ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೂರುಲ್ಲಾ ತ್ಯಾಮಗೊಂಡ್ಲು ಹೊಸ ಕವಿತೆ – ಸಿಲಿಕಾನಿನ ಮ್ಯಾಟರ್ರು…

ನೂರುಲ್ಲಾ ತ್ಯಾಮಗೊಂಡ್ಲು

ಸಿಲಿಕಾನ್ ಸಿಟಿಯ ಸೀದುಹೋದ ತುಟಿಗಳಲಿ
ನಗೆಯೊಂದು ಜಾರಿ ಬೀಳುತ್ತದೆ
ಗಿಜುಗುಡುವ ರಾತ್ರಿ ಕಣ್ಣಲಿ
ನಕ್ಷತ್ರಗಳ ಕಪ್ಪುಹಾಡು ಹೆಪ್ಪುಗಟ್ಟುತ್ತದೆ

ದಾರಿ ಬದಿ ಎಗ್ ರೈಸ್ ಫ್ರೈಡ್ ರೈಸ್ ಚಪ್ಪರಿಸುವ
ಹಸುಳೆಗಳ ಕೆನ್ನೆ ಮೇಲೆ ಬೆವರ ಹನಿ
ಸೂರ್ಯಕೋಲಂತೆ ಮಿಂಚುಹೋಗುತ್ತದೆ
ಫ್ಲೈಓವರಿನ ಕೆಳಗೆ ಹರಿದ ಬೆಸೀಟು ಹೊದ್ದು ಮಲಗಿದ
ರೋಗಿಷ್ಟ ಮುದುಕನಿಗೆ ತಲೆದಿಂಬಾದ ಚಂದ್ರ
ಶಾಶ್ವತವಾಗಿ ಉಳಿದುಬಿಡುತ್ತಾನೆ

ಟಾಯ್ಲೇಟಿನ ಗಬ್ಬುನಾತದ ನಡುವೆಯೂ
ಇನ್ನೂರು ಮುನ್ನೂರಿಗೆ ಡೀಲಾಗುವ
ಕಾಂಡೊಮುಗಳ ಉಸಿರಾಟದ ಸದ್ದು
ನಿಧಾನಕ್ಕೆ ಜೀವ ಕಳೆದುಕೊಳ್ಳುತ್ತದೆ

ಆಕಾಶದಲ್ಲಿ ಉಲ್ಕೆಗಳು ಉರಿದು ಹೋದಂತೆ
ಆಗೊಮ್ಮೆ ಈಗೊಮ್ಮೆ
ಕಾರ್ಪೋರೇಶನ್ ತೊಟ್ಟಿ, ಕಸದ ರಾಶಿಗಳ ನಡುವೆ
ಗರ್ಭಪಾತದ ಶಿಶು ಬುದ್ದನಗೆ

ಹಗಲುಗನಸುಗಾರರು ರೆಕ್ಕೆ ಮೂಡಿಸಿಕೊಂಡು
ಹರಿದಾಡುವಾಗ
ಒಂದಿಷ್ಟು ಹೊತ್ತು ರಾತ್ರಿಯ ನೀರವತೆ
ಮತ್ತದೇ ಗಿಜುಗುಡುವ ಜನಜಾತ್ರೆ
ಕಾಣದ ನಕ್ಷತ್ರಗಳು ನಾಚುವಂತೆ

ಕೊರೆವ ಚಳಿ ಕಟ್ಟಡಗಳನ್ನು ಕೊರೆಯುವಷ್ಟು
ಇಲ್ಲಿಯ ಜನರನ್ನಲ್ಲ
ಏಕೆಂದರೆ
ಇದು ಸೀಲ್ ಕಾನನ
ಗಾಳಿ ಇಲ್ಲಿ ಇಂಗಾಲ ಹೊದ್ದು ನುಸುಳುತ್ತದೆ
ಬೆಳಗು ವಕ್ರೀಭವಿಸಿ ಮುಂದೆ ಸಾಗುತ್ತದೆ

ಈ ಸಿಲಿಕಾನಿನ ಮ್ಯಾಟರೆ ಆಪತ್ತು
ಹೇಳಿದಷ್ಟು ಹೆಚ್ಚು ಒಂದು ಮೂರು ಹತ್ತು ಇಪ್ಪತ್ತು

‍ಲೇಖಕರು Admin

31 December, 2021

1 Comment

  1. Bi

    ಅರ್ಥಪೂರ್ಣ ಕವಿತೆ ಎನ್ಟಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading