ದರ್ಶನ್ ಜಯಣ್ಣ ಸರಣಿ – ತಂದೂರಿ ರೋಟಿ

ದರ್ಶನ್ ಜಯಣ್ಣ

5

ಅಪ್ಪ ತಿಂಡಿ ಪೋತ. ಊಟದ ಜೊತೆಗೆ ಯಾವಾಗಲೂ ಖಾರ, ಚೌ ಚೌ, ಬಜ್ಜಿ, ಬೋಂಡ ಏನಾದರೂ ಇರಲೇಬೇಕಿತ್ತು. ಅಂಗಡಿ ಇಂದ ಮನೆಗೆ ಬರುವುದು ರಾತ್ರಿ ಹನ್ನೊಂದಾದರೂ ಬರುವಾಗ ತೆರೆದಿರುತ್ತಿದ್ದ ಒಂದೋ ಎರಡೋ ಅಂಗಡಿಗಳಿಗೆ ಹೋಗಿ ಕನಿಷ್ಠ ಒಂದಷ್ಟು ಖಾರ ಮಿಕ್ಸ್ ಚರ್ ಆದರೂ ತರುವುದನ್ನು ತಪ್ಪಿಸುತ್ತಿರಲಿಲ್ಲ. 

ಊಟದ ನಂತರ ಮಜ್ಜಿಗೆ ಕುಡಿದು ಸ್ವಲ್ಪ ಹೊತ್ತು ಬಿಟ್ಟು ಉಗುರುಬೆಚ್ಚಗಿನ ಬಿಸಿ ನೀರನ್ನು ಕುಡಿದು ಮಲಗುತ್ತಿದ್ದರು. ಹಾಗೆಯೇ ಬೆಳಿಗ್ಗೆ ಎದ್ದ ಓಡನೆಯೇ ದೊಡ್ಡದೊಂದು ತಂಬಿಗೆ ನೀರನ್ನು ಗಟಗಟನೆ ಕುಡುಯುತ್ತಿದ್ದರಿಂದ ಅಪ್ಪನಿಗೆ ಪಿತ್ತ ಅಷ್ಟಾಗಿ ಕಾಡುತ್ತಿರಲಿಲ್ಲ. 

ಇದರ ಮಧ್ಯೆ ಯಾವಗಲಾದರೂ ಈ ಸಮಸ್ಯೆ ಬಂದಾಗ ತಾವೇ ಅಂಗಡಿಗಾಗಿ ಮಾಡುತ್ತಿದ್ದ ಅಲಳೆಕಾಯಿ – ಜಾಕಾಯಿ – ನೆಲ್ಲಿಚೆಟ್ಟಿನ ಕಷಾಯವನ್ನು ಕುಡಿದು ಸರಿಮಾಡಿಕೊಳ್ಳುತ್ತಿದ್ದರು. ಒಮ್ಮೊಮ್ಮೆ ಆದಾಗದಿದ್ದಾಗ ಅಂದರೆ, ಪಿತ್ತ ತೀವ್ರವಾಗಿ,  ಉಳಿತೇಗು, ಗ್ಯಾಸು ಅಥವಾ ತಲೆನೋವು ಬಂದು ತಡೆಯಲು ಆಗದಾಗ ಒಂದು ತಂಬಿಗೆ ಬಿಸಿನೀರಿಗೆ ಉಪ್ಪನ್ನು ಹಾಕಿ ಕುಡಿದು ನಂತರ ಗಂಟಲಲ್ಲಿ ಬೆರಳಿಟ್ಟು ವಾಂತಿ ಮಾಡಿಕೊಂಡು ಪಿತ್ತವನ್ನು ತೆಗೆದುಕೊಳ್ಳುತ್ತಿದ್ದರು. 

ಈ ಪ್ರಕ್ರಿಯೆ ನನಗೂ ಅಮ್ಮನಿಗೂ ತುಂಬಾ ವಿಚಿತ್ರವಾಗಿಯೂ ಮತ್ತು ಭಯಾನಕವಾಗಿಯೂ ಕಾಣುತ್ತಿತ್ತು. ನಾವು ಕೆಲವೊಮ್ಮೆ ಆಯುರ್ವೇದಿ ಅಪ್ಪನ ಒತ್ತಡಕ್ಕೆ ಮಣಿದು ಅಥವಾ ಕಟ್ಟುಬಿದ್ದು ಪ್ರಯತ್ನಿಸುತ್ತಿದ್ದೆವಾದರೂ ಕೈ, ಬಾಯಲ್ಲಿ ಹೋದೊಡನೆ ‘ ವಯಕ್’ ಎಂದೆಣಿಸಿ, ಎದೆ ಬಡಿತ ಜೋರಾಗಿ, ಉಳಿತೇಗು ಬಂದು ಸಾಯುವಂತಾಗುತ್ತಿತ್ತು! ಅಲ್ಲಿಗೆ ನಾವು ಈ ದುಸ್ಸಾಹಸವನ್ನು ನಿಲ್ಲಿಸುತ್ತಿದ್ದೆವು.ಇಷ್ಟೆಲ್ಲ ತೊಂದರೆ ಇದ್ದರೂ ಅಪ್ಪ ಎಣ್ಣೆ ಪದಾರ್ಥವನ್ನು ಕಡೆಯವರೆವಿಗೆ ಬಿಟ್ಟಿರಲಿಲ್ಲ!

ಅಪ್ಪ ಎಣ್ಣೆ ಪದಾರ್ಥಕ್ಕೆ ಎಷ್ಟು ಮೋಹಿತರೋ ಅದಕ್ಕಿಂತಾ ಹೆಚ್ಚು ಸಿಹಿ ವ್ಯಾಮೋಹಿ. ತಮ್ಮ ನಲವತ್ತರ ಆಸುಪಾಸಿಗೆ ಸಕ್ಕರೆ ಕಾಯಿಲೆ ಇರುವುದು ಖಾತ್ರಿಯಾದರೂ ಸಿಹಿ ಪದಾರ್ಥಗಳನ್ನೂ ಬಿಡಲಿಲ್ಲ. ಬಿಡುವುದಿರಲಿ ಹದ್ದುಬಸ್ತಿನಲ್ಲೂ ಇಟ್ಟುಕೊಳ್ಳಲಿಲ್ಲ. ಯಾರಾದರೂ ಇದರ ಬಗ್ಗೆ ಸಲಹೆ ಕೇಳಿದರೆ (ಆಯುರ್ವೇದ ಗೊತ್ತಿದ್ದರಿಂದ) ಅವರಿಗೇ ತಿರುಗಿಸಿ ‘ನೋಡಿ ನನಗೇ ಹತ್ತು ವರ್ಷದಿಂದ ಆ ಖಾಯಿಲೆ ಇದೆ, ನಾನೇ ಆರಾಮಾಗಿ ತಿಂದುಂಡುಕೊಂಡು ಇಲ್ಲವೇ? ಇಷ್ಟ ಬಂದಷ್ಟು ತಿನ್ನಿ. ಮುಖ್ಯ ಮೈದಂಡಿಸಿ ಕೆಲಸಮಾಡಬೇಕಷ್ಟೆ. ಯಾವ ಖಾಯಿಲೆನೂ ಏನೂ ಮಾಡಲ್ಲ!’ ಅನ್ನುತ್ತಿದ್ದರು. 

ಅಮ್ಮನಿಗೆ ಅಪ್ಪ ಹೀಗೆ ಎಲ್ಲರಿಗೆ ಕೊಡುತ್ತಿದ್ದ ಸಲಹೆ ಒಂದು ಚೂರೂ ಹಿಡಿಸುತ್ತಿರಲಿಲ್ಲ. ‘ನೀವು ಹಾಳಾಗೋದಲ್ದೆ ಪಾಪ ಜನಗಳನ್ನೂ ಹಾಳುಮಾಡ್ತೀರಾ, ಯಾವ ಸೀಮೆ ಆಯುರ್ವೇದ ಪಂಡಿತರು ನೀವು!’ ಎಂದು ತರಾಟೆಗೆ ತೆಗೆದುಕೊಳ್ಳುತ್ತಿದ್ದಳು. 

ಇಂತಿಪ್ಪ ಅಪ್ಪ, ಊಟ ತಿಂಡಿಯಲ್ಲೂ ಅಷ್ಟೇ ಉದಾಸೀನ. ಎಲ್ಲ ಅಂಗಡಿ ವ್ಯವಹಾರದವರ ಹಾಗೆಯೇ ಸಮಯಕ್ಕೆ ಸರಿಯಾಗಿ ತಿನ್ನುತ್ತಿರಲಿಲ್ಲ. ಇದೊಂದು ಬಿಟ್ಟರೆ ಊಟಕ್ಕೆ ಕುಂತಾಗ ನಿರುಮ್ಮಳವಾಗಿ ಹೊಟ್ಟೆ ತುಂಬಾ ತಿನ್ನುತ್ತಿದ್ದರು. ನಾನು ಚಿಕ್ಕಂದಿನಲ್ಲಿ ಅವರ ಪಕ್ಕ ಕುಂತು ಉಣ್ಣುವಾಗ ಒಮ್ಮೆ ‘ಎನಪ್ಪಾಜಿ ಒಳ್ಳೆ ರಾಕ್ಷಸನ ತರ ತಿಂತೀಯ!’ ಎಂದು ಅಮಾಯಕಾಶ್ಚರ್ಯದಿಂದ ಕೇಳಿದ್ದೆ. ಅದಕ್ಕೆ ಅಪ್ಪ ‘ಕೆಲಸ ಮಾಡ್ತಿನಲ್ಲಪ್ಪ ಹೊಟ್ಟೆ ಹಸೀತೈತೆ’ ಅಂದು ನಕ್ಕರು. ಅಜ್ಜಿ ನನ್ನನ್ನು ಕುರಿತು ‘ಊಟ ಮಾಡೋವ್ರನ್ನ ನೋಡಿ ಹಂಗೆಲ್ಲಾ ಹೇಳಬಾರದು ಕಣಪ್ಪ ರಾಜ’ ಅಂದರೆ ನನ್ನಮ್ಮ ನನ್ನ ಮೇಲೆ ಸಿಟ್ಟು ಮಾಡಿಕೊಂಡು ಉಗಿದು ಉಪ್ಪು ಹಾಕಿದಳು! 

ಅಪ್ಪನ ಇನ್ನೊಂದು ಗುಣವೆಂದರೆ (policy) ಊಟದ ತಟ್ಟೆಯಲ್ಲಿ ಮತ್ತು ಹೊರಗೆ ಒಂದು ಆಗುಳೂ ಅನ್ನವನ್ನ ಬಿಟ್ಟಿರುತ್ತಿರಲಿಲ್ಲ ಮತ್ತು ನಮ್ಮಿಂದಲೂ ಅದನ್ನೇ ಬಯಸುತ್ತಿದ್ದರು. 

ಇದೆಲ್ಲದಕ್ಕೂ ಶಿಖರಪ್ರಾಯವಾದ ಘಟನೆ ನನ್ನ ಕಾಲೇಜು ದಿನಗಳಲ್ಲಿ ನಡೆಯಿತು. ನನ್ನ ಎರಡನೆಯ ವರ್ಷದ ಕಾಲೇಜು ಮತ್ತು ಹಾಸ್ಟೆಲ್ ಫೀಸ್ ಕಟ್ಟಲು ಅಪ್ಪ ದುಡ್ಡು ಹೊಂದಿಸಿಕೊಂಡು ತುಮಕೂರಿನಿಂದ ಬೆಳಿಗ್ಗೆ ಬಿಟ್ಟು ಬೆಂಗಳೂರಿನ ನಮ್ಮ ಕಾಲೇಜಿಗೆ ಬಂದಿದ್ದರು. ಎಲ್ಲ ಕೆಲಸ ಮುಗಿಯುವುದು ಮಧ್ಯಾಹ್ನ ತಡವಾಗಿದ್ದರಿಂದ ಕಾಲೇಜ್ ಕ್ಯಾಂಟೀನು ಅಥವಾ ಹಾಸ್ಟೆಲ್ ಮೆಸ್ಸಿನಲ್ಲಿ ಊಟ ಸಿಕ್ಕುವ ಸಂಭವ ಸುತ್ರಾಮ್ ಇರಲಿಲ್ಲ. ಹಾಗಾಗಿ ಅವರನ್ನು ಊಟಕ್ಕೆ ಕಾಲೇಜ್ ಹೊರಗಿನ, ಆಗತಾನೆ ಶುರುವಾಗಿದ್ದ ‘ಉಡುಪಿ ಹೋಟೆಲ್ಲಿಗೆ’ ಕರೆದುಕೊಂಡು ಹೋಗಬೇಕಾಯಿತು. 

ಅಪ್ಪನಿಗೆ ಉಡುಪಿ ಹೋಟೆಲ್ಲುಗಳೆಂದರೆ ಎಲ್ಲಿಲದ ಗೌರವ ಮತ್ತು ಅಭಿಮಾನ. ಏನು ತಿನ್ನೋದೆಂದು ಕೇಳಿದಾಗ ನಾನು ‘ಎರಡು ಮೀಲ್ಸ್ ಹೇಳೋಣ’ ಅಂದೆ.ಅಪ್ಪನಿಗೆ, ಸಾಮಾನ್ಯ ಸಂಜೆ ಐದುವರೆಗೆ ಅಂಗಡಿಗೆ ಹೋಗುವಮುನ್ನ ಊಟ ಮಾಡಿ ರೂಢಿ ಇದ್ದದ್ದರಿಂದ ‘ಲೈಟ್ ಆಗಿ ಏನಾದ್ರೂ ತಿನ್ನೋಣ’ ಅಂದರು. 

ನಾನು ಅಪ್ಪನ ಮುಖವನ್ನು ನೋಡಿ ‘ಇಡ್ಲಿ ವಡೆ?’ ಅಂದೆ. ಆದ್ರೆ ಕ್ಯಾಶಿನ ಮೇಲಿದ್ದ ವ್ಯಕ್ತಿ ‘ವಡೆ ಬೆಳಿಗ್ಗೆ ಮಾಡಿದ್ದು ಸಾರ್’ ಎಂದರು. ‘ಹಾಗಾದ್ರೆ ಮತ್ತೇನ್ ತಿನ್ನೋಣಪ್ಪ?’ ಎಂದು ಅಪ್ಪ ಕೇಳುವುದನ್ನೇ ಕಾಯುತ್ತಾ ಇರುವಂತಿದ್ದ ನಾನು ‘ಎರಡು ಪ್ಲೇಟ್ ತಂದೂರಿ ರೋಟಿ ಕೊಡಿ’ ಎಂದುಬಿಟ್ಟೆ. ಅಪ್ಪನೂ ಅದಕ್ಕೇ ಸಮ್ಮತಿ ಸೂಚಿಸಿದರು. 

ನನಗೆ ಆಗೆಲ್ಲ ಉತ್ತರಭಾರತದ ಊಟದ ಬಗ್ಗೆ ತುಂಬಾ ವ್ಯಾಮೋಹ, ಅದರ ಭರಾಟೆಯಲ್ಲಿ ತಂದೂರಿ ರೋಟಿ ಹೇಳಿಬಿಟ್ಟಿದ್ದೆ. ನಮ್ಮ ಆರ್ಡರ್ ಬಂತು. ನಾನು ಎರಡು ರೋಟಿ ತಿನ್ನುವಷ್ಟರಲ್ಲಿ ಸಾಕುಸಾಕಾಗಿತ್ತು. ಆದರೆ ಯಾವತ್ತೂ ನನಗಿಂತಾ ತುಂಬಾ ಬೇಗ ತಿನ್ನುತ್ತಿದ್ದ ಅಪ್ಪ ಈಗ ಮಾತ್ರ ಒಂದೇ ರೊಟ್ಟಿ ತಿಂದಿದ್ದರು. ನಾನು ‘ಯಾಕಪ್ಪಾಜಿ ಹಿಡಿಸಲಿಲ್ವ?’ ಎಂದು ಕೇಳಿದಾಗ ಸುಮ್ಮನೆ ತಲೆ ಅಲ್ಲಾಡಿಸಿದರೂ ನನಗೆ ಏನೂ ಅರ್ಥವಾಗಲಿಲ್ಲ. ಕಡೆಗೆ ಹಾಗೋ ಹೀಗೋ ಮಾಡಿ ತಿಂದು ಮುಗಿಸಿ, ನೀರು ಕುಡಿದು ಹೊರಬಂದಾಗ ಅವರ ಮುಖ ಬೇವರಿತ್ತು.

ನಾನು ಸುಮ್ಮನಿರದೆ ‘ಏನು ಬಹಳ ನಿಧಾನವಾಗಿ ತಿಂದಿರಲ್ಲ?’ ಎಂದು ರಾಗವಾಗಿ ಕೇಳಿದ ತಕ್ಷಣ, ರಪ್ಪನೆ ತಲೆಗೊಂದು ಕೊಟ್ಟು ‘ನನ್ನ ಮಗನೆ, ಇನ್ನು ಮೂರನಾಲ್ಕು ದಿನ ಆಯ್ತು ಹಲ್ಲು ಕಟ್ಟಿಸಿಕೊಂಡು, ಇದ್ಯಾವ್ದೋ ರಬ್ಬರ್ ನಂತ ರೊಟ್ಟಿ ಕೊಡಿಸಿದ್ದೀಯ! ಹಲ್ಲು ಇನ್ನೂ ಸರಿಯಾಗಿ ಸೆಟ್ಟೇ ಆಗಿಲ್ಲ ಈಕಡೆ ಎಳೆದ್ರೆ ಆಕಡೆ ಹೋಗುತ್ತೆ ಆಕಡೆ ಎಳೆದ್ರೆ ಈ ಕಡೆ ಹೋಗುತ್ತೆ! ಎಲ್ಲಿ ಹಲ್ಲು ಸೆಟ್ ನುಂಗಿ ಬಿಡ್ತೀನೋ ಅನ್ನೋ ಭಯದಲ್ಲೇ ಪೂರಾ ತಿಂದಿದ್ದೀನಿ ಬದ್ಮಾಶ್ ನನ್ ಮಗನೆ’ ಅಂದಾಗಲೇ ನನಗೆ ಅಪ್ಪನ ಪರಿಸ್ಥಿತಿ ಅರ್ಥವಾದದ್ದು. 

ನನಗೋ ಅಪ್ಪ ಹಲ್ಲು ಕಟ್ಟಿಸಿಕೊಂಡಿದ್ದು ಗೊತ್ತಿದ್ದರೂ  ತಂದೂರಿ ರೋಟಿಯಿಂದ ಇಷ್ಟೆಲ್ಲಾ ಆಗ ಬಹುದೆoಬ ಪರಿವೆಯೂ ಇರಲಿಲ್ಲ. ನಾನು ‘ಅಲ್ಲಪ್ಪ ತಿನ್ನೋಕಾಗದೆ ಇರೋವಾಗ ಅದನ್ನು ಬಿಟ್ಟು  ಬೇರೇನಾದರೂ ಹೇಳಬಹುದಿತ್ತಲ್ಲ? ಯಾಕೆ ಇಷ್ಟೆಲ್ಲಾ ಸರ್ಕಸ್ಸು ಮಾಡಬೇಕು?’ ಅಂದಿದ್ದಕ್ಕೆ ಅಪ್ಪ ತಿರುಗಿಸಿ ‘ನೀನ್ ಹೆಂಗ್ ಬೇಕಾದ್ರೂ ಮಾಡ್ಕಳಪ್ಪ ನಾನು ಅನ್ನಬಿಡಲ್ಲ ಅಷ್ಟೇ!’ ಅನ್ನೋದಾ….

| ಇನ್ನು ನಾಳೆಗೆ |

‍ಲೇಖಕರು Admin

August 24, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: