ಕೊಡಾಕ್ ರೀಲುಗಳು ಮತ್ತು ಅಮ್ಮನ ಮದುವೆಯ ಸೆಲ್ಯುಲಾಡ್ ಕನಸು

ಸರಿಯಾಗಿ ಎಷ್ಟು ವರ್ಷಗಳಾದವೋ ಗೊತ್ತಿಲ್ಲಾ. ಆದ್ರೆ ಆವತ್ತಿಗೆ ಶನಿವಾರ ಬೆಳಿಗ್ಗೆ ಒಂದು ಲೋಟ ಕಾಫಿ, ಎರಡು ಬ್ರೆಡ್ ತಿಂದು ಸ್ಕೂಲ್ ಗೆ ಹೋಗ್ತಾ ಇದ್ದ ವಯಸ್ಸು ಅನ್ನೋದು ಮಾತ್ರ ಯಾಕೋ ಎಷ್ಟೇ ಪ್ರಯತ್ನಿಸಿದ್ರು ತಲೆಯೊಳಗಿನಿಂದ ಇನ್ನೂ ಕಳಚಿ ಬಿದ್ದಿಲ್ಲ.

ಅಜ್ಜಿಯ ಊರಿಗೆ ಹೊರಟಿದ್ವಿ. ಕೆ.ಆರ್ ನಗರದಲ್ಲಿ‌ ಬಸ್ಸು ನಿಂತಿತ್ತು. ಅಜ್ಜಿ ಊರು ಸೇರಿಸುವ ಮತ್ತೊಂದು ಬಸ್ಸಿಗಾಗಿ ಸ್ಪಲ್ಪ‌ ದೂರ‌ ನಡೆದು ಹೋಗಬೇಕಿತ್ತು. ಬಸ್ಸು ಬರುವುದರೊಳಗೆ ಊರಿನಲ್ಲಿರುವ ಅಜ್ಜಿಗೆ ಹಣ್ಣು ಸ್ವೀಟು ಅದು ಇದು ಅಂತ ತೆಗೆದುಕೊಳ್ಳುವ ಅಭ್ಯಾಸ ಅಮ್ಮನಿಗೆ ಮೊದಲಿಂದಲೂ ಇದೆ. ಇವತ್ತಿಗೂ ಅದೇ ಪದ್ದತಿಯನ್ನು ಕಾಯ್ದುಕೊಂಡಿದ್ದಾಳೆ. ಅಲ್ಲೇ ಇದ್ದ ರಸ್ತೆ ಬದಿಯ ಹಣ್ಣಿನ ತಳ್ಳು ಗಾಡಿಗಳ ಎದುರು ನಿಂತು ಅಂಗಡಿಯವನೊಂದಿಗೆ ಚೌಕಾಸಿ ಮಾಡುತ್ತಲೇ ಬಸ್ಸು ಬರುವುದನ್ನು ಓರೆಗಣ್ಣಿನಲ್ಲಿ ನೋಡುತ್ತ ಗಾಯವಾಗದ ಹಣ್ಣುಗಳನ್ನೂ ಆರಿಸಿಕೊಳ್ಳುತ್ತಿದ್ಲು.

ಆಗ್ಲೇ ಬೆರಳು ಮಾಡಿ ಹೇಳಿದ್ದು.

ಅಲ್ಲಿ ಕಾಣ್ತಾ ಇದೆ ಅಲ್ವಾ ಅಲ್ಲೇ ನಾನು ನಿಮ್ಮಪ್ಪ ಮದುವೆಯಾಗಿದ್ದು ಅಂತ ಒಂದಿಷ್ಟು ದೂರಕ್ಕೆ‌ ಆಗಷ್ಟೇ ಚೇತರಿಸಿಕೊಳ್ಳುವಾಗಿನ ಖಾಯಿಲೆಯ ಮನುಷ್ಯನಂತೆ ಏದುರಿಸಿರು ಬಿಡುತ್ತ ನಿಂತಿದ್ದ ದುರಸ್ತಿ ಹಂತದ ಕಲ್ಯಾಣ ಮಂಟಪ ತೋರಿಸಿದಳು ಅಮ್ಮ.

ಅಲ್ಲಾ!! ಇನ್ನೂ ಪೂರ್ತಿ ಕಟ್ಟೇ ಇಲ್ಲಾ ಅದನ್ನ?? ಅಲ್ಲಿ ಮದುವೆಯಾದ್ರಾ??

ಈಗ ಇಷ್ಟಾದ್ರು ಇದೆ. ನಾನು ಮದುವೆಯಾಗೋವಾಗ ಇನ್ನೂ ಅತ್ತಾತ್ಲೇ ಅದು ಗೊತ್ತಾ! ಅಂದ್ಲು.

ನಾನು ಮತ್ತೆ ಅದೇ ಕಲ್ಯಾಣ ಮಂಟಪದ ಕಡೆಗೆ ಹೊರಳಿ ನೋಡಿದೆ. ನಾಲ್ಕೈದು ಕಂಬಗಳಿಗೆ ಯಾರೋ ಬಣ್ಣ ಬಳಿಯುತ್ತಿದ್ದರು. ಒಂದಿಷ್ಟು ದೂರಕ್ಕಿದ್ದ ಅರಳಿಮರದ ಸುತ್ತಲೂ‌ ಮೂರ್ನಾಲ್ಕು ಜನರು ಅದು ಯಾವುದಕ್ಕೋ ಶತತಥ ತಿರುಗುತ್ತಿದ್ರು. ಅದರ ಬಳಿಯೇ ಇದ್ದ ಬೋರ್ ವೆಲ್ ನಲ್ಲಿ ಜಂಗು ಮೊಳೆಯಂತ ಮುದುಕಿಯೊಬ್ಬಳು ಬಿಂದಿಗೆ ತುಂಬಿಸಿಕೊಳ್ಳಲು ಹೆಣಗಾಡುತ್ತಿದ್ದಳು.

ಅಮ್ಮ ಮದುವೆಯಾಗುವಾಗ ಹೇಗಿದ್ದರಬಹುದು? ಮದುವೆಯಾಗಿ ಅಷ್ಟು ವರ್ಷಗಳಾದರೂ ಈ ಕಲ್ಯಾಣಮಂಟಪವನ್ನ ಇನ್ನೂ ಹದ ಮಾಡಿಸಲೇ ಇಲ್ವಾ? ಅಮ್ಮನ್ನ ಅಪ್ಪ ಆವತ್ತಿಗೂ ಇಂಗ್ಲಿಷ್ ಪತ್ರಿಕೆ ಓದುತ್ತಿದ್ದವು ಅನ್ನೋದನ್ನ ಅಜ್ಜಿ ಸಾಕಷ್ಟು ಸಾರಿ ಹೇಳಿದ್ದಳು. ಹಾಗಿದ್ದೂ ಈ ಶೆಟ್ಟಿ ಅಂಗಡಿಯ ಗೋಡೌನ್ ನಂತಿದ್ದ ಇಲ್ಲಿ ಮದುವೆ ಮಾಡಿಸಿದ್ದು ಸರಿ ಕಾಣಲಿಲ್ಲ. ಅಮ್ಮನಿಗೆ ಇಲ್ಲೂ ಮೋಸ ಆಗಿದೆ ಎನಿಸಿತು.

ಬಿಡು ನಿನ್ನ ಹಣೆ ಬರಹ ಚೆನ್ನಾಗಿಲ್ಲ. ಹೋಗಿ ಹೋಗಿ ಇಲ್ಲಿ ಮದುವೆಯಾಗಿದ್ಯಾ!. ದೊಡ್ಡಮ್ಮನ ಮದುವೆಯಾಗಿದ್ದು ಎಲ್ಲಿ?? ನಿಮ್ಮಪ್ಪ ಅವರ ಮದುವೆಯನ್ನೂ ಇಲ್ಲೇ ಮಾಡಿದ್ರಾ?? ನನಗೆ ತಲೆಯೊಳಗಿದ್ದ ಎಲ್ಲವನ್ನೂ ಒಂದೇ ಸಾರಿ ಕೇಳಿಬಿಟ್ಟಿದ್ದೆ.

ಅವಳ ಮದುವೆ ಹಳೇ ಬಸ್ ಸ್ಟಾಪ್ ಹತ್ತಿರ ಅಣ್ಣಯರಾಯರ ಅಂಗಡಿಯ ಮಗ್ಗುಲಿನ ರಸ್ತೆಯಲ್ಲಿ ಒಂದು ಚೌಟ್ರಿ ಇದೆ, ಅಲ್ಲಿ ಆಗಿದ್ದು. ಅದು ಚೆನ್ನಾಗಿದೆ. ಈ ತರಾ ಹಳೆಯದಲ್ಲಾ. ಅವಳು ಅಲ್ಲೇ ಬೇಕು ಅಂತ ಹಠ ಮಾಡಿದ್ಲು, ಅದಕ್ಕೆ ಅಪ್ಪನೂ ಮಾಡಿಬಿಟ್ಟ. ಆಮೇಲೆ ಅವಳು ಬೆಂಗಳೂರಿಗೆ ಹೊರಟುಹೋದ್ಲು.

ನೀನೂ ಹಠ ಮಾಡಬೇಕಿತ್ತು.‌ ಆಗ ನಿಂದು ಇಲ್ಲೇ ಆಗಿರೋದು.

ಆ ಕ್ಷಣಕ್ಕೆ ಅವಳ ತಲೆಯೊಳಗೆ ಅದ್ಯಾವ ನೆನಪುಗಳು ಚಲಾವಣೆಯಲ್ಲಿತ್ತೋ ಗೊತ್ತಿಲ್ಲಾ. ನಗ್ತಾ ಇದ್ಲು. ನಾನು ಹೇಳಿದ್ದಕ್ಕೆ ಉತ್ತರಿಸಲೂ ಇಲ್ಲಾ  ನಾನೂ ಸುಮ್ಮನಾಗಿದ್ದೆ. ಮದುವೆಯಾಗಿದ್ದು ಅವಳು ತಾನೇ! ನಕ್ಕರೆ ನಗಲಿ ಬಿಡು ಎಂದುಕೊಂಡು ಸುಮ್ಮನೇ ಹೆಜ್ಜೆ ಹಾಕಿದ್ದೆ.

ಅಮ್ಮ ಅವಳು ಮದುವೆಯಾದ ಕಲ್ಯಾಣ ಮಂಟಪವನ್ನ ನನಗೆ ತೋರಿಸಿ ಎಷ್ಟು ವರ್ಷಗಳಾಗಿವೆಯೋ‌ ಗೊತ್ತಿಲ್ಲದೇ ಇದ್ರು ಅವಳ ಮದುವೆಯಾಗಿ ಮೂವತ್ತು ವರ್ಷಗಳಾಗುತ್ತಾ ಬಂದಿದೆ ಅನ್ನೋದು ಮಾತ್ರ ಖಚಿತವಾಗಿ ಗೊತ್ತಿದೆ. ಅವಳ ಮದುವೆಯಾಗಿದ್ದು ಯಾವಾಗ ಇವತ್ತಿಗೆ ಎಷ್ಟು ವರ್ಷಗಳಾಗಿವೆ ಅನ್ನೋದನ್ನ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಕೂಡ ನಾಚುವಂತೆ ಸಾಕಷ್ಟು ಸಾರಿ ನಾವಿಬ್ಬರೂ ವಿಚಿತ್ರವಾದ ರೀತಿಯಲ್ಲೆಲ್ಲಾ ಲೆಕ್ಕಾಚಾರ ಮಾಡಿದ್ದೇವೆ.

**
ಇದಾದ ಮೇಲೆ ನಾನು ಆ ಕಲ್ಯಾಣ ಮಂಟಪವನ್ನ ಸಾಕಷ್ಟು ಸಾರಿ ಕಂಡಿದ್ದೇನೆ.‌ ಪ್ರತಿ ಸಾರಿ ಕಂಡಾಗಲೂ ಅದು ತನ್ನ ಚಹರೆಯನ್ನ ಬದಲಿಸಿಕೊಂಡಿರುತ್ತಿತ್ತು. ಕಂಬಳಗಳು ಕೆತ್ತಿಸಿಕೊಂಡು‌ ಚಿತ್ರಗಳನ್ನ ಮೈತುಂಬಿಕೊಂಡಿದ್ದವು.ಅಲ್ಲಿದ್ದ ಅರಳಿಮರದ ಸುತ್ತಲೂ ಕಟ್ಟೆ ಬಂದಿತ್ತು. ಗೋಡೆಯ ಬಣ್ಣ ಬದಲಾಗಿತ್ತು. ಕಾಲ್ನಡಿಗೆಯ ದೂರಕ್ಕೆ ಗಣೇಶನ ದೇವಸ್ಥಾನ ಎದ್ದು ನಿಂತಿತ್ತು. ಹೀಗೆ ಅದು ಏನೆನೋ ಬದಲಾವಣೆಗಳು. ಇದೆಲ್ಲವನ್ನೂ ಅಮ್ಮನಿಗೆ ಊರಿನಿಂದ ಬಂದ ಮೇಲೆ ಊಟ ಮಾಡುವಾಗ, ಸ್ನಾನ ಮುಗಿಸಿ ತಲೆಯೊರಸಿಕೊಳ್ಳುವಾಗ, ಕಾಲೇಜಿಗೆ ಹೊರಡುವಾಗ, ಯಾರದೋ ಮನೆಯ ಮದುವೆಯ ಕಾಗದಗಳು ಟೀಪಾಯ್ ಮೇಲೆ ಕಂಡಾಗೆಲ್ಲಾ ಹೇಳಿದ್ದೇನೆ. ಆಗೆಲ್ಲಾ ಅವಳೂ ಕೂಡ ಹ್ಞೂ ಅಂತ ಗೋಣು ಹಾಕಿ ಮುಂದುವರೆದಿದ್ದಳು. ಆಗೆಲ್ಲಾ ಅವಳ ಮದುವೆ ಯಾವ ನೆನಪು ಮರಳಿ ಬಂದಂತೆ ಅನಿಸಿರಲಿಲ್ಲ.

ಅಮ್ಮ ಅವಳ ಮದುವೆಯನ್ನು ನೆನೆಯಲು ಎರಡು ವರ್ಷಗಳ ಹಿಂದೆ ಘಳಿಗೆಯೊಂದು ತಾನಾಗೇ ಒದಗಿ‌ ಬಂದಿತ್ತು.

ಅಮ್ಮನಿಗೆ ಮತ್ತೆ ಅವಳ ಮದುವೆ ಅವಧಿ ನೆನಪಾಗಿದ್ದು ಅಣ್ಣನಿಂದ. ಹೀಗೇ ಒಂದು ಭಾನುವಾರ ಮೂವರು ಸೇರಿ ಮನೆಯನ್ನು ಜಾಲಿಸಿ ಸಾಫು ಮಾಡುತ್ತಿರುವಾಗ ಹಳೆಯ ಗಾಡ್ರೇಜ್ ಬೀರುವಿನಲ್ಲಿ ಕೂಡಾಕ್ ಕಂಪನಿಯ ಐದಾರು ನೆಗೆಟಿವ್ ರೀಲುಗಳ ರೋಲ್ ಗಳು ಸಿಕ್ಕವು. ಅಣ್ಣ ಅದನ್ನ ಅಪ್ಪನ ಯಾವುದೋ ಸಿನೆಮಾ ದಿನಗಳದಿರಬೇಕು ಎಂದು ಕಸ ಎನ್ನುವಂತೆ ಎಸೆದು ಬಿಟ್ಟಿದ್ದ. ರೀಲುಗಳನ್ನ ಎಸೆದಿದ್ದು ಅಮ್ಮನ ಕಣ್ಣಿಗೂ ಬಿದ್ದಿತ್ತು. ಕಂಡವಳೇ ಧಡಕ್ಕನೆದ್ದು ಚೀರಿದಳು.

ಅದು ನಮ್ಮ ಮದುವೆ ಫೋಟೋ ರೀಲು ಕಣ್ರೋ ಎಂದಳು. ಓಡಿ ಎತ್ತಿಕೊಂಡಳು. ಅಮ್ಮ ಓಡಿದ್ದ ರಭಸ ಮಾಮೂಲಿಯದ್ದಾಗಿರಲಿಲ್ಲ. ಅಣ್ಣ ನಾನು ಇಬ್ಬರೂ ರೀಲುಗಳನ್ನ ನೋಡುತ್ತಲೇ ನಿಂತುಬಿಟ್ಟೆವು.

ನನಗಂತೂ ಹೌದಲ್ಲಾ! ಹದಿನೆಂಟನೇ ವಯಸ್ಸಿಗೆ ಮದುವೆಯಾದ ಅಮ್ಮ ಆವತ್ತಿಗೆ ಹೇಗಿರಬಹುದು ಎನ್ನುವ ಕುತೂಹಲವೇ ಈವರೆಗೂ ಇಲ್ಲದೇ ಹೋಗಿತ್ತಲ್ಲ. ಬರೀ ಅಮ್ಮನ ಸ್ಕೂಲ್ ದಿನಗಳನ್ನು ಮಾತ್ರ ತಿಳಿದುಕೊಂಡಿದ್ದನ್ನು ಬಿಟ್ಟರೆ ಉಳಿದ ಏನನ್ನೂ ಕೇಳೇ ಇಲ್ಲವಲ್ಲಾ. ಆ ಆಲೋಚನೆಯೂ ಬರಲೇ ಇಲ್ಲವಲ್ಲಾ ಈ ಹಾಳು ತಲೆಗೆ ಎಂದು ಒಳಗೇ ನೊಂದುಕೊಂಡೆ.

ಈಗ ಹೇಗಾದರೂ ಮಾಡಿ ರೀಲುಗಳನ್ನ ಡೆವಲಪ್ ಮಾಡಿಸಬೇಕು ಎನಿಸಿತು. ಅಣ್ಣ ನಾನು ಇಬ್ಬರೂ ಹೇಗಾದರೂ ಮಾಡಿ ಡಾರ್ಕ್ ರೂಮ್ ಇರುವ ಸ್ಟುಡಿಯೋಗಳಲ್ಲಿ‌ ನೆಗೆಟಿವ್ ಗಳನ್ನ ಡೆವಲಪ್ ಮಾಡಿಸಬೇಕು ಎಂದು ಊರಿನಲ್ಲಿ ಪರಿಚಯಸ್ಥರು ಸ್ಟುಡಿಯೋಗಳ ಮೊದಲ ಹಂತದ ಪಟ್ಟಿ ಸಿದ್ದ ಮಾಡಿದೆವು. ಆವತ್ತಿಗೆ ನಮಗೆ ಸರಿಯಾಗಿ ಯಾರೂ ಸಿಗಲಿಲ್ಲ.

ಇಷ್ಟು ದಿನ ಏನ್ ಮಾಡ್ತಾ ಇದ್ರಿ ನೀವಿಬ್ಬರು.  ಇಷ್ಟು ವರ್ಷ ಆದ್ರೂ ಮದುವೆ ಫೋಟೋ ಡೆವಲಪ್ ಮಾಡಿಸೋದಕ್ಕೆ ಆಗಲಿಲ್ಲವಾ? ಈಗ ನಿಮ್ಮ ಮದುವೆ ರೀಲ್ ಗಳನ್ನ ಯಾರ್ ಡೆವಲಪ್ ಮಾಡ್ತಾರೆ. ಈಗ ರೀಲ್ ಕ್ಯಾಮರಾ ಇಲ್ಲಾ‌ ಗುರು, ಸೋನಿ, ಪ್ಯಾನಾಸೋನಿಕ್, ಕೆನಾನ್ ತರಾ ಡಿಜಿಟಲ್ ಕ್ಯಾಮರಾ ಇರೋದು ಅಲ್ಲೇ ತೆಗೆದು ಅಲ್ಲೇ ಕೊಡ್ತಾರೆ. ವಾರಗಟ್ಟಲೆ ಕಾಯೋ ಹಾಗಿಲ್ಲ. ನಿಮ್ಮ‌ ಮದುವೆಯಲ್ಲಿ ಬಳಸಿದ ಕ್ಯಾಮರಾ ಈಗ ಹುಡುಕಿದ್ರು ಸಿಗಲ್ಲಾ. ನಿನ್ನ ಫೋಟೋ ಕತೆ ಗೋವಿಂದಾssss ಗೋವಿಂದಾssss
ಎಂದು ಚುಡಾಯಿಸಿದೆ.

ಆವತ್ತಿಗೆ ಅಮ್ಮ‌ ನಿಜವಾಗಲೂ ನೊಂದುಕೊಂಡಿದ್ದಳು ಎನಿಸುತ್ತದೆ. ಹೇಗಾದ್ರು ಮಾಡಿ ಫೋಟೋ ತೊಳೆಸಿಕೊಡ್ರಪ್ಪಾ ಅಂದಳು ಇಬ್ಬರಿಗೂ.

ಸದಾ ಸಿಡುಕುವ ಅಣ್ಣ ನಾನು ತೊಳೆಸಿಕೊಡ್ತೀನಿ ಬಿಡು ಮಮ್ಮಿ ಅಂತ  ಸಮಾಧಾನವಾಗಿ ಹೇಳಿ ರೀಲುಗಳನ್ನ ಜೋಡಿಸಿಟ್ಟುಕೊಂಡ. ಮೂವರು ಫೋಟೋ ಬಗ್ಗೆಯೇ ಮಾತಾಡುತ್ತ ಮನೆ ಸಾಫು  ಮಾಡಿ ಮುಗಿಸಿದೆವು.

**

ರೀಲುಗಳನ್ನ ಡೆವಲಪ್ ಮಾಡಿಸುವುದರ ಕುರಿತು ಮಾತುಗಳು ಆಗಾಗ ಬರುತ್ತಲೇ ಇತ್ತು. ಅಪ್ಪನಿಗೆ ಏನೂ ಹೇಳಿರಲಿಲ್ಲ.‌ ನಾನು ಅದು ಅವನ ಕೆಲಸ ಎನ್ನುವಂತೆ ನಿರ್ಲಿಪ್ತನಾಗಿದ್ದರೂ ಫೋಟೋಗಳನ್ನ ನೋಡುವ ಕುತೂಹಲವಂತೂ ಇದ್ದೆ‌ ಇತ್ತು.‌ ಆದರೆ ತೋರಗೊಡುತ್ತಿರಲಿಲ್ಲ‌ ಅಷ್ಟೇ.‌ ಅಮ್ಮ ನನ್ನ ಮೇಲೆ ಸಿಡುಕಿದಾಗೆಲ್ಲಾ ಪ್ರಬಲ ಅಸ್ತ್ರದಂತೆ, ರೀಲು ಅದು ಇದು ಅಂತ ನನ್ನ ಕೇಳಬೇಡ ಗುರು ನನಗೂ ಅದಕ್ಕೂ ಸಂಬಂಧ ಇಲ್ಲಾ ಸುಮ್ನೇ ಹೋಗು ಎಂದ‌ ಹೇಳುತ್ತಲೇ ಸೆಡವು ತಗ್ಗಿಸಿಕೊಳ್ಳುತ್ತಿದ್ದೆ.

ಒಂದು ಮಧ್ಯಾಹ್ನ  ಫೋನ್ ನಲ್ಲಿ ಅದು ಏನೇನೋ ಹೇಳುತ್ತಲೇ ಅಣ್ಣ ಸರಸರನೆ ನಡೆದು ಮನೆಯಿಂದ ಹೊರಟುಹೋದ. ಅದೇ ಮಧ್ಯಾಹ್ನದ ನನಗೆ ಫೋನ್ ಮಾಡಿ ಒಂಟಿಕೊಪ್ಪಲಿನಲ್ಲಿ‌ ಫ್ರೆಂಡ್ ಸ್ಟುಡಿಯೋದಲ್ಲಿ ರೀಲುಗಳನ್ನ ಕೊಟ್ಟು ಬಂದಿದ್ದೆ, ಈಗ ಡೆಪಲಪ್ ಆಗಿದೆ ಈಗ ಮನೆಗೆ ಬರ್ತಾ ಇದೀನಿ ಮಮ್ಮಿಗೆ ಹೇಳು ಎಂದ.

ನಾನು ಅವನು ಹೇಳುವ ಮೊದಲೇ ಲೌಡ್ ಸ್ಪೀಕರ್ ಆನ್ ಮಾಡಿಟ್ಟಿದ್ದೆ.‌ ಅಮ್ಮ ಎಲ್ಲವನ್ನ ಕೇಳಿಸಿಕೊಂಡಿದ್ದಳು. ಅವಳಿಗೆ ತುಂಬಾ ಖುಷಿಯಾಗಿತ್ತು.‌ ನೋಡು ಕಡೆಗೂ ನನ್ನ ಮಗ ನನ್ನ ಆಸೆ ಈಡೇರಿಸಿದ. ನೀನು ನನಗೆ ಕಡೆಗಾಲಕ್ಕೆ ಆಗಲ್ಲಾ ಅಂತ ಗೊತ್ತು.‌ನಿನ್ನ ಹೆಂಡತಿ ಹೇಳಿದ್ರೆ ನನ್ನ‌ ಬಿಟ್ಟುಬಿಡುವ ಪೈಕಿಯವನು ಅಂತ ಬಡಬಡಿಸಿದಳು. ನಾನು ಪ್ರತಿಕ್ರಿಯಿಸುವ ಮೊದಲೇ ಅವಳ ಮುಖ ಚಂದದ  ವರ್ಣವಾಗಿತ್ತು. ಅದನ್ನ ನೋಡಿದ ಮೇಲೆ ಪ್ರತಿಕ್ರಿಯಿಸಬೇಕು ಅಂತ ನನಗೆ ಅನಿಸಲೂ ಇಲ್ಲಾ.

ಎರಡು ತಾಸಿನ ನಂತರ ಅಣ್ಣ  ಖಾಕಿ ಬಣ್ಣದ ಪೇಪರ್ ಕವರ್ ನೊಳಗೆ ಫೋಟೋಗಳನ್ನ ಜೋಪಾನವಾಗಿ ತಂದಿದ್ದ. ಎಲ್ಲರಿಗೂ ಅದೇನೋ ಖುಷಿ.‌ ಯಾರೂ ಮಾತನಾಡಲಿಲ್ಲ. ಸುಮ್ಮನೇ ಎದುರಿದ್ದ ಕವರ್ ತೆಗೆದು ಫೋಟೋಗಳನ್ನ ನೋಡೋದಕ್ಕೆ ಅಮ್ಮ ಶುರುಮಾಡಿದಳು. ನಾನು ಫೋಟೋ ನೋಡುವ ಬದಲು ಅವಳ ಕಣ್ಣುಗಳನ್ನೇ ನೋಡಿದೆ. ನಿಜಕ್ಕೂ  ಅವ್ಯಕ್ತತತೆ ಗೂಡು ಕಟ್ಟಿತ್ತು. ಮತ್ತೆ ಹದಿನೆಂಟರ ಹುಡುಗಿಯಂತೆ ಕಾಣುತ್ತಿದ್ದಳು.

ನೆಗಿಟಿವ್ ಗಳಿಂದ ಫೋಟೋಗಳಾಗಿ ರೂಪಾಂತರವಾಗಿದ್ದ ಫೋಟೋಗಳನ್ನ ಒಂದೊಂದಾಗಿ ಹಿಡಿದು ಲ್ಯಾಬ್ ನೊಳಗೆ ನಿಂತಿರುವ ಬಯೋ ಕೆಮಿಸ್ಟ್ ಬಗೆಯಲ್ಲಿ ನೋಡುತ್ತಿದ್ದಳು. ನಾನಾಗಲಿ ಅವನಾಗಲಿ ಏನೂ ಕೇಳದೇ ಇದ್ದರೂ ನೋಡಿ ನಾನು ಹೇಗಿದ್ದೆ? ಈ ಸೀರೆ ವಿನೋಧಕ್ಕ ಕೊಡಿಸಿದ್ದು, ಪಾಪಾ ನಿಮ್ಮಪ್ಪ ಎಷ್ಟು ಸಣ್ಣ ಇದ್ರು ನೋಡಿ, ಇಲ್ಲಿ ಕಾಣ್ತಾ ಇದಾರಲ್ಲ‌ ಇವ್ರೂ ಅಬ್ಬೂರು ಮೇಷ್ಟ್ರು ಅವರ ಮಗಳೇ ನಿನಗೆ ಆವತ್ತು ಪರಿಚಯ ಮಾಡಿಕೊಟ್ಟಿದ್ದು,‌ ಮದುವೆಗೆ ಅವರು ಬಂದಿರಲೇ ಇಲ್ಲಾ ಎನ್ನುತ ನೆನಪಾದ ಎಲ್ಲವನ್ನೂ ಹೇಳುತ್ತಲೇ ಹೋದಳು. ನಾವಿಬ್ಬರೂ ಹಾಗೇ ಕೇಳಿಸಿಕೊಳ್ಳುತ್ತಿದ್ದೆವು.

ಹೋಗ್ರೋ ನನಗೂ ಸಾಕಾಗಿದೆ ಈ ಜೀವನ ಎಂದು ಹೇಳುತ್ತಲೇ ಬದುಕು ದೊಡ್ಡದು ಎಂದು ಎಷ್ಟೋ ಸಾರಿ ಹೇಳುವುದನ್ನ ನಾನು ಅಣ್ಣ ಸಾಕು ಎನ್ನುವಷ್ಟು ಸಾರಿ ಅವಳಿಂದ ಕೇಳಿದ್ದೇವೆ. ನಾವ್ಯಾರು ಆಗೆಲ್ಲಾ ಅವಳನ್ನ ಸಾಮಾಧಾನ ಪಡಿಸುವುದಕ್ಕಾಗಲಿ ಅವಳ ಉತ್ಸಾಹವನ್ನ ಉದ್ದೀಪಿಸುವುದಕ್ಕಾಗಲಿ ಸಾಧ್ಯವಾಗಿರಲೇ ಇಲ್ಲಾ. ಅಷ್ಟು ವಿವೇಕವಾಗಲಿ, ಅನುಭವವಾಗಲಿ ನಮಗೆ ಇರಲೂ ಇಲ್ಲಾ. ಆದರೆ ನಾವ್ಯಾರು ಮಾಡಲಾಗದ್ದನ್ನ ಆ ಸಣ್ಣ ಕೊಡಾಕ್ ಕ್ಯಾಮರಾದ ರೀಲುಗಳು ಮಾಡಿಟ್ಟಿದ್ದವು. ಅಮ್ಮನ್ನಷ್ಟೇ ನೋವು, ಕುತೂಹಲಗಳನ್ನ ಕ್ಯಾಮರಾದ ರೀಲುಗಳೂ ಮೂವತ್ತು ವರ್ಷಗಳಿಂದ ಬದುಕಿನ ಕಡೆಗೆ ಉತ್ಸಾಹವನ್ನು ಥೇಟು ಅವಳಂತೆಯೇ ಕಾದಿಟ್ಟುಕೊಂಡಿದ್ದವು. ಈ ಕಾರಣಕ್ಕೆ ಕೊಡಾಕ್ “ರೋಲ್” ಮಾಡೆಲ್ ಅಮ್ಮನ ಪಾಲಿಗೆ.

ಅದಾದ ಮೇಲೆ ಅಮ್ಮನನ್ನ ಕೇವಲ ಅಮ್ಮನಾಗಿ ನೋಡಿದಾಗ ಅವಳು ನಡೆದು ಬಂದ ಹಾದಿ, ತಾನು ತಾನಾಗಿ ಉಳಿದುಕೊಳ್ಳುವುದಕ್ಕಾಗಿ ಬಡಿದಾಡಿದ ರೀತಿ ನಿಜಕ್ಕೂ ಬೇಸರ ಎನಿಸುತ್ತದೆ.

ಅದೇ ಅಮ್ಮನನ್ನ ಕೇವಲ ಒಂದು ಹೆಣ್ಣಾಗಿಯಷ್ಟೇ ನೋಡಲು ಯತ್ನಿಸಿದಾಗೆಲ್ಲಾ ಸೋಜಿಗ ಎನಿಸುತ್ತಾಳೆ. ಅಬ್ಬಾ ! ಎನಿಸಿಬಿಡುತ್ತಾಳೆ.  ಅವಳು‌ ಬಿಡು ಗುರು ಬದುಕೋದು ಅವಳನ್ನ ನೋಡಿ ಕಲಿಬೇಕು ಎನಿಸಿಬಿಡುತ್ತಾಳೆ.

ಅದಕ್ಕೆ ಅವಳು ಅಮ್ಮ.

‍ಲೇಖಕರು avadhi

May 30, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

13 ಪ್ರತಿಕ್ರಿಯೆಗಳು

  1. Moulya swami

    This is the reason why I always loved your Writings.. The Way you weave and render spectrum of emotional lingering with the splash of deep thoughts always lure my attention towards your expressions as a reader. All the best Sandeep .

    ಪ್ರತಿಕ್ರಿಯೆ
  2. ತೊರೆಸಾಲು ಮಹೇಶ್

    ಚೆನ್ನಾಗಿದೆ ಸಂದೀಪ್ .. ನೆನಪಿನ ಸುರುಳಿಗಳು ವರ್ತಮಾನಕ್ಕೆ ಬೆಚ್ಚಗಿನ ಸ್ಪರ್ಶ ನೀಡಬಲ್ಲವು.. ಕೆಲವೊಮ್ಮೆ ಅಣಕಿಸಬಲ್ಲವು.. ಅಂತಿಮವಾಗಿ ಬದುಕಿನ ಪ್ರೀತಿಯನ್ನು ಕಾಯ್ದುಕೊಳ್ಳಲು ನೆರವಾಗುವವು. ಅಮ್ಮನನ್ನು ನೀ ಕಂಡ ಬಗ್ಗೆ ಸಂವೇಧನೀಯವಾಗಿದೆ ಮಾರಾಯ..

    ಪ್ರತಿಕ್ರಿಯೆ
  3. Sumithra l c

    Good one…. Thank you..ಮೈಸೂರಿನ ದಾಸ್ ಪ್ರಕಾಶ್ ಹೋಟೆಲ್ ನಲ್ಲಿ ೩೫ ವರ್ಷದ ಹಿಂದೆ ನಮ್ಮ ಮದುವೆ… ಸ್ನೇಹಿತ ರೊಬ್ಬರು ಕಲರ್ ಫೋಟೊ ತೆಗೆದು ಕೊಟ್ಟಿದ್ದರು…ಈಗಲೂ ಚೆನ್ನಾಗಿ ವೆ…ನಿಮ್ಮ ಲೇಖನ ಎಲ್ಲಾ ನೆನಪಿಸಿತು

    ಪ್ರತಿಕ್ರಿಯೆ
  4. shashidhar

    ತುಂಬಾ ಚೆನ್ನಾಗಿ ಬರೆದಿದ್ದೀರಿ. ಹಾಗೇ ಅಮ್ಮನ ಆ ಮದುವೆ ಫೋಟೋ ಹಾಕಬೇಕಿತ್ತು!

    ಪ್ರತಿಕ್ರಿಯೆ
  5. S.Ravi

    ಚೆಂದದ ನಿರೂಪಣೆ,ನಮ್ಮ ವಯಸ್ಸಿನವರ ಎಲ್ಲರ ಅಮ್ಮಂದಿರು ಕಣ್ಣು ಮುಂದೆ ಬರುತ್ತಾರೆ.

    ಪ್ರತಿಕ್ರಿಯೆ
  6. arron menezes

    loved it. In the fast paced life we are running our life race, creating our set of experiences and memories, i believe in taking time to understand the journeys of the people around us gives our life more meaning. keep writing. all the best.

    ಪ್ರತಿಕ್ರಿಯೆ
  7. Nasrin

    ತುಂಬಾ ಸೊಗಸಾಗಿ ಬರೆದಿದ್ದೀರಿ ಸರ್. ….

    ಪ್ರತಿಕ್ರಿಯೆ
  8. Kiran

    Very good and natural writing, these days we are not experience the life as it should be instead just enacting it for someone else…
    A couple of pictures would’ve enhanced the beauty of this write-up..

    ಪ್ರತಿಕ್ರಿಯೆ
  9. ವಿಜಯಭಾಸ್ಕರ್

    ಮನ ತಣಿಸುವ ಲೇಖನ ಸಂದೀಪ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: