ಚೀಮನಹಳ್ಳಿ ರಮೇಶಬಾಬು
ನಿನ್ನ ನೆನಪಿಗೊಂದು ರಾಗಿಕಾಳು ಚಲ್ಲಿದ್ದೇನೆ
ಎರೆ ಹುಳುಗಳು ಮಿಸುಕಾಡುವ ನೆಲದಎದೆಗೆ.
ಕಡುಕಪ್ಪು ಕಾಳು
ಕಡುಕಪ್ಪು ಮಣ್ಣು
ಅಪ್ಪಿಕೊಳ್ಳುವ ಸೋಜಿಗಕ್ಕೆ ಬೆರಗಾಗಿದ್ದೇನೆ.
ವ್ಯೋಮಕಣ್ಣಿಗೆ ರಾಗಿಕಾಳಾಗುವ ಭೂಮಿ
ಮುಗಿಲ ನೋಟಕ್ಕೆ ಭೂಮಿಕಣ್ಣಾಗುವರಾಗಿ
ಕಾಳಿನ ಕಣ್ಣಲ್ಲಿಎಷ್ಟೊಂದು ಹಸಿರು!
ಮುಗಿಲ ಮುಟ್ಟುವ ಪಾತಾಳ ತಡಕುವಎಷ್ಟೊಂದು ಹುರುಪು.
ಮೊಳಕೆಯೊಡೆಯದೆ ಕಾಳು?
ಹದ ಮುಗಿಲು ಬೆದೆ ಮಣ್ಣು
ನೂರು ಬಿಂಬಗಳ ಹಿಡಿಯುತ್ತಾ
ಕನ್ನಡಿಯಂತೇಜಾರುವ ಹನಿಯೊಂದು ಸಾಕು
ನಿನ್ನೊಡಲು ಬಿರಿಯಲು.

ನಿನ್ನ ನೆನಪಿಗೊಂದು ರಾಗಿಕಾಳು ಚಲ್ಲಿದ್ದೇನೆ
ಅದು ಭೂಮಿಯ ಮೆದುಳಾಗಿ ಬ್ರಹ್ಮಾಂಡ ಹೊಕ್ಕುತ್ತದೆ
ಎಷ್ಟೊಂದು ನೆನಪುಗಳು ಎಷ್ಟೊಂದು ಮರೆವುಗಳು
ಸ್ಪೋಟ ಮಿಳಿತ ಮೊರೆತಕೊರೆತ
ಹುಟ್ಟಿನ ಬೇರುಗಳು
ಮುಟ್ಟಿನ ಸೀಳುಗಳು
ಮುತ್ತುವ ಮೆತ್ತುವಕಣ್ಣ ಪಾಪೆಯ ಬಿಂಬಗಳು.
ಆ ಮಿದು ನೆಲದ ಮೆದುಳಾದ ಕಾಳಿಗೆ
ಅದೆಂತಹ ಹಂಬಲ
ಬಿರಿದು ಹಸಿರ ಹೊದ್ದು ಬೆಳೆದು
ಕ್ರಿಮಿಕೀಟ ಪಕ್ಷಿ ಪ್ರಾಣಿಗಳ ಹೊಟ್ಟೆಯಲಿ
ರೂಪಾಂತರಕ್ಕೆಒಡ್ಡಿಕೊಂಡು
ಮತ್ತೆ ನೆಲದ ಹಸಿವಿಗೆ ಗೊಬ್ಬರವಾಗುವತವಕ.
ನಿನ್ನಕಣ್ಣನ್ನೆ ಹಿಡಿದ ಮುಷ್ಠಿ
ಕಾಯಾಗಿ ಬಿರಿದುಚಲ್ಲಿದ ಬೀಜ
ಕಪ್ಪುತಾಯಿಯ ಮೊಲೆತೊಟ್ಟಿನಂತಾರಾಗಿ
ನೀನು ನಾನಾಗುವ ನಾನು ನೀನಾಗುವ ಕಾಲಕ್ಕೆ
ಮೊಳಕೆಯೊಡೆಯದೆ ಕಾಳು?
ನಿನ್ನ ನೆನಪಿಗೊಂದು ರಾಗಿಕಾಳು ಚಲ್ಲಿದ್ದೇನೆ
ಬರಡು ಬರಡಾದ ಜಗದ ಮೇಲೆ!
ಉದುರಿದ ಎಲೆ ಉಸಿರ ಹಿಡಿದಎರೆ
ಕಪ್ಪುಗಟ್ಟುವ ಮುಗಿಲು
ಎಲ್ಲವೂಇದೆ ಕಾಳಿನೊಳಗೆ.
ಭೂಮಿಯಂತ ಕಾಳು
ರಾಗಿಯಂತಾ ಭೂಮಿ
ಮೊಳಕೆಯೊಡೆಯದೆ ಮತ್ತೆ?
ಮತ್ತೆ ಕಾಫಿ ಕುಡಿಯೋಣವೆ?
ಒಂಟಿಟೇಬಲ್ಲಿಗೆಎರಡು ಕುರ್ಚಿಗಳು
ತೆರೆದ ಕಿಟಕಿಗಳು ಅರೆ ಮುಚ್ಚಿದ ಬಾಗಿಲು
ಮೈಯನ್ನು ಹಿತವಾಗಿ ಕಚ್ಚುವ
ಇಳಿ ಸಂಜೆಯ ನವಿರು ಗಾಳಿ
ಎಕ್ಕದ ಕಾಯಾಗುವ ಮನಸು ಬಲಿತೊಡೆದು
ಬೀಜಗಳಂತೆ ಹದವಾಗಿತೇಲುವ ಭಾವಗಳು
ಅಂಗೈಯಗಲ ಮಣ್ಣು ಬೇಕಷ್ಟೆ ತಳವೂರಲು
ಮತ್ತೊಮ್ಮೆಕಾಫಿಕುಡಿಯೋಣವೆ?
ಹಿಂದೊಮ್ಮೆಇಲ್ಲೆ ಇದೇ ಜಾಗದಲ್ಲಿ
ಕಾಫಿ ಕುಡಿದಾಗ
ಭೂಮಿ ಹೀಗೇ ಇತ್ತಲ್ಲವೆ?…ಗುಂಡಗಿತ್ತಲ್ಲವೆ?
ಯಾವ ಕಕ್ಷದಲ್ಲಿತ್ತು?ಯಾವ ರೇಖೆಯಲ್ಲಿತ್ತು?
ಸೂರ್ಯಚಂದ್ರ ಭೂಮಿ ಯಾವ ಕೋನದಲ್ಲಿದ್ದವು?
ಎಕ್ಕದ ಕಾಯೊಡೆದರೆ ಮಹಾಸ್ಪೋಟವೆಂದು
ರೋಮಗಳ ನಿಮಿರಿಸಿ
ಗಾಳಿಯಲ್ಲಿ ತೇಲುವ ಬೀಜಗಳ ಕಂಡು ಕಣ್ಣರಳಿಸಿ
ಗ್ರಹ ನಕ್ಷತ್ರಗಳೆಂದು ಕುಣಿದು
ಕವಿತೆಯನ್ನೂ ಎಳೆದು ತರುವ ನಿನ್ನ ಮೆದುಳಿಗೆ
ಮುಪ್ಪಡರುವುದಿಲ್ಲವೆ?

ಹೇಳು
ನಿರ್ವಾತದ ಮೌನ ಮಹಾಸ್ಪೋಟದ ಮುನ್ನುಡಿಯಂತೆ…
ಇದು ನಿನ್ನದೇ ಮಾತು
ಸ್ಪೋಟಗೊಂಡು ಗ್ರಹ ನಕ್ಷತ್ರಗಳು ಉಗಮಿಸುವ ಮೊದಲು
ಮತ್ತೆ ಕಾಫಿ ಕುಡಿಯೋಣವೆ?
ನಿನ್ನ ಬ್ರಹ್ಮಾಂಡದಂತ ಮೆದುಳನ್ನು
ಸ್ವಲ್ಪತೆಗೆದು ತಿಪ್ಪೆಗೆಸಿ
ಫಲವತ್ತತೆಯ ಸೋಂಕು ತಗಲುವತನಕ ಬಿಟ್ಟುಬಿಡು
ಕುಳಿತುಕೋ ನನ್ನೆದುರಲ್ಲಿ
ಅದೇ ತುಟಿ ಅದೇ ಕಣ್ಣು ಅದೇ ಮೊಲೆ
ಅದೇಅದೇಎಲ್ಲವೂಅದೆ
ವಯಸ್ಸು ಮಾತ್ರ ನಿನ್ನಗಡಿಯಾರದ ಭಾಷೆಯಲ್ಲಿ
ತುಸು ಹೆಚ್ಚೇ ಬೆಳೆದು ನಿಂತಿದೆ
ನನ್ನ ಮನಸ್ಸುಒಡೆದು ಚೂರಾಗಿ
ಎಕ್ಕದ ಬೀಜಗಳಾಗಿ ತೇಲಿ ಹೋಗುವ ಮುನ್ನ
ಇಳಿಸಂಜೆಯ ಈ ಹೊತ್ತಲ್ಲಿ
ಇಂದಿಗೂ ಮೈಕಚ್ಚುವ ನವಿರು ಬೀಸುಗಾಳಿಗೆ ಮೈಯೊಡ್ಡಿ
ನಿರುಮ್ಮಳವಾಗಿ
ಎಲ್ಲವ ಮರೆತು ಬೆರೆತು ಮೊರೆತು ಬೆತ್ತಲಾಗೋಣವೆ!
ನೀನು ನಿಂತಿರುವ ನೆಲದ ಮೇಲಾಣೆ
ಸೂರ್ಯಚಂದ್ರ ನಕ್ಷತ್ರಗಳ ಮುಡಿಕಟ್ಟಿ ಕುಳಿತ ಮೋಹವೆ
ಹಿಡಿ ಮಣ್ಣಷ್ಟೆ ಸಾಕು ನನಗೆ
ಮಡಿ ಬಿಟ್ಟ ಮಣ್ಣಷ್ಟೆ ಸಾಕು ನನಗೆ






0 Comments