯೆಯನ್ನು ಹೆಚ್ಚಿಸುತ್ತಿವೆ. ಥಿಯೇಟರ್ ನಲ್ಲಿ ಬಿಡುಗಡೆಯಾದ ಅದೆಷ್ಟೋ ವರ್ಷಗಳ ನಂತರ ಬಿಡುಗಡೆಯಾಗುತ್ತಿದ್ದ ಚಿತ್ರಗಳು ಟಿವಿಯಲ್ಲಿ ನೋಡಬೇಕಾದರೆ ಜಾಹೀರಾತುಗಳ ಕಾಟದಿಂದ ಸಿನಿಮಾದಿಂದ ವಿಮುಖರಾಗುತ್ತಿದ್ದು ಸಂದರ್ಭಗಳೇ ಹೆಚ್ಚು. ಎರಡು ಗಂಟೆಗಳ ಸಿನಿಮಾಕ್ಕೆ ಒಂದುಗಂಟೆ ಜಾಹೀರಾತು. ಆದರೆ ಇದೀಗ ಓಟಿಟಿ ಪ್ಲಾಟ್ ಫಾರಂಗಳು ಕಡಿಮೆ ಚಂದಾ ಹಣದ ಜೊತೆಗೆ ಬಿಎಸ್ಎನ್ಎಲ್ ಏರ್ಟೆಲ್ ಜಿಯೋ ಡಾಟಾ ಸಂಪರ್ಕದೊಂದಿಗೆ ಉಚಿತವಾಗಿ ಸಿಗುತ್ತಿದೆ.

ಅಮೆಜಾನ್, ನೆಟ್ಫ್ಲಿಕ್ಸ್ ಎರಡು ವರ್ಷಗಳ ಹಿಂದೆ ಆರಂಭಗೊಂಡಾಗ ಇವು ಭಾರತದಲ್ಲಿ ಓಡುತ್ತವೆ ಎಂದು ಸಂಶಯ ಪಟ್ಟವರಿಗೆ ಅದರ ಜೊತೆಗೆ ಸನ್ ನೆಕ್ಸ್ಟ್, ಜಿಯೋ ಸಿನಿಮಾ, ಡಿಸ್ನಿ ಹಾಟ್ ಸ್ಟಾರ್, ಸೋನಿ ಲೈವ್.. ಜೊತೆಗೆ ಅನೇಕ ಪ್ರಾದೇಶಿಕ ಪ್ಲಾಟ್ಫಾರಂ ಗಳು ಆರಂಭವಾಗಿ ಪೈಪೋಟಿಯ ಮೇಲೆ ಚಿತ್ರಗಳನ್ನು ಖರೀದಿಸುತ್ತಿರುವುದು ಮತ್ತು ಕೆಲವೊಂದು ಸಿನಿಮಾಗಳನ್ನು ಕಮಿಷನ್ ಆಧಾರದ ಮೇಲೆ ಚಿತ್ರಗಳನ್ನು ಬಿಡುಗಡೆ ಮಾಡುತ್ತಿರುವುದರಿಂದ ಇದರ ಲಾಭ ಮಲಯಾಳಂ ಚಿತ್ರರಂಗಕ್ಕೆ ಚೆನ್ನಾಗಿ ಆಗಿದೆ. ವಿಶ್ವ ಮಾರುಕಟ್ಟೆಯನ್ನು ಹಿಡಿದಿಡುವ ಈ ತಂತ್ರವನ್ನು ಕನ್ನಡ ವು ಸೇರಿದಂತೆ ಇತರೆ ಭಾಷೆಗಳು ಅನುಸರಿಸಿದರೆ ನಷ್ಟದಲ್ಲಿರುವ ಚಿತ್ರೋದ್ಯಮ ಲಾಭದ ಹಾದಿ ಹಿಡಿಯಬಹುದು.

‍ಲೇಖಕರು Admin

September 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: