‘ಕಿಚನ್’ ಮೂಲಕ ವಿಮೋಚನೆಯ ದಾರಿ

ಯಮುನಾ ಗಾಂವ್ಕರ್

ಅಂದು ಮನೆಗೆ ಆಪ್ತೇಷ್ಟರು ಕೂಡ ಬಂದಿದ್ದರು. ಒಳ್ಳೆಯ ಅಡುಗೆ ಮಾಡುವ ಮೂಡ್‍ನಲ್ಲಿ ತುಸು ಮುಂಚಿತವಾಗಿಯೇ ಅಡುಗೆ ಮನೆ ಪ್ರವೇಶಿಸಿದೆ. ಅನ್ನಕ್ಕಿಟ್ಟು ಬೇಳೆ ತೊಳೆದು ಉಳಿದಂತೆ ತರಕಾರಿ ಕೊಚ್ಚಲು ಕುಳಿತಿದ್ದೊಂದೇ ನೆನಪು.

ನಮ್ಮನೆ ಕುಕ್ಕರಿನ ಸೇಫ್ಟಿ ಲಾಕ್ ಹಾರಿ ಹೋಗಿ, ಗಡುಸಾದ ಧ್ವನಿಯೊಂದಿಗೆ ಸ್ಪೋಟದ ಸ್ಥಿತಿ ತಲುಪಿತ್ತು. ಇಡೀ ಅಡುಗೆ ಮನೆ ತುಂಬಾ ಅನ್ನದ ಅಗುಳು ಮತ್ತು ಗಂಜಿ ಪಸರಿಸಿತ್ತು. ಬೆಂಕಿ ನಂದಿಸಲಿಕ್ಕೂ ಒಂದ್ಹೆಜ್ಜೆ ಹಾಕಲಾಗದಷ್ಟು ಗಂಜಿ ತಿಳಿಯಿಂದ ಕಾಲು ಜಾರುತ್ತಿತ್ತು. ಮೇಲಾಗಿ ಕಂಗಾಲಾದ ಮನಸ್ಸು. ಅಂತೂ ಕೈಕಾಲು ನಡುಗುವುದು ನಿಂತ ಮೇಲೆ ಸ್ವಚ್ಛ ಮಾಡಿದೆವು.

ಕಾಲೇಜಿನ ಕೆಲಸ ಮುಗಿಸಿ ಬಂದ ವಿಠ್ಠಲನ ಎದುರು ನಾವೆಲ್ಲ ಇದನ್ನು ವರ್ಣಿಸುತ್ತ ಆ ಮದ್ಯಾಹ್ನದ ಮನೋಸ್ಥಿತಿ ಬಿಚ್ಚಿಟ್ಟೆವು. ಆಗ ಮಾಧವಿ ಮೇಡಂ ಮತ್ತು ನಮಗೆ, ನೆನಪಾದುದು ಭಾರತಿ ಬಿವಿ ಯವರ “ಕಿಚನ್ ಕವಿತೆ”. ತುಸು ಉಮೇದಿಯಲ್ಲಿ ಮಾಧವಿ ಮೇಡಂ, ವಿಠ್ಠಲ ಕವನವಾಚನ ಶುರು ಮಾಡಿದರು. ಅದನ್ನು ಇಲ್ಲಿ ದಾಖಲಿಸುತ್ತಿರುವೆ. ನೀವೆಲ್ಲ ಕೊಂಡು ಓದಿ.

ಬೇಳೆ ಕಾಳುಗಳ ಪರಿಚಯವೇ ಇಲ್ಲದೇ ಕಿಚನ್ ನಲ್ಲಿ ಕೇವಲ ಸಹಾಯಕರಾಗಿದ್ದ ಭಾರತಿ ಬಿವಿ ಯವರು ಕ್ರಮೇಣ ತತ್ಸಮಾನ ಪ್ರಾಯೋಗಿಕ ಪರೀಕ್ಷೆ ಮುಗಿಸಿ ಅಡುಗೆ ಮನೆಯ ಎಲ್ಲ ಹಸಿ ಮತ್ತು ನಿರ್ಜೀವ ವಸ್ತುಗಳಿಗೆಲ್ಲ ಮನುಷ್ಯನಂತೆ ಗುಣಗಳನ್ನು ಆವಾಹಿಸಿದವರು ಮತ್ತು ಅಡುಗೆ ಪ್ರಕ್ರಿಯೆಯನ್ನು ತನ್ನ ಅಚ್ಚು ಮೆಚ್ಚಿನ ಭಾಗವಾಗಿ ಮಾಡಿಕೊಂಡರು. ಅಡುಗೆ ಮನೆ ಬಂದ್ ಮಾಡುವಷ್ಟು ಬೇಜಾರಾದ, ಸಹನೆಯನ್ನೇ ಕಳಕೊಳ್ಳುವ ಹಂತದಲ್ಲಿರುವ ಕವಿ, ಅಡುಗೆ ಮನೆ ಮತ್ತು ಜೀವನಾನುಭವದಲ್ಲಿ ಪಳಗಿದ ಹಿರಿಯಳೊಬ್ಬರಿಗೆ ಕೇಳ್ತಾರೆ, “ಅದು ಹೇಗೆ ಈ ಹದ? ಮನಸ್ಸಿನದು ಮತ್ತು ಅಡುಗೆಯದ್ದು…?” ಎಂದು. ಹಾಗೆ ಇಡೀ ಬದುಕನ್ನು ಅಡುಗೆ ಮನೆಯಲ್ಲೇ ಕಳೆದು, ಜಗುಲಿಗೆ ಬರುವುದೆಂದರೆ ಅದೇನೋ ಬಹುದೊಡ್ಡ ಅವಕಾಶ ಎಂಬಂಥ ದಿನಗಳನ್ನೇ ಬದುಕಿದ ನಮ್ಮೆಲ್ಲರ ಅಜ್ಜಿಯರ ಒಳ ಆವರಣದ ಒಳದನಿಯನ್ನು “ಅಜ್ಜಿ ಎನ್ನುವ ಸಪ್ಪೆ ಕಥೆ..” ಯಲ್ಲಿ ಹೇಳಿದ್ದು ಹೀಗೆ,

“ನಂತರ? ನಂತರವೇನು ಎನ್ನದಿರಿ,
ಇದು ಬದುಕಿನ ಸಮಗ್ರಗಾಥೆ
ಮತ್ತಿಷ್ಟು ಮುಪ್ಪಾದಳು, ಮಾಗಿದಳು
ಸವೆದಳು, ಕೊನೆಗೊಮ್ಮೆ ಇಲ್ಲವಾದಳು,
ಯಾವ ಪುಟ ತಿರುಗಿದರೂ ಇಷ್ಟೇ!
ಏನ ಹೇಳಲು ಹೊರಟಿದ್ದು ನೀನು
ಬರೀ ಏಕತಾನತೆ, ಒಂದಿನಿತೂ ಸ್ವಾರಸ್ಯವಿಲ್ಲ ಎಂದಿರಾ?
ಕಥೆಯಾಗಿಯೇ ನಿಮಗೆ ಹೀಗನಿಸಿದರೆ
ಇನ್ನು ಬದುಕಾಗಿ ಅವಳಿಗೆ ಹೇಗಿತ್ತೋ…” ಎಂದು ನಮಗೆ ಊಹಿಸಲು ಬಿಡುತ್ತಾರೆ.

“ಹೆಂಗಸರು ಯಾರನ್ನೇ ಮರೆತರೂ,
ಬಿಸಿಬಿಸಿ ದೋಸೆ ನೇರ ಕಾವಲಿಯಿಂದೆತ್ತಿ
ಬಡಿಸಿದವರನ್ನು ಮಾತ್ರ ಸ್ಮರಿಸುತ್ತಲೇ ಇರುತ್ತಾರೆ,
ಬದುಕಿನ ಕೊನೆಯವರೆಗೆ!”

ಹೌದು ದಿನವೂ ಬೇಯುವವರು ಜೊತೆಗಾರರನ್ನು ಮರೆಯಲಾರರು ಎಂಬುದಂತೂ ನಿಜವಷ್ಟೇ!
ತನಗೆ ಎಷ್ಟೇ ಅಡುಗೆ ಮಾಡುವುದು ಇಷ್ಟವೆಂದು ಅನೇಕ ಹೆಂಗಸರು ಹೇಳಿದರೂ ಅವರ ಒಳ ಮನಸ್ಸಿನಲ್ಲಿ

“ಶಿಲಾಯುಗದಲ್ಲಿ ಕಲ್ಲು ತಿಕ್ಕಿ ಕಿಡಿ ಹೊತ್ತಿಸಿದ
ಆ ಪಾಪಿಗೆ ನರಕವೇ ಸಿಕ್ಕಿರಲಿ
ಅವ ಅಂದು ತೆಪ್ಪಗಿದ್ದಿದ್ದರೆ
ಇಂದು ಗಡ್ಡೆ ಗೆಣಸು ತಿನ್ನುತ್ತ ಸುಖದಿಂದಿರಬಹುದಿತ್ತು”
ಎಂದೆನಿಸದೇ ಇರದು.

ಹೀಗೆ ತುಸು ಹಾಸ್ಯ, ವ್ಯಂಗ್ಯ, ಗಂಭೀರ ಮತ್ತು ಸಾಮಾನ್ಯ ಮಹಿಳೆಯರ ಹತ್ತಿರದ ಅನುಭವವನ್ನು, ಅಡುಗೆ ಮನೆ ಉಸಾಬರಿಗೆ ಹೋಗದವರಿಗೂ ಹೃದಯಕ್ಕೆ ತಟ್ಟುವ ಎಷ್ಟೊಂದು ಕಿರುಗವನಗಳನ್ನು ನಮ್ಮೆದುರು ಇಡುತ್ತಲೇ ಹೋಗುತ್ತಾರೆ.

ಹದವರಿತ ಬದುಕಿನ ನಡಿಗೆಯನ್ನು ಕಲಿಸಿದ ಅಡುಗೆ ಕುರಿತು

“ಪ್ರೀತಿಯ ಹದ ತಪ್ಪಿದಾಗಲೂ ಹೀಗೆಯೇ,
ಕಣ್ಣು ಕಾಣುವ ಮುನ್ನವೇ
ಎದೆ ಅರಿತು ಬಿಡುತ್ತದೆ” ಎನ್ನುತ್ತಾರೆ.

ಹೆಣ್ಣಿನ ಹೊಂದಾಣಿಕೆ ಗುಣವನ್ನು, ಬೆಂಕಿ ಮುಂದಿನ ಕೆಲಸವನ್ನು, ಸಿಟ್ಟನೆಲ್ಲ ಕೊಚ್ಚಿ ಹಾಕಿ ಬೇಯಿಸುವುದನ್ನು ಹೇಳುತ್ತ, ಗಂಡಸು ಮನೋಭಾವವನ್ನು, ಸಮಾಜದಲ್ಲಿರುವ ಕೊಳೆತು ನಾರುವ ಮನೋಸ್ಥಿತಿಯನ್ನು ಮತ್ತದೇ ಅಡುಗೆ ಮನೆಯಿಂದಲೇ ಎತ್ತಿಕೊಳ್ಳುತ್ತಾರೆ.

“ಉಪ್ಪಿನಕಾಯಿಯೇ ವಾಸಿ
ಕೆಟ್ಟಾಗ ಮೇಲೆ ಬೂಷ್ಟು ಬರುತ್ತದೆ,
ಮನುಷ್ಯರದ್ದೇ ಸಮಸ್ಯೆ
ಒಳಗೆ ಕೊಳೆತರೆ ಹೊರಗೆ ತಿಳಿಯುವುದೇ ಇಲ್ಲ”
ಎಂದು ಉಪ್ಪಿನಕಾಯಿಯ ದೃಷ್ಟಾಂತಗಳನ್ನಿಟ್ಟು ಛೇಡಿಸುತ್ತಾರೆ.

“ಸಿಕ್ಕಷ್ಟು ಬೆಲೆಗೆ ತೂಕಕ್ಕೆ ಹಾಕಿ ಬಿಡಬೇಕು
ಕತ್ತರಿಸುವ, ಜಾಳಾದ ಹಲ ಸಂಬಂಧಗಳನ್ನು”

ಮತ್ತು

“ಕುಕ್ಕರಿಗಾದರೆ ರಬ್ಬರ್ ಬದಲಿಸಬಹುದು
ಹಳತಾದ ಸಂಬಂಧಗಳಿಗೇನು ಮಾಡುವುದು?” ಎಂದು ಅಂಥ ಮನದವರ ಸಂಬಂಧವನ್ನೇ ಕಡಿದುಕೊಳ್ಳಲಿಕ್ಕೂ ಮುಂದಾಗುತ್ತಾರೆ.

ಅಲ್ಲದೇ

“ಸಾರಿಗೆ ಉಪ್ಪು-ಹುಳಿ-ಖಾರ
ಮೊದಲಿಗೆ ಹದವಾಗಿ ಹಾಕಬೇಕು
ನಂತರವೂ ನೀರು ಹಾಕಿ ಸರಿಪಡಿಸಬಹುದು
ಆದರೆ ಸಾರಗುಂದುತ್ತದೆ… ತೇಪೆ ಹಚ್ಚಿದ ಸಂಬಂಧದಂತೆ”

ಹೀಗೆ ಉದ್ದಕ್ಕೂ ಹೋಲಿಕೆ, ಅನುಭವ, ಓದುಗರಿಗೂ ಚೂರು ಉಪದೇಶ ಮತ್ತು “ಇದೇನು ಅಡುಗೆ ಮನೆ ಸಾಹಿತ್ಯ” ಎಂದು ಮೂಗು ಉರಿಯುವವರಿಗೂ ಒಂದು ಒಗ್ಗರಣೆ ಹಾಕಿ, ಅಡುಗೆ ಮನೆಯಲ್ಲೇ ಜೀವನದ ಬಹುಭಾಗ ಕಳೆಯುವವರ ಮತ್ತು ಅಡುಗೆ ಮನೆ ಚಾಕರಿ ಕುರಿತು “ಬೌದ್ಧಿಕ ಗುಲಾಮಗಿರಿ” ಇರುವವರಿಗೆ ವಿಮೋಚನೆಯ ದಾರಿಗಳನ್ನೂ ಈ ಕವಿತೆಯಲ್ಲಿ ಕಾಣಬಹುದು.

ಈ ಎಲ್ಲ ಕವಿತೆಗಳನ್ನು ಓದುತ್ತಿದ್ದಂತೆ ಪ್ರತಿಭಾ ನಂದಕುಮಾರ್ ರವರ ಕವಿತೆಗಳೂ ನೆನಪಿಗೆ ಬಂದವು.

ಚಿಕ್ಕಂದಿನಲ್ಲಿ ಓದುವ ಅಭ್ಯಾಸ ಬೆಳೆಸಿದ ಅಡುಗೆ ಮನೆಯಿಂದ ಜಗುಲಿಗೆ, ಗ್ರಂಥಾಲಯದ ಕಪಾಟಿನಿಂದ ಹೊರಗೆ ಬಸ್ ನಿಲ್ದಾಣದ ತನಕ, ಒಳಾಂಗಣದಿಂದ ಬೀದಿಯ ಗುಂಟ, ಗುಡಿಸಿಲಿನ ಜನರ ಮಧ್ಯೆಯಿಂದ ಘನ ವೇದಿಕೆಗಳಲ್ಲೂ ನಮ್ಮ ಬದುಕಿನ ಕಾವ್ಯ ತಲುಪಿಸಲು ಕೆಲಸ ಮಾಡುತ್ತಿರುವ, ಪುಸ್ತಕ ಹೊತ್ತು ತಲುಪಿಸುವ ಚಿಂತನ ಉಕ, ಸಹಯಾನ ಮತ್ತು ಎಸ್.ಎಫ್.ಐ ಗೆಳೆಯರನ್ನು ನೆನಪಿಸುವೆ.

ಪುಸ್ತಕ ಮುದ್ರಿಸಿದ ಬಹುರೂಪಿ ಪ್ರಕಾಶನ ಮತ್ತು ಜಿ.ಎನ್. ಮೋಹನ್ ರಿಗೆ ವಂದನೆ.

ಈ ಕೃತಿಯನ್ನು ಕೊಳ್ಳಲು-

https://avadhimag.in/?page_id=201769

‍ಲೇಖಕರು avadhi

April 8, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: