ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನ ಮೈ ಘಮ ಹೊತ್ತು ತಂದ ತಣ್ಣನೆಯ ಸುಳಿಗಾಳಿ

ಚಾಚಿದ ಕೈಯ್ಯಲ್ಲಿ…

ಶ್ರೀದೇವಿ ಕೆರೆಮನೆ

ಸುಮ್ಮನೆ ಆಕಾಶಕ್ಕೆ ಕೈ ಚಾಚುವ
ರೂಢಿಯಿತ್ತು ನನಗೆ ಚಿಕ್ಕಂದಿನಿಂದಲೂ
ಚಾಚಿದ ಕೈಗೆ ಏನಾದರೂ ಎಟುಕಬೇಕೆಂಬ
ನಿರೀಕ್ಷೆಗಳೇನೂ ಇರದಿದ್ದರೂ

ಕಣ್ಣಿಗೆ ಕಾಣದ ಸುಳಿಗಾಳಿ,
ಅಲ್ಲೆಲ್ಲಿಂದಲೋ ಹರಿದು ಬಂದ
ಶಬ್ಧದ ಅಲೆಗಳು
ಯಾರದ್ದೋ ಮನೆಯ ದೇವರ ಕೋಣೆಯ
ಊದುಬತ್ತಿಯ ಹಿತವಾದ ಪರಿಮಳ
ಏನೆಲ್ಲವನ್ನೂ ಈ ಚಾಚಿದ ಕೈ
ಹಿಡಿದಿರಬಹುದಾದ ಪುಳಕ
ಏನಿಲ್ಲವೆಂದರೂ ಬಿಚ್ಚಿದ ಅಂಗೈಯನ್ನು
ಸವರಿ ಹೋದ ನವಿರು ಸೆಳೆತ

ಒಂದಿಷ್ಟು ದೊಡ್ಡವಳಾದ ಮೇಲೆ
ಎಲ್ಲೆಂದರಲ್ಲಿ ಚಾಚುವ ಕೈ
ಅತ್ತಿತ್ತ ಗಮನಿಸತೊಡಗಿತು
ಆಗಸಕ್ಕೆ ಚಾಚಿದ್ದಕ್ಕಿಂತ
ಬಾನಿಗೆ ನೆಗೆದು ನಿಲ್ಲುವ ಹುಮ್ಮಸ್ಸಿನಲ್ಲಿ
ಎದರು ಹಾದು ಹೋಗುವವರ
ದಿಟ್ಟಿಯನ್ನು ಒಂದು ಕ್ಷಣ ಸೆಳೆದುಕೊಳ್ಳುವ
ಗುಬ್ಬಿ ಎದೆಯ ಮುಚ್ಚಿಟ್ಟುಕೊಳ್ಳುವ ಆತುರ

ಬೆಳೆದೆ ಎಂದುಕೊಂಡಾಗಲೆಲ್ಲ ಏಕಾಂಗಿ
ಇಲ್ಲ ಚಾಚಿದ ಕೈಗೆ ಯಾವ ಆಸರೆಯೂ
ಯಾರೂ ಕಾಣದ ಒಬ್ಬಂಟಿ ನಡಿಗೆಯಲ್ಲಿ
ಆಗಸದಂಗಳವನ್ನೆಲ್ಲ ಹಿಡಿದು
ತನ್ನದಾಗಿಸಿಕೊಂಡು
ಹೆಮ್ಮೆಯ ಗರಿ ಮುಡಿಗೇರಿಸಿಕೊಳ್ಳುವ ಕನಸು
ರಾತ್ರಿಯೆಲ್ಲ ಆಗಸಕೆ ಕಣ್ಣು ನೆಟ್ಟು
ಮಿಣುಕು ನಕ್ಷತ್ತಗಳಿಗೆ ಕೈ ಚಾಚಿ
ಮಾಲೆ ಮಾಡಿ ಕುತ್ತಿಗೆಗೆ ಹಾರವಾಗಿಸುವ ಬಯಕೆ
ಗಾಳಿಯಲ್ಲಿ ಸುಳಿದ ಕೈಗೆ
ಮಿಣುಕುವ ಮಿಂಚು ಹುಳು ದಕ್ಕಿದ್ದಷ್ಟೆ..

ಈಗಲೂ ಚಾಚುತ್ತೇನೆ ಅಂಗೈ ತೋಳ ಬೀಸಿ , ಗಾಳಿ ಗೋಪುರದಲ್ಲಿ
ಸಿಗುವ ಮೊದಲೇ ಕಳೆದು ಹೋದ
ನೀನಾದರೂ ಸಿಗುವ ಆಸೆ ಹೊತ್ತು
ಸಾವಿರ ಮೈಲುಗಳಾಚೆಯ
ನಿನ್ನ ಮೈ ಘಮ ಹೊತ್ತು ತಂದ
ಮತ್ತದೇ ತಣ್ಣನೆಯ ಸುಳಿಗಾಳಿ
ಚಾಚಿದ ಕೈಯನ್ನು ಎದೆಗೊತ್ತಿಕೊಳ್ಳುತ್ತೇನೆ ಮತ್ತೆ ಮತ್ತೆ

‍ಲೇಖಕರು avadhi

30 May, 2018

2 Comments

  1. K. Nallathambi

    ಸುಮ್ಮನೆ ಆಕಾಶಕ್ಕೆ ……ಎಟುಕಬೇಕೆಂಬ….
    ಬೆಳೆದೆ ಎಂದುಕೊಂಡಾಗ ಏಕಾಂಗಿ……. ಶ್ರೀದೇವಿ ಶರಣು….

  2. Raju hegade

    ಚಂದ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading