ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೂತನ ದೋಶೆಟ್ಟಿ ಕವಿತೆ – ಹುಡುಕು ಉತ್ತರವ…

ನೂತನ ದೋಶೆಟ್ಟಿ

ಬೆಳಗಾಯಿತು ಅಂತ ಹೇಳೋಕೆ
ಸೂರ್ಯ ಬಂದು ಹೋಗ್ತಾನಾ?
ರಾತ್ರೀಲಿ ಕಣ್ಬೆಳಕಿರಲಿ ಅಂತ
ಚಂದ್ರ ಬರ್ತಾನಾ?

ಬಿಸಿಲು, ಮಳೆ, ಛಳಿಗೆ
ಏನ್ ಕೆಲ್ಸ ಹಾಗಾದ್ರೆ?
ಗಾಳಿ, ಗುಡುಗು, ಮಿಂಚು, ಸಿಡಿಲು
ಸುಮ್ನೆ ಹೆದ್ರಸಕ್ಕೇನಾ?

ಇರುವಿ ಎಂಭತ್ತು ಕೋಟಿ ಜೀವ
ಭೂಮಿ ಮೇಲೆ ಏಕೆ?
ಕುರ್ಚಿ ಮೇಲೆ ಕೂತ್ಕೊಳ್ಳೊ
ನೀನೊಬ್ಬನೇ ಸಾಕಿತ್ತಲ್ವಾ?

ಇಷ್ಟು ದೊಡ್ಡ ಭೂಮಿ
ಅಷ್ಟಗಲದ ಆಕಾಶ
ಇವೆರಡನ್ನೂ ಮುಳಗ್ಸಬಹುದಾದ ಸಮುದ್ರ
ಇರೋದಾದ್ರೂ ಏಕೆ?

ಕೇಳ್ಕೊಂಡಿದ್ದೀಯಾ ಯಾವತ್ತಾದ್ರೂ?

ಓಹೋ ಪುರಸೊತ್ತಾಗಿಲ್ವಾ?

ಸ್ಕೂಲು, ಕಾಲೇಜು, ಜಾಬು,
ವಿದೇಶ, ಮದ್ವೆ, ಮಕ್ಳು, ಮನೆ, ಆಸ್ತಿ…
ಹಸಿವು, ನೀರಡಿಕೆ, ಸಾಲ
ಕುಣಿಕೆ, ಪಾಷಾಣ….

ಒಂದ್ಸಾರಿ ಹಿಂತಿರಗ್ಬಾರ್ದಾ?
ಬೆಟ್ಟ,ಗುಡ್ಡ ಕಾಣ್ಸೋದು.
ಎಡಕ್ಕೆ ನೋಡಿದ್ರೆ
ಕಾಗೆ, ಗುಬ್ಬಿ, ಕೋಳಿ ಕಾಣ್ಸೋವು.
ಬಲಕ್ಕೆ…
ಮಲ್ಲಿಗೆ ಕಂಪು, ಜಾಜಿ ಸೊಂಪು
ಮುಂದಕ್ಕಾದ್ರೂ ನೋಡಿದ್ರೆ
ನಡೆದಷ್ಟೂ ಕರೆಯುವ ಭರವಸೆಯ ಹಾದಿ….

ಎಲ್ಲ ಕಳ್ಕೊಂಬಿಟ್ಟೆ ಅನ್ಸತ್ತಾ ಯಾವತ್ತಾದ್ರೂ?

ಈಗ್ಲೂ ತಡ ಆಗಿಲ್ಲ ಕಣೋ
ಕುರ್ಚಿ ಬಿಡು, ಹೆಜ್ಜೆ ಇಡು
ಒಂಟಿ ಸುಂಟರಗಾಳಿ
ಎಲ್ಲವೂ ನಿನಗಾಗಿ ಅಲ್ಲ ಮಾರಾಯ..

ಕೊಚ್ಚು, ಕಡಿ, ಬಡಿ ಸಾಕಾಗ್ಲಿಲ್ವಾ?
ರೋಗ, ಆಸ್ಪತ್ರೆ, ಔಷಧಿ ಹಣ್ಣಾಗ್ಸಿಲ್ವಾ?
ಇವತ್ತು ಕಳೆಯಲಿ ಬಿಡು
ನಾಳೆಗೆ ಹೊಸ ದಾರಿ ನೋಡು.
ಎಲ್ಲರಿಗೂ ಅಷ್ಟೋ ಇಷ್ಟೋ ಮಾಡ್ಬೇಕು ಕಣೋ

ಪ್ರಶಸ್ತಿ ಸಿಗದೆ ಇರಬಹುದು
ಶಾಂತಿನಾದ್ರೂ ಸಿಗುತ್ತಲ್ಲ…
ಬುದ್ಧಗೆ ಸಿಕ್ಕಿದ್ದು
ಮಹಾವೀರಗೆ ದಕ್ಕಿದ್ದು
ಬಸವಣ್ಣಗೆ ಕಂಡಿದ್ದು

ಮನುಷ್ಯರೇ ಆಗಿದ್ದವರು ದೇವರಾಗಿದ್ದು
ಸುಮ್ನೆ ಅಂತೀಯಾ..?
ಕಣ್ಣೊರೆಸಿದ್ರು, ಕಣ್ತೆರೆಸಿದ್ರು
ಅಷ್ಟೇ ಕಣೋ ಎಲ್ರೂ ಕೇಳೋದು

ಅದನ್ನೂ ಮಾಡದಿದ್ದ ಮೇಲೆ
ನಿನ್ನ ಜನ್ಮಕಿಷ್ಟು…

‍ಲೇಖಕರು Admin

25 June, 2021

9 Comments

  1. ನಾಗರಾಜ್ ಹರಪನಹಳ್ಳಿ

    ಅದ್ಭುತ ಕವಿತೆ, ಶ್ರೇಷ್ಠ ಕವಿತೆ; ಕನ್ನಡ ಭಾಷೆಯ ಕಸುವು , ಕವಿಯ ಕಾಣ್ಕೆಯ ಎತ್ತರ ಈ ಕವಿತೆಯಲ್ಲಿದೆ.
    ಸಾಕು , ಅಕ್ಷರ ಲೋಕದಲ್ಲಿ ಉಳಿಯಲು ಇಂಥದೊಂದು ಕವಿತೆ..

    • ನೂತನ ದೋಶೆಟ್ಟಿ

      ಧನ್ಯವಾದಗಳು ನಾಗರಾಜ್… ನಿಮ್ಮ ಅಭಿಮಾನಕ್ಕೆ..

  2. ಶ್ರೀಲತಾ

    ಅರ್ಥಪೂರ್ಣ ಕವಿತೆ.
    ಆದರೆ ಈ ಜನಕ್ಕೆ ಪ್ರಶ್ನೆಯೇ ಇಲ್ಲ. ಉತ್ತರ ಹುಡುಕುವ ಧಾವಂತ ಅವರಲ್ಲಿ ಮೂಡಿದರೆ ಬದುಕಿನ ಸಾರ್ಥಕತೆ. ಅವರಲ್ಲಿ
    ಧಾವಂತ ಮಾಡುವುದು ಹೇಗೆ?
    ಕಾಲಿಲ್ಲದ ಕುರ್ಚಿಯಮೇಲೆ ಇನ್ನಾರದೋ ಕಾಲನ್ನು ಮಾಡಿಕೊಂಡು ತಾನು ಅಮರ ತನ್ನ ಕುರ್ಚಿ ನಿರಂತರ ಎಂದು ಭಾವಿಸುವ ಜನ ಇವರು

    • ನೂತನ ದೋಶೆಟ್ಟಿ

      ಶ್ರೀಲತಾ, ಧನ್ಯವಾದಗಳು

  3. ಲಲಿತಾ ಸಿದ್ಧಬಸವಯ್ಯ

    ನೂತನ್ , ಸೊಗಸಾದ ಕವಿತೆ. ಮಾರ್ಮಿಕ ಸಾಲುಗಳು. ಧನ್ಯವಾದಗಳು.

    • ನೂತನ ದೋಶೆಟ್ಟಿ

      ಮೇಡಂ, ನೆಚ್ಚಿನ ಕವಿ ನೀವು.
      ನಿಮ್ಮ ಓದು, ಮೆಚ್ಚುಗೆಗೆ ಖುಷಿಯಾಯಿತು.

  4. G.N.Ranganatha Rao

    Congrats.Madam,
    A thought provoking poem, A stimulative for introspection.
    G.N.Ranganatha Rao

    • ನೂತನ ದೋಶೆಟ್ಟಿ

      Thank you so much sir. Your opinion means a lot.
      Your column here is my favourite.

    • ನೂತನ ದೋಶೆಟ್ಟಿ

      Thank you so much sir.
      Your opinion means a lot.
      Your column here is my favourite.
      Regards

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading