ನೀವು ಬಿದ್ದ ಮರವಲ್ಲ, ಬಿತ್ತಿದ ಬೀಜವಾಗಿದ್ದೀರಿ..

ಅಣ್ಣನ ನೆನಪು ೪೧

ಅಣ್ಣನಿಗೆ ಅತ್ಯಂತ ಪ್ರಿಯವಾದ ಊರೆಂದರೆ ಅದು ಅಂಕೋಲೆ. ಬಹುಶಃ ಹೊನ್ನಾವರವನ್ನು ಬಿಟ್ಟರೆ ಅತಿ ಹೆಚ್ಚು ದಿನ ಕಳೆದದ್ದು (ಕಾರ್ಯಕ್ರಮಕ್ಕೆ) ಅಂಕೋಲೆಯಲ್ಲಿಯೇ. ಹಾಗೆ ನೋಡಿದರೆ ಅಂಕೋಲೆಯ ಜೊತೆಗೆ ಅವನ ಗೆಳೆತನ. ಅಂಕೋಲೆಯ ಸ್ನೇಹಿತರು ಅವನನ್ನು ಮನೆಯ ಮಗನಂತೆ ನೋಡಿಕೊಂಡಿದ್ದಾರೆ.

ಕರ್ನಾಟಕ ಸಂಘವಿರಲಿ, ರಾಘವೇಂದ್ರ ಪ್ರಕಾಶನವಿರಲಿ, ಜಿನದೇವ ಪ್ರಕಾಶನವಿರಲಿ …. ಹಲವು ಸಾಂಸ್ಕೃತಿಕ ಸಂಘಟನೆಗಳಿಗೆ ಅಣ್ಣ ಖಾಯಂ ಅತಿಥಿಯಾಗಿದ್ದ. ಅಂಕೋಲೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಆತನಿಗೆ ಆಮಂತ್ರಣದಲ್ಲಿ ಅವನ ಹೆಸರಿರಬೇಕೆಂದೇನೂ ಇರಲಿಲ್ಲ.

ಅಲ್ಲಿ ಆತನ ಸ್ನೇಹಿತರ ದಂಡೇ ಇತ್ತು. ಗಿರಿ ಪಿಕಳೆ, ವಿ ಜೆ ನಾಯಕ, ಜಿನದೇವ ನಾಯಕ, ಶಾಂತಾರಾಮ ನಾಯಕ, ಶ್ಯಾಮ ಹುದ್ದಾರ್, ವಿಷ್ಣು ನಾಯ್ಕ, ಮೋಹನ ಹಬ್ಬು, ಆರ್.ಜಿ. ಗುಂದಿ… ಈ ಪಟ್ಟಿ ಬೆಳೆದು ಹೊಸ ತಲೆಮಾರಿನ ಕವಿಗಳಾದ ಕೃಷ್ಣ ನಾಯಕ, ಪ್ರಕಾಶ ಕಡಮೆ, ಜೆ. ಪ್ರೇಮಾನಂದ…. ಮುಂತಾದವರ ವರೆಗೂ ಆತನ ಸ್ನೇಹ ವಲಯ ಚಾಚಿಕೊಂಡಿತ್ತು. ನಾನು ಹಿಂದೆ ಬರೆದಂತೆ ಸ್ನೇಹಕ್ಕೆ ವಯಸ್ಸಿನ ಹಂಗಿರಲಿಲ್ಲ ಆತನಿಗೆ.

ದಿನಕರ ದೇಸಾಯಿ, ಗಿರಿ ಪಿಕಳೆಯವರ ಹೋರಾಟದ ಬದುಕಿನ ಬಗೆಗೆ ಆತನಿಗೆ ವಿಶೇಷ ಆಸಕ್ತಿ, ದೇಸಾಯರ ಭೇಟಿಯಾದ ಕುರಿತು ಅವರ ಎತ್ತರದ ನಿಲುವಿನ ಕುರಿತು, ಅವರ ಹೋರಾಟದ ಶೈಲಿಯ ಕುರಿತು, ಅವರ ಭಾಷಣದ ಕುರಿತು ಅಣ್ಣ ನಮಗೆಲ್ಲಾ ಶಾಲಾ ದಿನಗಳಲ್ಲಿ ವರ್ಣಿಸುತ್ತಿದ್ದ.

ಕುಮಟಾಕ್ಕೆ ರಾಜ್ಯಪಾಲರು ಬಂದಾಗ ದೇಸಾಯರ ದಂಡು ಅಲ್ಲಿಗೆ ಮೆರವಣಿಗೆ ಹೊರಟಿದ್ದನ್ನು ಪೋಲೀಸರು ಅದನ್ನು ತಡೆದುದನ್ನು ಅದಕ್ಕೆ ದೇಸಾಯವರು ಖಡಕ್ಕಾಗಿ ಉತ್ತರಿಸಿ ಮುನ್ನುಗ್ಗಿದ್ದನ್ನು ಅಣ್ಣ ವಿವರಿಸಿದ್ದು ಈಗಲೂ ಕಿವಿಯಲ್ಲಿ ಗುನುಗುಡುತ್ತಿದೆ.

ಆಗೆಲ್ಲ ಅವನ ಉತ್ಸಾಹ ನೋಡಬೇಕು. ಸ್ವತಃ ಅವರ ಭಾವಗಳನ್ನು ಅಭಿನಯಿಸಿಯೇ ತೋರಿಸುತ್ತಿದ್ದ. ದೇಸಾಯಿಯವರು ಹಾಲಕ್ಕಿ ಹಾಡಿಗಳಿಗೆ ಭೇಟಿ ಕೊಡುತ್ತಿರುವುದನ್ನು, ಕೆಂಬಾವುಟದಡಿ ಅವರು ರೈತ ಹೋರಾಟ ಸಂಘಟಿಸಿದ್ದನ್ನು ಮತ್ತು ಅವರ ಬರವಣಿಗೆ ಆತನಿಗೆ ಬಹು ಇಷ್ಟದ ಸಂಗತಿ.

ಆತ ಅಕಾಡೆಮಿಯ ಸದಸ್ಯನಾಗಿರುವಾಗ ದೇಸಾಯಿಯವರ ಕುರಿತು ಒಂದು ವಿಚಾರ ಸಂಕಿರಣವನ್ನೇ ನಡೆಸಿದ ನೆನಪು ನನ್ನದು. ನಾವೆಲ್ಲ ಆಗ ಎಸ್.ಎಫ್.ಐ ವಿದ್ಯಾರ್ಥಿಗಳಾಗಿರುವಾಗ ದೇಸಾಯಿಯವರ ಹೋರಾಟ ಮತ್ತು ಅವರ ಪುರೋಗಾಮಿ ಸಾಹಿತ್ಯದ ಕುರಿತು ಅಧ್ಯಯನ ಶಿಬಿರ ನಡೆಸಲು ಸಲಹೆ ನೀಡುತ್ತಿದ್ದ. ಅಷ್ಟೊಂದು ಪ್ರಮಾಣದಲ್ಲಿ ದೇಸಾಯಿಯವರು ಅಣ್ಣನ ಮೇಲೆ ಪ್ರಭಾವ ಬೀರಿದ್ದರು.

ಮುಖ್ಯವಾಗಿ ಅಂಕೋಲೆಯ ಜೊತೆಗೆ ಆತನಿಗಿರುವ ವೈಚಾರಿಕ ನೆಂಟರಲ್ಲಿ ಗಿರಿ ಪಿಕಳೆ ತೀರಾ ಮುಖ್ಯರು. ಅವರೂ ಶಿಕ್ಷಕರು. (ಜಿ.ಎಚ್. ನಾಯಕರ ಮಾಸ್ತ್ರು) ಜಿ.ಎಚ್. ನಾಯಕರು ವಿಷ್ಣು ನಾಯ್ಕರ ‘ದುಡಿಯುವ ಕೈಗಳ ಹೋರಾಟದ ಕತೆ’ ಪುಸ್ತಕದ ಮುನ್ನುಡಿಯಲ್ಲಿ ಬರೆದಿದ್ದಾರೆ.)

ಶಿಕ್ಷಣ ತಜ್ಞರಾಗಿ, ಸಂಸ್ಥೆಯ ಸ್ಥಾಪಕರಾಗಿ, ಮಕ್ಕಳ ಕವಿಯಾಗಿ ಅವರು ಈ ಜಿಲ್ಲೆಯ ಸಾಂಸ್ಕೃತಿಕ ಕ್ಷಿತಿಜವನ್ನು ವಿಸ್ತರಿಸಿದ್ದಾರೆ ಮಾತ್ರವಲ್ಲ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ನ ಉತ್ತರ ಕನ್ನಡ ಜಿಲ್ಲಾ ಕಾರ್ಯದರ್ಶಿಯಾಗಿ, ಜಿಲ್ಲೆಯ ಅನೇಕ ಕಡೆಗಳಲ್ಲಿ ರೈತ ಕೂಟಗಳನ್ನು ಕಟ್ಟಿ, ಬೆಳೆಸಿ ತನ್ನ ಸಾಮಾಜಿಕ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದವರು ಪಿಕಳೆಯವರು.

ಗಿರಿ ಪಿಕಳೆಯವರನ್ನು ನಾನು ಮೊದಲು ಭೇಟಿಯಾದದ್ದು ಯಾವಾಗಿರಬಹುದೆಂದು ನನಗೆ ಈಗ ನೆನಪಿಲ್ಲ. ಬಹುಶಃ ಡಿಗ್ರಿಯಲ್ಲಿ ಓದುತ್ತಿರುವಾಗ. ಆದ್ರೆ ಅನಂತರ ಹತ್ತಾರು ಸಲ ಅವರ ಒಡನಾಟದ ಸವಿ ಉಂಡಿದ್ದೆ. ಪತ್ರ ವ್ಯವಹಾರ ನಡೆಸಿದ್ದೆ. ತಾನು ಕಟ್ಟಿದ ಇಡೀ ಸಂಸ್ಥೆಯನ್ನು ಕೆ.ಎಲ್.ಇ ಸಂಸ್ಥೆಗೆ ಕೊಟ್ಟಾಗ ಜಗಳವನ್ನು ಆಡಿದ್ದೆ. ಅವರ ಸಮಜಾಯಿಷಿಯನ್ನು ಒಪ್ಪಬೇಕೋ ಬೇಡವೋ ಎನ್ನುವ ಗೊಂದಲದಲ್ಲಿ ಆಗ ಇದ್ದೆ.

ಮಹಾಶಿಸ್ತಿನ ಮನುಷ್ಯ. ಇಂತಿಷ್ಟು ಗಂಟೆಗೆ ನಿಮ್ಮನೆಗೆ ಬರುತ್ತೇನೆಂದು ಅವರಿಗೆ ಪತ್ರ ಬರೆದರೆ, ಅಷ್ಟೊತ್ತಿಗೆ ಮನೆಯ ಹೊರಗಡೆ ಮಾವಿನ ಮರದ ಕೆಳಗೆ ಖುರ್ಚಿ ಹಾಕಿ ಕುಳಿತು ಸುದ್ದಿ ಹೇಳಲು ಸಿದ್ಧರಾಗುತ್ತಿದ್ದರು. ಸುದ್ದಿಯೆಂದರೆ ಮತ್ತೇನಲ್ಲ, ಅವರು ಭೇಟಿ ಆದಾಗೆಲ್ಲ ಹೇಳಿದ್ದು ಉತ್ತರಕನ್ನಡದಲ್ಲಿ ರೈತರ ಹೋರಾಟದ ಕಥೆ, ಕಮ್ಯುನಿಸ್ಟ್ ಪಕ್ಷದ ಬೆಳವಣಿಗೆಯ ಕಥೆ, ಶಿಕ್ಷಣ ಸಂಸ್ಥೆಯನ್ನು ಕಟ್ಟಿದ ಕತೆ; ನಾನು ಕೇಳಲು ಹಾತೊರೆದದ್ದು ಇದೇ ಕಥೆಯನ್ನು.

ನಿಮ್ಮೊಳಗಿನ ಕತೆಯನ್ನು ಹರಿಯಬಿಡಿ. ಅದು ಚರಿತ್ರೆಯ ಸ್ಫೂರ್ತಿಯುತ ಪುಟವಾಗುತ್ತದೆ ಎಂದು ಹಲವು ಬಾರಿ ಕಾ. ಪಿಕಳೆಯವರನ್ನು ನಾವು ಒತ್ತಾಯಿಸಿದ್ದೇವೆ. ಯಾಕೆಂದರೆ ಪಿಕಳೆಯವರು ಪುಸ್ತಕ ಓದಿ ಹೋರಾಟಗಾರರಾಗಿದ್ದಲ್ಲ; ಎಂದೂ ಪ್ರಚಾರ ಬಯಸದ ಮನಸ್ಸು ಅವರದು.

ನಾನು ಅವರಿಗೆ ಎರಡು ಕಾರಣಗಳಿಂದ ಪರಿಚಿತ ಆದೆ. ಮೊದಲನೆಯದು ನಾನು ಆರ್.ವಿ. ಭಂಡಾರಿಯವರ ಮಗ ಎಂದು, (ಅವರ ಸ್ನೇಹಿತನ ಮಗ ಎಂಬ ಸಲಿಗೆ,) ಎರಡನೆಯದು ನಾನು SfI (ಭಾರತ ವಿದ್ಯಾರ್ಥಿ ಫೆಡರೇಶನ್) ವಿದ್ಯಾರ್ಥಿ ಎಂದು. (ಇದು ಸೈದ್ಧಾಂತಿಕ ಸಲಿಗೆ) ಹಾಗಾಗಿ SfI ನ ಕೆಲವು ಅಧ್ಯಯನ ಶಿಬಿರಕ್ಕೆ ಆಹ್ವಾನಿಸಿದ್ದೆ. ಬಂದಿದ್ದರೂ ಕೂಡ.

ಅವರ ಕುರಿತು ನನಗೆ ವಿವರವಾಗಿ ಹೇಳಿದವರು ಕಾಂ. ಎಂ. ಎಸ್. ಧಾರೇಶ್ವರ. ಈ ಇಬ್ಬರೂ ವಿದ್ಯಾರ್ಥಿ ಜೀವನದಲ್ಲಿ ನನ್ನಂಥವನಿಗೆ ಸ್ಫೂರ್ತಿಯ ಕೇಂದ್ರವಾಗಿದ್ದರು. ಆಮೇಲೆ ಎರಡು ವರ್ಷ ನಾನು ಎಂ. ಎ. ಮಾಡುವಾಗ ವೈಯಕ್ತಿಕ ಭೇಟಿಮಾಡಲು ಸಾಧ್ಯವಾಗಲಿಲ್ಲ. ಮತ್ತೆ ನಾನು ೧೯೯೨ ರಿಂದ ಈ ಜಿಲ್ಲೆಗೆ ವಾಪಸಾದ ಮೇಲೆ ನಿರಂತರ ಸಂಪರ್ಕ ಸಾಧ್ಯವಾಯಿತು. ಉತ್ತರ ಕನ್ನಡದಲ್ಲಿ ಸಂಘಟನೆ ಕಟ್ಟೋಕೆ ಅವರ ಚಿಂತನೆ ಹಲವು ದೃಷ್ಟಿಯಿಂದ ಸಹಾಯಕ ಆಯ್ತು.

ಸರ್ ನಿಮ್ಮನ್ನು ‘comrade ’ ಎಂದು ಕರೆಯಬಹುದೇ ಈಗ? ಅಥವಾ ಹಾಗೆ ಕರೆದರೆ ಸಿಟ್ಟು ಬರುತ್ತದೆಯೇ? ಎಂದು ತಮಾಶೆ ಮಾಡಿದಾಗ ಅವರೂ ನಕ್ಕು ನನಗೆ ಈಗಲೂ ‘comrade ’ ಎಂದು ಕರೆದರೆ ಖುಷಿಯಾಗುತ್ತದೆ ಎಂದಿದ್ದು ನನ್ನ ಕಣ್ಮುಂದೆ ಹಾಗೇ ಇದೆ.

ಬದುಕಿನ ಕೊನೆಯವರೆಗೂ, ಸೋಷಿಯಲಿಸ್ಟರನ್ನು ಸೈದ್ಧಾಂತಿಕ ಬದ್ಧತೆಯಾಗಲಿ, ತಿಳವಳಿಕೆಯಾಗಲಿ ಇಲ್ಲದವರು ಎಂದು ಬೈಯುತ್ತಿದ್ದ ಪಿಕಳೆಯವರಿಗೆ ಕಮ್ಯುನಿಸ್ಟರನ್ನು ಕಂಡರೆ ವಿಶೇಷ ಮೋಹ. ಹಾಗಾಗಿಯೇ ಯಾವಾಗಲಾದರೂ ಕಾರ್ಯಕ್ರಮಕ್ಕೆ ಕರೆಯಲು, ಸ್ಮರಣ ಸಂಚಿಕೆಗೆ ಜಾಹಿರಾತು ಕೇಳಲು ಹೋದಾಗ ಪ್ರೇಮಾ ಪಿಕಳೆಯವರು ‘ನಿಮ್ಮ ಮಾಸ್ತರ’ನ್ನು ಕೇಳಿ ಪಡೆದುಕೊಳ್ಳಿ ಎಂದು ಅವರ ಬಳಿ ಕಳಿಸುತ್ತಿದ್ದರು. ಪಿಕಳೆಯವರು ನಮ್ಮ ಬೇಡಿಕೆಗಳನ್ನು ಎಂದೂ ತಿರಸ್ಕರಿಸಿದ್ದಿಲ್ಲ.

ಕಮ್ಯುನಿಸ್ಟ್ ಆದವನು ಮಾತ್ರವೇ ನಿಜವಾದ ಅರ್ಥದಲ್ಲಿ ಮಾನವತಾವಾದಿ ಆಗಿರಲು ಸಾಧ್ಯ ಎಂದು ಕೊನೆವರೆಗೂ ನಂಬಿದವರು, ಕೃತಿಯಲ್ಲಿ ಅದನ್ನು ಜಾರಿಗೆ ತಂದವರು comrade ಪಿಕಳೆಯವರು.
‘ಚಿಂತನ ಉತ್ತರ ಕನ್ನಡ’ ಪ್ರಾರಂಭಿಸಿದಾಗ ಖುಷಿಗೊಂಡಿದ್ದರು. ಯುವಕರು ಇಂಥ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂದು ಉತ್ತೇಜಿಸಿದ್ದರು.

ಮೊದಲ ಪುಸ್ತಕ ‘ಏನಿದು ಈ ಹಿಂದೂ ರಾಷ್ಟ?’ ಬಿಡುಗಡೆ ಆದಾಗ ಪತ್ರಿಕೆಯಲ್ಲಿ ಸುದ್ದಿ ಓದಿ, ಪತ್ರ ಹಾಕಿ ೨ ಪ್ರತಿ ತರಿಸಿಕೊಂಡಿದ್ದರು. ೧೦೦ ರೂ. ಕೊಟ್ಟು ಯೋಜನೆಯ ಸದಸ್ಯರಾಗಿದ್ದರು. ಕೋಮುವಾದವನ್ನು ಸಮರ್ಥವಾಗಿ ಎದುರಿಸಲು ಮಾರ್ಕ್ಸ್ ವಾದಿ ಚಿಂತನೆಯಿಂದ ಮಾತ್ರ ಸಾಧ್ಯ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದರು.

ಸಮಾಜವಾದಿಗಳೆಲ್ಲರೂ ಸೇರಿ ಕಟ್ಟಿದ ಶಿಕ್ಷಣಸಂಸ್ಥೆಯು ಇಂದು ಕೋಮುವಾದಿ ದೃಷ್ಟಿಕೋನದವರ ಕಪಿಮುಷ್ಟಿಯಲ್ಲಿ ಸಿಲುಕಿರುವುದನ್ನು, ರೈತರ, ಕಾರ್ಮಿಕರ ಹೋರಾಟದಿಂದ ಅವರ ಬೆವರಿನಿಂದ ಬೆಳೆದ ಸಂಸ್ಥೆಗಳಲ್ಲಿ ಕೋಮುವಾದಿ ಶಿಕ್ಷಕರನೇಕರು ತುಂಬಿಕೊಂಡಿರುವುದನ್ನು ನೋಡಿ ವಿಷಾದ ವ್ಯಕ್ತಪಡಿಸಿದ್ದರು.

ಅಣ್ಣ ಮತ್ತು ಪಿಕಳೆಯವರ ಸಂಬಂಧ ಕೇವಲ ಸಾಹಿತ್ಯಕ್ಕೆ ಸಂಬಂಧಿಸಿದ್ದು ಮಾತ್ರವಲ್ಲ, ಹೋರಾಟ ಮತ್ತು ಇತರೇ ಸೈದ್ಧಾಂತಿಕ ಚರ್ಚೆಗೂ ಸಂಬಂಧಿಸಿದ್ದಾಗಿತ್ತು. ಹಾಗಾಗಿ ಇಬ್ಬರಲ್ಲೂ ತಿಂಗಳಿಗೆ ಎರಡು ಮೂರು ಪತ್ರವಾದರೂ ಪರಸ್ಪರ ಹರಿದಾಡುತ್ತಿತ್ತು.

ನಿರಂತರವಾಗಿ ಮೂರು ವಾರ (ರವಿವಾರ) ಅವರ ಮನೆಗೆ ಹೋಗಿ ನಾನು ಮತ್ತು ಅಣ್ಣ ಸೇರಿ ಅವರನ್ನು ಸಂದರ್ಶನ ಮಾಡಿದ್ದೆವು. ಅದರ ಒಂದು ಭಾಗ ಹಿಂದೆ ‘ಕರಾವಳಿ ಮುಂಜಾವಿ’ನಲ್ಲಿ ಪ್ರಕಟಿಸಲಾಗಿತ್ತು. ಇನ್ನು ಉಳಿದ ಬಾಗವನ್ನು ಪ್ರಕಟಿಸಬೇಕಾಗಿದೆ. ಹಾಗೆ ಮಾಡುವುದಕ್ಕಿಂತ ಒಂದು ಕಿರು ಪುಸ್ತಕವನ್ನೇ ತರುವುದು ಒಳ್ಳೆಯದು ಎನ್ನುವ ಕಾರಣದಿಂದ ಈವರೆಗೆ ಪ್ರಕಟಿಸಿರಲಿಲ್ಲ. ಅದೂ ಆಗಲಿಲ್ಲ, ಇದೂ ಆಗಲಿಲ್ಲ, ಯೋಜನೆ ಹಾಗೆಯೇ ಉಳಿಯಿತು.

ಸಂದರ್ಶನ ಮಾಡುವಾಗ ನಾನು ಕೇಳುವ ಪ್ರಶ್ನೆ ಗೊಂದಲಪೂರ್ಣವಾಗಿದ್ದರೆ ಅಥವಾ ಅಸ್ಪಷ್ಟವಾಗಿದ್ದರೆ ಅಣ್ಣ ಮತ್ತು ಪಿಕಳೆಯವರಿಬ್ಬರೂ ನನ್ನ ಪಶ್ನೆಯನ್ನು ತಿದ್ದಿ ಹೇಳುತ್ತಿದ್ದರು. ಸಾಮಾನ್ಯ ಪ್ರಶ್ನೆಯನ್ನು ವಿಶೇಷ ಎನ್ನುವಂತೆ ಉತ್ತರಿಸುತ್ತಿದ್ದಾಗ ನನಗೂ ಖುಷಿಯಾಗುತ್ತಿತ್ತು. ಅಲ್ಲಿಯೂ ಅವರು ಮಾಸ್ತರಿಕೆಯನ್ನು ಮಾಡುತ್ತಿದ್ದುದು ಗಮನಿಸಬಹುದು. ಶೇಷಗಿರಿ ಪಿಕಳೆ ಎನ್ನುವುದಕ್ಕಿಂತ ಅವರು ‘ಪಿಕಳೆ ಮಾಸ್ತ್ರು’ ಎಂತಲೇ ಪ್ರಸಿದ್ಧರು.

ಸಾಮಾನ್ಯವಾಗಿ ಅವರ ಪತ್ರಗಳು ಸೈದ್ಧಾಂತಿಕವಾದ ಚರ್ಚೆಯನ್ನು ಹೊಂದಿರುತ್ತಿದ್ದವು. ಒಂದು ಉದಾಹರಣೆಗೆ, ೨೪-೧೧-೧೯೯೮ ರಂದು ಬರೆದ ಪತ್ರವನ್ನು ಉಲ್ಲೇಖಿಸುವೆ.

“….. ಭಾರತದ ಸ್ವಾತಂತ್ರ್ಯ ಚಳುವಳಿ ಬರಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ನಾಯಕರಷ್ಟೇ ಮಾಡಿದ್ದು ಇರುವುದಿಲ್ಲ. ಬಂಗಾಲದ ಖುದಿರಾಮ ಬೋಸ್, ಕಮಲಾ ದತ್ ಮತ್ತು ಅನೇಕ ತರುಣರು ಮಾಡಿದ ಚಳುವಳಿಯು ಕೂಡ ಬ್ರಿಟಿಷರ ಆಡಳಿತದ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದುಂಟು. ವೀರೇಂದ್ರನಾಥ ಚಟ್ಟೋಪಾಧ್ಯಾಯ (ಸರೋಜಿನಿ ನಾಯ್ಡುರವರ ತಮ್ಮ) ರಂಥ ಉತ್ಕೃಷ್ಟ ಕವಿಗಳು ಮತ್ತು ಬುದ್ಧಿಜೀವಿಗಳು ಮಾಡಿದ ತ್ಯಾಗ ಅತ್ಯಂತ ರೋಮಾಂಚನಕಾರಿ ಇದೆ.

ಕಾಂಗ್ರೆಸ್ ಮುಂದಾಳುಗಳು ಹೆಚ್ಚಾಗಿ ಜಮೀನ್ದಾರರ ಕುಟುಂಬದವರೇ ಇದ್ದರಿಂದ ಅವರು ಮತ್ತು ಆ ಕಾಲದಲ್ಲಿ ಹಿಂದುಸ್ತಾನದಲ್ಲಿ ದಾಪುಗಾಲು ಹಾಕುತ್ತಿದ್ದ ಕೆಲ ಬಂಡವಾಳದಾರ ಉದ್ಯೋಗಪತಿಗಳು ಒಂದೆಡೆ ಕೂಡಿ ಬರೀ ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು ಮುಂದುವರಿಸಿದರು.

ರಾಜಕೀಯ ಸ್ವಾತಂತ್ರ್ಯಾನಂತರ  “ಇಕ್ವಿಟೇಬಲ್ ಡಿಸ್ಟ್ರಿಬ್ಯುಶನ್ ಆಫ್ ವೆಲ್ತ್” ದ ಕುರಿತು ಕೊಡತಕ್ಕ ಜ್ಞಾನ (ಶಿಕ್ಷಣ) ಕೊಡುವ ಕಾರ್ಯಕ್ರಮವು ಅವರಿಗೆ ಬೇಕಾಗಿಲ್ಲ. ಆದ್ದರಿಂದಲೇ ಹಿಂದುಳಿದ ಮತ್ತು ಬಡ ಜನರಿಗೆ ಅವಶ್ಯವಾಗಿ ಬೇಕಾಗಿದ್ದ ಭೂಸುಧಾರಣಾ ಕಾಯಿದೆಗೆ ಆ ಮುಖಂಡರೇ ಸುರಂಗಿ ಹಾಕಿದ್ದುಂಟು. ಕಾಂಗ್ರೆಸ್ ನ ನೀತಿಯೇ ಸರಿ ಇದೆ ಎಂದು ಹೇಳಿಸಲು, ತೋರಿಸಲು ವ್ಯಕ್ತಿಪೂಜೆ ಅನುಕೂಲವಾಯಿತು.

ಆ ದೃಷ್ಟಿಯಿಂದ ನೋಡಿದರೆ ಬರೀ ಕೆಲವೊಂದು ಮುಂದಾಳುಗಳ ಹೆಸರುಗಳನ್ನೆÃ ಇತಿಹಾಸದಲ್ಲಿ ಸೇರಿಸಿದರೆ ಅದರಿಂದ ಹೊಸ ಪೀಳಿಗೆಯಲ್ಲಿ ಸೈದ್ಧಾಂತಿಕ ಗೊತ್ತು ಗುರಿಯ ಅರಿವು ಆಗುವುದು ಸಾಧ್ಯವಿಲ್ಲ. ಇಂದು ನಾವು ಕಾಣುತ್ತಿರುವ ನಿರುತ್ಸಾಹದ ವಾತಾವರಣ ಅದಕ್ಕಾಗಿಯೇ. ಮತ್ತೆ ಮೇಲಿಂದ ಈಗಿನ ತರುಣರು ಗೊತ್ತು ಗುರಿ ಇಲ್ಲದ ಜನಾಂಗ ಎಂದು ಅವರನ್ನು ಹಿರಿಯರೆಂದೆನಿಸಿಕೊಳ್ಳುವವರು ದೂರುತ್ತಿರುವುದು.

ಅದರ ಪರಿಣಾಮದಿಂದ ಜಾತೀಯತೆ, ಅಂಧಶೃದ್ಧೆ ಬೆಳೆಸುವ ಬಿಜೆಪಿಗೆ ಅವಕಾಶ ಸಿಕ್ಕಿದ್ದು. ಪುರೋಗಾಮಿ ವಿಚಾರವುಳ್ಳ ಶಿಕ್ಷಕರು, ವಿಜ್ಞಾನಿಗಳು ಮತ್ತು ಸಾಹಿತಿಗಳು ಒಂದಾದರೆ ಮಾತ್ರ ನಮಗೆ ಇಂದಿನ ಸಮಸ್ಯೆಗಳನ್ನು ಎದುರಿಸಿ ಪರಿಹಾರ ದೊರಕಿಸಲು ಸಾಧ್ಯವಾಗುತ್ತದೆ. ಇಲ್ಲವಾದರೆ ಅಮೇರಿಕೆ ದುಷ್ಕರ್ಮಿಗಳು ನಮ್ಮ ತಲೆಯ ಮೇಲೆ ಹಿಡಿದಿರುವ ತೋರಿಕೆಯ ಕೃಪಾಛತ್ರವನ್ನು ನಂಬಿ ಅವರ ಗುಲಾಮರಾಗಿರಬೇಕಾಗುವದು ಖಂಡಿತ.”

ಎಂದು ಚರ್ಚಿಸಿದ್ದರು. ರಾಜಕೀಯವಾಗಿ ಯಾರೆಲ್ಲ ಎಷ್ಟು ಅಪಾಯಕಾರಿಯಾಗಿ ಬೆಳೆಯುತ್ತಿದ್ದಾರೆಂಬುದನ್ನು ಅಣ್ಣ ಮತ್ತು ಪಿಕಳೆ ಚರ್ಚಿಸುತ್ತಿದ್ದರು.

ಮಾತ್ರವಲ್ಲ, ತೀರಾ ವೈಯಕ್ತಿಕ ವಿಷಯವನ್ನು ಹಂಚಿಕೊಳ್ಳುವಷ್ಟು ಅಣ್ಣ ಮತ್ತು ಅವರ ಸ್ನೇಹವಿತ್ತು. ಉದಾಹರಣೆಗೆ ಪ್ರೇಮಾ ಪಿಕಳೆಯವರ ಆರೋಗ್ಯದ ಬಗ್ಗೆ ಬರೆದ ಪತ್ರ ಇದು.

“ಗಿರಿ ಪಿಕಳೆ
ಅಂಕೋಲಾ ೨೦-೧೦-೨೦೦೫

“ಪ್ರಿಯ ಆರ್.ವಿ ಯವರಿಗೆ ವಂದನೆಗಳು.

ನಿಮ್ಮ ಪತ್ರ ನಿನ್ನೆ ಸಿಕ್ಕಿತು. ಬಹಳ ದಿನಗಳ ನಂತರ ಬಂದ ಪತ್ರ ಓದಿ ತುಂಬಾ ಆನಂದವಾಯಿತು. ಹೌದು ಪ್ರೇಮಾಳಿಗೆ ತೊಡೆಯ ಜಂಗು ಮುರಿದು ಒಂದು ವರ್ಷಕ್ಕೂ ಹೆಚ್ಚಾಯಿತು. ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಯಲ್ಲಿ ಒಂದು ತಿಂಗಳು ಉಳಿದು ಶುಶ್ರೂಷೆ ಪಡೆದು ಬಂದಿದ್ದಾಳೆ. ಆದರೂ ಮೊದಲಿನ ಹಾಗೆ ತಿರುಗಾಡಲು ಬರುತ್ತಿಲ್ಲ. ದಿವಸ ಶಾಲೆ ಹತ್ತಿರ ಹೋಗಿ ಮೊದಲಿನಂತೆ ಎಲ್ಲಾ ಸಂಸ್ಥೆಗಳ ಆಡಳಿತ ಮಾಡುತ್ತಾಳೆ. ಒಟ್ಟಿಗೆ ನಮ್ಮ ಅಡಿಯಲ್ಲಿ ಹನ್ನೆರಡು ಸಂಸ್ಥೆಗಳು ಇವೆ….

ಈ ನಾಲ್ಕೈದು ತಿಂಗಳಲ್ಲಿ ನನಗೂ ಕಾಲುಗಳ ಸಂದು ನೋವಿನಿಂದ ತಿರುಗಾಟಕ್ಕೆ ಆಗದೇ, ಮೂತ್ರ ಕಟ್ಟಿ ಆಸ್ಪತ್ರೆಯಲ್ಲಿ ಮೂರು ನಾಲ್ಕು ಸಲ ಸೇರಬೇಕಾಯಿತು. ಸಧ್ಯ ಮನೆಯಲಿಯೇ ಯಾರ ಸಂಪರ್ಕವೂ ಇಲ್ಲದೇ ಇರುತ್ತೇನೆ. ಬೇಸರ ಬರುತ್ತದೆ ಕೊನೆ ದಿವಸದ ಹಾದಿ ಕಾಯುತ್ತಿದೇನೆ.
ಒಮ್ಮೆ ಬನ್ನಿ.

ನಿಮ್ಮ
ಗಿರಿ ಪಿಕಳೆ”

ಅವರು ನನ್ನ ಮದುವೆಗೆ ಬರುವುದಾಗಿ ಹೇಳಿದ್ರು. ಅನಾರೋಗ್ಯದಿಂದ ಬರಲಾಗದ್ದಕ್ಕೆ ಒಂದು ಪತ್ರವೂ ಬಂದಿತ್ತು. ಅದರಲ್ಲಿ

“ಗಿರಿ ಪಿಕಳೆ
ಅಂಕೋಲಾ
೧೭-೫-೨೦೦೩

ವಂದನೆಗಳು.
ನಿಮ್ಮ ೧೩ ರ ಪತ್ರ ಸಿಕ್ಕಿತು.
ನನ್ನ ಮೂರು ಕೃತಿಗಳ ಒಂದೊಂದು ಪ್ರತಿ ಕಳಿಸಿದ್ದುಂಟು. ಇಷ್ಟೊತ್ತಿಗೆ ಅವು ಮುಟ್ಟಿರಬೇಕು.
ಕಾಮ್ರೆಡ್ ವಿಠ್ಠಲನ ಮದುವೆಗೆ ನನಗೆ ಬರಲಾಗಲಿಲ್ಲ. ಅಂಕೋಲೆಯಿಂದ ಬೇರೆ ಕಡೆಗೆ ಹೋಗಲು ಧೈರ್ಯವಿಲ್ಲ. ದೃಷ್ಟಿ ಮಂದವಾಗುತ್ತಾ ನಡೆದಿದೆ. ಮೂತ್ರ ತುಸು ತುಸು ಆಗುತ್ತಿರುವುದರಿಂದ ತಾಸಿಗೊಮ್ಮೆ ಹೋಗಲೇ ಬೇಕಾಗುತ್ತದೆ. ಮದುವೆ ಸಾಂಗವಾಗಿ ನಡೆದಿರಬೇಕಲ್ಲವೇ? ಅಂಕೋಲೆಗೆ ಬಂದರೆ ಸಿಗಬೇಕಾಗಿ ವಿನಂತಿ. ಲೋಕತಂತ್ರ ಉಳಿಯಬೇಕಾದರೆ ನಾವಿನ್ನೂ ಬಹಳಷ್ಟು ಮಾಡಬೇಕಾಗಿದೆ. ನನ್ನಲ್ಲೀಗ ಓಡಾಡುವ ತಾಕತ್ತಿಲ್ಲ. ವಿಚಾರಗಳು ಬರುತ್ತವೆ. ಕೃತಿಯಲ್ಲಿ ಇಳಿಸಲಾಗುವುದಿಲ್ಲ. ನಾವು ನೀವು ಕೂಡಿದರೆ ಕಾರ್ಯವು ಸಾಧ್ಯವಾಗಬಹುದು ಎಂದೆನಿಸುತ್ತದೆ.
ಒಮ್ಮೆ ಬನ್ನಿ.
ಇಂತಿ ನಿಮ್ಮ
ಗಿರಿ ಪಿಕಳೆ”

ಅಂದರೆ ಒಂದು ಸಣ್ಣ ವಿಷಯವನ್ನು ಅಣ್ಣನೊಂದಿಗೆ ಅವರು ಅವರೊಂದಿಗೆ ಅಣ್ಣ ಚರ್ಚಿಸುತ್ತಿದ್ದರು ಎನ್ನುವದಕ್ಕಾಗಿ ಹೇಳಿದೆ ಅಷ್ಟೆ

ಅವರಿಬ್ಬರಲ್ಲಿರುವ ಸಾಮ್ಯತೆ ಎಂದರೆ ಇಬ್ಬರೂ ಮಾರ್ಕ್ಸ್ವಾದಿಗಳು, ಮಕ್ಕಳ ಲೇಖಕರು, ಶಾಲೆ ಮಾಸ್ತ್ರು ಮತ್ತು ಹೋರಾಟದ ಬಗ್ಗೆ ಸಮ ಮನಸ್ಸುಳ್ಳವರು. ಮಾಡುವ ಕೆಲಸದಲ್ಲಿ ಹಠ ಮತ್ತು ಶ್ರದ್ಧೆ ಇಬ್ಬರಲ್ಲಿಯೂ ಇತ್ತು. ಇಷ್ಟೆಲ್ಲ ಇದ್ದ ಮೇಲೆ ಅವರಿಬ್ಬರೂ ಸ್ನೇಹಿತರಾಗದಿರಲು ಹೇಗೆ ಸಾಧ್ಯ?

ಒಂದು ಉದಾಹರಣೆ ಕೊಟ್ಟೇ ಮುಂದೆ ಹೋಗುತ್ತೇನೆ. ಯಾವುದೇ ಪುಸ್ತಕ ಕಳುಹಿಸಿದರೂ ಒಂದೆರಡು ದಿನದಲ್ಲಿ ಓದಿ, ಅದರ ಕುರಿತ ತಮ್ಮ ಖಾಸಾ ಅಭಿಪ್ರಾಯ ಬರೆಯುತ್ತಿದ್ದರು. ಒಮ್ಮೆ ಶ್ರೀ ವಿಡಂಬಾರಿಯವರ ಪುಸ್ತಕ ಮುದ್ರಿಸುವದಾಗಿಯೂ, ಆರ್ಥಿಕ ಸಹಾಯ ನೀಡಬೇಕೆಂದೂ ಹಲವರಿಗೆ ಪತ್ರ ಬರೆದಂತೆ, (ಕೇವಲ ೫೦೦ ರೂ. ಕೇಳಿ) ಇವರಿಗೂ ಬರೆದೆ. ತಕ್ಷಣ ಕಳಿಸಿದರು.

ಆದರೆ ಪುಸ್ತಕ ಮುದ್ರಿಸಲು ತಡವಾಯಿತು. ಒಂದೆರಡು ಸಲ ಪತ್ರ ಬರೆದು ವಿಚಾರಿಸಿ, ಕೊನೆಗೊಮ್ಮೆ ಖಾರವಾಗಿ ಪಾಠ ಮಾಡಿದರು. ಒಪ್ಪಿಕೊಂಡ ಕೆಲಸ ಸಮಯಕ್ಕೆ ಸರಿಯಾಗಿ ಮಾಡದಿರುವುದು ಬೇಜವಾಬ್ದಾರಿತನವೆಂದೂ ಹೀಗಾದರೆ ಸಂಘಟನೆ ಬೆಳವಣಿಗೆ ಹೇಗೆ ಸಾಧ್ಯವೆಂದು ದಬಾಯಿಸಿದರು. ಆ ಪತ್ರ ಈಗಲೂ ನನ್ನೊಂದಿಗಿದೆ.

ಕಮ್ಯುನಿಷ್ಟರಾಗಿ ಬೃಹತ್ ಆದ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ನಂತರ ಅದನ್ನು ಪ್ರಭಾಕರ ಕೋರೆ ನೇತೃತ್ವದ ಕೆ.ಎಲ್. ಇ ಸಂಸ್ಥೆಗೆ ಕೊಡುವ ವಿಷಯದಲ್ಲಿ ಮಾತ್ರ ಇಬ್ಬರಲ್ಲಿಯೂ ಭಿನ್ನಾಭಿಪ್ರಾಯವಿತ್ತು. ಹಾವನು ಹಿಡಿದು ಹದ್ದಿಗೆ ಹಾಕಿದಂತಾಯ್ತು ಅಂತ ಅಣ್ಣ ಹೇಳಿದ ನೆನಪು. ಕಮ್ಯುನಿಷ್ಟನಾಗಿ ಬದುಕಿ ಬಾಳಿದ ಪಿಕಳೆ ಮಾಸ್ತ್ರು ಕಟ್ಟಿದ ಸಂಸ್ಥೆ ಬಿಜೆಪಿ ಪಕ್ಷದ (ಆಗ ಪ್ರಭಾಕರ ಕೋರೆ ಕಾಂಗ್ರೆಸ್ ನಲ್ಲಿದ್ದರು.) ಮನುಷ್ಯನಿಗೆ ಹೋದ ಬಗ್ಗೆ ಈಗಲೂ ನೋವಿದೆ. ಮತ್ತು ಉಚಿತ ಶಿಕ್ಷಣ ಮಾಯವಾಗಿದ್ದೂ ದುರಂತದ ಸಂಗತಿ.

ತಾವೇ ಬೆವರು ಹರಿಸಿ ಕಟ್ಟಿದ ಟ್ರಸ್ಟ್ ಬಿಡುವಾಗಿನ ಕಹಿ ಘಟನೆಯನ್ನು ಅವರು ಹಲವು ಬಾರಿ ನೆನಪು ಮಾಡಿಕೊಳ್ಳುತ್ತಿದ್ದರು. ಇದು ಅವರನ್ನು ಘಾಸಿಗೊಳಿಸಿದ ಘಟನೆ ಕೂಡ. ಇದನ್ನು ವಿವರಿಸುವಾಗ ಕಣ್ಣಂಚಿನಲ್ಲಿ ನೀರು ಹನಿಕಟ್ಟಿದ್ದನ್ನು ನಾನು ಗುರುತಿಸಿದ್ದೆ. ಕಾಮ್ರೆಡ್ ಗಿರಿ ಪಿಕಳೆಯವರು ಗಾಳಿ ಬಂದತ್ತ ವಾಲಿಕೊಳ್ಳುವ ವ್ಯಕ್ತಿಯಾಗಿದ್ದರೆ, ಬದ್ಧತೆ ಹೊಂದಿಲ್ಲದ ಮನುಷ್ಯನಾಗಿದ್ದರೆ ಟ್ರಸ್ಟಿನಲ್ಲೇ ಇದ್ದು ಬಿಡಬಹುದಾಗಿತ್ತು. ಆದರೆ ಸೈದ್ಧಾಂತಿಕ ಹಂತದಲ್ಲಿ ಅವರದು ರಾಜಿ ರಹಿತ ಹೋರಾಟ. “೧೯೫೯ ರಲ್ಲಿ ಕೇರಳದ ಮೊದಲ ಕಮ್ಯುನಿಷ್ಟ ಪಕ್ಷದ ನೇತೃತ್ವದ ಇ.ಎಂ.ಎಸ್. ನಂಬೂದಿರಿಪಾಡ್ ಸರ್ಕಾರವನ್ನು ಕೇಂದ್ರದ ಕಾಂಗ್ರೆಸ್ ಪಕ್ಷ ವಜಾ ಮಾಡಿತು. ಆಗ ನಾನು ಅಂಕೋಲೆಯಲ್ಲಿ ಒಂದು ಸಭೆ ಕರೆದೆ. ಆಗ ಅಲ್ಲಿ ನಾನು ದೀರ್ಘ ಭಾಷಣ ಮಾಡಿ ನೆಹರುವನ್ನು, ಕಾಂಗ್ರೆಸ್ ಕೃತಿಯನ್ನು ತೀಕ್ಷ್ಣವಾಗಿ ಖಂಡಿಸಿದೆ.”

ನಾನು ಅವರನ್ನು ಕೊನೆಯ ಬಾರಿಗೆ ಭೇಟಿ ಆಗಿದ್ದಾಗ ಮಾತನಾಡುವ ಚೈತನ್ಯ ಅವರು ಕಳೆದುಕೊಳ್ಳುತ್ತಿರುವಾಗ, ತಾನು ತೀರಿಕೊಳ್ಳುತ್ತೇನೆಂಬ ಭಯ ಅವರನ್ನು ಕಾಡುತ್ತಿತ್ತು. ನಾನು, ನನ್ನ ತಂದೆ ಆರ್. ವಿ. ಭಂಡಾರಿ, ಸಂಗಾತಿ ಯಮುನಾ ಗಾಂವ್ಕರ, ಗೆಳೆಯ ರಾಜೇಶ್ ದೇಸಾಯಿ ಸೇರಿ ಅಲ್ಲಿಗೆ ಹೋಗಿದ್ದೆವು. ಮಾತುಗಳು ಅರ್ಥವಾಗುತ್ತಿರಲಿಲ್ಲ; ಆದರೂ ರೈತ ಸಂಘದ ಬಗ್ಗೆ ಕೇಳಿದರು. ಪ್ರೇಮಾ ಪಿಕಳೆಯವರು ಅವರನ್ನು ಮಾತಿಗೆ ಉತ್ತೇಜಿಸುತ್ತಿದ್ದರು, ನೆನಪಿಸುತ್ತಿದ್ದರು.

ಆಗಲೇ ಅವರು ತಾನು ಪ್ರೇಮಾರನ್ನು ಬಾಲ್ಯದಲ್ಲಿ ನೋಡಿದ್ದು, ಯೌವ್ವನದಲ್ಲಿ ಮೆಚ್ಚಿದ್ದು, ಮದುವೆ ಆಗಲು ಕೇಳಿದ್ದು ವಿದ್ಯಾಭ್ಯಾಸದ ಕಾರಣದಿಂದ ಪ್ರೇಮಾ ಇದನ್ನು ನಯವಾಗಿ ತಿರಸ್ಕರಿಸಿದ್ದು, ಮತ್ತೆ ಅವರ ಭೇಟಿ, ಮದುವೆಗಾಗಿ ಡಾ. ಕಮಲಾ ಅವರು ಕೇಳಿದ್ದು, ಒಪ್ಪಿ ಮದುವೆ ಆದದ್ದು ಎಲ್ಲವನ್ನು ವಿವರಿಸಿದ್ದರು. ನಮ್ಮಿಬ್ಬರದು ಪ್ರೇಮ ವಿವಾಹವೂ ಹೌದು, ಸಿದ್ಧ ಮದುವೆಯೂ ಹೌದು ಎಂದಿದ್ದರು.

ಅಣ್ಣ, ಆಕಾಲ ಅರಿತವನಾಗಿ ಮತ್ತು ಸೂಕ್ತ ಅಧ್ಯಯನ ಮಾಡಿ ಹೇಳಿದಂತೆ, ಪಿಕಳೆಯವರು ರೈತ ಹೋರಾಟ ಕಟ್ಟಿದ ಬಗೆ, ೧೯೬೨ರ ನಂತರದ ಹೊಸ ಸಂಸ್ಥೆ ಕಟ್ಟಿ ನಿಲ್ಲಿಸಿದ ಕತೆ ಇದಕ್ಕಿಂತ ರೋಚಕವಾದದ್ದು. ಇಲ್ಲಿ ಅದನ್ನು ವಿವರಿಸಲು ಸ್ಥಳವಿಲ್ಲದ್ದರಿಂದ ನಿಜ ಕಮ್ಯುನಿಸ್ಟ್ ಸಂಗಾತಿ ಗಿರಿ ಪಿಕಳೆಯವರಿಗೆ ಸದ್ಯ ಕೆಂಪು ವಂದನೆ ಹೇಳುವಷ್ಟಕ್ಕೆ ಮುಗಿಸುತ್ತೇನೆ.

ಕಾಮ್ರೆಡ್ ಪಿಕಳೆ ಮಾಸ್ತ್ರು ೨೦೦೭ ರ ಮೇ ೨೩ ರಂದು ನಮ್ಮನ್ನಗಲಿದ ಸುದ್ದಿಯನ್ನು ಅಣ್ಣನಿಗೆ ಹೇಳಿದಾಗ ಅಣ್ಣ ಕೂಡ ಅನಾರೋಗ್ಯದ ಸ್ಥಿತಿಯ್ಲಲೇ ಇದ್ದ. ಆದರೂ ಪಿಕಳೆಯವರು ತೀರಿಕೊಂಡಿದ್ದು ಅವನಿಗೆ ಆಘಾತವನ್ನುಂಟು ಮಾಡಿತ್ತು. ಆತ ಸಂದರ್ಶನ ಮಾಡಿದ ಟಿಪ್ಪಣಿಯನ್ನಿಟ್ಟುಕೊಂಡು ಮುಂಜಾವಿಗೆ ಒಂದು ಕಳಿಸುತ್ತೇನೆ ಎಂದಾಗ ಆತ ನೋವಿನಲ್ಲಿಯೂ ಸಂಗಾತಿಯ ಕುರಿತ ಗೌರವವನ್ನು, ನಿಜವಾದ ನುಡಿ ನಮನ ಸಲ್ಲಿಸಿದ್ದನ್ನು, ಅವನ ಕಣ್ಣಲ್ಲಿ ನೀರೂರಿದ್ದನ್ನೂ ಕಂಡ ನನಗೆ ಅದು ಇನ್ನೂ ಮನಸ್ಸಿನಲ್ಲಿ ಅಚ್ಚೊತ್ತಿದೆ.

ಕಾಮ್ರೆಡ್ ಪಿಕಳೆಯವರೇ, “ನೀವು ಬಿದ್ದ ಮರವಲ್ಲ, ಬಿತ್ತಿದ ಬೀಜವಾಗಿದ್ದೀರಿ. ನಿಮಗಿದೋ ಕೆಂಪು ವಂದನೆ”.

‍ಲೇಖಕರು avadhi

April 7, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Lalitha Siddabasavaiah

    ಭಾವವನ್ನು ಆರ್ದ್ರಗೊಳಿಸುವ , ಮನಸ್ಸನ್ನು ಮೆದುವಾಗಿಸುವ ಬರಹ.

    ಪ್ರತಿಕ್ರಿಯೆ
  2. ವಿಠ್ಠಲ

    ತಮ್ಮೆಲ್ಲರ ಅಭಿಪ್ರಾಯಕ್ಕೆ ವಂದನೆ ಗಳು.ಆದರೆ ಸಂಘಟನೆಯ ಓಡಾಟದ ಕಾರಣದಿಂದ ನಿಗದಿತ ಕಾಲಕ್ಕೆ ಬರೆಯಲಾಗುತ್ತಿಲ್ಲ.ಕ್ಷಮಿಸಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: