ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀನೇಕೆ ಬಣ್ಣ ಬಣ್ಣದ `ಬಣ್ಣ’ವನ್ನೇ ತೊಡುತ್ತೀಯ?

ನೀನೇಕೆ ಬಣ್ಣ ಬಣ್ಣದ `ಬಣ್ಣ’ವನ್ನೇ ತೊಡುತ್ತೀಯ?

(ಫೇಸ್ ಬುಕ್ ಜೊತೆ ಮಾತು ಕತೆ )

ಎಂ ಆರ್ ಕಮಲ

ಅವರು ಕೇಳುತ್ತಾರೆ:

ನೀನೇಕೆ ನಿರಾಳವಾಗಿ ನಗುವ ಚಿತ್ರಗಳನ್ನು ಹಾಕುತ್ತೀಯ?

ನಾನು ಹೇಳುತ್ತೇನೆ:

ಎಲ್ಲ ಹೆಣ್ಣುಗಳು ನಿರಾಳವಾಗಿ ನಗುವವರೆಗೂ ಹಾಕುತ್ತೇನೆ.

ಅವರು ಕೇಳುತ್ತಾರೆ:

ನೀನಿಲ್ಲೇಕೆ ನರ್ತನದ ರೀಲುಗಳನ್ನು ಹಾಕುತ್ತೀಯ?

ನಾನು ಹೇಳುತ್ತೇನೆ:

ಎಲ್ಲ ಹೆಣ್ಣುಮಕ್ಕಳು ಖುಷಿಯಿಂದ ಕುಣಿಯುವವರೆಗೂ ಹಾಕುತ್ತೇನೆ.

ಅವರು ಕೇಳುತ್ತಾರೆ:

ನೀನಿಲ್ಲೇಕೆ ಬರೆಯುತ್ತೀಯ?

ಎಲ್ಲ ಹೆಣ್ಣುಗಳು ತಮ್ಮೊಳಗಿನ ಕತೆ ಹೇಳುವವರೆಗೂ ಬರೆಯುತ್ತೇನೆ.

ಅವರು ಕೇಳುತ್ತಾರೆ:

ನೀನೇಕೆ ಬಣ್ಣ ಬಣ್ಣದ `ಬಣ್ಣ’ವನ್ನೇ ತೊಡುತ್ತೀಯ?

ನಾನು ಹೇಳುತ್ತೇನೆ:

ಎಲ್ಲ ಹೆಣ್ಣುಮಕ್ಕಳ ಬದುಕು ಬಣ್ಣವಾಗುವರೆಗೂ ತೊಡುತ್ತೇನೆ.

ಅವರು ಕೇಳುತ್ತಾರೆ:

ನೀನೇಕೆ ಬಗೆ ಬಗೆಯ ತಿಂಡಿಗಳನ್ನು ಮಾಡಿ ಪ್ರದರ್ಶಿಸುತ್ತೀಯಾ?

ನಾನು ಹೇಳುತ್ತೇನೆ:

ತಾವೇ ಮಾಡಿದ್ದನ್ನು ನೆಮ್ಮದಿಯಾಗಿ ಕೂತು ತಿನ್ನುವವರೆಗೂ ಪ್ರದರ್ಶಿಸುತ್ತೇನೆ.

ಅವರು ಕೇಳುತ್ತಾರೆ:

ನೀನೇಕೆ `ಕಲಾವಿದೆ’ಯೆಂದು ಹೇಳಿಕೊಳ್ಳುತ್ತಲೇ ಇರುತ್ತೀಯ?

ನಾನು ಹೇಳುತ್ತೇನೆ:

ಹೆಣ್ಣುಮಕ್ಕಳ ಕಲೆಯ ಬೆಲೆ ನಿಮಗೆ ತಿಳಿಯುವವರೆಗೂ ಹೇಳುತ್ತೇನೆ.

ಅವರು ಕೇಳುತ್ತಾರೆ:

ನೀನಿಲ್ಲೇಕೆ ಹುಟ್ಟಿದ ದಿನವನ್ನು ಸಂಭ್ರಮಿಸುತ್ತೀಯಾ?

ನಾನು ಹೇಳುತ್ತೇನೆ:

ಎಲ್ಲ ಹೆಣ್ಣುಗಳ ಹುಟ್ಟು`ಹಬ್ಬ’ವಾಗುವವರೆಗೂ ಸಂಭ್ರಮಿಸುತ್ತೇನೆ.

(ಬಣ್ಣ: ಸೀರೆ, ಇದನ್ನು ಕವಿತೆಯೆನ್ನದಿದ್ದರೆ ಕತ್ತೆಬಾಲ ಕುದುರೆ ಜುಟ್ಟು!)

‍ಲೇಖಕರು avadhi

3 June, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading