ಉದಯ ಗಾಂವಕರ್‌ ಓದಿದ ‘ಶಿಕಾರಿ’

ಉದಯ ಗಾಂವಕರ್‌

ಶಿಕಾರಿಯ ನಾಗಪ್ಪ ತನ್ನನ್ನು ತಾನು ಪರಿಚಯಿಸಿಕೊಳ್ಳುವುದು ಹೀಗೆ- ನಾನು ಹುಟ್ಟಿದ್ದು ಉತ್ತರ ಕನ್ನಡದ ಹನೇಹಳ್ಳಿ ಎಂಬ ಸಣ್ಣ ಹಳ್ಳಿಯಲ್ಲಿ, ಸುಮಾರು ನಲವತ್ತು ವರ್ಷಗಳ ಕೆಳಗೆ, ಬೆಳೆದದ್ದು ಕೋಳಿಗಿರಿಯಣ್ಣನ ಕೇರಿಯಲ್ಲಿ…

ಇದನ್ನು ಓದುವಾಗ ಬದುಕಿನ ಆಕಸ್ಮಿಕಗಳೆಲ್ಲ ನೆನಪಾಗುತ್ತವೆ. ಈ ಹನೇಹಳ್ಳಿಯೆಂಬ ಊರಿನ ಪಕ್ಕದೂರೇ ನನ್ನ ಅಜ್ಜಿಮನೆಯಾಗಿದ್ದರೂ, ಚಿಕ್ಕಂದಿನಲ್ಲಿ ಆಗಾಗ ಈ ಊರಿನ ಹೆಸರು ಕೇಳುತ್ತಿದ್ದರೂ, ನಾನು ಕಾಲೇಜಿಗೆ ಹೋಗಿ, ಅಲ್ಲಿ ನಾನು ಹಾಜರಾದ ಕೆಲವೇ ಕೆಲವು ಇಂಗ್ಲೀಷು ತರಗತಿಗಳಲ್ಲಿ ಒಂದರಲ್ಲಿ ಡಾ. ಎಮ್ ಜಿ ಹೆಗಡೆಯವರು ಇಂಗ್ಲೀಷ್ ಪಠ್ಯ ಬೋಧಿಸುವ ಬದಲು ಚಿತ್ತಾಲರ ಶಿಕಾರಿಯ ಬಗ್ಗೆ ಚರ್ಚಿಸುತ್ತಾ ಈ ನಾಗಪ್ಪನನ್ನೂ ಮತ್ತು ಆತನ ಹನೇಹಳ್ಳಿಯನ್ನು ತೀರಾ ಹೊಸದೇ ಆಗಿ ಪರಿಚಯಿಸಿದ್ದರು.

ನಾನು ಶಿಕಾರಿ ಗಾಗಿ ಹುಡುಕಾಡುವಂತೆ ಮಾಡಿದ್ದರು. ಶಿಕಾರಿ ಸಿಕ್ಕಿರಲಿಲ್ಲವೋ ನಾನೇ ಅಷ್ಟು ಹಠದಲ್ಲಿ ಹುಡುಕಿರಲಿಲ್ಲವೋ? ಅಂತೂ ದೊರಕಿರಲಿಲ್ಲ. ಆಮೇಲೆ ಒಮ್ಮೆ ಕನ್ನಡದ ಹತ್ತು ಸಾರ್ವಕಾಲಿಕ ಶ್ರೇಷ್ಠ ಕಾದಂಬರಿಗಳನ್ನು ಅನೇಕ ವಿಮರ್ಶಕರಿಂದ ಯಾವುದೋ ಪತ್ರಿಕೆ ಪಟ್ಟಿಮಾಡಿಸಿತ್ತು. ಶೇಷಗಿರಿರಾವ್, ಅಮೂರ್ ಎಲ್ಲರೂ ಪಟ್ಟಿನೀಡಿದ್ದರೆಂದು ನೆನಪು. ಅವರೆಲ್ಲರ ಪಟ್ಟಿಯಲ್ಲೂ ಶಿಕಾರಿಗೆ ಜಾಗ ಇತ್ತು. ನಾನದನ್ನು ಆಕಸ್ಮಿಕವಾಗಿ ರದ್ದಿಯಾಗಬಹುದಿದ್ದ ಅರೆಹರಿದ ಪತ್ರಿಕೆಯಲ್ಲಿ ಓದಿದ್ದೆ.

ಮತ್ತೆ ಶಿಕಾರಿಗಾಗಿ ಹುಡುಕಾಟ ನಡೆಸಿದ್ದೆ. ಈಗ್ಗೆ ಮೂವತ್ತು ವರ್ಷಗಳ ಹಿಂದೆ..

ನಾಗಪ್ಪನೇ ಹೇಳುವ ಹಾಗೆ..
ನನ್ನ ಹುಟ್ಟಿಗೆ ಕಾರಣವಾದ ಗರ್ಭದಾರಣೆಯ ಕ್ಷಣ ಕೂಡಾ ಒಂದು ತಪ್ಪಿ ಇನ್ನೊಂದಾಗಿದ್ದರೆ ನನ್ನ ಪಿಂಡವನ್ನು ನಿಶ್ಚಯಿಸಿದ ಬೀಜಾಣುಗಳೇ ಬೇರೆಯಾಗಿ ನನ್ನ ಬದಲು ಬೇರೆಯೇ ಒಂದು ಜೀವ ಹುಟ್ಟಬಹುದಿತ್ತಲ್ಲ ಎಂಬುದನ್ನು ನೆನೆದರೆ ಆಯ್ಕೆಯ ಮುಕ್ತತೆಯಲ್ಲಿದ್ದ ನಂಬುಗೆ ಸಡಿಲವಾಗಿ ಉಸಿರುಗಟ್ಟಿದಂತಾಗುತ್ತದೆ; ಕೋಟ್ಯಾನುಕೋಟಿ ಪುರುಷರೇತಾಣುಗಳಲ್ಲಿ ಒಂದೇ ಒಂದು ಹಾಗೂ ಒಂದೇ ಒಂದು ಸ್ತ್ರೀ- ಅಂಡಾಣು, ಒಂದೆಡೆ ಬಂದ ದಿವ್ಯಕ್ಷಣದಲ್ಲಿ ನಿಶ್ಚಿತವಾಯಿತಲ್ಲವೇ, ಉತ್ಕ್ರಾಂತಿ ಕ್ರಮದಲ್ಲಿ ಬದುಕುವ ರೀತಿಗಳೊಂದಿಗೆ ನಿಸರ್ಗ ನಡೆಸುವ ಅಬ್ಜ ಅಬ್ಜ ಪ್ರಯೋಗಗಳಲ್ಲಿ ಒಂದು ಅನನ್ಯ ಪ್ರಯೋಗದ ಪ್ರತಿನಿಧಿಯಾಗಿ ನನ್ನ ಬದುಕಿನ ಆಯ್ಕೆ?…

ಮೊನ್ನೆಯಷ್ಟೇ ಹನೇಹಳ್ಳಿಯನ್ನು ದಾಟಿ ಗೋಕರ್ಣಕ್ಕೆ ಬರುವಾಗ ಅನ್ನಿಸಿದ್ದು ಇಷ್ಟು. ಸಂಧ್ಯಾಳ ತವರೂರಿಗೆ ಪಕ್ಕದಲ್ಲೇ ಇದೇ ಹನೇಹಳ್ಳಿ ಇದೆ. ಮತ್ತೆ ಮತ್ತೆ ಅದೇ ಊರನ್ನು ದಾಟುವುದು ಎಷ್ಟು ಆಕಸ್ಮಿಕ ಎಂದು ಆಗಾಗ ಚಕಿತನಾಗುತ್ತೇನೆ…

‍ಲೇಖಕರು Admin

August 29, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: