ಜಯಲಕ್ಷ್ಮಿ ಪಾಟೀಲ್ ಅಂಕಣ- ಸೋತ ನೋವು ಎಲ್ಲವೂ ಈಗ ಮಧುರ ಅನುಭೂತಿಗಳು…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯಲಿದ್ದಾರೆ.

15

ನಮ್ಮಲ್ಲಿ ಮುಟ್ಟು ಕಂಡ ಕೂಡಲೇ ಎರೆದುಕೊಳ್ಳುವುದು ಕಡ್ಡಾಯವಾಗಿತ್ತು. ಅದು ಮಧ್ಯಾರಾತ್ರಿಯದರೂ ಸರಿ ಎರೆದುಕೊಂಡೇ ಕಿಚಿಪಿಚಿ ಒದ್ದೆ ಕೂದಲಿನೊಂದಿಗೇ ಮಲಗಬೇಕು. ಮಹಾ ಹಿಂಸೆ ಅದು. ದೇವರನ್ನು ಮುಟ್ಟುವ ಹಾಗಿಲ್ಲ ಅನ್ನುವುದು ಬಿಟ್ಟರೆ ಮಾಮೂಲಿ ದಿನಗಳಂತೆಯೇ, ಸ್ನಾನ, ಊಟ ಮಾಡಿಕೊಂಡು ಮನೆಯ ಒಳಗೆ ಹೊರಗೆ ಓಡಾಡಿಕೊಂಡಿರಬಹುದಿತ್ತು.

ಹೀಗಾಗಿ ಗಂಡಸರಿಗೆ ಗೊತ್ತಾಗುವ ಸಂಭವ ಕಮ್ಮಿ ಇತ್ತಾದ್ದರಿಂದ ಅವರಿಗೆ ಇದೆಲ್ಲ ಗೊತ್ತಾಗುವುದು ಸರಿಯಲ್ಲ ಎಂದೇ ನಮ್ಮೆಲ್ಲರ ಅನಿಸಿಕೆಯಾಗಿತ್ತು. ಆದರೆ ಬ್ರಾಹ್ಮಣರ ಮನೆಗಳಲ್ಲಿ ಗಂಡಸರು ‘ಅಕಿ ಹೊರಗ್ ಕೂತಾಳ, ನಾನ ಅಡಗಿ ಮಾಡಬೇಕಾಗೇದ ನೋಡ್ರಿ, ಅವ್ರ ಆರಾಮು ನಮಗ ಪನಿಷಮೆಂಟು’ ಥರದ ಮಾತುಗಳನ್ನು ಕೇಳಿದಾಗ, ‘ಅಯ್ಯಾ ಏನ್ ಅಸಂಯ್ಯವಾ, ಗಣಮಕ್ಕ್ಳು ಇಂಥಾವೆಲ್ಲ ಮಾತಾಡ್ತಾರ!! ಎಂದು ಮಾತಾಡಿಕೊಳ್ಳುತ್ತಿದ್ದೆವು. ಆದರೆ ನಿಂಬಾಳಕ್ಕೆ ಹಬ್ಬ ಹರಿದಿನಗಳಲ್ಲಿ, ಬೆಲ್ಲದ ಗಾಣದ ಸಮಯದಲ್ಲಿ ಯಾರಾದರೂ ಮುಟ್ಟಾದರೋ, ನಮ್ಮ ಮನೆಯಲ್ಲೂ ಅವರು ಪ್ರದರ್ಶನಕ್ಕಿಟ್ಟ ವಸ್ತುವಿನಂತೆ ಮನೆ ಎದುರಿಗಿರುವ ಹುಣಸೆ ಮರದ ಕೆಳಗೆ ಕೂರಬೇಕಿತ್ತು!

ಹಬ್ಬಗಳಲ್ಲಿ ಮನೆಯ ಗಂಡಸರಿಗೆ ಗೊತ್ತಾಗುತ್ತದಲ್ಲ ಎನ್ನುವ ಸಂಕೋಚ ಜೀವ ಹಿಂಡಿದರೆ, ಗಾಣದ ಸಮಯದಲ್ಲಿ ಕೆಲಸಕ್ಕೆಂದು ಬಂದ ಹತ್ತಿಪ್ಪತ್ತು ಗಂಡಾಳುಗಳ ದೃಷ್ಟಿ ಎದುರಿಸುವ ಹಿಂಸೆ. ಅದರಿಂದ ತಪ್ಪಿಸಿಕೊಳ್ಳಲು, ಕೆಲಸದವರೆಲ್ಲ ಹೋಗುವವರೆಗೆ ಹೆಣ್ಣುಮಕ್ಕಳು ತೋಟದ ಇನ್ನ್ಯಾವುದೋ ಭಾಗಕ್ಕೆ ಹೋಗಿ ಕೂತಿದ್ದು ಬರುತ್ತಿದ್ದರು.

ರಾತ್ರಿ ಮಲಗಲು ಅಡುಗೆ ಮನೆಗೇ ಹೊಂದಿಕೊಂಡಂತಿದ್ದ ಕೋಣೆಯೊಂದಿತ್ತು ಮತ್ತು ಅದಕ್ಕೆ ಹೊರಗಿನಿಂದ ಪ್ರತ್ಯೇಕ ಬಾಗಿಲಿತ್ತು. ಅದು ಅಡುಗೆ ಮನೆಗೆ ಹೊಂದಿಕೊಂಡಂತಿತ್ತಾದ್ದರಿಂದ ಹಗಲು ಆ ಕೋಣೆಯಲ್ಲಿ ಕೂರುವ ಹಾಗಿರಲಿಲ್ಲವಾಗಿ ಹುಣಸೆಮರದಡಿ ಕೂರಲು ಹೇಳುತ್ತಿದ್ದರು. ನಾನು ಮೊದಲ ಸಲ ನಿಂಬಾಳದಲ್ಲಿ ಗಾಣದ ಸಮಯದಲ್ಲಿ ಈ ಹಿಂಸೆಯನ್ನು ಅನುಭವಿಸಬೇಕಾಗಿ ಬಂದು, ದೊಡ್ಡವರ ತೋಟ ಸುತ್ತುವ ಐಡಿಯಾ ಗೊತ್ತಿಲ್ಲದೇ ಗೂಬೆಯಂತೆ ಅಲ್ಲೇ ಕೂತು, ಬಂದವರ ಹೋದವರ ಕಣ್ಣುಗಳಲ್ಲಿನ ಮುನ್ನಿನ ಕುತೂಹಲ, ಗೊತ್ತಾದ ನಂತರದ ವಿಚಿತ್ರ ನಗೆ ಎದುರಿಸಿದ್ದಿದೆಯಲ್ಲ ಆ ಮುಜುಗರವನ್ನೆಂದೂ ಮರೆಯಲಾರೆ ನಾನು. ಅದರ ಮೇಲೆ ಯಾರೋ ಕುಹಕಿ ಒಬ್ಬ ಹಲ್ಲು ಕಿರಿಯುತ್ತಾ, ‘ಯಾಕವ್ವಿ, ಕಾಗಿ ಮುಟ್ಟೇದೇನು?’ ಎಂದಿದ್ದ! ಅದನ್ನು ನೆನೆದು ಎಷ್ಟೋ ದಿನ ಹಿಂಸೆ ನಾಚಿಕೆ ಪಟ್ಟಿದ್ದಿದೆ ನಾನು.

ನನ್ನ ತಾಯಿಯ ತವರಿನಲ್ಲಿ, ಮುಟ್ಟು ಕಂಡ ಕೂಡಲೇ ಎರೆದುಕೊಳ್ಳುವುದಕ್ಕೆ, ದೇವರನ್ನು ಮುಟ್ಟದಿರುವುದಕ್ಕೆ ಮಾತ್ರ ಈ ಮೈಲಿಗೆ ಸೀಮಿತವಾಗಿತ್ತು. ಈಗ ನನ್ನ ಮನೆಯಲ್ಲಿ ನಾನು ದೇವರ ಪೂಜೆ ಮಾಡಬೇಕೆನಿಸಿದರೆ ಯಾವುದೇ ಮುಜುಗರವಿಲ್ಲದೆಯೇ ಮಾಡುತ್ತೇನೆ, ಮಕ್ಕಳಿಗೂ ಅದನ್ನೆ ಹೇಳಿಕೊಟ್ಟಿರುವೆ. ಈ ಹೊರಗೆ ಕೂರುವ ಪದ್ಧತಿ ಶುರುವಾದ ಕಾಲದಲ್ಲಿ ಮನೆಗಳಲ್ಲಿ ಈಗಿನಂತೆ ಕುಟ್ಟುವ, ಬೀಸುವ, ಬಟ್ಟೆ ತೊಳೆಯುವ ಸಾಧನಗಳಿರಲಿಲ್ಲ.

ಗ್ಯಾಸ್ ಸ್ಟೋವ್ ಗಳಿರಲಿಲ್ಲ, ಮನೆಯ ಬಾಗಿಲಿಗೇ ನಲ್ಲಿಯ ನೀರು ಬರುತ್ತಿರಲಿಲ್ಲ, ನೆಲಕ್ಕೆ ಹಾಸುಗಲ್ಲುಗಳಿರಲಿಲ್ಲ ಇತ್ಯಾದಿಯಾಗಿ ಅನೇಕ ಸೌಲಭ್ಯಗಳಿರಲಿಲ್ಲ. ಇವೆಲ್ಲವನ್ನೂ ನಿತ್ಯವೂ ಮಹಿಳೆಯರೇ ಮಾಡಬೇಕಾಗಿದ್ದು, ಅವಿಶ್ರಾಂತವಾಗಿ ದುಡಿಯುತ್ತಿದ್ದ ಹೆಣ್ಣುಮಕ್ಕಳಿಗೆ ವಿಶ್ರಾಂತಿಯ ಅಗತ್ಯ ತುಂಬಾ ಇತ್ತು. ಅದರಲ್ಲೂ ಮುಟ್ಟಿನ ಸಮಯದಲ್ಲಿ ಕೆಲವರಿಗೆ ಕಾಡುವ ಹೊಟ್ಟೆ, ಸೊಂಟ ಕಾಲು ನೋವುಗಳು, ಅತಿಯಾದ ರಕ್ತಸ್ರಾವ ಇವೆಲ್ಲಕ್ಕೂ ವಿಶ್ರಾಂತಿ ಅತ್ಯಗತ್ಯವಾಗಿತ್ತು. ಆದರೆ ಅವಿದ್ಯಾವಂತರೇ ಹೆಚ್ಚಿದ್ದ ಆ ಕಾಲದಲ್ಲಿ ವೈಚಾರಿಕ ನೆಲೆಯಲ್ಲಿ ವಿಶ್ರಾಂತಿಯ ಅಗತ್ಯವನ್ನು ಜನರಿಗೆ ತಿಳಿಸಿ ಹೇಳಿದಲ್ಲಿ ನಂಬಿ ಪಾಲಿಸುವುದು ಅಸಾಧ್ಯವಾದುದರಿಂದ, ದೇವರ ಹೆಸರಲ್ಲಿ ಮಡಿ ಮೈಲಿಗೆಯ ರೂಪದಲ್ಲಿ ವಿಶ್ರಾಂತಿ ಸಿಗುವಂತೆ ಮಾಡಿದ್ದರೆಂದು ನನ್ನ ನಂಬುಗೆ.

ದುಡಿದರೆ ಮಾತ್ರ ಇಂದಿನ ಒಪ್ಪತ್ತು ಊಟ ಎಂಬ ಪರಿಸ್ಥಿತಿಯಲ್ಲಿರುವ ಸಮುದಾಯಗಳೆಲ್ಲವೂ ಈ ಮಡಿ ಮೈಲಿಗೆಗಳನ್ನು ಹಬ್ಬಹರಿದಿನಗಳಿಗಾಗಿ ಸೀಮಿತ ಮಾಡಿಕೊಂಡು, ಅನುಕೂಲಗಳಿದ್ದ ಸಮಯದಲ್ಲೂ ಅದನ್ನೇ ಪರಂಪರೆಯಾಗಿ ಮುಂದುವರೆಸಿಕೊಂಡು ಬಂದಿವೆ. ಈಗ ಅಂಥ ಪರಿಸ್ಥಿತಿಗಳು ಮುಂಚಿನಂತೆ ಎಲ್ಲರಿಗೂ ಇಲ್ಲವಾದ್ದರಿಂದ ಈಗಲೂ ಪರಂಪರೆ, ಸಂಸ್ಕೃತಿಯ ಹೆಸರಿನಲ್ಲಿ ಅದನ್ನೇ ಮುಂದುವರೆಸಿದಲ್ಲಿ ಅದು ಮೂರ್ಖತನವಲ್ಲದೆ ಬೇರೇನೂ ಅಲ್ಲ.

ದೋಟಿಹಾಳದಲ್ಲಿದ್ದಾಗ ಪಂದ್ಯಾಟಗಳಲ್ಲಿ ಭಾಗವಹಿಸಿದ್ದರ ನೆನಪು ಖುಷಿ ಕೊಡುತ್ತದೆ. ಅಲ್ಲಿಗೆ ಬಂದಾಗಲಿಂದ ಖೋಖೊ, ವಾಲಿಬಾಲ್, ಶಾಟ್ಫುಟ್, ಡಿಸ್ಕ್ ಥ್ರೋ, ಸಾರಿಗೆರೆ ಆಟ ಎಲ್ಲದರಲ್ಲೂ ಭಾಗವಹಿಸುತ್ತಿದ್ದರೂ ನಾನೇನು ಗ್ರೇಟ್ ಸ್ಪೋರ್ಟ್ಸ್ಮನ್ ಆಗಿರಲಿಲ್ಲ. ನಾನಲ್ಲಿದ್ದಾಗ ತಾಲ್ಲೂಕು, ಜಿಲ್ಲಾ ಮಟ್ಟದ ಪಂದ್ಯಾಟಗಳಿಗಾಗಿ ಕುಷ್ಟಗಿ ಹನುಮಾನಾಳ, ಹನುಮಸಾಗರ, ಕೊಪ್ಪಳ ಮತ್ತು ಹೊಸಪೇಟೆಗೆ ಹೋಗಿತ್ತು ನಮ್ಮ ಶಾಲೆಯ ತಂಡ. ಅದರಲ್ಲಿ ನಾನೂ ಇದ್ದು ಖೋಖೊ, ಶಾಟ್ಫುಟ್ ಮತ್ತು ಡಿಸ್ಕ್ ಥ್ರೋ ಗಳ ಸ್ಪರ್ಧೆಗಳಲ್ಲಿ ಭಾಗವಹಿಸಿರುವೆ. ಡಿಸ್ಕ್ ಥ್ರೋ ನಲ್ಲಿ ತಾಲ್ಲೂಕು ಮಟ್ಟದಲ್ಲಿ ಗೆದ್ದು, ಕುಷ್ಟಗಿ ತಾಲ್ಲೂಕಿನ ಪ್ರತಿನಿಧಿಯಾಗಿ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಸೋತೆ. ಆ ಹುರುಪು ಗೆದ್ದೇ ಗೆಲ್ಲುತ್ತೀವಿ ಎಂಬ ಹುಮ್ಮಸು, ಸೋತ ನೋವು ಎಲ್ಲವೂ ಈಗ ಮಧುರ ಅನುಭೂತಿಗಳು.

ಶಿವರಡ್ಡಿ ಸರ್ ನಮ್ಮ ಪಿಇ ಟೀಚರ್ ಆಗಿದ್ದರು. ತುಂಬಾ ಶಿಸ್ತಿನ  ಮತ್ತು ಮಕ್ಕಳನ್ನು ಯಾವತ್ತೂ ಪ್ರೋತ್ಸಾಹಿಸುತ್ತಿದ್ದ ವ್ಯಕ್ತಿ ಅವರು. ನಾನು ಹತ್ತನೇ ತರಗತಿಯಲ್ಲಿದ್ದಾಗ ಅವರಿಗೆ ಬೇರೆ ಊರಿಗೆ ವರ್ಗವಾಯಿತು. ಆಗ ಹೈಸ್ಕೂಲಿನ ಮಕ್ಕಳೆಲ್ಲ ಅಳುತ್ತಾ ಬೀಳ್ಕೊಟ್ಟಿದ್ದೆವು. ಅವರ ನಂತರ ಬಂದ ಪಿಇ ಟೀಚರ್ ಒಳ್ಳೆಯವರೇ ಆಗಿದ್ದರೂ ನಮಗವರು ಶಿವರಡ್ಡಿ ಸರ್ ಹಾಗೆ ಇಲ್ಲವೇ ಇಲ್ಲ ಅನಿಸಿ ಆಟದಲ್ಲಿ ಉತ್ಸಾಹವನ್ನೇ ತೋರುತ್ತಿರಲಿಲ್ಲ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

August 30, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: