ನಿರಾಶ್ರಿತರ ನೋವುಗಳು…

ಮೂಲ : W. H. Auden

ಕನ್ನಡಕ್ಕೆ: ಶಿವಕುಮಾರ್ ಮಾವಲಿ

ಈ ನಗರದಲ್ಲಿ ಹತ್ತು ಲಕ್ಷ ಜನರಿದ್ದಾರೆ ಎನ್ನುತ್ತಾರೆ
ಕೆಲವರು ಬಂಗಲೆಗಳಲ್ಲಿದ್ದರೆ ಮತ್ತೆ ಕೆಲವರು ಗುಂಡಿ-ಗಟಾರಗಳಲ್ಲಿ ನೆಲೆಸಿದ್ದಾರೆ
ಆದರೆ ನಮಗೆ ಮಾತ್ರ ಇಲ್ಲಿ ಜಾಗವಿಲ್ಲ ಪ್ರಿಯೆ
ಆದರೆ ನಮಗೆ ಮಾತ್ರ ಇಲ್ಲಿ ಜಾಗವಿಲ್ಲ…

ಒಂದು ಕಾಲದಲ್ಲಿ ನಮಗೂ ಒಂದು ದೇಶವಿತ್ತು, ಎಲ್ಲವೂ ಸರಿಯಿತ್ತು ;
ಈಗಲೂ ನೀನಾದೇಶವನ್ನು ಅಟ್ಲಾಸ್ ನಲ್ಲಿ ಕಾಣಬಹುದು
ಆದರೆ ನಾವೀಗ ಅಲ್ಲಿಗೆ ಹೋಗುವುದು ಸಾಧ್ಯವಿಲ್ಲ ಪ್ರಿಯೆ,
ನಾವೀಗ ಅಲ್ಲಿಗೆ ಹೋಗುವುದು ಸಾಧ್ಯವಿಲ್ಲ.

ಊರ ಹೊರಗಿನ ಚರ್ಚ್ ನ ಆವರಣದಲ್ಲೊಂದು
ಹಳೆಯ ಮರ ಇದೆ
ಪ್ರತೀ ವಸಂತದಲ್ಲೂ ಹೊಸ ಹೂಗಳನ್ನು ಬಿಡುತ್ತದೆ
ಆದರೆ ಹಳೆಯ ಪಾಸ್ ಪೋರ್ಟ್ ಗಳೀಗ ನಡೆಯುವುದಿಲ್ಲ ಪ್ರಿಯೆ…
ಹಳೆಯ ಪಾಸ್ ಪೋರ್ಟ್ ಗಳೀಗ ನಡೆಯುವುದಿಲ್ಲ …

ರಾಯಭಾರ ಕಛೇರಿಯಲ್ಲಿ ಮೇಜು ಕುಟ್ಟಿ ಹೇಳಿದರು;
‘ನಿಮ್ಮ ಬಳಿ ಹೊಸ ಪಾಸ್ ಪೋರ್ಟ್
ಇಲ್ಲವಾದಲ್ಲಿ ನೀವು ಅಧೀಕೃತವಾಗಿ ಸತ್ತಿದ್ದೀರ’
ಆದರೆ ನಾವಿನ್ನೂ ಬದುಕಿದ್ದೇವೆ ಪ್ರಿಯೆ…
ಆದರೆ ನಾವಿನ್ನೂ ಬದುಕಿದ್ದೇವೆ …

ಒಂದು ಸಮಿತಿಯ ಮುಂದೆ ಹೋಗಿ ನಿಂತೆ…
ಕುಳಿತುಕೊಳ್ಳಲು ಕುರ್ಚಿ ಕೊಟ್ಟರು…
ಮುಂದಿನ ವರ್ಷ ಬನ್ನಿ ಎಂದು ನಯವಾಗಿ ಹೇಳಿ ಕಳಿಸಿದರು…
ಆದರೆ ಇವತ್ತು ನಾವೆಲ್ಲಿಗೆ ಹೋಗುವುದು ಪ್ರಿಯೆ ?
ಇವತ್ತು ನಾವೆಲ್ಲಿಗೆ ಹೋಗುವುದು ?

ಒಂದು ಸಾರ್ವಜನಿಕ ಸಭೆಗೆ ಹೋಗಿದ್ದೆ ;
ಭಾಷಣಕಾರ‌ ಎದ್ದು ನಿಂತು ಏರು ಧ್ವನಿಯಲ್ಲಿ ಅರಚಿದ;
‘ನಾವು ಅವರನ್ನು ಒಳಗೆ ಬಿಟ್ಟುಕೊಂಡರೆ, ಅವರು ನಮ್ಮ ದಿನದ ಅನ್ನವನ್ನೇ ಕಿತ್ತುಕೊಳ್ಳುತ್ತಾರೆ’
ಅವನು ಹೇಳಿದ ಆ ಅವರು, ನಾನು -ನೀನೇ ಪ್ರಿಯೆ…
ಆ ಅವರು ನಾನು -ನೀನೇ…

ಆಕಾಶದಲ್ಲಿ ಗುಡುಗಿನ ಘರ್ಜನೆ ಕೇಳಿಸಿಕೊಂಡೆ ಎಂದುಕೊಂಡರೆ,
ಅದು ಹಿಟ್ಲರ್ ಯೂರೋಪ್ ನ‌ ಕುರಿತು ‘ಅವರು‌ ಸಾಯಲೇಬೇಕು’ ಎಂದು ಹೇಳಿದ್ದಾಗಿತ್ತು
ಅವನ ಮನಸ್ಸಲ್ಲಿದ್ದದ್ದು ನಾವೇ ಪ್ರಿಯೆ,
ಅದು ನಾವೇ…

ಜಾಕೇಟ್ ನೊಳಗೆ ನಾಯಿಯೊಂದನ್ನು ಸುತ್ತಿದ್ದು ಕಂಡೆ
ಮನೆಯೊಂದರ ಬಾಗಿಲು ತೆರೆದು ಬೆಕ್ಕನ್ನು ಒಳಗೆ ಬಿಟ್ಟುಕೊಂಡಿದ್ದನ್ನು ಕಂಡೆ
ಆದರೆ ಅವು ಜರ್ಮನ್ ಯಹೂದಿಗಳಾಗಿರಲಿಲ್ಲ ಪ್ರಿಯೆ…
ಆದರೆ ಅವು ಜರ್ಮನ್ ಯಹೂದಿಗಳಾಗಿರಲಿಲ್ಲ…

ಬಂದರಿನ ಬಳಿ ಹೋಗಿ ಹಡಗುಕಟ್ಟೆಯ ಮೇಲೆ ನಿಂತೆ
ಮೀನುಗಳು ಸ್ವತ‌ಂತ್ರವಾಗಿ ಈಜಾಡುವುದು ಕಂಡೆ
ಕೇವಲ ಹತ್ತು ಅಡಿ ದೂರದಲ್ಲಿ ಪ್ರಿಯೆ,
ಕೇವಲ ಹತ್ತೇ ಅಡಿ ದೂರದಲ್ಲಿ…

ಅಡವಿಯಲ್ಲಿ ನಡೆದು ಹೋಗುವಾಗ ಮರಗಳಲ್ಲಿ ಹಕ್ಕಿಗಳ ಕಂಡೆ;
ಅವುಗಳಿಗೆ ರಾಜಕಾರಣಿಗಳಿರಲಿಲ್ಲ ಮತ್ತು ಮನಸೋಯಿಚ್ಛೆ ಹಾಡಿಕೊಂಡಿದ್ದವು;
ಸದ್ಯ, ಅವು ಮನುಷ್ಯರಾಗಿರಲಿಲ್ಲ ಪ್ರಿಯೆ
ಅವು ಮನುಷ್ಯರಾಗಿರಲಿಲ್ಲ…

ಕನಸಲ್ಲಿ ಸಾವಿರ ಅಂತಸ್ತಿನ ಕಟ್ಟಡವೊಂದನು ಕಂಡೆ
ಸಾವಿರ ಕಿಟಕಿ ಮತ್ತು ಸಾವಿರ ಬಾಗಿಲುಗಳಿದ್ದವು;
ಅವುಗಳಲ್ಲಿ ಒಂದೂ ನಮ್ಮದಾಗಿರಲಿಲ್ಲ ಪ್ರಿಯೆ
ಅವುಗಳಲ್ಲಿ ಒಂದೂ ನಮ್ಮದಾಗಿರಲಿಲ್ಲ…

ಒಂದು ವಿಶಾಲ ಮೈದಾನದಲ್ಲಿ ಬೀಳುತ್ತಿದ್ದ ಹಿಮದಲ್ಲಿ ನಿಂತು ನೋಡಿದೆ;
ಹತ್ತು ಸಾವಿರ ಸೈನಿಕರು ಗಸ್ತು ತಿರುಗುತ್ತಿದ್ದರು;
ನನ್ನ- ನಿನ್ನ ಹುಡುಕಿ‌ ಪ್ರಿಯೆ
ನನ್ನ – ನಿನ್ನ ಹುಡುಕಿ…

‍ಲೇಖಕರು Admin

August 24, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: