-ಎಂ ವಿ ಶಶಿಭೂಷಣರಾಜು
ಕಾವ್ಯ ತೃಪ್ತಿ
ಇದೊಂದು ಸಮಯ ಸಿಕ್ಕಿದೆ ನಮಗೆ
ಕೊನೆಯದಾಗಿ ನಾವು ತೆರದುಕೊಳ್ಳಲು
ಒಂದು ಭಾವದ ಚಿತ್ರ ಕಣ್ಣಲಿ ಇಳಿದು
ಕಾವ್ಯವಾಗಿ ತೆರೆದುಕೊಳ್ಳಲು
ಈ ದೂರಾಗುವ ಸಮಯದಲಿ
ವಿರಹದಲ್ಲೊಂದು ಕಾವ್ಯತೃಪ್ತಿಯಾಗಲಿ
ಈ ಒಂದು ಘಟ್ಟ ಸೇರಲು
ಮುಂದೂಡಿದ ಕ್ಷಣ,
ಈಗ ನನಸಾಗಲಿ
ಕಣ್ಣಾರ್ವ ನೋಡು ಕಣ್ಣಾಳದ ಕಾವ್ಯವ
ಕೊನೆಯಬಾರಿ,
ಅರ್ಥಕ್ಕೆ ಸಿಗದೆಂದೇಳದೆ
ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ
ಮನವ ಹದಗೊಳಿಸು
ಇದೊಂದು ಕ್ಷಣ ಸಾಕು, ಅಷ್ಟೇ ಬಾಳೆನ್ನುವೆ
ಕಾವ್ಯವಾಗದ ದಿನಗಳು
ಎಷ್ಟಿದ್ದರೇನು?
ಕಾವ್ಯ ಮನ ತಟ್ಟುವ
ಒಂದು ಕ್ಷಣ ಸಾಕು
ಕಾವ್ಯವಾದರೂ ಏನು?
ಒಂದು ಪ್ರೇಮಿ,
ಸಿಕ್ಕೂ ಸಿಗದಂತೆ
ದಕ್ಕಿದರೂ ದಕ್ಕದ
ಹಿಂಬಾಲಿಸಿದಷ್ಟೂ ಓಡುವ
ಒಂದು ಪವಿತ್ರ ವಿರಹ
ಪ್ರೀತಿಯ ಅಧೀನ
ಕಟ್ಟು ಕಾವ್ಯವ ನನ್ನ ಎದೆಯಾಳಕ್ಕೆ ಇಳಿದು
ಹುಡುಕು ಪದಗಳನು
ಪೋಣಿಸುತ್ತಾ ಒಂದೊಂದೇ ಮಾತನು
ಕಾವ್ಯವೊಂದು ಉದಯಿಸಲಿ
ಎಲ್ಲ ತೀರುವ ಮುನ್ನ






0 Comments