ನಿರ್ಭಯಾ ಹೆಸರಿನ ಭರವಸೆಯ ನೆನಪಿನಲ್ಲಿ…

ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

ಎನ್.ಡಿ.ಟಿ.ವಿ ವಾಹಿನಿಯ ವರದಿಗಾರ್ತಿ ಮತ್ತು ನಿರೂಪಕಿ ಸೋನಾಲ್ ಮೆಹ್ರೋತ್ರಾ ಕಪೂರ್ ಅಂದು ಕತೆಯೊಂದನ್ನು ಹೇಳುತ್ತಿದ್ದರು. 

ಸೋನಾಲ್ ಮೆಹ್ರೋತ್ರಾ ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳುವುದು ಹೊಸತೇನಲ್ಲ. ಟಿವಿ ರಿಪೋರ್ಟರ್ ಆಗಿ ಅದು ಅವರ ವೃತ್ತಿ. ಆದರೆ ಅಂದು ಸೋನಾಲ್ ಮಾತನಾಡುತ್ತಿದ್ದಿದ್ದು ಓರ್ವ ಪತ್ರಕರ್ತ ರೂಪುಗೊಳ್ಳುವ ಪರಿಯ ಬಗ್ಗೆ. ವಿಶೇಷವೆಂದರೆ ಅದೊಂದು ಟಿವಿ ವರದಿಯ ಬದಲಾಗಿ ಆಪ್ತ ಮೋನೋಲಾಗ್ ಶೈಲಿಯಲ್ಲಿತ್ತು. ತಮ್ಮ ವೃತ್ತಿಬದುಕಿನ ಏರಿಳಿತಗಳ ಬಗ್ಗೆ ಹೇಳುತ್ತಾ ಅಂದು ಸೋನಾಲ್ ನೆನಪಿಸಿಕೊಂಡಿದ್ದು ದಿಲ್ಲಿಯ ಅದೇ ಕರಾಳರಾತ್ರಿ.

ಆ ರಾತ್ರಿ ಅವರು ತನ್ನ ಗೆಳೆಯನೊಂದಿಗೆ ಮಲ್ಟಿಪ್ಲೆಕ್ಸ್ ಒಂದರಲ್ಲಿ ‘ಲೈಫ್ ಆಫ್ ಪೈ’ ಚಿತ್ರವನ್ನು ನೋಡಿದ್ದರಂತೆ. ಚಿತ್ರವು ನಿರೀಕ್ಷೆಯಂತೆ ಅದ್ಭುತವಾಗಿತ್ತು. ಚಿತ್ರ ಮುಗಿದ ನಂತರ ಜೊತೆಯಲ್ಲಿದ್ದ ಮಿತ್ರ ಅವರನ್ನು ಮನೆಯವರೆಗೆ ಸುರಕ್ಷಿತವಾಗಿ ಡ್ರಾಪ್ ಮಾಡಿದ್ದ.  

ಆದರೆ ಅದೇ ರಾತ್ರಿಯಂದು, ಅದೇ ಮಲ್ಟಿಪ್ಲೆಕ್ಸ್ ಮತ್ತು ಅದೇ ಶೋನಲ್ಲಿ ಮತ್ತಿಬ್ಬರು ‘ಲೈಫ್ ಆಫ್ ಪೈ’ ಚಲಚಿತ್ರವನ್ನು ವೀಕ್ಷಿಸಿ ಆಸ್ವಾದಿಸಿದ್ದರು. ಅಲ್ಲಿದ್ದಿದ್ದು ಕೂಡ ಓರ್ವ ಹೆಣ್ಣುಮಗಳು ಮತ್ತು ಆಕೆಯ ಗೆಳೆಯ. ದುರಾದೃಷ್ಟವಶಾತ್ ಆ ರಾತ್ರಿಯು ಮಾತ್ರ ಅವರಿಬ್ಬರಿಗೆ ದುಬಾರಿಯಾಗಿ ಪರಿಣಮಿಸಿತು. ಅತ್ತ ಚಿತ್ರದ ಶೋ ಮುಗಿದ ನಂತರ ಸೋನಾಲ್ ಮೆಹ್ರೋತ್ರಾ ಸುರಕ್ಷಿತವಾಗಿ ಮನೆ ಸೇರಿದಂತೆ ಇಲ್ಲಿ ನಡೆಯಲಿಲ್ಲ. ಬದಲಾಗಿ ಆಕೆಯ ಮೇಲೆ ಬರ್ಬರ ಸಾಮೂಹಿಕ ಅತ್ಯಾಚಾರ ಮತ್ತು ಅಮಾನುಷ ಹಲ್ಲೆಗಳಾದವು. ಜೊತೆಯಲ್ಲಿದ್ದ ಯುವಕನೂ ಥಳಿತಕ್ಕೊಳಗಾದ. ಆಕೆ ‘ನಿರ್ಭಯಾ’ ಎಂದೇ ಮನೆಮಾತಾಗಿಬಿಟ್ಟ 23 ರ ಪ್ರಾಯದ ಜ್ಯೋತಿ ಸಿಂಗ್. 

ಸೋನಾಲ್ ಆ ಅವಧಿಯಲ್ಲಿ ವಾಹಿನಿಯ ಸಿಟಿ ರಿಪೋರ್ಟರ್ ಆಗಿ ಕೆಲಸ ಮಾಡುತ್ತಿದ್ದವರು. ಮರುದಿನ ಮುಂಜಾನೆ ಐದೂವರೆಯ ಹೊತ್ತಿಗೆ ಸೋನಾಲ್ ಅವರ ಫೋನು ಸದ್ದು ಮಾಡಿತ್ತು. ಕರ್ತವ್ಯಕ್ಕೆ ತಕ್ಷಣ ಸಿದ್ಧರಾದ ಆಕೆ ದಿಲ್ಲಿಯಲ್ಲಿರುವ ಸಫ್ದರ್ ಜಂಗ್ ಆಸ್ಪತ್ರೆಯತ್ತ ಹೊರಡುತ್ತಾರೆ. ಮುಂದೆ ಎಲ್ಲರಿಗೂ ಗೊತ್ತಿರುವಂತೆ ದಿಲ್ಲಿಯ ಇಂಡಿಯಾ ಗೇಟ್, ರಾಷ್ಟ್ರಪತಿ ಭವನದಂತಹ ಆಯಕಟ್ಟಿನ ಪ್ರದೇಶಗಳಲ್ಲಿ ಭಾರತವು ಹಿಂದೆಂದೂ ಕಾಣದಿದ್ದ ತೀವ್ರತೆಯಲ್ಲಿ ಪ್ರತಿಭಟನೆಗಳಾದವು. ಈ ಘಟನೆಯ ತರುವಾಯ ಮಹಾನಗರಿಯ ಬೆನ್ನಹುರಿಯಲ್ಲಿ ಏಕಾಏಕಿ ಹುಟ್ಟಿದ್ದ ರಾಕ್ಷಸಭಯವು ಬಹುತೇಕರನ್ನು ನಡುಗಿಸಿದ್ದಲ್ಲದೆ, ಕೇಂದ್ರ ಸರಕಾರವನ್ನೂ ಬುಡಸಮೇತ ಅಲ್ಲಾಡಿಸಿತ್ತು. 

ಮುಂದೆ ಹೆಚ್ಚಿನ ಚಿಕಿತ್ಸೆಗಾಗಿ ನಿರ್ಭಯಾರನ್ನು ಸಿಂಗಾಪೂರಿಗೆ ಕರೆದೊಯ್ದಾಗ ಸೋನಾಲ್ ಈ ಬಗ್ಗೆ ವರದಿ ಮಾಡಲು ಅಲ್ಲಿಗೂ ತೆರಳುತ್ತಾರೆ. ಆಕೆಯ ಸಹೋದರನನ್ನೂ ಸೇರಿದಂತೆ ಕುಟುಂಬದ ಎಲ್ಲಾ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ. ಕೆಲ ದಿನಗಳ ನಂತರ ವೈದ್ಯರ ಎಲ್ಲಾ ಪ್ರಯತ್ನಗಳೂ ವಿಫಲವಾಗಿ ನಿರ್ಭಯಾ ಕೊನೆಯುಸಿರೆಳೆಯುತ್ತಾರೆ. ಇತ್ತ ಭಾರತ ಮಾತ್ರ ಅಸಹಾಯಕತೆಯ ಸಿಟ್ಟಿನಿಂದ ಕುದಿಯುತ್ತಿರುತ್ತದೆ.

ನಿರ್ಭಯಾ ಅತ್ಯಾಚಾರ ಪ್ರಕರಣವು ನಡೆದಿದ್ದ ಮರುದಿನದಂದು, ದಿಲ್ಲಿಯ ಸಫ್ದರ್ ಜಂಗ್ ಆಸ್ಪತ್ರೆಯ ಆವರಣದಲ್ಲಿ ಸೇರಿದ್ದ ಮಾಧ್ಯಮಗಳ ಓ.ಬಿ ವ್ಯಾನುಗಳನ್ನು ಕಂಡು ನಾನೂ ಗಾಬರಿಯಾಗಿದ್ದೆ. ಆ ರಾತ್ರಿ ನಡೆದಿದ್ದ ಬರ್ಬರ ಅತ್ಯಾಚಾರ ಮತ್ತು ಮಾರಣಾಂತಿಕ ಹಲ್ಲೆಯ ಸುದ್ದಿಯು ನನಗೆ ತಡವಾಗಿ ತಿಳಿದ ಕಾರಣ, ಆ ಜನಜಂಗುಳಿಯನ್ನು ಅರ್ಥೈಸಿಕೊಳ್ಳುವುದು ಮಾತ್ರ ಕೊಂಚ ತಡವಾಗಿತ್ತು. ದಿಲ್ಲಿಯ, ಅದರಲ್ಲೂ ಫೆಬ್ರವರಿ ಮಾಸದ ಮೈಕೊರೆಯುವ ಚಳಿಯಲ್ಲಿ ಇವರೀರ್ವರನ್ನು ನಗ್ನಾವಸ್ಥೆಯಲ್ಲಿ, ಕಸದ ಮೂಟೆಯಂತೆ, ಚಲಿಸುತ್ತಿದ್ದ ಬಸ್ಸಿನಿಂದ ಹೊರಗೆಸೆದಿದ್ದರು ಎಂಬುದೇ ಆ ದಿನಗಳಲ್ಲಿ ನನ್ನನ್ನೂ ಸೇರಿದಂತೆ ಬಹುತೇಕರಿಗೆ ಅರಗಿಸಿಕೊಳ್ಳಲಾರದ ಸತ್ಯವಾಗಿತ್ತು. 

ಆಸ್ಪತ್ರೆಗೆ ಕರೆತಂದ ಜ್ಯೋತಿಯವರ ಆರಂಭಿಕ ಸ್ಥಿತಿಯನ್ನು ಕಂಡ ವೈದ್ಯರೊಬ್ಬರು ಗಾಬರಿಯಿಂದ ಅತ್ತೇಬಿಟ್ಟಿದ್ದರಂತೆ. ತಮ್ಮ ವೈದ್ಯಕೀಯ ವೃತ್ತಿಬದುಕಿನಲ್ಲಿ ಇಷ್ಟು ಅಮಾನುಷವಾದ ಅತ್ಯಾಚಾರವೊಂದನ್ನು ಅವರು ನೋಡಿಯೇ ಇರಲಿಲ್ಲ. ಚಿಕಿತ್ಸೆ ಮಾಡುವುದಾದರೂ ಎಲ್ಲಿಂದ ಆರಂಭಿಸೋಣ ಎಂಬ ಗಾಬರಿ-ಗೊಂದಲ-ಆತಂಕಗಳ ತ್ರಿಶಂಕು ಮನಸ್ಥಿತಿ ಆ ವೈದ್ಯರದ್ದು. ಹೊಟ್ಟೆ ಮತ್ತು ಹೊಟ್ಟೆಯ ಕೆಳಗಿನ ಭಾಗಗಳು ಸಾಕಷ್ಟು ಛಿದ್ರವಾಗಿದ್ದರೂ ಈ ಹುಡುಗಿ ಮಾತ್ರ ಇನ್ನೂ ಜೀವ ಹಿಡಿದುಕೊಂಡು ಹೋರಾಡುತ್ತಿದ್ದಳು. ಸಫ್ದರ್ ಜಂಗ್ ಆಸ್ಪತ್ರೆಯ ವೈದ್ಯರಿಗೆ ಇದಕ್ಕಿಂತ ದೊಡ್ಡ ಅಚ್ಚರಿಯ ಸಂಗತಿಯಾದರೂ ಇನ್ನೇನಿತ್ತು?

*****

ಇಂದು ಭಾರತದಲ್ಲಿ ಎಲ್ಲಿ ಅತ್ಯಾಚಾರವಾದರೂ, ಅದರಲ್ಲೂ ವಿಶೇಷವಾಗಿ ಬರ್ಬರತೆಯ ಭಯಾನಕತೆಯು ಹೆಚ್ಚಿದಂತೆಲ್ಲಾ ನಿರ್ಭಯಾ ಪ್ರಕರಣವನ್ನು ನೆನಪಿಸಿಕೊಳ್ಳಲಾಗುತ್ತದೆ. ಇತ್ತ ನನಗೆ ಮಾತ್ರ ಲೀಲಾ ಸೇಥ್ ನೆನಪಾಗುತ್ತಾರೆ. ಲೀಲಾ ಸೇಥ್ ಈ ದೇಶ ಕಂಡ ಖ್ಯಾತ ನ್ಯಾಯಾಧೀಶರುಗಳಲ್ಲೊಬ್ಬರು. ದೆಹಲಿ ಉಚ್ಚ ನ್ಯಾಯಾಲಯದ ಪ್ರಥಮ ಮಹಿಳಾ ನ್ಯಾಯಾಧೀಶರು, ರಾಜ್ಯವೊಂದರ ಉಚ್ಚ ನ್ಯಾಯಾಲಯಕ್ಕೆ ನೇಮಕಗೊಂಡ ಪ್ರಥಮ ಮಹಿಳಾ ಪ್ರಧಾನ ನ್ಯಾಯಾಧೀಶರು, ಭಾರತದ ಸರ್ವೋಚ್ಚ ನ್ಯಾಯಾಲಯದಿಂದ ಸೀನಿಯರ್ ಕೌನ್ಸೆಲ್ ಆಗಿ ನೇಮಕಗೊಂಡ ಪ್ರಥಮ ಮಹಿಳಾ ವಕೀಲೆ… ಹೀಗೆ ಹತ್ತಾರು ಪ್ರಥಮಗಳ ಮೈಲಿಗಲ್ಲುಗಳನ್ನು ನೆಟ್ಟು ನ್ಯಾಯಾಂಗದ ಪ್ರಮುಖ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ ಖ್ಯಾತಿ ಲೀಲಾರದ್ದು. 

ಈಚೆಗೆ ಲೀಲಾ ಸೇಥ್ ರವರ ಬಾಲ್ಯದ ಬಗ್ಗೆ ಓದುತ್ತಿದ್ದೆ. ಅಪ್ಪಟ ಪ್ರತಿಭಾವಂತೆಯಾಗಿದ್ದ ಲೀಲಾರ ಬಾಲ್ಯವು ಅದ್ಭುತವಾಗಿತ್ತು. ಲೀಲಾ 1958 ರಲ್ಲೇ ಲಂಡನ್ ಬಾರ್ ಎಕ್ಸಾಮ್ ಬರೆದು ಅದರಲ್ಲಿ ಪ್ರಥಮ ರ್ಯಾಂಕ್ ಗಳಿಸಿದ್ದರು. ಆಗ ಅವರಿಗೆ ಕೇವಲ ಇಪ್ಪತ್ತೇಳು ವರ್ಷ. ಪರೀಕ್ಷೆಯ ಕೆಲವೇ ತಿಂಗಳುಗಳ ಹಿಂದೆ ಅವರು ಗಂಡು ಮಗುವೊಂದನ್ನು ಹೆತ್ತಿದ್ದರು. ಆ ಕಾಲದಲ್ಲಿ ಭಾರತೀಯ ಹೆಣ್ಣುಮಕ್ಕಳು ವಕೀಲ ವೃತ್ತಿಯತ್ತ ನೋಡುವುದೇ ಅಪರೂಪವಾಗಿತ್ತು. ಅಂಥದ್ದರಲ್ಲಿ ಭಾರತೀಯ ಮೂಲದ ವಿವಾಹಿತ ಹೆಣ್ಣುಮಗಳೊಬ್ಬಳು, ಇಂಗ್ಲೆಂಡಿನಲ್ಲಿ ತನ್ನ ಹಸುಳೆ-ಕುಟುಂಬವನ್ನು ಸಂಭಾಳಿಸುತ್ತಲೇ ಲಂಡನ್ನಿನ ಬಾರ್ ಎಕ್ಸಾಮಿನಲ್ಲಿ ಪ್ರಥಮ ರ್ಯಾಂಕ್ ಗಳಿಸಿದ್ದಳು. ತಾಯಿ-ಮಗನ ಚಿತ್ರವನ್ನು ಜೊತೆಯಾಗಿ ಪ್ರಕಟಿಸಿದ್ದ ಲಂಡನ್ನಿನ ಪತ್ರಿಕೆಯೊಂದು ಲೀಲಾರನ್ನು “ಮದರ್ ಇನ್ ಲಾ” ಎಂದು ಸೂಚ್ಯವಾಗಿ ಪ್ರಶಂಸಿಸಿತ್ತು. ಇದೇ ಆಸುಪಾಸಿನ ವರ್ಷಗಳಲ್ಲಿ ಲೀಲಾ ಸೇಥ್ ಐ.ಎ.ಎಸ್ ಪರೀಕ್ಷೆಯಲ್ಲಿ ಕೂಡ ತೇರ್ಗಡೆಯಾಗಿದ್ದರು ಎಂಬುದು ಗಮನಾರ್ಹ ಅಂಶ. 

ಭಾರತದಲ್ಲಿ ಅತ್ಯಾಚಾರ ಪ್ರಕರಣಗಳು ಸುದ್ದಿಯಾದಾಗಲೆಲ್ಲಾ ನನಗೆ ಲೀಲಾ ಸೇಥ್ ನೆನಪಾಗುವುದಕ್ಕೆ ಒಂದು ಕಾರಣವಿದೆ. ಅದೇನೆಂದರೆ ನಿರ್ಭಯಾ ಪ್ರಕರಣದ ತರುವಾಯ, ದೇಶದಲ್ಲಿರುವ ಅತ್ಯಾಚಾರ ಸಂಬಂಧಿ ಕಾನೂನುಗಳ ಪುನರಾವಲೋಕನೆಯ ನಿಮಿತ್ತ ಜಸ್ಟಿಸ್ ವರ್ಮಾ ಆಯೋಗವನ್ನು ರಚಿಸಲಾಗಿತ್ತು. ಜಸ್ಟಿಸ್ ವರ್ಮಾ ಆಯೋಗದ ಬೆಂಚಿನಲ್ಲಿದ್ದ ಮೂವರು ಖ್ಯಾತ ನ್ಯಾಯಮೂರ್ತಿಗಳಲ್ಲಿ ಲೀಲಾ ಸೇಥ್ ಕೂಡ ಒಬ್ಬರು. ನಿರ್ಭಯಾ ಪ್ರಕರಣದ ಬಗ್ಗೆ ನಿರ್ಮಿಸಲಾಗಿದ್ದ ವಿವಾದಾತ್ಮಕ ಸಾಕ್ಷ್ಯಚಿತ್ರ ‘ಇಂಡಿಯಾಸ್ ಡಾಟರ್’ ನಲ್ಲಿ ಲೀಲಾರವರು ಭಾರತದ ಮಹಿಳಾ ಸುರಕ್ಷತೆಯ ಬಗ್ಗೆ ಮನೋಜ್ಞವಾಗಿ ಮಾತಾಡಿದ್ದಾರೆ. ಹಾಗೆ ನೋಡಿದರೆ ಜಸ್ಟಿಸ್ ವರ್ಮಾ ಆಯೋಗದಲ್ಲಿ ಲೀಲಾರಂತಹ ಅನುಭವಿಯೊಬ್ಬರು ಸದಸ್ಯರಾಗಿದ್ದರು ಎಂಬುದೇ ಸಂತಸದ ಮತ್ತು ಹೆಮ್ಮೆಯ ವಿಚಾರ. 

ಇವೆಲ್ಲದರ ಹೊರತಾಗಿ ಜಸ್ಟಿಸ್ ವರ್ಮಾ ಆಯೋಗವು ನೀಡಿದ ವರದಿಯು ಇಂದು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬಂದಿದೆ ಎಂಬುದು ಮಾತ್ರ ಕೇಳಿಕೊಳ್ಳಬೇಕಾದ ಪ್ರಶ್ನೆ. ದಿಲ್ಲಿಯಲ್ಲಿ ನಡೆದಿದ್ದ ನಿರ್ಭಯಾ ಪ್ರಕರಣದ ನಂತರ ಅತ್ಯಾಚಾರ ಸಂಬಂಧಿ ಪ್ರಕರಣಗಳು ಮುಖ್ಯವಾಹಿನಿಯಲ್ಲಿ ಚರ್ಚೆಗೆ ಬರತೊಡಗಿದ್ದು ಮತ್ತು ತಕ್ಕಮಟ್ಟಿಗೆ ಜನಜಾಗೃತಿಯನ್ನು ಮೂಡಿಸಿದ್ದು ಸತ್ಯ. ಆದರೆ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಪಟ್ಟಂತೆ ತ್ವರಿತ ವಿಚಾರಣೆ ಮತ್ತು ತಪ್ಪಿತಸ್ಥರೆಂದು ಸಾಬೀತಾದ ಆರೋಪಿಗಳಿಗೆ ನೀಡಬೇಕಿರುವ ಕಠಿಣ ಸಜೆಗಳು ಕಟ್ಟುನಿಟ್ಟಾಗಿ ಜಾರಿಗೆ ಬರಲಿಲ್ಲ. ಲೀಲಾ ಸೇಥ್ ರಂತಹ ಘಟಾನುಘಟಿ ಕಾನೂನು ಸಲಹೆಗಾರರಿದ್ದರೂ ಸರಕಾರಿ ನಿಯೋಜಿತ ಆಯೋಗವೊಂದು ದಯನೀಯವಾಗಿ ವಿಫಲವಾಗುವುದು ಹೀಗೆ. 

ತೊಂಭತ್ತರ ದಶಕದ ಆರಂಭದಲ್ಲಿ ಕೆನಡಾದಲ್ಲಿ ನಡೆಯುತ್ತಿದ್ದ ಕೆಲ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಇಡೀ ದೇಶವನ್ನು ಬೆಚ್ಚಿಬೀಳಿಸಿದ್ದವು. ತನಿಖೆಯ ನಂತರ ತಿಳಿದುಬಂದ ಅಂಶವೇನೆಂದರೆ ಪೌಲ್ ಬರ್ನಾರ್ಡೋ ಮತ್ತು ಕಾರ್ಲಾ ಹೊಮೋಲ್ಕಾ ಹೆಸರಿನ ಜೋಡಿಯೊಂದು ಈ ಪ್ರಕರಣಗಳ ಹಿಂದಿತ್ತು. ಸ್ಫುರದ್ರೂಪಿ ಯುವಜೋಡಿಯೊಂದು ಹೀಗೆ ರಕ್ತಪಿಪಾಸುಗಳಾಗಿ ಬದಲಾಗಿದ್ದನ್ನು ವರದಿ ಮಾಡುತ್ತಿದ್ದ ಕೆನಡಾದ ಪತ್ರಿಕೆಗಳು ಈ ಪ್ರಕರಣವನ್ನು ‘ದ ಬಾರ್ಬಿ-ಕೆನ್ ಮರ್ಡರ್ಸ್’ ಎಂದೂ ಸಿನಿಮೀಯ ಶೈಲಿಯಲ್ಲಿ ಕರೆದವು. ಆ ದಿನಗಳಲ್ಲಿ ಕೆನಡಾದ ಅಧ್ಯಕ್ಷರಿಗಿಂತಲೂ ಹೆಚ್ಚು ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಪರಿಚಿತ ಮುಖವೆಂದರೆ ಕಾರ್ಲಾ ಹೊಮೋಲ್ಕಾಳದ್ದು. ಕೆನಡಾದ ಜನತೆ ಇನ್ನಿಲ್ಲದಂತೆ ಕಿಡಿಕಾರುತ್ತಿದ್ದ ಏಕೈಕ ಮಹಿಳೆಯೆಂದರೆ ಕಾರ್ಲಾ ಎಂದು ಕೆನಡಿಯನ್ ಮಂದಿ ಇಂದಿಗೂ ರೇಜಿಗೆಯಿಂದ ನೆನಪಿಸಿಕೊಳ್ಳುತ್ತಾರೆ. 

ದಿಲ್ಲಿಯಲ್ಲಿ ನಡೆದಿದ್ದ ನಿರ್ಭಯಾ ಪ್ರಕರಣದಂತೆ ಕಾರ್ಲಾ ಹೊಮೋಲ್ಕಾ ಪ್ರಕರಣವೂ ಭಯಾನಕವಾಗಿತ್ತು. ತನ್ನ ಪತಿಯು ಓರ್ವ ಅತ್ಯಾಚಾರಿ ಎಂದು ತಿಳಿಯುವ ಕಾರ್ಲಾ, ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಆತನೊಂದಿಗೆ ತಾನೂ ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗುತ್ತಾಳೆ. ಆತನ ಕಾಮತೃಷೆಗಾಗಿ ತನ್ನ ಒಡಹುಟ್ಟಿದ ತಂಗಿಯನ್ನೇ ಮೋಸದಿಂದ ಆತನ ಹಾಸಿಗೆಗೆ ತಳ್ಳುತ್ತಾಳೆ.

ನಂತರ ಆದ ಕೆಲ ಎಡವಟ್ಟುಗಳಿಂದಾಗಿ ಕಾರ್ಲಾಳ ತಂಗಿ ಟ್ಯಾಮಿಯ ಕೊಲೆಯಾಗುತ್ತದೆ. ಮುಂದೆಯೂ ಮತ್ತಿಬ್ಬರು ಹರೆಯದ ಬಾಲಕಿಯರ ಅತ್ಯಾಚಾರ ಮತ್ತು ಕೊಲೆಗಳಾಗುತ್ತವೆ. ವಿಚಿತ್ರವೆಂದರೆ ಪೌಲ್-ಕಾರ್ಲಾ ಜೋಡಿಯು ತಾವು ಬಾಲಕಿಯರ ಮೇಲೆ ನಡೆಸಿದ್ದ ಪ್ರತಿಯೊಂದು ಚಿತ್ರಹಿಂಸೆಯನ್ನೂ ವ್ಯವಸ್ಥಿತವಾಗಿ ವೀಡಿಯೋ ಚಿತ್ರೀಕರಣ ನಡೆಸಿ ತಮ್ಮ ಸಂಗ್ರಹದಲ್ಲಿರಿಸಿತ್ತು. ಮುಂದೆ ಈ ವೀಡಿಯೋಗಳು ಪ್ರಕರಣದ ಪ್ರಬಲ ಸಾಕ್ಷಿಗಳಾಗಿ ಬದಲಾದವು. 

ಸೂಕ್ಷ್ಮವಾಗಿ ನೋಡಿದರೆ ಇಡೀ ಕೆನಡಾವನ್ನು ಬೆಚ್ಚಿಬೀಳಿಸಿದ್ದ ಬಾರ್ಬೀ-ಕೆನ್ ಪ್ರಕರಣದ ತನಿಖೆಯಲ್ಲಿ ಹಲವಾರು ಲೋಪದೋಷಗಳಿದ್ದವು. ಕೆನಡಾ ನ್ಯಾಯಾಂಗದ ಪ್ಲೀ ಬಾರ್ಗೈನ್ ಹಂತದಲ್ಲಿ ಕಾರ್ಲಾಳ ವಕೀಲರ ತಂಡದ ಬುದ್ಧಿವಂತಿಕೆಯ ನಡೆಗಳಿಂದಾಗಿ ಆಕೆಗೆ ಕೆಲ ವರ್ಷಗಳಷ್ಟೇ ಜೈಲು ಶಿಕ್ಷೆಯಾಯಿತು. ಪತಿ ಪೌಲ್ ತನ್ನ ಅಪರಾಧಿ ಕೃತ್ಯಗಳಿಗಾಗಿ ನನ್ನನ್ನು ಬಳಸಿಕೊಂಡಿದ್ದ ಎಂದು ಆರೋಪಿಸಿದ ಕಾರ್ಲಾ, ಆತನನ್ನು ಜೈಲಿನಲ್ಲಿ ಜೀವನಪರ್ಯಂತ ಕೊಳೆಯುವಂತೆ ಮಾಡಿ, ತಾನು ಮಾತ್ರ ಕೆಲವೇ ವರ್ಷಗಳಲ್ಲಿ ಸ್ವತಂತ್ರಳಾಗಿಬಿಟ್ಟಳು. ಈ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ವೀಡಿಯೋಗಳು ಅದೆಷ್ಟು ಭಯಾನಕವಾಗಿದ್ದವೆಂದರೆ ವಿಚಾರಣೆಗಾಗಿ ಆಯ್ದ ಮಂದಿಯ ಸಮ್ಮುಖದಲ್ಲಷ್ಟೇ ಇವುಗಳನ್ನು ನ್ಯಾಯಾಲಯದಲ್ಲಿ ವೀಕ್ಷಿಸಿದ್ದಲ್ಲದೆ, ನಂತರ ದಿನಗಳಲ್ಲಿ ಇವುಗಳನ್ನು ನಾಶಪಡಿಸಲಾಗಿತ್ತು. 

ಹೀಗೆ ಕೆನಡಾ ನ್ಯಾಯಾಂಗ ಮತ್ತು ಪೋಲೀಸ್ ವ್ಯವಸ್ಥೆಯನ್ನು ತೀವ್ರ ಮುಜುಗರಕ್ಕೀಡುಮಾಡಿದ್ದ ಕಾರ್ಲಾ ಹೊಮೋಲ್ಕಾ ಪ್ರಕರಣದ ನಂತರ ಅಲ್ಲೂ ಆಯೋಗಗಳನ್ನು ರಚಿಸಲಾಯಿತು. ತ್ವರಿತ ಗತಿಯಲ್ಲಿ ಕಾನೂನು ತಿದ್ದುಪಡಿಗಳನ್ನು ಮಾಡಿ, ಮಹಿಳಾ ಸುರಕ್ಷತೆಯ ಕಾನೂನುಗಳನ್ನು ಮತ್ತಷ್ಟು ಬಿಗಿಗೊಳಿಸಲಾಯಿತು. ಮುಂದೆ ತಾನು ನಡೆಸಿದ್ದ ಅತ್ಯಾಚಾರ-ಕೊಲೆಗಳ ರಕ್ತರಂಜಿತ ಕತೆಯನ್ನು ಪುಸ್ತಕ ರೂಪದಲ್ಲಿ ತಂದು ಪೌಲ್ ಬರ್ನಾರ್ಡೋ ಸೆಲೆಬ್ರಿಟಿಯಾಗಲು ಹೊರಟಾಗ ಜನಾಕ್ರೋಶವೇ ಆತನ ಮಹಾತ್ವಾಕಾಂಕ್ಷೆಯನ್ನು ತೊಡೆದುಹಾಕಿತು. ಜೊತೆಗೇ ಆತನ ಪುಸ್ತಕವನ್ನು ತನ್ನ ವೆಬ್ ಸೈಟಿನಲ್ಲಿ ಮಾರಾಟಕ್ಕಿಟ್ಟಿದ್ದ ಜನಪ್ರಿಯ ವೆಬ್ ಸೈಟೊಂದು ಜನಾಕ್ರೋಶಕ್ಕೆ ಮಣಿದು, ಪುಸ್ತಕವನ್ನು ಬದಿಗಿಟ್ಟು ತನ್ನ ಮುಖವನ್ನು ಉಳಿಸಿಕೊಂಡಿತು. 

ಕೆನಡಾದಲ್ಲಿ ಈಗ ಅತ್ಯಾಚಾರ ಪ್ರಕರಣಗಳೇ ಇಲ್ಲವೆಂದಲ್ಲ. ಆದರೆ ಪಶ್ಚಿಮದ ದೇಶಗಳು ತಮ್ಮಲ್ಲಾದ ತಪ್ಪುಗಳಿಂದ ಸಾಕಷ್ಟು ಪಾಠ ಕಲಿತುಕೊಂಡಿವೆ. ಮಹಿಳಾ ಸುರಕ್ಷತೆಯ ಕಾನೂನುಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತಂದಿವೆ. ವಿಶೇಷವಾಗಿ ಪೋಲೀಸ್ ವ್ಯವಸ್ಥೆಯನ್ನು ಸಾಮಾನ್ಯ ಜನತೆಗೆ ಮತ್ತಷ್ಟು ಹತ್ತಿರವಾಗಿಸಿವೆ. ದಿಲ್ಲಿಯ ನಿರ್ಭಯಾ ಪ್ರಕರಣದ ನಂತರ ನಡೆದ ಚಳುವಳಿಗಳ ಬಿಸಿ ಅದೆಷ್ಟು ತೀವ್ರವಾಗಿತ್ತೆಂದರೆ, ಈ ನಿಟ್ಟಿನಲ್ಲಿ ಮಹತ್ವದ ಬದಲಾವಣೆಗಳಾಗುತ್ತದೆಂಬ ಭಾರೀ ನಿರೀಕ್ಷೆಗಳು ಎಲ್ಲರ ಮನದಲ್ಲಿದ್ದವು. ಆದರೆ ನಂತರದ ಕೆಲ ವರ್ಷಗಳಲ್ಲಿ ವಿಪರೀತವೆಂಬಷ್ಟು ಹೆಚ್ಚಾಗಿರುವ ಅತ್ಯಾಚಾರ ಪ್ರಕರಣಗಳು ಸದ್ಯದ ಕಾನೂನಿನಲ್ಲಿರುವ ಲೋಪದೋಷಗಳನ್ನು ಸ್ಪಷ್ಟವಾಗಿ ಎದ್ದು ತೋರಿಸುತ್ತಿವೆ. 

2021 ರ ಎಪ್ರಿಲ್ ಅವಧಿಯಲ್ಲಿ ನನ್ನಂತಹ ಸಾವಿರಾರು ಮಂದಿ ನಿತ್ಯ ಓಡಾಡುವ ಇಫ್ಕೋ ಚೌಕಿನ ಮುಖ್ಯ ರಸ್ತೆಯು ತಪ್ಪು ಕಾರಣಗಳಿಂದಾಗಿ ಸುದ್ದಿ ಮಾಡಿತು. ಅಪರಾತ್ರಿಯ ಹೊತ್ತು ತನ್ನ ಪಾಳಿಯ ಕರ್ತವ್ಯವನ್ನು ಮುಗಿಸಿ, ಕ್ಯಾಬ್ ಒಂದರಲ್ಲಿ ಮನೆಗೆ ತೆರಳುತ್ತಿದ್ದ 24 ರ ಪ್ರಾಯದ ಮಹಿಳಾ ಉದ್ಯೋಗಿಯೊಬ್ಬರನ್ನು ಅಪಹರಿಸಿ, ಹರಿಯಾಣಾದ ಝಜ್ಜರ್ ಪ್ರದೇಶದಲ್ಲಿ ಮೂವರು ಸಾಮೂಹಿಕ ಅತ್ಯಾಚಾರವನ್ನೆಸಗಿದ್ದರು. ನಂತರ ಆಕೆಯನ್ನೂ ಕೂಡ ಅತ್ಯಾಚಾರಿಗಳು ನಿರ್ಜನ ಪ್ರದೇಶವೊಂದರಲ್ಲಿ ಎಸೆದು ಹೋಗಿದ್ದರು.

ಈ ಪ್ರಕರಣದ ಬಿಸಿಯು ತಣ್ಣಗಾಗುವಷ್ಟರಲ್ಲಿ ಇನ್ನೊಂದು, ಮತ್ತೊಂದು ಪ್ರಕರಣಗಳು ಬೆಳಕಿಗೆ ಬರುತ್ತಾ ಈಗೀಗ ಅತ್ಯಾಚಾರಗಳು ನಿತ್ಯದ ಮಾತಾಗಿಬಿಟ್ಟಂತೆ ಕಾಣುತ್ತಿವೆ. ಅತ್ಯಾಚಾರದ ಪ್ರಕರಣವು ಹಿಂದೆಯೂ ಇದ್ದವು; ಈಗ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುವುದರಿಂದ ಬೆಳಕಿಗೆ ಬರುತ್ತಿವೆ ಎಂಬುದನ್ನು ಪರಿಗಣಿಸಿದರೂ ಕೂಡ ಇದೊಂದು ಕಳವಳಕಾರಿ ಅಂಶ. 

