‘ಕವಿತೆ ಬಂಚ್‌’ನಲ್ಲಿ ತೇಜಾವತಿ ಎಚ್ ಡಿ

ಕವಿತೆ ಬಂಚ್-

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.

ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.

ಅಷ್ಟೇ ಅಲ್ಲ, ಹೀಗೆ ‘ಪೊಯೆಟ್ ಆ ದಿ ವೀಕ್’ ಆದವರ ಕವಿತೆಗಳನ್ನು ಇನ್ನೊಬ್ಬ ಸಮರ್ಥ ಓದುಗರು ಓದಿ ಅದರ ಬಗ್ಗೆ ತಮ್ಮ ಟಿಪ್ಪಣಿ ಕೊಡುತ್ತಾರೆ.

ಅದು ನಂತರದ ದಿನಗಳಲ್ಲಿ ಅವಧಿಯಲ್ಲಿ ಪ್ರಕಟವಾಗುತ್ತದೆ.

ತೇಜಾವತಿ ಎಚ್ ಡಿ
ತೇಜಾವತಿ ಎಚ್ ಡಿ ತುಮಕೂರು ಜಿಲ್ಲೆಯ ಹುಳಿಯಾರಿನವರು. ಕುವೆಂಪು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಸದ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕರು ಹಾಗೂ ನಾಗಶ್ರೀ ಪ್ರತಿಷ್ಠಾನದ ಅಧ್ಯಕ್ಷರು ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪ್ರಕಟಿತ ಕೃತಿಗಳು- ಕಾಲಚಕ್ರ, ಮಿನುಗುವ ತಾರೆ, ಬಾ ಭವಿಷ್ಯದ, ನಕ್ಷತ್ರಗಳಾಗೋಣ. ಸಾವಿತ್ರಿಬಾಯಿ ಫುಲೆ ಪ್ರಶಸ್ತಿ, ಉತ್ತಮ ಶಿಕ್ಷಕಿ ಪ್ರಶಸ್ತಿ, ದೆಹಲಿಯ ಪ್ರಜಾಪತಿ ಪತ್ರಿಕೆ ಕೊಡಮಾಡುವ ಕಾವ್ಯ ಸಮ್ಮಾನ್ ಹಾಗೂ ಸಿರಿ ಕಾವ್ಯ ಪ್ರಶಸ್ತಿ ಸೇರಿದಂತೆ ಹಲವು ಪುಸ್ತಕ ಬಹುಮಾನ ಹಾಗೂ ಕಾವ್ಯ ಸ್ಪರ್ಧೆಗಳಿಂದ ಪುರಸ್ಕೃತರಾಗಿರುವ ತೇಜಾವತಿ ಎಚ್ ಡಿ ಅವರ ಕವಿತೆಗಳು ಇತರ ಭಾಷೆಗಳಿಗೂ ಅನುವಾದಗೊಂಡಿವೆ.

1) ಮಾಯಾವಿ

ಅಲ್ಲೊಬ್ಬ ತಿಳಿಕೆಂಪು ವರ್ಣದ ಮಾಯಾವಿ
ಹಸಿ ತೊಗಲ ಗೊಂಬೆಗಳನ್ನು
ಆಡಿಸುತ್ತಾನೆ ಕುಣಿಸುತ್ತಾನೆ
ಮೆರೆಸುತ್ತಾನೆ ಹರಸುತ್ತಾನೆ
ಗೆಜ್ಜೆ ಕಟ್ಟಿ ಬಾಕು ಕೊಡಲಿ ಊಟ ಕೂಟ ಮೋಜು ಗದ್ದಿಗೆಗಳ ಮೂಲಕ
ಕೋಲು ಲೇಖನಿ ದೀಪಗಳಿಗಿಲ್ಲಿ ಸ್ಥಳವಿಲ್ಲ

ಅವನು ತೆರೆದುಕೊಳ್ಳುವುದೇ ಹಾಗೆ ನೋಡಿ
ಹೊರಗೆ ತಿಳಿಯ ಬಿಳಿ ಒಳಗೆ ಕಡುಗಪ್ಪು..

ಪಾಪದ ಮೊಗ್ಗುಗಳು ಶರಣಾಗಿ
ಅರಳುವುದು ರಕ್ತ ಮೆತ್ತಿದ ಹೂವುಗಳಾಗಿ
ಅವನಿಗೊಬ್ಬ ಮಂತ್ರಿ, ಸೇವಕ, ನಾಲ್ಕಾರು ಕಾಲಾಳುಗಳ ದಂಡು
ಇನ್ನು ಬಹುಪರಾಕ್ ಹೇಳಲು ನೂರಾರು ಎಂಜಲುಂಡ ನಾಯಿಗಳು
ಕೋವಿಗಳ ರಕ್ಷಣೆ, ಖಾದಿ ಕಾಳಧನದ ಆತಿಥ್ಯ
ಪಕ್ಷ ವಿಪಕ್ಷಗಳ ಫಲಕದೊಂದಿಗೆ ಶಕುನದ ಹಕ್ಕಿಗಳ ಕಾರುಬಾರು

ಒಬ್ಬೊಬ್ಬನದೂ ಹತ್ತಾರು ಚಿತ್ತಾಕರ್ಷಕ ವೇಷ
ಅವರೆಲ್ಲ ಉಸಿರಾಡುವುದು ಬಣ್ಣದ ಗಾಳಿ
ಸೇವಿಸುವುದು ಬಿಸಿನೆತ್ತರ ತಾಪ
ತೊಡುವ ಅಂಗಿ ನಂಬಿಕೆಯ ಲೇಪನದ್ದು

ಅದು
ಸತ್ಯದ ಗೋರಿಯ ಮೇಲೆ
ನಿರ್ಮಿತವಾಗಿರುವ ಮಿಥ್ಯದ ಉದ್ಯಾನವನ
ಸುತ್ತಲೂ ಊಸರವಳ್ಳಿಗಳ ಸುಭದ್ರ ಕೋಟೆ

ದಾರಿತಪ್ಪಿ ಒಳಹೊಕ್ಕ ಪುಣ್ಯಕೋಟಿಯನ್ನೂ ಬಿಡಲಿಲ್ಲ ಸುಳ್ಳಿನ ಗಾಯಕ್ಕೆ ಕಾರ್ಕೋಟಕ ನಂಜು ಸೇರಿ ಅಮೃತವೂ ನೀಲಿಯಾಯಿತು..

2) ಅಪೂರ್ಣವಾದ ಕವಿತೆಗಳು

ಅಪೂರ್ಣವಾದ ಕವಿತೆ ನಾನು
ಹೌದು
ನಿಮ್ಮ ಊಹೆಯೂ ನಿಜವಾಗಿದೆ
ಕವಿತೆಯಾಗಲು ಹೊರಟವಳ ಅರ್ಧ ಕವಿತೆ

ಪೂರ್ಣಗೊಳ್ಳದ ಕವಿತೆಗಳು
ಬದುಕಿ ಬಾಳುವುದು ಅತೀ ವಿರಳ
ಹೆತ್ತವರೋ ಹೊತ್ತವರೋ
ಸೋದರರೋ ಸಂಬಂಧಿಕರೋ
ಕೊನೆಗೆ ಹಿತ ಶತ್ರುಗಳೆಲ್ಲರೂ ಕಿಡಿ, ಒಡನಾಡಿ

ಕಾಲು ಮಾತ್ರವೇ ಗಡಿಯ ದಾಟಿ ಗುರಿಯ ಮುಟ್ಟುವುದು
ಮುಕ್ಕಾಲು ಹೊಸ್ತಿಲಲ್ಲೇ ಹೊಸಗಿ ಹೋಗುವವು

ಇನ್ನೂ ಕೆಲ ಕವಿತೆಗಳು
ಕಿಚ್ಚಿನ ಸೆರಗಿನಿಂದ ಪಾರಾಗಲು
ಇಂದ್ರಿಯಗಳ ಲಗಾಮು ಹಿಡಿದು
ಅಧ್ಯಾತ್ಮದ ರಥಕ್ಕೆ ಸಾರಥಿಯಾಗುತ್ತವೆ
ಅವುಗಳೆಲ್ಲಾ ಲೌಕಿಕಕ್ಕೂ ಪೈಪೋಟಿ ನೀಡುತ್ತವೆ
ಮೀರಾ ಅಕ್ಕ ಎಮಿಲಿ ರಾಬಿಯಾರಂತೆ

ಅಪರೂಪಕ್ಕೆ ಒಂದೊಂದು ಪುಟವ ಸೇರಿದರೆ
ಉಳಿದವು ಕೇವಲ ಪಟಗಳಿಗೆ ಮೀಸಲು
ಪುಟದಲ್ಲಿನ ಕವಿತೆಗಳು
ತಾನು ಹುಟ್ಟಿದ ಹೋರಾಟದ ಹಾದಿಯ ನೆನೆದು
ನೋವಿನ ನಗೆ ಬೀರುತ್ತವೆ…
ಕೊನೆಗೂ ಕಾವ್ಯಪ್ರತಿಭೆ ಗೆದ್ದಿತಲ್ಲ ಎಂದು…

3) ಸೆಣೆಸಾಡುವ ಬಣ್ಣ

ಅಲ್ಲಿ ಸಮರಗಳು ಕಾಲು ಕೆರೆಯುತ್ತಿವೆ
ವರ್ಣರಂಜಿತ ಓಕುಳಿಯಾಡಲು
ಇಲ್ಲಿ ಬಣ್ಣಗಳು ಸೆಣೆಸಾಡುತ್ತಿವೆ
ಕೆಂಪು ಹಸಿರು ನೀಲಿ ಚೆಲ್ಲಿ
ಅರಿವಿಲ್ಲದೆ ಮೂಲದ್ರವ್ಯದ ವರ್ಣ
ರಜತ ಬಿಲ್ಲಿಗೆ ಗೊತ್ತು ಎಲ್ಲವುಗಳ ಮರ್ಮ

ಅಂದು ಕನಕ ಸಾರಿ ಸಾರಿ ಹೇಳಿದ್ದ
ಕರಿಯ ಬಿಳಿಯ ಸಾರವ
ವ್ರೀಹಿ ನೆರೆದೆಲಗಗಳ ಬಿತ್ತಿ

ಮತ್ತೆ ಅವತರಿಸಿದರು
ಗಾಂಧಿ ಮಂಡೇಲಾ
ಬಣ್ಣವನ್ನು ಕುಡಿಯಲು
ಹಸಿವನ್ನು ನುಂಗಲು

ಶತ ಶತಮಾನದ ನೋಟಕ್ಕೆ ಇನ್ನೂ ಬಿಡದು
ಅವರಿಸಿರುವ ಕಾಮಾಲೆಯ ಗ್ರಹಣ

ಗಲ್ಲಿಗೊಂದು ಗಡಿಗೊಂದು
ಊರಿಗೊಂದು ಕೇರಿಗೊಂದು
ದೇಶಕ್ಕೊಂದು ಕೋಶಕ್ಕೊಂದು
ಹಗಲಿಗೊಂದು ಇರುಳಿಗೊಂದು

ಹೀಗೆ
ಬಣ್ಣ ಓಡಾಡುತ್ತಿದೆ
ಮತ್ತೆ ಮತ್ತೆ ವೇಷ ಧರಿಸಿ

4) ಮುರುಕು ಗುಡಿಸಲ ಮೇಲೆ ಧ್ವಜವ ಕಟ್ಟಿ

ಈ ರಾತ್ರಿ ನಾನು ಮೂರು ಬಾರಿ ಎಚ್ಚರಗೊಂಡೆ
ಮೂರು ಕನಸುಗಳ ಕಾಟದೊಂದಿಗೆ
ಸರಿಯಾಗಿ ನಿದ್ರೆಯೇ ಬರಲಿಲ್ಲ
ನನ್ನ ಮನಸ್ಸು ಅಸ್ಪಷ್ಟ ಆಲೋಚನೆಗಳಿಂದ ತುಂಬಿದ್ದು ಮಾತ್ರ
ಬೆಳಗಿನ ಜಾವದ ಮಿಂಚಿನ ಕನಸು

ಇಡೀ ರಾಜ್ಯಕ್ಕೆ ಬಾಯಿ ಬಂದು
ಹಕ್ಕಿಗಳು ಗೂಡಿನಲಿ ಮೊಟ್ಟೆಯಿಟ್ಟು ಮರಿ ಮಾಡಿದ್ದವು
ಎಲ್ಲೆಲ್ಲೂ ದಿಬ್ಬಣವೇ ದಿಬ್ಬಣ
ಆಗ ಬಾಯಿ ಬಿಡದ ಗುಡುಗು ಮಿಂಚು
ತೋರಣ ಕಟ್ಟಿಕೊಳ್ಳುತ್ತಿವೆ ಮೊದಲ ಮಗುವಿನ ನಿರೀಕ್ಷೆಯಲಿ

ಅರೇ,
ಬಕಪಕ್ಷಿಗಳ ಹಿಂಡು!
ಕುಣಿದು ಕುಪ್ಪಳಿಸುತ್ತಿವೆ
ಹಾರುವ ರೆಕ್ಕೆಗೆ ಧ್ವಜವ ಗರಿ ಮಾಡಿಕೊಂಡು

ಈ ಕನಸೆ ವಿಲಕ್ಷಣ, ವಿಚಿತ್ರ
ನಾನು ಚರಿತ್ರೆ ಓದುವಾಗ ಇರದ ಅಧ್ಯಾಯಗಳು
ರಂಗೋಲಿ ಬಿಡಿಸುತ್ತಿವೆ ಅಸಲಿ ಸೋಗು ಹಾಕಿಕೊಂಡು

ಇಲ್ಲೊಂದು ಅದೇ ಜಾತಿಯ ಚಿಕ್ಕ ಹಕ್ಕಿಗಳ ಕೂಟ
ಕೂಗುತ್ತಿದ್ದವು ಮತ್ತು ನರಳುತ್ತಿದ್ದವು
ದಿಬ್ಬಣದವರ ನರ್ತನದ ಕಾಲ್ತುಳಿತಕ್ಕೆ ಸಿಲುಕಿ
ಸೊಂಟ ಕಳೆದುಕೊಂಡವುಗಳೆಷ್ಟೋ
ಪಾದ ಸವೆಸಿಕೊಂಡವುಗಳೆಷ್ಟೋ
ಅಸಲಿ ಮೆರವಣಿಗೆ ಮಾಡಲು ನಿತ್ರಾಣಗೊಂಡಿದ್ದವು

