ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನ ನೆನಪು…

ವೆಂಕಟೇಶ ಪಿ ಮರಕಮದಿನ್ನಿ

ಚಿಟ್ಟು ಹಿಡಿಸುವ ಎದೆಯ
ಚಿಗರಿ ಕುಣಿತಗಳ ಮಧ್ಯೆ
ಒಂದು ತಣ್ಣನೆಯ ನೀರವ ಮೌನ
ನಿನ್ನ ನೆನಪು

ಸಿಟ್ಟು ಸಿಡಿಸುತ್ತಿರುವ
ಉರಿಬಿಸಿಲ ರೌರವದ ಬೇಗೆಗೆ
ಹಿಮಪಾತದುಗಳ ನಗೆ
ನಿನ್ನ ನೆನಪು

ಬಿಟ್ಟು ಬರುವ ಮುನ್ನ
ಶಾಲೆಯ ಬದುಕು
ಅಚ್ಚಳಿಯದೆ ಉಳಿದ ನೆಚ್ಚಿನ
ಶಿಕ್ಷಕಿಯ ಹೃದಯ
ನಿನ್ನ ನೆನಪು

ತೊಟ್ಟು ತಿಳಿನೀರೇ
ಹೊಂಡೆದ್ದಾಗ
ತಟ್ಟನೆ ಉಕ್ಕಿದ ಜೀವದೊರತೆ
ನಿನ್ನ ನೆನಪು

ಎಷ್ಟು ಹುಡುಕಿದರು
ವಿಳಾಸ ಸಿಗದಾಗ
ಸ್ಪಷ್ಟ ಮಾರ್ಗ ಹೇಳಿದ
ದಾರಿಹೋಕನ ಮಾತು
ನಿನ್ನ ನೆನಪು

ನಿಟ್ಟು ಹಚ್ಚಿರುವ
ನಿಬಿಡ ಧಾನ್ಯದ ಚೀಲಗಳೆಲ್ಲ
ಮಾರುಕಟ್ಟೆಗೆ ಕೊಟ್ಟು ಮರಳಿದಾಗಿನ
ಸುಂದರ ಸುಸ್ತು
ನಿನ್ನ ನೆನಪು

ರಟ್ಟೆ ಸೋಲುತ್ತೆನುವಾಗ
ತಟ್ಟೆಗೆ ಬಂದು ಕೂತ
ರೊಟ್ಟಿ ಹುಣಸೆಖಾರ
ನಿನ್ನ ನೆನಪು

ಕಟ್ಟೆಯಲಿ ಹರಟುತಿಹ
ಊರ ಹುಡುಗರಿಗೆ
ಹೊಟ್ಟೆ ಹುಣ್ಣಾಗಿಸಿದ
ನಗುವಿನ ಛಾಯೆ
ನಿನ್ನ ನೆನಪು

ಸತ್ತೇ ಹೋದಂತಿರುವ
ಸಾವಿರ ನೆನಪಿನ ಪ್ರಕರಣಗಳಿಗೆ
ಪತ್ತೇದಾರಿ ಕವನ
ನಿನ್ನ ನೆನಪು

ಒತ್ತೆಯಿಟ್ಟಂತಹ
ಬುಗುಡಿ ಬೆಂಡೋಲೆಗಳ
ಮರಳಿ ಬಿಡಿಸಿಕೊಂಡಾಗಿನ
ಆನಂದ
ನಿನ್ನ ನೆನಪು

ತೆತ್ತು ಎಲ್ಲಕು ಒಲವನು
ಬದುಕು ಹುರಿಗೊಳಿಸುವ
ಪದಗ್ರಹಣವಿರದ ಜವಾಬ್ದಾರಿ
ನಿನ್ನ ನೆನಪು

ಮತ್ತೆ ಮತ್ತೆ ಹೆಚ್ಚುತ್ತಿರಲು
ಕನಸ ಕುರಿಗಳ ಹಿಂಡು
ಅಪ್ಪ ಕಟ್ಟಿಕೊಟ್ಟ ಹಟ್ಟಿ
ನಿನ್ನ ನೆನಪು

ತತ್ತಿ ಹಾಕುತ್ತಲಿರುವ
ಹೊತ್ತು ಹುಣ್ಣಿವೆಯ ತಂಪು
ಗೊತ್ತುಗುರಿಯಿರದ ಊರ
ಗಿಳಿವಿಂಡಿನ ಒನಪು
ಕೊನೆಯಿರದ ಮೊನೆಯಿರದ
ಸುಪ್ತ ಸಾಗರದ ಸಾಲು
ನಿನ್ನ ನೆನಪು!

‍ಲೇಖಕರು Admin

16 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading