ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲೀಲೆ

ಗೀತಾ ವಸಂತ

ಅನಾದಿ ಅನಂತರ ನಡುವೆ

ಅಂತಃಪಟ

ನಿಂತಿದ್ದಾರೆ ತುದಿಗಾಲಲ್ಲಿ ವಧೂವರರು

ಒಬ್ಬರನೊಬ್ಬರು ಕದ್ದು ನೋಡಲು.

ಸೆಳೆತದ ಸುಳಿಗಳ ಅನೂಹ್ಯ ಆಳದಲ್ಲಿ

ಗಿರಿಗಿಟ್ಲೆಯಾಡುತ್ತಿದೆ ಕಾಲ.

ಹಾಡು ಹಸೆ ಕುಣಿತ ಶಾಸ್ತ್ರ

ಕಾಡುಹರಟೆ ಖಾಲಿ ನೋಟ

ಬಯಕೆ ಕೊಂಕು ಮೋಹ ಮತ್ಸರ

ಏನೆಲ್ಲವೂ ಮಸೆದು ಹೊಸೆದು

ಬಿಸಿಯೇರಿದೆ ಮದುವೆಮನೆ.

ಏನೋ ಹದಗೊಳ್ಳುತ್ತಿದೆ

ಬೆದೆಗೊಳ್ಳುತ್ತಿದೆ ಸೃಷ್ಟಿಯಾಗಲು.

ತಾಲೀಮು ನಡೆಸಿದ್ದಾರೆ

ಅಂಗನೆಯರು ಒಳಮನೆಯಲ್ಲಿ

ಮಾಲೆಹಾಕುವ ಹಾಡಿಗೆ.

ರಾಮ ಜಾನಕಿ..ಲಕ್ಷ್ಮೀ ನಾರಾಯಣ..

ಶಿವಶಿವೆಯರ ಮಿಥುನದ ಲಯ

ಹಾಡಲ್ಲಿ ಕೇಳಿ

ಪುರಾಣೇತಿಹಾಸಗಳೆಲ್ಲ ಗಿರಕಿಹೊಡೆಯುತ್ತವೆ

ಗ್ರಹಗಳಂತೆ ಸುತ್ತ.

ಮಂತ್ರಕ್ಕೆ ಜೋಂಪುಹತ್ತಿ

ತೂಕಡಿಸುತ್ತ ಹೊರಗೆ ಕೂತವರೆಲ್ಲ

ಕಾಲದಾಚೆಗೆ ಸರಿದಿದ್ದಾರೆ

ಮಾಯವಾಗಿದೆ ಮದುವೆ ಚಪ್ಪರ.

ಯಾರದೋ ಕನಸಲ್ಲಿ

ಭೂಮಿ ತಿರುಗುತ್ತಿದೆ.

ಸಜ್ಜುಗೊಂಡಿವೆ ನಕ್ಷತ್ರಗಳು

ಅಕ್ಷತೆ ಕಾಳುಗಳಾಗಿ

ಹರಸಲು ಹರಿವಾಣದಲ್ಲಿ.

ಕೂಡಲು

ಮುಹೂರ್ತ ಕೂಡಬೇಕಂತೆ ಇನ್ನೂ …

ಸುಲಗ್ನೇ ಸಾವಧಾನಾ..

ಸುಮುಹೂರ್ತೆ ಸಾವಧಾನಾ..

ಕಾದ ಕಡಲುಕ್ಕಿ ಮೊರೆಯುತಿದೆ

ಕಾಂತಕ್ಷೇತ್ರವ ಮೀರಿ ಚಿಮ್ಮಲು.

ಕಣಕಣಗಳು ಏಕಾಗ್ರಗೊಳ್ಳುತ್ತಿವೆ

ಕಕ್ಷೆಯಾಚೆ ಜಿಗಿಯಲು.

ಕಾಯುತ್ತಲೇ ಇವೆ

ಅಂತಃಪಟ ಸರಿಯುವ ‘ಸುಮುಹೂರ್ತಕ್ಕೆ

ಕಾಲದಾಚೆ ನಿಂತ

ಒಂದೇ ಕಾಯದ ಭಿನ್ನ ಸೆಳೆತಗಳು.

ಮಂತ್ರದ ಕಣ್ತಪ್ಪಿಸಿ

ಒಂದಾಗುತ್ತ ಎರಡಾಗುತ್ತ

ಲೀಲೆಯಾಡುತ್ತಿವೆ.

‍ಲೇಖಕರು Avadhi

6 September, 2020

1 Comment

  1. GEETHA. TIPTUR

    ಕವಿತೆ ಅನೇಕಗಳನ್ನು ಹುಡುಕಾಡಲು ಪರದಾಡಿ ಸೋತಂತಿದೆ…. ಲೀಲೆಗಳು ಯಾವ ಅಲೆಯ ಹೊಡೆತಕ್ಕೆ ಸಿಕ್ಕು ಏನಾಗಲೂ ಹೊರಟಿವೆ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading