ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿಯತಿ.. 

-ಕುಸುಮ ಪಟೇಲ್

ಬದುಕಿನಲ್ಲಿ ಘಟಿಸುವ ಎಲ್ಲಾ ಘಟನೆಗಳು ಸಹಜವಾಗಿ ನಡೆಯುವಂತಹವು, ಕೆಲವು ಆಕಸ್ಮಿಕವಾಗಿರಬಹುದು, ಕಾಕತಾಳೀಯವಾಗಿರಬಹುದು. ಅದಕ್ಕೆ ಕಾರಣ ಹುಡುಕುತ್ತಾ ಹೋಗುವ ಅಗತ್ಯವಿಲ್ಲ ಎನ್ನುವುದು ಕೆಲವರ ವಾದವಾದರೆ, ಬದುಕಿನ ಎಲ್ಲಾ ಘಟನೆಗಳು ಪೂರ್ವ ಯೋಜಿತವಾದವು. ಎಲ್ಲಾ ಆ ಭಗವಂತನ ಲೀಲೆ. ಆ ಶಕ್ತಿಯ ಅನುಮತಿ ಇಲ್ಲದೆ  ಒಂದು ಹುಲ್ಲುಕಡ್ಡಿಯೂ ಅಲುಗುವುದಿಲ್ಲ ಎನ್ನುವುದು ಕೆಲವರ ಅನಿಸಿಕೆ. ಇದಕ್ಕೆ ಪೂರಕವಾಗುವಂತೆ ಕೆಲವರ ಬದುಕಿನಲ್ಲಿ ನಡೆಯುವ ಪವಾಡಗಳು, ಎರಡನೆಯ ವಾದಕ್ಕೆ ಪುಷ್ಟಿಕೊಡುತ್ತವೆ. ಈಗ ನಾನು ಹೇಳಲು ಹೊರಟಿರುವ ಶೌರ್ಯನ ಕಥೆಯೂ ಬದುಕಿನಲ್ಲಿ ನಡೆಯುವ  ಪವಾಡಕ್ಕೆ ಒತ್ತು ನೀಡುವಂತದಾಗಿದೆ.

‘ಶೌರ್ಯ’-ಎಂಥಾ ಚಂದದ ಮುದ್ದಾದ ಹೆಸರು.ಅವನ ಹೆಸರಷ್ಟೇ ಅಲ್ಲ, ಅವನೆಂದರೆ ಎಲ್ಲರಿಗೂ ಮೆಚ್ಚು.  

ದಾವಣಗೆರೆ ನಿವಾಸಿಗಳಾದ ಈಶ್ವರ್ ಮತ್ತು ಸತಿಯ ಏಕ ಮಾತ್ರ ಪುತ್ರ ಶೌರ್ಯ. ಮದುವೆಯಾದ ಹಲವಾರು ವರ್ಷಗಳ ನಂತರ ದುಗ್ಗಮನ ಆಶೀರ್ವಾದದಿಂದ ಹುಟ್ಟಿದವನು ಶೌರ್ಯ. ಹೆಸರಿಗೆ ತಕ್ಕಂತೆ ಅವನಿಗೆ ಸಾಹಸ ಎಂದರೆ ಬಲು ಪ್ರೀತಿ. ನಿಸರ್ಗದ ಮಡಿಲಲ್ಲಿ ಕಳೆದು ಹೋಗುವುದೆಂದರೆ ಹಿಗ್ಗು. ಮೋಟಾರ್ ಸೈಕಲ್ ಹತ್ತಿದರೆ ಅವನ ಸವಾರಿ ಎತ್ತ ಸಾಗುವುದು ಎನ್ನುವುದು ಯಾರ ಊಹೆಗೂ ನಿಲುಕದ್ದು. ಈ ಬಾರಿ ಆದದ್ದೂ ಹಾಗೆಯೇ. ದಸರಾ ರಜೆಯಲ್ಲಿ ಅವನ ಸವಾರಿ ಹಿಮಾಲಯದತ್ತ ಸಾಗಿತ್ತು.  ಈ ಕಡೆ ತಂದೆ ತಾಯಿ ಅವನು ಸುರಕ್ಷಿತವಾಗಿ ಮನೆ ಸೇರುವಂತೆ ಮಾಡು ತಾಯಿ ಎಂದು ದುಗ್ಗಮ್ಮನ ಮೊರೆ ಹೋಗಿ ದುಗ್ಗಮ್ಮನ ಆರಾಧನೆಯಲ್ಲಿ ತೊಡಗಿದ್ದರು. ದುಗ್ಗಮ್ಮ ಗ್ರಾಮದ ಅಧಿದೇವತೆ.ಆಕೆಯ ಆಶೀರ್ವಾದವಿಲ್ಲದೆ ಏನೂ ಸಾಧ್ಯವಿಲ್ಲ ಎನ್ನುವುದು ಅವರ ಬಲವಾದ ನಂಬಿಕೆ.ಹುಟ್ಟಿದ ಹಸುಗೂಸನ್ನು ತಾಯಿಯ ಪಾದದಲ್ಲಿಟ್ಟು, ಆಕೆಯ ಆಶೀರ್ವಾದ ಪಡೆದ ನಂತರವೇ ಶೌರ್ಯನ ನಾಮಕರಣವಾಗಿದ್ದು. 

ಈಗ ಅವನು ಓದು ಮುಗಿಸಿ ಆಗಿದೆ. ಈಗ ಸದ್ಯ ಹಿಮಾಲಯದ ಪ್ರವಾಸದಲ್ಲಿರುವ ಅವನ ಬದುಕಿನಲ್ಲಿ ಏನಾಗುತ್ತಿದೆ ನೋಡೋಣ ಬನ್ನಿ. 

ಕೇವಲ ಇಪ್ಪತ್ತು ನಿಮಿಷಗಳ ಹಿಂದಷ್ಟೇ ಹಗುರವಾಗಿ ಉದುರುತ್ತಾ ಅವನ ಸುತ್ತ ಮೃದುವಾಗಿ ಸುತ್ತುತ್ತಿದ್ದ ಹಿಮ ಬಿರುಸಾಗಿ  ,ವೇಗವಾಗಿ ಬೀಳಲಾರಂಭಿಸಿತ್ತು ಮತ್ತು ಗಾಳಿ ಪಟ್ಟು ಹಿಡಿದಂತೆ ಅಪ್ಪಳಿಸುತ್ತಿತ್ತು. ಮಂಡಿಗಳಿಂದ ಟ್ಯಾಂಕನ್ನು ಒತ್ತಿ ಹಿಡಿಯುತ್ತಾ ಹ್ಯಾಂಡಲ್ ಬಾರ್ ಗಳ ಮೇಲಿನ ಹಿಡಿತ ಬಿಗಿ ಮಾಡುತ್ತಾ, ಅವನ ಈ ಪಯಣದ ಏಕೈಕ ಸಂಗಾತಿ – ಮೋಟಾರ್ ಸೈಕಲ್ಲನ್ನು ತಬ್ಬಿಕೊಂಡ.. ಅವನ ಅದೃಷ್ಟ ಕೆಟ್ಟು ಹೀಗಾಯಿತು ಎಂದರೆ ಸುಳ್ಳಾದೀತು. ತಾಪಮಾನದಲ್ಲಿ ಗಮನಾರ್ಹ ಬದಲಾವಣೆಯಾದರೆ ಮಂಜು ಸುರಿಯುವುದೆಂದು ಹಿಂದಿನ ಅನುಭವದಿಂದ ಅವನು ತಿಳಿದಿದ್ದ. ಕೆಟ್ಟ ಪರಿಸ್ಥಿತಿ ಹದಗೆಡುವ  ಮುನ್ನವೇ  ಹವಾಮಾನ ಅನುಕೂಲವಾಗಿ ಇರುವಾಗಲೇ  ಪ್ರಯಾಣ ಮಾಡಿ ಸುರಕ್ಷಿತ ಸ್ಥಳ ತಲುಪುವ  ಭರವಸೆಯಿಂದ ಅದರ ಬಗ್ಗೆ ಆತ ಹೆಚ್ಚು ಯೋಚಿಸಿರಲಿಲ್ಲ. ಆದರೆ ಅವನ ಆ ಭರವಸೆ ಕೈಗೂಡಿರಲಿಲ್ಲ. ಈಗ ಅವನು ಕೆರಳಿದ ಹಿಮಗಾಳಿಯ ನಡುವೆ ಹಿಮಾಲಯದ ಬಳಸು ದಾರಿಯ  ನೂರು ಮೈಲಿ ಉದ್ದದ ಇಳಿಜಾರಿನ ಕಳಪೆ ಹಾದಿಯಲ್ಲಿದ್ದ.

ದಪ್ಪವಾಗುತ್ತಿದ್ದ ಆ ಬಿಳಿಯ ಹಾಸು ಅವನನ್ನು ಚಿಂತೆಗೀಡು ಮಾಡಿತ್ತು. ಅವನ 300ccಯ ಬೈಕಿನ ಶಕ್ತಿಗೆ ಅದರೊಡನೆ   ಸೆಣಸಾಡುವುದು ಸಾಧ್ಯವೇ ? ಅದರ ಮೇಲೆ ಸಾಧ್ಯವಾದಷ್ಟು ಚೀಲಗಳನ್ನು ಅವನು ಹೇರಿದ್ದರಿಂದ ಬೈಕು ಭಾರವಾಗಿತ್ತು ಆದರೂ ವೇಗದಿಂದ ಸುರಿಯುತ್ತಿದ್ದ ಹಿಮದ ಅಡಿಯ ಹಳೆಯ ಹಿಮ ಮಂಜುಗಡ್ಡೆಯಾದ ಪರಿಣಾಮ ಬೈಕಿನ ಚಕ್ರ ಜಾರಿತ್ತು. 

ಚರ್ಮದ ಪ್ಯಾಡೆಡ್ ಕೈ ಗವಸು ತೊಟ್ಟಿದ್ದರೂ ಅದನ್ನು ತೂರಿ ಬಂದ ಕೊರೆಯುವ ಚಳಿ ಕೈ ಬೆರಳುಗಳ ಜೋಮನ್ನು ಹೆಚ್ಚಿಸಿ ಬೈಕು ಬೀಳದಂತೆ ಹಿಡಿಯುವುದನ್ನೇ ಕಷ್ಟವಾಗಿಸಿತ್ತು. ಅವನು ಯೋಚಿಸಿದ್ದಕ್ಕಿಂತಲೂ ಹೆಚ್ಚಿನ ಶೀತದ ಹುಣ್ಣುಗಳು ಆಗಲೇ ಕಾಣಿಸಿಕೊಂಡಿದ್ದವು. 

ಬರೀ ಕೈಗಲ್ಲದೆ ಅವನ ಪಾದಕ್ಕೂ ತೊಂದರೆಯಾಗಿತ್ತು, ಮರಗಟ್ಟಿದ ಕಾಲಬೆರಳುಗಳಿಗೆ ಗೇರ್ ಲೀವರ್ ನ ಸ್ಪರ್ಶ ಕೂಡ ಗೊತ್ತಾಗುತ್ತಿರಲಿಲ್ಲ, ಬೈಕ್ ನ ಬಗ್ಗೆ ಅವನಿಗೆ ಚೆನ್ನಾಗಿ ತಿಳಿದಿದ್ದರಿಂದ ಅವನು ಸರಿಯಾಗಿಯೇ ಗೇರುಗಳನ್ನು ಬದಲಾಯಿಸುತ್ತಿದ್ದ. ಹಳೆಯದಾದ ಬೈಕಿಂಗ್ ಬೂಟುಗಳಿಗೆ ಈ ಅಂಶಗಳಿಂದ ರಕ್ಷಣೆ ಕೊಡಲು ಸಾಧ್ಯವಾಗಿರಲಿಲ್ಲ, ಎಡ ಬೂಟಿನ ಬಿರುಕಿನಿಂದ ಮಂಜು ಒಳಗೆ ನುಸುಳಿ ಅವನ ಕಾಲುಚೀಲವನ್ನು ತೋಯಿಸಿ ಮರಗಟ್ಟಿಸಿತ್ತು. ಹೇಗಾದರೂ ಮಂಡಿಯ ಕೆಳಗಡೆ ಏನಾಗುತ್ತಿದೆ ಎಂದು  ಅವನಿಗೆ ಗೊತ್ತೇ ಆಗುತ್ತಿರಲಿಲ್ಲ. ತೋಯ್ದು ತೊಪ್ಪೆಯಾದ ಅವನ ಜೀನ್ಸ್ ಕೂಡಾ ಮರಗಟ್ಟಿತ್ತು, ಅವನ ಚಕ್ರಗಳು ಎಬ್ಬಿಸುತ್ತಿದ್ದ ಮಂಜು ಮತ್ತೊಂದು ಪದರ ಸೇರಿಸಿ ಪಾದದಿಂದ ಮೇಲಕ್ಕೆ ಏರುತ್ತಿದ್ದ ಜೋಮನ್ನು ಹೆಚ್ಚಿಸಿತ್ತು .

ಪರಿಸ್ಥಿತಿ ಇನ್ನೂ ವಿಕೋಪಕ್ಕೆ ಹೋಗುತ್ತಿತ್ತು. ಇನ್ನೂ ಸಂಜೆ 4 ಗಂಟೆಯೂ ಆಗಿರಲಿಲ್ಲ ಆಗಲೇ ಸೂರ್ಯ ಪರ್ವತಗಳ ಹಿಂದೆ ಮರೆಯಾಗಿದ್ದ, ಹಠಾತ್ತನೆ ಬೀಸಿದ ಬಿರುಗಾಳಿ ಆಕಾಶವನ್ನು ಇನ್ನೂ ಹೆಚ್ಚು ಕಪ್ಪಾಗಿಸಿತ್ತು. ಬೆಚ್ಚಗಿದ್ದು ಯಾವ ಕಾಲವಾಯಿತೋ ಎನಿಸುತ್ತಿತ್ತು, ಆದರೆ ಕೆಲವೇ ಗಂಟೆಗಳ ಹಿಂದಷ್ಟೇ ಅವನು ಕಡೆಯ ಚೆಕ್ ಪೋಸ್ಟ್ ನಲ್ಲಿ ನಿಲ್ಲಿಸಿದಾಗ ಬೆಚ್ಚನೆಯ ಹಿತವಾದ ವಾತಾವರಣವಿತ್ತು. 

ಆ ಒಂದು ವಿರಾಮ ಹಿತವಾಗಿತ್ತು. ಅವನ ದಾಖಲಾತಿಗಳನ್ನು ಪರೀಕ್ಷಿಸಿದ ಬಾರತದ ಸೇನಾ ಅಧಿಕಾರಿ ಅವನೊಡನೆ ರಾಯಲ್ ಎನ್ಫೀಲ್ಡ್ ಮೋಟಾರು ಸೈಕಲ್ಲಿನ ಅರ್ಹತೆಯ ಬಗ್ಗೆ ಒಂದು ಸ್ವಾರಸ್ಯಕರ ಸಂಭಾಷಣೆ ನಡೆಸಿದ್ದ ಮತ್ತು ಅವನನ್ನು ಟೀ ಕುಡಿಯಲು ಆಹ್ವಾನಿಸಿದ್ದ. ಇವನು ಅದನ್ನು ಸಂತೋಷದಿಂದಲೇ ಒಪ್ಪಿಕೊಂಡಿದ್ದ ಮತ್ತು ಪ್ರಯಾಣದ ಮುಂದಿನ ಹಂತದ ಬಗ್ಗೆ ಅವರು ಹೇಳಿದ ಸಲಹೆ ಮತ್ತು ಎಚ್ಚರಿಕೆಗಳನ್ನು ಆಸಕ್ತಿಯಿಂದಲೇ ಕೇಳಿಸಿಕೊಂಡಿದ್ದ. 

 “ಈ ಪರ್ವತಗಳಲ್ಲಿ ನೀನು ಎಚ್ಚರದಿಂದಿರಬೇಕು,” ಆ ಅಧಿಕಾರಿ ಹೇಳಿದ್ದ. “ಇದೊಂದು ಕಠೋರ ಮತ್ತು ನಿರ್ದಯ ಪ್ರದೇಶ. ಒಂದು ಚೆಂದದ ದಿನ ನಿನ್ನನ್ನು ಮರುಳು ಮಾಡಲು ಬಿಡಬೇಡ. ಎಲ್ಲಿಂದಲೋ ಬೀಸುವ ದೈತ್ಯ ಬಿರುಗಾಳಿಗಳು, ಭಯಂಕರ ಗಾಳಿ, ಧಾರಾಕಾರ ಮಳೆ, ಹಠಾತ್ತನೆ ಸುರಿವ ಹಿಮಗಾಳಿ, ಒಂದು ಎದೆ ಬಡಿತದಲ್ಲೇ ಎಲ್ಲಾ ಬದಲಾಗಬಹುದು. ಎರಡು ಮೂರು ಗಂಟೆಯಲ್ಲೇ ಹದಿನೈದು ಇಪ್ಪತ್ತು ಇಂಚಿನಷ್ಟು ಹಿಮ ಸುರಿಯುತ್ತೆ ಅಂದ್ರೆ, ನೀನು ನಂಬ್ತೀಯ?”

“ನಂಬೋದಕ್ಕೆ ಸ್ವಲ್ಪ ಕಷ್ಟ ಆಗುತ್ತೆ .” ಟೀ ಗುಟುಕರಿಸುತ್ತಾ ಮುಗುಳ್ನಗೆಯೊಂದಿಗೆ ಆತ ಒಪ್ಪಿಕೊಂಡಿದ್ದ.

“ನನ್ನನ್ನು ನಂಬು; ನಾನು ಇದನ್ನು ಕಣ್ಣಾರೆ ಹಲವಾರು ಬಾರಿ ನೋಡಿದ್ದೇನೆ. ಅಲ್ಲಿ ದೊಡ್ಡ ಟ್ರಕ್ ಗಳು ಸಿಕ್ಕಿ ಹಾಕಿಕೊಂಡು ಅಲುಗದೆ ನಿಂತಿರುವುದನ್ನು ನೋಡಿದ್ದೇನೆ. ನೀನು ಮೋಟಾರ್ ಸೈಕಲ್ಲಿನಲ್ಲಿ ಪಯಣಿಸುವುದು ಒಂದು ಆಗದ ಸಂಗತಿ.”

“ನಾನು ನನ್ನ ಅದೃಷ್ಟ ನೋಡಿಯೇ ಬಿಡುತ್ತೇನೆ.”

ಆ ಅಧಿಕಾರಿ ತಲೆಯಾಡಿಸಿದ್ದ . “ಒಂದು ಅಪಾಯಕಾರಿ ಧೋರಣೆ, ವಿಶೇಷವಾಗಿ ಇಂತಹ ಕಳಪೆ ರಸ್ತೆಯಲ್ಲಿ. ಬಿಸಿಲಿರುವಾಗಲೇ ನಿನಗೆ ಎಷ್ಟು ವೇಗವಾಗಿ ಹೋಗಲು ಸಾಧ್ಯವೋ ಅಷ್ಟು ವೇಗವಾಗಿ ಹೋಗಿಬಿಡು .ಪರಿಸ್ಥಿತಿ ಬದಲಾದ ತಕ್ಷಣವೇ ನೀನು ನಿಂತು ರಕ್ಷಣೆ ಕಂಡುಕೊಳ್ಳುತ್ತೀಯ ಎಂದು ಮಾತು ಕೊಡು .”

“ನನಗೂ ಮಾತು ಕೊಡಲು ಇಷ್ಟವೇ, ಆದರೆ ನಾನು ನಕ್ಷೆಗಳ ಸಂಶೋಧನೆ ಮತ್ತು ಅಧ್ಯಯನ ಮಾಡಿದ್ದೇನೆ. ಈ ರಸ್ತೆಯ ಪ್ರದೇಶದಲ್ಲಿ ಯಾವುದೇ ಹಳ್ಳಿಗಳು ಅಥವಾ ಮನೆಗಳಿಲ್ಲ. ಚೆಕ್ ಪಾಯಿಂಟ್ಸ್ ಗಳಲ್ಲಿ . ಮಾತ್ರ ಒಂದು ಜೀವಂತ ವ್ಯಕ್ತಿಯನ್ನು ನೋಡಬಹುದು ಮತ್ತು ಈ ಪ್ರದೇಶ ಯಾವ ಬಗೆಯ ರಕ್ಷಣೆಯನ್ನೂ ನೀಡುವುದಿಲ್ಲ.”

“ಇದೊಂದು ಕಲ್ಲಿನಿಂದ ಕೂಡಿದ ನಿರಾಶ್ರಿತ ಪ್ರದೇಶ ಎನ್ನುವುದು ಸರಿ. ಆದರೆ ನಕ್ಷೆಗಳು ನಿನಗೆ ಎಲ್ಲವನ್ನೂ ತಿಳಿಸುವುದಿಲ್ಲ. ಅಲ್ಲೊಂದು ಗುರುತಿಸದ ಜಾಗವಿದೆ, ಅದು ಸೇನೆಯವರಿಗೆ ಮತ್ತು ಪದೇಪದೇ ಬರುವ ಪ್ರವಾಸಿಗರಿಗೆ ಮಾತ್ರ ತಿಳಿದಿದೆ. ಇಲ್ಲಿಂದ ಸುಮಾರು ನೂರಾ ನಲವತ್ತು ಮೈಲಿಗಳ ದೂರದಲ್ಲಿ ಆ ದುರ್ಗಾ ಮಾತೆಯ ದೇವಸ್ಥಾನವಿದೆ. ಪ್ರತಿದಿನವೂ ಸೇನೆಯ ಒಂದು ಟ್ರಕ್ ದೇವರುಗಳಿಗೆ ನೈವೇದ್ಯ ತೆಗೆದುಕೊಂಡು ಹೋಗುತ್ತೆ. ಎಷ್ಟೋ ಬಾರಿ ಸೇಬು ಮತ್ತು ಬಾಳೆಯ ಹಣ್ಣುಗಳನ್ನು ಪ್ರಾಣಿಗಳು ಕದ್ದು ಬಿಡುತ್ತವೆ, ಅವುಗಳ ಧೈರ್ಯ ನೋಡು. ಈ ಕೆಟ್ಟ ಹವಾ ಅವುಗಳನ್ನು ದೂರ ಇಡಬಹುದು ಮತ್ತು ದೇವರು ನಿನ್ನ ಮೇಲೆ ಮಂದಹಾಸ ಬೀರಬಹುದು. ಯಾವುದೇ ಸಂದರ್ಭದಲ್ಲೂ, ದೇವಸ್ಥಾನದಲ್ಲಿರುವವರು ಯಾವಾಗಲೂ ಸಂತೋಷದಿಂದ  ಪ್ರವಾಸಿಗರಿಗೆ ಆಶ್ರಯ ಕೊಟ್ಟು ಆತ್ಮೀಯತೆಯಿಂದ  ನೋಡಿಕೊಳ್ಳುತ್ತಾರೆ. ಬದಲಾವಣೆ ಏನಾದರೂ ಶುರುವಾದರೆ ಅಲ್ಲಿಯೇ ನಿಂತುಬಿಡು. ಪರಿಸ್ಥಿತಿ ಬದಲಾದ ಮೇಲೆ  ನೀನು ಮುಂದೆ ಹೋಗಲು ಸಹಾಯ ಮಾಡುತ್ತಾರೆ. ಬೈಕಲ್ಲಿ ಹೋಗಲು ಆಗದಷ್ಟು ಪರಿಸ್ಥಿತಿ ಕೆಟ್ಟಿದ್ದರೆ ನಮ್ಮ  ಬೆಳಗ್ಗೆ ಓಡುವ ಟ್ರಕ್ಕನ್ನು ಕಂಡುಕೋ. ಮುಂದಿನ ಚೆಕ್ ಪಾಯಿಂಟ್ ಗೆ ಯಾರಿಗಾದರೂ ಲಿಫ್ಟ್ ಕೊಡುತ್ತಿರುವುದು ಅದೇನು ಮೊದಲ ಬಾರಿಯಲ್ಲ .”

“ನಿಮಗೆ ಧನ್ಯವಾದಗಳು, ತಿಳಿದದ್ದು ಒಳ್ಳೆಯದಾಯಿತು. ಆದರೆ ದೇವಸ್ಥಾನ ಹುಡುಕುವುದು ಹೇಗೆ?”

“ನಿನಗೆ ಅದು ಕಾಣದೇ ಇರಲು ಸಾಧ್ಯವೇ ಇಲ್ಲ. ಅದರ ಮೇಲೆ ಒಂದು ನಕ್ಷತ್ರ ಸತತವಾಗಿ ಹೊಳೆಯುತ್ತಾ ಕಳೆದು ಹೋದವರಿಗೆ ಮತ್ತು ಅವಶ್ಯಕತೆ ಇರುವವರಿಗೆ ದಾರಿ ತೋರಿಸುತ್ತದೆ.” ಆ ಅಧಿಕಾರಿ ನಕ್ಕಿದ್ದ. “ನಿನ್ ಮುಖ ನೋಡು! ಇಲ್ಲಿ ಯಾವಗ್ಲೂ ಜನ ಬರ್ತಾ ಇರ್ತಾರೆ .ಅದು ಒಂದು ಸೌರ ಶಕ್ತಿಯ ದೀಪ. ಭೀಕರ ಬಿರುಗಾಳಿಯಲ್ಲಿ ವಿದ್ಯುಚ್ಚಕ್ತಿ ಹೋದರೂ ಕೂಡ ದೀಪ ಎಲ್ಲರಿಗೂ ಕಾಣಿಸಲಿ ಎಂದು ಅದನ್ನು ಮೇಲ್ಛಾವಣಿಯ ಮೇಲೆ ಇಟ್ಟಿದ್ದಾರೆ.”

ಅವರು ಹೇಳಿದ ಎಚ್ಚರಿಕೆಗಳನ್ನು ಗಂಭೀರವಾಗಿಯೇ ತೆಗೆದುಕೊಂಡು ಅದರ ಅವಶ್ಯಕತೆ ತನಗೆ ಬಾರದಿರಲಿ ಎಂದು ಆಶಿಸುತ್ತಾ ಹೊರಡುವ ತಯಾರಿಯಲ್ಲಿದ್ದ ಅವನನ್ನು ನೋಡಿ ಅವರುಗಳು ನಕ್ಕಿದ್ದರು. ಈಗ ಬಿರುಸಾಗಿ ಅವನ ಸುತ್ತ ಸುತ್ತುವ ದೊಡ್ಡ ಮಂಜಿನ ಚಕ್ಕೆಗಳು ಮತ್ತು ಕುರುಡಾಗಿಸುವ ಮಂಜಿನ ನಡುವೆ ಅವನಿಗೆ ಆ ಜ್ಞಾನದ ಬಗ್ಗೆ ಸಂತೋಷವಾಗಿತ್ತು. ಅದು ಎಷ್ಟನೇ ಬಾರಿಯೋ ಕನ್ನಡಕದ ಮೇಲಿನ ಮಂಜು ಒರೆಸಲು ಅವನು ಎಡಗೈಯನ್ನು ಮೇಲಕ್ಕೆ ಎತ್ತಿದ.ಕೈ ಗವಸು ಹಾಕಿದ್ದ ಬೆರಳುಗಳು ದಪ್ಪ ಮತ್ತು ಒರಟಾಗಿದ್ದವು.  ಬೈಕನ್ನು ನಿಯಂತ್ರಿಸುವುದು ಕಷ್ಟವಾಗಿ ಅದನ್ನು ತೆವಳುವಷ್ಟರ ನಿಧಾನ ಗತಿಗೆ ತಂದಿದ್ದ. ಅವನು ಶೀಘ್ರದಲ್ಲೇ ನಿಲ್ಲಿಸಬೇಕಾಗಿತ್ತು ಆದರೆ ಹಿಂದಿನ ಚೆಕ್ ಪೋಸ್ಟ್ ನಲ್ಲಿ ರಿಸೆಟ್ ಮಾಡಿದ ಓಡೋಮೀಟರ್  ನೂರಾ –ಮೂವತ್ತ – ಒಂಬತ್ತು- ಮೈಲಿ ಎಂದು ಸೂಚಿಸುತ್ತಿತ್ತು. ಅವನು ಇನ್ನು ಒಂದು ಮೈಲಿ ಸಾಗಿರಬಹುದು.

ಮುಂದಿನ ಯಾತನೆಯಿಂದ ಕೂಡಿದ ಕೆಲವೇ ಕ್ಷಣಗಳ ಸವಾರಿ ಸಂಪೂರ್ಣವಾಗಿ ಅವನಿಗೆ ಕೈ ಕಾಲುಗಳ ಅರಿವೇ ಇಲ್ಲದಂತೆ ಮಾಡಿತ್ತು. ನಿರೀಕ್ಷಿಸಿದ ಜ್ಯೋತಿ ಕಾಣದೆ ಅವನ ಆತಂಕ ಹೆಚ್ಚಾಗಿತ್ತು. ಇಷ್ಟು ಹೊತ್ತಿಗೆ ಅದು ಅವನಿಗೆ ಕಾಣಿಸಬೇಕಿತ್ತು, ಅದಿಲ್ಲದೆ ದೇವಾಲಯ ಹುಡುಕುವುದು ಸಾಧ್ಯವೇ ಇರಲಿಲ್ಲ .

ಕಣ್ಣು ಕತ್ತಲಿಟ್ಟು , ಚಿಂತಿತನಾಗಿ , ಸ್ತಂಭಿತನಾಗಿ , ಬೈಕನ್ನು ಹಿಡಿಯಲು ಸೆಣಸುತ್ತಾ, ತಾನೇನಾದರೂ ಮರೆತಿದ್ದರೆ ಅಥವಾ ತಪ್ಪು ಮಾಡಿದ್ದರೆ ಎಂದು ಅವನು ಹಿಂದೆ ನಡೆದ ಸಂಭಾಷಣೆಯನ್ನು ಮತ್ತೊಮ್ಮೆ ನೆನಪಿಸಿಕೊಂಡ. ಮತ್ತೊಮ್ಮೆ ಕನ್ನಡಕದ ಮೇಲಿನ ಮಂಜನ್ನು ಒರೆಸುತ್ತಾ, ಮುಂದೆ ಬಲಭಾಗದ ಕಡಿದಾದ ತಿರುವನ್ನು ನೋಡುವಷ್ಟರಲ್ಲಿ ತುಂಬಾ ತಡವಾಗಿತ್ತು.  ಈ ಪರಿಸ್ಥಿತಿಯಲ್ಲಿ ಇನ್ನೇನು ಮಾಡಲು ಸಾಧ್ಯವಿಲ್ಲವೆಂದು ಅವನು ಹ್ಯಾಂಡಲ್ ಬಾರ್ ಗಳನ್ನು ಎಳೆದು ತತ್ಕ್ಷಣವೇ ಬ್ರೇಕ್ ಹಾಕಿದ. ಚಲನೆಯಿಲ್ಲದೆ, ಚಕ್ರಗಳು ಜಾರಿದವು, ಅವನು ನಿಲ್ಲಿಸಬೇಕೆಂದರೂ ಅದು ಓಡುತ್ತಲೇ ಇತ್ತು. ತುಂಬಾ ಕಷ್ಟ ಪಟ್ಟು ಅದನ್ನು ನಿಲ್ಲಿಸಲು ಪ್ರಯತ್ನಿಸಿದ ಆದರೆ ಅದು ತುಂಬಾ ಭಾರವಾಗಿತ್ತು, ಹುಚ್ಚುಚ್ಚಾಗಿ ಜಾರಿ ಅದು ನಿಯಂತ್ರಣ ತಪ್ಪಿತು. ಹ್ಯಾಂಡಲ್ ಬಾರ್ ಗಳಿಗೆ ಜೋತು ಬಿದ್ದ ಅವನು ಜೋರಾಗಿ ನೆಲಕ್ಕೆ ಬಿದ್ದ , ಅದು ಬೆಟ್ಟದ ಬದಿಯವರೆಗೂ ಅವನನ್ನು ಎಳೆದುಕೊಂಡು ಹೋಗಿ ಅದರ ಎಂಜಿನ್ ಚೆಲ್ಲಾಪಿಲ್ಲಿಯಾಗಿ ಸ್ಥಭ್ದವಾಯಿತು. ಆಘಾತದಿಂದ ಅವನಿಗೆ ಜಗತ್ತೇ ಸುತ್ತಿದಂತಾಗಿ ಆಮೇಲೆ ಎಲ್ಲವೂ ಕತ್ತಲಾಯಿತು. 

ಈ ಪರಿಸ್ಥಿತಿಯಲ್ಲಿ , ಅವನು ಕೆಲವೇ ಸೆಕೆಂಡುಗಳು ಹೊರಗಿದ್ದ ಅಷ್ಟೇ. ಇನ್ನೂ ಹೆಚ್ಚು ಸಮಯವಿದ್ದರೆ ಅವನು ಸ್ಥಿಮಿತವಿಲ್ಲದ , ಹೈಪೋಥರ್ಮಿಯಾದ ನಿದ್ರಾ ಹಂತ ತಲುಪುತ್ತಿದ್ದ. ತಡವರಿಸಿಕೊಂಡು ಪಾದಗಳ ಮೇಲೆ ನಿಂತ, ಜೋಮು ಹಿಡಿಯದ ಯಾವುದೇ ಭಾಗವಾದರೂ ನೋಯುತ್ತಿತ್ತು .ಅವನ ಎಡಗಾಲು ಅವನ ಭಾರದಿಂದ ಕುಸಿಯಿತು ಆದರೆ ಆ ಮರಗಟ್ಟುವಿಕೆಯಿಂದ  ಏನೋ ಸರಿಯಿಲ್ಲ ಎನ್ನುವುದನ್ನು ಬಿಟ್ಟರೆ ನೋವಿನ ಅರಿವಾಗಲಿಲ್ಲ. ಬಗ್ಗಿ ಆಸರೆ ಪಡೆಯುತ್ತಾ ತನ್ನ ಉಳಿದೆಲ್ಲಾ ಶಕ್ತಿಯನ್ನು ಬಲವಾಗಿ  ಉಪಯೋಗಿಸಿ  ಬೈಕನ್ನು ಸರಿಯಾಗಿ ನಿಲ್ಲಿಸಲು ಪ್ರಯತ್ನಿಸಿದ. ಮೂರು ಪ್ರಯತ್ನಗಳ ನಂತರ, ತನ್ನಿಂದ ಅದು ಸಾಧ್ಯವಿಲ್ಲ ಎಂಬುದನ್ನು ಒಪ್ಪಿಕೊಂಡ . ಅದು ತುಂಬಾ ಭಾರವಾಗಿತ್ತು ಮತ್ತು ಈತ ತುಂಬಾ ದುರ್ಬಲ ಮತ್ತು ತುಂಬಾ ಜಡವಾಗಿದ್ದ. ಅದನ್ನು ಅಲ್ಲಿಯೇ ಬಿಡದೆ ಬೇರೆ ದಾರಿಯಿರಲಿಲ್ಲ ,ಅದರ ನುಣುಪಾದ ಕಪ್ಪಿನ ಮೇಲೆ ಆಗಲೇ ಒಂದು ಬೆಳ್ಳನೆಯ ಪದರ ಮುಚ್ಚುತ್ತಿತ್ತು.

ಸ್ಟ್ರಾಪ್ ಮತ್ತು ಬಕಲ್ಗಳನ್ನು ತಡಕಾಡುತ್ತಾ ಸ್ಯಾಡಲ್ ಬ್ಯಾಗ್ ಗಳನ್ನೂ ಮತ್ತು ಸುತ್ತಿಟ್ಟ ಟೆಂಟನ್ನು ಇಳಿಸಿಕೊಂಡ.  ಪ್ರೀತಿಯ ಬೈಕನ್ನು ಬಿಟ್ಟು ಹೋಗಲು ಮನಸ್ಸಿಲ್ಲದಿದ್ದರೂ ಬಿಟ್ಟು ಮುಂದೆ ಸಾಗಬೇಕೆಂದು ಅವನಿಗೆ ತಿಳಿದಿತ್ತು.ಹಿಮ ವ್ರಣದಿಂದ ತಪ್ಪಿಸಿಕೊಳ್ಳಲು ರಕ್ತದ ಪರಿಚಲನೆ ಅಗತ್ಯವಾಗಿತ್ತು. ಮೇಲಾಗಿ, ಅವನು ಬೆಚ್ಚಗಿಲ್ಲದೇ ಇದ್ದರೆ ಸಾಯುತ್ತಿದ್ದ.

ಮರಗಟ್ಟಿದ ಬೆರಳುಗಳಿಂದ ತಡಕಾಡುತ್ತಾ , ಅವನ ಕೆಳಗೆ ಹಾಸುವ ಹೊದಿಕೆಯನ್ನು ಹುಡುಕಿ ತೆಗೆದ  ಮತ್ತು ಅದನ್ನು ಸೀಳಿದ ಬೂಟು ಮತ್ತು ಶಿನ್ ನಿಂದ ಹಿಡಿದು ಮೊಣಕಾಲಿನವರೆಗೂ ಸುತ್ತಿ , ಅದನ್ನು ಡಕ್ಟ್ ಟೇಪ್ ಬಳಸಿ ಭದ್ರವಾಗಿ ಕಟ್ಟಿದ. ನಡುಗುತ್ತಾ, ಒಂದು ಕೈಗವಸು ತೆಗೆದ , ಒಳಗಿನ ಜೇಬು ತಲುಪುವಷ್ಟು ಮಾತ್ರವೇ ಜಾಕೆಟ್ ಜಿಪ್ ಎಳೆದು, ಎರಡು ಪುಟ್ಟ ರಮ್ ಬಾಟಲುಗಳನ್ನು ಹೊರತೆಗೆದ. ಬಿದ್ದಾಗ ಅವು ಒಡೆದಿಲ್ಲವೆಂದು ಅವನಿಗೆ ಸಮಾಧಾನವಾಯಿತು. ಅವನು ಮತ್ತು ಸಾವಿನ ನಡುವೆ ಇದ್ದದ್ದು ಆ ಎರಡು ಪುಟ್ಟ ಬಾಟಲುಗಳು ಮಾತ್ರ. ಬಹುಷಃ ಅವು ಸಾಕಾಗಲಿಕ್ಕಿಲ್ಲ. ಬಾಟಲಿಯನ್ನು ಓಪನ್ ಮಾಡಲು ಪ್ರಯತ್ನಿಸಿದ. ಸಾಧ್ಯವಾಗಲಿಲ್ಲ. ಬಾಟಲ್ ಓಪನ್ ಆಗದೇ ಇದ್ದರೆ ಅವನಿಗೆ  ಉಳಿವೇ ಇಲ್ಲ..

ಬೆರಳುಗಳು ಪ್ರಯೋಜನವಾಗದೆ , ಒಂದು ಬಾಟಲಿಯನ್ನು ಮುಷ್ಟಿಮಾಡಿದ ಅಂಗೈ ಒಳಗೆ ಜೋರಾಗಿ ತಳ್ಳಿ, ಮುಚ್ಚಳ ತೆಗೆಯಲು ಜೋರಾಗಿ ತಿರುವಿದ, ಅದರಲ್ಲಿ ಇದ್ದದ್ದನ್ನು ಮೂರೇ ಗುಟುಕಿನಲ್ಲಿ ಕುಡಿದು ಮುಗಿಸಿದ.ಅದರ ಶಾಖ ಉರಿಯುತ್ತಾ ಕೆಳಗಿನ ಹೊಟ್ಟೆಯವರೆಗೂ ತಲುಪಿ ಅದರ  ಹಿತಕರ ಶಾಖ ಅವನ ದೇಹದಲ್ಲೆಲ್ಲಾ ಹರಡಿತು. ಅವನು ಮತ್ತೊಂದನ್ನೂ ಕುಡಿದು ಖಾಲಿ ಬಾಟಲಿಗಳನ್ನು ಶೀಘ್ರ ಗತಿಯಲ್ಲಿ ಮಾಯವಾಗುತ್ತಿದ್ದ ಬೈಕಿನ ಪಕ್ಕಕ್ಕೆ ಎಸೆದ.  ಅವನಿಗೆ ಸ್ವಲ್ಪ ಆರಾಮವೆನಿಸಿತು , ತೆರೆದಿದ್ದ ಕೈನ ನೀಲಿ ಬಣ್ಣದ ಕಡೆ ಹೆಚ್ಚು ಗಮನ ಕೊಡದೆ ಮತ್ತೆ ಕೈ ಗವಸು ಧರಿಸಿ ಟೆಂಟ್ ಮತ್ತು ಚೀಲಗಳನ್ನು ಭುಜದ ಮೇಲೆ ಹಾಕಿಕೊಂಡ. ಎಲ್ಲಿಗೆ ಹೋಗುವುದೆಂದು ತಿಳಿಯದಿದ್ದರೂ, ಈಗ ಅವನು ಹೊರಡುವ ಸಮಯವಾಗಿತ್ತು.

ಹೊಂದಾಣಿಕೆ ಇಲ್ಲದೇ ತಡವರಿಸುತ್ತಾ ಮೊದಲ ಹೆಜ್ಜೆಗಳನ್ನು ಹಾಕಿದ , ಒಂದು ಚೆಕ್ ಪೋಸ್ಟ್ ದಾಟಿದವನು ಮುಂದಿನ ಚೆಕ್ ಪೋಸ್ಟ್ ಅನ್ನು ತಲುಪಿಲ್ಲ ಎನ್ನುವುದು ಸೇನೆಯವರಿಗೆ ತಿಳಿಯುತ್ತದೆ. ಅವರು ಅವನಿಗಾಗಿ ಹುಡುಕಾಟ ಮಾಡಬಹುದು   ಎಂಬುದು ಅವನ ಅಂತರಂಗಕ್ಕೆ ತಿಳಿದಿತ್ತು. ಅವನಿಗೆ ಆ ಬಿರುಗಾಳಿಯಿಂದ  ಬದುಕಿ ಉಳಿಯಲು ಯಾವುದಾದರೂ ಒಂದು ಸುರಕ್ಷಿತವಾದ  ತಂಗುದಾಣ ಬೇಕಾಗಿತ್ತು ಅಷ್ಟೇ.  ಬದುಕುಳಿದು ಮತ್ತೆ ಬೈಕನ್ನು ಪಡೆದುಕೊಳ್ಳುತ್ತೇನೆಂದು ಆಶಿಸುತ್ತಾ, ಅವನು ತೆಗೆದುಕೊಳ್ಳಬೇಕಾಗಿದ್ದ ಎಡ ತಿರುವಿನ ಕಡೆ ಕುಂಟುತ್ತಾ ಹೆಜ್ಜೆ ಹಾಕುವ ಮುನ್ನ ಅದನ್ನು ಕಡೆಯ ಬಾರಿ ನೋಡಿದ. ಅವನು ಮೂಲೆ ತಿರುಗಿದಾಗ ಒಂದು ಹೊಳೆಯುವ ಜ್ಯೋತಿ ಕಾಣಿಸಿತು. ಬಳಲಿದ ಕಣ್ಣಿನಿಂದ ಜಾರಿದ ಹನಿ ನೆಮ್ಮದಿಯದೋ ಹತಾಶೆಯದೋ ಅವನಿಗೆ ಗೊತ್ತಾಗಲಿಲ್ಲ.

ಅವನಿಗೆ ದೇವಾಲಯ ಕಂಡಿತ್ತು ಆದರೆ ಬಹಳ ದೂರದಲ್ಲಿ ಇದ್ದಂತೆ ಭಾಸವಾಗುತ್ತಿತ್ತು. ಬೈಕಿನಲ್ಲಿ ಅವನು ಆ ತಿರುವು ದಾಟಿದ್ದರೆ ಇಷ್ಟು ಹೊತ್ತಿಗೆ ಅವನು ಅಲ್ಲಿ ಇರುತ್ತಿದ್ದ. ಕಾಲ್ನಡಿಗೆಯಲ್ಲಿ ಅಲ್ಲಿಗೆ ಹೋಗುವುದು ತುಂಬಾ ಕಷ್ಟದ್ದಾಗಿತ್ತು, ಆದರೆ ಅಸಾಧ್ಯವಾಗಿರಲಿಲ್ಲ. ಸುಮ್ಮನೆ ಕುಳಿತು ಚಳಿಗೆ ಆಹುತಿಯಾಗಿ ಬಿಡಬೇಕು ಎನ್ನುವ ಹತಾಶೆಯ ಹಂತಕ್ಕೆ ಬಂದಿದ್ದ. ಅಂತರಾಳದಲ್ಲಿ, ಅವನ ಬದುಕುಳಿಯುವ ಹುಟ್ಟರಿವು ಪಿಸುಗುಟ್ಟಿ ಆಮೇಲೆ ಘರ್ಜಿಸಿ, ಅವನು ಚಲಿಸುವಂತೆ ಮಾಡಿತ್ತು. ಆ ಜ್ಯೋತಿ ಎಲ್ಲವನ್ನೂ ಮರೆಮಾಡಿ ಹಿಮಗಾಳಿಯ ನಡುವೆ ಮಸುಕಾದ ಮಾರ್ಗದರ್ಶಿಯಾಗಿತ್ತು. 

ಜ್ಯೋತಿ ಹತ್ತಿರವಾದಾಗ ಅವನ ಆಸೆ ಚಿಗುರಿತು ಆದರೆ ಅದು ಅಸ್ಥಿರವಾಗಿ ಮಿನುಗಿ ಮಸುಕಾಗಿ ಕೊನೆಗೆ ಪೂರ್ತಿ ಕಾಣದಾಯಿತು. ಅದು ಇರಲಿಕ್ಕಿಲ್ಲ ! ಏನೇ ಆದರೂ ಅದು ಬೆಳಗುತ್ತಲೇ ಇರುತ್ತದೆ ಎಂದು ಆ ಅಧಿಕಾರಿ ಹೇಳಿದ್ದ.ನಿರಾಶೆ ಮತ್ತು ಹತಾಶೆ ಅವನ ಯೋಚನೆಯನ್ನು ಮಂಕಾಗಿಸಿತ್ತು ಎಲ್ಲಿಯವರೆಗೆ ಎಂದರೆ ಜ್ಯೋತಿ ಎಲ್ಲಿಯೂ ಹೋಗಿಲ್ಲ ಆದರೆ ಬಿರುಗಾಳಿ ಹೆಚ್ಚಿ  ಆ ಹಿಮಗಾಳಿ ಒಂದು ದಟ್ಟವಾದ ಗೋಡೆಯನ್ನೇ ಸೃಷ್ಟಿಸಿದೆ ಎಂಬ ಅರಿವು ಬರುವವರೆಗೂ. ಅವನ ಹೊಸ ಸಿದ್ಧಾಂತವನ್ನು ಪರೀಕ್ಷಿಸುತ್ತಾ ಕೈಯನ್ನು ಒಂದು ಕೈಯಳತೆಯಷ್ಟು ದೂರದಲ್ಲಿ ಇಟ್ಟು ನೋಡಿದ, ಅವನಿಗೆ ಏನೂ ಕಾಣಲೇ ಇಲ್ಲ. ಅವನಿಗೆ ಮತ್ತೆ ಜ್ಯೋತಿ ಕಾಣುವುದು ಮಂಜು ಕರಗಿದ ಮೇಲೆಯೇ. ಅಲ್ಲಿಯವರೆಗೂ ಅವನು ಮುಂದೆ ಸಾಗಲೇ ಬೇಕಿತ್ತು ಮತ್ತು ಅವನು ಜಾಗರೂಕನಾಗಿದ್ದರೆ ಸರಿಯಾದ ದಾರಿಯಲ್ಲೇ ಹೋಗಬಹುದು. ಅವನು ಧೃಡವಾದ ಹತ್ತು ಹೆಜ್ಜೆ ಹಾಕಿದ ಅಮೇಲೆ ಆಯ ತಪ್ಪಿ ಬಿದ್ದ, ಒಂದು ಕ್ಷಣ ನೆಲದ ಮೇಲಿದ್ದ ಮತ್ತೊಂದು ಕ್ಷಣ ಏನೂ ಇಲ್ಲ . 

ಅವನು ಹೀಗೆ ಬೀಳುತ್ತಿದ್ದಾಗ ಅವನ ಹಿಂಭಾಗ ನೆಲಕ್ಕೆ ಬಡಿದು ಅವನು ಒಂದು ಇಳಿಜಾರಿನಲ್ಲಿ ಪಲ್ಟಿ ಹೊಡೆದು ಉರುಳುತ್ತಾ ಹೋದ, ಅದರ ವೇಗ ಹೆಚ್ಚುತ್ತಾ ಹೋಯಿತು, ಅದನ್ನು ತಡೆಯಲು ಆತುರಾತುರವಾಗಿ ಅವನು ಮಾಡಿದ ಪ್ರಯತ್ನ ವ್ಯರ್ಥವಾಗಿ ಅವನ ಹೆಗಲ ಮೇಲಿದ್ದ ಚೀಲ ಹಾರಿ ಹೋಯಿತು. ಅವನ ಬೆನ್ನು ಒಂದು ಕಲ್ಲಿಗೆ ಬಡಿದ ಕಾರಣ ಅವನು ಉರುಳುವುದು ಹಠಾತ್ತನೆ ನಿಂತು,ಅವನ ಭುಜದಿಂದ ಬಂದ ಸಹಿಸಲಾರದ ಯಾತನೆ ಅವನನ್ನು ಗಾಬರಿಗೊಳಿಸಿತು. ಅವನು ಭುಜವನ್ನು ಅಲುಗಾಡಿಸಲು ಯತ್ನಿಸಿದ ಆದ ನೋವಿಗೆ ಜೋರಾಗಿ ಕೂಗಿದ, ಆ ಆಘಾತದ ಅವನ ನೋವಿನ ಕೂಗು ರಾತ್ರಿಯಲ್ಲಿ ಕರಗಿ ಹೋಯಿತು. ಅವನ ಕೀಲು ಮುರಿದಿತ್ತು ಮತ್ತು ಅವನ ಕೈ ಪ್ರಯೋಜನಕ್ಕೆ ಬಾರದಾಗಿತ್ತು. ಅದು ಅಷ್ಟೇ. ಅವನಿಗೆ ಇದರಿಂದ ಹೊರಬರಲು ಸಾಧ್ಯವಿಲ್ಲ. ಅವನು ಇಲ್ಲೇ, ಹಿಮಾಲಯದ ತಪ್ಪಲಿನ ಮಧ್ಯದಲ್ಲಿ, ಈ ಮಂಜಿನಲ್ಲಿಯೇ ಮಣ್ಣಾಗುತ್ತಾನೆ.  ಮೈಯೆಲ್ಲಾ ನೋಯುತ್ತಿತ್ತು ಮತ್ತು ಕೊರೆಯುವ ಚಳಿ ಮೂಳೆಯ ನೆಣದವರೆಗೂ ನುಗ್ಗಿತ್ತು. ಮುಖದ ಮೇಲೆ ಬಿದ್ದು ಚುಚ್ಚುತ್ತಿದ್ದ  ಆ ಹಿಮದ ಚಕ್ಕೆಗಳ ಬೀಳುವ ಸದ್ದಿನ ಕಡೆ ಗಮನ ಹರಿಸುತ್ತಾ , ಹತಾಶೆಯಿಂದ ಎಲ್ಲಾ ಪ್ರಯತ್ನ ಕೈ ಬಿಟ್ಟು ,ಅವನು ಕಣ್ಣುಗಳನ್ನು ಮುಚ್ಚಿದ, ಹೋರಾಟದಿಂದ ಏನೂ ಪ್ರಯೋಜನವಿಲ್ಲವೆಂದು, ಅವನು ಅವನ ಉಸಿರಾಟವನ್ನೂ ನಿಧಾನ ಮಾಡಿದ. ಅವನು ಕೇಳಿದ ಮೆಲು ನುಡಿ ಬರೀ ಒಂದು ಭ್ರಮೆಯಾಗಿತ್ತೇ , ಅಥವಾ ಅವನ ಮೆದುಳು ಒಂದೇ ಸಮನೆ ಕೇಳುತ್ತಿದ್ದ ಬಿರುಗಾಳಿಯ ಸದ್ದನ್ನು ತಪ್ಪಾಗಿ ಅರ್ಥೈಸಿತ್ತೆ? ಆದರೆ ಅವನ ಮಟ್ಟಿಗೆ ಅ ಸಮಯದ ನಂಭಾಷಣೆ ನಿಜವಾಗಿತ್ತು.

ನಿನ್ನ ಕಣ್ಣುಗಳನ್ನು ತೆರೆ.

ಇಲ್ಲ, ನನಗೆ ಆಯಾಸವಾಗಿದೆ .

ಕಣ್ಣು ತೆರೆ .

ಇನ್ನು ಮುಂದೆ ಕಣ್ಣು ತೆರೆಯುವುದು ನನಗೆ ಬೇಕಿಲ್ಲ. 

ಕಣ್ಣು ಬಿಡು .ಎದ್ದೇಳು …ಬದುಕುಳಿ …ಜೀವಿಸು.

ಅವನ ತಲೆಯಲ್ಲಿನ ಆ ವಾಗ್ವಾದ ಅವನೊಂದಿಗೇ ಆಗಿತ್ತು , ಆದರೆ ಫಲಿತಾಂಶ ಆಗಲೇ ನಿರ್ಧಾರವಾಗಿತ್ತು. ಎಲ್ಲಾ ಜ್ಯೋತಿಗಳನ್ನೂ ಮೀರಿ  ಹೊಳೆಯುವ ಮಾನವ ಚೈತನ್ಯದ ಮಣಿಸಲಾರದ ಶಕ್ತಿ ಪ್ರಕೃತಿ ಒಡ್ಡುವ ಯಾವುದೇ ಬಿರುಗಾಳಿಗಳಿಗಿಂತಲೂ ಹೆಚ್ಚು ಪ್ರಬಲವಾದದ್ದು.ಇದರಿಂದ ಅವನು ಪಾರಾಗದೇ ಇರಬಹುದು ಆದರೆ ಅದರ ಕುರಿತು ಇಲ್ಲಿಯೇ ಅಳುತ್ತಾ ಅವನು ಸಾಯುವುದಿಲ್ಲ. ಅವನು ಸಾಯುವುದೇ ಆದರೆ ಕೆಚ್ಚಿನಿಂದ ಹೋರಾಡುತ್ತಲೇ ಸಾಯುತ್ತಾನೆ. 

ಅವನು ಕಣ್ಣುಗಳನ್ನು ತೆರೆದ. ಆ ಬೆಳಕು ಮತ್ತೆ ಬಂದಿತ್ತು, ಅವನನ್ನು ಕೈ ಬೀಸಿ ಕರೆಯುತ್ತಿತ್ತು.

ಅವನು ಹಲ್ಲು ಕಿರಿಯಲು ಯತ್ನಿಸಿದಾಗ ಮರಗಟ್ಟಿದ ಅವನ ಮುಖ ಚಟಪಟ ಸದ್ದು ಮಾಡಿತು. ಅವನ ಆ ಬೀಳು ಅವನಿಗೆ ಸಹಾಯ ಮಾಡಿತ್ತು. ಆ ಜ್ಯೋತಿ ಹೆಚ್ಚು ಹತ್ತಿರದಲ್ಲಿ ಇತ್ತು. ನಾನು ಇದನ್ನು ಸಾಧ್ಯವಾಗಿಸುತ್ತೇನೆ. ನಾನು ಬದುಕಿ ಉಳಿಯುತ್ತೇನೆ !

ಕೈಯನ್ನು ನೆಟ್ಟಗಿಡಲು ನೋವು ಕಡಿಮೆಯಾಗುವಂತೆ ಮಾಡಲು ಅವನು ಅದನ್ನು ಬಿಗಿಯಾಗಿ ಹಿಡಿದ, ಜ್ಯೋತಿಯ ಮೇಲೆಯೇ ದೃಷ್ಟಿ ನೆಟ್ಟು ಪಾದ ಎತ್ತಿ  ಹೆಜ್ಜೆಯ ಮುಂದೆ ಹೆಜ್ಜೆ ಹಾಕುವಷ್ಟು ಶಕ್ತಿಯನ್ನು ಸೇರಿಸಿಕೊಂಡ.  ಕಳೆದು ಹೋದ ವಸ್ತುಗಳಿಗಾಗಿ ಹುಡುಕಾಡುವುದು ವ್ಯರ್ಥ. ಪೆಟ್ಟು , ಮೂಗೇಟುಗಳಿಂದ , ಮತ್ತು ಪೂರಾ ಜರ್ಝರಿತನಾದ ಆತ ಇಂಚು ಇಂಚೇ ಮುಂದೆ ಹೋದ, ಆ ಜ್ಯೋತಿ ಅವನಿಗೆ ಧೈರ್ಯ ತುಂಬುತ್ತಾ ಅವನಿಗೆ ದಾರಿ ತೋರಿಸುತ್ತಿತ್ತು. ಮತ್ತೆ ಆ ದೀಪ ಮಾಯವಾಗಿತ್ತು. 

“ ಓ ಇಲ್ಲಾ !”

ಆತಂಕ ಅವನನ್ನು ಮಂಡಿಯ ಮೇಲೆ ಕುಸಿಯುವಂತೆ ಮಾಡುತ್ತಿತ್ತು ಆದರೆ ಅವನು ಹಾಗೆ ಮಾಡಿದರೆ ಮತ್ತೆ ಅವನಿಗೆ  ನಿಲ್ಲುವ ಶಕ್ತಿಯೇ ಇರುವುದಿಲ್ಲ,ಈ ಬಾರಿ ಎಲ್ಲವೂ ಕೊನೆಯಾಗಬಹುದು. ಗಾಬರಿ ಆ ಜ್ಯೋತಿ ಬರೀ ಅವನ ಕಲ್ಪನೆ ಎನಿಸುವಂತೆ ಮಾಡಿತ್ತು, ಅವನು ಆ ನಿರೀಕ್ಷೆಯ ಸಂಕೇತಾಗ್ನಿಯ ಕನಸು ಕಂಡಿದ್ದ. ಆಳವಾದ ಉಸಿರಾಟ ಅವನನ್ನು ಶಾಂತನನ್ನಾಗಿಸಿತು ಮತ್ತು ಅವನನ್ನು ಸಮಂಜಸವಾಗಿ ಯೋಚಿಸುವಂತೆ ಮಾಡಿತ್ತು. ಅದು ಬರೀ ಹಿಮವಷ್ಟೇ . ಆ ಜ್ಯೋತಿ ಮತ್ತೆ ಗೋಚರಿಸಬಹುದು. ಸರಿಯಾದ ಹಾದಿಯಲ್ಲೇ ಇದ್ದೇನೆ ಎಂದು ಆಶಿಸುತ್ತಾ ಅವನು ಮತ್ತೆ ನಡೆಯಲು ಶುರು ಮಾಡಿದ ಮತ್ತು ಅವನಿಗೆ ಪರ್ವತದ ಯಾವ ತುದಿಯೂ ಸಿಗಲಿಲ್ಲ.

ಆ ಜ್ಯೋತಿ ಮತ್ತೆ ಗೋಚರಿಸಿ ಅವನನ್ನು ಪುರಸ್ಕರಿಸಿತ್ತು, ಆದರೆ ಕೆಲವು ಕ್ಷಣಗಳಷ್ಟೇ ಅದು ಮಿನುಗಿ ಮತ್ತೆ  ಮಾಯವಾಗಿತ್ತು.ಅದು ಬರುತ್ತಿತ್ತು ಮತ್ತು ಹೋಗುತ್ತಿತ್ತು , ಬಂದಾಗಲೆಲ್ಲಾ ಅವನ ಹುರುಪು ಹೆಚ್ಚಿಸಿ ಮತ್ತೆ ಕಾಣೆಯಾಗಿ ಅವನನ್ನು ತೀವ್ರ ನಿರಾಸೆಯ ಸ್ಥಿತಿಗೆ ತಳ್ಳುತ್ತಿತ್ತು. ಹೋರಾಡಲು ಸಾಧ್ಯವೇ ಇಲ್ಲ ಎನ್ನುವ ಕ್ಷಣದವರೆಗೂ ಅವನು ಹೋರಾಡಿದ. ಬಳಲಿ,ಮರಗಟ್ಟಿ,ಗಾಯಗೊಂಡು,ದಿಗ್ಭ್ರಮೆಗೊಂಡ ಅವನಿಗೆ ಯಾವ ದಿಕ್ಕಿನಲ್ಲಿ ಇದ್ದೇನೆ ಎನ್ನುವುದರ ಸುಳಿವೇ ಇರಲಿಲ್ಲ . ಅವನ ಸುತ್ತ ಎಲ್ಲದೂ ಬೆಳ್ಳಗಿತ್ತು ,  ಮುಂದೆ ಕಾಣುತ್ತಿದ್ದ ಒಂದು ಕಪ್ಪಾದ ಸಣ್ಣ ಜಾಗವನ್ನು ಬಿಟ್ಟು ಉಳಿದ ಎಲ್ಲವೂ ಬೆಳ್ಳಗಿತ್ತು.

ದೃಷ್ಟಿ ಮಂಜಾಗಿಸುತ್ತಿದ್ದ ಚಕ್ಕೆಗಳ ಮೂಲಕ ಅವನು ಕಣ್ಣಿಟ್ಟು ನೋಡಿದ. ಅದು ತುಂಬಾ ದೂರ ಇದ್ದಂತೆ ಕಾಣಲಿಲ್ಲ. ಅದು ಏನೆಂಬ ಕಲ್ಪನೆಯೇ ಇಲ್ಲದೆ ಏನಾದರೂ ಆಗಲಿ ಎಂದು ಅದರ ಕಡೆ ಅವನು ಕುಂಟುತ್ತಾ ನಡೆದ. ಅದು ನಿರುಪಯುಕ್ತವಾಗಿರುವುದಕ್ಕಿಂತ ಇನ್ನೂ ಕೆಟ್ಟದಿರಲು ಸಾಧ್ಯವಿಲ್ಲ ಮತ್ತು ಈ ತೀರಾ ಹದಗೆಟ್ಟಿರುವ ಸ್ಥಿತಿಗಿಂತ ಯಾವುದೇ ಆದರೂ ಒಂದು ಸುಧಾರಣೆಯೇ.

ಅದನ್ನು ತಲುಪಿದಾಗ,ಅವನಿಗೆ ಅದು ನಿರುಪಯುಕ್ತವಾಗಿರುವುದಕ್ಕಿಂತ ಹೆಚ್ಚೇ ಉತ್ತಮವಾಗಿದೆ ಎಂದು ತಿಳಿಯಿತು .

ಮೇಲೆ ಚಾಚಿದ ಭಾಗ ಗವಿಯ ದ್ವಾರವನ್ನು ಹಿಮ ಸುರಿತದಿಂದ ರಕ್ಷಿಸಿತ್ತು ಮತ್ತು ಎದುರು ದಿಕ್ಕಿನಿಂದ ಬೀಸುತ್ತಿದ್ದ ಗಾಳಿ, ಗಾಳಿಯ ಸೆಳೆತಕ್ಕೆ ಸಿಲುಕುವುದನ್ನು ತಡೆಯುತ್ತಿತ್ತು. ಅದು ದೊಡ್ಡದಾಗಿದೆಯಾ ಅಥವಾ ಯಾರೊಂದಿಗಾದರೂ ಹಂಚಿಕೊಳ್ಳಬೇಕಾ  ಎನ್ನುವ ಬಗ್ಗೆ ಏನೂ ಚಿಂತಿಸದೆ,ಬಗ್ಗಿಕೊಂಡು ಅವನು ಅದರ ಒಳಗೆ ನುಸುಳಿದ. ಏನೂ ಇಲ್ಲದಿರುವುಕ್ಕಿಂತ ಏನೋ ಒಂದು ಇರುವುದು ಲೇಸು.ದೂರದಲ್ಲಿರುವ ಗೋಡೆ ತಲುಪಿ ಒತ್ತಿ ಕುಳಿತು, ಮುದುಡಿಕೊಂಡ ಮತ್ತು ಬೆಚ್ಚಗಿರಲು ಅವನನ್ನೇ ಅವನು  ಅಪ್ಪಿಕೊಂಡ . ಬಹುಶಃ ಹಿಮಸುರಿತ ನಿಂತಿದ್ದೇ ಆದರೆ , ಚಂದ್ರನ ಬೆಳಕು ಅವನಿಗೆ ದೇವಾಲಯದ ದಾರಿ ತೋರಿಸಬಹುದು. ಅವನು ಮತ್ತೊಮ್ಮೆ ನಡುಗಿದ, ರಮ್ ನೀಡಿದ್ದ ಆ ಶಾಖದ ಪ್ರಭಾವ ಯಾವಾಗಲೋ ಮಾಯವಾಗಿತ್ತು.ಕಟಕಟಿಸುವ ಹಲ್ಲುಗಳನ್ನು ಬಳಸಿ ಅವನ ಸರಿಯಾಗಿದ್ದ ಕೈಯ ತುದಿಯಲ್ಲಿದ್ದ ಕೈಗವಸನ್ನು ತೆಗೆದು ಅವನ ಜಾಕೇಟಿನ ಎಲ್ಲಾ ಜೇಬುಗಳನ್ನೂ ಹುಡುಕಾಡಿ, ಇರುವುದನ್ನೆಲ್ಲಾ ಹೊರ ತೆಗೆದ . ಅದರಲ್ಲಿ ಅವನಿಗೆ ಎರಡು ವೋಡ್ಕಾ ಬಾಟಲ್ ಮತ್ತು ಎರಡು ಚಿಕ್ಕ ಸ್ನಿಕರ್ ಗಳು ಸಿಕ್ಕವು.

ಹಲ್ಲುಗಳನ್ನು ಬಳಸಿ, ಅದರ ಮುಚ್ಚಳವನ್ನು ತೆಗೆದು ಅದು ನೋವನ್ನು ಕಡಿಮ ಮಾಡಿ ಶಾಖ ನೀಡುವುದು ಎಂಬ ನಿರೀಕ್ಷೆಯಿಂದ  ಅದರಲ್ಲಿ ಒಂದರಲ್ಲಿದ್ದ ಅಗ್ಗದ ಮಾದಕ ಪಾನೀಯವನ್ನು ಬಾಯಲ್ಲಿ ಸುರಿದುಕೊಂಡ, ಉಸಿರು ಕಟ್ಟಿ ,ಅವನು ಕೆಮ್ಮಿದಾಗ ಅವನ ಎದೆ ಉಬ್ಬಸದ ಉಸಿರಾಟದ ಸದ್ದು ಮಾಡಿತು.ಅವನ ಆರಾಮವಾಗಿ ಉಸಿರಾಡಿದ ಮರುಕ್ಷಣವೇ  ಎರಡೇ ತುತ್ತಿನಲ್ಲಿ ಸ್ನಿಕರ್ ಗಳು ಮಾಯವಾಗಿ, ಅವನಿಗೆ ಎಷ್ಟು ಹಸಿವಾಗಿತ್ತು ಎಂಬುದರ ಅರಿವಿ ನೀಡಿತ್ತು. ಮುಂದೆ ಬೇಕೇ ಬೇಕಾಗುತ್ತದೆ ಎಂದು ನಿರ್ಧರಿಸಿ ಮತ್ತೊಂದು ಬಾಟಲನ್ನು ಎತ್ತಿಟ್ಟುಕೊಂಡ. ಮಧ್ಯದ ಶಾಖ ಮತ್ತು ಸಿಕ್ಕ ಆಶ್ರಯದಿಂದ ಉಲ್ಲಸಿತನಾದ ಅವನು  ಬಳಲಿಕೆಗೆ ಮಣಿದು ನಿದ್ರೆಗೆ ಜಾರಿದ.

ಯಾವುದೋ ಹಿತವಾದ ಧ್ವನಿ- “ ಗಾಬರಿಯಾಗಬೇಡ ಮಗು, ನಾನಿದ್ದೇನೆ, ನಿರಾಶೆ ಬೇಡ” ಎನ್ನುವ ಅಭಯ ನೀಡುವ ಧ್ವನಿ. ಯಾರಿರಬಹುದು ಎಂದು ಅವನು ನಿದ್ದೆಯಲ್ಲೂ ಗೊಂದಲಕ್ಕೊಳಗಾದ. ಹೀಗೆ ಎಷ್ಟು ಹೊತ್ತು ಮಲಗಿದ್ದನೋ ಅವನಿಗೆ ಗೊತ್ತಿಲ್ಲ.

ಕುಲುಕಾಟದಿಂದ ಅವನು ಎಚ್ಚರಗೊಂಡ.ಗೊಂದಲದಲ್ಲಿಯೇ ಅವನಿಗೆ ನೋವು ಮತ್ತ ಕೊರೆಯುವ ಛಳಿಯ ಅನುಭವವಾಯಿತು. ಅವನು ಎಲ್ಲಿದ್ದೇನೆಂದು ಜ್ಞಾಪಿಸಿಕೊಳ್ಳುತ್ತಾ ಹೋದಂತೆ, ನೆನಪಿನ ಮಹಾಪೂರವೇ ಹರಿದು ಬಂತು. ಹಿಂದೆ ಅವನು ತಿರಸ್ಕರಿಸಿದಂತಹವೇ ಪಿಸುಮಾತುಗಳು, ಆದರೆ ಈಗ ಅವನು ಅದನ್ನು ನಿರಾಕರಿಸಲಾಗಲಿಲ್ಲ ; ಆ ಪಿಸುಗುಟ್ಟುತ್ತಿದ್ದ ಜನ ಅವನನ್ನು ಎತ್ತಿಕೊಂಡು ಹೋಗುತ್ತಿದ್ದರು.

ರಕ್ಷಿಸಲಾಗಿದೆ !

ಬಿರುಸಾಗಿ ಬೀಸುವ ಗಾಳಿ ಮತ್ತು ಮುಖವನ್ನು ಚುಚ್ಚುತ್ತಿದ್ದ ಹಿಮ ಹಠಾತ್ತನೆ ನಿಂತಿದ್ದು ಅವನಿಗೆ ಅಚ್ಚರಿ ಎನಿಸಲಿಲ್ಲ.ಅವನಿಗೆ ಅಚ್ಚರಿ ಎನಿಸಿದ್ದು ಅಲ್ಲಿ ಆವರಿಸಿದ ನಿಗೂಢ ಸುಕೋಷ್ಣ ಮಾತ್ರ. ಬಹುಷಃ ಒಂದು ಸೇನೆಯ ಟ್ರಕ್ಕಿನ ಒಳಗೆ ಅವನನ್ನು ಹಾಕಿರಬೇಕು.ಅವನಿಗೆ ಅದು ಬೆಳಗಿನ ಸೂರ್ಯ ಎಂಬ ಅನುಭವವಾಯಿತು., ಮತ್ತು ಕೇಳುತ್ತಿರುವುದು ಹಕ್ಕಿಗಳ ಕಲರವ ಎಂದು ಖಚಿತವಾಯಿತು. ದೊಡ್ಡದಾಗಿ ಕಣ್ಣು ಬಿಡುತ್ತಾ ನೀಲಿ ಆಕಾಶ ಮತ್ತು ಬೆಳಗಿನ ಉಜ್ವಲ ಬೆಳಕಿಗೆ ಕಣ್ಣು ಮಿಟುಕಿಸಿದ. ತಲೆ ತಿರುಗಿಸಿದಾಗ,ಸುಂದರವಾದ ಮರಗಳು.ಪರ್ವತಗಳು., ಇವುಗಳು ಸುತ್ತುವರಿದ ಒಂದು ವಿಶಾಲವಾದ ಕೊಳದಲ್ಲಿನ ತಿಳಿಯಾದ. , ಸ್ವಚ್ಛ ನೀರನ್ನು ನೋಡಿದ. ಅವನಿಗೇ ಆಶ್ಚರ್ಯವಾಗುವಂತೆ ಅಲ್ಲಿ ಒಂದು ಸುಂದರವಾದ ದುರ್ಗಾ ಮಂದಿರವಿತ್ತು. ಅದು ಅವನ ಭ್ರಮೆಯಾಗಿರಲಿಲ್ಲ.

ಅಲ್ಲಿದ್ದ ಜನ ಅವನ ತಂದೆ ತಾಯಿಯರ ಬಗ್ಗೆ, ಊರಿನ ಬಗ್ಗೆ ವಿಚಾರಿಸುತ್ತಿದ್ದರು. ಅದರಲ್ಲಿ ಒಬ್ಬರು ಅವನ ಮೊಬೈಲನ್ನು ಕೈಯಲ್ಲಿ ಹಿಡಿದು ಅವನ ತಂದೆಗೆ ಫೋನ್ ಮಾಡುವ ಪ್ರಯತ್ನದಲ್ಲಿದ್ದರು.ಅಲ್ಲಿ ನೆಟ್ ವರ್ಕ್ ಸಮಸ್ಯೆಇದ್ದ ಕಾರಣ, ತಕ್ಷಣಕ್ಕೆ ಸಂಪರ್ಕ ಸಾಧ್ಯವಾಗಲಿಲ್ಲ. ಸ್ವಲ್ಪ ಪ್ರಯತ್ನಿಸಿದ ಮೇಲೆ ಆ ಕಡೆಯಿಂದ ಶೌರ್ಯನ ತಂದೆಯ ಧ್ವನಿ ಕೇಳಿಸಿತು. 

“ಶೌರ್ಯ,ಶೌರ್ಯ ಹೇಗಿದಿಯಾ? ಚೆನ್ನಾಗಿದಿಯಲಾ ?ನಿನ್ನ ಫೋನ್ ಗೆ ಕಾದು ಕಾದು ಸಾಕಾಯ್ತು.ನಿನ್ನ ಅಮ್ಮ ಒಂದೇ ಸಮ ಅಳ್ತಾ ಇದಾಳೆ”. ಹೀಗೆ ನಿಲ್ಲಿಸದೆ ಮಾತನಾಡುತ್ತಲೇ ಇದ್ದ ಶೌರ್ಯನ ತಂದೆ ಈಶ್ವರ್.

ಫೋನ್ ಮಾಡಿದ ವ್ಯಕ್ತಿ ಆಲ್ಲಿನ ಪರಿಸ್ಥಿತಿ ವಿವರಿಸುತ್ತಿದ್ದ. ವಿಡಿಯೋಕಾಲ್ ನಲ್ಲಿ ಶೌರ್ಯನನ್ನು ನೋಡಿದ ಈಶ್ವರ್ ಗೆ ನೋವಾಯಿತಾದರೂ, ಮಗನನ್ನು ಕಂಡು ಸಮಾಧಾನವಾಗಿತ್ತು. ಎಲ್ಲಾ ದುಗ್ಗಮನ ಕೃಪೆ.ಅವಳೆ ಕಾಪಾಡಿರೋದು ಮಗನನ್ನ. ಹೀಗಂದುಕೊಂಡ ಈಶ್ವರ್ ಸತಿಗೆ ವಿಷಯ ತಿಳಿಸಲು ಮುಂದಾದ.

ಕಣ್ಣು ಮುಚ್ಚಿದ ಶೌರ್ಯನಿಗೆ ದುಗ್ಗಮ್ಮನದೇ ಚಿತ್ರ. ಅಭಯ ನೀಡಿದ ತಾಯಿಯ ಮಡಿಲಲ್ಲಿ ಮಲಗಿದ ಅನುಭವ. 

ನಂತರದಲ್ಲಿ ಏನಾಗಿರಬಹುದು ಎನ್ನುವುದನ್ನು ನೀವು ಈಗಾಗಲೇ ಊಹಿಸಿರಬಹುದು. ಶೌರ್ಯನ ತಂದೆತಾಯಿಯರು ಅಲ್ಲಿಗೆ ಬಂದು ಅ ಮಗನಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ನೋಡಿಕೊಂಡರು. ಈಗ ಶೌರ್ಯ ಮೊದಲಿನಂತಾಗಿದ್ದಾನೆ. ದುರ್ಗಾ ದೇವಿಯ ಬಗ್ಗೆ ಅವನ ಭಕ್ತಿ ಹೆಚ್ಚಾಗಿದೆ. ಆದರೆ ಅವನ ಬೈಕ್ ರೈಡ್ ಗಳು ಮಾತ್ರ ನಿಂತಿಲ್ಲ. ಕೇಳಿದರೆ “ಅಮ್ಮ ನೋಡ್ಕೋತಾಳೆ, ನನಗೇನು ಭಯ, ತಣ್ಣಗಿರಿ” ಅಂತ ಅಪ್ಪ ಅಮ್ಮಂಗೇ ಹೇಳ್ತಾನೆ…..

‍ಲೇಖಕರು Admin

4 April, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading