ನಿವೇದಿತಾ ಎಚ್
ಜೀವನದ ದಿನಮಾನದ ಅನಿವಾರ್ಯ ಜಂಜಾಟಗಳಲ್ಲಿ
ಅಡುಗೆ ಪಾತ್ರೆ ಬಟ್ಟೆಗಳ ಪ್ರಕರಣಗಳಲ್ಲಿ
ನೀರು ವಿದ್ಯುತ್ ಬಾಡಿಗೆಗಳ ಪ್ರಸಂಗಗಳಲ್ಲಿ
ಅದೇ ಟೀವಿ, ಅವೇ ಚಾನೆಲ್ಲುಗಳು, ಅವೇ ಧಾರಾವಾಹಿಗಳ ಧರ್ಮಸೆರೆಯಲ್ಲಿ
ಈಗ

ಮತ್ತೆ ಕಾಡತೊಡಗಿದೆ ಮಲ್ಲಿಗೆಯ ಘಮ
ಅನುರಣಿಸುತ್ತಿದೆ ಎಂದೋ ಕೇಳಿದ ಮಧುರ ಗೀತೆ
ಬಿಸಿಲಿಗೂ ಬೆಳದಿಂಗಳಿಗೂ ಅಂತರ ಮಾಯವಾಗುತ್ತಿದೆ
ಸೂರ್ಯ ಮುಳುಗಿದಾಗ ಚಂದ್ರನುದಯಿಸಿದಾಗ ಮನಸ್ಸು ಆರ್ದ್ರಗೊಳ್ಳುತ್ತಿದೆ
ಚಿಗುರಿಗೆ, ಚಿಲಿಪಿಲಿಗೆ ಚುಕ್ಕಿಗಳ ಚಿತ್ತಾರಕೆ
ಚಿತ್ತ ಚಿಟ್ಟೆಯಂತೆ ಭ್ರಮಿಸುತ್ತಿದೆ
ನದಿ ತೊರೆ ಕಡಲು ಜಲಪಾತಗಳ ಮೊರೆತ ಮತ್ತೆ ಜೀವಂತವೆನಿಸುತ್ತಿದೆ
ಬದುಕು ಮತ್ತೆ ಪದ್ಯವಾಗುತಿದೆ!!






0 Comments