ನೂತನ ದೋಶೆಟ್ಟಿ ಓದಿದ ‘ಮಾಧ್ಯಮ ಸಂಕಥನ‌’

ನೂತನ ದೋಶೆಟ್ಟಿ

ಇದು ಸಂವಹನ ಹಾಗೂ ಸಮಾಜ ಮನೋವಿಜ್ಞಾನದ ವಿದ್ವಾಂಸರಾಗಿರುವ ಡಾ ಹೆಚ್ ಎಸ್ ಈಶ್ವರ ಅವರ ಕೃತಿ. ಮಾಧ್ಯಮಕ್ಕೆ ಸಂಬಂಧಿಸಿದಂತೆ ಪುಸ್ತಕಗಳು ಬರುವುದು ಬಹಳ ಅಪರೂಪ. ಈ ಹಿನ್ನೆಲೆಯಲ್ಲಿ ಇವರ ಪುಸ್ತಕವನ್ನು ಅಗತ್ಯವಾಗಿ ಗಮನಿಸಬೇಕು. ಸುಮಾರು ನೂರು ವರ್ಷಗಳ ಅವಧಿಯ ಪ್ರಪಂಚದ ಮಾಧ್ಯಮ ಲೋಕವನ್ನು ಇಲ್ಲಿರುವ 11 ಲೇಖನಗಳ ಮೂಲಕ  ಸ್ಥೂಲವಾಗಿ ಈ ಪುಸ್ತಕ ತೆರೆದಿಡುತ್ತದೆ. 

ಸಿಂಕ್ಲೇರನ ‘ದಿ ಬ್ರಾಸ್ ಚೆಕ್’ ಗೆ ಇದೀಗ ನೂರು ವರ್ಷ- ಶೀರ್ಷಿಕೆಯ ಮೊದಲ ಲೇಖನದಲ್ಲಿ ಅಮೇರಿಕದ ಪತ್ರಿಕಾ ಮಾಲಿಕತ್ವದ, ಪತ್ರಿಕಾ ಧರ್ಮದ ಕುರಿತು 1876 ರಿಂದ 1968 ರವರೆಗೆ ಇದ್ದ ಅಮೇರಿಕದ ಬರಹಗಾರ, ಸಮಾಜವಾದಿ ಚಿಂತಕ ಆಪ್ಟನ್ ಸಿಂಕ್ಲೇರನ ಕೃತಿಗಳ ಮೂಲಕ ಹೇಳುತ್ತಾರೆ. ಅವರ ತನಿಖಾ ವರದಿಯನ್ನು ಆಧರಿಸಿದ ಕಾದಂಬರಿ ‘ದಿ ಜಂಗಲ್’ ಅಮೇರಿಕದ ಮಾಂಸ ಮಾರುಕಟ್ಟೆ ಉದ್ಯೋಗಿಗಳ ಹೀನಾಯ ಪರಿಸ್ಥಿತಿಯನ್ನು ಸಾರ್ವಜನಿಕರೆದುರು ತೆರೆದಿಡುವುದರ ಜೊತೆಗೆ ಆ ಪದಾರ್ಥಗಳ ಅನಾರೋಗ್ಯಕರ ಹಾಗೂ ಕಳಪೆ ಗುಣಮಟ್ಟವನ್ನು ಜನರಿಗೆ ತಿಳಿಸಿ ಆಹಾರ ಸಂಸ್ಕರಣೆಯಲ್ಲಿ ಹಲವು ಕಾನೂನೂ ಮತ್ತು ಸುಧಾರಣೆಗಳನ್ನು ರೂಪಿಸಲು ಸಹಕಾರಿಯಾಯಿತು. ಇವರ ಇನ್ನೊಂದು ಮಹತ್ವದ ಕೃತಿ ‘ದಿ ಬ್ರಾಸ್ ಚೆಕ್’.

ಇದು 20ನೇ ಶತಮಾನದ ಆರಂಭದಲ್ಲಿ ಅಮೇರಿಕದಲ್ಲಿ ವ್ಯಾಪಕವಾಗಿದ್ದ ಪತ್ರಿಕೋದ್ಯಮದ ರೀತಿ-ನೀತಿಗಳ ಸಮಗ್ರ ವಿಮರ್ಶೆ. ಅಲ್ಲಿನ ಪ್ರಮುಖ ಪತ್ರಿಕೆಗಳ ದೌರ್ಬಲ್ಯಗಳು, ಅವು ಅನುಸರಿಸುತ್ತಿದ್ದ ಅನೈತಿಕ ಕಾರ್ಯ ಚಟುವಟಿಕೆಗಳನ್ನು ಬಿಂಬಿಸುವ ಮಾಹಿತಿ ಆಧಾರಿತ ವಾಸ್ತವ ವರದಿ. ಶ್ರೀಮಂತರ ಹಿತಾಸಕ್ತಿಗಳನ್ನು ಕಾಯುವ ಹಾಗೂ ಬಡವರ ಸಂಕಷ್ಟಗಳನ್ನು ಕಡೆಗಣಿಸುವ ಪಕ್ಷಪಾತ ಧೋರಣೆಗಳು ಇದರ ಪ್ರಮುಖ ವಸ್ತು. ಬ್ರಾಸ್ ಚೆಕ್ ಎಂದರೆ ದೇಹ ವ್ಯಾಪಾರದ ಗಿರಾಕಿಗಳಿಗೆ ನೀಡಲಾಗುತ್ತಿದ್ದು ಟೋಕನ್ ದ ಹೆಸರು.

ಪತ್ರಿಕೆಗಳನ್ನು ದೇಹ ವ್ಯಾಪಾರದಲ್ಲಿರುವವರಿಗೆ ಹೋಲಿಸಿ ಅವರು ಶ್ರೀಮಂತರಿಗೆ ಅನುಕೂಲವಾಗುವಂತೆ ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ಈ ಕೃತಿಯ ಉದ್ದಕ್ಕೂ ಉಲ್ಲೇಖಿಸುತ್ತಾರೆ. ಪತ್ರಿಕೆಗಳು ಪ್ರಸಾರವನ್ನು ಹೆಚ್ಚಿಸಲು ಭಾವೋದ್ರೇಕಗೊಳಿಸುವ ಸುದ್ದಿಗಳನ್ನು ಸೃಷ್ಟಿಸಿ ಪ್ರಕಟಿಸುತ್ತವೆ  ಎಂದು ಸಿಂಕ್ಲೇರ್ ಆರೋಪಿಸುತ್ತಾರೆ. ಇಂಥ ವಸ್ತು ವಿಷಯವನ್ನು ಹೊಂದಿದ್ದ ಪುಸ್ತಕದ ಪ್ರಕಟಣೆ ಅಷ್ಟು ಸುಲಭವಾಗಿರಲಿಲ್ಲ. ಕೊನೆಗೆ ಲೇಖಕರೇ ಅದನ್ನು ಪ್ರಕಟಿಸುತ್ತಾರೆ. ಆದರೂ ಬಹಳಷ್ಟು ಪತ್ರಿಕೆಗಳು ಪುಸ್ತಕದ ವಿಮರ್ಶೆಯನ್ನು ಮಾಡಲು ಸಿದ್ಧವಾಗುವುದಿಲ್ಲ‌. ನ್ಯೂಯಾರ್ಕ್ ಟೈಮ್ಸ್ ನಂತಹ ಪ್ರತಿಷ್ಠಿತ ಪತ್ರಿಕೆ ಪುಸ್ತಕದ ಜಾಹೀರಾತನ್ನು ಸ್ವೀಕರಿಸಲು ನಿರಾಕರಿಸುತ್ತದೆ. 

2020ಕ್ಕೆ  ಬ್ರಾಸ್ ಚೆಕ್ ಪ್ರಕಟವಾಗಿ ನೂರು ವರ್ಷಗಳಾಗಿವೆ. ಸಿಂಕ್ಲೇರ್ ಅಂದು ಮಾಡಿದ ಆರೋಪಗಳು ಇಂದಿಗೂ ಪ್ರಸ್ತುತವಾಗಿರುವುದು ದುರದೃಷ್ಟಕರ ಎಂದು ಡಾ ಈಶ್ವರ ಈ ಲೇಖನದಲ್ಲಿ ಹೇಳಿದ್ದಾರೆ. ಅಂದು ಪತ್ರಿಕೆಗಳಷ್ಟೆ ಇದ್ದವು. ಇಂದು ದೃಶ್ಯ ಮಾಧ್ಯಮಗಳೂ ಈ ವ್ಯವಸ್ಥೆಗೆ ಸೇರಿವೆ. ಇಂಥ ಸನ್ನಿವೇಶದಲ್ಲಿ ಸಾಮಾಜಿಕ ಜವಾಬ್ದಾರಿ ಹಾಗೂ ವೃತ್ತಿ ಧರ್ಮದ ಮಾತುಗಳು ಅರ್ಥಹೀನ ಎಂಬುದು ಅವರ ಅನಿಸಿಕೆ. ಹೊಸ ಪ್ರಜ್ಞೆಯನ್ನು ಹುಟ್ಟು ಹಾಕುವ ಮಾಧ್ಯಮ ವ್ಯವಸ್ಥೆ- ಮಾರ್ಕ್ಸ್ ಮಾಧ್ಯಮ ಸಿದ್ಧಾಂತದ ಕುರಿತಂತೆ ತಳಪಾಯ ಹಾಗೂ ಮೇಲಂತಸ್ತು ಈ ಎರಡು ಪ್ರಮುಖ ಪ್ರಾಕ್ ಕಲ್ಪನೆಗಳನ್ನು ಹೊಂದಿದ ಮಾರ್ಕ್ಸ್ ಸಿದ್ಧಾಂತವನ್ನು ಮಾಧ್ಯಮಗಳಿಗೆ ಹೋಲಿಸಿ ನೋಡಲಾಗಿದೆ. ಮಾರ್ಕ್ಸ್ ನ ನಂತರದ ಅವನ ವಾದದ ಚಿಂತಕರು ‘ ಹುಸಿ ಪ್ರಜ್ಞೆ’ ಎಂಬ ನುಡಿಗಟ್ಟನ್ನು ಬಳಸಿದರು.

ಈ ಲೇಖನದಲ್ಲಿ ಮಾಧ್ಯಮಗಳು ತಳ ಸಮಾಜದವರಲ್ಲಿ ಹೇಗೆ ಹುಸಿ ಪ್ರಜ್ಞೆಯನ್ನು ಹುಟ್ಟು ಹಾಕುತ್ತವೆ ಎಂಬುದನ್ನು ಸೂಚ್ಯವಾಗಿ ಹೇಳಲಾಗಿದೆ. ಮಾರ್ಕ್ಸ್ ಸಿದ್ಧಾಂತದ ಹಿನ್ನೆಲೆಯಲ್ಲಿ ಮಾಧ್ಯಮಗಳನ್ನು ವಿಮರ್ಶೆಗೆ ಒಳಪಡಿಸಿದ ಪ್ರಮುಖರಲ್ಲಿ ಮಹತ್ವದ ಸ್ಥಾನ ಪಡೆದಿರುವ ನೋಮ್ ಚೋಮ್ ಸ್ಕಿ ಅವರು ಹರ್ಮನ್ ಜೊತೆ ಸೇರಿ ಬರೆದಿರುವ ಕೃತಿಯೊಂದರಲ್ಲಿ ಅಮೇರಿಕಾದ ಮಾಧ್ಯಮಗಳಲ್ಲಿ ಸ್ವಾರ್ಥ ಸಾಧನೆಗಾಗಿ ಪ್ರೊಪಗಾಂಡಾವನ್ನು ಹೇಗೆ ದುರುಪಯೋಗ ಮಾಡಿಕೊಳ್ಳಲಾಗುವುದು ಎಂಬುದನ್ನು ಪ್ರತಿಪಾದಿಸುತ್ತವೆ.

ಈ ಹಿನ್ನೆಲೆಯಲ್ಲಿ ಅವರು ಹೆಸರಿಸುವ ಶೋಧಕಗಳನ್ನು ಅಮೇರಿಕದ ಬಂಡವಾಳಶಾಹಿ ಮಾಧ್ಯಮ ವ್ಯವಸ್ಥೆಯಲ್ಲಿ ಕಾಣಬಹುದಾಗಿದೆ. ಅವುಗಳ ಬಗ್ಗೆ ಪ್ರಸ್ತುತ ಸಂದರ್ಭದಲ್ಲಿ ಹಿಂದೆಂದಿಗಿಂತ ಹೆಚ್ಚು ಸಂಶೋಧನಾ ಅಧ್ಯಯನಗಳು ನಡೆಯುವ ಅವಶ್ಯಕತೆ ಇದೆ ಎಂದು. ಲೇಖಕರು ಅಭಿಪ್ರಾಯಪಟ್ಟಿದ್ದಾರೆ. ಮಾಧ್ಯಮಗಳ ಸ್ವಾತಂತ್ರ್ಯದ ಬಗ್ಗೆ  ಮಾಧ್ಯಮಗಳ ಮಾಲೀಕತ್ವ, ಜಾಹೀರಾತು ಮೊದಲಾದ ಅಂಶಗಳು  ಸ್ವಾತಂತ್ರ್ಯವನ್ನು ಮೀರಿ ಹಿಡಿತ ಸಾಧಿಸಿವೆ ಎಂದಿದ್ದಾರೆ ಲೇಖಕರು.

ಮಾಧ್ಯಮಗಳ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತ ಈ ಹೆಸರಿನಲ್ಲಿ ಸುದ್ದಿ ಮೌಲ್ಯಗಳು ಅಪಮೌಲ್ಯವಾಗುತ್ತವೆ  ಎನ್ನುತ್ತಾರೆ. ಆಂಟನ್ ಚೆಕಾಫ್ ರ ಕತೆಯ ಪಾತ್ರವನ್ನು ನೆನಪಿಸುತ್ತ ನಿಜವಾದ ಸುದ್ದಿಗಳನ್ನು ಸುಳ್ಳಾಗಿಸುವ ಸುಳ್ಳನ್ನು ನಿಜವಾಗಿಸುವ ಚಾಕಚಕ್ಯತೆಯನ್ನು ಮಾಧ್ಯಮಗಳು ಚೆನ್ನಾಗಿ ರೂಢಿಸಿಕೊಂಡಿವೆ ಎನ್ನುವ ಅವರು ಇಂದಿನ ಮಾಧ್ಯಮಗಳ ವೃತ್ತಿಪರತೆಯನ್ನು ಸಂಶಯಿಸುತ್ತಲೇ ಮಾಧ್ಯಮಗಳ ಆರೋಗ್ಯಕರ ನಿರ್ವಹಣೆಗೆ ಒತ್ತು ಕೊಡುತ್ತಾರೆ.

ಭಾರತೀಯ ಮಾಧ್ಯಮಗಳ ಸ್ವಾತಂತ್ರ್ಯ, ಸಮರ್ಪಕ ಸುದ್ದಿ ಮತ್ತು ವಿಶ್ಲೇಷಣೆ, ವೃತ್ತಿಪರತೆ, ನೈತಿಕತೆಯ ಪಾಲನೆ, ಮಾಲೀಕತ್ವದ ಏಕಸ್ವಾಮ್ಯತೆ, ಜಾಹೀರಾತು  ಮೊದಲಾದವುಗಳ ಬಗ್ಗೆ ಬಹುತೇಕ ಲೇಖನಗಳಲ್ಲಿ ಬರೆಯುತ್ತ ಅವುಗಳ ಬಗ್ಗೆ ತಮ್ಮ ತಾತ್ವಿಕ ಅಸಮಾಧಾನವನ್ನು ನಯವಾಗಿ ಹೊರಹಾಕುತ್ತಾರೆ. ‘ಕಾಸಿಗಾಗಿ ಸುದ್ದಿ’ ಯ ಹಲವು ಮುಖಗಳನ್ನು ಸಂಕ್ಷಿಪ್ತವಾಗಿ ಉದಾಹರಣೆಗಳೊಂದಿಗೆ ಪರಿಚಯಿಸಿದ್ದಾರೆ.

ಇಂದಿನ ಮಾಧ್ಯಮಗಳು ಭ್ರಮೆಗಳನ್ನು ಸೃಷ್ಟಿಸುತ್ತ ತಮ್ಮ ಮುಖ್ಯ ಉದ್ದೇಶಗಳನ್ನೇ ಮರೆತಂತಿದೆ ಎನ್ನುವ ಲೇಖಕರು ಭಯ, ಕಂದಾಚಾರಗಳಲ್ಲಿ ನಂಬಿಕೆ ಹುಟ್ಟಿಸುವ ಕಾರ್ಯಕ್ರಮಗಳ ಮೂಲಕ ಮಾನಸಿಕ ಸ್ವಾಸ್ಥ್ಯ ಹಾಳು ಮಾಡಿ ಸಂಸ್ಕೃತಿ ವಿನಾಶವನ್ನು ಮಾಡುತ್ತಿರುವ ಇಂಥ ಕಾರ್ಯಕ್ರಮಗಳು ಮಾಧ್ಯಮಗಳ ಘನ ಉದ್ದೇಶಗಳಿಗೆ ಮಾರಾಟವಾಗುತ್ತಿವೆ ಎಂಬುದು ಲೇಖಕರ ಕಳಕಳಿ. ಮಾಧ್ಯಮದ ಕೆಲಸದ ಬಗ್ಗೆ, ‘ಇದೊಂದು ಬ್ರಹ್ಮವಿದ್ಯೆ. ಅದು ಕೆಲವರಿಗೆ ದೈವದತ್ತವಾಗಿ ಪ್ರಾಪ್ತವಾಗುತ್ತದೆ’ ಎಂಬ ಸ್ಥಾಪಿತ ನಂಬಿಕೆಯ ಹಿನ್ನೆಲೆಯಲ್ಲಿ ‘ತರಬೇತಿ- ವಿರೋಧಿ ಧೋರಣೆ’ ವೃತ್ತಿಪರತೆಯನ್ನು ಬೆಳೆಸುವಲ್ಲಿ ಅಡ್ಡಿಯಾಗುತ್ತದೆ ಎನ್ನುತ್ತಾರೆ.

ಪ್ರತಿಷ್ಠಿತ ಖಾಸಗಿ ವ್ಯಕ್ತಿಗಳ ಬದುಕನ್ನು ಸಾರ್ವಜನಿಕಗೊಳಿಸುವ ಮೂಲಕ  ವ್ಯಕ್ತಿತ್ವದ ಕೊಲೆ ಮಾಡುವ ಅನೈತಿಕ ಕ್ರಿಯೆ, ನ್ಯಾಯಾಲಯಗಳ ವಿಚಾರಣೆಗೆ ಬರುವ ಮೊದಲೇ ಆರೋಪಿಯನ್ನು ಅಪರಾಧಿ ಎಂದು ಪರಿಗಣಿಸುವ ಮಾಧ್ಯಮಗಳ ಹವ್ಯಾಸ ಆತಂಕಕ್ಕೆ ಕಾರಣವಾಗಿದೆ ಎಂಬ ಅಳಲು ಅವರದು.ಟಿವಿ ವೀಕ್ಷಣೆ ಮಕ್ಕಳ ಮೇಲೆ ಉಂಟು ಮಾಡುವ ವ್ಯತಿರಿಕ್ತ ಪ್ರಭಾವದ ಬಗ್ಗೆ ಬರೆಯುತ್ತಾರೆ. ಸಾಮಾಜಿಕ ಮಾಧ್ಯಮಗಳ ವಿಸ್ತ್ರತ ಬಳಕೆಯ ಬಗ್ಗೆ ಬರೆಯುತ್ತ ಮನೋವಿಜ್ಞಾನಿಗಳು ಹಾಗೂ ಶಿಕ್ಷಣ ತಜ್ಞರು ಗುರುತಿಸಿರುವ ಕೆಲವು ದುಷ್ಪರಿಣಾಮಗಳ  ಸಾರಾಂಶ ನೀಡಿದ್ದಾರೆ. ಮಾಧ್ಯಮ ಶಿಕ್ಷಣದಲ್ಲಿ ಪಠ್ಯಕ್ರಮದ ಬಗ್ಗೆ ಒತ್ತು ಕೊಡುವ ಅವರು 70ರ ದಶಕದಲ್ಲಿ ಅಮೇರಿಕದಿಂದ ಎರವಲಾಗಿ ಬಂದ ಪಠ್ಯಕ್ರಮ ಇಂದಿಗೂ ಮುಂದುವರೆದಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಮಾಧ್ಯಮ ಶಿಕ್ಷಣ ಸಂ‌ಸ್ಥೆಗಳು ಹಾಗೂ ಮಾಧ್ಯಮ ಸಂಸ್ಥೆಗಳು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಬೇಕು ಹಾಗೂ ಮಾಧ್ಯಮ ಉದ್ದಿಮೆಗಳು ಮಾಧ್ಯಮ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸಹಾಯ ಹಸ್ತ ಚಾಚಬೇಕು ಎಂಬುದು ಅವರ ಖಚಿತ ನಿಲುವು. ಪುಸ್ತಕಕ್ಕೆ  ಪದ್ಮರಾಜ ದಂಡಾವತಿ ಅವರು ಮುನ್ನುಡಿ ಬರೆದಿದ್ದಾರೆ. ಇಲ್ಲಿಯ ಬಹುತೇಕ ಲೇಖನಗಳು ಬಿಡಿಯಾಗಿ ಪ್ರಕಟವಾದಂಥವು. ಈ ಕಾರಣದಿಂದಲೇ ಕೆಲವು ವಿಷಯಗಳು ಯಥಾವತ್ ಪುನರಾವರ್ತನೆ ಯಾಗಿವೆ.  ಇದನ್ನು ಪತ್ರಿಕೋದ್ಯಮದ ವಿದ್ಯಾರ್ಥಿಗಳು, ವೃತ್ತಿಪರರು ಓದಿದರೆ ಕನ್ನಡಿಯಲ್ಲಿ ತಮ್ಮ ಬಿಂಬ ಹೇಗಿರಬಹುದು ಎಂಬ ಕಲ್ಪನೆ ಮೂಡೀತು.

‍ಲೇಖಕರು Admin

August 24, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Nagaraj Harapanhalli

    ಇವತ್ತಿನ ಭಾರತದ ಹಾಗೂ ಕರ್ನಾಟಕದ ಬಹುತೇಕ ದೃಶ್ಯ ಮತ್ತು ಕನ್ನಡದ ಕೆಲ ವೃತ್ತಪತ್ರಿಕೆಯ ಸಂಪಾದಕರು ಮತ್ತು ಅವರು ರೂಪಿಸುತ್ತಿರುವ ಅನೈತಿಕ ಪತ್ರಿಕೋದ್ಯಮಕ್ಕೆ ಮುಖಕ್ಕೆ ಹಿಡಿದಂತಿದೆ ಈ ಪುಸ್ತಕದ ಪರಿಚಯ. ಥ್ಯಾಂಕ್ಸ ನಿಮಗೆ…ಪ್ರಕಟಿಸಿದ ಅವಧಿಗೆ…

    ಪ್ರತಿಕ್ರಿಯೆ
  2. ನೂತನ ದೋಶೆಟ್ಟಿ

    ಧನ್ಯವಾದಗಳು ನಾಗರಾಜ್ ಅವರೆ.
    ಇದು ಪುಸ್ತಕದ ಕರ್ತೃ ವಿಗೆ ಸಲ್ಲಬೇಕು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: