ನೀನೇ… ನನ್ನವನೇ!

ಸೌಮ್ಯಾ ಕೆ ಆರ್

ಕೈಯಲ್ಲಿ ಮೊಬೈಲ್ ಎತ್ತಿಕೊಂಡರೆ ನನಗೆ ಅವನ ನೆನಪಾಗುತ್ತೆ. ಸಮಯ ಸಿಕ್ಕಾಗೆಲ್ಲ ಅವನೊಂದಿಗೆ ಹರಟುವ ಆತುರ, ಪ್ರತಿ ಕ್ಷಣ ಅವನು ಏನು ಮಾಡುತ್ತಿದ್ದಾನೋ? ಈಗ ಫೋನ್ ಮಾಡಿದರೆ ಮಾತಾಡುತ್ತಾನೋ ಅಥವಾ ಬ್ಯುಸಿಯಾಗಿದ್ದೇನೆ ಎಂದು ಹೇಳುತ್ತಾನೋ ಎಂಬ ನಿರೀಕ್ಷೆ…

ನಾನು ಏಕಾಂಗಿಯಾಗಿದ್ದಾಗ ಅವನು ನನ್ನ ಜೊತೆಗೆ ಈಗ ಇಲ್ಲ ಎಂದು ಬೇಸರವಾಗುತ್ತ ಏಕಾಂತದಲ್ಲಿ ತಲ್ಲಣಗೊಂಡು ಒಬ್ಬಳೇ ನನ್ನ ಜೊತೆಗೆ ನಾನೇ ಮಾತಾಡಿಕೊಳ್ಳುತ್ತೇನೆ. ನನ್ನದೇ ಪ್ರಶ್ನೆ, ನನ್ನದೇ ಉತ್ತರ. ಸಂಜೆ ಸಮೀಪಿಸುತ್ತಿದ್ದಂತೆ ಅವನು ಬರುವನೋ? ಈಗಾಗಲೇ ನನಗಾಗಿ ಓಡೋಡಿ ಬಂದು ಬಸ್ ನಿಲ್ದಾಣದಲ್ಲಿ ಪರಿತಪಿಸುತ್ತಿದ್ದಾನೇನೋ ಎಂದು ನನ್ನ ಮನಸ್ಸು ಹೊಯ್ದಾಡುತ್ತದೆ. ಏಕೆಂದರೆ ನನ್ನಲ್ಲಿ ಅಡಗಿ ಕುಳಿತ ಹೆಣ್ತನವನ್ನು, ಮನದೊಳಗಿನ ಪಿಸುಮಾತುಗಳನ್ನು, ಪ್ರಶ್ನೆಗಳನ್ನು, ಭುಗಿಲೆದ್ದ ಭಯದ ನಡುವಿನ ಕೋಲಾಹಲವನ್ನು, ಕಣ್ಣಿನ ಭಾವನೆಯನ್ನ ಅರ್ಥಮಾಡಿಕೊಳ್ಳುವುದು ಅವನಿಗೆ ಮಾತ್ರ ಸಾಧ್ಯ. ಏಕೆಂದರೆ ಅವನು ನನ್ನವನು!

ಎಷ್ಟೋ ಸಲ ಮನಸ್ಸು ಹರಿಯುವ ನೀರಿನ ಹಾಗೆ! ಅದೊಂದು ವಿಚಿತ್ರ ಎಂಥಲೂ ಸಹ ಅನ್ನಿಸಿದ್ದು ನಿಜ. ಅವನು ನನ್ನ ಬಳಿ ಇಲ್ಲದೆ ಹೋದಾಗ ಮನಸ್ಸಿನ ತೊಳಲಾಟ ಅಷ್ಟಿಷ್ಟಲ್ಲ. ಈ ಹಾಳು ಮನಸ್ಸು ನನಗೇ ಅರಿವಿಲ್ಲದೆ ಎಲ್ಲೆಲ್ಲೊ ತೇಲಾಡುತ್ತಿರುತ್ತದೆ. ಕುಡಿದು ಟೈಟಾದಾಗ ಕೆಲ ಪುರುಷರು ಆಡ್ತಾರಲ್ವಾ ಹಾಗೆ. ಈಗ ಅವನು ನನ್ನ ಬಳಿ ಇರಬೇಕಾಗಿತ್ತು, ಆದರೆ ಅವನು ಜೊತೆಗಿಲ್ಲ ಎಂದುಕೊಂಡರೆ, ಮನಸು ಮತ್ತೂ ಪ್ರಶ್ನೆ ಕೇಳುತ್ತದೆ. ಜೊತೆಗಿದ್ದರೆ ಕೆಲಸಗಳ ಜವಾಬ್ದಾರಿಯನ್ನ ಮರೆಯಬೇಕು. ಆ ಕಾರಣಕ್ಕಾಗಿ ಈ ಮನಸ್ಸಿನ ಚಂಚಲತೆಯಿಂದ ನಾನು ಕೆಲವೊಮ್ಮೆ ನನ್ನ ಜೊತೆ ನಾನೇ ಚಿಕ್ಕ ಮಕ್ಕಳಂತೆ ಹಠ ಮಾಡುತ್ತಿರುತ್ತೇನೆ. ಆದರೆ ನೋಡುವುದಕ್ಕೆ ಬೇರೆಯವರಿಗೆ ಕಾಣುವುದಿಲ್ಲ. ಹೀಗಾಗಿ ಸ್ವಲ್ಪ ಬಚಾವ್…

ಅದೆಷ್ಟೋ ಗೆಳತಿಯರು ಹಲವು ಬಾರಿ ಹೇಳಿದ್ದುಂಟು. “ಮದುವೆಯಾದ ಮೇಲೆ ಹೊಸದರಲ್ಲಿ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಆದರೆ ನಂತರ ಗೊತ್ತಾಗುತ್ತೆ, ಅದರ ಅಸಲಿಯತ್ತು” ಎಂದು. ಆದರೆ ಇವತ್ತಿಗೂ ನನ್ನ ಜೀವನದಲ್ಲಿ ಏನಾದರೂ ಆದರೆ ಅದೆಲ್ಲದೂ ಒಳ್ಳೆಯದೆ ಎಂದು ಭಾವಿಸಿದವಳು. ಪ್ರೀತಿ ವಿಚಾರದಲ್ಲೂ ಹಾಗೆಯೇ.

ಪ್ರೀತಿ ಯಾವಾಗಲೂ ಪಡೆದುಕೊಳ್ಳುವುದು ಎಂದು ನಾನು ಎಣಿಸಿದವಳಲ್ಲ. ಅದು ಕೊಡುವುದು. ಮುಕ್ತ ಮನಸ್ಸಿನಿಂದ ನಾವು ಇಷ್ಟಪಡುವ ಹೃದಯಕ್ಕೆ ಅದನ್ನು ಕೊಟ್ಟಾಗ ತನ್ನಂತಾನೇ ಅದು ವಾಪಸ್ ಬರುತ್ತದೆ. ಅದೊಂದು ರೀತಿ ನೆಲಕ್ಕೆ ಬಿದ್ದ ಚೆಂಡಿನ ರೀತಿ. ಮೇಲಿಂದ ಕೆಳಕ್ಕೆ ಎಸೆದರೆ ಮೇಲೆ ಪುಟಿದು ಕೈಗೆ ಸಿಗಲೇಬೇಕು. ಅದನ್ನು ನಿಭಾಯಿಸುವ ಚಾಕಚಕ್ಯತೆ ಗೊತ್ತಿರಬೇಕು ಅಷ್ಟೇ. ನನ್ನವನು ಕೂಡ ನನ್ನಂತೆಯೇ ಪ್ರೀತಿಯನ್ನು ಉಳಿಸಿಕೊಳ್ಳುವುದರಲ್ಲಿ ನಿಸ್ಸೀಮ.

ಪ್ರೀತಿ ಪರಿಶುದ್ಧವಾದದ್ದು. ಅದಕ್ಕೆ ಸಾವಿಲ್ಲ. ಪ್ರೇಮಿ ಸತ್ತರೂ ಪ್ರೀತಿ ಸಾಯದು ಎನ್ನುವ ಅವನ ಮಾತು ನಿಜ. ಮೊದ ಮೊದಲು ನಾನೂ ಕೂಡ ಪರಿಶುದ್ಧವಾಗಿ ನಾನೇನೋ ಪ್ರೀತಿ ನೀಡುತ್ತೇನೆ. ಅವನು ಕೊಡುತ್ತಾನಾ ಎನ್ನುವ ಪ್ರಶ್ನೆ ಸಹಜವಾಗಿಯೇ ಇತ್ತು. ಆದರೆ ಅದನ್ನು ಹೇಳಿಕೊಟ್ಟವನೇ ಅವನು. ಅವನು ನಿಜಕ್ಕೂ ನನ್ನ ಪ್ರೀತಿಗೆ ತಾಯಿ. ಅವನ ನಿರ್ಮಲವಾದ ಪ್ರೇಮ ಆಗಾಗ ನನ್ನನ್ನು ಕೆಣಕುತ್ತಲೇ ಇತ್ತು. ಸಾಂಬಾರಿಗೆ ಉಪ್ಪು, ಹುಳಿ, ಖಾರ ಎಲ್ಲವೂ ಇದ್ದರೇನೆ ಅದು ಹದವಾದ ಸಾಂಬಾರು ಆಗಲು ಸಾಧ್ಯ. ಈ ಬದುಕು ಕೂಡ ಹಾಗೆಯೇ. ಮೊದ ಮೊದಲು ನನಗೂ ಈ ವಿಚಾರದಲ್ಲಿ ಬಹಳಷ್ಟು ಆತಂಕ ಇತ್ತು. ಅದು ನನ್ನೆದೆಯಾಳದಲ್ಲಿ ಆಗಾಗ ಕಾಡುತ್ತಿತ್ತು.

ಮದುವೆಯಾದ ಮೇಲೆ ಹೆಣ್ಣಿಗೆ ಮನೆ, ಗಂಡ, ಮಕ್ಕಳೇ ಸರ್ವಸ್ವ. ಆದು ಆಗಬೇಕಾದದ್ದೆ. ಪ್ರತಿ ಹೆಣ್ಣಿಗೂ ಆಗ ಅವಳದೇ ಆದ ಪುಟ್ಟ ಕನಸೊಂದು ಗರಿಗೆದರುತ್ತದೆ. ಆ ಕನಸು ಮೂಡದೆ ಹೋದರೆ ಆ ಹೆಣ್ಣು ಇನ್ನೂ ಪರಿಪಕ್ವವಾಗಿಲ್ಲ ಎಂಥಲೇ ಅರ್ಥ. ಆದ್ದರಿಂದ ಬಹುತೇಕ ಗಂಡಸರು ತನ್ನವಳು ಬೇರೆ ಸೆಳೆತಕ್ಕೆ ಒಳಗಾಗದಂತೆ ನೋಡಿಕೊಳ್ಳುತ್ತಾರೆ. ಅಂಥ ಸಂದರ್ಭದಲ್ಲಿ ಆತನದೇ ಆಯ್ಕೆ, ಅಗತ್ಯಗಳು ಪ್ರಮುಖವಾಗುತ್ತವೆ. ಅವೆಲ್ಲವನ್ನೂ ಆತ ಆದ್ಯತೆ ಮೇರೆಗೆ ಪ್ರತಿಪಾದಿಸುತ್ತಾನೆ. ಹಾಗಂಥ ನನ್ನವನು ಎಲ್ಲರಂತವನಲ್ಲ.

ನಾನು ತುಂಬಾ ಭಾವುಕಳು. ಆಗಾಗ ನನ್ನ ಹುಚ್ಚು ಮನಸ್ಸಿನ ಸೂಕ್ಶ್ಮಾತಿ ಸೂಕ್ಷ್ಮ ಭಾವ ತರಂಗಗಳನ್ನು ಅರ್ಥಮಾಡಿಕೊಳ್ಳುವ ಶಕ್ತಿ ನನ್ನವನಿಗಿದೆ. ಎಷ್ಟೋ ಗಂಡಸರು ಬೇರೆ ಹೆಣ್ಣುಮಕ್ಕಳ, ಅಕ್ಕ ಪಕ್ಕದ ಮನೆಯವರ, ಎದುರು ಮನೆಯವರ ಮಹಿಳೆಯರ ಪರವಾಗಿ ಅಥವಾ ಪರೋಕ್ಷವಾಗಿ ನಡೆದುಕೊಳ್ಳುತಾರೆ. ಆದರೆ ತನ್ನ ಮನೆಯಲ್ಲಿರುವ ಹೆಂಡತಿಯ ಭಾವನೆಗಳಗಳನ್ನ ತಿಳಿದುಕೊಳ್ಳದೆ ನನಗೂ ಅವಳ ಆಸೆಗೂ ಯಾವುದೇ ಸಂಬAಧವೇ ಇಲ್ಲ ಎನ್ನುವಂತೆ ವರ್ತಿಸುತ್ತಾರೆ.

ಒಂಟಿತನದಿಂದಾಗ ನಾನು, ನನ್ನಲ್ಲಿರುವ ದುಗುಡ, ದುಮ್ಮಾನವನ್ನೆಲ್ಲ ದೂರ ಸರಿಸಿ ಅವನ ಮುಖ ನೋಡಿದರೆ ಅವನು ನನ್ನ ಮುಖದಲ್ಲಿ ಸ್ವಚ್ಚಂದ ನಗುವಿಗೆ ನಾಂದಿಯಾಗುತ್ತಾನೆ. ನನ್ನಲ್ಲಿರುವ ಹುಡುಕಾಟ ನೆಲೆಗಳಲ್ಲಿರುವ ಕನಸುಗಳು, ಯೋಚನೆ, ಪ್ರಶ್ನೆ, ನಾನು ಗೆದ್ದಿದ್ದು, ಸೋತಿದ್ದು ಕಳೆದುಕೊಂಡಿರುವುದರ ಬಗ್ಗೆ ಮಾತಾಡುತ್ತಾನೆ. ಅಸಹಾಯಕತೆ, ಅಸಮಾಧಾನ, ಹತಾಶೆ, ದ್ವಂದ್ವ ಎಲ್ಲವನ್ನು ಬಗೆಹರಿಸುತ್ತಾನೆ. ಅದಕ್ಕೆ ನನಗೆ ಪ್ರೀತಿಯ ಬದುಕಿನಲ್ಲಿ ಹೆಗಲಿಗೆ ಹೆಗಲಕೊಟ್ಟು ಜೀವನ ಮಾಡುವಂತ ಗೆಳೆಯ ಸಿಕ್ಕಿದ್ದಾನೆ. ಅವನೇ ನನ್ನವನು. ನಾನು ಸೋತು ಸುಸ್ತಾದಾಗ ನನಗೆ ಪ್ರೀತಿಯ ಬದುಕಿನಲ್ಲಿ ಆಶಾಕಿರಣವಾಗಿ ಮೂಡಿದ್ದ ಅವನು ನಿಜಕ್ಕೂ ನನ್ನವನು.

ನಾನು ಅಡುಗೆ ಮನೆಯಲ್ಲಿದ್ದರೆ ಬಂದು ಸಹಾಯಮಾಡುವುದು, ನನಗೆ ಶೆಕೆಯಾದರೆ, ನಿನಗೆ ಗಾಳಿಯ ಅಗತ್ಯವಿದೆಯಾ ಎಂದು ಹೇಳಿ ಅವನೇ ಫ್ಯಾನ್ ಸ್ವಿಚ್ ಹಾಕುವುದು, ಪಾರ್ಕ್ಗೆ ಹೋದರೆ ಕೈ ಒಳಗೆ ಕೈ ಬೆಸೆದು ತಿರುಗ್ತಾ ಸಂಭ್ರಮಿಸುವುದು. ಸಮಯ ಸಿಕ್ಕಾಗೆಲ್ಲ ಫೋನ್ ಮಾಡಿ ನಾನು ನಿನ್ನನ್ನ ಪ್ರೀತಿಸುತ್ತೇನೆ, ಐ ಲವ್ಯೂ ಅಂತ ನೂರಾರು ಸಲ ಹೇಳಿದವನು. ನನಗೆ ಅವನು ಪ್ರಾಣ. ಅವನ ಜೊತೆಗಿನ ಸಮಯದಲ್ಲಿ ಪ್ರತಿ ಕ್ಷಣ ಕ್ಷಣವೂ ಪ್ರೀತಿ ಪಡೆಯುತ್ತಾನೆ. ಅವನು ಬಳಿ ಇದ್ದರೆ ನನಗೇ ಅರಿವಿಲ್ಲದೆ ನಾ ಅವನ ವಶವಾಗುತ್ತೇನೆ.

ಕಾಲ ಕಳೆದಂತೆ ಪ್ರೀತಿಯ ಗಾಢ ಜಾಸ್ತಿಯಾಗಲೇಬೇಕಿದ್ದ ಸಮಯದಲ್ಲಿ ಪ್ರೀತಿ ಅನ್ನೊದೋ ನಿರಂತರ ಅದು ನಿಂತ ನೀರಲ್ಲ ಎಂದು ನೈಸರ್ಗಿಕವಾಗಿ ಸಾಬೀತು ಪಡಿಸುತ್ತಲೇ ಬಂದಿದೆ. ನಾವು ಮಾತ್ರ ಇವಳು ನನ್ನವಳು, ಇವನು ನನ್ನವನು ಎಂದು ಗೆರೆಗಳನ್ನು ಹಾಕಿ ಪ್ರೀತಿ ಮಾಡುತ್ತಲೇ ಗೋಡೆಗಳನ್ನು ನಿರ್ಮಿಸಿಕೊಂಡು ಜೀವಿಸುತ್ತಿದ್ದೀವಿ. ಪ್ರೀತಿ ಅನ್ನೋದೋ ಯಾವ ಯಾವ ರೂಪಗಳಲ್ಲಿ, ಆಯಾಮಗಳಲ್ಲಿ ಅನುಭವಿಸುತ್ತಿವೋ ಹೇಗೋ ಗೊತ್ತಿಲ್ಲ ಆದರೆ ಪ್ರೀತಿ ಎಷ್ಟು ಕೊಟ್ಟಿದ್ದೀನಿ ಅನ್ನುವ ಮುಖ್ಯಗಿಂತ ನಾನು ನನ್ನನ್ನು ಎಷ್ಟು ಪ್ರೀತಿಸಿಕೊಳ್ತೀನಿ ಅನ್ನುವುದು ಬಹಳ ಮುಖ್ಯ… ನಾ ನನ್ನನ್ನು ಎಷ್ಟು ಪ್ರೀತಿಸುತ್ತೇನೋ ಅಷ್ಟು ಅವನಿಗೆ ಪ್ರೀತಿ ಕೊಡುವುದಕ್ಕೆ ಸಾಧ್ಯ. ನಾನೇ ನನ್ನನ್ನು ಪ್ರೀತಿಸಿಲ್ಲ ಅಂದರೆ ನಾ ಹೇಗೆ ಅವರನ್ನು ಪ್ರೀತಿಸಲಿ.

ಪ್ರೀತಿಯು ಗೆರೆಗಳನ್ನು ದಾಟಿ, ಬಯಲಿನಾಚೆಗೂ ಪ್ರೀತಿಸುವುದು ಮುಖ್ಯ. ಪ್ರೀತಿಗೆ ಗೋಡೆಗಳಿಲ್ಲ,,, ಪ್ರೀತಿಸು ಅಂದರೆ ಪ್ರೀತಿಸುವುದಷ್ಟೇ ಅಲ್ಲಿ.. ಯಾವ ನಿರೀಕ್ಷೆಗಳಿಲ್ಲದೇ ಪ್ರೀತಿಯನ್ನು ದಕ್ಕಿಸುಕೊಳ್ಳುವುದು ಅಷ್ಟೊಂದು ಸುಲಭ ಅಲ್ಲ ವಾಸ್ತವದಲ್ಲಿ ಪ್ರೀತಿ ಅನ್ನುವ ಪದಗಳನ್ನೇ ಹೊಲಸು ಮಾಡಿದ್ದಾರೆ. ಪ್ರೀತಿ ಅನ್ನೊದೋ ಒಂದು ಹಿಂಸಾತ್ಮಕ ಪ್ರವೃತ್ತಿ, ಒತ್ತಾಯದ ಮಾಪನವಾಗಿದೆ ವಿನಹ ಪ್ರಜ್ಙೆಗೆ ಅರಿವಿಗೆ ಸಿಲುಕಲೇ ಇಲ್ಲ…

ಹೀಗೆ ಪ್ರೀತಿಯ ಅಸಲೀ ಮುಖಗಳನ್ನು, ಚಹರೆಗಳನ್ನು ನನಗೆ ಕಾಣಿಸಿದ್ದು, ನನ್ನೆದೆಗೆ ತಲುಪಿಸಿದ್ದು ಕೂಡ ನೀನೇ… ನನ್ನವನೇ!

‍ಲೇಖಕರು avadhi

February 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: