‘ನಿಲುವಂಗಿಯ ಕನಸು’ ಇಂತಹುದೊಂದು ಸಬ್ಜೆಕ್ಟ್ ಬೇಕಿತ್ತು…

‘ನಿಲುವಂಗಿಯ ಕನಸು’ ಇಂತಹುದೊಂದು ಸಬ್ಜೆಕ್ಟ್ ಬೇಕಿತ್ತು…
ನಿಲುಂಗಿಯ ಕನಸು ನಾಟಕ ನೋಡಿದ ಎಲ್ಲರೂ ಹೇಳಿದ ಮಾತಿದು.

ಚಲಂ ಹಾಡ್ಲಹಳ್ಳಿ

ರೈತರ ಜೀವನವನ್ನು ಆದರಿಸಿ ಒಂದು ನಾಟಕ ಜನರ ಬಳಿಗೆ ಹೋಗುವುದು ಅಗತ್ಯವಿತ್ತು. ಹೇಳಿಕೇಳಿ ರಂಗಭೂಮಿ ಜನರ ನಡುವೆ ಉಸಿರಾಡುವ, ಅಲ್ಲಿನ ತಲ್ಲಣಗಳನ್ನು ಮೊದಲಿಗೆ ಕೈಗೆತ್ತಿಕೊಳ್ಳುವ ಮಾಧ್ಯಮ. ಅಂತದ್ದರಲ್ಲಿ ದೇಶದ ಬಹುಸಂಖ್ಯಾತ ಸಂಘಟಿತರಲ್ಲದ ರೈತ ಸಮುಧಾಯದ ಬಗ್ಗೆ ರಂಗಭೂಮಿ ಮಾತನಾಡದೇ ಇದ್ದೀತೇ. ಅದರ ಒಂದು ಪ್ರಯತ್ನವೇ ‘ನಿಲುವಂಗಿಯ ಕನಸು’

ಈಗ್ಗೆ ಎರಡು ವರ್ಷಗಳ ಹಿಂದೆ ಸಕಲೇಶಪುರದ ತಾಲೂ ಲೋಕು ಪಂಚಾಯಿತಿ ಸಭಾಂಗಣದಲ್ಲಿ ಹಿರಿಯ ಸಾಹಿತಿ ಹಾಡ್ಲಹಳ್ಳಿ ನಾಗರಾಜು ಅವರ ಬದುಕು-ಬರಹ ಕುರಿತಾಗಿ ವಿಚಾರ ಸಂಕಿರಣವೂ ಇತ್ತು.
ಅಂದು ಹಾಡ್ಲಹಳ್ಳಿ ನಾಗರಾಜು ಅವರ ‘ಕುಂಭದ್ರೋಣ’ ಎಂಬ ಕಥಾಸಂಕಲನ, ‘ಕಾಡುಹಕ್ಕಿಯ ಹಾದಿನೋಟ’ ಎಂಬ ಪ್ರಬಂಧ ಸಂಕಲನ ಹಾಗು ‘ನಿಲುವಂಗಿಯ ಕನಸು’ ಎಂಬ ಕಾದಂಬರಿ ಮೂರು ಪುಸ್ತಕ ಬಿಡುಗಡೆ ಕಾರ್ಯಕ್ರಮವೂ ನಡೆಯಿತು.

ಅಂದು ಕಾರ್ಯಕ್ರಮದಲ್ಲಿ ಮಿಕ್ಕೆರಡು ಪುಸ್ತಕಗಳಿಗಿಂತ ‘ನಿಲುವಂಗಿಯ ಕನಸು’ ಕಾದಂಬರಿಯ ಬಗ್ಗೆ ಹೆಚ್ಚು ಚರ್ಚೆ ನಡೆಯಿತು. ಈ ಕಾದಂಬರಿಯ ಬಗ್ಗೆ ಹೆಚ್ಚು ಆಸ್ಥೆ ವಹಿಸಿ ಮಾತನಾಡಿದವರು ಹಿರಿಯ ಪತ್ರಕರ್ತರಾದ ಆರ್.ಪಿ.ವೆಂಕಟೇಶಮೂರ್ತಿಯವರು.

ರೈತಚಳುವಳಿಯಿಂದ ರೂಪುಗೊಂಡ ಆರ್.ಪಿ.ವೆಂಕಟೇಶಮೂರ್ತಿಯವರು ಈ ಕಾದಂಬರಿಯಲ್ಲಿದ್ದ ರೈತರ ಬಗೆಗಿನ ಮಾತುಗಳು, ಎತ್ತಿದ ಪ್ರಶ್ನೆಗಳು, ರೈತರ ಜೀವನವನ್ನು ಉತ್ಪ್ರೇಕ್ಷೆಯೂ ಇಲ್ಲದೇ ಇತ್ತ ತೇಲಿಸಿಯೂ ಇಲ್ಲದ ಕಾದಂಬರಿಯ ಬಗ್ಗೆ ಆಸಕ್ತಿ ವಹಿಸಿ ಮಾತನಾಡಿ ಇದು ಎಲ್ಲೆಡೆ ಮಾತನಾಡುವಂತಾಗಬೇಕು ಎಂದರು.
ಅಂದು ಆ ಕಾರ್ಯಕ್ರಮ ಮತ್ತೊಬ್ಬ ಅತಿಥಿಯಾಗಿದ್ದ ಹಿರಿಯ ರಂಗಕರ್ಮಿಪ್ರಸಾದ್ ರಕ್ಷಿದಿ ಈ ಕಾದಂಬರಿಯನ್ನು ರಂಗರೂಪಕ್ಕೆ ತರುವುದಾಗಿ ಇಂಗಿತ ವ್ಯಕ್ತ ಪಡಿಸಿದರು.

ಯಾವತ್ತಿಗೂ ಪ್ರಯೋಗಗಳಿಗೆ ಒಡ್ಡಿಕೊಳ್ಳುವ ಪ್ರಸಾದ್ ರಕ್ಷಿದಿಯವರು ಅವರ ಸಂಕಷ್ಟದ ದಿನಗಳಲ್ಲೂ ಕೂಡ ರೈತರ ಸಂಕಷ್ಟಗಳನ್ನು ಹೇಳುವ ನಿಲುವಂಗಿಯ ಕನಸು ಕಾದಂಬರಿಯನ್ನು ರಂಗರೂಪಕ್ಕೆ ತರುವುದನ್ನು ಮರೆಯಲಿಲ್ಲ.

ಒಂದು ವರ್ಷದ ನಂತರ ಇಡೀ ಕಾದಂಬರಿಯನ್ನು, ಅದರ ಆಶಯವನ್ನು ಗ್ರಹಿಸಿ ಸ್ಕ್ರಿಪ್ಟ್ ತಯಾರು ಮಾಡಿ ಒಂದು ರೀಡಿಂಗ್ ಅನ್ನು ನೀಡಿಯೇ ಬಿಟ್ಟರು. ಅಂದು ಇತ್ತೀಚೆಗೆ ನಮ್ಮನ್ನು ಅಗಲಿದ ಜ.ಹೊ. ನಾರಾಯಣಸ್ವಾಮಿಯವರು, ರಂಗನಟ, ನಿರ್ದೇಶಕ ಉಲಿವಾಲ ಮೋಹನ್ ಕುಮಾರ್, ಕಲಾಭವನ ಕುಮಾರ್ ಜೊತೆ ನಾನೂ ಸಹ ಪ್ರಸಾದ್ ರಕ್ಷಿದಿಯವರು ಎರಡು ಗಂಟೆಗಳ ಕಾಲ ಭಾವಾತ್ಮಕವಾಗಿ ನೀಡಿದ ರೀಡಿಂಗನ್ನು ಕೇಳಿದೆವು. ಜ.ಹೊ.ನಾ ಸೇರಿದಂತೆ ಎಲ್ಲರ ಕಣ್ಣಂಚಲ್ಲೂ ನೀರು. ಅಷ್ಟು ವಸ್ತುನಿಷ್ಠವಾಗಿ, ಭಾವನಾತ್ಮಕವಾಗಿ ಕಾದಂಬರಿಯನ್ನು ರಂಗರೂಪಕ್ಕೆ ತಂದಿದ್ದರು ಪ್ರಸಾದ್ ರಕ್ಷಿದಿಯವರು.

ಸ್ಕ್ರಿಪ್ಟ್ ತಯಾರಾದ ಮೇಲೆ ಇನ್ನು ತಡಮಾಡುವುದು ಬೇಡ ಪ್ರಯೋಗ ಮಾಡಿಬಿಡೋಣ ಎಂಬ ಮಾತುಕತೆಯೂ ಅಂದೆ ಆಯಿತು. ಆದರೆ ಅಷ್ಟೊಂದು ಪಾತ್ರವರ್ಗಗಳಿರುವ, ರೈತರ ವಿಷಯವನ್ನು ಅಷ್ಟು ಸಮರ್ಥವಾಗಿ ಅರ್ಥ ಮಾಡಿಕೊಂಡು ನಿರ್ದೇಶನ ಮಾಡುವವರು ಯಾರು ಎಂಬುದು ಬಹಳ ಮುಖ್ಯವಾದ ಪ್ರಶ್ನೆಯಾಗಿತ್ತು. ಹಾಗೆಯೇ ಯಾವ ತಂಡ ಇಷ್ಟೊಂದು ಪಾತ್ರವರ್ಗವನ್ನು ನಿಭಾಯಿಸಿಕೊಂಡು ರಂಗದ ಮೇಲೆ ತರುತ್ತದೆ ಎಂಬುದು ಅಷ್ಟೇ ಗಂಭೀರವಾದ ಪ್ರಶ್ನೆಯಾಗಿತ್ತು.

ಆಗ ರೈತರ ವಿಷಯವಿರುವ ಈ ನಾಟಕವನ್ನು ಮಾಡೋಣ ಎಂದು ಆಸಕ್ತಿ ವಹಿಸಿ ಮುಂದೆ ಬಂದಿದ್ದು ಹಾಸನದ ‘ರಂಗಹೃದಯ’ ತಂಡ. ರಂಗಹೃದಯ ತಂಡ ಈ ಮೊದಲು ವಿ.ಆರ್.ಕಾಪೆಂಟರ್ ಅವರ ನಿರ್ದೇಶನದಲ್ಲಿ ಎಸ್.ಎಫ್.ಯೋಗಪ್ಪನವರ್ ಅವರ ‘ಒಂದು ಶಹರದ ಸುತ್ತಾ’ ನಾಟಕವನ್ನು ಮೊಟ್ಟಮೊದಲಿಗೆ ರಂಗಕ್ಕೆ ತಂದಿತ್ತು. ಅದರ ಮೂಲಕ ಯಾವುದೇ ಸವಾಲಿಗೂ ಒಡ್ಡಿಕೊಳ್ಳುವ ತಂಡದ ಲಕ್ಷಣವನ್ನು ಮೂಡಿಸಿತ್ತು. ರಂಗಹೃದಯ ತಂಡವೇ ‘ನಿಲುವಂಗಿಯ ಕನಸು’ ನಾಟಕವನ್ನು ರಂಗರೂಪಕ್ಕೆ ತರುವುದಕ್ಕೆ ಸೂಕ್ತ ಎಂಬ ನಿರ್ದಾರವು ಆಯಿತು.

ಆದರೆ ಈ ನಾಟಕವನ್ನು ನಿರ್ದೇಶಿಸುವವರು ಯಾರು ಎಂಬ ಮತ್ತೊಂದು ಗಂಭೀರ ಪ್ರಶ್ನೆ ಇದ್ದೆ ಇತ್ತು. ಮೂರ್ನಾಲ್ಕು ಜನ ನಿದೇರ್ಶಕರುಗಳ ಬಗ್ಗೆ ಚರ್ಚೆ ಮಾಡುತ್ತಿರುವಾಗಲೇ ನಮ್ಮ ಜೊತೆಯೇ ಇದ್ದ, ಕಳೆದ ವರ್ಷದ ಕರ್ನಾಟಕ ನಾಟಕ ಅಕಾಡೆಮಿಯ ಪುರಸ್ಕತರೂ ಆದ ಉಲಿವಾಲ ಮೋಹನ್ ಕುಮಾರ್ ಅವರು ‘ನಿಲುವಂಗಿ ಕನಸು’ ಎಂಬ ಹಳ್ಳಿಗಾಡಿನ ವಿಷಯವನ್ನು ನಿರ್ದೆಶಿಸುತ್ತೇನೆ ಎಂದಾಗ ಅವರ ಧೈರ್ಯದ ಬಗ್ಗೆ ಎಲ್ಲರಿಗೂ ಅಚ್ಚರಿ ಇತ್ತು. ಯಾಕೆಂದರೆ ಕಾದಂಬರಿ ಬರೆಯುವುದು, ಅದನ್ನು ರಂಗರೂಪಕ್ಕೆ ತರುವುದು ಕೂಡ ಸವಾಲಿನ ಕೆಲಸವೇ ಆಗಿದ್ದರು ಅದೆಲ್ಲಾ ಒಬ್ಬರೇ ಕುಳಿತು ಮಾಡಬಹುದಾಗಿದ್ದ ಕೆಲಸಗಳು. ಆದರೆ ನಿರ್ದೇಶಕನಾಗಿ ಅಷ್ಟೊಂದು ಪಾತ್ರವರ್ಗವನ್ನು ಹೊಸ ನಾಟಕಕ್ಕೆ ಸಜ್ಜುಗೊಳಿಸುವುದು ಸುಲಭದ ಮಾತಾಗಿರಲಿಲ್ಲ.

ಅಂತಹಾ ಎದೆಗಾರಿಕೆಯನ್ನು ಉಲಿವಾಲ ಮೋಹನ್ ಕುಮಾರ್ ಅವರು ತೋರಿಸಿದರು. ಅದಕ್ಕೆ ಬೇಕಾದ ಪಾತ್ರವರ್ಗಕ್ಕಾಗಿ ‘ರಂಗಹೃದಯ’ ತಂಡಕ್ಕೆ ಅಂತಹಾ ಸಮಸ್ಯೆ ಏನೂ ಆಗಲಿಲ್ಲ. ಅಂತಹಾ ಒಂದು ಬದ್ದತೆಯನ್ನು ಹೊಂದಿರುವ ತಂಡ ರಂಗಹೃದಯ. ಉಲಿವಾಲ ಮೋಹನ್ ಕುಮಾರ್ ನಿರ್ದೇಶನ ಅಂತ ನಿರ್ಧಾರವಾದ ಕೆಲವೇ ದಿನಗಳಲ್ಲಿ ತಾಲೀಮು ಪ್ರಾರಂಭವಾಗಿಯೇ ಬಿಟ್ಟಿತು.

ಒಂದು ನಾಟಕ ಹಲವಾರು ತಿಂಗಳು, ಕೆಲವೊಮ್ಮೆ ವರ್ಷಗಟ್ಟಲೆ ತೆಗೆದುಕೊಂಡ ಉದಾಹರಣೆಗಳು ಈಗಾಗಲೇ ನಮ್ಮ ಮುಂದಿದ್ದವು. ಹಾಗಾಗಿ ತಾಲೀಮು ಶುರುವಾದ ಮೊದಲ ದಿನವೇ ಜನವರಿ 24 ಕ್ಕೆ ಪ್ರದರ್ಶನ ಎಂದು ತೀರ್ಮಾನ ಮಾಡಿಯೇ ಮುಂದುವರೆದದ್ದು ಹಾಗು ಅದೇ ಪ್ರಕಾರವಾಗಿ ಅಂದೇ ಪ್ರದರ್ಶನ ನೀಡಿದ್ದು ರಂಗಭೂಮಿ ಕೇಳುವ ಬದ್ದತೆಗೆ ಸಾಕ್ಷಿಯಾಗಿ ನಿಂತುಬಿಟ್ಟಿತು.

ತಾಲೀಮಿನ ದಿನದಿಂದ ನಾಟಕಕ್ಕೆ ಬೇಕಾದ ರಂಗಪರಿಕರಗಳನ್ನು ಕಲಾತ್ಮಕವಾಗಿ ಮಾಡಿದ್ದು ಸ್ವರೂಪ್ ಎಂಬ ಕಲಾವಿದ. ಹಾಗೆ ನೋಡಿದರೆ ಸ್ವರೂಪನಿಗೆ ಇದು ರಂಗಭೂಮಿಯ ಮೊದಲ ಅನುಭವ. ಆದರೆ ಆತನ ಆಸಕ್ತಿ ಎಷ್ಟು ತೀವ್ರತರವಾದುದು ಎಂಬುದನ್ನು ತನ್ನ ಕೆಲಸದ ಮೂಲಕ ತೋರಿಸಿಕೊಟ್ಟ. ಸಂಗೀತದ ವಿಚಾರದಲ್ಲೂ ರಘುನಂದನ್ ಪ್ರಯೋಗಾತ್ಮಕವಾಗಿ ತಮ್ಮನ್ನು ಒಡ್ಡಿಕೊಂಡರು. ಹಾಡುಗಳು, ಹಿನ್ನೆಲೆ ಸಂಗೀತ ನಾಟಕಕ್ಕೆ ಪೂರಕವಾಗಿ ಬರುವಂತೆ ದುಡಿದರು.

ನಾನು ನಾಟಕದ ತಾಲೀಮನ್ನು ನೋಡುತ್ತಲೇ ಬರೆದ ಹಾಡುಗಳು ಸನ್ನಿವೇಶಗಳಿಗೆ ಪೂರಕವಾಗಿದ್ದವು. ಗುರುರಾಜ್ ಹುಲಿಕಲ್, ವೇದಮೂರ್ತಿ, ನಳಿನಿ, ಪೂಜ, ವೇದ ಮುಂತಾದವರು ನಾಟಕದ ಪಾತ್ರಗಳ ಕಾಸ್ಟ್ಯೂಮ್ ಬಗ್ಗೆ ಗಮನಹರಿಸಿದರು. ರಮೇಶ್ ಫ್ಲೆಕ್ಸ್ ಹಾಕುವುದರಿಂದ ಹಿಡಿದು ಪ್ರಚಾರದ ಪ್ರತಿ ಹಂತದಲ್ಲೂ ಕೆಲಸ ಮಾಡಿದರು.

ಪಾತ್ರವರ್ಗದಲ್ಲಿ ಹಿರಿಯ ಕಲಾವಿದರಾದ ಹೆಚ್.ಡಿ. ಅಣ್ಣಾಜಿಗೌಡರು, ಲೋಕೇಶ್, ಪೂಜಾ ರಘುನಂದನ್, ವೇದ ವೈ.ವಿ, ವೇದಮೂರ್ತಿ, ಗುರುರಾಜ್, ಪುನೀತ್, ವಿಶ್ವಾಸ್ ರಾಣಿ, ರಂಗರಾಜು ಮುಂತಾದವರಿದ್ದರು. ಅದರ ನಡುವೆ ಆಗ ತಾನೆ ಮೊದಲ ಬಾರಿಗೆ ಬಣ್ಣ ಹಚ್ಚಿ ಪರೀಕ್ಷೆಗೆ ನಿಂತವರು ತುಳಸಿಪ್ರಸಾದ್, ಸ್ವರೂಪ್, ನಳಿನಿ ಗಣೇಶ್, ಚಲಂ, ಪುಟ್ಟಶೆಟ್ಟಿಯವರು, ಪೃಥ್ವಿನ್, ಮುತ್ತು, ಶೈಲೇಶ್. ಕೆಲವರಂತೂ ಎರಡೆರಡು ಪಾತ್ರಗಳಲ್ಲಿ ಮನೋಜ್ಞವಾಗಿ ಅಭಿನಯಿಸಿದರು. ಇನ್ನು ಕೆಲವು ಹೊಸ ಕಲಾವಿದರು ಪಳಗಿದ ನಟನೆ ನೀಡಿದರು.

ಹೀಗೆ ಒಂದು ತಂಡವಾಗಿ ಮಾಡಿದ ಕೆಲಸದ ಫಲವಾಗಿ ಜನವರಿ 24 ರಂದು ಹಾಸನದ ಹಾಸನಾಂಬ ಕಲಾಕ್ಷೇತ್ರದ ತುಂಬಿದ ಸಬಾಂಗಣದಲ್ಲಿ ‘ನಿಲುವಂಗಿಯ ಕನಸು’ ನಾಟಕ ಯಶಸ್ವಿ ಪ್ರದರ್ಶನ ಕಂಡಿತು. ರೈತರ ಬಗ್ಗೆ, ಅವರ ಕಷ್ಟಗಳ ಬಗ್ಗೆ ಮಾತುಗಳಾದವು. ಅದೇ ಸಮಯದಲ್ಲಿ ಅವ್ಯವಸ್ಥೆಯಿಂದ ಕೂಡಿದ್ದ ಹಾಸನಾಂಬ ಕಲಾಕ್ಷೇತ್ರದ ಬಗ್ಗೆಯೂ ಹಿರಿಯ ನಾಗರಿಕರು ದನಿಯೆತ್ತಿದರು. ಒಂದು ನಾಟಕ ಏನೆಲ್ಲಾ ಮಾಡಿಸಬಲ್ಲುದು ಎಂಬುದೇ ಅಚ್ಚರಿ.

‘ರಂಗಹೃದಯ,ಹಾಸನ’ ತಂಡ ‘ನಿಲುವಂಗಿಯ ಕನಸು’ ಎಂಬ ನಾಡು ಮಾತನಾಡಲೇಬೇಕಾದ ವಸ್ತುವನ್ನು ನಾಡಿನಾದ್ಯಂತ ತಿರುಗಾಟ ಮಾಡಲು ನಿರ್ದರಿಸಿದೆ.

ಬೆಂಗಳೂರಿಗರು ನೋಡಬೇಕೆಂದಿದ್ದರೆ –

‍ಲೇಖಕರು avadhi

February 3, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: