ಅವರು ಹಾರ ತೆಗೆದು ಬಿಸಾಡಿದರು…

ನೆಂಪೆ ದೇವರಾಜ್

ಹಾರ ಕಸಿದುಕೊಂಡು ಬಿಸಾಡಿದ ರೀತಿಗೆ ಇಡೀ ಸಭೆ ರೌರವ ಮೌನದ ಬಿಕ್ಕಳಿಕೆಯಾಗಿತ್ತು.

ಇಂದು ಮಹಾ ರೈತನಾಯಕನ ಜನುಮ ದಿನ

ಆ ಒಂದು ತಿರಸ್ಕಾರ ಮತ್ತು ಪುರಸ್ಕಾರದ ವಿಷಯದಲ್ಲಿ ಪ್ರೊಫೆಸರ್ ನಂಜುಂಡಸ್ವಾಮಿಯವರ ಸ್ಪಷ್ಟತೆಯ ಮುಂದೆ ಉಳಿದ ನಾಯಕತ್ವವೆಲ್ಲ ಸಂಪೂರ್ಣ ಯಕ್ಸ್ಚಿತ್ ಎನ್ನದೆ ವಿಧಿ ಇಲ್ಲ. ನಾನಾಗ ಅಂತಿಮ ವರ್ಷದ ಪತ್ರಿಕೋದ್ಯಮ ವಿಭಾಗದಲ್ಲಿ ಎಮ್.ಎ ಓದುತ್ತಿದ್ದೆ. ನಮ್ಮ ವೊ ಭಾಗದಲ್ಲಿ ಮಾದರಿ ಪತ್ರಿಕಾಗೋಷ್ಟಿಗಳನ್ನು ನಡೆಸುವುದು ವಾಡಿಕೆ. ಅಂತೆಯೆ ನಮ್ಮ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರೊಫೆಸರ್ ನಂಜುಂಡ ಸ್ವಾಮಿಯವರ ಪತ್ರಿಕಾ ಗೋಷ್ಟಿಯೊಂದನ್ನು ನಡೆಸಿದ ನಂತರದ ಸಂಜೆ ಮಾನಸ ಗಂಗೋತ್ರಿಯ ಹ್ಯುಮ್ಯಾನಿಟೀಸ್ ಬ್ಲಾಕ್ನಲ್ಲಿ ರೈತ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ವಿದ್ಯಾರ್ಥಿಗಳ ಸಭೆಯೊಂದನ್ನು ಆಯೋಜಿಸಿದ್ದೆವು.

ರೈತ ವಿದ್ಯಾರ್ಥಿ ಒಕ್ಕೂಟದ ಮಂಚೂಣಿಯಲ್ಲಿ ನಾನಿದ್ದುದರಿಂದ ಪ್ರೋಫೆಸರ್ಸ್‌ರವರು ಮುಖ್ಯ ಭಾಷಣಕಾರರಾಗಿದ್ದ ವೇದಿಕೆಯ ಅದ್ಯಕ್ಷತೆಯನ್ನು ವಹಿಸಿಕೊಳ್ಳುವ ಸುಯೋಗವೊಂದು ನನಗೆ ದೊರೆತಿತ್ತು. ಈ ಹಿಂದೆ ಪ್ರೊಫೆಸರ್ರವರ ಭಾಷಣಗಳನ್ನು ತದೇಕ ಚಿತ್ತದಿಂದ ಕೇಳುವ ಬಹು ದೊಡ್ಡ ವಿಧೇಯ ವಿದ್ಯಾರ್ಥಿಯಾಗಿ ಕಾಲಕಳೆದದ್ದು ನೂರಾರು ಸಲವಾಗಿತ್ತೆ ವಿನಃ ವೇದಿಕೆ ಹಂಚಿಕೊಂಡಿರಲಿಲ್ಲ.

ಸಾವಿರದ ಒಂಬೈನೂರ ಎಂಭತ್ತೆಂಟರ ಫೆಬ್ರವರಿ ತಿಂಗಳಲ್ಲಿ ನಡೆದಿದ್ದ ಈ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅನೇಕ ಹೊಸ ಹೊಸ ವಿಚಾರಧಾರೆಗಳನ್ನು ಪ್ರೋಫೆಸರ್ ರವರು ನಮ್ಮ ಮುಂದೆ ಇಡತೊಡಗಿದರು. ಇಡೀ ಸಭೆ ಮೌನದಿಂದ ಆಲಿಸತೊಡಗಿತ್ತು. ವಿದ್ಯಾರ್ಥಿ ಸಮೂಹದಿಂದ ಬಂದಿದ್ದ ಹತ್ತಾರು ಪ್ರಶ್ನೆಗಳಿಗೆ ಬಹಳ ಸಮಾಧಾನದಿಂದ ಉತ್ತರಿಸಿದರು. ಅದೇ ಸಂದರ್ಭದಲ್ಲಿ ರೈತ ಚಳುವಳಿಯ ಜೊತೆ ಪ್ರತ್ಯಕ್ಷ ಮತ್ತು ಪರೋಕ್ಷ ಸಂಬಂಧಗಳನ್ನು ಇಟ್ಟುಕೊಂಡಿದ್ದ ಅನೇಕ ವಿದ್ವಾಂಸರುಗಳು ಈ ಸಭೆಗೆ ಗೈರು ಹಾಜರಾಗಿದ್ದರು. ಇದಕ್ಕೆ ಕಾರಣವಾದದ್ದು ಅಂದು ಲಂಕೇಶ್ರವರ ನೇತೃತ್ವದಲ್ಲಿ ಹುಟ್ಟಿಕೊಂಡಿದ್ದ ಪ್ರಗತಿ ರಂಗವೆಂಬುದು ಆಮೇಲೆ ಗೊತ್ತಾಯಿತು.

ಪ್ರೊಫೆಸರ್ ರವರ ಪ್ರತಿಯೊಂದು ವಿಚಾರಗಳು ಕೂಡಾ ರೈತ ಸಂಘಟನೆಯ ಆಚೆಯ ಸಮಾಜವೊಂದರತ್ತ ಹೊರಡುವ ಬಗೆಗೆ ಪೀಠಿಕೆಗಳಾಗುತ್ತಿದ್ದವು. ಆಗಿನ್ನೂ ಗ್ಯಾಟ್, ಡಬ್ಲೂಟಿಒ ಚರ್ಚೆಯ ವಿಷಯಗಳಾಗಿರಲಿಲ್ಲ. ಆದರೆ ಅದರ ಬಗ್ಗೆ ಜಾಗೃತಿಯೊಂದನ್ನು ಮೂಡಿಸುವ ಪ್ರಯತ್ನಕ್ಕೆ ತಯಾರುಗುತ್ತಿದ್ದಾರೆಂಬುದನ್ನು ಅವರುತ್ಪಾದಿಸುತ್ತಿದ್ದ ಹೊಸ ಭಾಷ್ಯವೊಂದರ ಮೂಲಕ ಸೂಕ್ಷ್ಮವಾಗಿ ಅಂದು ಗ್ರಹಿಸಬಹುದಾಗಿತ್ತು.
ನಾನೀಗ ಹೇಳ ಹೊರಟಿರುವುದು ಗಹನ ಗಂಭೀರತೆಯ ವಿಚಾರವನ್ನಲ್ಲ. ಆ ಸಭೆಯಲ್ಲಿ ಘಟಿಸಿದ ಸಣ್ಣ ಘಟನೆಯೊಂದರ ಬಗ್ಗೆ.

ಇಂದಿನ ಹೋರಾಟ ಮತ್ತು ನಾಯಕತ್ವವೆಂದರೆ ಹಾರ ತುರಾಯಿ, ಜಯಕಾರ, ಹೊಗಳಿಕೆ, ಜಿಂದಾಬಾದ್ ಗಳ ಕಿಗಡ ಚಿಕ್ಕುವ ಶಬ್ಧ ಮಾಲಿನ್ಯಗಳ ವಿನಿಮಯವೆಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ನಾಯಕತ್ವದ ಗಮನ ಸೆಳೆಯುವ ವಿಧಾನಗಳು ಅಂದೂ ಇದ್ದವು. ಆದರೆ ಇಂದು ಈ ವಿಷಯಗಳೆ ಮೇರೆ ಮೀರಿ ಬೆಳೆದಿವೆ. ಇಡೀ ರೈತ ಚಳುವಳಿಯ ಎರಡು ದಶಕಗಳ ಮಹಾನ್ ಹೊರಾಟಗಳಲ್ಲಿ ವ್ಯಕ್ತಿ ಕೇಂದ್ರಿತ ಜಯಕಾರದ ಘೋಷಣೆಗಳು ಒಮ್ಮೆಯೂ ಕಾರ್ಯಕರ್ತರಲ್ಲಿ ಸುಳಿಯದಂತೆ ನೋಡಿಕೊಂಡ ಸಂಘಟನೆಯೊಂದಿದ್ದರೆ ಅದು ರೈತ ಚಳುವಳಿ ಮಾತ್ರ ಎಂಬುದನ್ನು ಎಂದೆಂದೂ ಉದಾಹರಣೆ ಸಮೇತ ವಿವರಿಸಬಹುದು.

ಮೈಸೂರಿನ ಮಾನಸ ಗಂಗೋತ್ರಿಯ ಮಾನವಿಕ ವಿಭಾಗದ ಸಭಾಂಗಣದಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರೊಫೆಸರ್ ರವರು ನಡೆಸುತ್ತಿದ್ದ ಸಂವಾದದಲ್ಲಿ ವ್ಯಕ್ತಿಯೋರ್ವರು ದೊಡ್ಡ ಹಾರವನ್ನು ಹಿಡಿದುಕೊಂಡು ವೇದಿಕೆಯತ್ತ ಬಂದು ಪ್ರೋಫೆಸರ್ ರವರಿಗೆ ಆ ಹೂವಿನ ಹಾರವನ್ನು ಹಾಲು ಹೋದಾಗ ಫ್ರೊಫೆಸರ್ ಒಮ್ಮೆಯೆ ಕೆಂಡಾ ಮಂಡಲವಾಗುತ್ತಾರೆ. ಹೂ ಹಾರವನ್ನು ಹಾಕಿಸಿಕೊಳ್ಳದೆ ವಾಪಾಸು ಕೊಡುತ್ತಾರೆ ಎಂದು ಎಲ್ಲರೂ ಊಹಿಸಿದ್ದರು.

ನಮ್ಮ ನಿರೀಕ್ಷೆಗೂ ಮೀರಿ ವರ್ತಿಸಿದ ನಂಜುಂಡ ಸ್ವಾಮಿಯವರು ತಮ್ಮ ಕೊರಳಿಗೆ ಹಾಕಲು ಬಂದಿದ್ದ ವ್ಯಕ್ತಿಯಿಂದ ಹೂ ಹಾರವನ್ನು ಕಸಿದುಕೊಂಡು ಎಸೆಯುತ್ತಾರೆ. ಮಾತ್ರವಲ್ಲ’ಈ ತಾಯ್ಗಂಡ’ ಗುಂಡ್ಲು ಪೇಟೆ ನಾಗರತ್ನಮ್ಮನವರ ಸಭೆಯಲ್ಲೂ ಇದೆ ಹಾರ ಹಾಕಲು ಹೋಗುತ್ತಾನೆ. ಈತನನ್ನು ಮೊದಲು ಆಚೆ ಕಳುಹಿಸಿʼ ಎಂದು ತಮ್ಮ ಜೊತೆ ಬಂದಿದ್ದ ಕಾರ್ಯಕರ್ತರಿಗೆ ಸೂಚಿಸುತ್ತಾರೆ. ಹಾರ ಹಾಕಲು ಬಂದಿದ್ದ ವ್ಯಕ್ತಿ ಪ್ರೊಫೆಸರ್ ರವರ ನಿರ್ದಾಕ್ಷಿಣ್ಯದ ಕಟು ಮಾತುಗಳಿಗೆ ಬೆದರಿ ವಾಪಾಸು ಹೋದ ರೀತಿ ಇನ್ನೂ ಕಣ್ಣಿಗೆ ಕಟ್ಟಿದಂತಿದೆ.

ಪ್ರೊಫೆಸರ್ ಈ ವ್ಯಕ್ತಿಯ ಜೊತೆ ವರ್ತಿಸಿದ ರೀತಿಯಿಂದ ಇಡೀ ಸಭಾಂಗಣ ಮೌನದ ರೌರತೆಯಲ್ಲಿ ಬಿಕ್ಕಳಿಸುವಂತೆ ಬಾಸವಾಗತೊಡಗಿತ್ತು. ಅಮಾಯಕನಂತೆ ವೇದಿಕೆಯಿಂದ ಕೆಳಗಿಳಿದ ವ್ಯಕ್ತಿಯ ಬಗ್ಗೆ ಪ್ರೊಫೆಸರ್ ಈ ಪ್ರಮಾಣದಲ್ಲಿ ಕಟುವಾಗಬಾರದಿತ್ತು ಎಂಬುದನ್ನು ಸಭಾಂಗಣ ಹೇಳುವಂತಿತ್ತು. ಅದರೆ ಪ್ರೊಫೆಸರ್ ಒಂಚೂರೂ ತಮ್ಮ ಸಮ ಚಿತ್ತತೆ ಕಳೆದುಕೊಳ್ಳದೆ ‘ ಈ ವ್ಯಕ್ತಿಯ ಇತಿಹಾಸ ನಿಮಗೆ ಗೊತ್ತಿಲ್ಲದಿರಬಹುದು. ನನಗೆ ಗೊತ್ತು. ಇಂತಹ ತಾಯ್ಗಂಡರುಗಳೆ ನಮ್ಮ ಗ್ರಾಮೀಣ ವ್ಯವಸ್ಥೆಯನ್ನು ಹಾಳು ಮಾಡುತ್ತಿರುವವರು.

ನಮ್ಮ ಗುಂಡ್ಳುಪೇಟೆ ಕಡೆಯವನು’ ಎನ್ನುತ್ತಾ ಮುಂದಿನ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ದವಾಗತೊಡಗಿದರು. ಆದರೆ ಇಂದು ಓರ್ವ ನಾಯಕನಾದವನು ತನ್ನ ಕೊರಳಿಗೆ ಯಾರು ಎಷ್ಟು ದೊಡ್ಡ ಹಾರ ಹಾಕಿದ. ಎಷ್ಟೆಷ್ಟು ಫ್ಲೆಕ್ಸ್ ಗಳಲ್ಲಿ ತನಗೆ ಶುಭಾಶಯ ಕೋರಿದ, ಜೈಕಾರ ತನಗೆಷ್ಟು ಬಾರಿ ಹೊಡೆದ ಎಂಬುದರ ಆಧಾರದ ಮೇಲೆ ಕಾರ್ಯಕರ್ತರುಗಳ ಗುಣ ನಡತೆಗಳನ್ನು ಅಳೆಯುವ ಕಾಲಘಟ್ಟದಲ್ಲಿ ನಾವಿದ್ದೇವೆ. ಹೋರಾಟಗಾರರೆನಿಸಿಕೊಂಡವರು ಚಪ್ಪಾಳೆ ಗಿಟ್ಟಿಸಿಕೊಳ್ಳುವತ್ತಲೆ ತಮ್ಮ ಮಾತುಗಳನ್ನು ಕೇಂದ್ರೀಕರಿಸಿಕೊಂಡಿರುತ್ತಾರೆಯೆ ವಿನಃ ತಿದ್ದಿ ತೀಡುವ ಮಾತಿನತ್ತ ಹೋಗುವುದೇ ಇಲ್ಲ.

ರೈತರ ಬದುಕಿನ ಸ್ವಾಭಿಮಾನ, ಜಾಗೃತಿ, ವಿವೇಕಗಳು ಕಾಲ ಘಟ್ಟಗಳಿಗನುಗುಣವಾಗಿ ಅಪ್ಡೇಟ್ ಪಡೆಯುತ್ತಲೆ ಇಲ್ಲ‌. ಈಗಲೂ ಎಂಭತ್ತು ಮತ್ತು ತೊಂಭತ್ತರ ದಶಕಗಳಲ್ಲಿ ಪ್ರೊಪೆಸರ್ ಕೊಟ್ಟ ರೂಪಕ, ಸಂಕೇತ ಮತ್ತು ಅಂಕಿ ಅಂಶಗಳಲ್ಲೇ ಗಿರಕಿ ಹೊಡೆಯುತ್ತಿದ್ದೇವೆ. ಈ ಕಾರಣದಿಂದಲೆ ನಂಜುಂಡಸ್ವಾಮಿಯವರು ಹಾಗೂ ಅವರು ರೂಪಿಸಿದ ರೈತ ಚಳುವಳಿ ತೀರಾ ಭಿನ್ನವಾಗಿ ಪದೆ ಪದೆ ಹೊರ ಹೊಮ್ಮುತ್ತಲೆ ಇರುತ್ತದೆ. ತಡವಾಗಿ ಪ್ರೊಫೆಸರ್ ರೂಪಿಸುತ್ತಿದ್ದ ತಿರಸ್ಕಾರ ಮತ್ತು ಪುರಸ್ಕಾರಗಳ ರೂಪಕವೊಂದನ್ನು ತಮ್ಮ ಮುಂದೆ ಇಡುತ್ತಿದ್ದೇನೆ. ಇಂದು ಪ್ರೊಫೆಸರ್ ರವರ ಜನುಮ ದಿನ.

‍ಲೇಖಕರು Avadhi

February 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಕೀರ್ತಿ

    ನಂಜುಂಡಸ್ವಾಮಿ ಅವರ ಬಗೆಗಿನ ನೆಂಪೆಯವರ ಲೇಖನ ಸೊಗಸಾಗಿದೆ.ಆದರೆ ಇಲ್ಲಿ ನುಸುಳಿರುವ ಅಕ್ಷರ ದೋಷಗಳ ಬಗ್ಗೆ ಗಮನಿಸಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: