ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿರುತ್ತರ

ಪ್ರಕಾಶ್ ಬಿ

ಬೊಕ್ಕುತಲೆ, ಹಸಿದ ದೇಹ, ಒಣಗಿದ ಗಂಟಲು,
ಗಂಟು ಗಂಟಾದ ಕೂದಲು ತ್ರಾಣವಿಲ್ಲದ ಶರೀರ,
ಮಳೆ ನಿಂತ ಕಾದ ನೆಲ. ತೆರೆದ ಬಾಯೊಳಗೆ
ಶಬ್ದಗಳು ಇಂಗಿ ಹೋಗಿವೆ.
ಪೊಳ್ಳು ಮಾತುಗಳು  ಕಿವಿಗಳಪ್ಪಳಿಸಿವೆ. 

ಸಾಂತ್ವನ ಬರೀಕಟ್ಟುಕತೆ.
ರಕ್ತ ಬಸಿಯಬೇಕು.

ಮೆಚ್ಚುಗೆ-ರೊಚ್ಚಿಗೆ ಮಂತ್ರ -ಘೋಷ- ಗಂಟೆ ನಾದಗಳು ನಿರ್ಜೀವ.
ಸುಖ ಸಾಗರದಲ್ಲಿ ಈಜುವ ನಿಮಗೆ ಕಣ್ಣುಗಳಿವೆಯೇ? ಮಂಡೆ ಬೋಳಾದರೂ ಹುಟ್ಟು ಬದಲಾಗಲಿಲ್ಲ.
ರಾತ್ರಿಯಲ್ಲಿ ಬೆಳಕು ಕಾಣುವ ಹಂಬಲ. ಹಗಲು ಕತ್ತಲೆಯಾಗಿದೆ ಎಂದರೆ!
ಹಸಿವು ,ದುಃಖ, ನೋವುಗಳು ನಮ್ಮೊಳಗೆ ಖಡ್ಗವಾಗಿವೆ, ಕ್ರಾಂತಿಗೆ. ತಲೆ ಹಿಡಿಯಲಿಲ್ಲ.

ಮೋಸ ವಂಚನೆಯಲ್ಲಿ ಚಿಂದಿ ಚರಂಡಿಯಲ್ಲಿ ಬೆಳೆದರೂ ನಾಚಿಕೆಗೆಟ್ಟ ಸ್ವಾತಂತ್ರ್ಯ, ಸಮಾನತೆ
ಸೋದರತೆಯ ಗೋರಿ ಕಟ್ಟುವ ಭಾಷಣ, ಬದುಕಿರುವಾಗಲೇ ಮರಣ.
ತತ್ತ್ವ -ಸಿದ್ಧಾಂತದ ಹಾಡುಗಳು ಅರಿಯಲಿಲ್ಲ ಕಡಲಷ್ಟು ನೋವಿಗೆ.
ದುಃಖದ ಬೆಂಕಿ ಹೊತ್ತಿಸಿಕೊಂಡು ಸುಟ್ಟುಕೊಳ್ಳುವೆವು.

ಆತ್ಮಕ್ಕೆ ಶಾಂತಿ ಸಿಗಲಿ ಎಂದಲ್ಲ.
ದ್ರೋಹ ಮುಖವಾಡ ಹೊತ್ತ ಹುಡುಕಾಟಕ್ಕೆ.
ಆತ್ಮಕಥೆ, ಅಸ್ತಿತ್ವ ಅವಸಾನವಾಗುವುದಿಲ್ಲ. 
ಇತಿಹಾಸ ಭವಿಷ್ಯ ಹೇಳುತ್ತದೆ.

ನಮ್ಮ ಕಣ್ಣೀರು ರುದ್ರ ಅಲೆಗಳು. ಒಮ್ಮೆ ಹಾರಿ ಬರುತ್ತವೆ. ಕೋಡಿ ಬೀಳುತ್ತವೆ.
ನೀವು ನಾವಾಗುತ್ತೇವೆ! ನಾವು ನೀವಾಗುತ್ತೀರಿ!
ಕಡಲಲ್ಲಿ ತೇಲಿ ಮುಳುಗಿದ ಮೇಲೆ ಪ್ರಶ್ನೆಗಳಿಗೆ ಉತ್ತರಗಳು ಸಿಕ್ಕ ಮೇಲೆ.

‍ಲೇಖಕರು Avadhi

27 November, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading