'ನೀನ್ಯಾಕೆ ದೇವಸ್ಥಾನಗಳಿಗೆ ಹೋಗುವುದಿಲ್ಲ'

ಎಲ್.ಸಿ.ನಾಗರಾಜ್ 
 
‘ ಇದುವರೆಗೆ ನೋಡ್ತಾ ಇದೀನಿ ನಿನ್ನ , ನೀನ್ಯಾಕೆ ದೇವಸ್ಥಾನಗಳಿಗೆ ಹೋಗುವುದಿಲ್ಲ , ನಿನಗೆ ನಂಬಿಕೆ , ವಿಶ್ವಾಸಗಳೇ ಇಲ್ವಾ , are you an atheist ?’
ಇಲ್ಲ , ನಾನು ನಿರೀಶ್ವರವಾದವನ್ನ ನಂಬಿದವನಲ್ಲ ‘
ಅದೊಂದು ಕುರುಚಲು ಕಾಡಿನಂಥ ಪ್ರದೇಶ , ಅಲ್ಲಿ ಕೆಲವು ಆದಿವಾಸಿ ಪಂಗಡಗಳು ಸಣ್ಣ ಭೂ ಹಿಡುವಳಿಗಳಲ್ಲಿ ಬೇಸಾಯ ಮಾಡುತ್ತಿದ್ದರು . ಹತ್ತಿರದ ಹಳ್ಳಿಯ ಪಂಚಾಯತಿ ಸದಸ್ಯನ ಮನೆಯ ಮುಂದೆ ಮೋಟಾರ್ ಸೈಕಲ್ ನಿಲ್ಲಿಸಿ , ಎರಡು ಗುಡ್ಡಗಳ ನಡುವೆ ಮನುಷ್ಯರು , ದನಕರುಗಳು ನಡೆದು ಮೂಡಿದ ಹಾದಿಯಲ್ಲಿ ನಡೆಯುತ್ತ ಇದ್ವಿ
ಕಾಡು ಮತ್ತು ಮನುಷ್ಯನ ಬೇಸಾಯ ಹಿಡುವಳಿಗಳ ಸಂಗಮ ಪ್ರದೇಶವನ್ನ ಪರಿಸರ ಶಾಸ್ತ್ರಜ್ಞರು ecotones ಅಂತಾ ಕರೆಯುತ್ತಾರೆ. ಅಲ್ಲಿ ಆ ಪ್ರದೇಶದ ಮೂಲನಿವಾಸಿ ಜನ ಕೂಡಿದ್ದರು , ಮುತ್ತುಗದ ಮರ ಹೂಶಲಾಕೆಗಳು ಬೆಂಕಿಯ ಜ್ವಾಲೆಯಂತೆ ನಿಗಿ ನಿಗಿ ಹೊಳೆಯುತ್ತಿದ್ದವು , ಅಲ್ಲಿ ಹೊಂಗೆಯ ಮರದ ಸೊಪ್ಪನ್ನ ಹೊದಿಸಿ ಛಾವಣಿ ನಿರ್ಮಿಸಿದ ಒಂದು ಮೂರಡಿ ಎತ್ತರದ ದೇಗುಲ ಕಂಡಿತು , ಅದರ‌ ಸುತ್ತಲೂ ಜನ , ಮೂರು ಕಲ್ಲುಗಳನ್ನಿಟ್ಟು ಮಾಡಿದ ಒಲೆಯ ಮೇಲೆ ಗಂಡಸರು ಅಡುಗೆ ಮಾಡುತ್ತಿದ್ದಾರೆ .
ಗುಡ್ಡದಲ್ಲಿ ಒಂದು ಬಂಡೆಯ ಸರುವಿನಲ್ಲಿ ಮಹಿಳೆಯರು ಕುಂತಿದ್ದರು , ಬಂಡೆಗಳ ನಡುವೆ ಸಿಗಹಾಕಿದ್ದ ಒಂದು ಬಿದಿರಿನ ಕೊಳವೆಗೆ ಬಾಯಾನಿಸಿ ಹತ್ತಾರು ಬಿಂದಿಗೆಗಳು ,ನೀರಿಗಾಗಿ ಸ್ಪರ್ಧೆಯಿಲ್ಲದ ಸಾವಧಾನ ; ತುಂಬುವುದಕ್ಕಾಗಿ ಕಾಯುತ್ತ ಮಾತನಾಡುತ್ತಿದ್ದರು.
‘ ಈಗ ದೇವಸ್ಥಾನದ ಕಡೆಗೇ ಅಲ್ವಾ ನಾವು ಹೋಗ್ತಿರೋದು, ಅದು ಇದೊಂದೇ ದಿನ ಇರುವ ದೇವಸ್ಥಾನ , ನಾಳೆಯ ವೇಳೆಗೆ ಬಾಡಿ ಉದುರುತ್ತದೆ ; ಬಯಲಲ್ಲಿ ಇಟ್ಟಾಡುತ್ತಿದ್ದ ಕಲ್ಲುಗಳು ಮನುಷ್ಯನ ಕೈಯ ನೀರಿನಿಂದ ಪವಿತ್ರಗೊಂಡು ಇದೊಂದು ದಿನದ ಮಟ್ಟಿಗೆ ದೇವರಾಗಿ , ಮತ್ತೆ ನಾಳೆಯಿಂದ ಬಯಲಾಗಿ , ಬಯಲಲ್ಲಿ ಇಟ್ಟಾಡುತ್ತವೆ
‘ ನೀನ್ಯಾಕೆ ಚರ್ಚಿಗೆ ಹೋಗುವುದಿಲ್ಲ ? ‘

‘ಡಿ.ಹೆಚ್ . ಲಾರೆನ್ಸನ ‘ Apocalypse ಓದಿದ್ದರೆ , ನಾನ್ಯಾಕೆ ಚರ್ಚಿಗೆ ಹೋಗುವುದಿಲ್ಲ ಎಂಬ ನಿನ್ನ ಪ್ರಶ್ನೆಗೆ ಉತ್ತರ ಸಿಗುತ್ತದೆ , ಬೈಬಲ್ಲಿನಲ್ಲಿ ಈಗಾಗಲೇ ಇರುವ ಕಾವ್ಯಮಯ ಸ್ತೋತ್ರಗಳು ನನ್ನ ಭಾಷೆಯ ಲಯಗಳ ತುಳಿಯುವುದನ್ನ ನಾನೊಲ್ಲೆ
ನನ್ನದೂ ಅದೇ ಕತೆ , ಒಂದು ಸಲ ನಿರೀಶ್ವರವಾದವನ್ನ ಸ್ವೀಕರಿಸಿಬಿಟ್ಟರೆ ಒಂದು ಪಕ್ಷಿಯ ಕೂಗಿನಲ್ಲಿರುವ ಕಾಳಿನ ಹಂಬಲ ಕೇಳದಂತಾಗಿಬಿಡುತ್ತದೆ ; ಸಣ್ಣ ಬೀಜದೊಳಗೆ ವಟವೃಕ್ಷದಂತೆ ಅಡಗಿರುವ ಮರವೊಂದರ ಕನಸು ಕಾಣೆಯಾಗಿಬಿಡುತ್ತದೆ
‘ ಈ ದೇವತೆಯ ಹೆಸರೇನು ? ‘
‘ ಮನುಷ್ಯರು ಒಂದು ಎಂಥದೋ ಹೆಸರನ್ನ ಇಟ್ಟಿರುತ್ತಾರೆ , ಅದು ಮುಖ್ಯವೋ ಅಮುಖ್ಯವೋ ನಾನು ಕಾಣೆ
‘ ಯಾವುದು ಮುಖ್ಯ ‘
‘ ಹತ್ತಾರು ಕುಟುಂಬಗಳು ಒಂದು ಕಡೆ ಬೆಟ್ಟದಿಂದ ನೀರು ಒಸರುವ ಕಡೆ ಒಲೆಯಿಟ್ಟು ಅಡುಗೆ ಮಾಡುವುದು , ಜೊತೆಯಾಗಿ ಊಟ ಮಾಡುವುದು ತಮ್ಮ ಸಮುದಾಯಕ್ಕೆ ಒಂದು ಭಾವನಾತ್ಮಕ ರಕ್ಷಣೆಯನ್ನ ಸೃಷ್ಟಿ ಮಾಡಿಕೊಳ್ಳುವುದು ‘
‘ಭಾವನಾತ್ಮಕ ರಕ್ಷಣೆ ದೇವರಿಗೆ ಸರಿ ಸಮಾನವಾದುದ , ಅದು ಅಮಲಿನ ಪದಾರ್ಥ ಅಲ್ವಾ ಹಾಗಾದರೆ ? ‘
‘ ಅಮಲು ತರುವ , ಅಮಲು ತರಿಸಿ ತಮ್ಮ ಬೇಳೆಕಾಳು ಬೇಯಿಸಿಕೊಳ್ಳುವ ದೇವರುಗಳು ನನಗೆ ಅನ್ಯದೇವರುಗಳು ‘
ಹಾಗಾದರೆ ” ದೇವರು , ಧರ್ಮಗಳು ಅಮಲು ಪದಾರ್ಥ” ಅಂತಾ ಕಾರ್ಲ್ ಮಾರ್ಕ್ಸ್ ಹೇಳಿರುವುದು ?’
‘ ಕಾರ್ಲ್ ಮಾರ್ಕ್ಸ್ ಹಾಗೆ ಹೇಳಿಲ್ಲ !’
‘ what , ಏನಂದೆ ನೀನು ? ‘
‘ ಒಬ್ಬ ತತ್ವಜ್ಞಾನಿ ಹಾಗೆ ಹೇಳಿರಲಿಕ್ಕೆ ಸಾಧ್ಯವಿಲ್ಲ ಎಂದೆ ‘
“ಧರ್ಮ ಅಫೀಮು ” . ಅಂತಾ ಮಾರ್ಕ್ಸ್ ಹೇಳಿದಾನೆ , ಹೇಳಿದಾನೆ , ಹೇಳಿದ್ದಾನೆ !’
‘ ಧರ್ಮ ಅಫೀಮು …. ಅಂತಾ ಹೇಳಿದಾನೆ ಹೌದು , ಆದರೆ … ‘

‘ ಆದರೆ ?’
‘ ಆದರೆ , ಧರ್ಮ ಅಫೀಮು ಆದ ನಂತರ ಅಲ್ಲಿ ಪೂರ್ಣ ವಿರಾಮವಿಲ್ಲ , ಅಲ್ಪ ವಿರಾಮ ಇದೆ
‘ ಅಲ್ಪ ವಿರಮಿಸಿಕೊಂಡ ನಂತರ ? ‘
‘ ಅಲ್ಪವಿರಾಮದ ನಂತರ ವಾಕ್ಯ ಮುಂದುವರೆಯುತ್ತದೆ ‘
‘ ಧರ್ಮ ಅಫೀಮು , ಅದು ಭರವಸೆಯಿಲ್ಲದವನ ಕಟ್ಟಕಡೆಯ ಭರವಸೆ, ಹತಾಷನಾದವನು ಬಯಸುವ ಆಸರೆ , ಅದನ್ನ ಕಿತ್ತು ನೀನು ಗಾಯಗೊಳಿಸುವುದಾದರೆ , ಆ ಮಣ್ಣಿಗೆ ಆದ ಗಾಯದಲ್ಲಿ ನೀನು ಧರ್ಮವು ಕೊಟ್ಟಷ್ಟೇ ಭರವಸೆಯನ್ನ ಕಟ್ಟಿಕೊಡುವ ಜೀವವೃಕ್ಷದ ಕನಸನ್ನ ಕಟ್ಟಿಕೊಡಬೇಕು ‘
‘ ಹೇಯ್ , ಅದು ಇಂಗ್ಲೀಷಿನಲ್ಲಿ ಇನ್ನೂ ಚನ್ನಾಗಿದೆ ‘
‘ Religion is the opium of the masses , its the hope of the hopeless world , its the distress of the distressed ; if you want to replace its like making wounds , if you want to replace it, you need to replace it with same hope that religion has given him ‘
‘ ಯಾವುದೋ ಅದು , ಅಷ್ಟೇ ಭರವಸೆಯನ್ನ ಕಟ್ಟಿಕೊಡುವದು ? !’
‘ ಈ ಬೆಟ್ಟ , ಬೆಟ್ಟದಿಂದ ಜಿನುಗುವ ನೀರು , ಬಿದಿರು ಕೊಳವೆಗೆ ಬಾಯಾನಿಸಿ ಕುಂತಿರುವ ಬಿಂದಿಗೆಗಳು ‘
[ ಮಾತೃದೇವತೆಗಳ ಬಗ್ಗೆ ಅಧ್ಯಯನ ಮಾಡಿರುವ ಪಶ್ಚಿಮದ ಲೇಖಕಿಯೊಬ್ಬಳ Original Goddesses ಓದಿದ ನಂತರ ಮಾಡಿಕೊಂಡಿದ್ದ ಟಿಪ್ಪಣಿ ]

‍ಲೇಖಕರು Avadhi

January 5, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Srikanth

    ದೇವಸ್ಥಾನಗಳು ಅಸಮಾನತೆಯ ಕೇಂದ್ರಗಳು, ದೇವಸ್ಥಾನಗಳು ದ್ವೇಷಸಾಧನೆಗಾಗಿ ವಿಷವುಣಿಸಿ ಕೊಲ್ಲುವ ವಧಾಸ್ಥಾನಗಳು, ದೇವಸ್ಥಾನಗಳು ಕೋಮುವಾದಿಗಳ ರಾಜಕೀಯ ಕೇಂದ್ರಗಳು, ದೇವಸ್ಥಾನಗಳು ಹುಸಿಜಾತ್ಯಾತೀತರು ಬೆಳೆಸುವ ಮೌಢ್ಯಕೇಂದ್ರಗಳು, ದೇವಸ್ಥಾನಗಳು ತಮ್ಮನ್ನು ಒಂದು ಧರ್ಮಕ್ಕೆ, ಜಾತಿಗೆ ಸೇರಿದವರೆಂದು ಬಿಂಬಿಸಿಕೊಳ್ಳಲು ಇರುವ ನಾಟಕ ಗೃಹಗಳು..
    ಅದಕ್ಕೆ ನಾನು ದೇವಸ್ಥಾನಕ್ಕೆ ಹೋಗುವುದಿಲ್ಲ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: