ನೆಲಕ್ಕೆ ಬೆಂಕಿ ಬಿದ್ದ ದಿನ
ಸ್ಪೂರ್ತಿ ಗಿರೀಶ್
೧.
ನೆಲಕ್ಕೆ ಬೆಂಕಿ ಬಿದ್ದ ದಿನ
ಹಸಿರು ಕೋಟೆ ಕೊತ್ತಲ
ಎಲ್ಲಾ ಎಲ್ಲಾ ಉರಿದು ಹೋದವು
ನೀನು ಮಾತ್ರ ಎದೆಯಲ್ಲೇ
ಜ್ವಲಿಸುತ್ತಿದ್ದೆ
ಸಾವಿರ ಸಾವಿರ
ಹುಣ್ಣಿಮೆ ಚಂದ್ರರ ತೂಗಿಕೊಂಡು
೨.
ನೆಲಕ್ಕೆ ಬೆಂಕಿ ಬಿದ್ದ ದಿನ
ಬೆಂಕಿ ಹಚ್ಚಿದವ
ದೂರದಲ್ಲಿ ನಿಂತು
ಕೈ ಚಪ್ಪಾಳೆ
ಬಡಿದು ತಾಂಡವ ನೃತ್ಯ ಮಾಡುತ್ತಿದ್ದ
ಇಂಚಿಂಚು ಆವರಿಸಿದ ಕಾವಿಗೆ
ತಣ್ಣಗೆ ಕೊರೆವ ನಾನು
ಬೆಚ್ಚಿದೆ
ಬೆಂಕಿಯ ದಳಗಳು ಮೈಚಾಚಿ
ನಾಲಿಗೆ ಹೊರಚಾಚಿ
ಉದ್ದ ಆಗಲಕ್ಕೂ ಹಬ್ಬಿ
ನನ್ನ
ಇಡಿಯಾಗಿ ಇಲ್ಲವಾಗಿಸಿದವು
ನನ್ನ ಖಾಲಿಮಾಡಿಕೊಂಡ ಮೇಲಷ್ಟೇ
ಒಳಗೆ
ಒಂದೊಂದಾಗಿ ಬೂದಿಯಲ್ಲಿದ್ದ
ನಿನ್ನ ಹೆಜ್ಜೆಗಳನ್ನಾಯ್ದು
ತುಂಬಿಕೊಂಡೆ
೩
ನೆಲಕ್ಕೆ ಬೆಂಕಿ ಬಿದ್ದ ದಿನ
ಸಾವಿರ ಧರ್ಮಗಳು ಕೊಚ್ಚಿಹೋದವು
ಪ್ರೇಮಿಗಳು
ಅವರ ಪ್ರೀತಿ ಪಾತ್ರರ
ತೋಳಿನಲ್ಲೇ ಉಳಿದು ಹೋದರು
೪.
ನೆಲಕ್ಕೆ ಬೆಂಕಿ ಬಿದ್ದ ದಿನ
ಎಲ್ಲಾ ಚೌಕಟ್ಟು ಹರಿದುಹೋದವು
ಕಾನೂನು ಕಟ್ಟಲೆ ಮುರಿದು ಹೋದವು
ಬೌದ್ಧಿಕರು ಚಾವಡಿಗಳಿಂದ
ಉಟ್ಟ ಬಟ್ಟೆಯಲ್ಲಿ ಬೀದಿಗೆ ಬಿದ್ದರು
ಎಲ್ಲಾರ ಕಣ್ಣುಗಳೇ ಕಳಚಿ ಬಿದ್ದವು
೫.
ನೆಲಕ್ಕೆ ಬೆಂಕಿ ಬಿದ್ದ ದಿನ
ಒಬ್ಬ ತಾಯಿ
ತನ್ನ ಮಕ್ಕಳೊಂದಿಗೆ ರೆಕ್ಕೆ ಕಟ್ಟಿಕೊಂಡು ಆಕಾಶಕ್ಕೆ ಹಾರಿಹೋದಳು





“ಪ್ರೇಮಿಗಳು
ಅವರ ಪ್ರೀತಿ ಪಾತ್ರರ
ತೋಳಿನಲ್ಲೇ ಉಳಿದು ಹೋದರು
ಬೌದ್ಧಿಕರು ಚಾವಡಿಗಳಿಂದ
ಉಟ್ಟ ಬಟ್ಟೆಯಲ್ಲಿ ಬೀದಿಗೆ ಬಿದ್ದರು
ಎಲ್ಲಾರ ಕಣ್ಣುಗಳೇ ಕಳಚಿ ಬಿದ್ದವು”
Beautiful
ಧನ್ಯವಾದಗಳು Shama , ಧನ್ಯವಾದಗಳು ಅವಧಿ.
ಪ್ರೇಮಕ್ಕೆ ಇರುವ ಶಕ್ತಿ ಅಸದಳವಾದುದು ಎನ್ನುವುದು ಪ್ರತಿ ಸಾಲಿನಲ್ಲಿ ಪ್ರತಿಬಿಂಬಿಸಿದೆ.ಸಾವಿರ ಧರ್ಮಗಳನ್ನು ಕೊಚ್ಚುವ ಶಕ್ತಿ ಅದು. ಸಾರ್ಥಕ ಕವನ.