ನೃತ್ಯವೆನ್ನುವ ಭುವನದ ಭಾಗ್ಯದೊಂದಿಗೆ..

ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ ‘ರಂಗಶಂಕರ’ದಲ್ಲಿ ಜರುಗಿದ ಶ್ರೀಪಾದ್ ಭಟ್ ನಾಟಕೋತ್ಸವ ಮಿಂಚು ಹರಿಸಿತ್ತು.

ಶ್ರೀಪಾದ್ ಭಟ್ ಅವರ ರಂಗನೋಟವನ್ನು ಒಳಗೊಂಡ ಕೃತಿ ‘ಸಿರಿ ಪಾದ’ ಈ ಸಂದರ್ಭದಲ್ಲಿಯೇ ಪ್ರಕಟವಾಯಿತು. ಇವರ ನಾಟಕದ ಹಾಡುಗಳು ಕೇಳುಗರಿಗೆ ಒಂದು ರೀತಿಯ ಕಾಲಕೋಶ. ಈ ಹಾಡುಗಳ ಸಿ ಡಿ ಯನ್ನು ‘ಲಹರಿ’ ಹಾಗೂ ‘ಅವಧಿ’ ಜಂಟಿಯಾಗಿ ಹೊರತಂದಿದೆ.

ಈಗ ಸಿರಿ ಪಾದ ಹೆಸರಿನಲ್ಲಿ ಶ್ರೀಪಾದ್ ಭಟ್ ತಮ್ಮ ವಿಶೇಷ ರಂಗ ಅನುಭವವನ್ನು ಮುಂದಿಡಲಿದ್ದಾರೆ.

। ಕಳೆದ ವಾರದಿಂದ ।

ಅವರು ‘ಅಲ್ತಾ’ ಹಚ್ಚಿದ ಪಾದಗಳಿಂದ ರಂಗೋಲಿ ಬಿಡಿಸುವರೇನೋ ಅನಿಸುವಂತೆ ರಂಗದ ಮೇಲೆಲ್ಲ ಚಲಿಸುತ್ತಾರೆ. ಬೇರಿನ ಹಾಗೆ ಆಳವಾಗಿ ನೆಲಕ್ಕಿಳಿಯುತ್ತಿದ್ದಾರೇನೋ ಅನಿಸುತ್ತಿದ್ದಂತೆ ಚಿಗರೆಯಂತೆ ಜಿಗಿಯುತ್ತಾರೆ. ನೋಡ ನೋಡುತ್ತಿದ್ದಂತೆ ಅವರ ದೇಹವೇ ರೆಕ್ಕೆಯಾಗಿ ಆಕಾಶದ ಅವಕಾಶಕ್ಕೆ ಚಾಚುವುದೋ ಎಂಬಂತೆ ತೋರತೊಡಗುತ್ತದೆ. ಅವರ ದೇಹದಲ್ಲಡಗಿದ  ಗರೀಮಾ ಲಘೀಮಾ ಕೌಶಲವೆರಡೂ ಗುರುತ್ವಾಕರ್ಷಣ ಶಕ್ತಿಯೊಂದಿಗೆ ಆಡುತ್ತಿರುತ್ತದೆ.

ಅವರ ಚಲನೆಯಲ್ಲಿ ನದಿಯ ಹರಿವಿದೆ, ಸಮುದ್ರದಲೆಗಳ ಏರಿಳಿತವಿದೆ.  ಗಾಳಿಯಲ್ಲಿ ಹಸ್ತಗಳನ್ನು ಚಾಚುತ್ತ ಸಂಕೀರ್ಣಗತಿಯಲ್ಲಿ ಅವುಗಳಲ್ಲೇನನ್ನೋ ಅರಸುತ್ತ  ಯಾವುದೋ ಅವ್ಯಕ್ತವಾದುದೊಂದನ್ನು ಥಟ್ಟನೆ ಹಿಡಿದು ದೇಹಭಂಗಿಯಲ್ಲಿ ನಿಂತಾಗ ಅವರು ಧರಿಸಿದ ಅಮೂರ್ತಕ್ಕೆ  ಅಸ್ಪಷ್ಟವಾಗಿ ನಮ್ಮೆದೆಗಳಲ್ಲಿ ಯಾವುದೋ ಆಕಾರ ಹೊಳೆದಂತಾಗಿ ಆ ಒಂದು ಬಗೆಯ ಅರಿವಿನಂತಹ ಮಂಪರಿನಲ್ಲಿ ಆನಂದ ಒದಗುತ್ತದೆ.

ಅದು ಕತ್ತಲಲ್ಲಿ ಹಚ್ಚಿಟ್ಟ ಮೊಂಬತ್ತಿಯೊಂದು ಮಂದಗಾಳಿಗೆ ತೊನೆಯುತ್ತ ಆಚೀಚೆ ಓಲಾಡುವಾಗ ತನ್ನ ಸುತ್ತಣ ಜಗವನ್ನು ಚೂರೇಚೂರು ಕಾಣಿಸುತ್ತ ಅದು ನಮ್ಮ ಕಲ್ಪನೆಯನ್ನು ಸೇರಿಸಿಕೊಂಡು ಏನೋ ಕಂಡಂತೆ ಅನಿಸುತ್ತದಲ್ಲ ಅಂಥ ಕುತೂಹಲದ ಆನಂದ. ಅಂತಹ ಆನಂದ ನೀಡುವ ಭುವನ ಯಕ್ಷರು ಈ ನೃತ್ಯಗಾರರು. ಅವರೊಂದು ವಿಸ್ಮಯ!. ಒಡೆದು ಹೇಳದ ವಾಚ್ಯವಾಗದ  ಎಷ್ಟೊಂದು ಅರ್ಥಗಳನ್ನು ಗರ್ಭದಲ್ಲಿಟ್ಟುಕೊಂಡವರು. ಅವರಿಂದ ಹೊಮ್ಮುವ ನೃತ್ಯಗಳು ಆಕಾರಗೊಳ್ಳುವ ಕಾವ್ಯಗಳು.

ದೇಹವನ್ನು ದೇಗುಲವಾಗಿಸುವ ಬಹುದೊಡ್ಡ ಶಕ್ತಿ ನೃತ್ಯಕ್ಕಿದೆ. ದಶಕಗಳ ಪರಿಶ್ರಮದಿಂದ ಯಾವ ಭಿನ್ನ ಪರಿಕರದ ಹಂಗಿಲ್ಲದೇ ತಮ್ಮ ಅಂಗಾಗಗಳಿಂದ ವಿಶ್ವಚಲನೆಯನ್ನೂ ಅವರು ಧರಿಸುತ್ತಾರೆ. ಮಾತಿಗಾಗಿ ಒಂದೇ ಅಂಗ ಅಂತಿಲ್ಲ ಅವರಲ್ಲಿ, ಸರ್ವ ವಾಙ್ಮಯಗಳನ್ನೂ ಅವರ ಇಡಿಯ ದೇಹವೇ ಮಾತನಾಡುವದು. ಅವರ ದೇಹದ ಕಂಪನಗಳಲ್ಲಿ ಅದೆಷ್ಟು ಶಬ್ಧತರಂಗಗಳಿವೆ! ತಮ್ಮೊಳಗನ್ನು ಬೆಳಗಬಲ್ಲಂತಹ ಚಂದ್ರ ತಾರೆಗಳ ಆಹ್ಲಾದ ಆಹಾರ್ಯಗಳಿವೆ ಅವರಲ್ಲಿ. ಸನಾತನವನ್ನೂ ನೂತನವನ್ನೂ ಬೆಸೆಯಬಲ್ಲ ಅಪಾರ ಸಾಧ್ಯತೆಯ ಸತ್ವ ಅವರ ಪ್ರಯೋಗಗಳಲ್ಲಿದೆ. ಶಿವದಷ್ಟು ಸುಂದರ ಅದು.

ರಂಗದ ಕ್ಯಾನವಾಸಿನ ಮೇಲೆ ದೇಹವನ್ನು ವಿವಿಧ ಬಗೆಗಳಲ್ಲಿ ವಿನ್ಯಾಸಗೊಳಿಸಿಕೊಳ್ಳುತ್ತ ಪ್ರೇಕ್ಷಕರ ಕಣ್ಣಿನಲ್ಲಿ ಚಿತ್ರವನ್ನು ಕಾಣಿಸುವ ನೃತ್ಯದ ರಂಗಸಾಂಗತ್ಯ ಅದು ಎಂದಿನದೋ ಎಂದಿನಿಂದಲದೋ ಹಂಬಲ. ಅದಕ್ಕೆ ಒದಗಿದ ಅವಕಾಶಗಳೆಲ್ಲವೂ ಸುಂದರವಾದ ಆಕಸ್ಮಿಕಗಳೇ.

1. ‘ಭ್ರಾಮಕ ಚೆಲುವನು ಮೀರಿ ಮೇಲೇಳಲಿ ನಿಜ ನಾರಿ’ ಎಂದರು ಟ್ಯಾಗೋರರು ತಮ್ಮ ‘ಚಿತ್ರಾ’ ಎನ್ನುವ ಗೀತ ನಾಟಕದಲ್ಲಿ. ಕತೆ ಅದು ಜನಜನಿತವೇ ಆದದ್ದು; ಮಹಾಭಾರತ ಬಲ್ಲವರಿಗೆ. ಚಿತ್ರಾಂಗದೆ ಅರ್ಜುನನ ವರಿಸಿದ ಕತೆ. ಪರಿಚಿತವಾಗಿರುವ ಈ ಕತೆಯನ್ನು ಅಪರಿಚಿತಗೊಳಿಸುತ್ತ  ಕತೆಯ ‘ಮೆಯ್ಗೆಡಲೀಯದಂತೆ’ ಆಧುನಿಕ ಜಗತ್ತಿನ ಸ್ತ್ರೀ ಅಸ್ಮಿತತೆಯ ರೂಪಕವನ್ನಾಗಿಸಿ ಹಲವು ಸಂಗತಿಗಳ ಹೊಂದಿಕೆಯ ಮೂಲಕ ಹೊಸತಾಗಿ ಪರಿಚಿತಗೊಳಿಸಿದವರು ರವೀಂದ್ರರು. ಅದಕ್ಕಾಗಿ ಪುರಾಣವನ್ನು ವರ್ತಮಾನದ ಅಗತ್ಯಕ್ಕಾಗಿ ಪುನರ್ಲೇಖಿಸಿದರು.

ಅರ್ಜುನನ ವೀರತ್ವವನ್ನು ಮನಸಾರೆ ಮೆಚ್ಚಿದ ಚಿತ್ರಾಳ ಗಂಡು ಮೈ, ಆತ ಅವಳನ್ನು ತಿರಸ್ಕರಿಸುವಂತೆ ಮಾಡಿತ್ತು. ಹೆಣ್ಣು ಎಂದರೆ ಹೀಗಿರಬೇಕು ಎಂದು ಬಯಸುವ ಗಂಡು ಸಮೂಹದ ಪ್ರತಿನಿಧಿಯಾಗಿ ಅರ್ಜುನ ನಿಂತಿದ್ದ ಅಲ್ಲಿ. ಮನ್ಮಥನಿಂದ  ‘ಗಂಡು’ ಬಯಸುವ ಸೌಂದರ್ಯದ ವರ ಪಡೆದ ಚಿತ್ರೆ, ತನ್ನನ್ನು ಕಂಡು ಮೋಹಕ್ಕೆ ಒಳಗಾದ ಅರ್ಜುನನ ಕೈ ಸೇರಿದಾಗ ಬೆಚ್ಚಿದಳು. ಅವಳೊಳಗಿನ ಅರಿವು ಅವಳನ್ನು ಚುಚ್ಚಿತ್ತು; ಅವಳೊಳಗು ಅವಳನ್ನು ಸುಡತೊಡಗಿತ್ತು. ವರವನ್ನು ಮರಳಿ ಹಿಂತಿರುಗಿಸಿ ನಡೆದವಳ ‘ಸತ್ಯ’ ಅವಳನ್ನು ಹಿಂಬಾಲಿಸಿತ್ತು. ಪಾರ್ಥ ಅವಳ ನಿಜರೂಪದೊಡನೆಯೇ ಅವಳನ್ನು ಪ್ರೀತಿಸತೊಡಗಿದ್ದ.

ಹೆಣ್ಣಿನ ಅಸ್ತಿತ್ವವನ್ನು ಸಾರುವ ಪಠ್ಯವಾಗಿ ಮಾತ್ರ ನಿಲ್ಲದ ಈ ನಾಟಕವು ಇಂದಿನ ಮಾರುಕಟ್ಟೆಯ ‘ಗಂಡು’ ಸ್ವರೂಪವನ್ನೂ ಕಾಣಿಸುತ್ತದೆ. ಹೆಣ್ಣನ್ನು ತನಗೆ ಬೇಕಾದಂತೆ ಕಟೆಯುತ್ತಿರುವದನ್ನೂ ಅದಕ್ಕಾಗಿ ಜಾಹೀರಾತುಗಳೇ ಮೊದಲಾದ ದೃಶ್ಯ ಮಾಧ್ಯಮವನ್ನು ಬಳಸಿಕೊಳ್ಳುತ್ತಿರುವುದನ್ನು ಮನಗಾಣಿಸುತ್ತದೆ. ಪ್ರೀತಿಯ ಕುರಿತು, ನಮ್ಮೊಳಗಿನ ಯುದ್ಧದಲ್ಲಿ ನಾವು ಗೆಲ್ಲಬೇಕಾದ ಅನಿವಾರ್ಯತೆಯ ಕುರಿತು, ಪ್ರತಿ ನಿತ್ಯ ಇನ್ನೊಬ್ಬರನ್ನು ಒಪ್ಪಿಸಲೆಂದೇ ಬದುಕುತ್ತ ಅದನ್ನು ಹೈರಾಣಾಗಿಸಿಕೊಳ್ಳುತ್ತಿರುವುದರ ಕುರಿತು ಹೀಗೆ ಹಲವು ಮುಖಗಳು ಮೈದಾಳಿವೆ ಈ ನಾಟಕದಲ್ಲಿ.

ಇಂಥದೊಂದು ಆಧುನಿಕ ಪುರಾಣವನ್ನು ಆಡಿಸಲು ಕಳೆದ 25 ವರ್ಷಗಳಿಂದ ಭರತನಾಟ್ಯ ಅಭ್ಯಸಿಸುತ್ತಿದ್ದ ಸಮರ್ಥತಂಡವೊಂದು ದೊರಕಿತ್ತು. ಉಡುಪಿಯ ಆ ತಂಡದ ಮುಖ್ಯಸ್ಥರು ಶಿವರಾಮ ಕಾರಂತರೊಡನೆ ಯಕ್ಷಬ್ಯಾಲೆಯಲ್ಲಿ ಭಾಗವಹಿಸಿದವರೂ, ಸಿನೆಮಾ ಮುಂತಾದ ಆಧುನಿಕ ಕಲೆಯಲ್ಲಿ ಅಭಿರುಚಿ ಉಳ್ಳವರೂ ಆಗಿದ್ದರು.

ಸಾಂಪ್ರದಾಯಿಕ ಕಲಿಕೆಯ ತಂಡ ಮತ್ತು ಸಂಪ್ರದಾಯವನ್ನು ಮುರಿದುಕಟ್ಟುವುದರಲ್ಲಿ ಅತ್ಯುತ್ಸಾಹ ತೋರುವ ರಂಗಭೂಮಿ ಈ ಇಬ್ಬರೂ ಪರಸ್ಪರ ಗೌರವದಿಂದ ಬಾಳುವೆ ನಡೆಸಿ ಕಟ್ಟಿದ ಪ್ರಯೋಗವಾಗಿ ‘ಚಿತ್ರಾ’ ನೃತ್ಯ ನಾಟಕ ರೂಪುಗೊಂಡಿತು. ನಮ್ಮೊಳಗನ್ನು ಹುಡುಕಿಕೊಳ್ಳುವ, ನಮ್ಮ ರೂಢೀಗತ ಬದುಕಿನ ಕ್ರಮವನ್ನು ಚುಚ್ಚುವ ಕವನಗಳ ವಾಚನ, ವಿವಿಧ ಬಗೆಯ ರಂಗಾಟಗಳು ಅಭಿನಯದ ತರಬೇತಿಯಲ್ಲಿ ನೆರವಾದವು.

ಭರತನಾಟ್ಯದ ಪಾದಗತಿ, ಕರಣ ಸಾಮರ್ಥ್ಯ, ಭಾವಗಳನ್ನು ಶಿಲ್ಪವಾಗಿಸುವ ಭಂಗಿ, ರಸಾವೇಶದ ತುಡಿತ ಎಲ್ಲ ಗುಣಗಳನ್ನೂ ಇಟ್ಟುಕೊಂಡೇ ರಂಗಭೂಮಿಯ ಅಗತ್ಯಕ್ಕೆ ಅವನ್ನು ಹಿಗ್ಗಿಸಲಾಯ್ತು. ಉದಾಹರಣೆಗೆ ಭರತನಾಟ್ಯದ ಪ್ರದರ್ಶನದಲ್ಲಿ ಆರಂಭಕ್ಕೆ ಅವರು ‘ಅಲರಿಪು’ ಅನ್ನುವ ಪ್ರಸ್ತುತಿ ಮಾಡುತ್ತಾರೆ. ನಟರು ಅಲ್ಲಿ ತಮ್ಮ ಶರೀರವನ್ನು ಹೂವನ್ನಾಗಿಸಿ ಅರಳಿಕೊಳ್ಳುತ್ತ ಪ್ರೇಕ್ಷಕ ಪ್ರಭುವಿಗೆ ಅರ್ಪಿಸುವ ಹೂವನ್ನಾಗಿಯೂ  ಅದನ್ನು ಭಾವಿಸಿಕೊಳ್ಳುತ್ತಾರೆ.

ನಾವು ಈ ಅಲರಿಪು ಪ್ರದರ್ಶನದ ಭಾಗವನ್ನು ನಾಟಕದ ನಾಂದಿಯನ್ನಾಗಿಸಿಕೊಂಡೆವು. ಅಲ್ಲಿ  ಹೆಣ್ಣುಗಂಡಿನ ಸಹಬಾಳುವೆಯ ಸಮಾನ ಸಾಮರಸ್ಯ ಸಾರುವ ಕಾಳಿದಾಸನ ‘ವಾಗರ್ಥ’ ಕವನವನ್ನು ಬಳಸಿಕೊಂಡೆವು. ಶಬ್ಧ ಮತ್ತು ಅರ್ಥದಂತೆ ಹೊಂದಿರಬೇಕಾದ ಗಂಡು ಮತ್ತು ಹೆಣ್ಣಿನ ಆದರ್ಶ ಕೂಡುವಿಕೆಯನ್ನು ಸೂಚಿಸುವ ಈ ಕವನವನ್ನು ನಾವು ‘ಅಲರಿಪು’ ಮಾದರಿಯಲ್ಲಿ ಸಂಯೋಜಿಸಿದ್ದೆವು. ಅಲ್ಲಿ ಇಡೀ ನಾಟಕದ ಕಥಾವಸ್ತುವಿನ ಸ್ವರೂಪ ಸಂಯೋಜನೆಗೊಂಡಿತ್ತು.

ಇನ್ನು, ಹಿಂದುಸ್ತಾನಿ ಮಾದರಿಯ ಆಧುನಿಕ ರಂಗಸಂಗೀತಕ್ಕೆ ಸದಾ ಕರ್ನಾಟಕ ಸಂಗೀತದ ನಡೆಯೊಂದಿಗೆ ಚಲಿಸುವ ತಂಡ ಪ್ರೀತಿಯಿಂದಲೇ ತನ್ನ ಪಾದಗತಿಯನ್ನು ಹೊಂದಿಸಿತ್ತು. ನಾಟಕದಲ್ಲಿ ಇರುವ ಚಿತ್ರಾ ಪಾತ್ರಕ್ಕೆ ಇಬ್ಬರು ನಟಿಯರನ್ನು ಏಕಕಾಲಕ್ಕೆ ಬಳಸಿದ್ದರಿಂದ ರಂಗದ ಮೇಲೆ ಹಲವು ನಾಟಕೀಯ ಚಲನೆಗಳು ಸಾಧ್ಯವಾಯಿತು; ಅವರ ಅಂತರಂಗದ ಮಾತುಗಳನ್ನು ಕೇಳಿಸಿಕೊಳ್ಳಲು ನೆರವಾಯಿತು; ಪಾತ್ರದ ಸಂಘರ್ಷದ ತೀವ್ರತೆ ಕಾಣಿಸಲು ಅನುಕೂಲವಾಯಿತು.

ಮನ್ಮಥನ ಪಾತ್ರ ನಿರ್ವಹಿಸುತ್ತಿರುವ ನಟಿಗೆ ಧ್ವನಿಪೆಟ್ಟಿಗೆಯಲ್ಲಿಯ ಸಮಸ್ಯೆಯಿಂದಾಗ ಮಾತನಾಡುವುದು ಕಷ್ಟವಾಗಿತ್ತು. ಹೀಗಾಗಿ ನಾವು ಅವಳಾಡುವ ಮಾತಿನೊಂದಿಗೆ ಮನ್ಮಥನ ಜತೆಗಿರುವ ಗುಂಪು ಒಟ್ಟಿಗೇ ಮಾತನಾಡುವಂತೆ,  ಕೋರಸ್ ಮಾತುಗಳನ್ನಾಗಿ ಅದನ್ನು ಬದಲಾಯಿಸಿದ್ದರಿಂದ ಮನ್ಮಥನ ಪಾತ್ರಕ್ಕೊಂದು ಅಸಾಧಾರಣ ಪ್ರಭಾವಳಿಯೂ ದೊರಕಿದಂತಾಗಿತ್ತು. ಹಿಂಬಾಗದ ಪರದೆಯ ಮೇಲೆ ಬಿಲ್ಲು ಮತ್ತು ಹೂವನ್ನು ಚಿತ್ರವಾಗಿಸಿದ್ದರಿಂದ ಪರದೆಯೇ ನಾಟಕದ ವಾತಾವರಣ ನಿರ್ಮಾಣದ ‘ಸೆಟ್’ ಅಂತೆಯೂ ಕಾಣತೊಡಗಿತ್ತು.

ಭಿತ್ತಿಯಲ್ಲಿನ ಬಿಲ್ಲು ಮತ್ತು ಹೂವಿನ ಆಕಾರ, ರಂಗನಡೆಯ ಚಲನೆಯನ್ನೂ ಪ್ರತಿಫಲಿಸಿ ನೋಡುಗರಲ್ಲಿ ಬಿಂಬ ಪ್ರತಿಬಿಂಬದ  ಆಕಾರ ಸಾದೃಶ್ಯದ ಸುಖದ ಭಾವ ಮೂಡಿಸಿತ್ತು. ರಂಗದ ಮೇಲೆ ಯಾವತ್ತೂ ಪ್ರದರ್ಶನದ ಸಂದರ್ಭದಲ್ಲಿ ಮಾತನ್ನೇ ಆಡದ ಆ ಭರತನಾಟ್ಯ ಕಲಾವಿದರು ಸತತಾಭ್ಯಾಸದಿಂದ ಗೀತದಂತಹ ಮಾತುಗಳನ್ನು ಶೃತಿಬದ್ಧವಾಗಿ ಹಿತವಾಗುವಂತೆ ಉಲಿಯತೊಡಗಿದರು.    

ಕತೆಯ ದೃಷ್ಟಿಯಿಂದ ನಾಟಕದಲ್ಲಿ ಅರ್ಜುನ ಮತ್ತು ಚಿತ್ರ ಒಂದಾದರೂ, ರಂಗದಲ್ಲಿ ನಟಿಸಿದ ಆ ಚಿತ್ರಾ ಪಾತ್ರಧಾರಿಗಳಿಗೆ ಅರ್ಜುನನ ಮೇಲೆ ಕೋಪವಿನ್ನೂ ಇಳಿದಿಲ್ಲ. ನಾಟಕದ ಪ್ರಕ್ರಿಯೆ ಮತ್ತು ಪ್ರದರ್ಶನದ ಪ್ರಭಾವ ತಮ್ಮ ತಂಡದ ನಟಿಯರಲ್ಲಿ ಉಂಟುಮಾಡಿದ ಅಪಾರ ಆತ್ಮವಿಶ್ವಾಸದ ಕುರಿತೂ,  ನಾಟಕವಲ್ಲದೇ ಅವರ ಉಳಿದ ನೃತ್ಯಪ್ರದರ್ಶನದಲ್ಲಿ ಆದ ಗುಣಾತ್ಮಕ ಬದಲಾವಣೆಗಳ ಕುರಿತೂ, ಪ್ರದರ್ಶನಗಳ ಹೊರತಾಗಿಯೂ ಆ ನಟಿಯರ ದೈನಂದಿನ ಬದುಕಿನ ಚಿಂತನೆಯಲ್ಲಿಯ ಉಂಟಾದ ಮಾರ್ಪಾಡುಗಳ ಕುರಿತೂ ತಂಡದ ಹಿರಿಯರು ತುಂಬು ಪ್ರೀತಿಯಿಂದ ಮಾತನಾಡುತ್ತಾರೆ.

2. ಹೆಣ್ಣು ಒಂಟಿಯಾಗಿ ಬದುಕುವ ಆಯ್ಕೆ ಮಾಡಿಕೊಂಡರೆ ಅದು ಆಕೆಯ ಘನತೆಯ ಬದುಕಿನ ಆಯ್ಕೆಯೂ ಆಗಿರಬಹುದು. ಅದನ್ನು ಕರುಣೆಯಿಂದಲೋ ಶಂಕೆಯಿಂದಲೋ ನೋಡಬೇಕಿಲ್ಲ. ಕೃಷ್ಣನ ಗೋಕುಲ ನಿರ್ಗಮನದ ನಂತರ  ರಾಧೆಯೂ ಅಂತಹ ಬದುಕನ್ನು ಆಯ್ಕೆ ಮಾಡಿಕೊಂಡರೆ? ಅಂತದೊಂದು ಕಲ್ಪನೆಯನ್ನು ಕಟ್ಟಿಕೊಂಡ  ಕಥಾನಕ ‘ರಾಧಾ’ ಎಂಬ ಏಕವ್ಯಕ್ತಿ ಪ್ರಯೋಗದಲ್ಲಿದೆ. ಇದನ್ನು ಅಭಿನಯಕ್ಕೆ ಎತ್ತಿಕೊಂಡ ನಟಿ ಅದಾಗಲೇ ಭರತನಾಟ್ಯ ಶಾಲೆಯನ್ನು ನಡೆಸುತ್ತಿರುವ ನೃತ್ಯ ಶಿಕ್ಷಕಿಯೂ ಮತ್ತು ರಂಗಭೂಮಿಯ ಸಾಹಚರ್ಯ ಮೊದಲೇ ಇರುವ ನಟಿಯೂ ಆಗಿರುವದರಿಂದ ನೃತ್ಯ ಮತ್ತು ನಾಟಕದ ಹೊಸ ಪ್ರಯೋಗ ಕಟ್ಟಲು ಅನುಕೂಲವಾಗಿತ್ತು.

ಭರತನಾಟ್ಯದ ಮುದ್ರೆಗಳನ್ನು ಅನಿವಾರ್ಯವಾದಲ್ಲಿ ಮಾತ್ರ ಬಳಸಲು ಬಿಟ್ಟು ಉಳಿದೆಲ್ಲ ಸಂದರ್ಭದಲ್ಲಿ ನೃತ್ಯದ ಶಕ್ತಿಯನ್ನು ಮಾತ್ರ ಕಥೆಯ ಹರಿವಿನೊಳಗೆ ಮಿಳಿತಗೊಳಿಸುವಂತೆ ಪ್ರಯತ್ನಿಸಲಾಯ್ತು. ನಡೆಸಲಾಯ್ತು. ಅಚ್ಛರಿಯೆಂಬಂತೆ ನೋಡ ನೋಡುತ್ತ ಹೊಸ ಹೊಸ ‘ಗೆಶ್ಚರ್’ಗಳು ದೇಹಭಂಗಿಗಳು ಅರ್ಥಾನುಸಾರ ರೂಪುಗೊಳ್ಳತೊಡಗಿತ್ತು! ತುಂಬ ಕಡಿಮೆ ಅವಧಿಯಲ್ಲಿ ನಾವಿದನ್ನು ಕಟ್ಟಬೇಕಾದ ಒತ್ತಡದಲ್ಲಿದ್ದುದರಿಂದ ರಂಗಭೂಮಿ ಮತ್ತು ನೃತ್ಯ ಕ್ಷೇತ್ರದ  ಈ ಅಸೀಮ ವಿಸ್ತಾರವನ್ನು ಪೂರ್ಣವಾಗಿ ಅನುಭವಕ್ಕೆ ತಂದುಕೊಳ್ಳಲು ಸಾಧ್ಯವಾಗಲಿಲ್ಲವಾದರೂ ಅಂತದೊಂದು ದಿಸೆಯೆಡೆಗೆ ನಮ್ಮನ್ನು ಚಿಂತನೆಗೆ ಅದು ಹಚ್ಚಿತ್ತು.

ಆ ಪ್ರಕ್ರಿಯೆಯ ಒಟ್ಟಾರೆ ಅನುಭವವನ್ನು ನಟಿ ಹೇಳಿಕೊಂಡ ಬಗೆ ಹೀಗಿದೆ. “ಇದು ನೃತ್ಯವೂ ಹೌದು ನಾಟಕವೂ ಹೌದು. ಎರಡರ ಸಂತಸವೂ ಒಂದಾಗಿ ದೊರಕಿದೆ ನನಗೆ. ನನ್ನ ನೃತ್ಯ ರಂಗಕಲಿಕೆಗೆ ಇನ್ನೊಂದು ಹೊಸ ಆಯಾಮವನ್ನು ಈ ಪ್ರಯೋಗ ಕಲಿಸಿತು. ನೃತ್ಯವೆಂದರೆ ಬರಿಯ ಹೆಜ್ಜೆಗಳು ಕೈ ಕಾಲಿನ ಚಲನೆಗಳಷ್ಟೇ ಅಲ್ಲ ಅದು ದೇಹದ ಭಾಷೆಯೇ ಆಗಬೇಕು ಎನ್ನುತ್ತಿದ್ದ ನಿರ್ದೇಶಕರು ಹಸ್ತಾಭಿನಯವನ್ನು ಪ್ರತ್ಯೇಕವಾಗಿಸಗೊಡದೇ ನನ್ನ ದೈಹಿಕ ಭಂಗಿಯಾಗಿಸಿದರು.

ಉದಾಹರಣೆಗೆ ನಾಟಕದಲ್ಲಿ ಬರುವ ಹಾಡನ್ನು ಹಚ್ಚಿ ತೋರಿಸಿ “ನೀನು ಭರತನಾಟ್ಯದಲ್ಲಿಯಾದರೆ ಏನು ಮಾಡುತ್ತೀ ಈ ಹಾಡಿಗೆ ತೋರಿಸು” ಎನ್ನುತ್ತಿದ್ದರು. ನಾನು ನನ್ನ ಸಂಪ್ರದಾಯದ ಕ್ರಮವನ್ನು ಅಭಿನಯಿಸುತ್ತಿದ್ದಂತೆ ಅದನ್ನು ಭಿನ್ನಬಗೆಯಲ್ಲಿ ಅಭಿವ್ಯಕ್ತಿಸಲು ಅಗತ್ಯವಾದ ಹಲವು ಯೋಚನೆಗಳನ್ನು ನೀಡುತ್ತಿದ್ದರು. ನಾನು ಮನಸೋ ಇಚ್ಛೆ ದೇಹದ ಚಲನೆಯನ್ನು ಅನಿಯಂತ್ರಿತವಾಗಿ ಚೆಲ್ಲಾಡುತ್ತಿದ್ದಂತೆ ಅವರು ನಿಧಾನವಾಗಿ ಅವುಗಳೊಳಗಿಂದ ಅರ್ಥವತ್ತಾದುದನ್ನು ಹುಡುಕಿ ಪೋಣಿಸುತ್ತಿದ್ದರು.

ಹಲವು ತಾಲೀಮಿನ ಮೂಲಕ ಒಂದೊಂದೇ ಸಾಲಿನ ಅರ್ಥವನ್ನು ದೇಹ ಅಭಿವ್ಯಕ್ತಿಸಲು ಸಾಧ್ಯವಾಯಿತು. ಭರತನಾಟ್ಯದಲ್ಲಿ ಬರುವ ಅರೆಮಂಡಿಯಾಗಲೀ. ಅಡವುಗಳಾಗಲೀ ನೇರವಾಗಿ ಇಲ್ಲಿ ನಿಮಗೆ ಕಾಣಿಸಿಕೊಳ್ಳುವುದಿಲ್ಲ; ಆದರೆ ಆ ಭಂಗಿಗಳಿವೆ, ಅಡವುಗಳಿವೆ ಅವೆಲ್ಲ ಭಿನ್ನರೂಪಿಂದ ಕಾಣುತ್ತಿದೆ. ಭರತನಾಟ್ಯದಲ್ಲಿ ಸಿದ್ಧ ಮಾದರಿಯ ಅಭಿನಯದ ಹೊರತಾಗಿ ಹೊಸತನ್ನು ಹುಡುಕುವ ಮುಂದಿನ ನನ್ನ ರಂಗಪಯಣಕ್ಕೆ ಇದು ಹಾದಿ ತೋರಿತು.”

3. ಆಕೆ ಚಿಕ್ಕಂದಿನಿಂದ ನೃತ್ಯ ಮತ್ತು ಯಕ್ಷಗಾನದ ಸಹವಾಸದಲ್ಲಿದ್ದವಳು. ಇಂಜನಿಯರ್ ಪದವಿ ಓದಿ ಮುಗಿಸಿದ ಮುಂದಿನ  ಒಂದು ವರ್ಷವನ್ನು ಪೂರ್ಣವಾಗಿ ನೃತ್ಯ ಮತ್ತು ನಾಟಕಕ್ಕಾಗಿ ವಿನಿಯೋಗಿಸಲು ನಿರ್ಧರಿಸಿ ನೃತ್ಯಾಧಾರಿತ ನಾಟಕವೊಂದನ್ನು ಏಕವ್ಯಕ್ತಿ ಪ್ರಯೋಗ ಮಾಡಲು ನಿರ್ಧರಿಸಿದ್ದಳು. ಅವಳಿಗಾಗಿ ಬರೆಯಲ್ಪಟ್ಟ ಪಠ್ಯ ‘ನೃತ್ಯಗಾಥಾ’.

ಈ ನೃತ್ಯಕ್ಷೇತ್ರದಲ್ಲಿ ಕಲಿಯುತ್ತಿರುವ ಎಷ್ಟೊಂದು ಹುಡುಗಿಯರಿದ್ದಾರೆ. ಅವರಲ್ಲಿ ಅನೇಕರು ಹತ್ತನೇ ತರಗತಿ ಮತ್ತು ಎರಡನೇ ವರ್ಷದ ಪಿ.ಯು.ಸಿ. ಓದಿನ ಸಂದರ್ಭದಲ್ಲಿ  ನೃತ್ಯ ಕಲಿಕೆಯನ್ನು ಬಿಡುತ್ತಾರೆ. ಇದು ಇಂದು ಸಹಜ ಎನಿಸಿ ಹೋಗಿರುವ ವಿಷಯವಾಗಿ ಹೋಗಿದೆ. ಆದರೆ ಅಸಹಜ ಅನಿಸುವ ಸಂಗತಿಯೇನೆಂದರೆ ಈ ಎರಡು ಕಂಟಕಗಳನ್ನು ದಾಟಿದ ನಂತರವೂ ಬಹುಜನರಿಗೆ ವಾಪಾಸು ಈ ಕ್ಷೇತ್ರದ ಕಲಿಕೆಗೆ ಬರಬೇಕೆಂದೆನಿಸದಿರುವದು; ಬದುಕಿನಲ್ಲಿ ಮುಂದೆಲ್ಲೋ ಸಿಗುವ ನೃತ್ಯ ಪ್ರದರ್ಶನವನ್ನು ನೋಡುವ ಕುತೂಹಲವವೂ ಅವರಲ್ಲಿ ಉಳಿದಿರದಿರುವದು.

ಯಾಕೆ ಹೀಗಾಗಿರಬಹುದು? ನೃತ್ಯ ಕಲಿಕೆಯ ಸಂದರ್ಭದಲ್ಲಿ ಅವರು ಪ್ರಸ್ತುತ ಪಡಿಸುವ ಪಠ್ಯಗಳು ಅವರ ಜೀವನವನ್ನು ಎಲ್ಲಿಯೂ ಸಂಧಿಸದೇ ಇರುವುದೂ ಒಂದು ಕಾರಣವೇನೋ. ನಾವು ಅಭ್ಯಸಿಸುವ ಪಠ್ಯಕ್ಕೂ ನಮ್ಮ ಬದುಕಿಗೂ ಸಂಬಂಧ ಕಾಣದಿರುವ ಸಂದರ್ಭದಲ್ಲೆಲ್ಲ ನಾವು ಅಭ್ಯಾಸದಲ್ಲಿ ಉದಾಸೀನ ಹೊಂದುವ ಸ್ವಾಭಾವಿಕ ಸಂದರ್ಭಗಳನ್ನು ಶೈಕ್ಷಣಿಕ ಬದುಕಿನಲ್ಲಿ ಸಾಕಷ್ಟು ಗಮನಿಸುತ್ತೇವೆ. ಇಲ್ಲಿಯೂ ಹೀಗಾಗುತ್ತಿರಬಹುದೇ? ಇಂತಹ ಚಿಂತನೆಗಳನ್ನು ನಡೆಸುತ್ತ ‘ನೃತ್ಯಗಾಥ’ ಹುಟ್ಟಿತು.

ನೃತ್ಯಗಾಥದಲ್ಲಿ, ನೃತ್ಯವನ್ನು ತನ್ನ ಮೈ ಮನಸ್ಸಿಗೆ ಹಚ್ಚಿಕೊಂಡ ಹುಡುಗಿಯೊಬ್ಬಳು ನೃತ್ಯವನ್ನು ಓದುವ, ನೃತ್ಯದ ಸಾಧ್ಯತೆಗಳನ್ನು ಹುಡುಕುವ, ಅದನ್ನು ವಿಸ್ತರಿಸಿಕೊಳ್ಳಲು ಮಾಡುತ್ತಿರುವ ಪ್ರಯತ್ನದ ಒಂದು ಮಾದರಿಯಿದೆ. ಒಂದು ಮಾದರಿ. ಕಾವ್ಯ, ಕಾದಂಬರಿ, ಇತಿಹಾಸದ ಪುಟಗಳಿಂದ ಆಯ್ದು ಕಟ್ಟಿದ ನೃತ್ಯಗಾತಿಯರ ಕಥನವನ್ನು ಮರುರೂಪಿಸುತ್ತ, ಅದರಿಂದ ದೊರೆತ ವಿವೇಕವನ್ನು ವರ್ತಮಾನದ ನೃತ್ಯ ಬದುಕಿಗಾಗಿ ಆವಿಷ್ಕರಿಸಿಕೊಳ್ಳುವ ಸಾಧ್ಯತೆಯನ್ನು ಕಾಣಿಸುವ ಪ್ರಯತ್ನವಿದೆ ಇಲ್ಲಿ.

ಪಂಪನ ಆದಿಪುರಾಣದ ಕಾವ್ಯ ಕನ್ನಿಕೆ ‘ನೀಲಾಂಜನೆ’, ಇತಿಹಾಸ ಕಾಲದ ನೃತ್ಯಕತೆ; ‘ಶಾಂತಲೆ’, ಕಾದಂಬರಿಯೊಂದರಿಂದ ಕಾಣಿಸಿಕೊಂಡ ‘ಉಮ್ರಾವ್ ಜಾನ್’, ಇವರೆಲ್ಲ ಇಲ್ಲಿ ಆಧುನಿಕ ಕಾಲದ ನರ್ತಕಿಯ ದೇಹ ಧರಿಸಿ ಮಾತನಾಡುತ್ತಾರೆ. ಆಖ್ಯಾನಗಳನ್ನು ವ್ಯಾಖ್ಯಾನಗೊಳಿಸುವ, ನೃತ್ಯ ಮೀಮಾಂಸೆಯನ್ನು ರಂಗದ ಮೇಲೆ ಮಂಡಿಸುವ ನಮ್ರ ಪ್ರಯತ್ನವಿದು. ಕಲಾಮಾರ್ಗದ ಸಾಧ್ಯತೆಯ ಅನ್ವೇಷಣೆಯೊಂದರ ಈ ಪ್ರಯೋಗ ತನ್ನ ಸ್ವರೂಪದಲ್ಲಿ ಪ್ರಬಂಧ ರೂಪವನ್ನೂ ಸಹ ಪಡೆದಿದೆ. 

ಮುಟ್ಟಿದರೆ ಮುನಿಯಂತಿರುವ ಆ ನಟಿ ತನ್ನ ಮೈಚಳಿಯನ್ನು ಬಿಟ್ಟು ಬೇರೊಂದು ಪಾತ್ರವಾಗಲು ತುಂಬ ಕಠಿಣಶ್ರಮಪಟ್ಟಳು. ಮುದ್ರೆಗಳಿಗೆ ಭಾವಗಳನ್ನು ದಾಟಿಸಿ ನಿಸ್ಸೂರಾಗಿಬಿಡುವ, ಪುರಾಣ ಪಾತ್ರಗಳನ್ನು ತೊಗಲಿಂದ ಒಂದು ಸಮಾನ ದೂರದಲ್ಲಿಟ್ಟು ಕತೆ ಪರಿವೇಶದಲ್ಲಿ ಗುಂಪಿನೊಂದಿಗೆ ತನ್ಮಯವಾಗುವ ಅಭಿನಯದ ಮಾದರಿಗಳು ರೂಢಿಯಾಗಿರುವ ಸಂದರ್ಭದಲ್ಲಿ, ಅದನ್ನು ತನ್ನ ಮನೋಧರ್ಮ ಮತ್ತು ಮಜ್ಜೆಗಳೊಳಗೆ ಬೆಸೆಯುವಂತೆ ಮಾಡಿಕೊಳ್ಳಲು ತುಸು ಸಮಯವೇ ಹಿಡಿದಿತ್ತು.

ಆ ಪಾತ್ರಗಳ ಇಷ್ಟದ ದಿರಿಸು, ಬಣ್ಣ, ಜಡೆಹೆಣಿಗೆಯ ರೀತಿ, ತೊಡುಗೆಯ ಬಗೆ ಇಂತಹ ಕ್ರಿಯೆಗಳನ್ನು ಕಲ್ಪಿಸಿ ರಂಗದಲ್ಲಿ ಅವುಗಳ ಜತೆಗಿನ ಬದುಕುವಿಕೆ ಎಂದರೇನೆಂಬುದನ್ನು ಹುಡುಕುತ್ತ ಸಾಗಿದ ಕಲಿಕೆಯದು. ‘ಅನ್ಯ’ವನ್ನು ಸ್ವೀಕರಿಸುವದು ಎಷ್ಟು ಕಷ್ಟವೋ ಅಂತೇ ಇದು. ಹೀಗಾಗಿ ಮಾತುಗಳು ಕಂಠದಿಂದ ಹೊಕ್ಕುಳಿಗಿಳಿಯಲು ಕೆಲಕಾಲ ತಗಲಿತ್ತು. ಹಲವು ರೀತಿಯ ಅಭ್ಯಾಸಗಳ ನಂತರ ಅವಳು ನಿರಾಳವಾಗತೊಡಗಿದಳು.

ಅಭಿನಯಕ್ಕೊದಗುವ ದೇಹ ವಿನ್ಯಾಸಗಳನ್ನು ಹುಡುಕುವ ಆಟದ ಭಾಗವಾಗಿ ಡಿ.ವಿ.ಜಿ.ಯವರ ಅಂತಃಪುರ ಗೀತೆಗಳನ್ನು ಅಭ್ಯಸಿಸಿದ್ದೆವು. ಅದರಲ್ಲಿಯ ಕಾವ್ಯಗಳ ಸಾಲುಗಳನ್ನು ದೇಹಕ್ಕಿಳಿಸಲು ಹಲವು ಸುಂದರ ಪ್ರಯತ್ನಗಳು ನಡೆದವು. ವ್ಯಕ್ತಿಯ ವಿಕಾಸದಲ್ಲಿ ಒದಗುವ ಭಾವೋತ್ಕರ್ಷ ಸ್ಥಿತಿಯ ರಸಾಭಿಜ್ಞತೆಯನ್ನು ಕುರಿತು ಮಾತನಾಡುವ ಡಿ.ವಿ.ಜಿ.ಯವರ ಚಿಂತನೆಗಳೂ ಇಲ್ಲಿ ನೆರವಾದವು. ನೃತ್ಯಗಾಥ ನಾಟಕದ ಕೊನೆಯಲ್ಲಿ ಆ ನರ್ತಕಿ ‘ಹಸ್ತಾಭಿನಯದಿ ಏನನ್ನೋ ಹಿಡಿಯಲೆತ್ನಿಸುತ್ತ’ ರಂಗದಿಂದ ಮರೆಗೆ ಚಲಿಸುತ್ತಾಳೆ. ಈ ಏನನ್ನೋ ಹುಡುಕುವ ಚಲನೆ ಜಾರಿಯಲ್ಲಿದೆ.

4. ನೃತ್ಯ ಮತ್ತು ನಾಟಕದ ಸಂಬಂಧ ಪರಿಣಾಮವು ಕೇವಲ ಪದಚಿತ್ರಗಳ ಸಂಯೋಜನೆಯಲ್ಲಿ, ಸಂಗೀತವನ್ನು ವಿನಿಯೋಗಿಸುವ ಉಪಕ್ರಮದಲ್ಲಿ, ಪಾತ್ರ ಸ್ವಭಾವ ಚಿತ್ರಣದ ವೈವಿಧ್ಯತೆಯಲ್ಲಿ, ಆವರಣ ನಿರ್ಮಾಣದ ಸಂದರ್ಭ ಸೃಷ್ಟಿಯಲ್ಲಿ ಮಾತ್ರವಲ್ಲ, ಅಂದರೆ ಆಕೃತಿಯಲ್ಲಿ ಮಾತ್ರವಲ್ಲ ಆಶಯದಲ್ಲಿಯೂ ತಲೆ ತೋರಿರುವ ಎಷ್ಟೋ ಸಂದರ್ಭಗಳಿವೆ. 

‘ನಾರಸಿಂಹ’ ಎಂಬ ನೃತ್ಯರೂಪಕವನ್ನು ನಿರ್ದೇಶಿಸುತಿರುವ ಸಂದರ್ಭವದು. ಈ ರೂಪಕವನ್ನು ‘ಸಂಪ್ರದಾಯದ ಮಾದರಿಯಲ್ಲಿಯೇ’ ಕಟ್ಟಬೇಕೆಂದು ಹೊರಟಿದ್ದೆ. ಆ ಬಗೆಯ ಸಂಗೀತವೂ ಸಿದ್ಧವಾಗಿತ್ತು. ಆದರೆ ರೂಪಕ ಸಿದ್ಧವಾಗುತ್ತ ನಡೆದಂತೆ ಅದರ ರೂಪಗಳಲ್ಲಿ ಬಹುರೂಪಿತನ ಸೇರ್ಪಡೆ ಆಗತೊಡಗಿತು.

ಆಧುನಿಕ ರಂಗಭೂಮಿಗೇ ಇರುವ ಪ್ರತಿರೋಧದ ಗುಣವಿದೆಯಲ್ಲಾ ಅದು, ಮಾನಿನಿ ಮತ್ತು ಮೇಧಿನಿಯ ಆಕ್ರಮಣವನ್ನು ವಿರೋಧಿಸುವ ನೆಲೆಯ ಗುಣವಾಗಿ ರೂಪಕದಲ್ಲಿ ಹೊಸ ವಿನ್ಯಾಸ ಪಡೆದು ರೂಪಕದ ಸಾಮಾಜಿಕ ಪ್ರಸ್ತುತತೆಯ ಮೌಲ್ಯವನ್ನು ಹೆಚ್ಚಿಸಿದ ಕೌತುಕವೂ ನಡೆದುಹೋಯ್ತು. ‘ಪೊಲಿಟಿಕಲಿ ಕರೆಕ್ಟ್’ ಆಗಬೇಕೆಂದು ಮಾಡಿರುವ ಪ್ರಯತ್ನವಾಗಿರಲಿಲ್ಲ ಅದು. ಕಲಾಪ್ರಕಾರಗಳ ಆಳ ಪ್ರೀತಿ ಅಂತಹ ಹುಟ್ಟನ್ನು ಹುಟಿಸುತ್ತದೆ. ಕಲಾವಿದ ನೈತಿಕವಾಗಿರುವುದೆಂದರೆ ನನ್ನ ದೃಷ್ಟಿಯಲ್ಲಿ ಆತನಿಗಿರುವ ಕಲಾ ನಿಷ್ಠೆಯೇ ಆಗಿದೆ.

ನೃತ್ಯದ ಅರೆದೆರೆಯುವ ನೋಟದ ಕೌತುಕದ ಪಯಣ ಅದು ವಾಚ್ಯವಲ್ಲದ ನಿಗೂಢ ಜಗದ ಪಯಣ. ದೇಹವನ್ನು ಸೃಜನಶೀಲಗೊಳಿಸುವ ಆಟದ ಪಯಣ. ಒಮ್ಮೆ ಹೀಗಾಯ್ತು. ಹಾಡಿನ ಸಾಲಿನಲ್ಲೆಲ್ಲಿಯೋ ಒಂದೆಡೆ ಬಳ್ಳಿಯೊಂದರ ಹಬ್ಬುವಿಕೆಯ ಕುರಿತ ಎರಡು ‘ಪದ’ಗಳಿದ್ದವು’ ಎರಡು ಶಬ್ಧಗಳು. ನಾವೆಲ್ಲರೂ ಆ ಎರಡು ‘ಪದ’ಗಳಲ್ಲಿಯ ಚಿತ್ರಗಳನ್ನು ದೇಹ ಚಲನೆಯಲ್ಲಿ ಹಿಡಿಯುವ ಆಟ ಆರಂಭಿಸಿದೆವು. ದಿನವೆಲ್ಲ ನಡೆಯಿತು ಆ ಆಟ. ಏನೋ ಒಂದು ಕಂಡಿತು!.

ಪ್ರದರ್ಶನ ನಡೆದಾಗ ಪ್ರೇಕ್ಷಕರು ಎಲ್ಲೋ ಒಂದೆಡೆ ಕಣ್ಣು ಮುಚ್ಚಿ ತೆರೆಯುವುದರೊಳಗೆ, ಅಥವಾ ಪಕ್ಕದಲ್ಲೆಲ್ಲೋ ಒಮ್ಮೆ ತಿರುಗಿ ನೋಡುವುದರೊಳಗೆ ಮುಗಿದೇ ಹೋಗುವಷ್ಟು ಕಡಿಮೆ ಹೊತ್ತಿನ ಕ್ಷಣದ ಚಿತ್ರವದು. ಆದರೂ ಆ ಕ್ಷಣದ ಸೃಷ್ಟಿಯ ಸಂದರ್ಭದಲ್ಲಿ ನಡೆದ ಹುಡುಕಾಟ, ಶ್ರಮ, ಅದೆನೋ ದೊರಕಿತು ಅಂತ ಅನಿಸಿದಾಗ ಆದ ಸಂಭ್ರಮ ಇದು ನಮ್ಮೊಳಗೆ ಸರ್ವಕಾಲವೂ ಉಳಿಯಬಹುದಾದದ್ದು. ನೃತ್ಯದೊಡನೆಯ ಪಯಣ ಅಂತಹ ಅಮಿತ ಅವಿರತಗಳಿಗೆಗಳ ಅನ್ವೇಷಣೆಯ ಪಯಣ.  

ರಂಗಭೂಮಿಯು ಲೋಕಾನುಕೀರ್ತನೆಗಾಗಿ ತನ್ನಲ್ಲಿ ಬಹುರೂಪಗಳನ್ನು ಧರಿಸಿಕೊಳ್ಳಬೇಕಾಗುತ್ತದೆ. ಈ ಬಹುರೂಪತೆಗೆ ಅಗತ್ಯ ಶಕ್ತಿಯನ್ನೆರೆಯಬಲ್ಲಂತಹ, ಭೂವ್ಯೋಮವನ್ನು ಚಲನೆಯಲ್ಲಿ ಧರಿಸಿಕೊಂಡಂತಹ ನೃತ್ಯವೆಂಬ ಕಲೆಯನ್ನು ಒಳಗೊಳ್ಳುವ ಬಗೆಯನ್ನು ಹುಡುಕ ಹೊರಟ ಪಯಣವಿದು. ಈ ಪಯಣಕ್ಕೆ ನೆರವಾದ ವಿದ್ವಾನ್ ಸುಧೀರ್ ರಾವ್ ಕೊಡವೂರು, ವಿದುಷಿ ಮಾನಸಿ ಸುಧೀರ್, ವಿದುಷಿ ಮಂಜುಳಾ ಸುಬ್ರಹ್ಮಣ್ಯ, ವಿದುಷಿ ಅನಘಶ್ರೀ, ಸುಧಾ ಆಡುಕಳ, ಶ್ವೇತಾ ಹಾಸನ ಇವರೆಲ್ಲರನ್ನೂ ಗೌರವದಿಂದ ಸ್ಮರಿಸುವೆನು. 

‍ಲೇಖಕರು ಶ್ರೀಪಾದ್ ಭಟ್

November 14, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Kiran Bhat

    ರಂಗಸಾಂಗತ್ಯದ ವಿಶಿಷ್ಟಾನುಭವದ ಸೊಗಸಾದ ಕಥನ.

    ಪ್ರತಿಕ್ರಿಯೆ
  2. SUDHA SHIVARAMA HEGDE

    ಪರವಶಗೊಳಿಸುವ ಬರಹ.
    ಚಾಚಿದ ಬೆರಳಿಗೆ ಅರಿವು ತಾಗಿದ ಥರಹ….

    ಪ್ರತಿಕ್ರಿಯೆ
  3. Sudha ChidanandaGowds

    ಚಿತ್ರಾ ಮತ್ತು ನೃತ್ಯಗಾಥಾ ಎರಡನ್ನೂ ನಾನು ನೋಡಿದ್ದೇನೆ. ನೃತ್ಯವನ್ನೇ ಬೇಸ್ ಆಗಿ ಹೊಂದಿದ್ದರೂ ರಂಗಭೂಮಿಯ ನಿರ್ದೇಶನ ಮೇಲ್ಗೈ ಪಡೆದಂತೆ ರಂಗಸಜ್ಜಿಕೆಯಿತ್ತು. ಕಥಾವಸ್ತುವಿನ ಬೆಂಬಲವಂತೂ ಇದ್ದೇ ಇದೆ ಎರಡೂ ರಂಗಕೃತಿಗಳಲ್ಲಿ. ಜೊತೆಗೆ ನೃತ್ಯ ಪ್ಲಸ್ ರಂಗಭೂಮಿ ಪ್ಲಸ್ ಸಂಗೀತ ಮೇಳೈಸಿದ ದೃಶ್ಯಕಾವ್ಯವೆಂದರೆ ಇದೇ ಏನೋ ಎಂಬಂಥದೊಂದು ತಾದಾತ್ಮ್ಯೆಯನ್ನು ಪ್ರೇಕ್ಷಕರಲ್ಲಿ ಉಂಟುಮಾಡುತ್ತವೆ. ಈ ಅನುಭವಗಳನ್ನು ಕಟ್ಟಿಕೊಡುವಲ್ಲಿ ಲೇಖನಿಯೂ ಕೈ ಹಿಡಿದಿದೆ.
    ಅಭಿನಂದನೆ ಅವಧಿ ಮತ್ತು ಶ್ರೀಪಾದ್ ಭಟ್.

    ಪ್ರತಿಕ್ರಿಯೆ
  4. SUDHA SHIVARAMA HEGDE

    ಏನನ್ನೋ ಮುಟ್ಟುವ ತವಕದಲ್ಲಿ ಚಾಚಿದ ಕೈಯ್ಯ ಬೆರಳುಗಳಿಗೆ ಅರಿವಿನ ತನಿಸು ಸ್ಪರ್ಶಿಸುವಂತಹ ಬರಹ……
    ನೃತ್ಯಾನಂದದಲ್ಲಿ ಕಳೆದು ಹೋದೆ

    ಪ್ರತಿಕ್ರಿಯೆ
  5. Kavya Kadame

    ನೃತ್ಯಾಭಿವ್ಯಕ್ತಿಯ ಬೆರಗನ್ನು ರಂಗಕ್ಕೆ ಅಳವಡಿಸಿದಾಗ ಆ ಸೊಗಸೇ ಬೇರೆ. ನೀವು ನಿರ್ದೇಶಿಸಿದ ಚಿತ್ರಾ ಕಂಡು ಮಾರುಹೋಗಿದ್ದೆ. ನೃತ್ಯಗಾಥಾ ಯುಟ್ಯೂಬಿಗೆ ಬರಲೆಂದು ಪ್ರಾರ್ಥಿಸುತ್ತಿದ್ದೇನೆ. ಎರಡೇ ಶಬ್ಧಗಳನ್ನಿಟ್ಟುಕೊಂಡು ದಿನವೆಲ್ಲ ಆ ಒಂದು ನೃತ್ಯ ಪ್ರತಿಮೆಗಾಗಿ ಹುಡುಕಿದ ಅನುಭವ surreal ಆಗಿದೆ. Loved the article.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: