ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೂತನ ದೋಶೆಟ್ಟಿ ಕವಿತೆ- ಸಂಜೆಯ ನಂತರ..

ಹೆಣ್ಣುಗಳು ಸಂಜೆಯ ನಂತರ ಹೊರಬರಬಾರದೆಂಬ ಆಜ್ಞೆಯ ಹಿನ್ನೆಲೆಯಲ್ಲಿ

ನೂತನ ದೋಶೆಟ್ಟಿ

ಸಂಜೆಯಾಗುತ್ತಿದ್ದಂತೆ
ಗಲ್ಲಿಗಲ್ಲಿಗಳಲ್ಲೂ
ಮಹಾದ್ವಾರಗಳು ಎದ್ದು ನಿಲ್ಲುತ್ತವೆ
ಕಾವಲಿಗಾಗಿ.

ಆರತಿಗೊಬ್ಬ ಮಗಳ ಕಾಲುಗಳಲ್ಲಿ
ಚಿನ್ನದ ಸಂಕೋಲೆಗಳ ಕಟ್ಟಿ
ಕೀರುತಿಗೊಬ್ಬ ಮಗನ ಕೈಯಲ್ಲಿ
ಬೀಗವನ್ನು ಕೊಡುತ್ತವೆ ಈ ಗಲ್ಲಿಗಳು
ಎದ್ದು ನಿಂತ ಮಹಾದ್ವಾರಗಳು ಹೇಳುತ್ತವೆ
ಸಂಕೋಲೆಯ ಕಥೆಗಳ

ಕತ್ತಲಿನಲ್ಲಿ ಭದ್ರವಾಗುತ್ತದೆ ಅದು
ತುಟಿಯ ರಂಗಿನಲ್ಲಿ ರಕ್ತ ಒಸರಿಸುತ್ತದೆ
ದೇಹವನ್ನು ಪೂರ್ತಿ ಮುಚ್ಚುವ
ಕಪ್ಪು ನಿಲುವಂಗಿಯಾಗಿ
ಕಣ್ಣಿಗೊಂದು ಕಿಂಡಿಯಾಗುತ್ತದೆ
ದೇಹದ ಉಬ್ಬು ತಗ್ಗುಗಳಲ್ಲಿ
ಹಸಿದ ನೋಟವಾಗಿ ಕೊಯ್ಯುತ್ತದೆ
ದನಿಯೆತ್ತಿದರೆ
ದೇಹ ಹೊಕ್ಕು ನರಳಿಸುತ್ತದೆ.

ಇಚ್ಛಾರೂಪಿ ಮಾಯಾವಿ
ಈ ಸಂಕೋಲೆ
ಗಂಡೇ ಇರಬೇಕು
ಅದರಲ್ಲೂ ಕ್ರೂರಿಯೇ ಸರಿ.
ಹೆಣ್ಣಲ್ಲವೇ ಅಲ್ಲ
ಅವಳದು ಬಿಡುಗಡೆಯ ಹಾದಿ.

ಎದ್ದು ನಿಂತ ಮಹಾದ್ವಾರಗಳು ವಿಷಾದಿಸುತ್ತವೆ
ಕದಗಳಿರುವುದು ತೆರೆಯಲು
ಬೀದಿಯಲ್ಲಿ ನಿಂತು ಎಂಥ ಕಾವಲು
ಮುಚ್ಚಿದ ಕದಗಳ ಹಿಂದಿನ ನರಳಾಟ ಕೇಳಿಯೂ.

ಅವಳ ಕಾವಲೆಂದರೆ ಅರಿವಿಗೆ ಕಾವಲು
ಹಾಕುವುದಾದರೂ ಸಾಧುವೆ?
ಕತ್ತಲಾಗುವುದು ಇಡಿಯ ಜಗಕೆ
ಅವಳಿಗೊಂದು ಬೇರೆ ಕತ್ತಲ ಜಗವೇ?!
ಬೆಳಕಿನ ಕಿರಣ ಕಸಿದರೆ
ಮಸುಕಾಗುವುದು ಬೆಳಕೇ
ನೆನಪಿರಲಿ ನಿನಗೆ ಸಂಕೋಲೆಯೆ.

‍ಲೇಖಕರು Admin

29 August, 2021

2 Comments

  1. ನಾಗರಾಜ್ ಹರಪನಹಳ್ಳಿ

    ಕತ್ತಲೊಳಗೆ ಕತ್ತಲಿನ ದನಿಯನ್ನು ಕಡೆದಿಡುವ ಕವಿತೆ..
    ಬೆಳಕಿನ ಕಿರಣ ಕಸಿಯಲು ಸಾಧ್ಯವಿಲ್ಲ ಎಂಬ ಆಶಾವಾದ ಸಹ ಕವಿತೆಯಲ್ಲಿದೆ

    • ನೂತನ ದೋಶೆಟ್ಟಿ

      ಧನ್ಯವಾದಗಳು ನಾಗರಾಜ್ ಅವರೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading