ಬರುವ ಭರವಸೆಗೊಂದು…
ರಜನಿ ಗರುಡ
ಎಂದೋ ಬರುತ್ತೇನೆಂದೆ
ಯಾವತ್ತೊ ಗೊತ್ತಿಲ್ಲ…..
ಮಬ್ಬು ಮುಂಜಾನೆಯಲ್ಲೊ
ನಡು ಮಧ್ಯಾಹ್ನದ ಬೆವರ ಬಿಸಿಲಲ್ಲೊ
ಮುಸ್ಸಂಜೆಯ ಕಥಾಪ್ರಸಂಗವಾಗುವ ಹೊತ್ತಲ್ಲೆಲ್ಲೊ
ಅಂಥದ್ದೇ ಯಾವದೊ ಹೊತ್ತಲ್ಲಿ
ನಿನ್ನ ಪಿಸುಮಾತುಗಳ ಜಾಡುಹಿಡಿದು
ಬರುತ್ತೇನೆ ಗ್ಯಾರಂಟಿ
ತೆರೆದಿಡು ಬಾಗಿಲು-ಕಿಟಕಿಗಳ ನನಗಾಗಿಯೆ
ಕೋಣೆಯನು ಖಾಲಿಯಿಡು
ಮುಚ್ಚಿ ಬಿಡು ಹಿತ್ತಲ ಬಾಗಿಲ
ಗಾಳಿ ನನ್ನ ಹೊರ ನೂಕದಂತೆ
ಕಾಯುತ್ತಿರು ನೀನು
ಹೊಸ್ತಿಲ ಒಳ ನಿಂತು
ನನ್ನದೆರುಗೊಳ್ಳು
ಕೇಳದೇ ಉಳಿದ
ಹಾಡಿನಾಲಾಪದಂಗಿ ತೊಡಿಸು
ಮುತ್ತಿನೋಲೆ ಮತ್ತೆ ಮತ್ತೆ ಕರುಣಿಸು
ಕೆನ್ನೆತಾಗುವ ನಿನ್ನ ಬಿಸಿಯುಸಿರಿಗೆ
ಹಾರುವ ಮುಂಗುರುಳ ಹಿಡಿದಿಡು
ನಿನ್ನ ಮೂಕ ಕಣ್ಣೀರ ಹನಿಗಳೆಲ್ಲ
ಕೊರಳ ಹಾರವಾಗಿಸಿಬಿಡು
ಕಟ್ಟಿದ ಗಂಟಲಲ್ಲಿ ಗೊರ ಗೊರವೆನ್ನುತ್ತ
ಮತ್ತೆ ಯಾವಾಗ ಬರವಿಯೆಂದು ಕೇಳಬೇಡ
ಚಣವೂ ಇಲ್ಲಿ ನಿಲ್ಲಗೊಡುತ್ತಿಲ್ಲ
ಸುತ್ತಿಕೊಂಡಿರುವುದೆಲ್ಲ ಸರಾಗ ಸರಿದರೆ
ಮತ್ತೆ ಬರುವೆ….
ಬಂದವಳೇ ದೀಪ ಬೆಳಗುತ್ತೇನೆ
ಮೊದಲು
0 ಪ್ರತಿಕ್ರಿಯೆಗಳು