ನಿಷಾದ ಘಾಟಿನ ಈ ನಿಷಾದನೆಂಬ ಏಕಲವ್ಯ!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮೆರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ಕೆಲವೊಮ್ಮೆ ಎಂತಹ ಮಜವಾದ ಘಟನೆಗಳು ನಡೆಯುತ್ತವೆ ಎಂದರೆ, ನಡೆದ ಮೇಲೆ ಅದು ಕನಸಿನ ಹಾಗೆ ಅನಿಸತೊಡಗುತ್ತದೆ. ಕೆಲವೊಮ್ಮೆ ಕನಸನ್ನೂ ಇದು ಕನಸು ಎಂದು ನಂಬಲು ಹೊತ್ತು ತೆಗೆದುಕೊಳ್ಳುತ್ತೇವಲ್ಲ, ಹಾಗೆ. ಸಿನಿಮೀಯ. ಅದರಿಂದ ಹೊರಗೆ ಬರಲು ಸ್ವಲ್ಪ ಕಾಲ ಹಿಡಿಯುತ್ತದೆ. ನನ್ನಂಥ ಕರಾವಳಿಯ ಮಂದಿಗೆ, ಒಂದು ರಾತ್ರಿಯಿಡೀ ಯಕ್ಷಗಾನ ನೋಡಿಕೊಂಡು ಬಂದರೆ ಮತ್ತೆರಡು ದಿನ ಕಣ್ಣು ಮುಚ್ಚಿದರೂ ತೆರೆದರೂ ಬಣ್ಣದ ವೇಷಗಳೇ ಕಣ್ಣಮುಂದೆ ಕುಣಿದಂತೆ, ಚೆಂಡೆಪೆಟ್ಟು ಕೇಳಿದಂತೆ ಕಿವಿ ಗುಂಯ್ ಗುಟ್ಟುತ್ತದಲ್ಲ ಹಾಗೆ ಎಂದರೆ ತಲೆಯೊಳಗೆ ಹೆಚ್ಚು ಹೊಕ್ಕೀತು!

ಚಳಿಗಾಲದ ಆ ಹಿತವಾದ ಮಬ್ಬು ಮಧ್ಯಾಹ್ನದಲ್ಲಿ ಆ ತುದಿಯ ಅಸ್ಸಿ ಘಾಟಿನಿಂದ ಈ ತುದಿಯವರೆಗೆ ನಡೆಯುವುದೆಂದು ತೀರ್ಮಾನಿಸಿ ಹೊರಟಾಗಿತ್ತು. ೮೮ ಘಾಟ್‌ಗಳಿರುವ ವಾರಣಾಸಿಯ ಗಲ್ಲಿ ಗಲ್ಲಿಗಳನ್ನೂ, ಉದ್ದಾನುದ್ದ ಗಂಗೆಯ ತೀರವನ್ನೂ ಕಾಲ್ನಡಿಗೆಯಲ್ಲಿ ಒಂದೇ ದಿನ ಅಳೆದುಬಿಟ್ಟೇನು ಎಂದರೆ ಅದು ನಮ್ಮ ಭ್ರಮೆ.

ಒಂದೇ ತರಹ ಕಾಣುವ ಘಾಟ್‌ಗಳಲ್ಲಿ ಒಂದೆರಡನ್ನು ನೋಡಿದ್ರೆ ಮುಗೀತಲ್ವಾ, ಅದಕ್ಕ್ಯಾಕೆ ಅಷ್ಟೂ ಘಾಟ್ಗಳಿಗೆ ಸುತ್ತು ಹೊಡೆಯಬೇಕು ಅಂತಲೋ, ಆ ಕಿರಿದಾದ ಗಲ್ಲಿಗಳಲ್ಲಿ ನಡೆದು ಸಾಗಿ ನೋಡುವಂಥಾದ್ದಾದರೂ ಏನಿದೆಯಪ್ಪ? ವಿಶ್ವನಾಥನ ದರ್ಶನವಾಯಿತಲ್ಲ ಮುಗೀತು ಎಂದು ಬೇರೆಲ್ಲದಕ್ಕೂ ಎಳ್ಳು ನೀರು ಬಿಡಲು ಹೊರಡುವವರಿಗೆ ಉತ್ತರಿಸಿ ಪ್ರಯೋಜನವಿಲ್ಲ, ಅವರಿಗೆ, ಭಾರತದ ಈ ಅತ್ಯಂತ ಪುರಾತನ ನಗರಿಯೆಂಬ ವಾರಣಾಸಿ ಅರ್ಥವಾಗಲಿಲ್ಲ ಎಂದುಕೊಂಡು ಸುಮ್ಮನಾಗಿಬಿಡಬೇಕು.

ವಿಚಿತ್ರ ಅಂದರೆ ಇದು. ನಡೆದದ್ದಿಷ್ಟು. ಅಲ್ಲಿನ ಅಷ್ಟೂ ಘಾಟ್‌ಗಳಿಗೆ ಅಂಟಿಕೊಂಡಂತಿರುವ ಗಲ್ಲಿಗಳಲ್ಲೆಲ್ಲ ಸುತ್ತಾಡಿಕೊಂಡು, ಬಣ್ಣ ಬಣ್ಣದ ಕಿಟಕಿ ಬಾಗಿಲುಗಳನ್ನು ಹೊಂದಿರುವ ಮನೆಗಳನ್ನೋ, ಅವುಗಳ ಕಿಟಕಿಯಿಂದ ಇಣುಕುವ ಮುಖಗಳನ್ನೂ, ಅವುಗಳಿಗಾತುಕೊಂಡು ನಿಂತಿರುವ ಸೈಕಲುಗಳನ್ನೋ, ಗೋಡೆಯುದ್ದಕ್ಕೂ ಸಿಗುವ ಗ್ರಾಫಿಟಿಗಳನ್ನೋ, ಆ ಗ್ರಾಫಿಟಿಗಳ ಎದುರೇ ಇತ್ತಿಂದತ್ತ, ಅತ್ತಿಂದಿತ್ತ ನಡೆದಾಡುವ ಮನುಷ್ಯರೋ ನಾಯಿಗಳೋ ತಮಗರಿವಿಲ್ಲದೆ ಅಚಾನಕ್ಕಾಗಿ ಸೃಷ್ಟಿ ಮಾಡುವ ಚಿತ್ರಕಥೆಗಳನ್ನೋ, ಘಾಟಿನ ಮೆಟ್ಟಿಲುಗಳಲ್ಲಿ ದೇಹ ಹುರಿಗೊಳಿಸುವವರನ್ನೋ, ಕೆಲಸವೇ ಇಲ್ಲದವರಂತೆ ಗಂಗೆ ನೋಡುತ್ತಾ ಕೂತ ಜೀವಗಳನ್ನೋ, ಯಾರನ್ನೋ ಕಳೆದುಕೊಂಡು ವಿಷಾದದ ಮೋರೆ ಹೊತ್ತು ಪೂಜಾರಿ ಹೇಳುವ ಅಷ್ಟೂ ಕಾರ್ಯಗಳನ್ನು ಕಣ್ಣಿಗೊತ್ತಿಕೊಂಡು ಮಾಡುತ್ತಾ ನೆಮ್ಮದಿ ಕಾಣುವ ಜೀವಗಳನ್ನೋ, ಕೇಸರಿ ಧರಿಸಿ ನಾಮ ಬಳಿದು ತ್ರಿಶೂಲ ಊರಿ ಕೂತಿರುವ ಎಲ್ಲ ಬಿಟ್ಟವರನ್ನೋ, ನಮ್ಮ ದೋಣಿಗೆ ಮತ್ತಿನ್ಯಾರು ಸಿಕ್ಕಾರು ಎಂದು ಎಲ್ಲರ ಮುಖಭಾವಗಳನ್ನು ಅಳೆಯುತ್ತಾ ಬನ್ನಿ ಬನ್ನಿ ಎಂದು ಕರೆವ ಅಂಬಿಗರನ್ನೋ ನೋಡುತ್ತಾ ನೋಡುತ್ತಾ ಕೆಲವನ್ನು ಕ್ಯಾಮರಾದೊಳಗಿಳಿಸಿಕೊಳ್ಳುತ್ತಾ ನಡೆದಿದ್ದೆ. ನಿಜ ಹೇಳಬೇಕೆಂದರೆ, ಇಂಥದ್ದೆಲ್ಲವನ್ನೂ ಕ್ಯಾಮರಾದೊಳಗಿಳಿಸುವುದೇ ಈ ನಡಿಗೆಯ ಪರಮ ಉದ್ದೇಶವಾಗಿತ್ತು.

ಸೂರ್ಯ ನೆತ್ತಿಯ ಮೇಲಿದ್ದರೂ ತಂಪಿತ್ತು. ಹರಿಶ್ಚಂದ್ರ ಘಾಟಿನ ಬೆಂಕಿಯ ಬಿಸಿ ಆ ಪರಿಸರವನ್ನು ಕೊಂಚ ಬೆಚ್ಚಗಿರಿಸಿದ್ದು ಸತ್ಯವಾದರೂ, ಅದರಿಂದ ಹರಡಿದ್ದ ಹೊಗೆ ಚಳಿಗಾಲದ ಮಬ್ಬನ್ನು ಇನ್ನೂ ಮಬ್ಬಾಗಿಸಿ ಮಧ್ಯಾಹ್ನದಲ್ಲೂ ಒಂಥರಾ ಮೈಮುರಿದು ಆಕಳಿಸಿಬಿಡುವ ಅನ್ನುವಂತೆ ಮಾಡಿತ್ತು.

ಇವೆಲ್ಲವನ್ನು ದಾಟಿಕೊಂಡು ನಿಷಾದ ಘಾಟಿನ ಆ ಮೆಟ್ಟಿಲ ಬಳಿ ಇಳಿದು ಬರುತ್ತಿದ್ದೆನಷ್ಟೇ. ಎಲ್ಲಿಂದಲೋ ಇಂಪಾದ ಸಂಗೀತ. ಮೆದುವಾದ ಧ್ವನಿಯಲ್ಲಿ! ಒಂದು ಕ್ಷಣ ಮುಂದೆ ಕಾಲಿಟ್ಟವಳೂ ಅಲ್ಲೇ ನಿಂತುಬಿಟ್ಟೆ. ಎಲ್ಲಿಂದ ಎಲ್ಲಿಂದ ಎಂದು ಅತ್ತಿತ್ತ ತಿರುಗಿ ನೋಡಿದರೆ, ಊಹೂಂ ಗೊತ್ತಾಗುತ್ತಿಲ್ಲ. ಅಲ್ಲೇ ಒಂದಿಬ್ಬರು ಪುಟ್ಟ ಮಕ್ಕಳ ಕೈಯಲ್ಲಿ ಗಾಳಿಪಟ. ಮಗುವೊಂದಕ್ಕೆ ಅದನ್ನು ಹಾರಿಸಲು ಗೊತ್ತಿಲ್ಲದಿದ್ದರೂ ತಾನೇ ಹಾರಿಸಬೇಕೆಂಬ ಹಟ.

ನಿನಗೆ ಹೇಗೆ ಹಾರಿಸಬೇಕೆಂದು ಹೇಳಿಕೊಡುತ್ತೇನೆಂದು ತೋರಿಸಿಕೊಡುವ ಉತ್ಸಾಹದಲ್ಲಿ ಎಳೆಯುವ ಇನ್ನೊಂದು ಮಗುವೂ ಸೇರಿ ಇಬ್ಬರೂ ಹಗ್ಗ ಜಗ್ಗಾಡುತ್ತಿದ್ದರು. ಹಿನ್ನೆಲೆಯ ಸಂಗೀತದಿಂದ ಈ ಮಕ್ಕಳ ಜಗಳವೂ ಒಂದು ಚಿತ್ರಕಾವ್ಯದಂತೆ ಗೋಚರಿಸತೊಡಗಿತ್ತು.

ಅರೆ, ಸಂಗೀತ ಎಲ್ಲಿಂದ ಎಂದು ನಾನು ನಾಲ್ಕೂ ದಿಕ್ಕಿನಲ್ಲಿ ಕಣ್ಣರಳಿಸಿ, ಕಿವಿಯರಳಿಸಿ ನೋಡಿದ ಮೇಲೆಯೇ ತಿಳಿದದ್ದು, ಅಲ್ಲೇ ಸಾಲು ಸಾಲಾಗಿ ನಿಲ್ಲಿಸಿದ್ದ ದೋಣಿಗಳೆಡೆಯಿಂದ ಬರುತ್ತಿದೆ ಎಂದು. ದೋಣಿಯಲ್ಲೊಬ್ಬ ʻಅಂಬಿಗನೇ ಇರಬೇಕುʼ ಎಂದು ಅನಿಸುವಂಥ ಮನುಷ್ಯನೊಬ್ಬ ನದಿಯನ್ನು ದಿಟ್ಟಿಸುತ್ತಾ ತಾನು ಈ ಜಗತ್ತಿನಲ್ಲಿಯೇ ಇಲ್ಲವೇನೋ ಎಂಬ ತಲ್ಲೀನತೆಯಿಂದ ಒಬ್ಬನೇ ಬಹಳ ಇಂಪಾಗಿ ಹಾಡುತ್ತಿದ್ದ.

ಆತನ ಆಲಾಪಕ್ಕೂ, ಅಲ್ಲಿ ಸುತ್ತ ಮುತ್ತ ನಡೆಯುತ್ತಿದ್ದ ಚಟುವಟಿಕೆಗಳಿಗೂ ಯಾವುದಕ್ಕೂ ಒಂದಕ್ಕೊಂದು ಸಂಬಂಧವಿಲ್ಲಂದಂತೆ, ಅವೆಲ್ಲವೂ ಅವುಗಳ ಪಾಲಿಗೆ ನಿರಾಳವಾಗಿ ನಡೆಯುತ್ತಿದ್ದವು. ಹಾಗಾದರೆ, ಈತನ ಹಾಡು ಇಲ್ಲಿದ್ದವರ್ಯಾರಿಗೂ ಹೊಸತಲ್ಲ, ಇದು ದಿನಚರಿಯ ಒಂದು ಭಾಗ ಎಂಬುದು ಸರಿಯಾಗಿ ಗಮನಿಸಿದರೆ ಗೊತ್ತಾಗುವಂತಿತ್ತು. ನಾನು ಮಾತ್ರ ಬಿಟ್ಟ ಕಣ್ಣಿನಿಂದ ಆಗಿನಿಂದಲೇ ಅವನನ್ನೇ ನೋಡುತ್ತಾ ನಿಂತು ಬಿಟ್ಟಿರುವೆ ಎಂಬ ಸತ್ಯವೂ ಇಹಲೋಕಕ್ಕೆ ಬಂದ ಮೇಲೆ ಅರಿವಾಗತೊಡಗಿತು.

ಲೋಕ ಮರೆತು ಹಾಡುವವನನ್ನು ಮಾತನಾಡಿಸಿ ಅದಕ್ಕೆ ಭಂಗ ತರುವುದು ಬೇಡ, ಹಾಡು ಮುಗಿಯಲಿ, ಆಮೇಲೆ ಮಾತಾಡಿಸಿದರಾಯಿತು ಎಂಬಂತೆ ಅಲ್ಲೇ ದೂರದಲ್ಲೇ ಮೆಟ್ಟಿಲ ಮೇಲೆ ಕೂತು ಕೇಳುತ್ತಿದ್ದೆ. ಆತ ಆಗೀಗ ಹಾಡು ನಿಲ್ಲಿಸಿ ಎತ್ತಲೋ ನೋಡಿ ಸುಮ್ಮನಾಗುತ್ತಿದ್ದ. ಮತ್ತೆ ಹಾಡು ಶುರು.

ಬೀಸುವ ಗಾಳಿಗೆ ಜೊತೆಗೆ ಹರಿವ ಗಂಗೆಯಂತೆ ಅಲೆಅಲೆಯಾಗಿ ಏರಿಳಿಯುವ ಧ್ವನಿ, ಅದಕ್ಕೆ ಪಕ್ಕವಾದ್ಯವೋ ಎಂಬಂತೆ ಆಗೀಗ ಹಿನ್ನೆಲೆಯಲ್ಲಿ ಸಾಗಿಹೋಗುವ ದೋಣಿಗಳ ಚುಳುಂಪುಳುಂ ಆ ಮಧ್ಯಾಹ್ನದಲ್ಲೊಂದು ಚಂದದ ಜಗತ್ತನ್ನೇ ಸೃಷ್ಟಿ ಮಾಡಿತ್ತು. ಮಧ್ಯದಲ್ಲಿ ಆಗೀಗೊಮ್ಮೆ ಹಾಡಿನ ಮಧ್ಯೆ ಸಭಿಕರಿಂದ ದಕ್ಕುವ ಕರತಾಡನದಂತೆ ಸೈಬೀರಿಯನ್‌ ಸೀಗಲ್‌ಗಳು ಹೋ ಎಂದು ಗಲಾಟೆ ಮಾಡುತ್ತಿದ್ದವು. ಆಗ ಆತ ಹಾಡು ನಿಲ್ಲಿಸಿ ಜಗಳವಾಡುತ್ತಿದ್ದ ಮಕ್ಕಳನ್ನು ನೋಡಿ ಸಣ್ಣಗೆ ನಕ್ಕು, ಮತ್ತೆ ದೋಣಿಯಲ್ಲಿ ಕೂತು ಒಂದೆರಡು ಸಾಲು ಹಾಡಿ ಮೌನವಾಗುತ್ತಿದ್ದ. ಹೀಗೆ ಸ್ವಲ್ಪ ಹೊತ್ತು ನಡೆಯಿತು.

ಮಾತನಾಡಿಸಲೇ ಎಂದು ಒಂದೆರಡು ಹೆಜ್ಜೆ ಮುಂದಿಟ್ಟು, ಹಿಂಜರಿದು ಮತ್ತೆ ಅಲ್ಲೆ ನಿಂತುಬಿಟ್ಟೆ. ಯಾರೋ ಒಂದಿಬ್ಬರು ಆತನ ಸ್ನೇಹಿತರೇನೋ ಎಂಬಂತೆ ಆತನೊಂದಿಗೆ ನಗುತ್ತಾ ಮಾತನಾಡುತ್ತಾ ದೋಣಿ ಹತ್ತಿ ಕೂತರು. ಆತ ದೋಣಿ ಹಗ್ಗ ಬಿಚ್ಚಲೆಂಬಂತೆ ಬಂದಾಗ, ಅರೆ, ಈಗ ನಾನು ಮಾತನಾಡಿಸದೇ ಇದ್ದರೆ, ಈತ ಮತ್ತೆ ಸಿಗಲಾರ.

ದೋಣಿ ನಡೆಸುತ್ತಾ ಹೋಗಿ ಬಿಡುತ್ತಾನೆ ಎಂದು ಅರಿವಾದದ್ದೇ ತಡ, ಆತನನ್ನು ಕರೆಯಲೆಂಬಂತೆ ಕೈ ಮುಂದೆ ಮಾಡಿ, ನಾನು ನಾಲ್ಕು ಹೆಜ್ಜೆ ಮುಂದಿಟ್ಟೆ. ನನ್ನ ಕಂಡ ತಕ್ಷಣ ಬನ್ನಿ ಎಂಬಂತೆ ನನಗೆ ಹತ್ತಲು ಅನುಕೂಲವಾಗುವಂತೆ ದೋಣಿಯನ್ನು ಕಿನಾರೆಗೆ ತಾಗಿಸಿ ನಿಲ್ಲಿಸಿದ. ನಮ್ಮ ನಡುವೆ ಒಂದು ಮಾತೂ ವಿನಿಮಯವಾಗದೆ, ಸೀದಾ ನಾನು ದೋಣಿ ಹತ್ತಿಬಿಟ್ಟಿದ್ದೆ. ನನ್ನ ಹಿಂದೆ ಮಹೇಶನೂ.

ಅಷ್ಟರವರೆಗೆ ಅರ್ಧ ಗಂಟೆಯಿಂದ ಅದ್ಯಾವುದೋ ಆಫೀಸು ಕಾಲ್‌ನಲ್ಲಿ ಕಳೆದುಹೋಗಿದ್ದ ಮಹೇಶನಿಗೆ ಇದ್ಯಾವುದೂ ಗೊತ್ತೇ ಆಗಿರಲಿಲ್ಲ. ಇನ್ನೆರಡು ಘಾಟ್‌ಗಳಿಂದ ಫೋನು ಕಿವಿಗಿಟ್ಟು ನಾನು ನಡೆದಲ್ಲಿ ಹಿಂದಿಂದೆ ಬಂದಿದ್ದ ಅವನಿಗೆ, ಈ ಹಾಡಿನ ಹಿಂದೆ ನಾನು ಬಿದ್ದಿದ್ದು ಗೊತ್ತೇ ಆಗಿರಲಿಲ್ಲ. ನಾನು ಹತ್ತಿದೆ ಎಂದು ಅವನೂ ಹತ್ತಿಬಿಟ್ಟಿದ್ದ. ಕೂತ ತಕ್ಷಣ ದೋಣಿ ಹೊರಟಿತು.

ದೋಣಿಯ ಒಂದು ಮೂಲೆಯಲ್ಲಿ ತನ್ನೆರಡೂ ಕೈಗಳನ್ನು ಬಳಸಿ ಒಂದೇ ಲಯದಲ್ಲಿ ಹುಟ್ಟು ಹಾಕುತ್ತಿದ್ದ ಆ ಹಾಡುಗಾರ, ಎದುರು ಕೂತ ವಿಚಿತ್ರ ಮುಖ/ಭಾವಗಳ ಮೂರ್ನಾಲ್ಕು ಮಂದಿ, ಈ ಬದಿ ಏನು ನಡೆಯುತ್ತಿದೆಯೆಂದು ತಿಳಿಯದೆ ಕೂತ ನಾನು, ನಾನೆಲ್ಲ ಮಾತಾಡಿ ಬಂದಿದ್ದೇನೆಂದು ನೆಮ್ಮದಿಯಲ್ಲಿ ಫೋನಿನಲ್ಲಿ ಮುಳುಗಿಹೋಗಿದ್ದ ಮಹೇಶ. ಒಂದು ಕ್ಷಣ ಇಲ್ಲಿ ನಡೆಯುತ್ತಿರುವುದಾದರೂ ಏನು ಎಂದು ಅರ್ಥವಾಗಲಿಲ್ಲ. ಆಗಲೇ ದೋಣಿ ತೀರ ಬಿಟ್ಟು ಮುಂದೆ ಬಂದಾಗಿತ್ತು.

ಕಾಲ್‌ ಕಟ್‌ ಮಾಡಿ ಮಹೇಶ ನನ್ನ ಮುಖ ನೋಡಿದ. ಏನ್‌ ಕಥೆ ಇದು ಎಂಬಂತೆ. ನಾನೂ, ʻಗೊತ್ತಿಲ್ಲ ಮಾರಾಯ. ಏನೂ ಮಾತನಾಡದೆ ದೋಣಿ ಹತ್ತಿಬಿಟ್ಟಿದ್ದೇನೆ. ಈತ ಚಂದಕ್ಕೆ ಹಾಡುತ್ತಿದ್ದ. ಅಷ್ಟೇ ವಿಷಯ. ಅವರೂ ಏನೂ ಕೇಳಲಿಲ್ಲ, ನಾನೂ ಏನೂ ಹೇಳಲಿಲ್ಲʼ ಎಂದು ಮೆಲ್ಲಗೆ ಪಿಸುಗುಟ್ಟಿದೆ. ಇದೊಳ್ಳೆ ಕಥೆ ನಿಂದು! ನಾವು ಹೋಗ್ತಿರೋದಾದ್ರೂ ಎಲ್ಲಿಗೆ? ಎಂದ. ಅದೂ ಗೊತ್ತಿಲ್ಲ ಎಂದೆ. ಆಗಲೇ ಮುಂದೆ ಕೂತ ಮೂರು ಮಂದಿಯ ಮುಖ ನೋಡಿಯೇ, ನನಗೆ ಸಣ್ಣಗೆ ಭಯವೂ ಶುರುವಾಗಿತ್ತು. ʻಅಲ್ವೇ, ನಾ ನೀ ಮಾತಾಡಿಯೇ ಹತ್ತಿದ್ದು ಅಂದ್ಕೊಂಡೆʼ ಎನ್ನುತ್ತಾ ಮಹೇಶ ತಲೆ ಮೇಲೆ ಕೈಯಿಟ್ಟ.

ಅಷ್ಟರಲ್ಲಿ, ತೀರದ ಗದ್ದಲ ಕಿವಿಯಿಂದ ಮರೆಯಾಗುತ್ತಾ ಗಂಗೆಯೊಂದಿಗೆ ದೋಣಿ ನಡೆಸುತ್ತಿದ್ದ ಚಳಂಪಳಂ ಎಂಬ ಹುಟ್ಟು ಸಂವಾದ ಮಾತ್ರ ಕೇಳಲು ಶುರುವಾಗಿತ್ತು. ಒಂದು ಧ್ಯಾನದಿಂದೆಂಬಂತೆ ಹುಟ್ಟು ಹಾಕುತ್ತಿದ್ದ ಆತನ ಮುಖಭಾವವೇ ಆತ ಹಾಡಲು ತಯಾರಿ ಮಾಡುತ್ತಿರುವುದು ಗೊತ್ತಾಗುತ್ತಿತ್ತು. ಸಣ್ಣಗೆ ಶುರುವಾಗಿದ್ದ ಭಯ ಒಮ್ಮೆಗೆ ನಿರಾಳವಾದಂತಾಯಿತು.

ನಾನು, ಮೌನ ಮುರಿದು, ʻಆಗಿನಿಂದಲೇ ನಿಮ್ಮನ್ನು ಗಮನಿಸುತ್ತಿದ್ದೆ. ಹಾಡು ಕೇಳಿ ತುಂಬ ಹೊತ್ತು ಅಲ್ಲೇ ದೂರದಲ್ಲಿ ನಿಂತೆ. ಇನ್ನೂ ಹಾಡು ಕೇಳಬಹುದೇನೋ ಅಂತ ಹತ್ತಿರ ಬಂದೆ. ನಿಮ್ಮ ಹೆಸರು? ಎಂದೆ. ಆತ, ತನಗೆ ಅರ್ಥವಾಯಿತೆಂಬಂತೆ ಸಣ್ಣಗೆ ನಕ್ಕು ʻಭೌಮೆ ನಿಷಾದʼ ಎಂದಷ್ಟೆ ಉತ್ತರಿಸಿದ. ಬಾಕಿ ಮಾತಿಲ್ಲ. ಚುಟುಕು ಉತ್ತರ ನೀಡುವ ಈತನ ಹಾಡಿನಂತೆ ಹೆಸರೂ ಎಷ್ಟು ಸೊಗಸಾಗಿದೆಯಲ್ಲ ಎನಿಸಿತು.

ಅಷ್ಟರಲ್ಲಿ, ಎದುರು ಕೂತಿದ್ದ ಮೂವರಲ್ಲಿ ಒಬ್ಬಾತ ಬಾಯಿ ತೆರೆದು, ʻನಿಮಗೆ ಬಹುಶಃ ಗೊತ್ತಿಲ್ಲ. ಇವರು ವಾರಣಾಸಿಯಲ್ಲಿ ಸುಪ್ರಸಿದ್ಧರು. ನಿಷಾದದ ಈ ನಿಷಾದರನ್ನು ಗೊತ್ತಿಲ್ಲದವರಿಲ್ಲ. ನೀವು ಅಲ್ಲಿಈಗ ಕೇಳಿದ್ದೆಲ್ಲ ಏನೂ ಇಲ್ಲ. ಮುಂಜಾವಿನಲ್ಲಿ ಈ ನಿಷಾದ ಘಾಟಿನಲ್ಲಿ ಇವರು ಹಾಡುವುದನ್ನ ಕೇಳಬೇಕು.

ಆಗಷ್ಟೆ ನಿಮಗೆ ಇವರ ನಿಜವಾದ ಸಂಗೀತ ಅರ್ಥವಾದೀತುʼ ಎಂದರು. ಇದ್ಯಾವುದನ್ನೂ ತಲೆಗೆ ಹಾಕಿಕೊಳ್ಳದ ಅಂಬಿಗ ನಿಷಾದ, ʻಯೇ ಹೇ ಬನಾರಸ್…‌ ಬನಾ ಹುವಾ ರಸ್‌ ಹೇ… ಅಂತ ಶುರು ಮಾಡಿಯೇ ಬಿಟ್ಟರು. ಗಂಗೆಯ ಮೇಲೆ ನಿಧಾನವಾಗಿ ಹುಟ್ಟು ಹಾಕುತ್ತಾ ಎದುರು ಕಾಣುತ್ತಿದ್ದ ಸಾಲು ಸಾಲು ಘಾಟ್‌ಗಳನ್ನು ನೋಡುತ್ತಾ ನಿಷಾದರ ಸಂಗೀತ ಕೇಳುತ್ತಾ ಹಾಗೆ ಆಗಸಕ್ಕೆ ಮುಖ ಮಾಡಿ ಅಲ್ಲೇ ಗಂಟೆಗಟ್ಟಲೆ ಕೂತು ಬಿಡಬಹುದು ಅನ್ನಿಸುವಂತಿತ್ತು ಆ ಗಳಿಗೆ.

ಈ ಭೌಮೆ ನಿಷಾಧ ಎಲ್ಲೂ ಸಂಗೀತ ಕಲಿತಿಲ್ಲ. ಸಣ್ಣವನಾಗಿದ್ದಾಗಿನಿಂದ ತನ್ನ ಖುಷಿಗೆ ಹಾಡಿ ಹಾಡಿ ಕಲಿತದ್ದು. ತನ್ನ ಕುಟುಂಬದಲ್ಲೂ ಯಾರೂ ಸಂಗೀತಕಾರರಿಲ್ಲ. ಆದರೂ ಸಂಗೀತವೆಂದರೆ ಪ್ರಾಣ. ಒಂದಕ್ಷರ ಶಾಲೆಗೆ ಹೋಗಿ ಓದು ಬರಹವೂ ಕಲಿತಿಲ್ಲ. ತನ್ನ ಮಕ್ಕಳನ್ನು ಅಲ್ಪ ಸ್ವಲ್ಪ ಶಾಲೆಗೆ ಕಳಿಸಿದ್ದು ಬಿಟ್ಟರೆ, ಮಕ್ಕಳಿಗೆ ಸಂಗೀತದಲ್ಲಿ ರುಚಿಯಿಲ್ಲ. ಗಂಗಾ ತೀರದಲ್ಲಿ ಗದ್ದೆ ಕೆಲಸ ಮಾಡಿಕೊಂಡು ಅವರು ಅವರ  ಹೊಟ್ಟೆ ಹೊರೆಯುತ್ತಾರೆ. ಭೌಮೆ ಮಾತ್ರ ತಲೆತಲಾಂತರದಿಂದ ಬಂದ ಅಂಬಿಗನ ಕೆಲಸವನ್ನೇ ಮಾಡುತ್ತಾರೆ. ಜೊತೆಗೆ ಖುಷಿಗೆ ಸಂಗೀತ ಇದ್ದೇ ಇದೆ.

ಹಾಡುತ್ತಾ ಹಾಡುತ್ತಾ, ನಿಧಾನವಾಗಿ ಮಾತನಾಡಲು ಆರಂಭಿಸಿದ ಭೌಮೆ, ʻಈ ಗಂಗಾಮಾತೆಯೇ ನನಗೆ ಎಲ್ಲವೂ. ಗಂಗೆಯ ತೀರದಲ್ಲಿ ಬಂದು ಕೂತು ಹಾಡುವುದರಲ್ಲಿ ಸಿಕ್ಕುವ ಆನಂದ ನನಗೆ ಬೇರಾವುದರಲ್ಲೂ ಸಿಗುವುದಿಲ್ಲ. ದೋಣಿಯೂ, ಗಂಗೆಯೂ, ನಾನೂ ಇವಿಷ್ಟೆ ನನ್ನ ಪ್ರಪಂಚ.

ಬೆಳ್ಳಂಬೆಳಗ್ಗೆ ದೋಣಿ ಹಿಡಿದುಕೊಂಡು ಬಂದು ಹಾಡುತ್ತಾ ಹುಟ್ಟು ಹಾಕುವುದು, ತೀರದಲ್ಲಿ ಕೂತು, ಗಂಗೆ ನಿಶ್ಯಬ್ಧದೊಂದಿಗೆ ನನಗೆ ನಾನೇ ಆಭ್ಯಾಸ ಮಾಡಿಕೊಳ್ಳುವುದು ನನ್ನ ದಿನಚರಿ. ಬಾಕಿ ಸಮಯದಲ್ಲಿ, ಜನರನ್ನು ಈ ದಡದಿಂದ ಆ ದಡಕ್ಕೆ, ಆ ದಡದಿಂದ ಈ ದಡಕ್ಕೆ ಹೊತ್ತು ಹುಟ್ಟು ಹಾಕುತ್ತೇನೆ. ಈ ಸಂದರ್ಭ, ಕೆಲವರು ನನ್ನ ಈ ಅಭಿರುಚಿ ಗುರುತಿಸಿ ಸಂಗೀತ ಕೇಳಿದ್ದಾರೆ. ಕೇಳುವವರಿಗೆ ನಾ ಹಾಡುತ್ತೇನೆ. ಕೇಳಲಿ ಎಂದು ನಾನು ಹಾಡುವುದಿಲ್ಲ. ನಾನು ನನಗಾಗಿ, ನನ್ನ ಸಂತೋಷಕ್ಕಾಗಿ ಹಾಡುತ್ತಿರುತ್ತೇನೆ ಎಂದು ಚುಟುಕಾಗಿ ಹೇಳಿ ಮತ್ತೊಂದು ತುಮ್ರಿಯನ್ನು ಗುನುಗತೊಡಗಿದ.

ʻನಿಮ್ಮ ವಯಸ್ಸೆಷ್ಟು?ʼ ಎಂದೆ. ʻಒಂದು ಅರುವತ್ತು ಇರಬಹುದೇನೋʼ ಎಂದ. ಹುಟ್ಟಿದ ಇಸವಿಯೂ ಗೊತ್ತಿಲ್ಲದ ಓದು ಬರಹದ ಗಂಧಗಾಳಿಯೂ ಇಲ್ಲದ ಈ ನಿಷಾದ, ಗಂಗೆಯ ತೀರದಲ್ಲೇ ಕೂತು ಕೂತು ಹಾಡಿ ಹಾಡಿಯೇ ಹಲವಾರು ತುಮ್ರಿ ರಚಿಸಿದ್ದಾರೆ ಎಂದರೆ ನಂಬಲೇಬೇಕು. ಇದೊಂದು ಕೇಳಿ, ನಾನೇ ಬರೆದ ತುಮ್ರಿ ಎನ್ನುತ್ತಾ, ʻಪಿಯಾ ಪಿಯಾ..ʼ ಇನ್ನೊಂದನ್ನು ಶುರು ಮಾಡಿದರು.

ಹೀಗೆ, ಒಂದರ್ಧ ಗಂಟೆ ಗಂಗೆಯ ಮೇಲೆ ಗೊತ್ತು ಗುರಿಯಿಲ್ಲದೆ  ಹುಟ್ಟು ಹಾಕುತ್ತಾ ಒಂದಾದ ಮೇಲೆ ಒಂದೊಂದರಂತೆ ಮೂರ್ನಾಲ್ಕು ಹಾಡು ಕೇಳಿ ನಿಧಾನಕ್ಕೆ ಆತ ದೋಣಿಯನ್ನು ತೀರದೆಡೆಗೆ ತಿರುಗಿಸಿದಾಗಲೇ ಅರ್ಧ ಗಂಟೆ ಕಳೆದದ್ದು ಅರಿವಿಗೆ ಬಂದಿದ್ದು. ಎಲ್ಲ ಮರೆತು ಕೇಳುವ ನಾವು, ಮುಗಿದ ಮೇಲೆ ನಮ್ಮ ʻವಾಹ್‌ʼ ಇವಿಷ್ಟೇ ಸಾಕಾಗಿತ್ತು, ಹಾಡಲು.

ಈ ವಾರಣಾಸಿಯ ಗಂಗೆಗೆ ಸಂಗೀತ ಹೊಸತೇನಲ್ಲ. ಗಂಗೆ ಸಾಕಷ್ಟು ಸಂಗೀತ- ನಾಟ್ಯ ದಿಗ್ಗಜರನ್ನು ತನ್ನ ಮಡಿಲಿನಲ್ಲೇ ಆಡಿಸಿ ಬೆಳೆಸಿದ್ದಾಳೆ. ಪುರಾಣ ಕಾಲದಿಂದಲೂ ಸಂಗೀತಕ್ಕೂ ವಾರಣಾಸಿಗೂ ಬಹುದೊಡ್ಡ ನಂಟು.  ಸಾಕ್ಷಾತ್‌ ಶಿವನೇ ನಿರ್ಮಿಸಿದ ಎಂದು ಹೇಳುವ ಈ ವಾರಣಾಸಿ ಎಂಬ ಪಟ್ಟಣಕ್ಕೆ ಸಂಗೀತ ಹಾಗೂ ನೃತ್ಯ ತನ್ನ ಸಂಸ್ಕೃತಿಯ ಒಂದು ಭಾಗವೇ ಆಗಿವೆ. ಪುರಾಣ ಕಾಲದಲ್ಲಿ ಗಂಧರ್ವರೂ, ಕಿನ್ನರರೂ ಇದೇ ನೆಲದಲ್ಲಿ ಸಂಗೀತವನ್ನೇ ಉಸಿರಾಡಿಕೊಂಡು ವಿಹರಿಸುತ್ತಿದ್ದರು ಎಂಬ ಉಲ್ಲೇಖವೂ ಇದೆ. ‌ಪುರಾಣದ ವಿಚಾರ ಬಿಟ್ಟು ನೋಡಿದರೂ, ವಾರಣಾಸಿಯ ಸಂಗೀತಕ್ಕೆ ಬಹುದೊಡ್ಡ ಇತಿಹಾಸವಿದೆ.

ಇಲ್ಲಿನ ಪ್ರಾಚೀನ ದೇವಾಲಯಗಳಲ್ಲಿ ಕೆತ್ತಿರುವ ಸಂಗೀತ ನುಡಿಸುವ ಅಪ್ಸರೆಯರ ಮೂರ್ತಿಗಳೂ ಇದಕ್ಕೆ ಪುಷ್ಠಿ ನೀಡುತ್ತವೆ. ಅಲ್ಲದೆ, ಮಧ್ಯಕಾಲೀನ ಭಾರತದಲ್ಲಿ ವ್ಯಾಪಿಸಿದ್ದ ಬಹುದೊಡ್ಡ ಚಳುವಳಿಯ ವೈಷ್ಣವ ಭಕ್ತಿ ಚಳುವಳಿಯ ಕೇಂದ್ರ ಸ್ಥಾನವೂ ಇದೇ ವಾರಣಾಸಿ. ಸಾಹಿತ್ಯವೂ ಸಂಗೀತವೂ ಈ ಸಂದರ್ಭದಲ್ಲಿ ಉಚ್ಛ್ರಾಯ ಸ್ಥಿತಿ ತಲುಪಿದ್ದುದು ತಿಳಿದ ವಿಚಾರವೇ. ಆ ಕಾಲದ ಸಂತ ಕಬೀರ, ತುಲಸೀದಾಸ, ರವಿದಾಸ ಎಲ್ಲರೂ ವಾರಣಾಸಿಯವರೇ.

೧೬ನೇ ಶತಮಾನದಿಂದಲೇ ವಾರಣಾಸಿಯಲ್ಲಿ ಸಾಕಷ್ಟು ಪ್ರಾತಿನಿಧ್ಯ ಪಡೆಯುತ್ತಾ ಬಂದ ಶಾಸ್ತೀಯ ಸಂಗೀತ, ಮೊಘಲರ ಕಾಲದಲ್ಲಿ ಸಂಗೀತ ಉತ್ಸವಗಳ ಮೂಲಕವೂ ಜನಪ್ರಿಯತೆ ಪಡೆಯಿತು. ಗಂಗೆಯಲ್ಲಿ ತೇಲುವ ದೋಣಿಗಳಲ್ಲಿ ನಡೆಯುತ್ತಿದ್ದ ಸಂಗೀತ ಉತ್ಸವಗಳು ಇದಕ್ಕೆ ಸಾಕ್ಷಿ. ಝೂಲಾ, ಝೂಮರ್‌, ಕಜ್ರಿ, ದಂಗಲ್‌ ಮುಂತಾದ ಉತ್ಸವಗಳು ಆರಂಭವಾಗಿ ಈಗಲೂ ಆ ಸಂಸ್ಕೃತಿ ಮುಂದುವರಿದಿದೆ. ಈಗಲೂ ʻದ್ರುಪದ್‌ ಮೇಳʼ ಶಾಸ್ತ್ರೀಯ ಸಂಗೀತೋತ್ಸವ ಪ್ರತಿ ಮಾರ್ಚ್‌/ಏಪ್ರಿಲಿನಲ್ಲಿ ತುಲಸೀ ಘಾಟ್‌ನಲ್ಲಿ ನಡೆಯುತ್ತದೆ.

ಸಂಕಟ ಮೋಚನ ಸಂಗೀತೋತ್ಸವ ಸೇರಿದಂತೆ ಇನ್ನೂ ಹಲವು ಉತ್ಸವಗಳು ಹಬ್ಬ ಹರಿದಿನಗಳ ವಿಶೇಷ ಸಂದರ್ಭಗಳಲ್ಲಿ ಎಡೆಬಿಡದೆ ನಡೆಯುತ್ತಲೇ ಇರುತ್ತವೆ. ಮೊಘಲರ ಕಾಲದಲ್ಲಿ, ಇಲ್ಲಿನ ಮುಸ್ಲಿಂ ಸಂಗೀತಗಾರರು ತಪ್ಪ ಎಂಬ ತಮ್ಮದೇ ಲಘು ಶಾಸ್ತ್ರೀಯ ಶೈಲಿಯನ್ನು ಆರಂಭಿಸಿ ಪ್ರಸಿದ್ಧಗೊಳಿಸಿದರು. ಕಾಶಿಯದ್ದೇ ಹೊಸ ಸಂಗೀತ ಶೈಲಿಯೂ ಬೆಳೆದು, ತುಮ್ರಿ, ಕಜ್ರಿ, ದಾದ್ರ, ಚೈತಿ, ಭೈರವಿ, ಘಾಟೋ ಮುಂತಾದ ಪ್ರಕಾರಗಳು ಹುಟ್ಟಿಕೊಂಡವು. ತಬಲಾದಲ್ಲಿ ಬನಾರಸ್‌ ಘರಾನಾ ಹುಟ್ಟಿಕೊಂಡಿತು. ಪಂ.ಕಿಶನ್‌ ಪ್ರಸಾದ್‌, ಪಂ.ಸಾಮ್ತಾ ಪ್ರಸಾದ್‌, ಕುಮಾರ್‌ ಬೋಸ್‌ ಮುಂತಾದವರೆಲ್ಲ ಈ ಘರಾನದಿಂದ ಪ್ರಸಿದ್ಧರಾದರು.

ಭಾರತ ರತ್ನ ಭಾಜನರಾದ ಶಹನಾಯ್‌ ಮಾಂತ್ರಿಕ ಉಸ್ತಾದ್ ಬಿಸ್ಮಿಲ್ಲಾ ಖಾನ್‌, ಪಂ. ರವಿಶಂಕರ್‌ ಕೂಡಾ ವಾರಣಾಸಿ ಮಣ್ಣಿನವರೇ. ಇವರಷ್ಟೇ ಅಲ್ಲದೆ, ಶಾಸ್ಸ್ತ್ರೀಯ ಸಂಗೀತ ಕಲಾವಿದರಾದ ಗಿರಿಜಾ ದೇವಿ, ಸಿತಾರಾ ದೇವಿ, ಸರೋದ್‌ ವಾದಕ ಪಂ. ವಿಕಾಸ್‌ ಮಹಾರಾಜ್‌, ನಾಟ್ಯ ಗುರು (ಕಥಕ್) ಬೃಜ್ ಮಹಾರಾಜ್‌ ಹೀಗೆ ಪಟ್ಟಿ ಉದ್ದಕ್ಕೆ ಬೆಳೆಯುತ್ತಾ ಹೋಗುತ್ತದೆ.

ದೇಶದ ಅತ್ಯುನ್ನತ ಗೌರವಗಳಾದ ಭಾರತ ರತ್ನ, ಪದ್ಮ ವಿಭೂಷಣಗಳನ್ನೆಲ್ಲ ತನ್ನ ಮಡಿಲಿಗೆ ಹಾಕಿಕೊಂಡಿರುವ ಈ ವಾರಣಾಸಿ‌ ಯುನೆಸ್ಕೋದ ಕ್ರಿಯೇಟಿವ್‌ ಸಿಟೀಸ್‌ ನೆಟ್ವರ್ಕಿನ ಸಿಟೀಸ್‌ ಆಫ್‌ ಮ್ಯೂಸಿಕ್‌ನಡಿ ಸ್ಥಾನ ಪಡೆದ ಭಾರತದ ಎರಡೇ ನಗರಗಳ ಪೈಕಿ ಒಂದು ಎಂಬುದೂ ಹೆಮ್ಮೆಯೇ.

ಇಂತಹ ಘಟಾನುಘಟಿಗಳ ಊರಿನಲ್ಲಿ ತನ್ನ ಪಾಡಿಗೆ ತಾನೇ ಕಲಿತುಕೊಂಡು, ತನ್ನ ಖುಷಿಗೆ ಹಾಡಿಕೊಂಡಿರುವ, ತನ್ನ ದೋಣಿಯಲ್ಲಿ ಕುಳಿತು ಸಂಗೀತ ಕೇಳಿ ಖುಷಿ ಪಡುವ ಮಂದಿಯಿಂದಲೇ ಸಂತೃಪ್ತಿ ಕಾಣುವ, ಈ ನಿಷಾದ ಎಂಬ ಏಕಲವ್ಯ ನನಗೆ ಇನ್ನೂ ಅಚ್ಚರಿ ಹುಟ್ಟಿಸಿದ್ದು ಅರ್ಧ ಗಂಟೆ ನದಿಯಲ್ಲಿ ಹಾಡು ಹೇಳಿ, ತೀರಕ್ಕೆ ಮತ್ತೆ ತಂದು ಬಿಟ್ಟು ಸೀದಾ ಕೈಮುಗಿದು ಹೊರಡಲನುವಾದಾಗ. ಅರೆ, ಇಷ್ಟು ಹೊತ್ತು ಸವಾರಿ ಮಾಡಿಸಿದ್ದಕ್ಕಾದರೂ ದುಡ್ಡು ಕೇಳಬೇಕಲ್ವಾ ಅನಿಸಿದರೆ, ಆತ ಹುಟ್ಟು ಹಿಡಿದು ಮತ್ತೆ ಹೊರಟೇಬಿಡುತ್ತಿದ್ದ. ಮತ್ತೆ ಕರೆದೆ. ನೋಟೊಂದನ್ನು ಕೈಗಿಟ್ಟು, ʻಹೀಗೇ ಹಾಡ್ತಾ ಇರಿ. ಬಹಳ ಖುಷಿಯಾಯ್ತುʼ ಎಂದೆ. ಖುಷಿಯಿಂದ ಕೈಜೋಡಿಸಿದ. ʻನಿಮ್ಮ ನಂಬರ್‌ ಕೊಡ್ತೀರಾ?ʼ ಎಂದೆ. ತನ್ನ ಫೋನ್‌ ನನ್ನ ಕೈಗೆ ಕೊಟ್ಟು, ʻನೋಡಿಕೊಳ್ಳಿ, ನನಗೆ ನೆನಪಿರೋದಿಲ್ಲʼ ಎಂದ.

ಆತನ ದೋಣಿ ಮತ್ತೆ ಹೊರಟಿತು. ನನಗೆ ಕವಿ ಜಿ.ಎಸ್.‌ ಶಿವರುದ್ರಪ್ಪ ಅವರ, ʻ…ಕೇಳುವಿರಿ ಸಾಕೆನಗೆ ಅದುವೆ ಬಹುಮಾನ, ಹಾಡುಹಕ್ಕಿಗೆ ಬೇಕೆ ಬಿರುದು ಸನ್ಮಾನ…ʼ ಸಾಲು ನೆನಪಾಯಿತು!

‍ಲೇಖಕರು ರಾಧಿಕ ವಿಟ್ಲ

March 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಕೀರ್ತಿ

    ನಿಷಾದ ಘಾಟಿನ ಈ ನಿಷಾದ ಬಹು ಸೊಗಸಾಗಿ ಮೂಡಿ ಬಂದಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: