ಮೂಲ: ಆಲಿಸ್ ವಾಕರ್

ಕನ್ನಡಕ್ಕೆ : ನಿವೇದಿತಾ ಎಚ್
ಆಲಿಸ್ ವಾಕರ್ ಒಬ್ಬ ಆಫ್ರಿಕನ್ ಅಮೆರಿಕನ್ ಲೇಖಕಿ. ೧೯೪೪ ರಲ್ಲಿ ಜಾರ್ಜಿಯಾದಲ್ಲಿ ಜನಿಸಿದ ಈಕೆ, ಪುಲಿಟ್ಜರ್ ಪ್ರಶಸ್ತಿ ಪಡೆದ ಮೊದಲ ಆಫ್ರೋ ಅಮೆರಿಕನ್ ಮಹಿಳಾ ಬರಹಗಾರ್ತಿ. ಪ್ರಸ್ತುತ ಕವನದಲ್ಲಿ, ತನ್ನ ತಲೆಮಾರಿನ ಮಹಿಳೆಯರು ತಲೆ ಎತ್ತಿ ನಡೆಯಲು, ತನ್ನಮ್ಮನ ತಲೆಮಾರಿನ ಮಹಿಳೆಯರು ಇಟ್ಟ ಹೆಜ್ಜೆಗಳ ಬಗ್ಗೆ ಆಲಿಸ್ ವಾಕರ್ ಹೆಮ್ಮೆ, ಅಚ್ಚರಿ ಮತ್ತು ಪ್ರೀತಿಯಿಂದ ಬರೆಯುತ್ತಾಳೆ.
ಅಂದು ಇದ್ದರು ಮಹಿಳೆಯರು
ನನ್ನ ಅಮ್ಮನ ತಲೆಮಾರಿನವರು
ಗಡುಸು ದನಿಯವರು- ಗಟ್ಟಿ
ಹೆಜ್ಜೆಯಿಟ್ಟವರು
ತಮ್ಮ ತಮ್ಮ ಮುಷ್ಠಿಗಳಿಂದ
ಕೈಗಳಿಂದ
ಹೇಗೆ ಹೊಡೆದು
ಉರುಳಿಸಿ ಬಿಟ್ಟರು
ಮುಚ್ಚಿದ ಬಾಗಿಲುಗಳನ್ನ
ಜೊತೆಜೊತೆಗೆ ಬಿಳಿಯ
ಅಂಗಿಗಳಿಗೆ
ಗಂಜಿ ಹಾಕಿ
ಇಸ್ತ್ರಿಯನ್ನೂಮಾಡಿದರು
ಅದು ಹೇಗೆ
ಅವರು
ಸೈನ್ಯವನ್ನ ಮುನ್ನಡೆಸಿದರು
ಸೆರಗುಕಟ್ಟಿದ ಸೇನಾನಾಯಕಿಯರು
ಹುದುಗಿಸಿಟ್ಟ ಬಾಂಬುಗಳು
ಹಳ್ಳಕೊಳ್ಳ ಖೆಡ್ಡಾಗಳ ದಾಟಿ

ಕಂಡುಹಿಡಿದೇ ಬಿಟ್ಟರು
ಪುಸ್ತಕಗಳನ್ನ
ಓದಿನ ಮೇಜುಗಳನ್ನ
ನಮಗಾಗಿ
ಒಂದು ಸ್ಥಾನವನ್ನ
ಹೇಗೆ
ತಿಳಿದಿತ್ತು ಅವರಿಗೆ
ನಾವು ತಿಳಿದಿರಲೇಬೇಕಾದ
ವಿಷಯಗಳ ಬಗ್ಗೆ?
ಗೊತ್ತಿರಲೇ ಇಲ್ಲ
ಅವರಿಗೆ…
ಅಂತಹುದೊಂದು
ಪ್ರಪಂಚದ
ಇರವಿನ ಬಗ್ಗೆ!






0 Comments