ಉತ್ತರಪ್ರದೇಶದ ಪುಟ್ಟ ಹಳ್ಳಿಯೊಂದರಿಂದ ಬಂದ ಸೋನಾಲ್ ಮೆಹ್ರೋತ್ರಾ ದಿಲ್ಲಿಯಲ್ಲಿ ತಮ್ಮ ಕನಸುಗಳನ್ನು ಬೆನ್ನಟ್ಟುತ್ತಾ ಹೋದರು. ಲಕ್ನೋ ಮೂಲದ ಲೀಲಾ ಸೇಥ್ ದೇಶವೇ ಹೆಮ್ಮೆಪಟ್ಟುಕೊಳ್ಳುವಷ್ಟು ಬೆಳೆದರು. ಇತ್ತ ಹೇಳಿಕೊಳ್ಳುವಂತಹ ಆರ್ಥಿಕ ದೃಢತೆಯಿಲ್ಲದ ಕುಟುಂಬವೊಂದರಿಂದ ಬಂದಿದ್ದ ಜ್ಯೋತಿ ಸಿಂಗ್ ಕಣ್ಣುಗಳಲ್ಲೂ ಬೆಟ್ಟದಷ್ಟು ಕನಸುಗಳಿದ್ದವು. ಅಸಲಿಗೆ ತನ್ನನ್ನು ಮತ್ತು ಜ್ಯೋತಿಯನ್ನು ಸೋನಾಲ್ ಮೆಹ್ರೋತ್ರಾ ಬೆಸೆಯುವುದು ಇದೇ ಕನಸುಗಳಿಂದ. ಪುಟ್ಟ ಹಳ್ಳಿಗಳಿಂದ, ದುರ್ಬಲ ಆರ್ಥಿಕ ಸ್ಥಿತಿಯುಳ್ಳ ಮನೆಯಿಂದ ಬರುವ ಹೆಣ್ಣುಮಕ್ಕಳು ಕಾಣುವ ಅಗಾಧ ಕನಸುಗಳಿಂದ ಮತ್ತು ಕೆಂಡ ಹಾಸಿದ ಹಾದಿಯಲ್ಲೂ ಮಾಡುವ ಅದ್ಭುತ ಸಾಧನೆಗಳಿಂದ. 

ದಿಲ್ಲಿಯಂತಹ ಶಹರಗಳು ಅಂದಿಗೂ, ಇಂದಿಗೂ ಕನಸುಗಾರರ ಕನಸುಗಳನ್ನು ನನಸಾಗಿಸುವ ಅದ್ಭುತ ಕರ್ಮಭೂಮಿಗಳು. ಅದರಲ್ಲೂ ನಮ್ಮದು ವಲಸಿಗರ ತಲೆಮಾರು. ಹೊಟ್ಟೆಪಾಡಿಗಾಗಿ ಹಳ್ಳಿಗಳಿಂದ ಮಹಾನಗರಿಗಳಿಗೆ ಬರುವ ಮಂದಿಯಲ್ಲಿ ಅಪಾರ ಕನಸು, ಮುಗಿಯದಷ್ಟು ಮಹಾತ್ವಾಕಾಂಕ್ಷೆಗಳಿರುವುದು ಸಹಜ.

ಹೀಗಿರುವಾಗ ಪರಿಚಿತ ಬೀದಿಗಳಲ್ಲಿ ಧೈರ್ಯದಿಂದ ಓಡಾಡುವುದೇ ಒಂದು ಸವಾಲಾಗಿಬಿಟ್ಟರೆ ನಮ್ಮ ದೇಶದ ಹಳ್ಳಿಗಳೂ, ದಿಲ್ಲಿಯಂತಹ ಮಹಾನಗರಿಗಳೂ ತೆರೆದ ಜೈಲಾಗಿ ಬದಲಾಗುವುದರಲ್ಲಿ ಅತಿಶಯೋಕ್ತಿಯಿಲ್ಲ. ಬೇರ್ಯಾವುದೋ ಬಂಧನದಲ್ಲಿದ್ದರೆ ಯಾವತ್ತಾದರೊಂದು ದಿನ ತಪ್ಪಿಸಿಕೊಳ್ಳಬಹುದು. ಬದುಕಬೇಕಾಗಿರುವ ಜಗತ್ತೇ ಜೈಲಾಗಿಬಿಟ್ಟರೆ ಇನ್ನೆಲ್ಲಿಯ ಮುಕ್ತಿ? ದೊಡ್ಡದೊಂದು ಕನಸು ಕಾಣುವ ಹೆಣ್ಣುಮಗುವೊಂದು ಉಳಿವಿನ ಪ್ರಾಥಮಿಕ ಹಂತದಲ್ಲೇ ಬಡಿದಾಡಿಕೊಳ್ಳಬೇಕಾದರೆ ಅದಕ್ಕಿಂತ ಶೋಚನೀಯ ಪರಿಸ್ಥಿತಿಯು ಬೇರೊಂದಿರಲಿಕ್ಕಿಲ್ಲ.

‍ಲೇಖಕರು Admin

August 30, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: