ನಿರುಪಮಾ ಉಚ್ಚಿಲ್ ಕಂಡಂತೆ ಶಾರದಮ್ಮಾಯಿ..

  ನಿರುಪಮಾ ಉಚ್ಚಿಲ್

ನಮಗೆ ಇಬ್ಬರು ಅಮ್ಮಂದಿರು. ಒಬ್ಬರು ನಮ್ಮ ಅಮ್ಮ ಸುಂದರಿ. ಇನ್ನೊಬ್ಬರು ನಮ್ಮ ಅಮ್ಮಾಯಿ ಶಾರದ. ಅಮ್ಮಾಯಿ ಎಂದರೆ ಅತ್ತೆ, ನಮ್ಮ ಮಾತೃಭಾಷೆ ಯಲ್ಲಿ. ಶಾರದಮ್ಮಾಯಿ ನಮ್ಮ ಸೋದರತ್ತೆಯೂ ಹೌದು, ಸೋದರ ‌ಮಾವನ ಪತ್ನಿಯೂ ಹೌದು. ಅಮ್ಮ ಮತ್ತು ಅಮ್ಮಾಯಿಯದು ಸಾಟೆ ಮದುವೆ. ನಮ್ಮ ಭಾಷೆಯಲ್ಲಿ ಚಾಟ್ ಮದುವೆ. ಅಮ್ಮ ಮದುವೆಯಾಗಿ ಗುಡ್ಡೆಮನೆಗೆ ಬಂದರು. ಅಮ್ಮಾಯಿ ಬೊಗರಿಯಡಿ ಮನೆಗೆ ಹೋದರು.

ಶಾರದಮ್ಮಾಯಿಗೆ ಮಕ್ಕಳಿರಲಿಲ್ಲ. ನಮ್ಮ ಅಮ್ಮನಿಗೆ ನಾವು ಅವಳಿ ಜವಳಿ ಮಕ್ಕಳು. ಎರಡು ಹೆರಿಗೆಯಲ್ಲಿ ನಾಲ್ಕು ಹೆಣ್ಣು ಮಕ್ಕಳು. ನಮ್ಮ ಗೆಳತಿಯರು ನಮ್ಮನ್ನು ಎರಡು ವಿಭಾಗ ಮಾಡಿದ್ದರು. ಇಬ್ಬರು ಅಮ್ಮನ ಮಕ್ಕಳು ಮತ್ತಿಬ್ಬರು ಅಮ್ಮಾಯಿ ಮಕ್ಕಳು. ನಾವು ತದ್ರೂಪಿ ಅವಳಿಗಳಾಗದೆ ಇದ್ದುದು ಒಂದು ಕಾರಣವಾಗಿತ್ತು. ಇಬ್ಬರು ಅಮ್ಮಾಯಿಯನ್ನು ಹೋಲುತ್ತಾರೆ ಎಂದು ಅನೇಕರ ಅನಿಸಿಕೆ. ನಮ್ಮ ಮದುವೆಯಾಗಿ ಕೆಲವು ವರ್ಷಗಳ ನಂತರ ಭೇಟಿಯಾದ ಗೆಳತಿಯರು ಅಮ್ಮನೊಂದಿಗೆ ಅಮ್ಮಾಯಿ ಬಗ್ಗೆಯೂ ವಿಚಾರಿಸುತ್ತಿದ್ದರು. ಅವರಿಬ್ಬರ ಕ್ಷೇಮ ಸಮಾಚಾರದ ಬಗ್ಗೆ ನಮ್ಮೊಂದಿಗೆ ಮಾತಾಡುವುದು ಸರ್ವೇಸಾಮಾನ್ಯವಾಗಿತ್ತು. ಹಾಗೂ ಬಾಲ್ಯದಲ್ಲಿ ಅವರಿಬ್ಬರೊಡನೆ ಕಳೆದ ಮಧುರ ಕ್ಷಣಗಳನ್ನು ಮೆಲುಕು ಹಾಕುತ್ತಿದ್ದರು.

ಶಾರದಮ್ಮಾಯಿಯೊಂದಿಗೆ ನಮ್ಮ ಪರಿಚಯ
ನಮ್ಮ ಮುಂಬಯಿ ದಿನಗಳದ್ದು. ಮುಂಬಯಿಯ ಪರೇಲ್ ಉಪನಗರಿಯ ‘ಚಾಲ್’ ಕಟ್ಟಡದಲ್ಲಿ ನಾವು ವಾಸವಾಗಿದ್ದೆವು. ಅಮ್ಮಾಯಿ ವಾಸಿಸುತ್ತಿದ್ದ ಕಟ್ಟಡ ನಮ್ಮ ಅಡುಗೆ ಕೋಣೆಯ ಕಿಟಿಕಿಯಿಂದ ಕಾಣುತ್ತಿತ್ತು. ಅಮ್ಮಾಯಿ ಮತ್ತು ಮಾಮ ವಾಸಿಸುತ್ತಿದ್ದ ಕೋಣೆ ಕಟ್ಟಡದ ಆಚೆ ಬದಿಯಲ್ಲಿ ಇದ್ದುದರಿಂದ ನಮಗೆ ಕಾಣುತ್ತಿರಲಿಲ್ಲ. ರವಿವಾರದ ದಿನಗಳಲ್ಲಿ ಅಮ್ಮ ನಮ್ಮನ್ನು ಕರೆದುಕೊಂಡು ಅಮ್ಮಾಯಿಯವರಲ್ಲಿಗೆ ಹೋಗುತ್ತಿದ್ದರು. ಗಾಜಿನ ಭರಣಿಯಿಂದ ಮಾವ ತೆಗೆದುಕೊಟ್ಟ ಉಂಡೆ, ಚಕ್ಕುಲಿಗಳನ್ನು ತಿಂದ ನೆನಪು. ಮಾವ ರೇಡಿಯೋ ಕಂಪೆನಿಯೊಂದರ ಉದ್ಯೋಗಿಯಾಗಿದ್ದರು. ಆ ದಿನಗಳಲ್ಲಿ ಅವರು ಕೈಯಿಂದ ತಯಾರಿಸಿದ ಪುಟ್ಟ ಟ್ರಾನ್ಸಿಸ್ಟರ್ ಒಂದು ಅವರು ಊರಿನಲ್ಲಿ ಕಳೆದ ಕೆಲವು ವರ್ಷಗಳು ಅವರ ಸಂಗಾತಿಯಾಗಿತ್ತು.

ಅಮ್ಮ ದೊಡ್ಡವರಾದ ನಮ್ಮನ್ನು ಅಮ್ಮಾಯಿ ಮನೆಗೆ ಕರೆದುಕೊಂಡು ಹೋಗುವುದಕ್ಕಿಂತ ಹೆಚ್ಚಾಗಿ ತಂಗಿಯರನ್ನು ಕರೆದುಕೊಂಡು ಹೋಗುತ್ತಿದ್ದರು. ನಾವು ಪಪ್ಪನೊಟ್ಟಿಗೆ ಫುಟ್ಬಾಲ್ ಮ್ಯಾಚ್ ನೋಡಲಿಕ್ಕೆ ಹೋಗುತ್ತಿದೆವು. ಉಚ್ಚಿಲ್ ಯುನೈಟೆಡ್ ಕ್ಲಬ್ ನ ಸಕ್ರಿಯ ಸದಸ್ಯರಾಗಿದ್ದ ಪಪ್ಪ ಫುಟ್ಬಾಲ್ ಆಡುತ್ತಿದ್ದರು. ನಾನು ಮತ್ತು ನನ್ನ ಅವಳಿ ಅನುಪಮಾ ಮೇಲೆ ಗ್ಯಾಲರಿಗೆ ವಿಧೇಯರಾಗಿ ಹತ್ತಿ ಪಪ್ಪ ಕಾಲಿನಿಂದ ಚೆಂಡು ತುಳಿಯುವುದನ್ನೂ ಆಚೆ ಈಚೆ ಓಡುವುದನ್ನೂ ನೋಡುತ್ತಾ ಕುಳಿತಿರುತ್ತಿದ್ದೆವು. ಹೆಚ್ಚಿನ ರವಿವಾರ ಹೀಗೇ ಕಳೆಯುತ್ತಿತ್ತು. ಪುರಂದರ ಸ್ಟೇಡಿಯಂ ನಲ್ಲಿ ನಡೆಯುತ್ತಿದ್ದ ಈ ಮ್ಯಾಚುಗಳಲ್ಲಿ ಪಪ್ಪ ಗೋಲ್ ಕೀಪರಾಗಿರುತ್ತಿದ್ದರು.

ಶಾರದಮ್ಮಾಯಿಯೊಡನೆ ನಡೆಯುತ್ತಿದ್ದ ಕೆಲವೇ ಭೇಟಿಗಳು ಅವರ ಬಗ್ಗೆ ಅಂತಹ ಆತ್ಮೀಯತೆಯೇನನ್ನು ನಮ್ಮ ಮನದಲ್ಲಿ ಮೂಡಿಸಿರಲಿಲ್ಲ. ನಮಗೆ ಆತ್ಮೀಯರಾಗಿದ್ದದ್ದು ನಮ್ಮ ಚಿಕ್ಕತ್ತೆ ದೇವಕಿ ಅಮ್ಮಾಯಿ. ನಾವು ವಾಸವಾಗಿದ್ದ ಕಟ್ಟಡದ ಎಡ ಬದಿಯಲ್ಲಿ ವಾಸವಾಗಿದ್ದ ದೇವಕಿ ಅಮ್ಮಾಯಿಯೊಡನೆ ಸಿನೆಮಾ ನೋಡಲು ಹೋಗುವುದು, ನಮ್ಮ ಓರಗೆಯವಳಾದ ಅಮ್ಮಾಯಿಯ ಮಗಳು ನೀಲುವಿನೊಡನೆ ಆಟವಾಡುವುದು, ಅಮ್ಮಾಯಿಯೊಡನೆ ಮಾರ್ಕೆಟ್ ಗೆ ಹೋಗವುದು, ಅಮ್ಮಾಯಿ ನೆಂಟರ ಮನೆಗೆ ಹೋಗುವಾಗ ಅವರ ಜೊತೆಯಾಗಿರುವುದು ನಮ್ಮ ಬಾಂಧವ್ಯವನ್ನು ಗಟ್ಟಿ ಗೊಳಿಸಿತ್ತು.

ನಂತರದ ದಿನಗಳಲ್ಲಿ ನನ್ನನ್ನು ಮತ್ತು ಅನುಪಮನನ್ನು ಶಾಲೆಗೆ ಸೇರಿಸುವ ತಯಾರಿ ನಡೆದಿತ್ತು. ಪರೇಲ್ ಗೆ ಹತ್ತಿರವಿರುವ ಕನ್ನಡ ಶಾಲೆಗೆ ನಮ್ಮನ್ನು ಸೇರಿಸಲು ಪಪ್ಪ ಒಂದನೆಯ ತರಗತಿಯ ಪುಸ್ತಕ, ಬಳಪ, ಕಡ್ಡಿಗಳು ಎಲ್ಲವನ್ನೂ ತಂದಿದ್ದರು. ಅದಾಗಲೇ ಅಮ್ಮ ನಮ್ಮನ್ನು ಓದಿಸಲು ಮತ್ತು ಬರೆಯಿಸಲು ಪ್ರಾರಂಭಿಸಿದ್ದರು. ಇಬ್ಬರಿಗೂ ಒಂದೇ ರೀತಿಯ ಖಾಖಿ ಚೀಲ,ಕೊಡೆಗಳು. ಕೊಡೆಗಳಲ್ಲಿ ‘ಅನು’ ‘ನಿರು’ ಹೆಸರುಗಳು. ಜೂನ್ ತಿಂಗಳಲ್ಲಿ ಶಾಲೆ ಆರಂಭವಾಗಲಿಕ್ಕಿತ್ತು. ನಂತರ ಏನಾಯಿತೋ ? ನಾವು ಊರಿಗೆ ಹೊರಡುವ ತಯಾರಿ ನಡೆಸಿದ್ದೆವು. ಅಮ್ಮ ಅಳುತ್ತಾ ನೆರೆಯವರಿಗೆ ,ಚಾಲ್ ನ ಇತರ ಮನೆಯವರಿಗೆ ಊರಿಗೆ ಹೊರಡಲಿರುವ ವಿಷಯ ಹೇಳುವಾಗ ನಾನು
ಅಮ್ಮನನ್ನು ಹಿಂಬಾಲಿಸುತ್ತಿದ್ದೆ. ಪಪ್ಪನೊಡನೆ ರೈಲಿನಲ್ಲಿ ಪ್ರಯಾಣಿಸಿ ಊರಿಗೆ ಮುಟ್ಟಿದೆವು. ಮುಂಬಯಿಗೆ ಹೋಗುವಾಗ ಸಬರಮತಿ ಹೆಸರಿನ ಹಡಗಿನಲ್ಲಿ ಹೋಗಿದ್ದೆವು. ನಾವಿನ್ನೂ ಚಿಕ್ಕವರಾಗಿದ್ದುದರಿಂದ ಪಯಣದ ಬಗ್ಗೆ ನಮಗೆ ನೆನಪಿಲ್ಲ. ಅಮ್ಮ ಆ ಅನುಭವಗಳನ್ನು ನಮ್ಮಲ್ಲಿ ಹಂಚಿದ್ದರು. ಆ ಬಗ್ಗೆ ತುಂಬಾ ಹೇಳುತ್ತಿದ್ದರು.

ಸಾವಿರದ ಒಂಭೈನೂರ ಅರುವತೈದರಲ್ಲ್ಲಿ ನಾವು ಆ ಊರಿನ ಮನೆಗೆ ಮುಟ್ಟುವಾಗ ಏನಾಶ್ಚರ್ಯ! ಶಾರದಮ್ಮಾಯಿ ಮನೆಯಲ್ಲಿ! ಮನೆಯಲ್ಲಿ ನಮ್ಮಜ್ಜಿ ( (ನಾವು ಅವರನ್ನು ‘ಪಪ್ಪಮ್ಮ ‘ಎಂದು ಕರೆಯುತ್ತಿದ್ದೆವು). ಅಂದಿನಿಂದ ‘ಗುಡ್ಡೆ ಮನೆ’ ನಮ್ಮ ಮನೆಯಾಯಿತು. ಪಪ್ಪಮ್ಮನ ಮಡಿಲು ಮಮತೆಯ ಶ್ರೀ ರಕ್ಷೆಯಾಯಿತು. ಪಪ್ಪ ಪಪ್ಪಮ್ಮ ನ ಆಸರೆಯಲ್ಲಿ ಬಿಟ್ಟು ಉದ್ಯೋಗ ನಿಮಿತ್ತ ಮುಂಬಯಿಗೆ ಮರಳಿದರು. ಉಚ್ಚಿಲ ಬೋವಿ ಶಾಲೆ ನಮ್ಮ ಶಾಲೆಯಾಯಿತು. ಮನೆಗೆ ಬಂದು ಹೋಗುವ , ಕೆಲವು ಸಲ ಮನೆಯಲ್ಲಿಯೇ ನೆಲಸುವ ದೊಡ್ಡಪ್ಪಂದಿರ ಮಕ್ಕಳು ನಮ್ಮ ಪ್ರೀತಿಯ ಅಕ್ಕಂದಿರಾದರು,ಅಣ್ಣಂದಿರಾದರು. ಕೆಲವು ಸಲ ತನ್ನ ಗಂಡನ ಮನೆಯಲ್ಲಿ, ನಂತರ ಮೇಲಿನ ಹಿತ್ತಿಲ ಮನೆಯಲ್ಲಿ ಕಳೆದ ಶಾರದಮ್ಮಾಯಿ ಪಪ್ಪಮ್ಮ ನ ಕಾಲಾನಂತರ ಗುಡ್ಡೆಮನೆಯಲ್ಲಿ ನೆಲೆಸಲು ಆರಂಭಿಸಿದರು.ಅಂದಿನಿಂದ ಅಮ್ಮಾಯಿ ನಮ್ಮ ಇನ್ನೊಬ್ಬ ಅಮ್ಮನೇ ಆದರು.

ಶಾಲೆಗೆ ಹೋಗುವಾಗ ಬೆಳಗಿನ ಅವಸರದಲ್ಲಿ ನಮ್ಮ ತಲೆಬಾಚಿ ಜಡೆ ಕಟ್ಟಲು ಇಬ್ಬರು ಅಮ್ಮಾಯಿ ಬಳಿಗೆ ಹೋದರೆ ಇನ್ನಿಬ್ಬರ ಜಡೆ ಅಮ್ಮ ಕಟ್ಟುತ್ತಿದ್ದರು. ಬೆಳಿಗ್ಗೆ ಅಮ್ಮ ಏಳುವಾಗಲೇ ಬೇಗ ಎದ್ದು ಅಮ್ಮನೊಡನೆ ಬೆಳಿಗ್ಗೆ ಯ ಉಪಹಾರದ ತಯಾರಿ ನಡೆಸುತ್ತಿದ್ದರು. ಮಧ್ಯಾಹ್ನದ ಊಟದ ತಯಾರಿಸಲು ಕಲ್ಲಿನಲ್ಲಿ ಅರೆಯುವ ಕೆಲಸವನ್ನು ಹೆಚ್ಚಾಗಿ ಅಮ್ಮಾಯಿ ಮಾಡುತ್ತಿದ್ದರು. ಅಮ್ಮ ಅಂಗಡಿಯಿಂದ ಸಾಮಾನು ತರುವುದು, ತರಕಾರಿ ,ಮೀನು ತರುವ ಕೆಲಸ ಮಾಡುತ್ತಿದ್ದರು. ಆ ಕೆಲಸಗಳೆಲ್ಲಾ ಪಪ್ಪಮ್ಮ ಮಾಡುತ್ತಿದ್ದ ಕೆಲಸಗಳಾಗಿದ್ದವು. ಸಂಜೆಯಾಗುತ್ತಿದ್ದಂತೆಯೆ ಸ್ನಾನ ಮಾಡಿ ದೀಪ ಹಚ್ಚಿ ಪ್ರಾರ್ಥನೆಗೆ ಕೂಡುತ್ತಿದ್ದಂತೆಯೇ ಅಮ್ಮ ಮತ್ತು ಅಮ್ಮಾಯಿ ಸ್ನಾನ ಮುಗಿಸಿ ಬಾಜಿರದ ಕಂಬಕ್ಕೆ ಒರಗಿ ಕುಳಿತು ನಮ್ಮ ಭಜನೆಯ ಹಾಡುಗಳನ್ನು ಆಲಿಸುತ್ತಾ ಪ್ರಾರ್ಥನೆಯಲ್ಲಿ ಭಾಗಿಯಾಗುತ್ತಿದ್ದರು.ನಾವು ರಾಮ ಮಂಗಲಂ ಹಾಡಿ ಪ್ರಾರ್ಥನೆಯ ಕೊನೆಯ ಹಂತಕ್ಕೆ ಬರುತ್ತಿದ್ದಂತೆಯೇ ಅಮ್ಮ ಎದ್ದು ಅಡಿಗೆ ಮನೆಗೆ ಹೋಗಿ ಊಟ ಬಡಿಸಲು ಬಟ್ಟಲು ಇಡುವ ಶಬ್ದ ಕೇಳಿ ಬರುತ್ತಿತ್ತು. ಒಮ್ಮೆ ಒಂದು ತಮಾಷೆಯ ಪ್ರಸಂಗ ನಡೆಯಿತು. ನಾವು “ನೋಡಿರೈ ಶಾರದೆಯು ಕುಳಿತಿರುವ ಚಂದ ಬೇಡಿದುದ ಕೊಡುವ ಸಂತೋಷ ಮುಖದಿಂದ” ಎಂದು ಹಾಡಲು ತೊಡಗುತ್ತಿದ್ದಂತೆ ಅಮ್ಮ ಮತ್ತು ಅಮ್ಮಾಯಿ ಜೋರಾಗಿ ನಗುತ್ತಾ ಅವರು ಕುಳಿತಿರುವ ಜಾಗದಿಂದ ಎದ್ದು ಅಡುಗೆ ಮನೆಗೆ ಓಡಿದರು. ನಾವು ಪ್ರಾರ್ಥನೆ ಮುಗಿಸಿ ಅಡುಗೆ ಮನೆಗೆ ಹೋದಾಗ ಅನ್ನ ಬಡಿಸುತ್ತಾ ಅವರ ನಗುವನ್ನು ಮುಂದುವರಿಸಿದ್ದರು. ನಮ್ಮ ಪ್ರಶ್ನೆಗೆ ಅವರ ನಗುವೇ ಉತ್ತಮವಾಗಿತ್ತು. ಅಮ್ಮಾಯಿಯ ಪುಸ್ತಕ ಪ್ರೀತಿ ಬಹಳ.ಸಿಕ್ಕ ಸಿಕ್ಕ ಕತೆ ಪುಸ್ತಕಗಳನ್ನು, ಪೇಪರುಗಳನ್ನು, ಕಸಗುಡಿಸುವಾಗ ಸಿಕ್ಕಿದ ಸಮಾಚಾರ ಪತ್ರಿಕೆಯ ಚೂರುಗಳನ್ನು, ಸಾಮಾನು ಕಟ್ಟಿತಂದ ಪೇಪರುಗಳನ್ನು ತೆಗೆದು ಬಿಡಿಸಿ ಓದುತ್ತಿದ್ದರು. ನಮ್ಮ ಶಾಲೆಯಲ್ಲಿ ಲೈಬ್ರರಿ ಪೀರಿಯಡ್ ಗಳಿದ್ದವು. ಆ ದಿನ ನಾವು ಶಾಲೆಯಿಂದ ಬರುವುದನ್ನೇ ಅಮ್ಮಾಯಿ ಕಾಯುತ್ತಿದ್ದರು. ನಾಲ್ಕು ಮಂದಿಯ ಲೈಬ್ರರಿ ಪುಸ್ತಕಗಳು. ಅಮ್ಮಾಯಿಗೆ ಪುಸ್ತಕಗಳ ಸುಗ್ಗಿ.

ಅಮ್ಮಾಯಿ ನಮ್ಮೆಲ್ಲರಿಗಿಂತ ಮೊದಲೇ ಮಧ್ಯ ರಾತ್ರಿಯ ವರೆಗೆ ಕುಳಿತು ಅವನ್ನು ಓದಿ ಮುಗಿಸುತ್ತಿದ್ದರು.ನನ್ನ ಎರಡನೆಯ ಹೆರಿಗೆ ಸಮಯದಲ್ಲಿ ಅಮ್ಮ ಮುಂಬಯಿಯ ನಮ್ಮ ಮನೆಗೆ ಬರುವಾಗ ಕತೆಗಳಿರುವ ಕೆಲವು ಪೇಪರ್ ಕಟ್ಟಿಂಗ್ ಗಳನ್ನು ನನಗೆ ಓದಲು ಕಳುಹಿಸಿದ್ದರು. ನಮ್ಮ ಭಾಷೆಯ ಕೆಲವು ಶಬ್ದ ಗಳನ್ನು ಅಮ್ಮಾಯಿ ವಿಶೇಷವಾಗಿ ‌ಬಳಸುತ್ತಿದ್ದರು. ನಿಲಾವು — ಚಂದ್ರ, ನೇರೊಂ — ಸೂರ್ಯ, ಹೊತ್ತು. ಕನ್ನಡ ಮಾಧ್ಯಮದಲ್ಲಿ ಕಲಿತವರೆಲ್ಲರು ಸೂರ್ಯ, ಚಂದ್ರ ರೆಂದೇ ಹೇಳುವುದು. ಆದರೆ ಅಮ್ಮಾಯ ‘ನಿಲಾವುಈಚಿ(ಚಂದ್ರಮೂಡಿದ) ಮತ್ತು ಅದು ಎಷ್ಟು ಘಳಿಗೆಯ ನಿಲಾವು, ಬರೇ ಘಳಿಗ ನಿಲಾವೋ ಅಥವಾ ಎರಡು ಘಳಿಗೆ ನಿಲಾವೋ ಎಂಬುದನ್ನು ಕರಾರುವಾಕ್ಕಾಗಿ ಹೇಳುತ್ತಿದ್ದರು. ‘ನೇರೊಂ ಕೋಳ್ ‘ ( ಬಿಸಿಲು ಕೋಲು) ನೋಡಿ ಸಮಯ ಸರಿಯಾಗಿ ಹೇಳುತ್ತಿದ್ದರು. ನೇರೊಂ ಮುಂಙಿ ( ಹೊತ್ತು ಕಂತಿತು. ನೇರೊಂ ಅತ್ತೈಚಿ (ಹೊತ್ತು ಮೂಡಿತು) ಅಮ್ಮಾಯಿಯ ಬಾಯಿಯಿಂದ ಅವುಗಳನ್ನು ಕೇಳವುದೆಂದರೆ ನಮಗೆ ಖುಷಿಯಾಗುತ್ತಿತ್ತು.

ನಾವು ಕನ್ನಡ ಪಠ್ಯ ಪುಸ್ತಕಗಳನ್ನು ಓದುವಾಗ ಅಮ್ಮಾಯಿ ಆಸಕ್ತಿಯಿಂದ ಆಲಿಸುತ್ತಿದ್ದರು. ಜನಪದ ಹಾಡುಗಳಾದ “ಹೆಣ್ಣು ಹಡೆಯಲು ಬ್ಯಾಡ ಹೆರವರಿಗೆ ಕೊಡಬ್ಯಾಡ “, ” ಬಾಲಕರಿಲ್ಲದ ಬಾಲಿದ್ಯಾತರ ಜನ್ಮ” ಅವರನ್ನು ಭಾವುಕರನ್ನಾಗಿಸುತಿತ್ತು. ಮಕ್ಕಳಿಲ್ಲದ ಅಮ್ಮಾಯಿಯನ್ನು’ ನಿಮ್ಮ ಸೀಮಂತದ ಸೀರೆ ಯಾವುದು?’ ಎಂದು ಒಮ್ಮೆ ಕೇಳಿದ್ದೆ. ಅಮ್ಮ ಮತ್ತು ಅಮ್ಮಾಯಿ ಅವರವರ ಪೆಟ್ಟಿಗೆ ತೆರೆದು ಏನೋ ಹುಡುಕುತ್ತಿದ್ದರು. ನನ್ನ ಮಾತಿಗೆ ಇಬ್ಬರೂ ನಕ್ಕಿದ್ದರು. ಅಮ್ಮಾಯಿ ಒಂದು ನೀಲಿ ರೇಷ್ಮೆ ಸೀರೆ ತೋರಿಸಿ ‘ನಿರೂ, ಇದು ನನ್ನ ಸೀಮಂತದ ಸೀರೆ’. ಎಂದು ಹೇಳಿದ್ದರು ಅಮ್ಮ ಮತ್ತು ಅಮ್ಮಾಯಿಯ ಧಾರೆ ಸೀರೆ ಒಂದೇ ಬಣ್ಣ ಹಾಗೂ ಒಂದೇ ವಿನ್ಯಾಸದ ರೇಷ್ಮೆ ಸೀರೆ. ಅವರು ಹೇಗೆ ತಮ್ಮ ಸೀರೆಯ ಗುರುತು ಹಿಡಿಯುತ್ತಾರೋ ಎಂದು ಆಶ್ಚರ್ಯವಾಗುತ್ತಿತ್ತು. ಅಮ್ಮನ ಸೀಮಂತದ ಸೀರೆ ನೀಲಿ ಬಣ್ಣದ್ದು. ಅಮ್ಮಾಯಿ ನೀಲಿ ಸೀರೆ ತೋರಿಸಿ ಇದು ತನ್ನ ಸೀಮಂತದ ಸೀರೆ ಎಂದಾಗ ನಾನು ನಂಬಿ ಅಲ್ಲಿಂದ ಹೋಗಿದ್ದೆ.

ನಮ್ಮ ಮನೆಯಲ್ಲಿ ಹಬ್ಬ ಹರಿದಿನಗಳು ಪಪ್ಪಮ್ಮನ ನಂತರ ಅಮ್ಮಾಯಿಯ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದ್ದವು. ದೊಡ್ಡಪ್ಪ, ದೊಡ್ಡಮ್ಮಂದಿರು, ನಮ್ಮ ಅಕ್ಕ, ಅಣ್ಣಂದಿರಾದ ಅವರ ಮಕ್ಕಳೂ ಹಬ್ಬಗಳಲ್ಲಿ ಭಾಗಿಯಾಗುತ್ತಿದ್ದರು. ಅದೊಂದು ಸಂಭ್ರಮವೇ ಆಗಿರುತ್ತಿತ್ತು.ತಮ್ಮ ಜೀವನದ ಕೊನೆಯ ಹದಿನೈದು ವರ್ಷಗಳನ್ನು ತಮ್ಮ ಪತಿಯೊಡನೆ ಪತಿಯ ಮನೆಯಲ್ಲಿ ಕಳೆದ ಅಮ್ಮಾಯಿ ತವರು ಮನೆಯ ಪ್ರಮುಖ ಆಚರಣೆಗಳಲ್ಲಿ ಭಾಗವಹಿಸಲು ಬರುತ್ತಿದ್ದರು. ನಾವು ನಾಲ್ಕುಮಂದಿ ಮದುವೆಯಾಗಿ ಹೋದ ನಂತರ ಅಮ್ಮಾಯಿ ” ನಿರೂ, ನೀವೆಲ್ಲ ಮದುವೆಯಾಗಿ ಹೋದ ಮೇಲೆ ಇನ್ನೆಂಥ ಆಚರಣೆ !” ಎನ್ನುತ್ತಿದ್ದರು. ಅಮ್ಮ ಮತ್ತು ಅಮ್ಮಾಯಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದರು ಎಂದು ನನ್ನ ಅನಿಸಿಕೆ. ಶಿವರಾಮ ಕಾರಂತರ ಕಾದಂಬರಿ ‘ ಮರಳಿ ಮಣ್ಣಿಗೆ ‘ ಯಲ್ಲಿ ಬರುವ ಪಾತ್ರಗಳಾದ ಸರಸೋತಿ ಮತ್ತು ಪಾರೋತಿ ಅಮ್ಮ ಮತ್ತು ಅಮ್ಮಾಯಿಯನ್ನು ನೆನಪಿಸುತ್ತಿದ್ದವು. ಅವರ ನಡುವೆ ಎಷ್ಟೋ ಮಾತಿನ ಚಕಮಕಿ ನಡೆದಿದೆ. ನಾವು ಮಕ್ಕಳು ಕಸಿವಿಸಿಯಾಗಿ ಯಾರ ಪರ ವಹಿಸುವುದೆಂದು ಅರಿಯದೆ ತೊಳಲಾಡಿದ್ದೇವೆ. ಮಾತಿನ ಚಕಮಕಿ ಕೆಲವು ಸಲ ಯಾರಾದರೊಬ್ಬರ ಅಳುವಿನಲ್ಲಿ ಕೊನೆಗೊಳ್ಳುತ್ತಿತ್ತು. ಕೆಲವು ಸಲ ಇಬ್ಬರೂ ಒಂದೊಂದು ಕಡೆ ಕುಳಿತು ಆಳುತ್ತಿದ್ದರು. ಆದರೆ ಅವರು ಯಾವತ್ತೂ ಮಾತು ಬಿಟ್ಟದ್ದು ನಾವು ನೋಡಲಿಲ್ಲ. ಅವರ ಬಾಂಧವ್ಯ ಸುಧೃಢವಾಗಿತ್ತು.

ಅಮ್ಮನ ಕುಗ್ಗುತ್ತಿರುವ ಆರೋಗ್ಯದ ಬಗ್ಗೆ ಸದಾ ಚಿಂತಿರಾಗಿ ಇರುತಿದ್ದ ಅಮ್ಮಾಯಿ ಅಮ್ಮನಿಗಿಂತ ಮೊದಲೇ ಬರಲಾರದ ಲೋಕಕ್ಕೆ ತೆರಳಿದರು. ಸಾಮಾನ್ಯವಾಗಿ ಉತ್ತಮ ಆರೋಗ್ಯದಿಂದಿದ್ದ ಅಮ್ಮಾಯಿ ಎರಡು ಸಾವಿರದ ಏಳರ ಮಕರಸಂಕ್ರಾಂತಿಯಂದು ತನ್ನ ಗಂಡನ ಮನೆಯಲ್ಲಿ ಕೋಮಾಕ್ಕೆ ಜಾರಿದರು. ಸಂಕ್ರಾಂತಿಯ ಆಚರಣೆಯ ನಂತರ ಊಟಕ್ಕೆ ಕೂತ ಅವರ ಅನ್ನದ ತುತ್ತು ಬಾಯಿಯಲ್ಲೇ ಉಳಿಯಿತು. ಅನಂತರದ ಒಂದು ತಿಂಗಳು ಆಸ್ಪತ್ರೆಯಲ್ಲಿ ಕೋಮಾದಲ್ಲಿ ಕಳೆದ ಅಮ್ಮಾಯಿ ಫೆಬ್ರವರಿ ಹದಿಮೂರರಂದು ಚಿರನಿದ್ರೆಗೆ ಜಾರಿದರು.

ಪ್ರೀತಿಯ ಅಪ್ಪುಗೆಗಳು ಅಮ್ಮಾಯಿ!

‍ಲೇಖಕರು avadhi

February 20, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: