–ಮಹಾದೇವ ಬಸರಕೋಡ
ರಾಧೆಯ ಪ್ರೀತಿ.
ಅಂದೊಮ್ಮೆ
ನಿನ್ನ ತುದಿ ಬೆರಳು ಅಕಸ್ಮಿಕವಾಗಿ
ನನ್ನ ಮುಂಗುರುಳ ಸೋಕಿದಾಗ
ನನಗರಿವಿಲ್ಲದಂತೆ
ನಿನ್ನ ತೋಳಿನಾಸರೆ ಬಯಸಿ
ನೂರೊಂದು ಕನಸು ಕಂಡಿದ್ದೆ..
ನಿನ್ನನ್ನು ಬಿಗಿದಪ್ಪಲು ಕಾತರಿಸಿ
ನಿನ್ನ ನೆರಳು ಹುಡುಕಿ ಬಂದಿದ್ದೆ
ನಿನ್ನ ಕಣ್ಣಿಗೆ ಮುತ್ತನಿಡಲು
ಅವಸರಿಸಿ ಪುಳುಕಿಗೊಂಡಿದ್ದೆ
ನಿನ್ನ ಹೆಸರು ಉಸುರುವ
ನನ್ನ ಹೃದಯದ ಮೌನ ಭಾಷೆಯ
ಅರ್ಥೈಸಲು ತುಂಬ ಹೆಣಗಾಡಿದ್ದೆ..
ಊರ ತೇರನೇಳೆಯುವಾಗ
ನೆರದ ಜನಸ್ತೋಮದಲಿ
ಕಣ್ಣರಳಿಸಿ ನಿನ್ನನೆ ನೋಡುತ್ತಿದ್ದೆ
ಕಾರ್ತೀಕದ ಬೆಳಗುವ
ನೂರು ಸಾಲುಗಳ ದೀಪಗಳ
ಬೆಳಕಿನಲಿ ನಿನ್ನ ಬಿಂಬ ಹುಡುಕುತ್ತಲಿದ್ದೆ..
ನಿನಗರಿವಿಲ್ಲದಂತೆಯೇ
ನೀನು ಬಿಟ್ಟ ಹೆಜ್ಜೆ ಗುರುತುಗಳಲಿ
ಜೊತೆಯಾಗಿ ನಡೆದಿದ್ದೆ
ನನ್ನ ಉಸಿರಿನೊಳಗೆ
ನಿನ್ನತನವನೆಲ್ಲ ಒಂದಾಗಿಸಿ
ನನ್ನ ನಾನು
ಇನ್ನಿಲ್ಲದಂತೆ ಕಳೆದುಕೊಂಡಿದ್ದೆ..
ಪ್ರೀತಿ ಎಂದರೆ ಪಡೆದುಕೊಳ್ಳುವ
ಹುಚ್ಚು ಹಂಬಲವಲ್ಲ
ಸಿಗದೇ ಹೋದರೂ
ಉಳಿಸಿಕೊಳ್ಳುವ
ತೀರದ ತಪವದು
ನಿನ್ನ ಉಸಿರು ಉಂಡು
ನಾನು ರಾಧೆಯಾಗಿದ್ದೆ..






0 Comments