ಆಗ ಹೋರಾಡಿ
ಈಗ ಕಡೆಗಳಾಗಿ
ಹೊರಗೆ ಡೋಲು ಡಮರುಗ ಸದ್ದು
ಕನಸು ಮುರಿದು ಎಚ್ಚರಗೊಂಡಾಗ
ಒಂದು ಕಡೆ ಅನಾಮಿಕರ ಮೆರವಣಿಗೆ
ಇನ್ನೊಂದು ಕಡೆ
ತನ್ನ ಖುಷಿ ತನ್ನೊಳಗೆ ಗುನುಗುವ ಆಗುಂತಕ
ಗಾಂಧಿ ಟೋಪಿ, ಹರಕು ಚಡ್ಡಿಯ ಬಾಲಕ
ಮುರುಕು ಗುಡಿಸಲು ಮೇಲೆ ಧ್ವಜವ ಕಟ್ಟಿದ್ದ
ಕೆಳಗೆ ಹೀಗೂ ಬರೆದಿದ್ದ
‘ಇಂಡಿಯಾ ಜೀತೆಗಾ
ಔರ್
ಅಮರ್ ರಹೇಗಾ
ಹಿಂದುಸ್ತಾನ ಹಮಾರಾ’

5) ಅವನು ಹಾಗೇ ಮಾಡುತ್ತಿದ್ದಾನೆ..!

ನಿನ್ನ ಕಿಂಡಿಗೆ ಇನ್ನು
ಬೆಳಕಿನ ಸುಳಿವಿಲ್ಲ
ಅವನು ಗಾಢ ಕತ್ತಲೆಯನ್ನು
ಎಲ್ಲೆಲ್ಲೂ ಹರಡಿ ಬಿಟ್ಟಿದ್ದಾನೆ

ನಿನ್ನ ‘ಅವನಿ’ಗೆ
ದಿನಕರನ ಸ್ಪರ್ಶವಿಲ್ಲ
ಗಂಗೆಯ ಹರಿವಿಲ್ಲ
ಋತುಮತಿಯಾದವಳಿಗೆ
ಅವನು ಅಶುದ್ಧ, ದೋಷಪೂರಿತ
ನೆತ್ತರಿನ ಕಲೆಯ ಮೆತ್ತಿಸಿಬಿಟ್ಟಿದ್ದಾನೆ

ನಿನ್ನ ಕನಸಿನ ಲೋಕ
ಕಣ್ಣಲಿ ಕಣ್ಣೀರಿಡುತ್ತಿದೆ
ಅವನು ದ್ವೇಷ, ಅಸೂಯೆ ತಾಪದ ಕುಲುಮೆಯಲ್ಲಿ ಕುದಿಸಿ ಕುದಿಸಿ ಹಿಂಗಿಸುತ್ತಿದ್ದಾನೆ

ನಿನ್ನ ಹೃದಯದ ಬಡಿತಕ್ಕೂ ಬೆದರಿಕೆ ತಟ್ಟಿದೆ
ಅವನು ಆ ಕ್ರೂರ ಖುಷಿಯಲಿ
ಗಹಗಹಿಸಿ ನಗುವುದ ಕಲಿತಿದ್ದಾನೆ

ನಿನ್ನ ನಯನಗಳಲ್ಲಿ ಈಗ
ಕಾಂತಿ, ಭರವಸೆಯ ಕುರುಹಿಲ್ಲ
ಅವನು ಅವಮಾನದ ಕೂಪದೊಳಗೆ
ಸಂಕೋಲೆಯ ಭದ್ರಕೋಟೆ ನಿರ್ಮಿಸುತ್ತಿದ್ದಾನೆ

ತೊಗಲಿನ ದೇಹಗಳು ಒಂದೊಂದು ಸಂಬಂಧದ ಪೊರೆಯ ಕಳಚುತ್ತಿವೆ
ಸತ್ಯಶೋಧನೆಯ ಸಾಗರದಲ್ಲಿ
ತೇಲಿದ್ದಕ್ಕಿಂತ ಮುಳುಗಿದ್ದೇ ಅಧಿಕವಾಗಿದೆ

ನಿರ್ಧಾರವಾಗಿ ಬರೆದಿಟ್ಟುಬಿಡು

ನಿನ್ನ ಇಂದಿನ ಶೂನ್ಯದೊಳಗೂ
ಭವಿಷ್ಯದ ಅಪರಿಮಿತ ಕ್ರಾಂತಿ
ಅಡಗಿ ಕುಳಿತಿದೆ

ಮಣ್ಣಾಗಿಸದಿರು
ಉದುರಿದ ಕಂಬನಿಗೂ ಗಿಡ ಚಿಗುರಿಸುವ ಸಾಮರ್ಥ್ಯವಿದೆ ನಿನ್ನಲ್ಲಿ
ಸರಿದು ಹೋಗುತ್ತಿರುವ ಕಾಲದ ಮುಂದೊಂದು
ದಿವ್ಯವಾದ ತೇಜಸ್ಸಿದೆ
ಹುಮ್ಮಸ್ಸಿದೆ

6) ನೀರ ಮೇಲಿನ ಪಾದ

ಅಷ್ಟ ದಿಕ್ಕುಗಳ ನಡುವೆ ದಿಗ್ಬಂಧನವ ಹಾಕಿಸಿಕೊಂಡು
ಉಸಿರು ಬಿಗಿಹಿಡಿದುಕೊಂಡು
ಧ್ವನಿಯಾಗದ ಶಬ್ಧ ತರಂಗಗಳು
ಕಿವಿಯಾಗದ ರಿಂಗ್ಟೋನ್ ಗಳ ನಡುವೆ
ಅಭಿನಯಿಸಿ, ಅನುಭವಿಸಿ ಪ್ರಸವ ವೇದನೆಯ ಹೊರದೂಡಿದಂತೆ
ಅಂತೂ
ಒಂದು ದಿನ
ಬೀಗ ಹಾಕಿಸಿಕೊಂಡಿದ್ದ ಬಾಯಿಗೆ ನಾಲಿಗೆ ಬಂದಿತು
ಒಳಗಿಟ್ಟುಕೊಂಡಿದ್ದ ಕೆಂಡ ದುಃಖದ ಮಡುವಲ್ಲಿ ಕರಗಿಹೋಯಿತು

ತನ್ನ ಇರುವಿಕೆಯ ಸುಳಿವೇ ಇಲ್ಲದಂತೆ
ಎಲ್ಲೆಡೆಯೂ ಅನಾಮಿಕನಂತೆ ಅಪಾತ್ರನಂತೆ ಬದುಕಿದ ಬದುಕಿಗೊಂದು ಅಂತ್ಯ ದೊರೆತು
ತನ್ನ ಆಯುಷ್ಯವ ಪೂರ್ಣಗೊಳಿಸಿತು

ಹುದುಗಿಸಿ ಇಟ್ಟಿದ್ದ ಲಾವಾರಸ ಒಮ್ಮೆಲೇ ಪುಟ್ಟಿದೆದ್ದು
ಯುಗ ಯುಗಾಂತರದ ಹೆಬ್ಬನ್ಡೆಗಳ ಸೀಳಿ
ಸುತ್ತಲಿನ ಅಚ್ಚ ಹಸಿರೆಲ್ಲಾ ಕ್ಷಣಮಾತ್ರಕ್ಕೆ ಸುಟ್ಟು ಕರಕಲಾಗಿ
ದಟ್ಟ ಕಾನನವು ಗಣನೆಗೆ ಇಲ್ಲದಾಯಿತು

ಖಗ ಮೃಗಗಳಿಗೆ ಈಗ ಅನಿವಾರ್ಯತೆ
ಹೌದು
ನವ ಬದುಕಿಗೆ ನಾಂದಿ ಹಾಡಲು ಎಲ್ಲೆ ಮೀರಿ ಗಡಿಗಳ ಪರಿಧಿ ದಾಟಿ ಸುರಕ್ಷಿತವಾದ
ನೆಮ್ಮದಿಯ ಗೂಡೊಂದನು ಕಟ್ಟಲೇಬೇಕು
ಉಳಿವಿಗಾಗಿ ಹೋರಾಡಿ ಗೆಲ್ಲಲೇಬೇಕು

ಹಗಲಿರುಳು ಶ್ರಮಿಸಿ ಹರಿಸಿದ ಬೆವರ ಫಲವೀಗ
ಹೊಳೆಯಲ್ಲಿ ಹಿಂಡಿದ ಹುಣಿಸೆ ಹುಳಿಯಾಗಿ
ನೀರ ಪಾಲಾಯಿತು

ನಾನು ಮಾತ್ರ
ನೀರ ಮೇಲಿನ ಪಾದದಂತೆ
ಸವೆಯುತ್ತಲೇ ಇರುವೆ
ಇದ್ದ ಎಲ್ಲವ ಕಳೆದುಕೊಂಡ ಜೀವವೀಗ
ಇಲ್ಲದ ಎಲ್ಲವ ಗಳಿಸಲು ಬದುಕಲೇಬೇಕು

ಎದುರಿಗಿರುವ ಸವಾಲುಗಳ ಸರಮಾಲೆ ದಾಟಿಕೊಂಡು
ಅಬ್ಬರಿಸಿ ಬರುವ ಅಲೆಗಳ ಎದುರು ಈಜಿ ದಡವ ಮುಟ್ಟಲೇಬೇಕು

ಪ್ರಪಾತದಿಂದ ಮೇಲೆದ್ದ ಹಣತೆ ಬೆಳಗಿ ನೆಲೆ ನಿಂತು
ತಮವ ದೂಡಿ ಮಿನುಗಬೇಕು
ಸಹಸ್ರ ತಾರೆಗಳ ಸಾಲಿನಲ್ಲಿ ಪ್ರಕಾಶಮಾನವಾಗಿ
ಮತ್ತೆಂದೂ
ನೆಲಕ್ಕೆ ಅಪ್ಪಳಿಸದಂತೆ.

7) ಅವ್ಯಕ್ತ ಪ್ರಾರ್ಥನೆ

ಇಲ್ಲಿ ಗಿಣ್ಣು ತುಂಬಿ ಕೆಚ್ಚಲು ಬಾತು
ಗುದ್ದಿ ಹಾಲ ಇಳಿಸುವ ಕುಡಿಯಿಲ್ಲದೆ
ಹುಲ್ಲು ನೀರಿನ ಹಂಗು ತೊರೆದು
ಗೀಳಿಡುತ್ತಿರುವ ಹಸು
ಅಲ್ಲಿ ನೊರೆಹಾಲ ಸವಿ ಕಾಣದೆ ಬಾಟಲಿ ಹಾಲಿನ ರುಚಿ ಹತ್ತದೆ
ಕ್ಷಣಿಕವಾಗಿ ಜೀವಿಸುತ್ತಿರುವ ಹಸುಗರು

ನಡುವೆ ಆಟ ಕಟ್ಟಿ ಪ್ರಾಣ ಮಾನಗಳ ಪಣಕ್ಕಿಟ್ಟು ಮೂಗುದಾರ ಹಿಡಿದು ಬಾಯಿಕುಕ್ಕೆ ಹಾಕಿ ಕರುಳು ಬಳ್ಳಿಯ ಕಟ್ಟಿಹಾಕಿ ಮಾನವೀಯತೆಯ ಮೂಟೆ ಹೊಲಿದು
ಹೀನ ಕೃತ್ಯದ ವಿಜಯ ಪತಾಕೆ ಹಾರಿಸಿ
ಸಂಭ್ರಮಿಸುತ್ತಿರುವ ಕುಹಕಿಗಳು

ದಿಕ್ಕು ಕಾಣದೆ ಬಳಲಿ ಕಂಗೆಟ್ಟಿವೆ ಜೀವಗಳು
ಒಂದು ಕರುಳ ಹಿಂಡುವ ಸಂಕಟಕ್ಕಾಗಿ
ಮತ್ತೊಂದು ಬರಡಾದ ಮಡಿಲಿನ ಮಮತೆಗಾಗಿ

ಅಳಲು ತೋಡಿಕೊಳ್ಳಲಾಗದ ತುರ್ತು ಪರಿಸ್ಥಿತಿಗೆ ಮೌನದ ಪ್ರತಿರೋಧ ತರಗೆಲೆಯಾಗಿದೆ

ದಿನೇ ದಿನೇ ಕ್ಷಯಿಸುತ್ತಿರುವ ಕಣ್ಣ ಕಾಂತಿ ಮಂದ ಮನಸು
ದಟ್ಟ ಹೊಗೆಯಲ್ಲಿ ಹೊತ್ತಿಕೊಳ್ಳಲಾಗದ ಜ್ಯೋತಿಯ ಮುಂದೆ ಕಂಡ ಕ್ಷಣವೆಲ್ಲ ಮಾಸಿದ ಬಣ್ಣ ಕೇವಲ ಕಪ್ಪು ಬಿಳುಪು

ಪಾಪ
ಹಸುಗರು ಭ್ರಮೆಯ ವರ್ಣಗಳಲ್ಲಿ ಆಡುತ್ತಿದೆ ತೇಲುತ್ತಿದೆ ಏಕಾಂತವಾಗಿ
ಕಲ್ಮಷಗಳ ಅರಿವಿಲ್ಲದೆ ಗಾಡಿ ರಾಡಿಯೊಳಗೆ

ಅದಕ್ಕು ಒಮ್ಮೊಮ್ಮೆ ಕಂಡು ಕಣ್ಮರೆಯಾಗಿತ್ತಿವೆ ಒಡೆದ ಕನ್ನಡಿಯಲ್ಲಿ
ನೊರೆಹಾಲ ಸವಿ ತಾಯಿಯ ಕೆಚ್ಚಲು ಜೋಗುಳಗಳ ಆಪ್ತತೆಯ ಚಿತ್ರ
ಕನಸೋ ನನಸೋ ಅಸ್ಪಷ್ಟ
ಮೂಡಿದ್ದು ಬಿಳಿಹಾಳೆಯ ಕಪ್ಪು ಗೆರೆಗಳಲ್ಲಿ

ಕೊಟ್ಟಿಗೆ ಮರೆತ ಮೂಕ ಹಕ್ಕಿ
ಅಲ್ಲೂ
ಕನಸ ಚಿಗುರಿಸಿ ಬಣ್ಣ ಹಚ್ಚಿ ಕ್ಷೀಣಿಸುತ್ತಿದೆ
ದುಃಖ ಒಡೆಯುವ ದಾರಿ ಕಾಣದೆ
ಕೃತಕ ಮಡಿಲಲ್ಲಿ ಅಮೃತದ ಸವಿ ನೆನೆದು

ಈಗ ಅವ್ಯಕ್ತ ಪ್ರಾರ್ಥನೆಯೊಂದು ಫಲಿಸಿದೆ
ದೂರದ ಬೆಳಕು ಅರಸಿ ಬಂದಿದೆ
ಕೈಯಲ್ಲಿ ಕೊಳಲು ತಲೆಯಲ್ಲಿ ನವಿಲ ಮುಡಿದು
ಲಾಲಿಸಲು ಪಾಲಿಸಲು ಮುದ್ದಿಸಲು
ಒಡಲ ಬಳ್ಳಿಗಳ ಒಂದುಗೂಡಿಸಲು
ಮತ್ತೆ ಕುಣಿತ ನೆಗೆತ ತುಂಟಾಟಗಳ ನೋಡಲು
ಒಂದು ಕೊಳಲು ಮತ್ತೊಂದು ನಾದ
ಮುರಿದ ಎರಡನ್ನೂ ಹದಗೊಳಿಸಿ ನುಡಿಸಿ
ಸಪ್ತಸ್ವರ ಹೊರಡಿಸಲು

8) ನನ್ನದೇನಿದೆ…!

ಕರುಳು ಅವರದು
ಕರುಳ ಬಳ್ಳಿ ಅವರದು
ಕರುಣೆ ಕನಿಕರ ಅವರಿಗೇ ಮೀಸಲು!

ನಾನಾದರೂ ಇಲ್ಲಿ ಹೊರಗಿನವಳು

ಕುಂಚ ಅವರದು
ಬಣ್ಣ ಅವರದು
ಕಲ್ಪನೆಯ ಚಿತ್ರವೂ ಅವರದ್ದೆ
ಕಣ್ಣಿನ ಕನಸು ಕಮಾನು ಮಾತ್ರ ನನ್ನದು

ತನು ಅವರದು
ಧನಕನಕ ಅವರದು
ಬದುಕು ಭಾವ ಕೇವಲ ಅವರಿಗಾಗಿಯೇ
ನನ್ನದೇನಿದೆ ಮನವು ಖಾಲಿ ಖಾಲಿ.

ವೃಕ್ಷ ಅವರದು
ರೆಂಬೆಕೊಂಬೆ ಅವರವು
ಆಸರೆ ಗೂಡು ಎಲ್ಲವೂ ಅವರಿಗಾಗಿಯೇ
ಒಂಟಿ ನಾನಿಲ್ಲಿ ವಲಸೆ ಹಕ್ಕಿ ಹಾಡು ಹಾಡಲು

ಕೋಟೆ ಅವರದು
ಕೋವಿ ಪಿರಂಗಿ ಗುಂಡು ಅವರವು
ಪಹರೆ ಚಹರೆ ಎಲ್ಲವೂ ಅವರದ್ದೆ
ಅಸ್ತಿತ್ವವಿರದ ಅಕ್ಷಿ ನಾನಿಲ್ಲಿ ಉಸಿರು ಪಕ್ಷಿ

ಬಯಲು ಅವರದು
ರೆಕ್ಕೆ ಪುಕ್ಕ ಅವರವು
ಹಾರಾಟ ನಿಯಂತ್ರಣ ನಿರ್ಬಂಧಗಳೆಲ್ಲ ಅವರವೇ
ಸೆರೆಯಾಳು ನಾನಿಲ್ಲಿ
ಎಲ್ಲಿದೆ ಬಂಧ ಮುಕ್ತಿ?

ಕಾದಿರುವೆನು
ಕಾಯುತ್ತಲೇ ಇರುವೆನು
ಬರಬಹುದೇನೋ
ಚಂದ್ರಮನ ಉಯ್ಯಾಲೆ
ಹೊತ್ತೊಯ್ದು ತೂಗಿಸಿ ಆಡಿಸಿ ಬೆಚ್ಚಗೆ ಮಲಗಿಸಲು
ಅಮ್ಮನಂತಹ ಧೀರ ಸುಮೀರ
ನನ್ನೆದೆಯನಾಳುವ ಹಮ್ಮೀರ

9) ಅನಾಮಧೇಯ ಹೂಗಳು.!

ಘಳಿಗೆಗೊಮ್ಮೆ ತಾಸಿಗೊಮ್ಮೆ
ಚೆಲುವಿನ ಆಕರ್ಷಣೆಗೆ ಮರುಳಾಗಿ
ಮಧುವ ಅರಸುವ ದುಂಬಿಗಳಿಗೇನು ಗೊತ್ತು
ಹೂವುಗಳ ಕಣ್ಣೀರಿನ ಕಥೆ?

ಚಿಗುರೊಡೆದ ನವನೀತದ ಬಯಕೆಗಳು
ಕಳೆಗಟ್ಟಿ ಪಕ್ವವಾಗಿ
ಮಾಗಿಕಾಲದ ಚಳಿಗಾಗಿ
ರಮ್ಯತೆಯ ಸಿಹಿ ಗಾಳಿಗಾಗಿ
ಕಾತುರಗೊಂಡ ಜಾತಕಪಕ್ಷಿಗೆ ದಕ್ಕಿದ
ಅಪಕ್ವವಾದ ಅತೃಪ್ತ ಕನಸುಗಳು
ಬಯಸದೇ ಬಳಿ ಬಂದ ಬವಣೆಗಳು

ಕಾಗೆ ಮುಟ್ಟಿದ ನೀರು
ತಳ ಒಡೆದ ಬಾನಿಯಲ್ಲಿ
ಅಸ್ಪೃಶ್ಯತೆಯ ಶಾಪ ಹೊತ್ತು
ಸತ್ತ ಹಾವಿಗೆ ಕೋಲು ಹಿಡಿಯುವ
ಸಭ್ಯತೆಯ ಗೂಡು ತೊರೆದು
ಗಡಿಪಾರಿನ ಧೀಕ್ಷೆ ಧರಿಸಿ
ಹಾರುವ ಭರದಲ್ಲಿ
ಕೆಂಪು ದೀಪಗಳ ಕೆಳಗೆ ಸೆರೆಸಿಕ್ಕಿ
ನರಳುವವು ರೆಕ್ಕೆಗಳ ಕತ್ತರಿಸಿಕೊಂಡು

ಅವುಡುಗಚ್ಚಿದ ಗಾಢ ರಾತ್ರಿಗಳು
ಮಡಿವಂತಿಕೆಯ ಸೆರಗುಹೊದ್ದು
ರುಧಿರ ಹರಿಸಿದವು
ನಾಯಿಕೊಡೆಗಳ ಎದುರು

ಘರ್ಷಣೆಯ ತಾಪಕ್ಕೆ ಸುಟ್ಟು ಭಸ್ಮವಾದ
ನೂರಾರು ಹೂಗಳು
ಬೋಳು ಮರಗಳಾದವು
ರೆಂಬೆ ಕೊಂಬೆ ಮುರಿಸಿಕೊಂಡು

ದೀಪರಾತ್ರಿಯ ಕೆಂಪು ಬೆಳಕಿನ ಕರಿಯ ಛಾಯೆಯ
ಬಿರುಸು ಮೊನಚು ಕಂಬಗಳ ಹೊಡೆತಕ್ಕೆ
ನೋವಿನ ನಲಿವು ಚೀರಿ
ಬಿಸಿಯ ನೆತ್ತರು ಕಾರಿ
ಮುಗಿಲ ಮುಟ್ಟಿದವು

ಹರೆಯ ಹಿಂಗಿ ಬೆನ್ನು ಬಾಗಿ
ಸೆರಗು ನಿಲ್ಲುವ ವೇಳೆ
ರಸವ ಹಿಂಡಿದ ಕಬ್ಬಿನ ಸಿಪ್ಪೆಗಳು
ಮೀಸಲಾದವು ಕೇವಲ ತಿಪ್ಪೆಗಾಗಿ

ಹೊಗೆಬಿಟ್ಟು ಜಗಿದು ಉಗುಳಿದ
ಸಣ್ಣ ದೊಡ್ಡ ಬೀಡಾ ಸ್ಟಾಲ್ ಗಳು
ಪೆಟ್ಟಿಗೆಯ ಅಂಗಡಿಗಳು
ಪಾಳುಬಿದ್ದ ಗೋಡೆ ಕುಸಿದ
ಹರಕು ಮುರುಕು ಆವಾಸಗಳು
ಬಿರು ಬಿಸಿಲಿನ ನಡುವೆ ಬೆಳೆದು ನಿಂತ
ಕಳ್ಳಿ ಸೀಮೆ ಜಾಲಿಯ ನೆರಳು

ಇವಿಷ್ಟೇ..
ಇದೀಗ ಹಸಿದ ಹೊಟ್ಟೆಗೆ
ಪೊಟ್ಟಣ ಒದಗಿಸುವ ಕೇಂದ್ರಗಳು

ಒಡಲಲ್ಲಿ ರಕ್ತಹೀರುಕಗಳ ಹೊದ್ದು
ಅಮೃತ ಪಾನದ ಸವಿಯ ಹಂಚುವ
ಅನಾಥ ಜೀವಗಳು
ಅವೆಲ್ಲವೂ
ಅನಾಮಧೇಯ ಹೂಗಳು!

‍ಲೇಖಕರು Admin

August 29, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: