ಉಲ್ಲಾಸ ತುಂಬಿದ ಪಯಣ… ಮಾಲ್ಡಿವ್ಸ್

ಜಿ ಎನ್ ನಳಿನ

ಕರೋನಾ ನಾನಾ ಜನರಿಗೆ ನಾನಾ ಅನುಭವಗಳನ್ನು ಕೊಟ್ಟಿದೆ ಕೆಲವರಿಗೆ ಅದರಿಂದ ಉಪಯೋಗವಾಗಿ ಖುಷಿಯಾಗಿದ್ದ ಜೀವನ ಚಿಕ್ಕದಾಗುತ್ತಾ, ಮುದುಡುವ ಸ್ಥಿತಿಗೆ ಬರುತ್ತಿದ್ದ ಮನಸ್ಥಿತಿಯನ್ನು ಒಂದು ಪ್ರವಾಸ ಉಲ್ಲಾಸದಾಯಕವಾಗಿಸಿತೆಂದರೆ ನಾನೇ ಆಶ್ಚರ್ಯಪಡುವಂತಾಗಿದೆ. ಹಾರಲಿಕ್ಕಾಗದಷ್ಟು ನನ್ನ ದೇಹ ಹಗುರವಾಗಿಲ್ಲದಿದ್ದರೂ ಮನಸ್ಸಿಗೆ ರೆಕ್ಕೆ ಕಟ್ಟಿ ಹಾರಬಹುದಲ್ಲಾ. ಮನಸ್ಸು ಅರಳುವ ಹಾಗೇ ಮಾಡಬಹುದಲ್ಲಾ, ಇದೆಲ್ಲಾ ಸಾಧ್ಯವಾದದ್ದು ಒಂದು ಪ್ರವಾಸದಿಂದ, ನನ್ನ ಮೊದಲ ವಿಮಾನಯಾನದಿಂದ ವಿಮಾನಗಳು ಆಕಾಶದಲ್ಲಿ ಸದ್ದು ಮಾಡುತ್ತಾ ಹೋಗುತ್ತಿದ್ದರೆ ನೋಡಲಿಕ್ಕೆ ಖುಷಿ, ಚಂದ ಕಾಣಿಸುತ್ತೆ, ಅದನ್ನಷ್ಟೇ ನೋಡಿ ಖುಷಿಪಡುತ್ತಿದ್ದ ನನಗೆ ಆ ಅನುಭವವೂ 60ರ ನಂತರ ಬಂದರೆ ಹೇಗಿರುತ್ತೆ?

ನನಗೆ ಚಿಕ್ಕ ಮಕ್ಕಳ ಹಾಗೆ ಖುಷಿಯಿಂದ ಕುಣಿದಾಡಬೇಕೆಂದು, ಪ್ರಯಾಣ ನೆನೆಸಿಕೊಂಡೇ ಖುಷಿ ಪಡಬೇಕೆಂದು ಅನಿಸಲಿಲ್ಲ. ಮನಸ್ಸಿಗೆ ಪ್ರಯಾಣ ಹೇಗಿರತ್ತೆ? ನನಗೆ ಹೇಗನಿಸುತ್ತೆ? ಎಂಬ ಪ್ರಶ್ನೇ ಮೂಡುತ್ತಿತ್ತು. ಸ್ವಲ್ಪ ಮಟ್ಟಿಗೆ ಆತಂಕ ಮೂಡಿಸುತ್ತಿತ್ತು ಅಷ್ಟು ಎತ್ತರಕ್ಕೆ ಹಾರುವ ಅನುಭವ ಒಂದಾದರೆ, ದಿನಪತ್ರಿಕೆ, ದೂರದರ್ಶನದಲ್ಲಿ ತೋರುತ್ತಿದ್ದ ಅವಘಡಗಳು, ಸುದ್ದಿಗಳು ಇದರ ಜೊತೆಗೆ ಇನ್ನೂ ಒಂದು ಆತಂಕ ನನಗೆ ನೀರೆಂದರೆ ಮೊದಲಿನಿಂದಲೂ ಸ್ವಲ್ಪ ಭಯ, ಹೆಚ್ಚು ಕಟ್ಟಡಗಳೇ ತುಂಬಿರುವ ಪ್ರದೇಶದಲ್ಲಿರುವುದರಿಂದಲೋ ನೀರಿನಿಂದಾಗುವ ಆಕಸ್ಮಿಕಗಳಿಂದಲೋ, ನನಗೆ ಈಜು ಬರುವುದಿಲ್ಲ ಎಂದೋ ಗೊತ್ತಿಲ್ಲ? ನಾವು ಹೋಗುತ್ತಿದ್ದ ಪ್ರದೇಶ ‘ಮಾಲ್ಡಿವ್ಸ್‌’ನ ಒಂದು ಚಿಕ್ಕ ದ್ವೀಪ ನೀರ ಮೇಲಿನ ಪ್ರಯಾಣ, ಸುತ್ತಲೂ ನೀರಿನಿಂದಾವರಿಸಿಕೊಂಡಿರುವ ಜಾಗ, ಮೊದಲ ವಿಮಾನ ಯಾನ….

ಮನಸ್ಸಿನಲ್ಲಿ ಮಿಶ್ರ ಭಾವ ತುಂಬಿಕೊಂಡು ಸ್ವಲ್ಪ ಮಟ್ಟಿಗೆ ಆತಂಕ ತುಂಬಿರುವ ಮನಸ್ಸಿನಿಂದ ಪ್ರಯಾಣಕ್ಕೆ ಸಿದ್ದಳಾಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದೆವು, ಅಲ್ಲಿ ಕರೋನಾದಿಂದಾಗಿ ಜನವೇ ಇಲ್ಲದ ಸ್ಥಿತಿ ಎಂದೂ ಹೇಳಬಹುದು. ನಿಲ್ದಾಣದ ಕಟ್ಟು-ಕಟ್ಟಳೆಗಳನ್ನು ನಿಭಾಯಿಸಿಕೊಂಡು ವಿಮಾನದಲ್ಲಿ ಕುಳಿತೆವು. ನಿಲ್ದಾಣದ ಒಳಗೆ ಹೊರಗೆ ವಿಶಾಲವಾಗಿ, ಅಂದವಾಗಿದ್ದರೂ ಒಳಗೆ ಕುಳಿತ ಮೇಲೆ ಸಖಿಯರಿಲ್ಲದ ದೊಡ್ಡ ಲಕ್ಷುರಿ ಬಸ್ಸಿನಲ್ಲಿ ಆರಾಮವಾಗಿ ಮೈ ಚಾಚಿ ಕುಳಿತ ಅನುಭವ, ಅದನ್ನು ಪೂರ್ತಿಯಾಗಿ ಅನುಭವಿಸಲು ಕರೋನಾ ಮಾರಿ ಬಿಡ ಬೇಕಲ್ಲ, ವಯಸ್ಸಿನ ಹೆಚ್ಚಳದಿಂದ ಅತಿ ಮುತುವರ್ಜಿ ವಹಿಸಲೇ ಬೇಕಲ್ಲ? ಆ ಮಾರಿ ನಮ್ಮ ಹತ್ತಿರ ಬರಲೂ ಅವಕಾಶ ಮಾಡಿಕೊಡಬಾರದೆಂದು ನಾನು ಧರಿಸಿದ್ದು ಢಕಾಯಿತರು ಧರಿಸುವಂತ ಕಣ್ಣು ಮಾತ್ರವೇ ಕಾಣುವಂತ ಮಾಸ್ಕ್‌ ಅದರ ಒಳಗೆ ಚಿಕ್ಕ ಮಾಸ್ಕ್‌ ಅದರ ಮೇಲೆ ವಿಮಾನ ನಿಲ್ದಾಣದವರು ಕೊಟ್ಟಿದ್ದ ಫೇಸ್‌ ಶೀಲ್ಡ್‌ ಮತ್ತು ಬಟ್ಟೆಯ ತರಹದ ನಿಲುವಂಗಿ ಇವೆಲ್ಲದರಿಂದಾಗಿ ಪ್ರಯಾಣ ಮಾಡುವುದೇ ಒಂದು ಭಯಾನಕ ಅನುಭವವಾಗಿದೆ ಆಶ್ಚರ್ಯವೇನೂ ಇಲ್ಲ! ಆದರೆ ಕರೋನಾದ ಹತ್ತಿರವೂ ಸೇರಿಸಬಾರದೆಂದು ದೃಢನಿರ್ದಾರದೊಂದಿಗೆ ಪ್ರಯಾಣವನ್ನು ಸಹ್ಯವಾಗಿಸಿಕೊಂಡೆ.

ನಾನು ವೀಕ್ಷಣೆಗೆ ಅನುಕೂಲವಾಗುವಂತೆ ಕಿಟಕಿಯ ಪಕ್ಕ ಕುಳಿತೆ ಗಗನ ಸಖಿಯರ ನಿರ್ದೇಶನದ ಆಲಿಕೆಯ ನಂತರ ವಿಮಾನ ಚಾಲನೆ ಶುರುವಾಯ್ತು ನಿಧಾನವಾಗಿ ಬಸ್‌ ಪ್ರಯಾಣದಂತೆ ನಂತರ ವೇಹದ ಬಸ್‌ ಪ್ರಯಾಣದಂತೆ ಶುರುವಾಗಿ ‘ಸುಯ್..’ ಎಂಬ ಶಬ್ದದೊಂದಿಗೆ ವಿಮಾನ ‘ಟೀಕಾಫ್’ʼ ಆಯಿತು. ಆಗ ಖುಷಿಯಾಗಿ ವಿಮಾನದ ಅನುಭವ ಆಗತೊಡಗಿತು.

ವಿಮಾನ ಸ್ವಲ್ಪ ಓರೆಯಾದಾಗ, ಮೇಲೆ ಕೆಳಗೆ ಹೋದಾಗ ಭಯ ಮೂಡುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ಪ್ರಯಾಣ ಅಭ್ಯಾಸವಾಗಿ ವಿಮಾನ ಸರಿಯುತ್ತಿದ್ದ ಹಾಗೆ ಅನಂತ ನೀಲ ಆಕಾಶ ಸ್ವಲ್ಪ ಕೆಳಗೆ ಮೋಡಗಳೆಲ್ಲಾ ಹತ್ತಿಯ ಚಿಕ್ಕ, ದೊಡ್ಡ ಉಂಡೆಗಳು ಹರಡಿದಂತೆ ತೇಲುತ್ತಿದ್ದವು. ಮೋಡಗಳೆಲ್ಲಾ ಹತ್ತಿಯ ಚಿಟ್ಟೆಗಳ ಹಾಗೆ ಕಾಣಿಸುತ್ತಿತ್ತು. 

ಇನ್ನೂ ಕೆಳಗೆ ಮಕ್ಕಳ ಆಟಿಕೆಯ ಹಾಗೆ ಚಿಕ್ಕ ಚಿಕ್ಕ ಮನೆಗಳು, ವಾಹನಗಳು, ರಸ್ತೆಗಳು, ಉದ್ಯಾನವನದ ತರಹ ಹಸಿರ ರಾಶಿ ಎಲ್ಲವೂ ಕಾಣಿಸುತ್ತಿತ್ತು. ಸ್ವಲ್ಪ ದೂರ ಪ್ರಯಾಣದ ನಂತರ ನೆಲ ಕಾಣೆಯಾಗಿ ನೀರ ಮೇಲಿನ ಪ್ರಯಾಣ ಆರಂಭವಾಗಿತ್ತು. ಮೇಲೆ ಆಕಾಶ ಸುತ್ತ ಮುತ್ತ ಮೋಡಗಳು ಕೆಳಗೆ ನೀರೋನೀರು! ಇವೆಲ್ಲ ಮನಸ್ಸಿಗೆ ಆತಂಕ ಮೂಡಿಸುತ್ತಿದ್ದು ಜೊತೆಗೆ ಅಗಾಧವಾದ ಸಮುದ್ರ ಕಂಡು ಖುಷಿ ತಾಸಿನ ಪ್ರಯಾಣದ ನಂತರ ನೀರನ್ನು ಸೀಳಿಕೊಂಡು ಪ್ರಯಾಣಿಸುತ್ತಿದ್ದ ಸ್ಪೀಡ್‌ಬೋಟ್‌ಗಳು ಚಿಕ್ಕ ಚಿಕ್ಕ ದ್ವೀಪಗಳು ಕೆಲವಾದರೆ, ಹಸಿರಿನಿಂದ ಕಂಗೊಳಿಸುತ್ತಿದ್ದ ಕೆಲವು ಮತ್ತೆ ಕೆಲವು ದ್ವೀಪಗಳಲ್ಲಿ ಹಸಿರಿನ ಜೊತೆ ವಿಲೀನವಾಗುವಂತೆ ನಿರ್ಮಿಸಿದ್ದ ಕಟ್ಟಡಗಳೊಂದಿಗೆ ಪ್ರವಾಸಿಗರಿಗೆ ಅನುಕೂಲಗಳನ್ನು ಒದಗಿಸಿಕೊಟ್ಟು ಆ ದೇಶದ ಪ್ರವಾಸೋದ್ಯಮಕ್ಕೆ, ಆ ದೇಶದ ಆರ್ಥಿಕತೆಗೆ ಬಹು ದೊಡ್ಡ ಪಾಲನ್ನು ನೀಡಿತ್ತು.

ವಿಭಿನ್ನ ರೀತಿಯ ರಚನೆಗಳಿಂದ ಕೂಡಿದ್ದ ದ್ವೀಪಕ್ಕೆ ಸ್ವಲ್ಪವೇ ದೂರದಲ್ಲಿ ತನ್ನದೇ ಭಾಗವಾಗಿ ರೂಪುಗೊಂಡಿದ್ದ ವಿವಿಧಾಕಾರದ ನೀರ ಮೇಲಿನ ಮನೆಗಳು ಗೋಚರಿಸಿದವು ಆ ದೃಶ್ಯಗಳು ಕವಿಗಳ ಬಣ್ಣಿಸುವ ಹಾಗೆ ‘ನಯನ ಮನೋಹರ ದೃಶ್ಯ’ಗಳಂತೆ ಕಾಣುತಿತ್ತು ರೆಪ್ಪೆ ಮುಚ್ಚಿದರೆ ಯಾವ ದೃಸಯ ಮರೆಯಾಗುವುದೋ ಎಂದು ಉತ್ಸುಕತೆಯಿಂದ ಆ ಆನಂದವನ್ನು ಕಣ್ಣಿನಲ್ಲಿ ತುಂಬಿಕೊಳ್ಳತೊಡಗಿದೆ. ಪ್ರಪಂಚದ ಎಲ್ಲಾ ಭಾಗದ ಜನರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆಯೆಂದರೆ ಹೇಗಿರಬೇಡ! ಇವೆಲ್ಲಾ ತೋರಿಸುತ್ತಾ ಮನಸ್ಸಿಗೆ ಖುಷಿಯ ಮೊದಲ ಕಂತನ್ನು ಕೊಡುತ್ತಾ ವಿಮಾನ ಮಾಲ್ಡೀವ್ಸ್‌ನ ‘ಮಾಲೆ’ ನಿಲ್ದಾಣವನ್ನು ಪ್ರವೇಶಿಸಿತು.

ಆ ದೇಶದ ಪ್ರವೇಶಕ್ಕೆ ಅನುಮತಿ ಪಡೆಯಲು ನಿಲ್ದಾಣ ಪ್ರವೇಶಿಸಿದಾಗ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಉದ್ದನೆಯ ಸರತಿ ಸಾಲುಗಳನ್ನು ನೋಡಿ ಆಶ್ಚರ್ಯವಾಯಿತು. ಮಾಲ್ಡೀವ್ಸ್‌ ನಲ್ಲಿ 1100 ರಿಂದ 1200 ರವರೆಗೆ ಪುಟ್ಟ ಪುಟ್ಟ ದ್ವೀಪಗಳು ರೂಪುಗೊಂಡಿದ್ದರೆ ಅದರಲ್ಲಿ ಪ್ರವಾಸಿ ತಾಣವಾಗಿ ರೂಪುಗೊಂಡಿರುವವು. 100 – 150 ದ್ವೀಪಗಳು ಈ ದ್ವೀಪಗಳ ಭೇಟಿಗಾಗಿ ಬಂದವರು ಹತ್ತಿರದ ದೇಶಗಳ ಜನರು ಭಾರತ, ದುಬೈ, ಇಂಗ್ಲೆಂಡ್‌, ಯುರೋಪ್‌ ದೇಶದವರು ಅವರಲ್ಲಿ ಕುಟುಂಬ ಸಮೇತರಾಗಿ ಬಂದವರು ಅರ್ಧ ಭಾಗವಾದರೆ ಇನ್ನುಳಿದವರು ಮಧು ಮಕ್ಕಳ ಜೋಡಿ.

ನಾವು ಭೇಟಿ ಕೊಡಬೇಕಾಗಿದ್ದ ‘ಪುರವರಿ’ ದ್ವೀಪಕ್ಕೆ. ಇನ್ನೂ ಎರಡು ತಾಸು ಚಿಕ್ಕ ವಿಮಾನದಲ್ಲಿ ಪ್ರಯಾಣ ಮಾಡಬೇಕಿತ್ತು. ಆ ಪುಟ್ಟ ವಿಮಾನ ನೋಡಲು ಅದರ ಪ್ರಯಾಣದ ಬಗ್ಗೆ ಉತ್ಸುಕಳಾಗಿದ್ದೆ ಆ ವಿಮಾನ ಹತ್ತಲು 4 ಕಿ.ಮಿ. ದೂರದಲ್ಲಿದ್ದ  ನೀರ ಮೇಲಿನ ನಿಲ್ದಾಣಕ್ಕೆ ಬಂದೆವು ಸ್ವಲ್ಪ ಸಮಯದ ನಂತರ ಸಿದ್ದವಾಗಿ ನಿಂತಿದ್ದ ವಿಮಾನ ಪ್ರವೇಶಿಸಿದೆವು ಚಿಕ್ಕ ಬಸ್ಸಿನಷ್ಟೇ ಗಾತ್ರವನ್ನು ಹೊಂದಿದ್ದು 15 ಜನ ಪ್ರಯಾಣಿಕರನ್ನು ಹೊತ್ತೊಯ್ಯುವಂತಾದ್ದು.

ಚಿಕ್ಕ ವಿಮಾನ ಜೋರಾದ ಶಬ್ದದೊಂದಿಗೆ ನೀರನ್ನು ತಳ್ಳುತ್ತಾ ಮುಂದೆ ಸಾಗಿತು. ಸ್ವಲ್ಪ ದೂರ ಕ್ರಮಿಸಿದ ಮೇಲೆ ಮೇಲಕ್ಕೆ ಹಾರಿ ತುಂಬಾ ಎತ್ತರಕ್ಕಲ್ಲದಿದ್ದರೂ ಪ್ರಯಾಣ ಮುಂದುವರೆಸಿತು. ಅಗಾಧವಾದ ಸಮುದ್ರ, ಘಾಡ ಹಸಿರು ಬಣ್ಣದಿಂದ ಕೂಡಿದ್ದು, ತಂಪಾದ ಗಾಳಿಯಿಂದ ಮೈ, ಮನಸ್ಸಿಗೆ ಮುದ ನೀಡುತ್ತಿತ್ತು. ಮರೆತಿದ್ದ ಆಯಾಸವನ್ನು ನೆನೆಪಿಸಿದ್ದರಿಂದ ಕಣ್ಣಿಗೆ ತೂಗಿ  ಬರುತ್ತಿದ್ದ ನಿದ್ದೆಯನ್ನು ಬಲವಂತದಿಂದ ಪಕ್ಕಕ್ಕೆ ಸರಿಸುತ್ತಾ ಸಮುದ್ರವನ್ನು ವೀಕ್ಷಿಸುತ್ತಾ ನುಣುಪಾದ ಶಾಂತ ಮೇಲ್ಮೆ ಹೊಂದಿದ್ದ ಅಲೆಗಳಿಂದ ಕೂಡಿದ್ದ, ಸೂರ್ಯಾಸ್ತದ ಕಿರಣಗಳಿಂದ ಹೊಂಬಣ್ಣದಿಂದ ಮಿಂಚುತ್ತಿದ್ದ ಸುಂದರವಾದ ದೃಶ್ಯದಿಂದ ಪುಳಕಿತರಾಗಿದ್ದಾಗಲೇ ಮತ್ತೆ ವಿಮಾನ ನೀರ ಮೇಲೆ ಪ್ರಯಾಣ ಮಾಡಲು ಪ್ರಾರಂಭಿಸಿತು. ಸ್ವಲ್ಪ ದೂರ ಕ್ರಮಿಸಿದ ನಂತರ ನಮ್ಮನ್ನು  ಗಮ್ಯಕ್ಕೆ ಸೇರಿಸಿ ವಿಮಾನ ಹಾರಿ ಹೋಯಿತು.

‘ಪುರವರಿ’ಯ ಪ್ರವೇಶದ್ವಾರಕ್ಕೆ ಅಂದವಾಗಿ ನಿರ್ಮಿಸಲ್ಪಟ್ಟಿತ್ತು. ನೀರ ಮೇಲೆ ಹಲಗೆಗಳಿಂದ ನಿರಿತವಾದ ದಾರಿಯನ್ನು ದಾಟಿ ದ್ವೀಪವನ್ನು ಪ್ರವೇಶಿಸಿದೆವು. ಅಲ್ಲಿಯ ಅನುಭವವೇ ಮನಸ್ಸಿಗೆ ಉಲ್ಲಾಸ ತರುವಂತದ್ದು ಸುತ್ತಲೂ ನೀರು, ಮರಳ ದಂಡೆ ಎಲ್ಲವೂ ಸ್ವಚ್ಛವಾಗಿ ಇಟ್ಟಿದ್ದರು ಅಥವಾ ಅತ್ತು. ಮತ್ತೆ ಸಮುದ್ರದ ತಾಪಮಾನದ ಅನುಭವವೂ ಆಗದ ಹಾಗೆ ಬಿಸಿಯನ್ನು ತಡೆದು ತಂಪನ್ನು ಕೊಡುವ ಗಿಡ, ಮರ, ಬಳ್ಳಿಗಳ ಹಸಿರ ರಾಶಿ ಅದರ ಮಧ್ಯದಲ್ಲಿ ಪುಟ್ಟ ಮನೆಗಳು, ದೊಡ್ಡ ಮನೆಗಳು, ಕಛೇರಿ ಕಟ್ಟಡ, ಅಡಿಗೆ ಊಟದ ಸ್ಥಳಗಳು, ಸ್ವಾಗಳು, ಮಾನವ ನಿರ್ಮಿತ ಈಜುಕೊಳ, ದಂಡೆಯಲ್ಲಿ ಆರಾಮವಾಗಿ ಕುಳಿತು ವೀಕ್ಷಿಸುವಂತಹ ವ್ಯವಸ್ಥೆ ನೀರಿನ ಆಟದ ಹರಿಕರಗಳು ರಾತ್ರಿಯ ಹೊತ್ತಿನಲ್ಲಿ ವೀಕ್ಷಿಸಬಹುದಾದಂತಹ ಮನರಂಜನಾ ಸ್ಥಳ ಜೊತೆಗೆ ಪಬ್‌ ಮೊದಲ ಮೂರು ದಿನಗಳು ಈ ಸ್ಥಳದಲ್ಲೂ ನಂತರದ ಮೂರು ದಿನಗಳು ನೀರ ಮೇಲಿನ ಮನೆಗಳಲ್ಲೂ ಇದ್ದೆವು. ಅದರ ಅನುಭವವೇ ಬೇರೆಯ ರೀತಿ ಸುತ್ತಲೂ ನೀರು ಕೆರೆಗಳ ಶಬ್ದ, ಮೀನುಗಳು, ತರಹೇವಾರಿ ಆಕಾರದ ಶಂಕದ ಹುಳುಗಳು ಕಪ್ಪೆ ಚಿಪ್ಪಿನ ಹಳುಗಳು ಬೆಳಗಿನ ತಂಪಿನ ವಾತಾವರಣಕ್ಕೆ ದಂಡೆಯ ಮೇಲೆ ಹರಿದಾಡುತ್ತದ್ದರೆ ಆಶ್ಚರ್ಯವಾಗುತ್ತಿತ್ತು.

ಇದರ ಮಧ್ಯದಲ್ಲಿ ಒಂದು ದಿನ ಸೂರ್ಯಾಸ್ತಮಾನ ವೀಕ್ಷಣೆಗೆ ಮತ್ತು ಡಾಲ್ಫಿನ್‌ ವೀಕ್ಷಣೆಗೆ ಪ್ರದೇಶದಲ್ಲಿ ಸ್ವಲ್ಪ ದೂರದಿಂದಲೇ ಅವುಗಳ ಆಟ, ಎತ್ತರಕ್ಕೆ ಜಿಗಿಯುವ, 5, 6 ಡಾಲ್ಫಿನ್‌ಗಳು ಒಟ್ಟಿಗೆ ಸಾಗುವ ದೃಶ್ಯ. ಖುಷಿ ಕೊಟ್ಟಿತು. ಜೊತೆಗೆ ಸ್ಪೀಡ್‌ ಬೋಟ್‌ನ ಪ್ರಯಾಣದ ಅನುಭವವೂ ಆಯಿತು.

ಯಾವ ರೀತಿಯ ಮನೆಯ ಜವಾಬ್ದಾರಿ, ಕೆಲಸದ ಒತ್ತಡವೂ ಇಲ್ಲದೆ ದಿನಗಳು ಕಳೆದದ್ದೇ ತಿಳಿಯಲಿಲ್ಲ. ಪ್ರಕೃತಿಯ ಮದ್ಯೆ, ನೀರ ರಾಸಿಯಲ್ಲಿ, ಸ್ವಚ್ಛವಾದ ಪರಿಸರದಲ್ಲಿ, ವ್ಯವಸ್ಥಿತ ಅನುಕೂಲಗಳಿಂದ ಕೂಡಿದ ಪರಿಸರ ನಾವು ಮೂವರು ನಮ್ಮದೇ ರೀತಿಯಲ್ಲಿ ಸಮಯ ಕಳೆದು ಅದನ್ನೆಲ್ಲಾ ಕಣ್ಣಿನಲ್ಲಿ, ಮನಸ್ಸಿನಲ್ಲಿ ತುಂಬಿಕೊಂಡು ಒಲ್ಲದ ಮನಸ್ಸಿನಿಂದ ವಿಧಾಯ ಹೇಳುತ್ತಾ…

ನಾನು ನನ್ನ ಕುಟುಂಬದವರು ಹಾರಿ ಬಂದೆವು.

‍ಲೇಖಕರು Avadhi

February 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: